Wednesday, September 25, 2013

ಜಾಣ ಮೌನ-ನಮ್ಮ ಮೌನ


ಕಟ್ಟಡ ಕಾರ್ಮಿಕರುಗಳು ಸಂಘಟಿತರಾಗುತ್ತಿದ್ದಾರೆ, ವೈದ್ಯಕೀಯ ವೃತ್ತಿಪರರು ಸಂಘಟಿತರಾಗಿ ಅಖಂಡ ಭಾರತದಾದ್ಯಂತ ಗುರುತಿಸಿಕೊಂಡು ತಮಗಾಗುವ ಅನಾನುಕೂಲಗಳ ಬಗ್ಗೆ ಹೋರಾಡುತ್ತಾರೆ. ಒಬ್ಬ ನ್ಯಾಯವಾದಿಗೆ ಅನ್ಯಾಯವಾದರೆ ನ್ಯಾಯಾಧೀಶರ ಸಮೂಹವೇ ತಮ್ಮ ಸಂಘಟನೆಯ ಮುಖಾಂತರ ಬೀದಿಗಿಳಿದು ಪ್ರತಿಭಟಿಸುತ್ತಾರೆ. ಅಲ್ಲದೇ ಹಳ್ಳಿಗಾಡಿನ ನಿರಕ್ಷರ ಕುಕ್ಷಿ ಸಮುದಾಯಗಳಲ್ಲಿ ಹುಟ್ಟಿ ಬೆಳೆದಂತಹ ಅನೇಕ ಹಳ್ಳಿಗಾಡಿನ ಸ್ತ್ರೀ ಸಮೂಹಗಳು ಒಟ್ಟುಗೂಡಿ ಸ್ತ್ರೀಶಕ್ತಿಗಳಾಗಿ ರೂಪುಗೊಂಡಿವೆ ಹಾಗೂ ದೇಶದ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ವ್ಯವಸ್ಥೆ ಹೀಗಿರುವಾಗ ನಮ್ಮ ಸಮಾಜಕಾರ್ಯ ವೃತ್ತಿ ಸಂಘಟಿತರಾಗಿಲ್ಲವೇಕೆ? ಎಲ್ಲ ಇತರೆ ವೃತ್ತಿಪರರು ಸಂಘಟಿತರಾಗಿರುವಾಗ ಸಮಾಜಕಾರ್ಯ ವೃತ್ತಿಪರರಿಗೇಕೆ ಅದು ಅಸಾಧ್ಯ ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಸಾವಿರಾರು -ಮೇಲ್ ಕಳುಹಿಸಿದರೆ ಮರುದಿನ ಯಾರೊಬ್ಬರೂ ಪ್ರತಿಕ್ರಿಯಿಸದ್ದನ್ನು ನೋಡಿ ಖೇದವಾಯಿತು. ರೀತಿಯ ಜಾಣ ಮೌನ ತೋರುವ ನಮ್ಮ ವೃತ್ತಿಪರರ ಬಗ್ಗೆ ಇದ್ದ ಗೌರವ, ಅಭಿಮಾನ, ಕರಗಿಹೋಯಿತು. ಕೇವಲ ಸಂದರ್ಭದಲ್ಲಲ್ಲ ಹಲವು ಬಾರಿ ನಿರುತ್ತರ ನೀಡುತ್ತ ಒಳಗೊಳಗೆ ನಗುತ್ತ ಕೂರುವ ಜ್ಞಾನಿಗಳ ಸಂಖ್ಯೆ ಹೆಚ್ಚಾಗುತ್ತಲಿದೆ. ಉದಾಹರಣೆಗೆ ಹೇಳುವುದಾದರೆ, ನಿಮ್ಮ ಅನುಭವಗಳನ್ನೇ ಬರೆದು ಕಳುಹಿಸಿ. ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ ಎಂದರೆ, ಬರೆಯದ ಜಾಣರಿದ್ದಾರೆ. 10ವರ್ಷ ವೃತ್ತಿಯಲ್ಲಿ ಪ್ರಾವಿಣ್ಯತೆ ಪಡೆದವರು ಒಂದು ಪುಟ ಬರೆಯಲು ನಿರ್ಲಕ್ಷ್ಯ ತೋರುತ್ತಾರೆಂದರೆ ಏನೆನ್ನಬೇಕು.
