Wednesday, September 25, 2013

ಗಾಂಧೀಜಿ ನಮ್ಮ ಆದರ್ಶ, ಆದರೆ ಸರಳತೆ ನಮಗೆ ಬೇಡ; ಮದರ್ ತೆರೇಸಾ ನಮ್ಮ ಆದರ್ಶ, ಆದರೆ ಅವರ ಸೇವಾ ಮನೋಭಾವ ಬೇಡ;

ಸಂಪಾದಕೀಯ

ಗಾಂಧೀಜಿ ನಮ್ಮ ಆದರ್ಶ, ಆದರೆ ಸರಳತೆ ನಮಗೆ ಬೇಡ; ಮದರ್ ತೆರೇಸಾ ನಮ್ಮ ಆದರ್ಶ, ಆದರೆ ಅವರ ಸೇವಾ ಮನೋಭಾವ ಬೇಡ; ಡಾ.ಎಚ್. ನರಸಿಂಹಯ್ಯ ನಮಗೆ ಆದರ್ಶ, ಅವರ ನಿಸ್ವಾರ್ಥ ಬದುಕು ನಮಗೆ ಬೇಡ. ರೀತಿ ಯಾವುದೇ ವ್ಯಕ್ತಿಯನ್ನು ಹೆಸರಿಸಿ ಅವರ ಆದರ್ಶಗಳು ನಮಗೆ ಬೇಡ. ಆದರೆ ನಮಗೆ ಅವರೆಲ್ಲರೂ ಆದರ್ಶರು. ಇದು ನಮ್ಮಲ್ಲಿರುವ ದ್ವಂದ್ವದ ನಿಲುವು. ಸಮಾಜಕಾರ್ಯದ ಎಲ್ಲ ತತ್ತ್ವಗಳು ನಮಗೆ ಆದರ್ಶ, ಆದರೆ ವೈಯಕ್ತಿಕ ಬದುಕಿನಲ್ಲಿ ಅವನ್ನು ಪಾಲಿಸುವುದಿಲ್ಲ ಅಷ್ಟೆ!
            ಸಮಾಜಕಾರ್ಯ ವೃತ್ತಿಪರರಾದ ನಾವೇನಾದರೂ ಸಮಾಜದ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವೆವಾ? ನಮ್ಮದೇ ವಿಶ್ವವಿದ್ಯಾಲಯದ ಪಾಯಿಖಾನೆ ದುರ್ನಾತ ಬೀರುತ್ತಿದರೂ ಪರವಾಗಿಲ್ಲ, ದೂರದ ಹಳ್ಳ ಪ್ರದೇಶಕ್ಕೆ ಹೋಗಿ ಬಹಿರ್ದೆಸೆಗೆ ಹೋಗುವುದು ಆರೋಗ್ಯಕ್ಕೆ ಹಾನಿಕರ ಎಂದು ಸಾಮಾಜಿಕ ಅರಿವು ಮೂಡಿಸುವುದರಲ್ಲಿ ನಾವು ತಲ್ಲೀನರಾಗಿರುತ್ತೇವೆ.
            ಇಬ್ಬರು ಸಮಾಜಕಾರ್ಯ ಪ್ರಶಿಕ್ಷಕರ ಅತ್ಯಂತ ಗಳಸ್ಯ ಗಂಟಸ್ಯ ಎಂಬ ಸ್ನೇಹಿತ. ಒಮ್ಮೆ ಅಂತಾರಾಷ್ಟ್ರೀಯ ಸಮಾಜಕಾರ್ಯ ಕಾರ್ಯಾಗಾರಕ್ಕೆ ಒಬ್ಬರೇ ತಮ್ಮ ಸ್ನೇಹಿತನಿಗೂ ತಿಳಿಸದಂತೆ ಹೋಗಿ ಬಂದರು. ಬಂದ ನಂತರ ನೀನು ಹೇಳಿದ್ದರೆ ನಾನು ಬರುತ್ತಿದ್ದೆನ್ನಲ್ಲ ಎಂದರೆ. ನಿನಗೆ ತಿಳಿಸಿದ್ದರೆ ನೀನು ಅಲ್ಲಿಗೆ ಬರುತ್ತಿದ್ದೆ. ಆದರೆ ನೀನೆ ನನ್ನ ಪ್ರತಿಸ್ಪರ್ಧಿಯಾದ್ದರಿಂದ ನಾನು ನಿನಗೆ ತಿಳಿಸಲಿಲ್ಲ. ಎಂದು ಮತ್ತೊಬ್ಬರ ಹತ್ತಿರ ಹೇಳಿದರಂತೆ. ಎಂದಾಗ ವೃತ್ತಿ ಗೌಪ್ಯತೆ (Principle of Confidency)ಇದೇ ಎಂದಿನಿಸದಿರದೆ?
