Saturday, September 21, 2013

Book Review


6 comments:

  1. Dear All

    The Review of the book "Atmeeyaru" writtten by a famous veteran Researcher and Kannada Writer has come up nicely with his simple

    words which make the reader to get interest on the book. Many thanks to Dr. Chidananda Murthy sir. I request all my fellow Social Work

    friends to read the book and get inspired with the walks of life of many great personalities remembered by our Guru

    Dr.H.M.Marulasiddhaiah

    Regards

    S.V.Murthy

    ReplyDelete


  2. 23-8-2013

    ಪ್ರಿಯ ಶ್ರೀ ಮರುಳಸಿದ್ಧಯ್ಯನವರಿಗೆ,
    ವಂದನೆಗಳು.
    ಹೋದ ಸಲ ನಾನು ಮನೆಗೆ ಬಂದಾಗ ವಾಕರ್ ಉಪಯೋಗಿಸುತ್ತಿದ್ದಿರಿ. ಈ ಸಲ ವ್ಹೀಲ್ ಚೇರ್ ಬಂದಿತ್ತು. ಇದು ಹೆಚ್ಚು ಅನುಕೂಲಕರವೂ ಹೌದು. ಎಷ್ಟೇ ಅನಾರೋಗ್ಯವಿದ್ರೂ ನಿಮ್ಮ ಮುಖದಲ್ಲಿ ಒಂದು ಬಗೆಯ ದೈವೀ ಕಳೆ ಇರುವುದನ್ನು ನಾನು ಗಮನಿಸಿದ್ದೇನೆ. ಶುದ್ಧಾಂತಃಕರಣಕ್ಕೆ ಅದೇ ಸಾಕ್ಷಿ. ನೆಮ್ಮದಿಯ ಕುಟುಂಬ ಜೀವನಕ್ಕೆ ಹೇಗೂ 'ಈಶಕೃಪೆ' ಇದ್ದೇ ಇದೆ.
    'ಆತ್ಮೀಯರು' ತುಂಬ ಸೊಗಸಾಗಿ ಬಂದಿದೆ : ಅಂತರಂಗ-ಬಹಿರಂಗ ಎರಡರಲ್ಲೂ, 31 ಲೇಖನಗಳಲ್ಲಿ ಸುಮಾರು ಇದೇ ವರ್ಷ 16 ರಷ್ಟನ್ನು ಬರೆದಿರುವುದು - ನೀವು ಹೇಳಿ ಉಮೇಶ ಬರೆದುಕೊಂಡವುಗಳು-ಅಚ್ಚರಿಯನ್ನುಂಟು ಮಾಡಿತು. ಹಿಂದೆ ಬರೆದವುಗಳಿಗೂ ನಂತರದ ಆವಶ್ಯಕ ಮಾಹಿತಿ ಒದಗಿಸಿ ಪೂರ್ಣಗೊಳಿಸಿದ್ದೀರಿ. [ವ್ಯಾಕರಣದ ಪ್ರಕಾರ 'ಅನಂತರ' ಸರಿ, 'ಆನಂತರ'ವಲ್ಲ ಎಂದು ನನ್ನ ತಿಳುವಳಿಕೆ]. ನಿಮ್ಮ ಜ್ಞಾಪಕಶಕ್ತಿ ಅಪೂರ್ವವಾದುದರಿಂದಲೇ ಎಲ್ಲವೂ ಅಂದಗೆಡದಂತೆ ರೂಪುಗೊಂಡಿವೆ. ಆತ್ಮಕಥೆಯ ಎಷ್ಟೋ ಅಂಶಗಳು ಈ ಲೇಖನಗಳಲ್ಲಿ ಸೇರಿಕೊಂಡಿರುವುದರಿಂದ ಸಹಜವಾಗಿಯೇ ಅವು ರೋಚಕವಾಗಿವೆ. ವ್ಯಕ್ತಿಚಿತ್ರಣಕ್ಕೆ ಇದು ಹೇಳಿ ಮಾಡಿಸಿದ ಶೈಲಿ. ಭಾಷಾಸೌಷ್ಟವವಂತೂ ಕೆಲವಾದರೂ ಕನ್ನಡ ಅಧ್ಯಾಪಕರಿಗೆ ಮತ್ಸರ ಹುಟ್ಟಿಸುವಂತಿದೆ.
    'ರಾಮಚಂದ್ರನ ಚಿತ್ರ' ಹೃದಯ ವಿದ್ರಾವಿಕವಾಗಿದೆ. ಅವರ 'ಬಿದ್ದಗರಿ'ಯ ಪ್ರತಿಯನ್ನು ನೀವು ನನಗೆ ಕಳಿಸಿಕೊಟ್ಟ ಹಾಗೆ ನೆನಪು. 1955ರಷ್ಟು ಹಿಂದೆಯೇ ಇದು ಬರೆದದ್ದು ಎಂಬುದನ್ನು ನೆನೆಸಿಕೊಂಡರೆ, ಆಗಲೇ ಈ ಬಗೆಯ ವ್ಯಕ್ತಿಚಿತ್ರಣ ಕಲೆ ನಿಮಗೆ ಕರಗತವಾಗಿತ್ತು ಎನಿಸುತ್ತದೆ. [ದ.ಬಾ.ಕು. ಅವರ 'ನಾನು ಕಂಡ ಗೌರಮ್ಮ' ನೆನಪಾಯಿತು.] ಶಾಂತಿನಾಥ ದೇಸಾಯಿಯವರನ್ನು ಕುರಿತು ಬರೆದು ಒಳ್ಳೆಯ ಕೆಲಸ ಮಾಡಿದಿರಿ. ನಾವು ಮೂರು-ನಾಲ್ಕು ಜನ ಕೂಡಿಯೇ ಕೆಲದಿನ ಬೆಳಗಿನ ವಾಯುವಿಹಾರಕ್ಕೆ ಹೋಗುತ್ತಿದ್ದುದು ನೆನಪಾಯಿತು. ನವ್ಯಸಾಹಿತ್ಯ ಹಾಗೂ ವಿಮರ್ಶೆಯ ಪ್ರಮುಖರಲ್ಲಿ ಅವರೂ ಒಬ್ಬರಾಗಿದ್ದರು. ವ್ಯಕ್ತಿಯಾಗಿ ತುಂಬ ಸಜ್ಜನ ಕೂಡ. ನಮ್ಮ ಬಳಗದವರೊಬ್ಬರ ಮದುವೆಗೆ ಕೊಲ್ಲಾಪುರಕ್ಕೆ ಹೋದಾಗ ಅವರ ಮನೆಗೂ ಹೋಗಿ ಭೆಟ್ಟಿಯಾಗಿದ್ದೆ. ಆಗಲೇ ಅನಾರೋಗ್ಯದಿಂದ ಅವರು ಹಾಸಿಗೆ ಹಿಡಿದಿದ್ದರು. ಅಂಥದರಲ್ಲೂ ಸಾಹಿತ್ಯ ಸಮ್ಮೇಳನದ ನನ್ನ ಅಧ್ಯಕ್ಷ ಭಾಷಣದ ಪ್ರತಿ ಕಳಿಸಲು ಕೇಳಿಕೊಂಡದ್ದನ್ನು ನಾನು ಮರೆಯುವಂತಿಲ್ಲ. ಅವರ 'ಓಂ ಣಮೊ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಕಟವಾಯಿತು. ಅಷ್ಟರಲ್ಲಿಯೇ ಅವರು ತೀರಿಕೊಂಡಿದ್ದರು. ಡಾ. ಜಿ.