Wednesday, September 25, 2013

ನಿಜವಾಗಿಯೂ ನಾವು ಅಣ್ಣಾ ಹಜಾರೆಗೆ ಬೆಂಬಲಿಸುವಷ್ಟು ಪ್ರಾಮಾಣಿಕರೇ ?



            ಭ್ರಷ್ಟಾಚಾರದ ವಿರುದ್ಧ ಕೇಳಿ ಬರುತ್ತಿರುವ ಘೋಷಣೆಗಳು ಮಾಧ್ಯಮಗಳ ವರದಿಗಳು ಅಮೂರ್ತ ಗುರಿಯನ್ನಿಟ್ಟುಕೊಂಡು ಹೊರಟಂತೆ ಕಾಣುತ್ತಿವೆ. ಶತ್ರುವಿನ ಸ್ಥಾನದಲ್ಲಿ ಕೇಂದ್ರಸರ್ಕಾರವನ್ನು ಅಥವಾ ರಾಜಕಾರಣಿಗಳನ್ನು ಮಾತ್ರ ಗುರಿಯಾಗಿಸಿದ್ದೇವೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಭ್ರಷ್ಟಾಚಾರಿಗಳು ಹಾಗೂ ಭ್ರಷ್ಟಾಚಾರಿಗಳಲ್ಲದವರ ನಡುವೆ ಗೆರೆ ಎಳೆಯಲು ಸಾಧ್ಯವೆ? ಅಣ್ಣಾ ಹಜಾರೆ ಬೆಂಬಲಕ್ಕೆ ಆತ್ಮ ಸಾಕ್ಷಿಗೆ ಪೂರಕವಾಗಿ ಬೆಂಬಲ ಕೊಡುತ್ತಿರುವವರು ನಾವೆಷ್ಟು ಜನ. ನಾವೇಕೆ ಅಣ್ಣಾ ಅವರ ಮಾದರಿಯಲ್ಲಿ ದಿನನಿತ್ಯದ ಬದುಕಿನಲ್ಲಿ ಭ್ರಷ್ಟಾಚಾರಿಗಳಾಗದಿರಲು ಸಾಧ್ಯವಾಗಿಲ್ಲ. ಕೊಳ್ಳುಬಾಕ ಸಂಸ್ಕೃತಿಯ ದಾಸರಾಗಿ ಭ್ರಷ್ಟಾಚಾರವನ್ನು ಮಾಡಿದ್ದೇವೆ. ಇನ್ನು ಮುಂದೆಯಾದರೂ ನಾವು ಭ್ರಷ್ಟಾಚಾರ ಮಾಡುವುದಿಲ್ಲ ಎಂಬ ಭರವಸೆ ನಮ್ಮಲ್ಲಿಲ್ಲ. ಚಳವಳಿ ಮುಗಿದ ಮೇಲೆ ನಮ್ಮ ನಮ್ಮ ಭ್ರಷ್ಟಾಚಾರದಲ್ಲಿ ನಾವೆಲ್ಲರೂ ತೊಡಗುತ್ತೇವೆ. ದಿನನಿತ್ಯದ ಬದುಕಿನಲ್ಲಿ ಭ್ರಷ್ಟಾಚಾರದ ವಿರೋಧಿಗಳಾಗಿ ನಾವಿರುವುದಿಲ್ಲ. ರೀತಿಯ ಜನರೇ ಬಹುಪಾಲು ಇರುವಾಗ ಹೇಗೆ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯ? ಲೋಕಪಾಲ್ ಮಸೂದೆಯೊಂದಿಗೆ ದಿನನಿತ್ಯದ ಬದುಕಿನಲ್ಲಿ ನೈತಿಕತೆಯನ್ನು ನಾವು ಮೈಗೂಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಾಧ್ಯ.
            ಇಂದಿನ ಭ್ರಷ್ಟಾಚಾರ ಹೋರಾಟಗಾರರಿಗೆ ಕೆಲವೊಂದು ನೀತಿ ಸಂಹಿತೆ ಬೇಡವೆ?
