Wednesday, September 25, 2013

ಯಾವುದೇ ವೃತ್ತಿ, ಸಂಸ್ಥೆ, ಸಮಾಜ, ಕ್ಷೇತ್ರ ಪರಿಪೂರ್ಣತೆಯನ್ನು ಕಾಣಬೇಕಾದರೆ ಮಾಡಿದ ತಪ್ಪನ್ನು ಮರುಕಳಿಸದೆ ಹಿರಿಯರ ಜ್ಞಾನ ಅನುಭವವನ್ನು ಅತ್ಯಂತ ಅಮೂಲ್ಯ ರೀತಿಯಲ್ಲಿ ದಾಖಲಿಸಿ ಅಂತರ್ಗತ ಮಾಡಿಕೊಳ್ಳಬೇಕು.

ಸಂಪಾದಕೀಯ

On the Subject of conversation, a Chinese proverb states as follows: "a single conversation across the table with a wise man is worth a month's study of books."

            ಯಾವುದೇ ವೃತ್ತಿ, ಸಂಸ್ಥೆ, ಸಮಾಜ, ಕ್ಷೇತ್ರ ಪರಿಪೂರ್ಣತೆಯನ್ನು ಕಾಣಬೇಕಾದರೆ ಮಾಡಿದ ತಪ್ಪನ್ನು ಮರುಕಳಿಸದೆ ಹಿರಿಯರ ಜ್ಞಾನ ಅನುಭವವನ್ನು ಅತ್ಯಂತ ಅಮೂಲ್ಯ ರೀತಿಯಲ್ಲಿ ದಾಖಲಿಸಿ ಅಂತರ್ಗತ ಮಾಡಿಕೊಳ್ಳಬೇಕು. ಆದರೆ ಜ್ಞಾನ ಸಂಗ್ರಹ ಪರಿಣಾಮಕಾರಿ ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ಸಮಾಜಕಾರ್ಯ ವೃತ್ತಿಯಲ್ಲಿ ಆಗದೇ ಇರುವುದು ದುರಂತ. ಕ್ಷೇತ್ರದಲ್ಲಿನ ಕರ್ನಾಟಕದವರೇ ಆದ ಪ್ರೊ. ವಾಸುದೇವಮೂರ್ತಿ, ಎಂ.ಎಸ್.ಗೊರೆ, ಡಾ.ಕೆ.ವಿ.ಶ್ರೀಧರನ್, ಪ್ರೊ. ಶಂಕರ್ ಹೆಚ್. ಪಾಠಕ,  ಡಾ.ಎಚ್.ಎಂ.ಮರುಳಸಿದ್ಧಯ್ಯ ಹಾಗೂ ಇತರೆ ಅತ್ಯಂತ ಪ್ರಮುಖ ಸಮಾಜಕಾರ್ಯದ ಹಿರಿಯ ವೃತ್ತಿಪರರ ಪರಿಚಯವೇ ಇಂದಿನ ಸಮಾಜಕಾರ್ಯರ್ತರಿಗೆ ಇರದಿರುವುದು ಅತ್ಯಂತ ದುರದೃಷ್ಟಕರ, ಹಾಗೆಯೇ  ಕರ್ನಾಟಕದ ಮಟ್ಟಿಗೆ ಸಮಾಜಕಾರ್ಯದ ಇತಿಹಾಸವನ್ನು ಕ್ರಮಾನುಗತವಾಗಿ ದಾಖಲಿಸಿ ಸಮಾಜಕಾರ್ಯ ವೃತ್ತಿಪರರರಿಗೆ ದೊರೆಯುವಂತೆ  ಮಾಡುವುದು ನಮ್ಮೆಲ್ಲಾ ವೃತ್ತಿಪರರ ಜವಾಬ್ದಾರಿ. "knowledge is power" ಎಂಬುದು ನಮ್ಮೆಲ್ಲರಿಗೂ ಗೊತ್ತು ಆದರೆ ನಿಜವಾದ ಜ್ಞಾನ ಸಂಪಾದನೆ ಮತ್ತು ಜ್ಞಾನ ಪ್ರಸಾರಗಳು ಅತ್ಯಂತ ಪ್ರಬಲ ಮತ್ತು ಅಗತ್ಯ ಮಾಧ್ಯಮ. ಹಾಗೂ ಜ್ಞಾನವನ್ನು ಕ್ರಮೇಣವಾಗಿ ಹಿರಿಯ ವೃತ್ತಿಪರರು ಕಿರಿಯ ತಲೆಮಾರಿನವರಿಗೆ ವರ್ಗಾಯಿಸುವ ಜವಾಬ್ದಾರಿ, ಚಿಂತನೆ ನಡೆಸಬೇಕು. ಹಿರಿಯರ ಜ್ಞಾನವನ್ನು, ಅನುಭವವನ್ನು ತಮ್ಮದಾಗಿಸಿಕೊಳ್ಳುವ ವೃತ್ತಿಪರ ಆಸಕ್ತಿ ಮತ್ತು  ಹಂಬಲ ಕಿರಿಯರಲ್ಲಿರಬೇಕಾದದ್ದು ಸದ್ಯದ ಅಗತ್ಯ
            ನಮ್ಮ ನಿರಾತಂಕ ತಂಡದವರ ಕೋರಿಕೆಯ ಮೇರೆಗೆ ಪ್ರೊ. ಶಂಕರ ಪಾಠಕ ಅವರು ನಿರಾತಂಕ ತಂಡಕ್ಕೆ ಮಾರ್ಗದರ್ಶನ ನೀಡಲು ಒಪ್ಪಿಕೊಂಡರು. ನಾಲ್ಕು ಗುರುವಾರ ಸುಮಾರು 3 ತಾಸುಗಳು ಅವರ ಅನುಭವ ವಿಚಾರಗಳನ್ನು ಹಂಚಿಕೊಂಡರು. ಸಮಾಜಕಾರ್ಯ ವಿಶ್ವಕೋಶಗಳನ್ನು ಪರಾಮರ್ಶಿಸಿ ಅಲ್ಲಿನ ಲೇಖನಗಳ ಕೃತಿಚೌರ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತ "ವಿಶ್ವವಿದ್ಯಾಲಯಗಳು ಹಾಗೂ ಸಮಾಜಕಾರ್ಯ ಶಾಲೆಗಳು ಅದೇ ವಿಶ್ವಕೋಶಗಳನ್ನು ಬಳಸುತ್ತಿರುವುದು ಸಮಾಜಕಾರ್ಯ ಕ್ಷೇತ್ರದ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಂಕರ ಪಾಠಕರಂತವರು ಅಥವಾ ಡಾ. ಎಚ್.ಎಂ. ಮರುಳಸಿದ್ಧಯ್ಯ ನಂತವರ ಅನುಭವ, ವಿಚಾರಗಳು ಇಂದಿನ ತಲೆಮಾರಿನ ವೃತ್ತಿಪರರಿಗೆ ಅತ್ಯಮೂಲ್ಯವಾದವುಗಳು.
            ನಿರಾತಂಕ ವೃದ್ಧಾಶ್ರಮದ ಸಹಾಯಾರ್ಥವಾಗಿ ಮಾರ್ಚ್ 20, 2011 ರಂದು ಕೆ.ಎಸ್. ನರಸಿಂಹಸ್ವಾಮಿ ಯವರ ಕವನಗಳನ್ನು ಆಧರಿಸಿದ  'ಮೈಸೂರು ಮಲ್ಲಿಗೆ' ನಾಟಕವನ್ನು 'ರವೀಂದ್ರ ಕಲಾಕ್ಷೇತ್ರ'ದಲ್ಲಿ ಆಯೋಜಿಸಿದ್ದೇವೆ. ಸಕ್ರಿಯವಾಗಿ ಪ್ರೋತ್ಸಾಹಿಸುವಿರೆಂಬ ನಂಬಿಕೆಯ ಆಶಾಭಾವನೆಯಲ್ಲಿದ್ದೇವೆ.
            ನಮ್ಮ ನಿಯತಕಾಲಿಕೆಗೆ ISSN ಸಂಖ್ಯೆ ದೊರಕಿರುವುದು ಅತ್ಯಂತ ಹರ್ಷದಾಯಕ ಸಂಗತಿಯಾಗಿದೆ.
            ನಮ್ಮ ತಂಡ ಹಲವಾರು ಹಿರಿಯ ವೃತ್ತಿಪರಿಗೆ, ಚಂದಾದಾರರಿಗೆ, ಓದುಗರಿಗೆ, ಋಣಿಯಾಗಿದೆ.

ರಮೇಶ  ಎಂ.ಎಚ್.


No comments:

Post a Comment