Thursday, September 26, 2013

ಸರಕಾರಿ ಖಾಸಗಿ ಯೋಜನೆ



ಹಿರಿಯ ನಾಗರೀಕರಿಗಾಗಿ ಸರ್ಕಾ ರವು ಹಮ್ಮಿಕೊಂಡಿರುವ ಯೋಜನೆಗಳು
ಪೊನ್ನಸ್ವಾಮಿ .ಎನ್, ನಿರಾತಂಕ

ವೃದ್ಧಾಶ್ರಮಗಳು
            ರಾಜ್ಯ ಸರ್ಕಾರವು ರಾಜ್ಯದ 29 ಜಿಲ್ಲೆಗಳಲ್ಲಿ 27 ವೃದ್ಧಾಶ್ರಮಗಳನ್ನು(ಉಡುಪಿ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಯನ್ನು ಹೊರತುಪಡಿಸಿ) ನಡೆಸಲು ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತದೆ. ಯೋಜನೆಯಡಿಯಲ್ಲಿ 25 ವೃದ್ಧರು ಇರುವ ಒಂದು ಘಟಕಕ್ಕೆ ಸಿಬ್ಬಂದಿ ವೆಚ್ಚ, ನಿರ್ವಹಣಾ ವೆಚ್ಚ, ಔಷಧಿ, ಕಟ್ಟಡ ಬಾಡಿಗೆ, ವೃತ್ತ ಪತ್ರಿಕೆ ಹಾಗೂ ಇತರೆ ವೆಚ್ಚಗಳಿಗಾಗಿ ಯೋಜನೆಯ ವೆಚ್ಚದ ಶೇ.90 ರಷ್ಟು ಅನುದಾನವನ್ನು ಸ್ವಯಂ ಸೇವಾ ಸಂಸ್ಥೆಗೆ ನೀಡುತ್ತದೆ. ಉಳಿದ ಶೇ.10 ರಷ್ಟನ್ನು ಸಂಸ್ಥೆಯು ಭರಿಸಬೇಕಾಗುತ್ತದೆ.

ಹಗಲು ಯೋಗಕ್ಷೇಮ ಕೇಂದ್ರಗಳು
            ರಾಜ್ಯದ 4 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾಂ ಮತ್ತು ಗುಲ್ಬರ್ಗಾಗಳಲ್ಲಿ 4 ಹಗಲು ಯೋಗಕ್ಷೇಮ ಕೇಂದ್ರಗಳನ್ನು ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ. ಒಂದೊಂದು ಕೇಂದ್ರದಲ್ಲಿ ಸುಮಾರು 50-150 ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಯೋಜನೆಗೆ ಸರ್ಕಾರದಿಂದ ಅನುದಾನವನ್ನು ಮಂಜೂರು ಮಾಡಲಾಗುತ್ತದೆ.

ಹಿರಿಯ ನಾಗರೀಕರಿಗೆ ಸಹಾಯವಾಣಿ ಕೇಂದ್ರಗಳು (ಸುಂಕ ರಹಿತ ದೂರವಾಣಿ ಸಂಖ್ಯೆ: 1090)
            ಹಿರಿಯ ನಾಗರೀಕರು ಕಿರುಕುಳ, ಹಣಕಾಸಿನ ಶೋಷಣೆ, ಮಾನಸಿಕ ತುಮುಲ ಮತ್ತು ದುರ್ಬಲರಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇಂತಹ ಸಮಸ್ಯೆಗಳ ನಿವಾರಣೆಗಾಗಿ ಹಾಗೂ ತುರ್ತು ಸಹಾಯಕ್ಕಾಗಿ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರವನ್ನು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾಂ, ಗುಲ್ಬರ್ಗಾ, ದಾವಣಗೆರೆ, ರಾಯಚೂರು, ಬಳ್ಳಾರಿ, ಶಿವಮೊಗ್ಗ, ಬೀದರ್, ಬಾಗಲಕೋಟೆ, ತುಮಕೂರು, ಕೋಲಾರ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ, ಇದನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಿಂದ ನಡೆಸಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅನುಷ್ಠಾನಗೊಳಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರ ಯೋಜನೆಯೊಂದಿಗೆ ಸೇರ್ಪಡೆ ಮಾಡಿ ಇಲಾಖೆ ಮೂಲಕ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರವನ್ನು ನಡೆಸಲು ಆದೇಶ ಹೊರಡಿಸಲಾಗಿದೆ.