ಎಸ್.ಆಮೂರ ಅದನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.
    'ಆತ್ಮೀಯರು' ಚಿತ್ರಣದಲ್ಲಿ ನಿಮ್ಮ ಸಮಾಜವಿಜ್ಞಾನದ ದೃಷ್ಟಿಕೋನವೂ ಸ್ವಾಭಾವಿಕವಾಗಿ ಸೇರಿಕೊಂಡಿರುವುದರಿಂದ ಈ ಕೃತಿಗೆ ಸಾಮಾಜಿಕ ಆಯಾಮವೂ ದೊರೆತಂತಾಗಿದೆ. ಪುಸ್ತಕವನ್ನು ಅಂದವಾಗಿ ಅಚ್ಚುಕಟ್ಟಾಗಿ ಪ್ರಕಟಿಸಿದ್ದಕ್ಕೆ ನಿರುತ ಪಬ್ಲಿಕೇಷನ್ಸ್ ನವರಿಗೆ ಅಭಿನಂದನೆಗಳು.
    ಅನುಬಂಧದ ಲೇಖನದಲ್ಲಿ ನಿವೇದಿತ ಅವರು ನಿಮ್ಮ ಇಂಗ್ಲಿಷ್ ಕೃತಿಗಳ ಪಟ್ಟಿಯನ್ನೂ ಸೇರಿಸಬಹುದಾಗಿತ್ತು. ಪುಟ 34ರಲ್ಲಿ [ಕೆಳಗಿನಿಂದ 5ನೇ ಸಾಲಿನಲ್ಲಿ] ಒಂದು ಸಣ್ಣ ತಪ್ಪಾಗಿದೆ. ಮೈಸೂರಿನಲ್ಲಿ ಕಾರಂತರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದದ್ದು 1955ರಲ್ಲಿ. ಕಟ್ಟೀಮನಿಯವರ ಜೊತೆಗೆ ನಾನೂ ಆ ಸಮ್ಮೇಳನಕ್ಕೆ ಬಂದಿದ್ದೆ. ಕವಿಗೋಷ್ಠಿ ಹಾಗೂ ವಿಮರ್ಶಾ ಗೋಷ್ಠಿಗಳಲ್ಲಿಯೂ ಭಾಗವಹಿಸಿದ್ದೆ.
    ನನ್ನ ಈಚಿನ ಕೃತಿಗಳ ಬಗ್ಗೆ ಕೇಳಿದಿರಲ್ಲವ ? ಅದೇ ಹೇಳಿದೆನಲ್ಲ, ಮರೆವು ಹೆಚ್ಚಾಗಿದೆ. ಬೇಂದ್ರೆ ಹಾಗೂ ಅವರ ಕಾವ್ಯವನ್ನು ಕುರಿತು ನಾನು ಬರೆದ ಕೆಲವು ಲೇಖನಗಳ ಸಂಗ್ರಹ ('ಬೇಂದ್ರೆ ಕಾವ್ಯದ ಕುಹೂಕ್ಕುಹೂ')ವನ್ನು ಧಾರವಾಡದ ಬೇಂದ್ರೆ ಪ್ರತಿಷ್ಠಾನ ಕಳೆದ ವರ್ಷವೇ ಪ್ರಕಟಿಸಿದೆ. ನಾನು ಧಾರವಾಡಕ್ಕೆ ಮರಳಿದೊಡನೆ ಪ್ರತಿಯನ್ನು ಮರೆಯದೆ ಕಳಿಸಿಕೊಡುತ್ತೇನೆ.