            ಮತ್ತೊಬ್ಬ ಪ್ರಶಿಕ್ಷಕರು ಒಮ್ಮೆ ಹಗಲು ರಾತ್ರಿ ಯಾವುದೋ ಪುಸ್ತಕ ಬರೆಯುತ್ತಿದ್ದಾರೆ ಆದರೆ ಅದನ್ನು ಹಂಚಿಕೊಳ್ಳುವುದಿಲ್ಲ ಏಕೆಂದರೆ ಬೇರೆಯವರು ಅದೇ ರೀತಿ ಪುಸ್ತಕ ಬರೆದು ಬಿಟ್ಟರೆ ನಾಳೆ ನನಗೆ ಅವನೆ ಪ್ರತಿಸ್ಪರ್ಧಿಯಾಗಬಹುದೆಂಬ ದೂರದ ಆಲೋಚನೆ.
            ಮತ್ತೊಬ್ಬ ಪ್ರಶಿಕ್ಷಕರು, ಎಲ್ಲೆ Conference ಅಥವಾ Seminar ಆಗಲಿ ತಮ್ಮ ಪ್ರಬಂಧ ಮಂಡನೆ ಮಾಡದೆ ತಮಗೊಂದು ತಮ್ಮ ಅನುಯಾಯಿಗಳಿಗೆ ಹಲವು Certificate  ಕಲೆ ಹಾಕುವುದರಲ್ಲಿ ಚಾಣಕ್ಯರು. ಇದೇನಾ ವೃತ್ತಿಪರತೆ (Professonalism)?
            ಹೀಗೆ ಹಲವಾರು ದ್ವಂದ್ವಗಳ ನಡುವೆ ಬದುಕುತ್ತಿರುವ ನಮ್ಮ ವೃತ್ತಿ ಹೀಗೆಯೇ ಮುಂದುವರಿದರೆ ವೃತ್ತಿ ಎಂದೆನ್ನಿಸಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ಕಳೆದುಕೊಂಡು ಸಮಾಜಕಾರ್ಯಕರ್ತರೆಂದರೆ ರಾಜಕಾರಣಿಗಳಿಗೆ ಹೋಲಿಸಿ ಮಾತನಾಡುವ ದಿನಗಳು ದೂರ ಉಳಿದಿಲ್ಲ!
