Wednesday, September 25, 2013

ಸಂಪಾದಕೀಯ

ಸಂಪಾದಕೀಯ

ಆಸ್ಪತ್ರೆಗಳು, ಡಾಕ್ಟರುಗಳು, ಪೊಲೀಸ್ ಠಾಣೆಗಳು, ನ್ಯಾಯಾಲಯಗಳು, ವಕೀಲರು ಹಾಗೆಯೇ ಎಂ.ಎಸ್.ಡಬ್ಲ್ಯೂ ಪದವೀಧರರ ಸಂಖ್ಯೆ ಹೆಚ್ಚುವುದು ಉತ್ತಮ ಬೆಳವಣಿಗೆಯ ಲಕ್ಷಣವಲ್ಲ. ಆಸ್ಪತ್ರೆಗಳು ಹೆಚ್ಚಿದರೆ ನಾವು ಹೆಚ್ಚು ಹೆಚ್ಚು ಖಾಯಿಲೆ ಬೀಳುತ್ತಿದ್ದೇವೆ ಎಂಬುದೇ ಇದರ ಅರ್ಥ. ಇತ್ತೀಚಿನ ದಿನಗಳಲ್ಲಿ ಎಂ.ಎಸ್.ಡಬ್ಲ್ಯೂ. ಕಾಲೇಜುಗಳು, ಎಂ.ಎಸ್.ಡಬ್ಲ್ಯೂ.ಗೆ ಸೇರಬಯಸುವವರ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಗುಣಮಟ್ಟ ಕಳಪೆಯಾಗುತ್ತಲಿ ಇದು ನಮ್ಮೆಲ್ಲರಿಗೂ ತಿಳಿದಿರುವ ನಗ್ನಸತ್ಯ.
            ಏಪ್ರಿಲ್ 2011 ಭಾರತಕ್ಕೆ ಒಂದು ಐತಿಹಾಸಿಕ ಪರ್ವದ ವರ್ಷ. ಮನ್ವಂತರ ಎಂದರೂ ಸಂದೀತು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಉಪವಾಸ ಸತ್ಯಾಗ್ರಹದ ಮೂಲಕ ಅಣ್ಣಾ ಹಜಾರೆಯವರು ಗಾಂಧೀ-ಜೆಪಿ ಯುಗವನ್ನು ಮತ್ತೆ ಸಂಚಲನಗೊಳಿಸಿ, ಸಮಾಜಕಾರ್ಯಕ್ಕೆ ತೀವ್ರಗಾಮಿತ್ವವನ್ನು ತಂದು ಕೊಟ್ಟರು. ಅವರ ಸಾತ್ತ್ವಿಕ ಹೋರಾಟಕ್ಕೆ ಇಡೀ ರಾಷ್ಟ್ರವೇ, ಮುಖ್ಯವಾಗಿ ಯುವರಾಷ್ಟ್ರಕರು, ಒಂದಾಗಿ ಧ್ವನಿಗೂಡಿಸಿತು. ಪ್ರತಿಭಟನೆಯ ಮಹಾಪೂರದಲ್ಲಿ ಭಾಷೆಯ, ಜಾತಿಯ, ಧರ್ಮದ, ಪಕ್ಷದ, ವೃತ್ತಿಯ ಗಡಿಗಳೆಲ್ಲಾ ಮುಳುಗಿಹೋದವು. ಇದು ಆರಂಭದ, ಮುನ್ನುಡಿಯ ಕ್ರಿಯೆ ಮಾತ್ರ ಎಂಬುದನ್ನು ಅಣ್ಣ ಹೇಳುವುದನ್ನು ಮರೆಯಲಿಲ್ಲ. ಆಳವಾಗಿ ಬೇರು ಬಿಟ್ಟಿರುವ, ಅಪ್ರಜ್ಞಾಸ್ಥಿತಿಗೂ ತಲುಪಿರುವ ಭ್ರಷ್ಟಾಚಾರವನ್ನು ತೊಲಗಿಸಬೇಕಾದರೆ ಜಾಗ್ರತೆ, ನಿರಂತರ ಹೋರಾಟ ಅತ್ಯಗತ್ಯ. ಆದರೆ, ಅಣ್ಣ ಸತ್ಯಾಗ್ರಹಕ್ಕೆ ತರಬೇತಿ ಪಡೆದ ಸಮಾಜಕಾರ್ಯಕರ್ತರು ವ್ಯಾಪಕವಾಗಿ ಸ್ಪಂದಿಸಲಿಲ್ಲ ಎಂಬ ನೋವು ನಮ್ಮದು. ಇದನ್ನು ನಾವೆಲ್ಲಾ ಗಮನಿಸಿ, ಆಂದೋಲನಕ್ಕೆ ಮುಂದಾಗಬೇಕಾಗಿದೆ