    ಪ್ರೀತಿವಿಶ್ವಾಸಗಳಿಂದ
    ಚೆನ್ನವೀರ ಕಣವಿ

    ReplyDelete
  3. ಆತ್ಮೀಯರು
    ಪ್ರೊ. ಎಚ್.ಎಮ್. ಮರುಳಸಿದ್ಧಯ್ಯ

    ಪ್ರೊಫೆಸರ್. ಎಚ್.ಎಮ್. ಮರುಳಸಿದ್ಧಯ್ಯನವರ ಇತ್ತೀಚೆಗೆ ಪ್ರಕಟವಾಗಿರುವ ಪುಸ್ತಕ "ಆತ್ಮೀಯರು" ಅವರ ಮಿತ್ರರ, ವಿದ್ಯಾರ್ಥಿಗಳ, ಸಮಾಜ ಸೇವಾಕಾರ್ಯದಲ್ಲಿ ಅವರೊಡನೆ ಕೆಲಸ ಮಾಡಿದ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಒಳ್ಳೆಯ ಸೇವೆ ಮಾಡುತ್ತಿದ್ದು ಅವರ ಮೇಲೆ ಪ್ರಭಾವ ಬೀರಿದ 31 ವ್ಯಕ್ತಿಗಳ ಚಿತ್ರ-ಇದರಲ್ಲಿ ಅನೇಕರು ತಮ್ಮ ಬರಹಗಳಿಂದ, ಸಮಾಜ ಸೇವೆಯಿಂದ, ದೇಶಸೇವೆಯಿಂದ ಹೆಸರು ಪಡೆದಿರುವವರು ಇದ್ದಾರೆ. ಇವರಲ್ಲಿ ಸ್ತ್ರೀಯರು, ಪುರುಷರು, ಹಿರಿಯರು, ಕಿರಿಯರು, ಸ್ನೇಹಿತರು, ಕುಟುಂಬದವರೂ ಇದ್ದಾರೆ. ಇವರಲ್ಲಿ ಬಸವರಾಜ ಕಟ್ಟೀಮನಿ, ಚೆನ್ನವೀರ ಕಣವಿ, ಚಿದಾನಂದ ಮೂರ್ತಿ, ಗೋಪಾಲಕೃಷ್ಣ ಅಡಿಗ, ನಿಸ್ವಾರ್ಥ ಸಮಾಜ ಸೇವಕಿ ಸುಶೀಲಮ್ಮ, ಡಾ. ದೊರೆಸ್ವಾಮಿ, ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರಸ್ವಾಮಿಗಳು ಇದ್ದಾರೆ. ಎಲ್ಲಾ ಸಮಾಜದ ನೋಟಕ್ಕೆ ಬಂದಿರುವರು. ಇವರುಗಳ ಮಿತ್ರತ್ವ ಹೇಗಾಯಿತು, ಅವರ ಮೌಲ್ಯಗಳ ರೀತಿ ನೀತಿಗಳು, ಮನೋಭಾವನೆಗಳು, ವ್ಯಕ್ತಿತ್ವ ತಮ್ಮ ಮೇಲೆ ಎಂಥಹ ಪ್ರಭಾವ ಬೀರಿತೆಂಬುದನ್ನು ಮರುಳಸಿದ್ಧಯ್ಯನವರು ಬರೆದು ತಮ್ಮ ವೀಕ್ಷಣದ ಅನುಭವದ ಚೌಕಟ್ಟಿನಲ್ಲಿ ಹೊಗಳದೆ, ತೆಗಳದೆ, ಉತ್ಪ್ರೇಕ್ಷೆ ಮಾಡಿವೆ. ಅವರುಗಳ ವ್ಯಕ್ತಿತ್ವವನ್ನು ಸರಳವಾದ ಭಾಷೆಯಲ್ಲಿ ನಮ್ಮ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಅದೇ ರೀತಿ ಅವರ ಮಿತ್ರರ, ಕುಟುಂಬದವರ ಸಂಬಂಧ, ತಮ್ಮ ಮೇಲೆ ಎಂಥಹ ಪರಿಣಾಮ ಬೀರಿತೆಂದು ವಾಸ್ತವಿಕ ನಿರೂಪಣೆ ಮಾಡಿದ್ದಾರೆ. ಅವರ ವಿದ್ಯಾರ್ಥಿ ಜೀವನದ ಗೆಳೆಯ ರಾಮಚಂದ್ರನ ಪ್ರತಿಭೆ, ಪದ್ಯರಚನಾ ಶಕ್ತಿ, ಅನಾರೋಗ್ಯ ಹಾಗೂ ಅಕಾಲ ಮರಣದ ವಾಸ್ತು ಚಿತ್ರ ಹೃದಯ ಮುಟ್ಟುತ್ತದೆ, ಕಣ್ಣೀರು ತರುತ್ತದೆ. ಹಾಗೆಯೆ ಮರುಳಸಿದ್ಧಯ್ಯನವರ ಅಕ್ಕ ಬಸಕ್ಕ, ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ದುಃಖವನ್ನು ನಿಗ್ರಹಿಸಿ, ನಿಸ್ವಾರ್ಥ ಪ್ರೀತಿಯಿಂದ ತಮ್ಮಂದಿರನ್ನು ಅವರ ಮಕ್ಕಳನ್ನು, ವಯಸ್ಸಾದ ತಾಯಿತಂದೆಗಳನ್ನು ತಾವು ಬದುಕಿರುವವರೆಗೆ ನೋಡಿಕೊಂಡರೆಂಬುದನ್ನು ಆಕೆ ತಮ್ಮ ಮೇಲೆ ಎಂಥಹ ಪ್ರಭಾವ ಬೀರಿದ್ದಾರೆಂಬುದನ್ನು ಮನಕರಗುವಂತೆ ಚಿತ್ರಿಸಿದ್ದಾರೆ.