1) ಭ್ರಷ್ಟಾಚಾರ ವಿರುದ್ಧದ ಆಂದೋಲನದಲ್ಲಿ ಪಾಲ್ಗೊಂಡವರೆಲ್ಲ ದಿನನಿತ್ಯದ ಬದುಕಿನಲ್ಲಿ ಏಕೆ ಭ್ರಷ್ಟಾಚಾರವನ್ನು ವಿರೋಧಿಸಲಿಲ್ಲ ಎಂಬ ಪ್ರಶ್ನೆಗಳು ಮೂಡಿದವೇ?
2) ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹೋರಾಟದಲ್ಲಿ ಪಾಲ್ಗೊಂಡ ಮೇಲಾದರೂ ಎಷ್ಟು ಜನ ದಿನನಿತ್ಯದ ಬದುಕಿನಲ್ಲಿ ಲಂಚ ಪಡೆಯುವುದನ್ನು ನಿಲ್ಲಿಸಿದ್ದಾರೆ, ಲಂಚ ಕೊಡುವುದು ನಿಲ್ಲಿಸಿದರೂ ಅಥವಾ ಇನ್ನು ಮುಂದಾದರೂ ನಾವು ನಿಲ್ಲಿಸುತ್ತೇವೆಂದು ಸಂಕಲ್ಪ ಮಾಡಿದ್ದಾರೆ?
3) ಭ್ರಷ್ಟಾಚಾರದ ಆಂದೋಲನದಲ್ಲಿ ಪಾಲ್ಗೊಂಡ ಎಷ್ಟು ಜನ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಲಂಚ ನೀಡಿ ಪಾಸಾಗುವುದಿಲ್ಲ. ಪರೀಕ್ಷೆಗಳಲ್ಲಿ ನಕಲು ಮಾಡುವುದಿಲ್ಲ ಎಂದು ತಮ್ಮ ಮನಸಾಕ್ಷಿಗೆ ಹೇಳಿಕೊಂಡಿದ್ದಾರೆಯೇ?
4) ಅಣ್ಣಾ ಉಪವಾಸ ಮಾಡುತ್ತಿರುವಾಗ ಎಷ್ಟು ಜನ ಒಪ್ಪೊತ್ತಿನ ಊಟ ಬಿಟ್ಟು ಅವರೊಂದಿಗೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ? ರೀತಿಯ ಉದಾಹರಣೆಗಳನ್ನು ನೀಡುತ್ತಾ ಹೋದರೆ ಮುಂದುವರೆಯುತ್ತಲೇ ಹೋಗುತ್ತವೆ. ನನಗನ್ನಿಸುತ್ತದೆ ಕೇವಲ ಎಚ್.ಎಸ್. ದೊರೆಸ್ವಾಮಿ, ಸಂತೋಷ್ ಹೆಗ್ಡೆ, ವೀರೇಂದ್ರ ಹೆಗ್ಗಡೆ, ರೀತಿಯ ಸಾತ್ತ್ವಿಕ ಕೇವಲ ನೂರು ಜನರ ಧರಣಿ ಕೇಂದ್ರ ಸರ್ಕಾರವನ್ನೇ ಉರುಳಿಸುವ ಬಲ ಇದೆ, ನಮ್ಮ ಜನ ಬೆಂಬಲದಿಂದಲ್ಲ. ಇಷ್ಟೆಲ್ಲಾ ಚಳವಳಿ ಮಾಡುವ ನಾವು ಅಣ್ಣಾ ಅಥವಾ ಸಂತೋಷ್ ಹೆಗ್ಡೆ ಚುನಾವಣೆಗೆ ನಿಂತರೆ, ಸೋಲಿಸುತ್ತೇವೆ, ಗೆಲ್ಲಿಸುವ ವಾತಾವರಣ ನಿರ್ಮಿಸಿ ಲೋಕಸಭೆಯಲ್ಲಿ ಇವರೆ ನಮ್ಮ ಜನ ಲೋಕಪಾಲ್ ಬಿಲ್ ಮಂಡಿಸುವಂತಾಗಲಿ; ಅಸಾಧ್ಯವೇ?