            ಸಮಾಜಕಾರ್ಯದ ಹೆಜ್ಜೆಗಳು ಮಾಸಪತ್ರಿಕೆಯು ನಿಮ್ಮ ಕೈ ಸೇರುವ ಹೊತ್ತಿಗೆ ಮಾನಸಿಕವಾಗಿ, ವೈಯಕ್ತಿಕವಾಗಿ, ವೃತ್ತಿಪರವಾಗಿ ನನಗಾದ ಅನುಭವಗಳು ಹಲವು. ಪತ್ರಿಕೆಗಾಗಿ ಸತತವಾಗಿ ಸಹಕರಿಸುತ್ತಿರುವ ಹಿರಿಯ ಜೀವಿಗಳ ಪ್ರಾಮಾಣಿಕ ಪ್ರಯತ್ನ ನಮ್ಮ ತಂಡದೊಂದಿಗೆ ಇರದಿದ್ದರೆ ಪತ್ರಿಕೆಗೆ ವೇಳೆಗೆ ಅಂತ್ಯ ಸಂಸ್ಕಾರ ಮಾಡಿ ಮುಗಿಸಬೇಕಾಗಿತ್ತು. ಮಾತು ಇಲ್ಲಿ ಪ್ರಸ್ತುತವಾಗಿ ಹೇಳಲು ಕಾರಣ ಹಲವಾರಿವೆ. ಪತ್ರಿಕೆಗೆ ಚಂದಾದಾರರಾಗಲು ಹಲವು ಬಾರಿ ವಿನಂತಿಸಿದರೂ ನಮ್ಮ ಪತ್ರಿಕೆಗೆ ಚಂದಾದಾರರಾಗಲು ಇಚ್ಛಿಸಿಲ್ಲ. ಸಪ್ನ ಹಾಗೂ ಚೈತ್ರ ಪುಸ್ತಕ ಮಳಿಗೆಗಳ ಮುಖಾಂತರ ಸುಮಾರು 250 ಪತ್ರಿಕೆಗಳು ಅಂದರೆ ಪ್ರತಿ ತಿಂಗಳು 2000 ಪತ್ರಿಕೆ ಕರ್ನಾಟಕದಾದ್ಯಂತ ಹಾಗೂ ಭಾರತದ್ಯಂತ ತಲುಪುತ್ತಿವೆ. ಆದರೆ ನಮ್ಮ ಜೊತೆಯಲ್ಲಿ ಓದಿದ ಸ್ನೇಹಿತರು ಹಾಗೂ ಸಮಾಜಕಾರ್ಯ ಪ್ರಶಿಕ್ಷಕರು ಇದರ ಚಂದಾದಾರರಾಗಿಲ್ಲದುದರ ಹಿಂದಿನ ರಹಸ್ಯ ನನಗೆ ಭೇದಿಸಲು ಸಾಧ್ಯವಾಗಿಲ್ಲ. ಚಂದಾದಾರರಾಗಬೇಕೆಂಬ ನಿಯಮವಿಲ್ಲ. ಆದರೆ ಕೆಲವೊಂದು ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿವೆ. ಇದೇನಾ ಸಹಕಾರದ ತತ್ತ್ವ.(Principles of Co-operation)?
            ಇದುವರೆವಿಗೂ ಸಮಾಜಕಾರ್ಯ ಪ್ರಶಿಕ್ಷಕರು ಚಂದಾದಾರರಾಗಿ ಎಂದು ತಮ್ಮ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿಲ್ಲ. ಕೆಲವೊಮ್ಮೆ ಹೇಳಿದ್ದರೂ ವಿದ್ಯಾರ್ಥಿಗಳು ಅವರ ಮಾತನ್ನು ಕೇಳಲ್ಲ! ಮತ್ತೆ ಕೆಲವರು ವಿದ್ಯಾರ್ಥಿಗಳಿಗೆ ಹೇಳಬೇಕೆಂಬ ನಿಯಮವೇನಿದೆ ಎಂದು ನನ್ನನ್ನು ನೇರವಾಗಿ ಕೇಳಿದರು. ಅವರಿಗೆ ನಾನು ನೇರವಾಗಿ ಹೇಳಬಾರೆಂದು ಮರು ಪ್ರಶ್ನಿಸಿದೆ. ಅದಕ್ಕೆ ಅವರು ನಮ್ಮಿಷ್ಟ ಎಂದಾಗ ಅದಕ್ಕೆ ನಮ್ಮ ವೃತ್ತಿ ಸ್ಥಿತಿಗೆ ತಲುಪಿದೆ ಅಲ್ಲವೆ!
