Thursday, September 26, 2013

ಸರಕಾರಿ ಖಾಸಗಿ ಯೋಜನೆ



ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ (PMEGP)
            "ಕಾಲೇಜು ವ್ಯಾಸಂಗ ಮಾಡಿ ಬೇರೆಯವರ ಬಳಿ ನೌಕರಿ ಮಾಡುತ್ತಾ ಅವರ ಲೆಕ್ಕಪತ್ರಗಳನ್ನು ಬರೆಯುವ ಬದಲು ಸ್ವ -ಉದ್ಯೋಗ ಮಾಡಿ ಸ್ವಂತದ ಲೆಕ್ಕ ಬರೆಯುವುದು ಅರ್ಥಪೂರ್ಣ" ಸಾಲುಗಳು ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿರುವ 'ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ (ರುಡ್ ಸೆಟ್: RUDSET (Rural Development & Self Employment Training Institute) ಸಂಸ್ಥೆಯ ಆಡಳಿತ ಕಛೇರಿಯಲ್ಲಿ ನಾವು ಕಾಣಬಹುದು. ಮೇಲಿನ ಸಾಲುಗಳನ್ನು ನೋಡಿದ ತಕ್ಷಣ ನಾವೇಕೆ ಸ್ವ-ಉದ್ಯೋಗ ಮಾಡಬಾರದು ಎಂದೆನ್ನಿಸುತ್ತದೆ. ಮರುಕ್ಷಣವೇ ಬಂಡವಾಳ ಎಲ್ಲಿಂದ? ಎನ್ನುವ ಪ್ರಶ್ನೆ ನಮ್ಮನ್ನು ಕಾಣುತ್ತದೆ

ಪ್ರಶ್ನೆಗೆ ಉತ್ತರವೆ "ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ"
            ಭಾರತ ಸರ್ಕಾರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಗ್ರಾಮೀಣ ಉದ್ಯೋಗ ಸೃಷ್ಟಿಯೋಜನೆ ಮತ್ತು ಪ್ರಧಾನಮಂತ್ರಿಗಳ ಯೋಜನೆಗಳನ್ನು ಒಂದುಗೂಡಿಸಿ ಹೊಸದಾಗಿ "ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ"ಯಂದು 2008-09ನೇ ಸಾಲಿನಲ್ಲ್ಲಿ ಘೋಷಿಸಿದೆ. ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚು ಕೈಗಾರಿಕೆಗಳನ್ನು, ಸೇವಾ ಚಟುವಟಿಕೆಗಳನ್ನು ಸ್ಥಾಪಿಸಲು ಅವಕಾಶ ನೀಡುವುದು. ಯೋಜನೆಯನ್ನು ಮತ್ತು ಯೋಜನೆಗೆ ಅಗತ್ಯವಿರುವ ಹಣಕಾಸಿನ ಸಹಾಯವನ್ನು ರಾಷ್ಟ್ರೀಕೃತ ಬ್ಯಾಂಕುಗಳು ಸಹಕಾರಿ/ಗ್ರಾಮೀಣ ಬ್ಯಾಂಕುಗಳು/ ಖಾಸಗಿ ಷೆಡ್ಯೂಲ್ ಬ್ಯಾಂಕುಗಳ ಮೂಲಕ ಜಾರಿಗೊಳಿಸಲಾಗುತ್ತಿದೆ
            ಹೇಳುವುದೇನೋ ಸುಲಭ ಆದರೆ ಸಾಲ ಸೌಲಭ್ಯ ಸಿಗುವುದು ಕಷ್ಟ, ಲಂಚಕೊಡಬೇಕು ಎಂಬ ವಿವಿಧ ಪೂರ್ವಪೀಡಿತ ಕಲ್ಪನೆಗಳು ನಮ್ಮನ್ನು ಸುತ್ತುವರಿಯುತ್ತವೆ. ಆದರೆ ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ರೀತಿಯ ತೊಂದರೆಯಿಲ್ಲದೆ ಸಾಲ ಪಡೆಯಬಹುದಾಗಿದೆ

ಯೋಜನೆಗೆ ಅಭ್ಯರ್ಥಿಯ ಅರ್ಹತೆಗಳು:
1.         ವಯಸ್ಸು : ಕನಿಷ್ಠ 18 ವರ್ಷ ಮೇಲ್ಪಟ್ಟವರಾಗಿರಬೇಕು.
2.         ವಿದ್ಯಾರ್ಹತೆ : 8ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಹರು.
3.         ಉತ್ಪಾದನಾವಲಯಕ್ಕೆ 25  ಲಕ್ಷಕ್ಕಿಂತಲೂ ಅಧಿಕಸಾಲ ಪಡೆಯಲು ಅರ್ಹರಾಗಿರುತ್ತಾರೆ.
4.         ಸೇವಾ ವಲಯಕ್ಕೆ 10 ಲಕ್ಷಕ್ಕಿಂತಲೂ ಅಧಿಕ ಸಾಲ ಪಡೆಯಲು ಅರ್ಹರಾಗಿರುತ್ತಾರೆ (ಇದರಲ್ಲಿ ಶೇ. 25 ರಿಂದ ಶೇ. 35 ರವರೆಗೆ ಸಬ್ಸಿಡಿ ಸೌಲಭ್ಯದೊರೆಯುತ್ತದೆ).
5.         ಯೋಜನೆಯಡಿ ವೈಯಕ್ತಿಕ ಕಸುಬುದಾರರು, ಉದ್ಯಮ ಶೀಲರು, ಸ್ವಯಂ ಸೇವಾ ಸಂಸ್ಥೆಗಳು, ಸಹಕಾರ ಸಂಘಗಳು, ಸ್ವ-ಸಹಾಯ ಗುಂಪುಗಳು ಅರ್ಹವಾಗುತ್ತವೆ. ಆದರೆ ಪಾಲುದಾರಿಕೆ/ಖಾಸಗಿ ನಿಯಮಿತ ಕಂಪೆನಿಗಳು/ ಜಂಟಿ ಉದ್ಯಮದಾರರು ಯೋಜನೆಗೆ ಅರ್ಹರಾಗುವುದಿಲ್ಲ.
6.         ಒಂದು ಕುಟುಂಬಕ್ಕೆ, ಒಂದು ಘಟಕಕ್ಕೆ ಮಾತ್ರ ಸಾಲ ಪಡೆಯುವ ಅವಕಾಶವಿರುತ್ತದೆ.
7.         ಬ್ಯಾಂಕಿನಿಂದ ಸಾಲ ಮಂಜೂರು ಮಾಡುವ ಅಥವಾ ಬಿಡುಗಡೆಗೊಳಿಸುವ ಮುನ್ನ ಉದ್ದಿಮೆದಾರರು ಜಿಲ್ಲಾ ಕೈಗಾರಿಕಾ ಸಾಲಕೇಂದ್ರವು ಆಯೋಜಿಸುವ ಎರಡು ವಾರಗಳ ಉದ್ಯಮಶೀಲ ತರಬೇತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಉದ್ದಿಮೆದಾರರು ಈಗಾಗಲೇ ತರಬೇತಿ ಪಡೆದಿದ್ದಲ್ಲಿ ತರಬೇತಿಯ ಅವಶ್ಯಕವಿರುವುದಿಲ್ಲ
8.         ಹೊಸದಾಗಿ ಪ್ರಾರಂಭಿಸುವ ಕೈಗಾರಿಕೆ/ಸೇವಾ ಚಟುವಟಿಕೆಗಳಿಗೆ ಮಾತ್ರ ಯೋಜನೆ ಅನ್ವಯಿಸುವುದು.  
            ಹೀಗೆ ಯೋಜನೆಗೆ ಸಂಬಂಧಿಸಿದ ಎಷ್ಟೋ ಉಪಯುಕ್ತ ಮಾಹಿತಿಗಳು ನಮ್ಮಿಂದ ದೂರವೇ ಉಳಿದಿದ್ದು, ಯೋಜನೆಗೆ ಮೀಸಲಿರಿಸಿದ ಹಣ ಖರ್ಚಾಗದೆ  ಸರ್ಕಾರ ಹಣವನ್ನು ಹಿಂತಿರುಗಿಸಿರುವ ಎಷ್ಟೋ ಉದಾಹರಣೆಗಳಿವೆ. ವಿದ್ಯೆ, ಬುದ್ಧಿ ಇದ್ದೂ ಸಹ ನಮ್ಮ ದೈಹಿಕ, ಬೌದ್ಧಿಕ ಶಕ್ತಿಯನ್ನು ಮತ್ತೊಬ್ಬರ ಅಧೀನದಲ್ಲಿಟ್ಟು ದುಡಿಯುವ ಅನೇಕ ಯುವ ಉದ್ಯಮಶೀಲರಿಗೆ ಯೋಜನೆಯು ಒಂದು ವರದಾನವೇ ಸರಿ. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: (www.kvic.org.in) ಕರ್ನಾಟಕ ಸರ್ಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯನ್ನು ಸಂಪರ್ಕಿಸಬಹುದು. ಮಾರ್ಗದರ್ಶನಕ್ಕಾಗಿ: ನಿರಾತಂಕ, ನಂ. 326, 2ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಸಮೀಪ, ಮಲ್ಲತ್ತಹಳ್ಳಿ, ಬೆಂಗಳೂರು-560056. ಸಂಪರ್ಕಿಸಬಹುದು


No comments:

Post a Comment