Wednesday, September 25, 2013

ವಿಶ್ವಮಹಿಳಾ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿದೆ.

ಸಂಪಾದಕೀಯ

ಮಾರ್ಚ್ 8ರಂದು ಪ್ರಪಂಚದೆಲ್ಲೆಡೆ ವಿಶ್ವಮಹಿಳಾ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿದೆ. ಸಂದರ್ಭದಲ್ಲಿ ಮಹಿಳೆಯರ ಸ್ಥಾನಮಾನಗಳ ಬಗೆಗೆ ಕುರಿತು ಗಂಭೀರವಾಗಿ ಚಿಂತನೆಮಾಡಬೇಕಾಗಿದೆ. ನಾವು ಎಷ್ಟೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದೇವೆ ಎಂದು ಹೇಳಿಕೊಂಡಿದ್ದರೂ ಆಕೆ (ಮಹಿಳೆ)ಗೆ ಸಿಗಬೇಕಾದ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ (ಭಾಗಶಃ ಸಿಕ್ಕಿದರೂ ಅದನ್ನು ಸರಿಯಾದ ದಿಕ್ಕಿನಲ್ಲಿ ಫಲಪ್ರದಪಡಿಸಿಕೊಳ್ಳುವ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಇದಕ್ಕೆ ನಿದರ್ಶನ ನಮ್ಮ ರಾಜ್ಯ ಸರಕಾರದಲ್ಲಿನ ಉನ್ನತ ಖಾತೆಗಳನ್ನು ಹೊಂದಿರುವ ಮಹಿಳಾ ಮಣಿಯರ ಖಾತೆ ನಿರ್ವಹಣೆಯ ವೈಪಲ್ಯವೇ ಸಾಕ್ಷಿ. ಪ್ರಮುಖ ಖಾತೆಗಳನ್ನು ಹೊಂದಿರುವ, ಗ್ರಾಮೀಣ ಬದುಕಿನ ಕಷ್ಟಕಾರ್ಪಣ್ಯಗಳನ್ನು ಹತ್ತಿರದಿಂದ ಕಂಡಂಥ ಮಹಿಳೆಯರು ಅಧಿಕಾರದಾಸೆಗೆ ಜಾತಿಗುಂಪುಗಾರಿಕೆಯಲ್ಲಿ ಪಾಲ್ಗೊಂಡು ಕೇವಲ ಮಠಮಂದಿರಗಳನ್ನು ಸುತ್ತುತ್ತಾ ಕಾಲಹರಣ ಮಾಡುತ್ತಾ ಗ್ರಾಮೀಣ ಜನರಿಗೆ ಸಹಕಾರಿಯಾಗಿರದಿರುವುದು ಒಂದು ವಿಪರ್ಯಾಸವೇ ಸರಿ
            ಯಾವುದೋ ಒಂದು ದಿನ ವಿಜೃಂಭಣೆಯಾಗಿ ಆಚರಿಸಿ, ಒಂದು ದಿನದ ಆಚರಣೆಗೆ ಪೂರಕವಾಗಿ ಒಳ್ಳೆಯ ಮಾತುಗಳನ್ನಾಡಿ ಪದವೀ ಗೌರವ ಪುರಸ್ಕಾರಗಳು ಸಂದರೆ ಮುಗಿದು ಹೋಯಿತೇ? ಎಂಬ  ಪ್ರಶ್ನೆ ನಮ್ಮಲ್ಲಿ ಮೂಡುತ್ತಿರುವಾಗಲೇ ಇದ್ದಬದ್ದ ಮೇರೆಗಳನ್ನೆಲ್ಲಾ ಮೀರಿ, ಕಟ್ಟುಪಾಡುಗಳನ್ನು ಕಿತ್ತೊಗೆದು ಬರೀಯ ಹೆಸರು, ಹಣ, ಮೋಜಿನಲ್ಲಿ ಉಂಡೆದ್ದು ಹೋಗುವ, ಅಶ್ಲೀಲ ದೇಹ ಪ್ರದರ್ಶನವೇ ಸಾಧನೆ ಎಂದು ಭಾವಿಸುತ್ತಿರುವ ನಮ್ಮ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವ ಆತಂಕದ ನಡುವೆ ಮಹಿಳಾದಿನ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.
