Wednesday, September 25, 2013

'ಇಂದಿನ ಮಕ್ಕಳು ಇಂದಿನ ಪ್ರಜೆಗಳು' -ಹೊಸ ದೃಷ್ಟಿಕೋನದ ಆವಶ್ಯಕತೆ


ಇದೊಂದು ದ್ವಂದ್ವ. 'ಮಕ್ಕಳನ್ನು ಪ್ರಜೆಗಳೆಂದು ಪರಿಗಣಿಸಬಹುದೆ? ಅವರಿನ್ನೂ ಚಿಕ್ಕವರು, ಒಳಿತು ಕೆಡಕು ತಿಳಿಯದವರು, ದೇಶದ ಜವಾಬ್ದಾರಿಗಳನ್ನು ಹೊರಲು ಸಿದ್ಧರಿಲ್ಲದವರು, ಅದು ಹೇಗೆ ಅವರು ಈಗಲೇ ಪ್ರಜೆಗಳಾಗಲು ಸಾಧ್ಯ?' ಹಾಗಾದರೆ ಅವರು ಪ್ರಜೆಗಳಲ್ಲ ಎಂದು ಎಲ್ಲಿ ಹೇಳಿದೆ ಎಂದು ಪ್ರಶ್ನಿಸಿದರೆ, ಉತ್ತರಕ್ಕಾಗಿ ಅಲ್ಲಿ ಇಲ್ಲಿ ತಡಕಾಡಬೇಕಷ್ಟೆ. ಎಷ್ಟೋ ಜನ, ಮಕ್ಕಳ ವಿಚಾರಗಳು, ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಇರುವವರು ಕೂಡಾ ಹೇಳುವುದು 'ಸಂವಿಧಾನದಲ್ಲಿದೆ.' ಸಂವಿಧಾನದಲ್ಲಿ ಎಲ್ಲಿದೆ? ಏನೆಂದು ಹೇಳಿದೆ? ಅದರಲ್ಲಿ ಇಲ್ಲದಿದ್ದರೆ, 'ಪ್ರೌಢತೆ ಕಾನೂನಿನಲ್ಲಿದೆ, ಭಾರತ ನಾಗರಿ ಕರ ಕಾಯಿದೆಯಲ್ಲಿದೆ, ಅದರಲ್ಲಿದೆ ಇದರಲ್ಲಿದೆ...' ವಾಸ್ತವವೆಂದರೆ, ಎಲ್ಲಿಯೂ 'ಮಕ್ಕಳನ್ನು ಪ್ರಜೆಗಳಲ್ಲ ಎಂದು ಹೇಳಿಲ್ಲ. ಅಥವಾ 18 ದಾಟಿದ ನಂತರ ಪ್ರಜೆಗಳು ಎಂದೋ, ಪ್ರೌಢರಾದ ಮೇಲೆ ಪ್ರಜೆಗಳೆಂದೇ ಗುರುತಿಸಬೇಕೆಂಬ ನಿರ್ದೇಶನಗಳಿಲ್ಲ. ಹೀಗಾಗಿ 'ಇಂದಿನ ಮಕ್ಕಳು ಮುಂದಿನ ಪ್ರಜೆಗಳು' ಎಂದು ನಾವೆಲ್ಲಾ ಹೇಳುತ್ತಿದ್ದೇವಲ್ಲ, ಈಗ ಹೇಗೆ ಬದಲಾಗುವುದು?
