Wednesday, September 25, 2013

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|

ಸಂಪಾದಕೀಯ


ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|
ಹೊಸ ಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ|
ಜಸವು ಜನ ಜೀವನಕೆ-ಮಂಕುತಿಮ್ಮ||

            ಮೇಲಿನ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗದ ತಿಳಿಯ ಸಾರ ಹೊಸ ವರುಷದ ಹೊಸ್ತಿಲಲ್ಲಿರುವ ನಮ್ಮೆಲ್ಲರಿಗೂ ನೈತಿಕತೆಯ ಕಡೆಗೆ ಮುನ್ನಡೆಸುತ್ತದೆ. ಇದನ್ನು ಮೈಗೂಡಿಸಿಕೊಂಡರೆ ಪ್ರತಿದಿನವು ಹೊಸ ವರ್ಷವಾಗಿರುತ್ತದೆ. ನೈತಿಕತೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿ ಪ್ರಗತಿಯ ಕಡೆ ಮುಖ ಮಾಡೋಣ.      
            ಜಾಗತಿಕ ಜನಸಂಖ್ಯೆ 7 ಬಿಲಿಯನ್ಗೆ ತಲುಪಿದೆ. ಭಾರತದಲ್ಲಿ ಬಡವ ಶ್ರೀಮಂತರ -ನಡುವಿನ ಅಂತರ ಹಿರಿದಾಗುತ್ತಲೇ ಇದೆ. ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರಿಗೆ ಅಗ್ರಸ್ಥಾನವಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ  2ನೆಯ ಜಾಗತಿಕ ದೇಶ ಎಂದು ಹೆಮ್ಮೆಯೆನಿಸುತ್ತಿರುವಾಗಲೇ, ಭಾರತವು ಜಾಗತಿಕವಾಗಿ 40 ಕೋಟಿ ಬಡವರನ್ನು ಹೊಂದಿರುವ ದೇಶ ಎಂಬ ಕುಖ್ಯಾತಿಯನ್ನು ಹೊಂದಿದೆ. ರೀತಿಯದಾದ ಅಂಕೆಸಂಖ್ಯೆ ಭಾರತವು ಬಹಳಷ್ಟು ಸಾಧಿಸಬೇಕಾಗಿದೆ ಎಂದು ಅನಿಸುವಂತೆ ಮಾಡುತ್ತದೆ. ಬದಲಾವಣೆ ತರುವವರು ಯಾರು? ಎಂದಾಗ ನಾವೆಲ್ಲಾ ಬೇರೆಯವರಿಂದ ಬದಲಾವಣೆ ಬಯಸುತ್ತೇವೆ.
            ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಭಿಕ್ಷಾಟನೆಯ ದಂಧೆಯಲ್ಲಿ 300 ಮಕ್ಕಳು ಹಾಗೂ 3 ಹಸುಳೆಗಳನ್ನು ರಕ್ಷಿಸಲಾಗಿದೆ. ಇಡೀ ದೇಶದಾದ್ಯಂತವೂ ಜಾಲ ವ್ಯಾಪಿಸಿದೆ ದಂಧೆ ಅತ್ಯಂತ ಶಕ್ತಿಯುತ ಹಾಗೂ ವಿಶಾಲವಾಗಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ದಂಧೆಯನ್ನು ಮಟ್ಟ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ನಾಗರಿಕರು, ಜನಸಾಮಾನ್ಯರು ಭಿಕ್ಷಾಟನೆಗೆ ಪ್ರೋತ್ಸಾಹ ನೀಡಕೂಡದು. ನಮ್ಮ ಮಾನವ ಸಂಪನ್ಮೂಲ ನಿರ್ವಹಣೆಯ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಪರಿಣತರಾಗಿರುವ ಖಾಸಗಿ ಮತ್ತು ಸಾರ್ವಜನಿಕ ರಂಗದಲ್ಲಿ ಬುದ್ಧಿವಂತರೆನಿಸಕೊಂಡ ವ್ಯಕ್ತಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿ.ಎಸ್.ಆರ್)ಯನ್ನು ಅರ್ಥಪೂರ್ಣವಾಗಿ ಜಾರಿಗೆ ತರಬೇಕಾಗಿದೆ.