ಹಿರಿಯ ನಾಗರೀಕರಿಗೆ ಗುರುತಿನ ಚೀಟಿಗಳು:
            ರಾಜ್ಯದಲ್ಲಿ ಹಿರಿಯ ನಾಗರೀಕರಿಗೆ ಗುರುತಿನ ಚೀಟಿಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಿಂದ ಜಿಲ್ಲಾ ಕಛೇರಿಗಳ ಮೂಲಕ ನೀಡಲಾಗುತ್ತಿದೆ

ವೃದ್ಧಾಪ್ಯ ವೇತನ:
            ರಾಜ್ಯದಲ್ಲಿರುವ ಬಡ ಹಿರಿಯರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳೂ ರೂ.400/-ಗಳ ವೃದ್ಧಾಪ್ಯ ವೇತನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ಸದರಿ ಸೌಲಭ್ಯವನ್ನು ಸಂಬಂಧಿಸಿದ ತಹಶೀಲ್ದಾರ್ ಕಛೇರಿಯಿಂದ ಪಡೆಯಬಹುದಾಗಿದೆ.

ಸಂಧ್ಯಾ ಸುರಕ್ಷ ಯೋಜನೆ:
            ಕಂದಾಯ ಇಲಾಖೆಯಿಂದ ಸರ್ಕಾ ರದ ಆದೇಶ ಸಂಖ್ಯೆ: ಆರ್.ಡಿ.97 ಎಂ.ಎಸ್.ಟಿ:2007 ದಿನಾಂಕ: 2.7.2007 ಯೋಜನೆಯಡಿ ಸಾಮಾಜಿಕ ಭದ್ರತಾ ರೂಪದಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ರೂ.400/-ಗಳ ಆರ್ಥಿಕ ಸಹಾಯಧನವನ್ನು ಮಾಸಿಕವಾಗಿ ನೀಡಲಾಗುತ್ತಿದೆ.

ಅರ್ಹತೆಗಳು:
1.      65 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
2.      ಸ್ಥಳೀಯ ಕಂದಾಯ ಅಧಿಕಾರಿಗಳ ದೃಢೀಕರಣದಂತೆ ಮನವಿದಾರರ ಮತ್ತು ಅವರ ಪತಿ ಅಥವಾ ಪತ್ನಿಯವರ ವಾರ್ಷಿಕ ಆದಾಯವು ರೂ.20,000ಕ್ಕಿಂತ ಹೆಚ್ಚಾಗಿರಬಾರದು.
3.      ಮಕ್ಕಳ ಆದಾಯವು ತಂದೆ ತಾಯಿಯವರ ವಾರ್ಷಿಕ ಆದಾಯಕ್ಕೆ ಪರಿಗಣಿಸಲ್ಪಡುವುದಿಲ್ಲ.
4.      ಪತಿ ಅಥವಾ ಪತ್ನಿಯ ಜಂಟಿ ಖಾತೆಯಲ್ಲಿ ರೂ.10,000ಕ್ಕಿಂತ ಹೆಚ್ಚಿನ ಠೇವಣಿ ಇರಬಾರದು.
5.      ಯಾವುದೇ ರೀತಿಯ ಇತರ ಮಾಸಾಶನ: ಪಿಂಚಣಿಯನ್ನು ಪಡೆಯುತ್ತಿರುವವರು ವೇತನಕ್ಕೆ ಅರ್ಹರಾಗಿರುವುದಿಲ್ಲ.
6.      ಕೆಳಗಿನ ವಲಯಗಳಲ್ಲಿ ಇರುವ ಅಭ್ಯರ್ಥಿಗಳು ಯೋಜನೆಯಡಿ ಸೌಲಭ್ಯ ಪಡೆಯಬಹುದಾಗಿದೆ. ಅತಿ ಸಣ್ಣ ರೈತರು, ಸಣ್ಣ ರೈತರು, ಕೃಷಿ ಕಾರ್ಮಿಕರು, ಮೀನುಗಾರರು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಆದರೆ ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರೆಂದರೆ (Regulation of Employment & Conditions of services) Act 1996 ಇದರ ಪ್ರಕಾರ ಅರ್ಹರಿರುವುದಿಲ್ಲ. ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಬೇಕಾಗಿದ್ದಲ್ಲಿ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರನ್ನು ಸಂಪರ್ಕಿಸಬಹುದು.

ಹಿರಿಯ ನಾಗರೀಕರಿಗೆ ಬಸ್ ಪ್ರಯಾಣದಲ್ಲಿ ರಿಯಾಯಿತಿ ಯೋಜನೆ:
            65 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯೋಮಾನದ ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಯೋಜನೆಯ ಪ್ರಯೋಜನ ಪಡೆಯಲು ಹಿರಿಯ ನಾಗರೀಕರು ಇಲಾಖೆ ವತಿಯಿಂದ ನೀಡಲಾಗುವ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿ, ಕೆ.ಎಸ್.ಆರ್.ಟಿ.ಸಿ ಯಿಂದ ವಿತರಿಸಲಾದ ಗುರುತಿನ ಚೀಟಿ ಇವುಗಳನ್ನು ತೋರಿಸಬೇಕಾಗುತ್ತದೆ.