ಪ್ರಾಯಶಃ 'ಮಕ್ಕಳನ್ನು ಮುಂದಿನ ಪ್ರಜೆಗಳು' ಎಂದು ಹೇಳಿದಾಗ ಅಂದಿನ ನಾಯಕರ ದೃಷ್ಟಿ ಇದ್ದದ್ದು, ಮಕ್ಕಳು ಆರೋಗ್ಯವಂತರಾಗಿ, ಸದೃಢರಾಗಿ, ಶಿಕ್ಷಣದ ಅವಕಾಶವನ್ನು ಪಡೆದು, ಮುಂದೊಂದು ದಿನ ದೇಶದ ಜವಾಬ್ದಾರಿಗಳನ್ನು ಹೊರಲು ಸಿದ್ಧರಾಗಬೇಕು ಎಂಬುದು. ಇಂತಹ ತಯ್ಯಾರಿ ಎಲ್ಲ ಮಕ್ಕಳಿಗೆ ಸಿಗಬೇಕೆಂದು ಸಂವಿಧಾನ ಬಯಸಿತ್ತು. ಆದರೆ, 1950ರಲ್ಲಿ ಹೊರಬಿದ್ದ ಸಂವಿಧಾನ, ಹಲವಾರು ಒತ್ತಡಗಳಿಗೆ ಸಿಲುಕಿದ್ದ ಕಾರಣ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಘೋಷಿಸಲಿಲ್ಲ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಿಲ್ಲ. ಇದು, ಭಾರತದ ಕೋಟ್ಯಂತರ ಬಡ ಮತ್ತು ಗ್ರಾಮೀಣ ಮಕ್ಕಳ ಆರೋಗ್ಯ, ಬೆಳವಣಿಗೆ, ಅವಕಾಶಗಳನ್ನು ಪಡೆಯುವ ಸಾಧ್ಯತೆ ಎಲ್ಲದರ ಮೇಲೆ ಕೆಟ್ಟ ಪರಿಣಾಮ ಬೀರಿತು. ಇದು ಕೇವಲ ಭಾರತದ ಮಕ್ಕಳ ಸ್ಥಿತಿ ಮಾತ್ರವಾಗಿರಲಿಲ್ಲ. ಜಗತ್ತಿನ ಬಹುತೇಕ ದೇಶಗಳಲ್ಲಿ ಮಕ್ಕಳನ್ನು ಪರಿಗಣಿಸುತ್ತಿದ್ದದ್ದು, 'ಕೊಟ್ಟರೆ ತೆಗೆದುಕೊಳ್ಳಬೇಕು, ಇಲ್ಲವಾದರೆ ಬಿದ್ದಿರಬೇಕು'. ಮಕ್ಕಳು ಅನಾರೋಗ್ಯಕ್ಕೆ ಈಡಾಗುವುದು, ಅಕಾಲಿಕ ಸಾವಿಗೆ ಬಲಿಯಾಗುವುದು, ದುಡಿಮೆಯ ನೊಗಕ್ಕೆ ಹೆಗಲು ಕೊಡುವುದು, ಮಾರಾಟದ ವಸ್ತುಗಳಾಗುವುದು, ಒಟ್ಟಿನಲ್ಲಿ ಸಂಕಷ್ಟಗಳಲ್ಲಿ ದಿನದೂಡುವುದು ಆಗಿತ್ತು
            ಇಂತಹದೊಂದು ಪರಿಸ್ಥಿತಿಗೆ ಕೊನೆತರಬೇಕೆಂದು ಗಟ್ಟಿ ನಿಲುವನ್ನು ತೋರಿದವರು ಶ್ರೀಮತಿ ಎಗ್ಲಾಂಟೈನ್ ಜೆಬ್ ಎಂಬ ಬ್ರಿಟಿಷ್ ಮಹಿಳೆ. 'ಮಕ್ಕಳನ್ನು ವಯಸ್ಕ ಸಮಾಜದ ಸರಿಸಮನಾಗಿ ಪರಿಗಣಿಸಬೇಕು. ಮಕ್ಕಳಿಗಿರುವ ಹಕ್ಕುಗಳಿಗೆ ಮನ್ನಣೆ ಕೊಡಬೇಕು' ಎನ್ನುವ ಆಕೆಯ ದೃಷ್ಟಿಕೋನ ವಿಶ್ವಸಂಸ್ಥೆಯ ಬಾಗಿಲು ತಟ್ಟಿತು. 1989ರಲ್ಲಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಘೋಷಣೆಯಾಯಿತು. 18 ವರ್ಷದೊಳಗಿನವರನ್ನೆಲ್ಲಾ ಮಕ್ಕಳೆಂದು ಪರಿಗಣಿಸಿ ಅವರ ಬದುಕು, ರಕ್ಷಣೆ, ವಿಕಾಸ ಮತ್ತು ಭಾಗವಹಿಸುವಿಕೆ ಹಕ್ಕುಗಳನ್ನು ಮಾನ್ಯ ಮಾಡಬೇಕೆಂದು ತನ್ನ ಸದಸ್ಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆಕೊಟ್ಟಿತು
