Wednesday, September 25, 2013

35 ವರ್ಷದ ವ್ಯಕ್ತಿ ಆ್ಯಸಿಡ್ ಕುಡಿದು ಅಸುನೀಗಿದ್ದ.

ಸಂಪಾದಕೀಯ

ಇತ್ತೀಚೆಗೆ ಒಂದು ಸಾವಿನ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದಾಗ, ಕುಟುಂಬದ ಸುಮಾರು 35 ವರ್ಷದ ವ್ಯಕ್ತಿ ಆ್ಯಸಿಡ್ ಕುಡಿದು ಅಸುನೀಗಿದ್ದ. ತನ್ನ ಎರಡು ಮಕ್ಕಳು ಹಾಗೂ ಹೆಂಡತಿಯನ್ನು ಅಗಲಿದ್ದನು. ಕುಟುಂಬ ಬೆಂಗಳೂರು ಹೊರವಲಯದ ನೈಸ್ ರಸ್ತೆ ಸಮೀಪ ಎರಡು ಸಾವಿರ ಜನಸಂಖ್ಯೆಯುಳ್ಳ ಒಂದು ಹಳ್ಳಿ. ಇಪ್ಪತ್ತೈದು ವರ್ಷಗಳಿಂದ ಕುಟುಂಬದವರು ಹಳ್ಳಿಯಲ್ಲಿ ವಾಸವಾಗಿದ್ದಾರೆ. ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಬೆಳಗ್ಗೆ ಹತ್ತು ಗಂಟೆಗೆ ಹೋದಾಗ ಹತ್ತು ಜನರಿರಲಿಲ್ಲ. ಕೇವಲ ಮನೆಯ ಮಕ್ಕಳು ಬಿದಿರು ಕಡಿಯಲು ಹೋಗಿದ್ದರು. ಹಾಗೂ ಅವರದೇ ಹೊಲದಲ್ಲಿ ಜೆಸಿಬಿಯಿಂದ ಗುಂಡಿ ತೆಗೆಯಲು ಹೋಗಿದ್ದ ದೃಶ್ಯ ಕಂಡುಬಂತು. ಸಂಪ್ರದಾಯದಂತೆ ಕೆಲವರು ಬಂದು ಒಂದು ಹಾರ ಹಾಕಿ ಎರಡು ನಿಮಿಷಗಳು ನಿಲ್ಲದೇ ನಮಗೆ ತುರ್ತು ಕೆಲಸವಿದೆ ಎಂಬ ನಾಗರಿಕ ನಾಜೂಕು ನೆಪ ಹೇಳಿ ಹೊರಟುಹೋದರು. ಪರಿಸ್ಥಿತಿ ಕೇವಲ ಸಾವಿಗಲ್ಲ. ಮದುವೆ ಮನೆಯಲ್ಲೂ ಜನ ಎರಡು ನಿಮಿಷಗಳಷ್ಟೇ? ಊಟ ಮಾಡಿ ಮನೆಗೆ ಹೋಗುತ್ತಾರೆ
            ಇತ್ತೀಚಿನ ಸಂಶೋಧನೆಯಲ್ಲಿ  "ಒಂದು ಪ್ರಭೇದದ ಪಕ್ಷಿಗಳು ತಮ್ಮದೇ ಗುಂಪಿನ ಪಕ್ಷಿ ಸತ್ತಾಗ ಅವು ದಿನನಿತ್ಯದ ಆಹಾರವನ್ನು ಹುಡುಕದೆ ಸತ್ತ ಪಕ್ಷಿಯ ಅಂತ್ಯಸಂಸ್ಕಾರ ಮಾಡಲು ತಮ್ಮದೇ ಗುಂಪಿನ ಇತರೆ ಪಕ್ಷಿಗಳ ಜೊತೆ ಸೇರುತ್ತವೆ" ಎಂದು ತಿಳಿದು ಬಂದಿದೆ. ಆದರೆ, ನಾಗರಿಕ ಮಾನವ ದಿನದಿಂದ ದಿನಕ್ಕೆ ಎತ್ತ ಸಾಗುತ್ತಿದ್ದಾನೆ! ಒಂದು  ಸಾವು ನೋಡಿ ಬುದ್ಧನಿಗೆ ಜ್ಞಾನೋದಯ, ಆದರೆ, ಹಲವು ಸಾವುಗಳನ್ನು ನಾವು ನೋಡುತ್ತಿದ್ದರೂ ನಮಗೆ ಜ್ಞಾನೋದಯವಾಗುವ ಲಕ್ಷಣಗಳೇ ಇಲ್ಲ. ಸಮಾಜ ಇಷ್ಟರಮಟ್ಟಿಗೆ ಬಿರುಕುಬಿಟ್ಟಿದೆ. ಹಿಂದಿನ ದಿನಗಳಲ್ಲಿ ಸಮಾಜವು ಜೇಡಿಮಣ್ಣಿನ ದಿಬ್ಬವಾಗಿ ಅತ್ಯಂತ ಗಟ್ಟಿಯಾಗಿತ್ತು. ಆದರೆ, ಇಂದು ಸಮಾಜ ಮರಳಿನ ದಿಬ್ಬವಾಗಿ ಮರುಭೂಮಿಯಾಗುತ್ತಲಿದೆ ಎನಿಸುತ್ತದೆ. ಸಮಾಜವನ್ನು ಜೇಡಿ ಮಣ್ಣಿನ ಹಾಗೆ ಮತ್ತೆ ಮಾರ್ಪಡಿಸುವ ಕೆಲಸ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಹಾಗೆಯೇ ಸಮಾಜಕಾರ್ಯಕರ್ತನು ಪ್ರತಿಯೊಬ್ಬರನ್ನು ನಾಗರಿಕನನ್ನಾಗಿಸಿ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿದೆ.