            ಹಿರಿಯ ಕವಿಯೊಬ್ಬರ ಹೇಳಿಕೆ, ಪ್ರಪಂಚದ ಎಲ್ಲಾ ಕವಿಗಳನ್ನ ಸಾಲಾಗಿ ನಿಲ್ಲಿಸಿದಾಗ ಒಬ್ಬರ ಕೈ ಮತ್ತೊಬ್ಬರ ಜೇಬೊಳಗೆ ಎಂದು, ಅಂದರೆ, ಪ್ರತಿಯೊಬ್ಬ ಕವಿಯೂ ಇನ್ನೊಬ್ಬ ಕವಿಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಅನುಕರಣೆ ಮಾಡಿರುತ್ತಾರೆ.
            ವಾಕ್ಯವನ್ನು ಭ್ರಷ್ಟಾಚಾರದಿಂದ ಕೂಡಿದ ಇಂದಿನ ಸಮಾಜಕ್ಕೆ ಹೋಲಿಸಿದಾಗ ದೇಶದಲ್ಲಿರುವ ನಾವೆಲ್ಲರೂ ಭ್ರಷ್ಟರೇನೋ ಎಂಬ ಭೀತಿ ಕಾಡುತ್ತದೆ. ಏಕೆಂದರೆ ಮುತ್ಸದ್ಧಿಯೊಬ್ಬರು ಹೇಳಿದ ಮಾತು ನನ್ನನ್ನ ಪ್ರತಿ ದಿನ ಕಾಡುತ್ತಿರುತ್ತದೆ. ಏನೆಂದರೆ, ಮೋಸಮಾಡುವುದಕ್ಕಿಂತ ಮೋಸಹೋಗುವುದು ಮಹಾಪರಾಧ ಎಂದು. ಮಾತು ನಮಗೆ ನೂರಕ್ಕೆ ನೂರರಷ್ಟು ಅನ್ವಯಿಸುತ್ತದೆ. ಭಷ್ಟಾಚಾರದ ವಿರುದ್ಧ  ದನಿ ಎತ್ತಲು ಗಾಂಧಿವಾದಿ ಅಣ್ಣಾ ಹಜಾರೆಯವರೆ ಬೇಕಾಗಿರಲಿಲ್ಲ, ಗಣಿ ಅಕ್ರಮದ ಧೂಳು ಕೆಡವಲು ನ್ಯಾಯಮೂರ್ತಿ ಸಂತೋಷ ಹೆಗ್ಗಡೆಯವರೆ ಬೇಕಾಗಿರಲಿಲ್ಲ. ಭ್ರಷ್ಟಾಚಾರದ ಆರಂಭಿಕ ಹಂತದಲ್ಲೇ ಸ್ಥಳೀಯವಾಗಿ ಒಬ್ಬ ರೈತ, ಒಬ್ಬ ಶಿಕ್ಷಕ, ಒಬ್ಬ ವಿದ್ಯಾರ್ಥಿ, ಒಬ್ಬ ನ್ಯಾಯವಾದಿ, ಒಬ್ಬ ಸರ್ಕಾರಿ ನೌಕರ, ಒಬ್ಬ ರಾಜಕಾರಣಿ, ಒಬ್ಬ ವೈದ್ಯ, ಒಬ್ಬ ಇಂಜಿನಿಯರ್, ಒಬ್ಬ ಸಮಾಜಕಾರ್ಯಕರ್ತ ವ್ಯವಸ್ಥೆಯ ವಿರುದ್ಧ ಹೋರಾಡಲು ಮನಸ್ಸು ಮಾಡಿದ್ದರೆ ಸಾಕಾಗಿತ್ತು ಇಂದಿನ ಭ್ರಷ್ಟಾಚಾರದ ಉತ್ತುಂಗ ಸ್ಥಿತಿಯನ್ನ ತಡೆಯಲು. ಆದರೆ ಹಾಗೆ ನಾವ್ಯಾರೂ ಅದರ ಗೋಜಿಗೆ ಹೋಗದೆ ಸಂಬಂಧವಿಲ್ಲವೇನೋ ಎಂಬ ನಿರಾಳ ಭಾವದಲ್ಲಿ ಸಂತೃಪ್ತ ವ್ಯಕ್ತಿಗಳಾಗಿ ಕುಳಿತದ್ದಕ್ಕೆ ಬೆಲೆಯೇರಿಕೆ, ನಿರುದ್ಯೋಗ, ಲಂಚಗುಳಿತನ, ದರೋಡೆ, ಕೊಲೆ ಮತ್ತು ರಾಜಕೀಯ ಅಧಃಪತನ ಮುಂತಾದವುಗಳ ಫಲಗಳನ್ನು ಅನುಭವಿಸುವಂತಾಗಿದೆ
            ಒಮ್ಮೆ ಬಳ್ಳಾರಿಯ ಮಾರ್ಗವಾಗಿ ಪ್ರಯಾಣಿಸಿ ಅಲ್ಲಿನ ಸುತ್ತಮುತ್ತಲ ಪ್ರದೇಶಗಳನ್ನು ಸೂಕ್ಷ್ಮವಾಗಿ ಅಲ್ಲ, ಸಾಮಾನ್ಯವಾಗಿ ಗಮನಿಸಿದಾಗ ನಮಗೆ ಗೊತ್ತಾಗುತ್ತದೆ, ನಮ್ಮಲ್ಲಿರುವ ನೀಲಗಿರಿಯ ಮರಗಳು ಹಸಿರಾಗಿದ್ದರೆ ಬಳ್ಳಾರಿಯಲ್ಲಿನ ನೀಲಗಿರಿ ಮರಗಳೇಕೆ ಕೆಂಪು ಎಂದು ಗೊಂದಲ ಮೂಡಬಹುದು. ಸತ್ಯ ಇಷ್ಟೇ. ನಮ್ಮಲ್ಲಿರುವ ನೀಲಗಿರಿಯೂ ಹಸಿರೇ, ಅಲ್ಲಿರುವ ನೀಲಗಿರಿಯೂ ಹಸಿರೇ. ನಮ್ಮೆಲ್ಲರ ನಿರ್ಲಕ್ಷ್ಯ ಮನೋಭಾವದಿಂದ ಅಲ್ಲಿಯ ನೀಲಗಿರಿ ಮರಗಳು ಗಣಿ ಅಕ್ರಮ ಚಟುವಟಿಕೆಯಿಂದಾಗಿ ಕೆಂಪಾಗಿ, ಪ್ರಕೃತಿ ಬರಿದಾಗಿ, ಗಣಿ ಧಣಿಗಳ ಖಜಾನೆ ಭರ್ತಿಯಾಗಿ ಸರ್ಕಾರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವುದಕ್ಕೆ ನಮ್ಮೆಲ್ಲರ ಹೊಣೆಗೇಡಿತನವಲ್ಲದೆ ಮತ್ತೇನು!