            ಒಡಂಬಡಿಕೆಗೆ ಭಾರತ 20 ವರ್ಷಗಳ ಹಿಂದೆ ತನ್ನ ಬದ್ಧತೆ ನೀಡಿತು. 'ಪ್ರಜೆಗಳೆಂದು ಪರಿಗಣಿತರಾಗಿರುವ ಮಕ್ಕಳು' ಇನ್ನೂ ತಮ್ಮ ನ್ಯಾಯಬದ್ಧವಾದ ಹಕ್ಕುಗಳ ಜಾರಿಗಾಗಿ ಕಾದು ಕುಳಿತಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.45 ಮಕ್ಕಳು ಎಂಬುದು ಲೆಕ್ಕ. ಆದರೆ, ಇವರಲ್ಲಿ ದೊಡ್ಡ ಪ್ರಮಾಣದ ಮಕ್ಕಳು ಈಗಲೂ ಮೂಲ ಸೇವೆಗಳಿಂದ ವಂಚಿತರಾಗಿದ್ದಾರೆ, ಚಿಕ್ಕ ವಯಸ್ಸಿನಲ್ಲೇ 'ವಯಸ್ಕ' ಪಾತ್ರ ನಿರ್ವಹಿಸುತ್ತಿದ್ದಾರೆ! ಅಂದರೆ, ದುಡಿಯುತ್ತಾರೆ, ಸಂಪಾದನೆ ಮಾಡುತ್ತಾರೆ, ಕುಟುಂಬ ನಿರ್ವಹಿಸುತ್ತಾರೆ, ಮದುವೆಯಾಗುತ್ತಿದ್ದಾರೆ, ಮಕ್ಕಳನ್ನು ಹೆರುತ್ತಿದ್ದಾರೆ, ಇವೆಲ್ಲದರ ಭಾರ ತಾಳಲಾರದೆ ಮಧ್ಯದಲ್ಲೇ ಮುರಿದು ಬೀಳುತ್ತಿದ್ದಾರೆ. ಮಕ್ಕಳನ್ನು ಕುರಿತು ಲಭ್ಯವಿರುವ ವಿವಿಧ ರೀತಿಯ ಅಂಕಿಸಂಖ್ಯೆಗಳು, ತಳಮಟ್ಟದ ಪ್ರಕರಣಾಧ್ಯಯನಗಳು, ಸರ್ಕಾರಿ ಸೇವೆಗಳನ್ನು ಮಕ್ಕಳಿಗೆ ತಲುಪಿಸುವ ವ್ಯವಸ್ಥೆಗಳ ವಿಶ್ಲೇಷಣೆಗಳೆಲ್ಲವೂ ಬೇಡಬೇಡವೆಂದರೂ ಎತ್ತಿ ತೋರುತ್ತಿರುವುದು 'ಅಸಮರ್ಪಕ ಸೇವಾ ಸೌಲಭ್ಯಗಳು. ಮಕ್ಕಳ ಹಕ್ಕುಗಳ ಜಾರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಸುತ್ತಿನ ಮಾತುಕತೆ, ಯೋಜನೆಗಳು ಮತ್ತು ಅವಕ್ಕೆ ಹಣಕಾಸು ಎಲ್ಲವನ್ನೂ ಘೋಷಿಸುತ್ತಿವೆ. ಆದರೆ, ಇವು ಅದೇಕೆ ಆವಶ್ಯಕತೆ ಇರುವ ಮಕ್ಕಳನ್ನು ತಲುಪುತ್ತಿಲ್ಲ? ಇದರೊಂದಿಗೆ ಹತ್ತಾರು ಸಾವಿರ ಸ್ವಯಂಸೇವಾ ಸಂಘಟನೆಗಳು, ಇತ್ತೀಚೆಗೆ ಕಾರ್ಪೋರೇಟ್ ಉದ್ಯಮ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳು ಮಕ್ಕಳ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿವೆ. ಮತ್ತದೇ ಪ್ರಶ್ನೆ! ಅದೇಕೆ ಸೇವೆಗಳು ಸಮರ್ಪಕವಾಗಿಲ್ಲ?