            ಸಮಾಜಕಾರ್ಯದಲ್ಲಿ ಸಾಹಿತ್ಯದ ಕೊರತೆಯಿದೆ ಎಂದು ಎಲ್ಲರಿಗೂ ಗೊತ್ತು. ಸಭೆ ಸಮಾರಂಭಗಳಲ್ಲಿ ಬೊಬ್ಬೆ ಹಾಕುತ್ತಾರೆ. ಸಾಹಿತ್ಯ ಸೃಷ್ಠಿಗೆ ಯಾರೂ ಮುಂದಾಗುವುದಿಲ್ಲ. ನಿರಾತಂಕದ ಸಮಾಜಕಾರ್ಯದ ಹೆಜ್ಜೆಗಳು ಮಾಸಿಕದ ಹಿಂದೆ ಸಾಕಷ್ಟು ಶ್ರಮವಿದೆ. ಹಲವು ಸಮಾಜಕಾರ್ಯದ ದಿಗ್ಗಜರುಗಳು ಬೆನ್ನುತಟ್ಟಿದ್ದಾರೆ. ಆದರೆ, ಬೆಂಗಳೂರು ನಗರದ ಒಂದೇ ಒಂದು ಸಮಾಜಕಾರ್ಯ ಶಾಲೆಯವರಿಂದ ಪ್ರೋತ್ಸಾಹದ ಮಾತು ಬಂದಿಲ್ಲ. ಪತ್ರಿಕೆಗೆ ಚಂದಾದಾರರಾಗಿಲ್ಲ. ಆದರೆ, ಕರ್ನಾಟಕದಾದ್ಯಂತ ಹೆಚ್ಚಿನ ಚಂದಾದಾರರಾಗಿ ಬೇಡಿಕೆ ಬರುತ್ತಿದೆ. ಇದಲ್ಲದೆ ಇತರೆ ರಾಜ್ಯಗಳಿಂದ ನಮ್ಮ ಪತ್ರಿಕೆಗೆ ಚಂದಾದಾರರಾಗಿರುವವರು ಇದ್ದಾರೆ. ಇದಲ್ಲವೆ ವ್ಯಂಗ್ಯ.
·         ಸಮಾಜಕಾರ್ಯ ಎಂದು Face Book / Twitter ನಲ್ಲಿ ಹುಡುಕಿದರೆ ಕೆಲವೇ ಕೆಲವು ಮಂದಿ ನಿಮಗೆ ಸಿಗಬಹುದು. ಆದರೆ Google ನಲ್ಲಿ Social Work ಎಂದು ಹುಡುಕಿದರೆ ನಿಮಗೆ ಇಂಟರ್ನೆಟ್ನಲ್ಲಿ ಮಾಹಿತಿ ಇಲ್ಲವೆನ್ನಬಹುದು. ಇಂಟರ್ನೆಟ್ನಲ್ಲಿ ಎಲ್ಲವೂ ಸಿಗುತ್ತದೆ ಎನ್ನುವವರಿಗೊಂದು ಸವಾಲು. ಕೆಳಕಂಡ ಮಾಹಿತಿಗಳನ್ನು ಸಾಧ್ಯವಾದರೆ ಹುಡುಕಿಕೊಡಿ
·         ಕರ್ನಾಟಕದಲ್ಲಿ ಎಷ್ಟು MSW, BSW ಕಾಲೇಜುಗಳಿವೆ.
·         ಕರ್ನಾಟಕದಲ್ಲಿ ಎಷ್ಟು NGO ಗಳಿವೆ.
·         ಕರ್ನಾಟಕದಲ್ಲಿರುವ MSW ಪಡೆದವರ ಕನಿಷ್ಠ 500 ಜನರ ಸರಿಯಾದ ವಿಳಾಸ.
·         ಕರ್ನಾಟಕದಲ್ಲಿ ಎಷ್ಟು ಜನ ಸಮಾಜಕಾರ್ಯ ಪ್ರಾಧ್ಯಾಪಕರಿದ್ದಾರೆ.
            ಪೆಟ್ರೊಲ್ ಬೆಲೆ 5 ರೂ. ಜಾಸ್ತಿ ಆದ ಕೂಡಲೆ ಆಟೊ ಡ್ರೈವರುಗಳು, ಟ್ಯಾಕ್ಸಿ ಚಾಲಕರು ಬೀದಿಗೆ ಬಂದು ಪ್ರತಿಭಟಿಸುತ್ತಾರೆ. ನಮ್ಮ ವೃತ್ತಿಯಲ್ಲಿ ವೃತ್ತಿಪರರಿಗೆ ಅನ್ಯಾಯವಾದಾಗ ಪ್ರತಿಭಟನೆ, ಚಳುವಳಿ ಸಂಘಟಿಸುವವರ ಸಂಖ್ಯೆ ಕಡಿಮೆ.
            ಸಮಾಜಕಾರ್ಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವಾಗ ಸಮಾಜಕಾರ್ಯಕ್ಕೆ ಸಂಬಂಧಿಸಿದ ಕನ್ನಡದ ಪುಸ್ತಕಗಳಿಲ್ಲ. ರಷ್ಯಾ, ಸ್ವೀಡನ್, ಜಪಾನ್, ಚೀನಾ... ದೇಶಗಳಲ್ಲಿ ಅವರದೇ ಆದ ಭಾಷೆಗಳಲ್ಲಿ ಯಾವುದೇ ಅತ್ಯುತ್ತಮ ಗ್ರಂಥ ಬಂದರೆ ಭಾಷಾಂತರವಾಗುತ್ತದೆ. ನಮ್ಮಲ್ಲೇಕೆ ಸಾಧ್ಯವಿಲ್ಲ. ಭ್ರಮಾಲೋಕದಲ್ಲಿ ಬದುಕುತ್ತಿದ್ದೇವೆ. ಜ್ಞಾನಕ್ಕೆ ಭಾಷೆಯೆಂಬುದು ಅಡ್ಡಿಯಾಗಬಾರದು, ನಾವೆಲ್ಲರೂ ಸಮಾಜಕಾರ್ಯ ವಿದ್ಯಾರ್ಥಿಗಳಾಗಿದ್ದಾಗ ಕನ್ನಡ ಪುಸ್ತಕ ಓದಿ ಅರಗಿಸಿಕೊಳ್ಳುವ ಶಕ್ತಿ ನಮ್ಮಲ್ಲಿತ್ತು ಆದರೆ ಇಂಗ್ಲಿಷ್ನ್ನು ಓದಿ ಅರಗಿಸಿಕೊಳ್ಳುವ ಶಕ್ತಿ ನಮ್ಮಲ್ಲಿರಲಿಲ್ಲ. ಇಂತಹದೆ ವಿದ್ಯಾರ್ಥಿಗಳು ಬಹುಪಾಲು ಇರುವಾಗ ಹಿರಿಯ ವೃತ್ತಿಪರರೇಕೆ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿಲ್ಲ.
            ಕೊನೆಯದಾಗಿ ಅಪ್ಪ ಮಕ್ಕಳಿಗಾಗಿ ಆಸ್ತಿ ಮಾಡದಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ವಿದ್ಯಾಭ್ಯಾಸ ಮಾಡಿಸುವ ಕರ್ತವ್ಯ ಅವನದಾಗಿರುತ್ತೆ ಅದೇ ರೀತಿ ಹಿರಿಯ ವೃತ್ತಿಪರರು ಕಿರಿಯ ವೃತ್ತಿಪರರಿಗಾಗಿ ಸಾಹಿತ್ಯ ಸೃಷ್ಠಿಮಾಡಿ, KAPSW ನನ್ನು ಬಲಪಡಿಸಬೇಕು. ಸಮಾಜಕಾರ್ಯ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಸಂಘಟನೆಗಳು ಇಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದೇ ಆಗಿದ್ದರೆ ಪಿ.ಡಿ. (ಪಂಚಾಯತ್ ಡೆವಲಪ್ಮೆಂಟ್ ಆಫೀಸರ್) ಉದ್ಯೋಗಾವಕಾಶಗಳು ಅನ್ಯ ಪದವೀಧರರ ಪಾಲಾಗುತ್ತಿರಲಿಲ್ಲ, KAS/IASಗಳ ಪಠ್ಯದಲ್ಲಿ ಸಮಾಜಕಾರ್ಯದ ವಿಷಯ ಇಲ್ಲದೇ ಇರುತ್ತಿರಲಿಲ್ಲ. ಪ್ರತಿ 400 ಜನತೆಗೆ ಒಂದು NGO ಗಳಿದ್ದರೂ ಇನ್ನೂ ಅದೇ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಬಡತನ, ಅನಕ್ಷರತೆ, ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಸಮಸ್ಯೆಗಳ ನಿರ್ಮೂಲನೆ ಅಸಾಧ್ಯವಾಗುತ್ತಿರಲಿಲ್ಲ. ಇಂದಿನ ರಾಜಕೀಯ ದೊಂಬರಾಟಕ್ಕೆ        ಸಮಾಜವಿಜ್ಞಾನದ ಅರಿವಿರುವ ನಮ್ಮೆಲ್ಲರ ಜಡತ್ವವು ಕಾರಣವೆಂದರೆ ತಪ್ಪಾಗಲಾರದು. ಏನೋ ಒಂದು ಒಳ್ಳೆ ಕೆಲಸಮಾಡಿ ಸಮಾಜಕಾರ್ಯವನ್ನು ವೃತ್ತಿಯಾಗಿ ತೆಗೆದುಕೊಂಡು ಸ್ವಹಿತಾಸಕ್ತಿಯನ್ನು ಮರೆತು ಸಮಾಜದ ಹಿತಾಸಕ್ತಿಕಡೆಗಾದರೂ ಸ್ವಲ್ಪ ಗಮನಹರಿಸಿ.

ರಮೇಶ  ಎಂ.ಎಚ್.


No comments:

Post a Comment