            ಅನಿವಾರ್ಯವಾಗಿ ನಮ್ಮ ರಾಜಕೀಯದ ದೊಂಬರಾಟಗಳನ್ನು ನಾವು ಗಮನಿಸುವುದಾದರೆ ನಾವು ಮೂರ್ಖರ ಆಳ್ವಿಕೆಯಲ್ಲಿ ಬದುಕುತ್ತಿರುವ ಬುದ್ಧಿಜೀವಿಗಳಲ್ಲದಿದ್ದರೂ ಸಾಮಾನ್ಯರಾಗಿದ್ದೇವೆ. ಜನಸಾಮಾನ್ಯರು ಮೌನವಾಗಿರುವುದು ತಪ್ಪಲ್ಲ. ಕೆಲವೊಮ್ಮೆ ದೇಶ, ನಾಡುನುಡಿಯ ಬಗ್ಗೆ ಮುಂದಿನ ಜನಾಂಗದ ಕುರಿತು ಬುದ್ದಿಜೀವಿಗಳೇ ಮೌನ ಮುರಿಯದಿದ್ದಾಗ ಸಾಮಾನ್ಯ ಪ್ರಜೆಗಳನ್ನು ದೂಷಿಸುವುದು ಸರಿಯಲ್ಲ. ವಾಸ್ತವವಾಗಿ ವೈರುಧ್ಯಗಳು ಹಾಗೂ ದ್ವಂದ್ವಗಳ ನಡುವೆ ನಾವಿದ್ದೇವೆ. ಸಣ್ಣಸಣ್ಣ ವಿಷಯಗಳಲ್ಲೂ ನಾವು ಅಪ್ರಾಮಾಣಿಕರಾಗಿದ್ದೇವೆ! ಕೆಲಸಕ್ಕೆ ಸೇರಿದ ಪ್ರಥಮ ದಿನವೇ ಸಂಸ್ಥೆಗಳ Letter Head ಪಡೆದು ನಮ್ಮ ಮುಂದಿನ Experience Certificate ಗೆ ಬೇಕಾಗುತ್ತದೆ ಎಂದು ಮುಂದಾಲೋಚನೆ ಮಾಡುತ್ತೇವೆ. ಕೆಲವೊಮ್ಮೆ Seminar ಹಾಗೂ Workshop ಗಳಲ್ಲಿ Paper presentation  ಮಾಡದೆ ನಮ್ಮ ಮುಂದಿನ ಭವಿಷ್ಯಕ್ಕಾಗಿ Certificate ಗೆ ಮುಗಿ ಬೀಳುತ್ತೇವೆ. ಹೇಗಾದರಾಗಲಿ, ಯಾವುದಾದರಾಗಲಿ ಅಂತೂ ಇಂತೂ ಒಂದು Ph.d ಪದವಿ ದೊರೆಕಿಸಿಕೊಂಡರೆ ನಮಗೆ ಯೋಗ್ಯತೆ ಇಲ್ಲದಿದ್ದರೂ  Ph.d ಪದವಿ ಪಡೆದುಬಿಡುತ್ತೇವೆ. ಎಂಥ ಆಪ್ತಮಿತ್ರನೇ ಇರಲಿ ಪ್ರಾಣಕ್ಕೆ ಪ್ರಾಣ ಕೊಡುವಷ್ಟು ಪ್ರಾಮಾಣಿಕ ಎಂದರೂ ಎಲ್ಲೋ ಮನಸ್ಸಿನ ಮೂಲೆಯಲ್ಲಿ ಎಲ್ಲಾ ವಿಷಯಗಳನ್ನು ನಾವು ಹಂಚಿಕೊಳ್ಳಲು ಹಿಂಜರಿಯುತ್ತೇವೆ. ನಮ್ಮ ಭವಿಷ್ಯಕ್ಕೆ ಭದ್ರ ಭುನಾದಿ ಹಾಕಿದವರ ಮುಖಗಳು ನೆನಪಿಸಿಕೊಳ್ಳಲಾರದಷ್ಟೂ ಅಪ್ರಾಮಾಣಿಕರಾಗಿದ್ದೇವೆ.
            ಕೇಂದ್ರ ಸರ್ಕಾರ ಸಾಮಾನ್ಯ ಜನರ ಜೀವನ ಮಟ್ಟವನ್ನು ಸುಧಾರಿಸಲು ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಇದರ ಅನುಷ್ಠಾನ ಕಷ್ಟಸಾಧ್ಯ.  ಇರುವ ಪಡಿತರ ವ್ಯವಸ್ಥೆಯ ಅವ್ಯವಹಾರಗಳನ್ನು ಸುಧಾರಿಸಿದ್ದೇ ಆದರೆ ಆಹಾರ ಭದ್ರತೆಯ ಕಾಯ್ದೆ ಅಗತ್ಯವೇನೂ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಪಡಿತರ ವ್ಯವಸ್ಥೆಯ ಅವ್ಯವಹಾರಗಳಿಗೆ ಸೂಕ್ತವಾದ ಕಾನೂನು ಕ್ರಮ ಅಗತ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳೇ ಅವ್ಯವಹಾರದಲ್ಲಿ ಪಾಲುದಾರರಾಗಿರುವುದು ದುರಾದೃಷ್ಟಕರ. ಬಿಹಾರದಲ್ಲಿ ಜಾರಿಗೆ ಬಂದಿರುವ ಭ್ರಷ್ಟಾಚಾರ ನಿಯಂತ್ರಣ ಕ್ರಮಗಳು (ಭ್ರಷ್ಟ ಅಧಿಕಾರಿಗಳ ಆಸ್ತಿ ಮುಟ್ಟುಗೋಲು) ಎಲ್ಲ ರಾಜ್ಯಗಳಲ್ಲೂ ಜಾರಿಗೆ ಬಂದರೆ ಒಳಿತು.