            ನಗರದಿಂದ ದೂರ ಉಳಿದು ಹೊಲ-ಗದ್ದೆಗಳಲ್ಲಿ ಯಾವ ಹುಸಿ ಆಚರಣೆಗಳ ಸೋಂಕುಇಲ್ಲದೆ ರೈತನ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಹೆಣ್ಣು ಮಕ್ಕಳು ನಿಜವಾದ ಅರ್ಥದಲ್ಲಿ ಮಹಿಳೆ ಪದದ ಅರ್ಥಕ್ಕೆ ಸಾಕ್ಷಿಯಾಗಿದ್ದಾರೆ. ಅಂಥ ಮಹಿಳೆಯರಿಗೆ ಅಭಿನಂದನೆ ಸಲ್ಲಿಸೋಣ. ಮಹಿಳದಿನಾಚರಣೆಯ ಪರವಾಗಿ ಶುಭಾಶಯ ಹೇಳೋಣ.
            ಅಂದು ಮನೆಯ ವಿದ್ಯುತ್ ಬಿಲ್ಲನ್ನು ಕಟ್ಟಲು ಹಣವಿಲ್ಲದಿದ್ದರೂ ಜನಸೇವೆ ಮಾಡುತ್ತಿದ್ದ ಜನನಾಯಕರಿದ್ದರು ನಮ್ಮಲ್ಲಿ. ಇಂದು ನಮ್ಮ ಹಣ(ತೆರಿಗೆ)ದಲ್ಲಿ ಮಿಂದುಂಡು, ಮೋಜು ಮಸ್ತಿಯಲ್ಲಿ ಮಗ್ನರಾಗಿ ಜನಸೇವೆಗೆ ಬೇಕಾಗಿರುವ ಕನಿಷ್ಠ ಕಾನೂನುಗಳ ಜಾರಿಯಲ್ಲಿ ಅಸಡ್ಡೆ ತೋರಿಸುತ್ತಿರುವ ನಮ್ಮ ರಾಜಕಾರಣಿಗಳ ವರ್ತನೆ ಸಾರ್ವಜನಿಕರ ಸಹನೆಯ ಕಟ್ಟೆಯೊಡೆದಿದೆ, ಕರ್ನಾಟಕದ ಮರ್ಯಾದೆಯನ್ನು ರಾಷ್ಟ್ರಮಟ್ಟದಲ್ಲಿ ಮಣ್ಣುಪಾಲು ಮಾಡಿದ ಕುಖ್ಯಾತಿ  ಮಾತ್ರ ಕ್ಷಮಿಸದಲ್ಲ.
            ಪತ್ರಿಕೆಯನ್ನು 52 ಪುಟಗಳಿಂದ 48ಪುಟಕ್ಕೆ ಸೀಮಿತಗೊಳಿಸುತ್ತಿದ್ದೇವೆ. ಬಗ್ಗೆ ತಮಗೆ ತಿಳಿಸತಕ್ಕದ್ದು ನನ್ನ ಕರ್ತವ್ಯ. ನಿರಾತಂಕ ತಂಡದಲ್ಲಿನ ಸಲಹೆಗಾರರ ಸಲಹೆ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಸಲಹೆ ನೀಡಲು ಕಾರಣ, ಸಮಾಜಕಾರ್ಯ ಕ್ಷೇತ್ರದಲ್ಲಿನ ವೃತ್ತಿಪರರ ನಿರಾಸಕ್ತಿ. ಪತ್ರಿಕೆ ಸುಮಾರು 16 ಸಂಚಿಕೆಗಳು ಅತ್ಯಂತ ಸುಂದರ ಹಾಗೂ ಗುಣಮಟ್ಟದಲ್ಲಿ ರಾಜಿಯಾಗದಂತೆ ಓದುಗರ ಕೈ ತಲುಪಿದೆ ಎಂದು ಭಾವಿಸುತ್ತೇನೆ
            ವಿಷಾದದಿಂದ ಕೆಲವೊಂದು ದೃಷ್ಠಾಂತಗಳನ್ನು ಹೇಳಲು ಬಯಸುತ್ತೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೇವಲ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳ ಮೇಲೆ ನೇಮಕಾತಿ ಮಾಡುತ್ತಿರುವ ಅವೈಜ್ಞಾನಿಕ ಕ್ರಮಕ್ಕೆ ಯಾವುದೇ ಸಮಾಜಕಾರ್ಯ ವೃತ್ತಿಪರರು, ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಕ್ರಿಯಿಸದೆ ಮೌನವಾಗಿರುವುದು ದುರಂತದ ಸಂಗತಿಯಾಗಿದೆ.
            ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಸಮಾಜಕಾರ್ಯಕರ್ತರಿಗೆ ಪರಿಹಾರ ನೀಡಬೇಕೆಂದು ನಡೆದ ಹೋರಾಟದಲ್ಲಿ ಕರ್ನಾಟಕದ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು, ಆಟೋ ಸಂಘಟನೆಗಳು ಪಾಲ್ಗೊಂಡವೇ ವಿನಾ ಯಾವೊಬ್ಬ ಸಮಾಜಕಾರ್ಯಕರ್ತರೂ ಚಕಾರವೆತ್ತಲಿಲ್ಲ. ವ್ಯವಸ್ಥೆ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ನಾವೇ ಅಪಘಾತದ ವಸ್ತುಗಳಾಗಿಬಿಡಬಹುದು. ಆಗ ಪರಿಹಾರಕ್ಕೆ ಬರುವರಾರು? ಅಪಘಾತದಲ್ಲಿ ಮೃತಪಟ್ಟ ಕು| ನಳಿನಿ ಅವರ ಆತ್ಮಕ್ಕೆ ಶಾಂತಿ ಸಿಗಲಿ.
            ಸಂಚಿಕೆಯಲ್ಲಿ ಎರಡು ಗಮನಾರ್ಹ ಆಂಗ್ಲಭಾಷೆಯ ಲೇಖನಗಳು ಪ್ರಕಟವಾಗಿವೆ. ಒಂದು ಭಾರತದ ಪೂರ್ವ ಕರಾವಳಿಯ ಯುವ ಉತ್ಸಾಹಿ ಸುಜಿತ್ ಮಹಾಪಾತ್ರ ಅವರ ಮಕ್ಕಳ ಗ್ರಂಥಾಲಯದ ಮಹತ್ವವನ್ನು ಕುರಿತಾದ ಒಂದು ಆಂದೋಲನದ ಬಗ್ಗೆ, ಭಾರತದ ಪಶ್ಚಿಮ ಕರಾವಳಿಯಿಂದ ಯುವಕರಾಗಿದ್ದಾಗ ಕೈಗೊಂಡು ನಡೆಸುತ್ತಿರುವ ಅಪ್ಪಿಕೊ ಆಂದೋಲನವನ್ನು ಕುರಿತು ಪಾಂಡುರಂಗ ಹೆಗಡೆ ಅವರು ಬರೆದಂಥವು. ನಮ್ಮ ದೇಶದ, ಯಾಕೆ, ಯಾವ ದೇಶಕ್ಕಾದರೂ ಪ್ರಗತಿಗೆ ಅಗತ್ಯವಾದ ಜಾಗ್ರತ ಆರೋಗ್ಯವಂತ ಮಕ್ಕಳು, ದಟ್ಟವಾಗಿ ಬೆಳೆದು ಪರಿಸರಕ್ಕೆ ಆರೋಗ್ಯಕರ ನೆಲೆಯಾಗಿರುವ ಮರಗಳ ಸಂರಕ್ಷಣೆ ಎಂಬುದು ವೇದ್ಯವಾದ ಸಂಗತಿಯೇ. ಎರಡು ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳು ನಮಗೆ ದೊರೆತುದು ನಮಗೆ ಸಂತಸದಾಯಕ.