            ಪ್ರಜಾವಾಣಿ ಪತ್ರಿಕೆಯಲ್ಲಿ ಶ್ರೀ ಪದ್ಮರಾಜ ದಂಡಾವತಿಯವರು ಇತ್ತೀಚೆಗೆ ನಡೆದ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಗಳ ಚುನಾವಣೆಯ ಬಗ್ಗೆ ತಮ್ಮ ಅಂಕಣದಲ್ಲಿ ಹೀಗೆ ದಾಖಲಿಸಿದ್ದಾರೆ: ಪದವೀಧರರ ಕ್ಷೇತ್ರಕ್ಕಿಂತ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಇನ್ನೂ ಅಧ್ವಾನವಾಗಿತ್ತು. ತುಮಕೂರಿನ ಹೊಟೇಲ್ವೊಂದರಲ್ಲಿ ಊಟ ಮಾಡಿದ 20 ಮಂದಿ ಉಪನ್ಯಾಸಕರು ಕೇವಲ ಎರಡು ಗಂಟೆಯಲ್ಲಿ 23,854 ರೂಪಾಯಿ ಬಿಲ್ ತಂದು ಅಭ್ಯರ್ಥಿಯ ಬೆಂಬಲಿಗರಿಗೆ ಕೊಟ್ಟು ಹೊರಟು ಹೋದರು. ಒಬ್ಬರಿಗೂ ಸರಿಯಾಗಿ ನಿಲ್ಲಲು ಆಗುತ್ತಿರಲಿಲ್ಲ. ಮಾತನಾಡಲೂ ಆಗುತ್ತಿರಲಿಲ್ಲ! ಬಿಲ್ ನೋಡಿ ಗಾಬರಿಯಾದ ಅಭ್ಯರ್ಥಿ ಬೆಂಬಲಿಗರು ಹೊಟೇಲ್ ಮ್ಯಾನೇಜರ್ಗೆ, ಏನಯ್ಯ ಇಷ್ಟು ಬಿಲ್ ಹಾಕಿದ್ದೀ. ಅವರು ಕುಡಿದಿದ್ದಾರೆ. ನಾವೇನು ಕುಡಿದಿಲ್ಲ ಎಂದು ಜಬರಿಸಿದರು. ಇಲ್ಲ ಸರ್, ಅವರು ಇಲ್ಲಿ ಕುಡಿದರು ಮತ್ತು ತಿಂದರು ಮಾತ್ರವಲ್ಲ ಎಲ್ಲರೂ ಒಂದೊಂದು ಬಾಟಲ್ ಮತ್ತು ಬೇಕಾದ ಊಟ ಕಟ್ಟಿಸಿಕೊಂಡು ಹೋಗಿದ್ದಾರೆ. ಬಿಲ್ ಸರಿಯಾಗಿದೆ ಎಂದ. ಹೋಟೆಲ್ನಲ್ಲಿ ಅವರು ಇಂದೇ ಜೀವನದ ಕೊನೆ ಎನ್ನುವಂತೆ ತಿಂದಿದ್ದರು. ಕುಡಿದಿದ್ದರು. ಎಲ್ಲೆಲ್ಲಿ ಶಿಕ್ಷಕರಿಗೆ ತುಂಡು-ಗುಂಡಿನ ವ್ಯವಸ್ಥೆ ಆಗುತ್ತೋ ಅಲ್ಲೆಲ್ಲ ಅವರು ಹೀಗೆಯೇ ಕುಡಿದರು, ತಿಂದರು. ಅವರೆಲ್ಲ ಪದವೀಧರರು ಮಾತ್ರವಲ್ಲ ಶಿಕ್ಷಕರು ಕೂಡ ಎಂಬುದನ್ನು ಮರೆಯುವುದು ಬೇಡ.
            ಇಂಥ ಸ್ಥಿತಿಗಳನ್ನ ಅನುಭವಿಸಿಯೇ ಕವಿ ಡಿ.ವಿ.ಜಿ ಸಾಲುಗಳನ್ನು ರಚಿಸಿರಬೇಕು?
ಕಾರಿರುಳೊಳಾಗಸದಿ ತಾರೆ ನೂರಿದ್ದೇನು?|
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು||
ದೂರದಾ ದೈವವಂತಿರಲು, ಮಾನುಷಸಖನ|
ಕೋರುವುದು ಬಡಜೀವ-ಮಂಕುತಿಮ್ಮ||

ರಮೇಶ  ಎಂ.ಎಚ್.



No comments:

Post a Comment