    ಅದೇ ರೀತಿ ಗುರುಶಿಷ್ಯರ ಸೋಲು ಗೆಲುವು ಎಂಬ ಅವರು ಶಾಲೆಯಲ್ಲಿ ಓದುತ್ತಿದ್ದಾಗ ಅವರ ಉಪಾಧ್ಯಾಯ ವೀರಪ್ಪ ಮಾಸ್ತರೊಡನೆ ಆದ ಒಂದು ಘಟನೆಯನ್ನು ನಿರೂಪಿಸುತ್ತಾ ತಾನು ಅನ್ಯಾಯವನ್ನು ಸದಾ ಸಹಿಸುವ ಹೇಡಿಯೂ, ನಿಶ್ಯಕ್ತನು ಅಲ್ಲ ಎಂದು ಹೇಳಿದ್ದಾರೆ. ಅನ್ಯಾಯವಾಗುತ್ತಿದ್ದರೂ ಧೈರ್ಯವಿಲ್ಲದೆ, ಅದನ್ನು ಪ್ರತಿಭಟಿಸಲಿರುವ ಅನೇಕರಿಗೆ ಇದು ಮಾರ್ಗದರ್ಶನ.
    ಉತ್ತರ ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಉನ್ನತ ವಿದ್ಯಾಭ್ಯಾಸ ಪಡೆದು, ಹಳ್ಳಿಯಿಂದ ದಿಲ್ಲಿಗೆ, ದಿಲ್ಲಿಯಿಂದ ದೇಶ ವಿದೇಶಗಳಿಗೆ ಜ್ಞಾನ ಸಾಧನೆಗೂ, ಜ್ಞಾನ ಪ್ರಸಾರಕ್ಕೂ ಹೋಗಿ ಬಂದು ವಿಶ್ವವಿದ್ಯಾನಿಲಯಗಳಲ್ಲಿ, ಪ್ರಾಧ್ಯಾಪಕರಾಗಿ, ನೂರಾರು ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ, ಸಮಾಜ ಸೇವಾಕಾರ್ಯಗಳ ಗುರುವಾಗಿದ್ದು ಸುಖವಾಗಿ ಜೀವಿಸುವುದು ಬಿಟ್ಟು ಅವರ 80ನೇ ವಯಸ್ಸಿನಲ್ಲೂ ತಮ್ಮ ಬರಹ, ಪ್ರಕಟನೆಗಳ, ಬೋದನೆಗಳ ಮೂಲಕ ಸಮಾಜಸೇವೆ ಮಾಡುತ್ತಿರುವ ಪ್ರೊ. ಮರುಳಸಿದ್ಧಯ್ಯನವರು ಮನಸ್ಸಿದ್ದಂತೆ ಮಹಾದೇವ ಎಂಬ ಹೇಳಿಕೆಗೆ ಒಳ್ಳೆಯ ಸಾಕ್ಷಿ ನಿದರ್ಶನ. ಅದರ ವಿದ್ವತ್ತಿಗೆ, ಸಮಾಜಸೇವೆಗೆ ಎಲ್ಲಾ ಪಾರಿತೋಷಕಗಳು ಬಂದಿದ್ದರೂ ತಮ್ಮ ಬರಹದಲ್ಲಿ ಎಲ್ಲೂ ಈ ವಿಚಾರ ಬಂದಿಲ್ಲ. ಅವರು ನಿಜವಾಗಿ ನಿರಾಡಂಬರ-ಸರಳ ವ್ಯಕ್ತಿ. ಇವರು ಇದು ಹೇಳದಿದ್ದರೂ ಅವರ ಪುಸ್ತಕ ಆತ್ಮೀಯರು ಇದನ್ನು ಪ್ರತಿಬಿಂಬಿಸುತ್ತದೆ.
    ನಮ್ಮ ದೇಶದ ಸಮಾಜ ಸುಧಾರಣೆಗಾಗಿ, ಪ್ರಗತಿಗಾಗಿ ದುಡಿಯುತ್ತಿರುವ ಹಾಗೂ ಆಶಿಸುತ್ತಿರುವ ಎಲ್ಲರಿಗೂ ಉಪಯೋಗವಾದ ಪ್ರೇರಣೆ ಕೊಡುವ ಪುಸ್ತಕ "ಆತ್ಮೀಯರು". ಇದು ಆದಷ್ಟು ಮಂದಿ ವಿದ್ಯಾರ್ಥಿಗಳು, ಸಮಾಜಶಾಸ್ತ್ರಜ್ಞ ಹಾಗೂ ಸಮಾಜಸೇವಾಕಾರ್ಯಕರ್ತರು ಓದಬೇಕೆಂಬುದೇ ನನ್ನ ಆಶೆ.

    ಕೆ. ವಿ. ರಾಮ್

    ReplyDelete


  4. 22-9-2013

    ಪ್ರೊ.ಎಲ್.ಎಸ್. ಶೇಷಗಿರಿ ರಾವ್

    ಮಾನ್ಯ ಮಿತ್ರ ಡಾ. ಮರುಳಸಿದ್ಧಯ್ಯನವರಿಗೆ
    ನಮಸ್ಕಾರಗಳು,
    ನೀವು ವಿಶ್ವಾಸದಿಂದ ಕಳುಹಿಸಿದ 'ಆತ್ಮೀಯರು' ಪುಸ್ತಕವನ್ನು ಓದಿದೆ. ಅದೊಂದು ಬಹು ಸಂತೋಷದ ಅನುಭವ. ನೀವು ಚಿತ್ರಿಸಿರುವ ವ್ಯಕ್ತಿಗಳಲ್ಲಿ ಹಲವರು ನನಗೆ ಪರಿಚಿತರು, ಉಳಿದವರ ಪರಿಚಯದ ಸುಯೋಗ ನನಗಿಲ್ಲ. ಪರಿಚಿತರನ್ನು ಹೊಸಬೆಳಕಿನಲ್ಲಿ ಕಂಡೆ, ಅಪರಿಚಿತರು ನಿಮ್ಮ ಪುಟಗಳಲ್ಲಿ ಬಹು ಸ್ಫುಟವಾಗಿ ಮೂಡಿ ಬಂದಿದ್ದಾರೆ. ನಿಮ್ಮ ತೆರೆದ ಮನಸ್ಸು, ಸೂಕ್ಷ್ಮದೃಷ್ಟಿ, ಸ್ನೇಹಶೀಲತೆ, ವಿಶಾಲವಾದ ಅನುಭವ ಎಲ್ಲ ಈ ಚಿತ್ರನಿರೂಪಣೆಯನ್ನು ಪ್ರಭಾವಿಸಿದೆ. ನಿಮ್ಮದು ಒಂದು ದೊಡ್ಡ ಸಾಂಸ್ಕೃತಿಕ ಕೊಡುಗೆ. ಚಿತ್ರಣದಲ್ಲಿ ಮುಖ್ಯವಾದದ್ದು ತೀರ್ಪುಕೊಡಲು ಧಾವಿಸಿದ, ಅರ್ಥಮಾಡಿಕೊಳ್ಳಲು ಬಯಸುವ ಮನೋಧರ್ಮ. ಈ ಮನೋಧರ್ಮವು ನಿಮ್ಮ ಇಡೀ ಕೃತಿಯಲ್ಲಿ ಎದ್ದು ಕಾಣುತ್ತದೆ. ಇಂತಹ ಪುಸ್ತಕವನ್ನು ಕನ್ನಡಿಗರ ಕೈಯಲ್ಲಿಟ್ಟುದಕ್ಕೆ ಅಭಿನಂದನೆಗಳು.
    ನಿಮ್ಮ ಆರೋಗ್ಯವು ಸುಧಾರಿಸುತ್ತದೆ ಎಂದು ನಂಬಿದ್ದೇನೆ.