            *ಸಮಾಜಕಾರ್ಯಕ್ಕೆ; ಅದರಲ್ಲೂ ಪ್ರಾಚ್ಯ ಸಮಾಜದಲ್ಲಿ ಆಚರಣೆಯಲ್ಲಿರುವ ವೃತ್ತಿಗೆ, ಅತ್ಯಂತ ಸೂಕ್ತವಾದ ತತ್ತ್ವಾದರ್ಶ-ಸಿದ್ಧಾಂತ ಯಾವುದು ಎಂಬುದರ ಬಗ್ಗೆ, ಪ್ರಶಿಕ್ಷಕ-ಪ್ರಶಿಕ್ಷಣಾರ್ಥಿಗಳ ಮತ್ತು ಕಾರ್ಯಕರ್ತ-ಅರ್ಥಿಗಳ ನಡುವೆ ಯಾವೆಂಥ ಸಂಬಂಧಗಳಿರಬೇಕು ಎಂಬುದರ ಬಗ್ಗೆ ಆಳವಾದ ಚರ್ಚೆ ಅಗತ್ಯವಾಗಿದೆ. ವಿಚಾರಗಳನ್ನು ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರು ಕುವೆಂಪು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗವು ಇದೇ ಫೆಬ್ರುವರಿಯಲ್ಲಿ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ತಮ್ಮ ಪ್ರಧಾನ ಭಾಷಣದಲ್ಲಿ ಭಕ್ತಿಯೋಗ-ಸರ್ವೋದಯ ಹಾಗೂ ಪರಂಪರೆಯ ಗುರು-ಶಿಷ್ಯ ಸಂಬಂಧಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. (ಅವರ ಭಾಷಣವನ್ನು ಹಿಂದಿನ ಸಂಚಿಕೆಯಲ್ಲಿ-IV-4- ಪ್ರಕಟಿಸಲಾಗಿದೆ). ವಿಚಾರಗಳಿಗೆ ಹಿರಿಯರಾದ ಶ್ರೀ ಎಸ್..ಶ್ರೀನಿವಾಸಮೂರ್ತಿ ಮತ್ತು ಡಾ.ಕೆ.ವಿ.ರಾಮ್ ತಮ್ಮ ಪ್ರತಿಕ್ರಿಯೆಗಳನ್ನು ನಮಗೆ ಕಳಿಸಿಕೊಟ್ಟಿದ್ದಾರೆ. ವಿಚಾರವನ್ನು ಚರ್ಚಿಸಬೇಕೆಂದು ಸಂಚಿಕೆಯಲ್ಲಿ ಒಂದು ಅಂಕಣವನ್ನು ಆರಂಭಿಸಲಾಗಿದೆ. ಓದುಗ-ಚಿಂತಕರು ತಮ್ಮ ಪ್ರತಿಕ್ರಿಯೆಗಳನ್ನು ಕಳಿಸಿಕೊಡಬೇಕೆಂದು ವಿನಂತಿ.
            ಇತ್ತೀಚೆಗೆ ಆಯ್ಕೆಯಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸುಮಾರು 500 ಜನ ಸಾಮೂಹಿಕ ರಾಜೀನಾಮೆ ನೀಡಿ ಹೊರಬರುತ್ತಿರುವುದು ಸೂಕ್ತವಾದ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡದೆ ಕೇವಲ ಪದವಿಯನ್ನು ಮಾನದಂಡವಾಗಿ ಮಾಡಿ ಸರ್ಕಾರದ ಅಧಿಕಾರಿಗಳು ನೇಮಕಾತಿ ಮಾಡಿದ್ದರೆ ಪರಿಣಾಮ. ಅವ್ಯವಸ್ಥೆಗೆ ಕಾರಣ. ಸಾಮಾಜಿಕ ಸಮಸ್ಯೆಗಳ ಅರಿವಿದ್ದು ಸಮಾಜಕಾರ್ಯದ ಹಿನ್ನೆಲೆಯುಳ್ಳವರನ್ನು ಆಯ್ಕೆ ಮಾಡಿದ್ದರೆ ಅವ್ಯವಸ್ಥೆ ತಪ್ಪುತ್ತಿತ್ತು. ಇನ್ನಾದರೂ ಸರ್ಕಾರ ಸಮಾಜಕಾರ್ಯದ ಪದವೀಧರರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾಗಿ ಆಯ್ಕೆ ಮಾಡಬೇಕು, ಮಾಡದಿದ್ದರೆ ಸಮಾಜಕಾರ್ಯ ವೃತ್ತಿಪರರು ಸಂಘಟಿತರಾಗಿ ಆಯ್ಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು
            2011 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವು ವಿಶ್ವಕಪ್ ಜಯಿಸಿದ್ದು ಸಂತಸ ನೀಡಿದೆ. ಆದರೆ ಕ್ರಿಕೆಟನ್ನು ಮಾತ್ರ ವೈಭವೀಕರಿಸಿ ಉಳಿದ ಕ್ರೀಡೆಗಳನ್ನು ಅಲಕ್ಷಿಸುತ್ತಿರುವುದು ತಾರತಮ್ಯದ ಸಂಕೇತವಲ್ಲವೇ? ಕ್ರಿಕೆಟ್ಗೆ ತೋರಿದ ದೇಶಾಭಿಮಾನ, ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕುವ ಚಳುವಳಿಗಳಲ್ಲಿ ಏಕೆ ಕಾಣಸಿಗುವುದಿಲ್ಲ? ಕರ್ನಾಟಕ ಸರ್ಕಾರ ಹಿಂದೆ ಬೇರೆಯ ಕ್ರೀಡಾಪಟುಗಳಿಗೆ ನೀಡಿರುವ ಭರವಸೆಗಳನ್ನೇ ಈಡೇರಿಸದೇ ಹೊಸ ಭರವಸೆಗಳನ್ನು ಕ್ರಿಕೆಟ್ ಆಟಗಾರರಿಗೆ ನೀಡಿರುವುದು ಸರಿಯಾದ ಕ್ರಮವಲ್ಲ
            ರವೀಂದ್ರ ಕಲಾಕ್ಷೇತ್ರದಲ್ಲಿ ನಮ್ಮ 'ಸಮಾಜಕಾರ್ಯದ ಹೆಜ್ಜೆಗಳು' ಮಾಸಪತ್ರಿಕೆ ಹಾಗೂ 'ಮಡಿಲಿಗೊಂದು ಮಗು' ಪುಸ್ತಕ ಬಿಡುಗಡೆ ಸಮಾರಂಭ ಹಾಗೂ 'ಮೈಸೂರು ಮಲ್ಲಿಗೆ' ನಾಟಕ ಪ್ರದರ್ಶನಕ್ಕೆ ಓದುಗರು ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕರಿಸಿದಕ್ಕಾಗಿ ನಿರಾತಂಕ ತಂಡ ಋಣಿಯಾಗಿದೆ.

ರಮೇಶ  ಎಂ.ಎಚ್.


No comments:

Post a Comment