Wednesday, March 25, 2015

ಉರಿಯುವ ಮನೆಯಲ್ಲಿ ಗಳ ಇರಿಯುವ ಪ್ರವೃತ್ತಿಯ ಟಿವಿ ನಿರೂಪಕ ಹಾಗೂ ಸಾಮಾಜಿಕ ಕಾರ್ಯಕರ್ತ


ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ರವರು ರವಿ ಪತ್ನಿ ಹಾಗೂ ಮಾವ ಇಬ್ಬರೂ ಸೇರಿ ಸಾಕ್ಷಿ ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೋಲೀಸ್ ಮೆಟ್ಟಿಲೇರುವುದು ಖಂಡನೀಯ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಊಹಿಸಿಕೊಂಡು ಪ್ರಚಾರದ ಗೀಳಿನಿಂದ ಈ ಕೃತ್ಯ ಮಾಡಿರಬಹುದು. ರವಿಯವರ ತಂದೆ, ತಾಯಿ, ಅಣ್ಣ, ಸ್ನೇಹಿತರಿಗೆ ಹಾಗೂ ರವಿಯ ಒಡನಾಟ ಹೊಂದಿದ್ದವರಿಗೆ ಬಾರದ ಸಂಶಯ ಶ್ರೀಮಾನ್ ಅಬ್ರಹಾಂ ರವರಿಗೆ ಬಂದಿರುವುದು ಗಮನಿಸಿದರೆ ಇವರೂ ಸಹ ಈ ಕೃತ್ಯದಲ್ಲಿ ಭಾಗಿಯಾಗಿರಬಹುದೆಂಬ ಅನುಮಾನ ಮೂಡುವಂತಿದೆ. ಸಿಬಿಐ ಗೆ ಹಸ್ತಾಂತರಿಸಿದ ಮೇಲೆ ಈ ರೀತಿ ಶ್ರೀಯುತ ಅಬ್ರಹಾಂ ರವರು ಅನುಮಾನಿಸುತ್ತಿರುವುದನ್ನು ನೋಡಿದರೆ ಇವರು ಸಿಬಿಐ ಗಿಂತ ಬುದ್ಧಿಶಾಲಿಗಳು, ಚಾಣಾಕ್ಷಮತಿಗಳು ಎಂದು ಸಮಾಜಕ್ಕೆ ಸಂದೇಶ ನೀಡುವ ದುರುದ್ದೇಶ ಇವರದ್ದಾಗಿರಬಹುದು. ಶ್ರೀಯುತ ಹನುಮಂತರಾಯಪ್ಪನವರು ಸಮಯ ಚಾನೆಲ್ನಲ್ಲಿ ಸಂದರ್ಶನ ನೀಡುತ್ತಿದ್ದಾಗ ಅಬ್ರಹಾಂ ಗೆ ಈ ರೀತಿ ಅನುಮಾನ ಬಂದಿರುವುದಕ್ಕೆ ದಾಖಲಾತಿಗಳನ್ನು ಕೇಳಿದಾಗ ಉಡಾಫೆಯ ಉತ್ತರ ನೀಡುತ್ತಾರೆ. ಗಂಡನನ್ನು ಕಳೆದುಕೊಂಡ ಹೆಣ್ಣು ಮಗಳ ನೋವು, ಅಳಿಯನನ್ನು ಕಳೆದುಕೊಂಡ ನೋವು ಈ ಮನುಷ್ಯನಿಗೆ ಅರ್ಥವಾಗುವುದಿಲ್ಲ. ಸೌಜನ್ಯಕ್ಕಾದರೂ ಅವರ ಮನಸ್ಸಿಗೆ ಘಾಸಿಯಾಗದಂತೆ ವರ್ತಿಸಬೇಕೆಂಬ ಸಾಮಾನ್ಯ ಪರಿಜ್ಞಾನವೂ ಸಹ ಅಬ್ರಹಾಂ ರವರಿಗೆ ಇರುವುದಿಲ್ಲ. ಇದೇ ಸಂದರ್ಭದಲ್ಲಿ ಸಮಯ ಟಿವಿಯ ನಿರೂಪಕ ರಂಗನಾಥ್ ಭಾರದ್ವಾಜ್ರವರು ಅಬ್ರಹಾಂ ರವರನ್ನು ಟಿವಿ ಚಾನೆಲ್ನಲ್ಲಿ ಕುಳ್ಳಿರಿಸಿಕೊಂಡು ಅಬ್ರಹಾಂ ರವರಿಗೆ ರವಿಯವರ ಬಗ್ಗೆ ಕಾಳಜಿ ಇದೆ ಅದಕ್ಕೋಸ್ಕರ ಅವರು ಹೋರಾಡುತ್ತಿದ್ದಾರೆ ಎಂಬಂತೆ ಬಿಂಬಿಸಿರುವುದು ಖಂಡನೀಯ. ಯಾವುದೇ ದಾಖಲೆಗಳನ್ನು ಹೊಂದಿರದ ಅಬ್ರಹಾಂರವರ ಸಂದರ್ಶನವನ್ನು ಏರ್ಪಡಿಸುವುದು ಸಮಯ ವಾಹಿನಿಗೆ ಎಷ್ಟು ಸಮಂಜಸ. ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುವುದಿಲ್ಲವೇ ? ಯಾರಾದರೂ ಬರಲಿ ಬಿಸಿ ಬಿಸಿ ಸುದ್ದಿ ಬಿತ್ತರಿಸುವ ಧಾವಂತದಲ್ಲಿ ಸಮಯ ಟಿವಿ ಸರಿ ತಪ್ಪುಗಳ ಆಲೋಚನೆ ಮಾಡದೆ ಅಬ್ರಹಾಂ ರೀತಿಯ ಸಾಮಾಜಿಕ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವುದು ಅಪಾಯಕಾರಿ ಬೆಳವಣಿಗೆ.
ಶ್ರೀಯುತ ಹನುಮಂತರಾಯಪ್ಪ ತುಂಬಾ ಸಂಭಾವಿತ ಹಾಗೂ ಸುಸಂಸ್ಕೃತ ವ್ಯಕ್ತಿತ್ವವನ್ನು ತನ್ನ ಜೀವನದಲ್ಲಿ ಕಾಪಾಡಿಕೊಂಡು ಬಂದಿರುತ್ತಾರೆ. ತಮ್ಮ ಅಳಿಯನನ್ನು ಮಗನಿಗಿಂತಲೂ ಹೆಚ್ಚಿನದಾಗಿ ಪ್ರೀತಿಸಿ, ಗೌರವಿಸಿದ ಉದಾಹರಣೆಗಳಿವೆ. ಹನುಮಂತರಾಯಪ್ಪನವರು ನನ್ನ ತಾಯಿಯ ತಮ್ಮನಾದ್ದರಿಂದ ಚಿಕ್ಕಂದಿನಿಂದಲೂ ಅವರನ್ನು, ಅವರ ವ್ಯಕ್ತಿತ್ವವನ್ನು ನಾನು ಬಲ್ಲವನಾಗಿದ್ದೇನೆ. ಅದೇ ರೀತಿ ಶ್ರೀಯುತ ರವಿ ಅವರನ್ನು ಅಳಿಯನನ್ನಾಗಿ ಹೇಗೆ ನೋಡಿಕೊಂಡಿದ್ದರು ಎಂಬ ಅರಿವು ಅವರ ಆಪ್ತ ಕುಟುಂಬದಲ್ಲಿರುವ ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಅದೇ ರೀತಿ ರವಿಯವರೂ ಸಹ ಹನುಮಂತರಾಯಪ್ಪನವರ ಜೊತೆ ತಮ್ಮ ಜೀವನದ ಕೊನೆಯ ದಿನದವರೆಗೂ ಆಪ್ತವಾಗಿ ಇದ್ದುದನ್ನು ನಾವು ಕಂಡಿದ್ದೇವೆ.
ಉರಿಯುವ ಮನೆಯಲ್ಲಿ ಗಳ ಇರಿಯುವ ಪ್ರವೃತ್ತಿಯ ಟಿವಿ ನಿರೂಪಕ ಹಾಗೂ ಸಾಮಾಜಿಕ ಕಾರ್ಯಕರ್ತರು ಜನರ ನಂಬಿಕೆಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು.
ರಮೇಶ ಎಂ.ಎಚ್.
ನಿರಾತಂಕ