ಕೇಂದ್ರ ಸರ್ಕಾರದ ಯೋಜನೆಗಳು:
ವೃದ್ಧಾಶ್ರಮಗಳು
            ಕೇಂದ್ರ ಅನುದಾನ ಯೋಜನೆಯಡಿ ರಾಜ್ಯದಲ್ಲಿ 54 ವೃದ್ಧಾಶ್ರಮಗಳಿಗೆ ಅನುದಾನವನ್ನು ಮಂಜೂರು ಮಾಡುತ್ತಿದ್ದು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವೃದ್ಧಾಶ್ರಮಗಳನ್ನು ನಡೆಸಲಾಗುತ್ತಿದೆ.

ಸಂಚಾರಿ ಆರೋಗ್ಯ ಘಟಕಗಳು
             ಸ್ವಯಂ ಸೇವಾ ಸಂಸ್ಥೆಗಳು ಸಂಚಾರಿ ಆರೋಗ್ಯ ಘಟಕಗಳನ್ನು ನಡೆಸಲು ಮುಂದೆ ಬಂದಲ್ಲಿ ಕೇಂದ್ರ ಸರ್ಕಾರವು ಅನುದಾನ ನೀಡುತ್ತಿದೆ. ರಾಜ್ಯದಲ್ಲಿ 2 ಸ್ವಯಂ ಸೇವಾ ಸಂಸ್ಥೆಗಳು ಘಟಕಗಳನ್ನು ನಡೆಸುತ್ತಿವೆ.

ಹಗಲು ಯೋಗಕ್ಷೇಮ ಕೇಂದ್ರ
            ಕೇಂದ್ರ ಸರ್ಕಾರವು ಹಗಲು ಯೋಗಕ್ಷೇಮ ಕೇಂದ್ರಗಳನ್ನು ನಡೆಸಲು ಶೇ.90 ಅನುದಾನವನ್ನು ನೀಡುತ್ತಿದ್ದು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.
           
ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣೆ ಕಾಯ್ದೆ 2007 
            ಕೇಂದ್ರ ಸರ್ಕಾರವು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣೆ ಕಾಯ್ದೆ 2007 ಅನ್ನು ಜಾರಿಗೊಳಿಸಿದ್ದು, ಇದನ್ನು 1/4/2008 ರಿಂದ ರಾಜ್ಯ ಸರ್ಕಾರದಲ್ಲಿ ಜಾರಿಗೊಳಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರೊಂದಿಗೆ, ಕಾಯ್ದೆ-2007 ( ಕೇಂದ್ರ ಶಾಸನ 2007 ನಿಯಮ-56 ) ಪರಿಚ್ಚೇದ 7ರನ್ವಯ ಸ್ಥಾಪಿಸಿರುವ ನಿರ್ವಹಣಾ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಅಂಗೀಕರಿಸಲು ನಿಯಮ 15 ಉಪನಿಯಮ (1) ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಪ್ರತಿ ಜಿಲ್ಲೆಗೆ ಒಂದರಂತೆ ಮೇಲ್ಮನವಿ ನ್ಯಾಯಮಂಡಳಿಯನ್ನು ಸ್ಥಾಪಿಸಿ, ಸದರಿ ಕಾಯ್ದೆಯ ಸೆಕ್ಷನ್ 15 ಉಪನಿಯಮ 2ರನ್ವಯ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷರಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಿ ಅಧಿಸೂಚನೆಯನ್ನು ದಿನಾಂಕ 19.2.2009ರಂತೆ ಹೊರಡಿಸಿದೆ. ಹಾಗೂ ಕಾಯ್ದೆ-2007 ಪರಿಚ್ಛೇದ 7 ಉಪ ನಿಯಮ (1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರತಿ ಕಂದಾಯ ಉಪವಿಭಾಗದಲ್ಲಿ ಒಂದು ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿದೆ ಮತ್ತು ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ಆಯಾ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರು (ಉಪವಿಭಾಗಾಧಿಕಾರಿ) ಇವರನ್ನು ನೇಮಕ ಮಾಡಿ  ಅಧಿಸೂಚನೆಯನ್ನು ದಿನಾಂಕ 19.2.2009ರಂತೆ ಹೊರಡಿಸಿದೆ ಹಾಗೂ ಕಾಯ್ದೆ-2007 (ಕೇಂದ್ರ ಶಾಸನ-2007 ನಿಯಮ56) ಕಾಯ್ದೆ ಪರಿಚ್ಛೇದ 22(1) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಸದರಿ ಕಾಯ್ದೆಯಡಿ ಇರುವ ಉಪಬಂಧಗಳ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಜವಾಬ್ದಾರಿ ವಹಿಸುವ ಅಧಿಕಾರಿಗಳೆಂದು ನೇಮಕ ಮಾಡಿ ದಿನಾಂಕ 03/09/09 ರಂತೆ ಅಧಿಸೂಚನೆ ಹೊರಡಿಸಿದೆ.



No comments:

Post a Comment