            ಮಕ್ಕಳ ಕ್ಷೇತ್ರದಲ್ಲಿ, ಮಕ್ಕಳ ಪರವಾಗಿ ವಕೀಲಿ ಕೆಲಸ ಮಾಡುತ್ತಿರುವವರು ಮತ್ತು ಸಂಶೋಧನೆಗಳಲ್ಲಿ ತೊಡಗಿಕೊಂಡಿರುವವರೆಲ್ಲರೂ ಸಾಮಾನ್ಯವಾಗಿ ಹೇಳುವುದು ಸರ್ಕಾರದ ಸೇವೆಗಳು, ಯೋಜನೆಗಳು ಇದ್ದರೂ, ತಳಮಟ್ಟದಲ್ಲಿ ಅವುಗಳ ಅಸಮರ್ಪಕ ನಿರ್ವಹಣೆ ಮತ್ತು ಬಹುತೇಕ ಕಾಣೆಯಾಗಿರುವ ಉಸ್ತುವಾರಿ ಮತ್ತು ಮೌಲ್ಯಮಾಪನ ವ್ಯವಸ್ಥೆಯಿಂದಾಗಿ ಮಕ್ಕಳಿಗೆ ನ್ಯಾಯೋಚಿತವಾಗಿ ಸೇವೆಗಳು, ಸೌಲಭ್ಯಗಳು ಸಿಗುತ್ತಿಲ್ಲ. ಅದು ಆರೋಗ್ಯ ಕೇಂದ್ರಗಳು, ಅಂಗನವಾಡಿ, ಶಾಲೆ, ಮಕ್ಕಳ ವಿದ್ಯಾರ್ಥಿ ನಿಲಯಗಳು, ಅಂಗವಿಕಲತೆಯಿರುವ ಮಕ್ಕಳಿಗೆ ಸೌಲಭ್ಯ ಒದಗಿಸಬೇಕಾದ ಕೇಂದ್ರಗಳು, ಇಷ್ಟೆ ಅಲ್ಲ, ಅನಾಥ ಮಕ್ಕಳಿಗೆಂದು ಏರ್ಪಾಡಾಗುವ ನಿಲಯಗಳು, ಪೊಲೀಸ್, ಶಾಸಕಾಂಗ, ಮಾಧ್ಯಮ ಮತ್ತು ನ್ಯಾಯ ವ್ಯವಸ್ಥೆಯಲ್ಲೂ ಮಕ್ಕಳ ಬಗ್ಗೆ ತಾತ್ಸಾರ, ಭ್ರಷ್ಟಾಚಾರ, ನಿಧಾನಗತಿ ಒಡೆದು ಕಾಣುತ್ತದೆ. ಇಷ್ಟೆಲ್ಲದರ ನಡುವೆ ಕೆಲವು ಕುಟುಂಬಗಳು, ಸಮುದಾಯಗಳ ಮಕ್ಕಳು ಎಲ್ಲ ರೀತಿಯ ಅವಕಾಶಗಳನ್ನು ಪಡೆದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆಟೋಟಗಳಲ್ಲಿ ಮುಂದೆ ಬರುತ್ತಲೇ ಇದ್ದಾರೆ. ಆದರೂ, ನೂರಾರು ವರ್ಷಗಳಿಂದಲೂ ಆಳವಾಗಿ ಬೇರೂರಿರುವ 'ಉಳ್ಳವರು ಮತ್ತು ಇಲ್ಲದವರ ನಡುವಿನ ತಾರತಮ್ಯ ಹಿಂದೆಂದಿಗಿಂತಲೂ ಈಗ ಮಕ್ಕಳ ಮೇಲೆ ಗಟ್ಟಿಯಾದ ಪ್ರಭಾವ ಬೀರುತ್ತಿದೆ. ಜಾತಿ, ಧರ್ಮ, ಕೌಟುಂಬಿಕ ಮತ್ತು ಆರ್ಥಿಕ ಹಿನ್ನೆಲೆ, ಶಿಕ್ಷಣ ಮಟ್ಟ ಇವೇ ಮೊದಲಾದವುಗಳು, ಇರುವ ಅದೆಷ್ಟೋ ಕಾನೂನುಗಳು, ಯೋಜನೆಗಳು, ಕಾರ್ಯಕ್ರಮಗಳನ್ನು ಹಿಮ್ಮೆಟ್ಟಿಸುತ್ತಿವೆ
            ಎಲ್ಲದರ ನಡುವೆ ಒಂದಷ್ಟು ಆಶಾಕಿರಣಗಳಿವೆ. ಮಕ್ಕಳ ಪರವಾಗಿ ದನಿ ಎತ್ತುವವರ ದೊಡ್ಡ ಪಡೆ ಬೆಳೆದಿದೆ. ಬಾಲ್ಯ ವಿವಾಹಗಳನ್ನು ವಿರೋಧಿಸುವವರು, ಬಾಲಕಾರ್ಮಿಕರನ್ನು ವಿಮುಕ್ತಿಗೊಳಿಸುವವರು, ಮಕ್ಕಳ ನ್ಯಾಯಕ್ಕಾಗಿ ಹೊಡೆದಾಡುವವರು, ಶೈಕ್ಷಣಿಕ ಅವಕಾಶಗಳನ್ನು ಸೃಷ್ಟಿಸುವವರು, ಹಿಂದುಳಿದ ಜಾತಿ ವರ್ಗಗಳು, ಅಲ್ಪಸಂಖ್ಯಾತರ ಮಕ್ಕಳ ಏಳ್ಗೆಗಾಗಿ ಕಟಿಬದ್ಧರಾಗಿರುವವರು, ಒಂದೇ ಎರಡೇ. ಆದರೆ ಸಂಖ್ಯೆ ಬಹಳ ಕಡಿಮೆ. ಕಾರಣ, ಬಹುತೇಕರು ಈಗಲೂ ಮಕ್ಕಳನ್ನು ನೋಡುವುದು, 'ಸೇವೆಗಳನ್ನು ಪಡೆಯಲು' ಕಾದು ಕುಳಿತಿರುವವರು ಎಂಬಂತೆ. ಜೊತೆಗೆ ಸರ್ಕಾರದೊಡನೆ, ವ್ಯವಸ್ಥೆಯೊಡನೆ ಹೊಂದಾಣಿಕೆ ಮಾಡಿಕೊಂಡು, ಕಂತೆಗೊಂದು ಬೊಂತೆ ಎಂಬಂತೆ ಮಕ್ಕಳ ಹೆಸರಿನಲ್ಲಿ ಏನೋ ಒಂದು ಕಾರ್ಯಕ್ರಮ ಮಾಡಿ ಸರ್ಕಾರದ, ಇಲ್ಲವೇ ಬೆಂಬಲ ಸಂಸ್ಥೆಗಳ, ಕಾರ್ಪೋರೇಟ್ ಗಳಿಂದ ಹಣ ಪಡೆದು ವರದಿ ಸುತ್ತಿ, ಲೆಕ್ಕ ಬರೆಯುವವರೂ ಇದ್ದಾರೆ. ಮಕ್ಕಳನ್ನು ಅವರ ಹಕ್ಕುಗಳ ದೃಷ್ಟಿಕೋನದಿಂದ ನೋಡುವ ಮನಃಸ್ಥಿತಿ ಸರ್ಕಾರಕ್ಕಾಗಲೀ, ಸ್ವಯಂಸೇವಾ ಸಂಘಟನೆಗಳಿಗಾಗಲೀ ಇನ್ನೂ ಬಂದಿಲ್ಲ. ಮಕ್ಕಳ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಮೂಲವಿರುವುದೇ ಇಲ್ಲಿ. ಇಂದಿನ ತುರ್ತು ಅಗತ್ಯವೆಂದರೆ ಎಲ್ಲ ಸ್ವಯಂಸೇವಾ ಸಂಘಟನೆಗಳು ಮತ್ತು ಸರ್ಕಾರದ ಇಲಾಖೆಗಳು ತಮ್ಮ ಸಂಘಟನೆಗಳ ಗುರಿ ಉದ್ದೇಶಗಳಲ್ಲಿ ಮಕ್ಕಳ ಹಕ್ಕುಗಳ ಮೂಲ ತತ್ತ್ವಗಳನ್ನು ಅಳವಡಿಸಿಕೊಳ್ಳುವುದು, ಸಮಾಜಕಾರ್ಯ ಶಿಕ್ಷಣದಲ್ಲಿ ಮಕ್ಕಳ ಹಕ್ಕುಗಳ ವಿಚಾರಗಳನ್ನು ಬೋಧಿಸುವುದು ಮತ್ತು ಸರ್ಕಾರ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವಾಗ ಮಕ್ಕಳೊಡನೆ ಸಮಾಲೋಚನೆ ಮಾಡುವುದು