            ಸಂಚಿಕೆಯಲ್ಲಿ ಸಮಾಜಕಾರ್ಯ ಕ್ಷೇತ್ರದಲ್ಲಿ ಹಿರಿಯರಾದ ಆರ್.ಆರ್.ಸಿಂಗ್, ಪಾಂಡುರಂಗ ಹೆಗ್ಡೆ ಹಾಗೂ ಬಿ.ಎನ್.ಗಂಗೂಲಿ ಅವರ ಲೇಖನಗಳು ಹಾಗೆಯೇ ಸಂಚಿಕೆಯ ಮುಖಪುಟದ ಶ್ರೀಯುತ ಎಸ್.ಆರ್.ಹಿರೇಮಠ್ ಅವರ ಲೇಖನಗಳು ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಿವೆಯೆಂದರೆ ತಪ್ಪಾಗಲಾರದು.  ಪ್ರತಿ ಸಂಚಿಕೆಯು ಉತ್ತಮವಾಗಿ ಮೂಡಿಬರಲು, ಗುಣಮಟ್ಟದಲ್ಲಿ ಎಲ್ಲೂ ರಾಜಿಯಾಗದಂತೆ ನಮ್ಮ ತಂಡ ಶ್ರಮಿಸುತ್ತಿದೆ. ಪ್ರಮುಖವಾಗಿ ಸಲಹಾ ತಂಡದ ಸೂಚನೆಯಂತೆ ಪತ್ರಿಕೆಯನ್ನು ಸಂಚಿಕೆಯಿಂದ 52 ಪುಟಗಳಿಂದ 48 ಪುಟಗಳಿಗೆ ಸೀಮಿತಗೊಳಿಸುತ್ತಿದ್ದೇವೆ
            ನಮ್ಮ ಪತ್ರಿಕೆಗೆ ಸಹೃದಯ ಒದುಗರು ಕೋರಿಕೆಯ ಮೇರೆಗೆ ಅಜೀವ ಚಂದಾದಾರರಾಗುತ್ತಿರುವುದಕ್ಕೆ ನಿರಾತಂಕ ತಂಡ ಧನ್ಯವಾದ ಸಲ್ಲಿಸುತ್ತದೆ. ಸುಮಾರು 2000 ಪ್ರತಿಗಳು ದೇಶದಾದ್ಯಂತ ತಲುಪುತ್ತಿವೆ. Online ಮೂಲಕ ಪತ್ರಿಕೆಗೆ ವಿದೇಶಗಳಲ್ಲೂ ಒದುಗರಿರುವುದು ಹೆಮ್ಮೆಯ ವಿಷಯವಾಗಿದೆ
            ನಿರಾತಂಕದ ಭಾಗವಾದ ನಿರುತ ಪ್ರಕಾಶನ ಈಗಾಗಲೇ 5 ಪುಸ್ತಕಗಳನ್ನು ಹೊರತಂದಿದೆ. ಇದರ ಜೊತೆಗೆ ಡಾ.ಎಚ್.ಎಂ. ಮರುಳಸಿದ್ಧಯ್ಯ  ಅವರ ಸಮಾಜಕಾರ್ಯದ ಪಾರಿಭಾಷಿಕ ಶಬ್ದಕೋಶ ಹಾಗೂ ಪ್ರೊ. ಶಂಕರ ಎಚ್. ಪಾಠಕ ಅವರ Social Work and Social Welfare, ಎಂಬ ಎರಡು ಪುಸ್ತಕಗಳು ಶೀಘ್ರದಲ್ಲೇ ಪ್ರಕಟನೆಗೊಳ್ಳುತ್ತಿವೆ. ಪುಸ್ತಕಗಳನ್ನು ಪ್ರಕಾಶನಕ್ಕೆ ನೀಡಿದ ಲೇಖಕರಿಬ್ಬರಿಗೂ ನಿರಾತಂಕ ತಂಡ ಅಭಾರಿಯಾಗಿದೆ. ಹಾಗೆಯೇ ನಿರುತ ಪ್ರಕಾಶನಕ್ಕೆ ISBN ದೊರೆತಿರುವುದು ಸಂತಸದ ವಿಷಯವಾಗಿದೆ. ಪುಸ್ತಕಗಳ ಪ್ರಕಟನೆಗೆ ನಿರಾತಂಕವನ್ನು ಸಂಪರ್ಕಿಸಿ.

ರಮೇಶ  ಎಂ.ಎಚ್.


No comments:

Post a Comment