* * *
            ಯಾರ ಮನಸ್ಸಿಗೂ ನೋವುಂಟು ಮಾಡಬೇಕೆಂಬ ಭಾವನೆ ಇಲ್ಲದೇ, ಅನಿಸಿದ್ದನ್ನು ನಿರಾತಂಕವಾಗಿ ಅನಿಸಿದಂತೆ ಹೇಳಬೇಕೆನಿಸುತ್ತಿದೆ.
            ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆ 2 ವರ್ಷ ಪೂರೈಸುವ ಸಂದರ್ಭದಲ್ಲಿ ಸಮಾಜಕಾರ್ಯ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಪರ್ಕಕ್ಕೆ ಬಂದಿದ್ದೇವೆ. ಸುಮಾರು 2 ವರ್ಷಗಳಿಂದ ಪತ್ರಿಕೆಯನ್ನು ಸತತವಾಗಿ ಪ್ರತಿ ತಿಂಗಳು ಹೊರತಂದ ಮೇಲೂ ಕೆಲವರು ನಕರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿದರೆ ಬೇಸರವಾಗುತ್ತದೆ. ಸಮಾಜಕಾರ್ಯ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರೂ ಕನಿಷ್ಠ 1 ವರ್ಷ ವಾರ್ಷಿಕ ಚಂದಾದಾರರಾಗಲೂ ಮನಸ್ಸು ಮಾಡಿಲ್ಲ?
* * *
            ಇತ್ತೀಚೆಗೆ ಉತ್ತರಕರ್ನಾಟಕದ ಬರದಿಂದ ತತ್ತರಿಸಿದೆ. ಹಾಗೆಯೇ ಹಲವಾರು ಸಾಮಾಜಿಕ ಸಮಸ್ಯೆಗಳು ಸಮಾಜದಲ್ಲಿವೆ. ಸಮಾಜ ಯಾವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನವನ್ನಾಗಲಿ, ಸಮಸ್ಯೆಗಳಿಗೆ ಸ್ಪಂದಿಸುವ ಸಾಂಘಿಕ ಪ್ರಯತ್ನವನ್ನಾಗಲಿ ಕಿಂಚಿತ್ತು ಮಾಡುತ್ತಿರುವ ಚಹರೆ ನಮ್ಮ ಸಮಾಜಕಾರ್ಯ ವೃತ್ತಿಯಿಂದ ಅನ್ನ ತಿನ್ನುತ್ತಿರುವ ಬಹುಪಾಲು ಜನರಲ್ಲಿಲ್ಲ.
            ಸಮಾಜಕಾರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರ ಬಗ್ಗೆ ಕೃತಜ್ಞತೆ ತೋರಿಸುವವರು ಯಾರೂ ಇಲ್ಲ. ಹಲವಾರು ಹಿರಿಯ ಸಾಹಿತಿಗಳಿಗೆ ಹಾಗೂ ಅವರವರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಅವರದೇ ಕ್ಷೇತ್ರದವರು ಗುರುತಿಸುವುದು ಸಾಮಾನ್ಯ. ಆದರೆ ರೀತಿಯ ಯಾವುದೇ ಕೆಲಸ ನಮ್ಮ ಸಮಾಜಕಾರ್ಯ ವೃತ್ತಿಯಲ್ಲಿ ಅಪರೂಪವೆಂದರೆ ತಪ್ಪಾಗಲಾರದು. ಸಮಾಜಕಾರ್ಯರ್ತರೆಲ್ಲ ಸೇರಿ ಒಂದು ಸಂಘ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ನಿರಾಸಕ್ತಿ. ಬಹುಪಾಲು ಜನರು ತಮ್ಮ ಸ್ವಹಿತಾಸಕ್ತಿ ಸ್ಥಾರ್ಥಪರ ನಡವಳಿಕೆ ಸಮಾಜಕಾರ್ಯ ವೃತ್ತಿಯಲ್ಲಿರಬೇಕಾದ ಯಾವುದೇ ತತ್ತ್ವ ಸಿದ್ಧಾಂತಗಳನ್ನೂ ಆಚರಿಸದೇ ವೃತ್ತಿಯಲ್ಲಿ ತೊಡಗಿಕೊಂಡಿದ್ದೇವೆ ಎಂದರೆ ತಪ್ಪಾಗಲಾರದು.