            ಭಾರತ ದೇಶದ ಅರ್ಧದಷ್ಟು ಇರುವ ಮಕ್ಕಳನ್ನು ನಾವು 'ಈಗ' ಗಂಭೀರವಾಗಿ ಪರಿಗಣಿಸದಿದ್ದರೆ, ಸದ್ಯದಲ್ಲೇ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ. ಮಕ್ಕಳಿಗೆ ನ್ಯಾಯೋಚಿತವಾಗಿ ಹಕ್ಕಿನ ಸ್ವರೂಪದಲ್ಲಿ ಸಿಗಬೇಕಿರುವುದನ್ನು ಒದಗಿಸಲು ನಾವೀಗ ಸೋತಲ್ಲಿ ಮುಂದಿನ ದಿನಗಳಲ್ಲಿ ಅನಾರೋಗ್ಯಕರ ಪರಿಸ್ಥಿತಿಗಳು, ಕಾನೂನು ಸುವ್ಯವಸ್ಥೆಯಲ್ಲಿನ ಏರುಪೇರು, ಉತ್ಪಾದಕತೆಗೆ ಬೀಳುವ ಏಟು, ಇತ್ಯಾದಿಗಳನ್ನು ಸಮಾಜ ಮತ್ತು ಸರ್ಕಾರ ಎದುರಿಸಬೇಕಾಗುತ್ತದೆ. ಹೀಗಾಗಿ, ಮಕ್ಕಳೆಂದರೆ 'ಇಂದಿನ ಪ್ರಜೆಗಳು' ಎಂಬ ಮನೋಭೂಮಿಕೆಗೆ ನಾವು ಸಿದ್ಧರಾಗಬೇಕು ಮತ್ತು ಅದಕ್ಕಾಗಿ ಶ್ರಮಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ನ್ಯಾಯಾಲಯಗಳು ಮಕ್ಕಳ ಪರವಾಗಿ ಹೊರಡಿಸಿರುವ ನಿರ್ಣಯಗಳು (ಬಾಲಕಾರ್ಮಿಕ ಪದ್ಧತಿ) ಅಸಮರ್ಥನೀಯ, ಸರ್ಕಾರಗಳು ಕೈಗೊಳ್ಳುತ್ತಿರುವ ಕಾನೂನು ಬದಲಾವಣೆ ಅಥವಾ ಹೊಸ  ಕಾಯಿದೆಗಳ ನಿರ್ಮಾಣ (ಶಿಕ್ಷಣ ಹಕ್ಕು ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ನಿರ್ಮಾಣ) ಮತ್ತು ಮಕ್ಕಳ ಮೇಲಾಗುವ ಅಪರಾಧಗಳ ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಇವೇ ಮೊದಲಾದವನ್ನು ಸಮಾಜಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕಿದೆ. ಮೂಲಕ ನಮ್ಮೆಲ್ಲ ಕೆಲಸಗಳು, ನಿರ್ಣಯಗಳು, ಚಿಂತನೆಗಳಲ್ಲಿ ಮಕ್ಕಳ ಪರವಾದ ನಿಲುವನ್ನು ಕೈಗೊಳ್ಳಬೇಕಿದೆ.  

-ವಾಸುದೇವ ಶರ್ಮಾ ಎನ್.ವಿ.
ಅತಿಥಿ ಸಂಪಾದಕ


No comments:

Post a Comment