Wednesday, September 25, 2013

ಪ್ರತಿಯೊಂದು ಮಗುವೂ ಹುಟ್ಟುತ್ತಲೆ-'ವಿಶ್ವಮಾನವ'.



ಪ್ರತಿಯೊಂದು ಮಗುವೂ ಹುಟ್ಟುತ್ತಲೆ-'ವಿಶ್ವಮಾನವ'. ಬೆಳೆಯುತ್ತಾ ನಾವು ಅದನ್ನು 'ಅಲ್ಪ ಮಾನವ'ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನನ್ನಾಗಿ ಮಾಡುವುದೇ ವಿದ್ಯೆಯ ಉದ್ದೇಶವಾಗಬೇಕು
            ಹುಟ್ಟುವಾಗ 'ವಿಶ್ವಮಾನವ'ನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ ಜನಾಂಗ, ಇತ್ಯಾದಿ ಉಪಾಧಿಗಳಿಂದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ದನನ್ನಾಗಿ, ಅಂದರೆ 'ವಿಶ್ವಮಾನವ'ನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ, ರಾಷ್ಟ್ರಕವಿ ಕುವೆಂಪುರವರ 'ವಿಶ್ವಮಾನವ' ಸಂದೇಶ ನಮಗೆ ಮಾದರಿಯಾಗಬೇಕಾದುದು ಕ್ಷಣದ ಅಗತ್ಯತೆ.
            IFSW (International Federation of Social Workers) ಸ್ವಿಡ್ಜರ್ಲ್ಯಾಂಡ್ 15 ಮಾರ್ಚ್ 2011 ರಂದು ಮೊದಲ ಬಾರಿಗೆ  World Social Workers Day ಆಚರಿಸುತ್ತಿರುವುದು ಅತ್ಯಂತ ಸಂತಸ ತರುವ ವಿಚಾರವಾಗಿದೆ. ನಿಟ್ಟಿನಲ್ಲಿ ನಾವೇನಾದರೂ ಯೋಚಿಸಿ ಕಾರ್ಯಕ್ರಮ ಹಮ್ಮಿಕೊಂಡರೆ ಸೂಕ್ತವೆನಿಸುತ್ತದೆ
            ಸಂಚಿಕೆಯಲ್ಲಿ IAS  ಹುದ್ದೆ ತೊರೆದು ಸಮಾಜಸೇವೆಗೆ ಧುಮುಕಿದ ಅರುಣಾರಾಯ್ ಅವರ ಸಾಧನೆ ಮತ್ತು ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಬಂದಿರುವುದರ ಬಗ್ಗೆ ತಿಳಿಸಿಕೊಡಲಾಗಿದ್ದು, ವಿಷಯವು ಸಮಾಜಕಾರ್ಯಕರ್ತರಿಗೆ ಸಂತೋಷವನ್ನುಂಟುಮಾಡುವ ಸಂಗತಿಯಾಗಿದೆ. ಇಂಥವರು ನಮ್ಮ ವೃತ್ತಿಪರರಿಗೆ ಮಾದರಿಯಾಗಬೇಕಾದದ್ದು ಪ್ರಸ್ತುತ ಅಗತ್ಯವಲ್ಲವೇ?
ಶ್ರೀಯುತ ಲಕ್ಷ್ಮಿಪ್ರಸಾದ್, ಎಚ್.ಆರ್.ಎಂ. ಕನ್ಸಲ್ಟೆಂಟ್ ರವರೊಂದಿಗೆ ಚರ್ಚೆಯಲ್ಲಿದ್ದಾಗ ಅವರು ನೀಡಿದ ಸಲಹೆ NIPM ಮತ್ತು KAPSW ಗಳು ವೃತ್ತಿ ಸಲಹಾಕೇಂದ್ರಗಳನ್ನು ತೆರೆದು ಹಿರಿಯ ವೃತ್ತಿಪರರ ಮುಖಾಂತರ ಕಿರಿಯ ವೃತ್ತಿಪರರಿಗೆ ಮಾರ್ಗದರ್ಶನ ನೀಡಬೇಕು ಎಂದರು. ಬಗ್ಗೆ KAPSW,  NIPM, ಸಂಘಟನೆಗಳು ಚಿಂತಿಸಿದರೆ ಸಮಾಜಕಾರ್ಯ ವೃತ್ತಿಪರರಿಗೆ ಅನುಕೂಲ.
            77ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ    ಜಿ. ವೆಂಕಟಸುಬ್ಬಯ್ಯನವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅತ್ಯಂತ ಕಾಳಜಿಯಿಂದ ಮಾತನಾಡಿದರು. ಕನ್ನಡ ಸಾಯುತ್ತದೆ ಎಂಬ ಭಯ ಬೇಡ ನಮ್ಮ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಕಡೆಗೆ ಗಮನಹರಿಸಬೇಕು.
ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕಮಣಿಗಳಾದ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ.
ಭಾರತೀಯ ಪ್ರಜೆಗಳಾದ ನಾವು ಇಂಥ ವರ್ಗದಿಂದ ಬೇರೆಯಾಗಿ
ತಲೆತುಂಬ ಕಲಿಯೋಣ,
ತಲೆ ಎತ್ತಿ ನುಡಿಯೋಣ,
ತಲೆಬಾಗಿ ಬಾಳೋಣ,
ಸಿರಿಗನ್ನಡಂ ಗೆಲ್ಗೆ
            ಇದೇ ಸಂದರ್ಭದಲ್ಲಿ ಪ್ರೊಫೆಸರ್ ಶಂಕರ ಪಾಠಕರ ಮಾತು ನೆನಪಿಗೆ ಬರುತ್ತದೆ.  ಹೆಲೆನ್ ಹ್ಯಾರಿಸ್ ಪರ್ಲ್ಮನ್, ಪ್ರಸಿದ್ಧ ಲೇಖಕಿ, ಪ್ರೊಫೆಸರ್, ಸ್ಕೂಲ್ ಆಫ್ ಸೋಶೀಯಲ್ ಸರ್ವೀಸ್ ಅಡ್ಮಿನಿಸ್ಟ್ರೇಷನ್ ಆಫ್ ಶಿಕಾಗೊ, ಇವರನ್ನು ಭೇಟಿಯಾದಾಗ ವ್ಯಕ್ತಿಗತ ಕಾರ್ಯವನ್ನು ಕಲಿಸುವಾಗ 'Case Records' ಇದ್ದ ಹೊರತು ವ್ಯಕ್ತಿಗತ ಕಾರ್ಯವನ್ನು ಅಮೆರಿಕದಲ್ಲಿ ಕಲಿಸುವುದೇಯಿಲ್ಲ ಎಂದರಂತೆ. ಆಗ ಪಾಠಕ್ರವರು ನಮ್ಮಲ್ಲಿ 'Case Records'  ಅನುಸರಿಸುವ ಪದ್ಧತಿ ತೀರ ವಿರಳ ಎನ್ನುತ್ತಾ 'Case Records' ಇರುವುದು ಕಡಿಮೆ ಎಂದಾಗ ಪರ್ಲ್ಮನ್ರವರು  'Case Records'ಗಳಾಗಿ ನಿಮ್ಮಲ್ಲಿರುವ ಸಾಹಿತ್ಯ ಕೃತಿಗಳನ್ನೇ ಬಳಸಿಕೊಳ್ಳಬಹುದು ಎಂದರಂತೆ.  ಪಾಠಕರ್ರವರು ಸಾಹಿತ್ಯವನ್ನು ಚೆನ್ನಾಗಿ ಓದಿ ಅರಗಿಸಿಕೊಂಡಾಗ ಮಾತ್ರ ಸಮಾಜಕಾರ್ಯ ವೃತ್ತಿಪರರು ಸಮಾಜವನ್ನು ಸರಿಯಾಗಿ ಅರ್ಥೈಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮೇಲಿನ ಸಂಗತಿ  ಸಮಾಜಕಾರ್ಯ ವೃತ್ತಿಪರರು ಸಾಹಿತ್ಯದ ಕಡೆಗೂ ತಮ್ಮ ಒಲವನ್ನು ತೋರಿಸಿ ಸಾಹಿತ್ಯ ಓದಿಕೊಳ್ಳಲೇಬೇಕಾದ ಅಗತ್ಯದ ಮಹತ್ವವನ್ನು ಎತ್ತಿ ತೋರಿಸುತ್ತದೆ
            ನಿರಾತಂಕ ತಂಡದ ವತಿಯಿಂದ ಪ್ರಪ್ರಥಮವಾಗಿ 'ಕರ್ನಾಟಕದ ಸ್ವಯಂಸೇವಾಸಂಸ್ಥೆಗಳ ಕೈಪಿಡಿ' ಮತ್ತು 'ಮಡಿಲಿಗೊಂದು ಮಗು' ಎಂಬ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ. ಆಸಕ್ತರು ನಮ್ಮ ಪುಸ್ತಕಗಳನ್ನು ಕೊಂಡು ಓದಿ ಸಹಕರಿಸಬೇಕಾಗಿ ವಿನಂತಿ. ಹಾಗೆಯೇ ನಿರಾತಂಕ ಬಳಗವು ವೃದ್ಧಾಶ್ರಮದ ಸಹಾಯಾರ್ಥವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ 'ಮೈಸೂರು ಮಲ್ಲಿಗೆ' ನಾಟಕ ಪ್ರದರ್ಶನ ಹಾಗೂ 'ಸಮಾಜಕಾರ್ಯದ ಹೆಜ್ಜೆಗಳು' ಮಾಸಪತ್ರಿಕೆ ಬಿಡುಗಡೆ ಸಮಾರಂಭವನ್ನು ಮಾರ್ಚ್ 20 ಭಾನುವಾರದಂದು ಏರ್ಪಡಿಸಿದೆ. ಸಮಾರಂಭಕ್ಕೆ ಎಲ್ಲಾ ವೃತ್ತಿಪರರಿಗೂ ಹೃದಯ ಪೂರ್ವಕ ಆಹ್ವಾನ. ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ತಮ್ಮ ಸಹಕಾರದ ನಿರೀಕ್ಷೆಯಲ್ಲಿ...

ರಮೇಶ  ಎಂ.ಎಚ್.


No comments:

Post a Comment