    ವಂದನೆಗಳು
    ನಿಮ್ಮ ವಿಶ್ವಾಸದ
    ಎಲ್.ಎಸ್. ಶೇಷಗಿರಿ ರಾವ್

    ReplyDelete
  5. 16.9.2013

    ಮಾನ್ಯ ಪ್ರೊ. ಮರುಳಸಿದ್ಧಯ್ಯನವರಿಗೆ,

    ನೀವು ಕಳುಹಿಸಿಕೊಟ್ಟ ಆತ್ಮೀಯರು ಕೃತಿ ತಲುಪಿದೆ.
    ನಿಮ್ಮ ಈ ಪುಸ್ತಕವು ತನ್ನ ಹೆಸರೇ ಹೇಳುವಂತೆ, ಮೂವತ್ತೊಂದು ಜನ ನಿಮ್ಮ ಪರಿಚಿತರ ಕುರಿತಾದ ನೆನಪಿನ ಚಿತ್ರಶಾಲೆ. ನಿಮ್ಮ ಜೀವನಾನುಭವ ವೃಕ್ಷದ ವಿವಿಧ ಕೊಂಬೆರೆಂಬೆಗಳಾದ ಈ ಮಿತ್ರರು, ಬಂಧುಗಳು ನಿಮ್ಮ ವ್ಯಕ್ತಿತ್ವದ ಭಾಗವೇ ಆಗಿದ್ದಾರೆ. ಜೀವನದ ಅನುಭವಗಳಿಗೆ, ಪ್ರೀತಿಗೆ, ಮಾನವಕಾರುಣ್ಯಕ್ಕೆ, ಒಳಿತು ಕೆಡುಕುಗಳಿಗೆ ರೂಪು ನೀಡಿದ್ದಾರೆ. ನಿಮ್ಮ ಚೇತನವನ್ನು ಗಾಢವಾಗಿ ತಟ್ಟಿದ್ದಾರೆ. ಹಾಗಾಗಿ ಅವರುಗಳನ್ನು ಕುರಿತು ಇಷ್ಟು ಚಂದವಾಗಿ, ಅನುಭವಿಸಿ ಬರೆಯುವುದು ನಿಮಗೆ ಸಾಧ್ಯವಾಗಿದೆ.
    ಈ ನುಡಿಚಿತ್ರಗಳು ರೇಖಾವಿನ್ಯಾಸದಲ್ಲಿ ನಮ್ಮ ಮನಸ್ಸನ್ನು ತಟ್ಟಿದ ಅಂಶ ಈ ಬರವಣಿಗೆಯಲ್ಲಿನ ಪ್ರೀತಿ, ಮತ್ತು, ಅಂಥ ಪ್ರೀತಿಯ ನಡುವೆಯೂ ಒಂದು ವಸ್ತುನಿಷ್ಠತೆಯ ಅಂತರವನ್ನು ಕಾಯ್ದುಕೊಂಡಿರುವುದು ಪ್ರತಿಯೊಂದು ಲೇಖನವೂ ಒಬ್ಬ ವೃತ್ತಿಪರ ಸಮಾಜವಿಜ್ಞಾನಿಯ ಅಧ್ಯಯನದ ಫಲವಾಗಿ ಮೂಡಿದೆಯೇನೋ ಎನಿಸುವಂತಿದೆ. ನಿಮ್ಮ ಭಾಷಾಸಾಮಥ್ರ್ಯ, ಭಾವಾಭಿವ್ಯಕ್ತಿಗಳು ಒಂದರೊಡನೊಂದು ಸ್ಪರ್ಧಿಸುವಂತಿವೆ.
    ನಿಮ್ಮ ಈ ಕೃತಿ ಎಳೆಯರಲ್ಲಿ ಹೊಸ ಕನಸುಗಳನ್ನು ಅರಳಿಸುವಂತಾಗಲಿ, ಭಗವಂತನು ನಿಮಗೆ ಆಯುರಾರೋಗ್ಯಗಳನ್ನು ಕರುಣಿಸಲೆಂದು ಹಾರೈಸುತ್ತೇವೆ.

    ಶುಭಾಕಾಂಕ್ಷೆಗಳೊಂದಿಗೆ,
    ಇಂತು ಭಗವತ್ಸೇವೆಯಲ್ಲಿ
    ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು.

    ReplyDelete