            ಸೆಮಿನಾರ್ ಹಾಗೂ ಕಾನ್ಫೆರೆನ್ಸ್ಗಳನ್ನು ಆಯೋಜಿಸಿ ಅಲ್ಲಿ ಪೇಪರ್ ಪ್ರೆಸೆಂಟೇಶನ್ ಮಾಡಿ ಅಲ್ಲಿಂದ ನಮ್ಮ ವೃತ್ತಿ ಭದ್ರತೆಗಾಗಿ ಸೆಣೆಸಾಟ ಮಾಡುವುದರಲ್ಲಿ ತಲ್ಲೀನರಾಗಿದ್ದೇವೆ. ಸಮಾಜಕಾರ್ಯ ವೃತ್ತಿ ಹಾಗೂ ಸಮಾಜಕಾರ್ಯ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸುವಂಥ ಸೆಮಿನಾರ್, ಕಾನ್ಫೆರೆನ್ಸ್, ಕಾರ್ಯಾಗಾರ ಹಾಗೂ ತರಬೇತಿಗಳನ್ನು ಇಂದು ಮಾಡಬೇಕಾದ ಅಗತ್ಯವಿದೆ. ಸಮಾಜಕಾರ್ಯವನ್ನು ಸ್ನಾತಕೋತ್ತರ ಮಟ್ಟದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆ ಹಾಗೂ ಜ್ಞಾನ ಮಟ್ಟ ಇಂದು ಸ್ನಾತಕೋತ್ತರ ಪದವಿ ಗಳಿಸಿ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವ ಬಹುಪಾಲು ಪದವೀಧರರಿಗೆ ಇಲ್ಲ. ಇದಕ್ಕೆ ಹೊಣೆಗಾರರು ಯಾರು?
* * *
            ಶಂಕರ ಪಾಠಕ ಅವರ "Social Work and Social Welfare" ಪುಸ್ತಕವನ್ನು ನಿರುತ ಪ್ರಕಾಶನ ಹೊರತಂದಿದೆ. ಪುಸ್ತಕವನ್ನು ನಮಗೆ ಪ್ರಕಟಿಸಲು ಪ್ರೋತ್ಸಾಹ ನೀಡಿದ ಶಂಕರ ಪಾಠಕ ಅವರಿಗೆ ನಮ್ಮ ತಂಡ ಋಣಿಯಾಗಿದೆ. ಪುಸ್ತಕವು ಅತ್ಯಂತ ಅನುಭವಪೂರ್ಣ ಲೇಖನಗಳಿಂದ ಕೂಡಿದೆ. ಪುಸ್ತಕವನ್ನು ಸಮಾಜಕಾರ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ, ನಮ್ಮ ಪತ್ರಿಕೆಯ ಚಂದಾದಾರಿಗೆ ಹಾಗೂ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಪುಸ್ತಕದ ಬಿಡುಗಡೆ ಸಮಾರಂಭವನ್ನು "ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ" ನರಸಿಂಹರಾಜ ಕಾಲನಿ, ಬೆಂಗಳೂರು-19. ಇಲ್ಲಿ ದಿನಾಂಕ 18 ನವೆಂಬರ್ 2012 ಭಾನುವಾರ ಬೆಳಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ. ನೀವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿ ವಿನಂತಿ.                    
* * *
            ಇತ್ತೀಚೆಗೆ ಕ್ರೈಸ್ಟ್ ಕಾಲೇಜು ಸಮಾಜಕಾರ್ಯ ವಿಭಾಗದವರು 'ಎನ್ ಜಿ ಮೇಳ' ವನ್ನು ಹಾಗೂ ಎನ್ ಜಿ ಮತ್ತು ವಿದ್ಯಾರ್ಥಿಗಳೊಡನೆ ಒಂದು ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇಂಥ ವಿಭಿನ್ನ ಪ್ರಯೋಗಗಳು ಸಮಾಜಕಾರ್ಯ ಕ್ಷೇತ್ರದಲ್ಲಿ ಆಗಬೇಕಾದ ಅಗತ್ಯತೆ ಇದೆ.

-ಸಂಪಾದಕ



No comments:

Post a Comment