            ಇತ್ತಿಚೆಗೆ ಗಂಗಾವತಿಯಲ್ಲಿ ನಡೆದ 78ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬಹಳ ಅದ್ಧೂರಿಯಾಗಿ ಆರಂಭಗೊಂಡು ನಿರಾಶದಾಯಕವಾಗಿ ಅಂತ್ಯಗೊಂಡಿದ್ದು ಶೋಚನಿಯ. ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ ಸಿ.ಪಿ. ಕೃಷ್ಣಕುಮಾರ್ಅವರ ಅಧ್ಯಕ್ಷೀಯ ಭಾಷಣವು ಕನ್ನಡಿಗರ ಸ್ಥಿತಿಗತಿಗಳ ಬಗ್ಗೆ ಹಿಡಿದ ಕೈಗನ್ನಡಿಯಾಗಿದ್ದು, ಕನ್ನಡ ಮಾಧ್ಯಮವು ಶಿಕ್ಷಣ ಮಾಧ್ಯಮವಾಗಿ ಬೆಳೆದು ಮೂಲಕ ಬದುಕು ಕಟ್ಟಿಕೊಳ್ಳುವ ಶಕ್ತಿಯಾಗಿ ಬೆಳೆಯಲು ಪ್ರೋತ್ಸಾಹಿಸಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ತುಂಬ ಆವಶ್ಯಕ ಎಂದು ಹೇಳಿರುವುದು ನಮ್ಮ ದುರ್ಬಲ ರಾಜಕೀಯ ವ್ಯವಸ್ಥೆಗೆ ಸಾಕ್ಷಿಯಾಗಿದೆ.  ಹಾಗೆಯೇ ಉನ್ನತ ಶಿಕ್ಷಣ ಮಾಧ್ಯಮವೂ ಕನ್ನಡದಲ್ಲಿಯೇ ಇರಬೇಕು. ಆಗ ಮಾತ್ರ ಕನ್ನಡಕ್ಕೆ ಒಂದು ನೆಲೆ. ಉಳ್ಳವರ ಅನುಕೂಲಕ್ಕಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ತಲೆ ಎತ್ತುತ್ತಿರುವುದು ವಿಪರ್ಯಾಸ ಎಂದಿರುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.
            ಇತ್ತೀಚೆಗೆ ಕರ್ನಾಟಕದ ಬಿಹಾರ ಎಂದು ಕುಖ್ಯಾತಿಯಾದ ರಾಯಚೂರು ಜಿಲ್ಲೆ ಹಾಗೂ ಇತರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪೌಷ್ಟಿಕ ಆಹಾರ ಕೊರತೆಯಿಂದ ನೂರಾರು ಮಕ್ಕಳು ಸಾವನ್ನಪ್ಪಿರುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಂದು ಸವಾಲಾಗಿದೆ. ಹಲವಾರು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಸಂಸ್ಥೆಗಳು, ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದರೂ ಪರಿಸ್ಥಿತಿಯ ಸುಧಾರಣೆಗೆ ಕ್ರಮಗಳೇನು ಎಂಬುದು ಸಂಶಯಾಸ್ಪದವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಸಮೂಹ ಮಾಧ್ಯಮಗಳಲ್ಲಿ ಇದರ ಚರ್ಚೆಯಾಗುತ್ತಿದ್ದರೂ ಪರಿಪೂರ್ಣವಾದ ಪರಿಹಾರೋಪಾಯ ಕಂಡುಬಂದಿಲ್ಲ. ಇದಕ್ಕೆ ನಮ್ಮೆಲ್ಲರ ಜವಾಬ್ದಾರಿ ರಹಿತ ಚಿಂತನೆಗಳೂ ಕಾರಣವಾಗಿವೆ.
            ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ 2011 ಪ್ರಕಾರ ಭಾರತದಲ್ಲಿ ಏಡ್ಸ್ ಕಾಯಿಲೆಯು ನಿಯಂತ್ರಣದಲ್ಲಿದ್ದು ಅದರ ಬೆಳವಣಿಗೆ ಕಳೆದ ವರ್ಷಕ್ಕಿಂತ ಇಳಿಮುಖವಾಗುತ್ತಿದೆ. (ಭಾರತವು ವಿಶ್ವದಲ್ಲಿಯೇ ಏಡ್ಸ್ ರೋಗಿಗಳಿರುವ ಎರಡನೆಯ ರಾಷ್ಟ್ರ). ಕಾಯಿಲೆಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿಯ ಕೊರತೆಯಿದ್ದು, ಅವರಿಗೆ ಅರಿವು ಮೂಡಿಸುವುದು ನಮ್ಮ ಮುಂದಿರುವ ಸವಾಲು.

ರಮೇಶ  ಎಂ.ಎಚ್.


No comments:

Post a Comment