            ಭಾರತದಲ್ಲಿರುವ ರೈತರೆಲ್ಲರೂ ವಿದ್ಯಾವಂತರಲ್ಲ. ಅಧಿಕಾರದಲ್ಲಿರುವವರ ದರ್ಪಕ್ಕೆ ಹೆದರಿ ಮುಂದೇನಾಗಬಹುದೋ ಎಂಬ ಭೀತಿಯಿಂದ ಮನಸ್ಸಿಲ್ಲದ ಮನಸ್ಸಿನಿಂದ ಹಿಡಿಶಾಪ ಹಾಕಿ ತಮ್ಮ ಜಮೀನನ್ನು ಮಾರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ
            ಹೀಗೆ ಅಧಿಕಾರದ ದರ್ಪದಿಂದ ಗಣಿಕಾರಿಕೆ ನಡೆಸಿದ ಬಳ್ಳಾರಿಯಲ್ಲಿ ಇಂದು ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ನಿರುದ್ಯೋಗದ ಸಮಸ್ಯೆಯನ್ನು ಹೋಗಲಾಡಿಸಲು ನಿವೃತ್ತ ಸಮಾಜಕಾರ್ಯ ಪ್ರಾಧ್ಯಾಪಕರಾದ ಡಾ. ಎಚ್. ಎಂ. ಮರುಳಸಿದ್ಧಯ್ಯ ನವರು ಸಂಚಿಕೆಯಲ್ಲಿನ ಅವತಾರವೆಂಬೆ ಅಂಧಃಪಾತವನ್ನೇ! ಲೇಖನದಲ್ಲಿ ಕೆಲವೊಂದು ಪರಿಹಾರ ಮಾರ್ಗಗಳನ್ನು ಸೂಚಿಸಿದ್ದಾರೆ. ಅದನ್ನು ಪ್ರ್ರಾಮಾಣಿಕವಾಗಿ ಸ್ಥಳೀಯ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳ ಜೊತೆಗೆ ಸಂಘ ಸಂಸ್ಥೆಗಳು ಕಾಳಜಿ ವಹಿಸಿದರೆ ಬಳ್ಳಾರಿ ಬರಿದಲ್ಲ ರೀ, ಭಾರೀ ಬಳ್ಳಾರಿಯಾಗುವುದರಲ್ಲಿ ಸಂದೇಹವಿಲ್ಲ
            ಇದು ಕೇವಲ ಬಳ್ಳಾರಿ ಜಿಲ್ಲೆಯೊಂದರ ಕಥೆ ವ್ಯಥೆಯಲ್ಲ. ಬಳ್ಳಾರಿಯಂತಹ ಅದೆಷ್ಟೋ ಜಿಲ್ಲೆಗಳು ನಮ್ಮಂಥವರ ಜವಾಬ್ದಾರಿತನದ ಪಲಾಯನವಾದದಿಂದ ಧೂಳುತುಂಬಿಕೊಂಡಿರುವ ಜನಜೀವನ ಅಸ್ತವ್ಯಸ್ತಗೊಂಡಿರುವ ವ್ಯವಸ್ಥೆಗಳು ಬೆಳಕಿಗೆ ಬರಬೇಕಾಗಿದೆ. ಅವರಿಗೆ ನ್ಯಾಯ ಸಿಗಬೇಕಾಗಿದೆ.
            ಸಮಾಜಕಾರ್ಯ ವೃತಿಪರರ ಸಭೆಯ ಸಂಪರ್ಕವನ್ನು ಹೆಚ್ಚಿಸುವ ಸಲುವಾಗಿ ಬಿ.ಎಸ್.ಡಬ್ಲ್ಯು, ಎಂ.ಎಸ್.ಡಬ್ಲ್ಯು, ಕಾಲೇಜಿನ ಪ್ರಾಂಶುಪಾಲರು ದಯಮಾಡಿ ನಿಮ್ಮ ಹಳೆಯ ವಿದ್ಯಾರ್ಥಿಗಳ, ಪ್ರಸಕ್ತ ವಿದ್ಯಾರ್ಥಿಗಳ ವಿಳಾಸ, ದೂರವಾಣಿ ಸಂಖ್ಯೆಯನ್ನು ನಮಗೆ ಕಳುಹಿಸಿ ಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
             ನಿರಾತಂಕ ತಂಡವು ಮಾಜಿ ಕೇಂದ್ರ ಸಚಿವರಾದ ಶ್ರೀಎಂ.ವಿ. ರಾಜಶೇಖರನ್ರವರಿಗೆ 84ನೆಯ ಹುಟ್ಟುಹಬ್ಬಕ್ಕೆ ಗೌರವಯುತ ಶುಭ ಕೋರುತ್ತದೆ.

ರಮೇಶ ಎಂ.ಎಚ್.


No comments:

Post a Comment