Wednesday, September 25, 2013

ನೀತಿ ಸಂಹಿತೆಗಳಿವೆ ಪ್ರಜ್ಞಾಜಾಗೃತಿ ಇಲ್ಲ !





ಹೊಸ ಹೊಸ ಆಲೋಚನೆಗಳು, ಸವಾಲುಗಳು, ಚಿಂತನೆಗಳು ಎಲ್ಲರಿಗೂ ಬರುತ್ತವೆ. ಆದರೆ, ಅವುಗಳನ್ನು ಕಾರ್ಯಗತಮಾಡಲು ನಾವೆಲ್ಲರೂ ಹಿಂಜರಿಯುತ್ತೇವೆ. ಮುಂದೆಹೋಗಿ ಪ್ರಯತ್ನ ಮಾಡುವವರಿಗೆ ಸಹಕಾರ ಮಾಡುವ ಮನಸ್ಸು ಮಾಡುವುದಿಲ್ಲ. ನಮ್ಮ ಮನೆಯ ಸಮೀಪವೇ ಕಸದ ತೊಟ್ಟಿ ಇಲ್ಲದಿದ್ದರೂ ನಾವು ದೂರು ನೀಡುವುದಿಲ್ಲ, 24 ಗಂಟೆ ಬೀದಿ ದೀಪ ಉರಿಯುತ್ತಿದರೂ ಆರಿಸುವುದಿಲ್ಲ, ಪಕ್ಕದ ಮನೆಯಲ್ಲಿ ಜಗಳ ನಡೆಯುತ್ತಿದ್ದರೆ ಬಿಡಿಸಲು ನಾವು ಮುಂದೆ ಹೋಗುವುದಿಲ್ಲ. ಇಂಥ ಅನೇಕ ಸಂಗತಿಗಳು ಸಾಮಾನ್ಯವಾಗಿಬಿಟ್ಟಿವೆ. ಹಾಗೆಯೇ ನಮ್ಮ ವೃತ್ತಿಗೆ ಬಂದರೆ ಹಲವರು ಎಂ.ಎಸ್.ಡಬ್ಲ್ಯೂ. ಪದವೀಧರರಾಗಿ ಕೆಲಸಕ್ಕೆ ಸೇರಲು ಹೋಗುತ್ತಿದ್ದಾರೆ. ಕೆಲಸಕ್ಕೆ ಬೇಕಾದ ಅರ್ಹತೆಗಳ ಬಗ್ಗೆ ಅರಿವಿಲ್ಲ. ಅವರಿಗೆ ಸಹಕರಿಸಲು ನಮ್ಮಲ್ಲಿ ಸಮಯವಿಲ್ಲ. ಈಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಹ್ವಾನಿಸಿದರೂ ಭಾಗವಹಿಸುವುದಿಲ್ಲ. ಮೇಲಿನ ಎಲ್ಲವನ್ನೂ ನೋಡಿದಾಗ ಗೊ.ರು. ಚೆನ್ನಬಸಪ್ಪನವರು ಹೇಳಿದ ವಾಕ್ಯ ನೀತಿ ಸಂಹಿತೆಗಳಿವೆ, ನಮ್ಮಲ್ಲಿ ಪ್ರಜ್ಞಾಜಾಗೃತಿ ಇಲ್ಲವೆಂದೆನಿಸುತ್ತದೆ.
            ನಮ್ಮಲ್ಲಿ Individually Excellent ಆಗಬೇಕೆಂಬ ತವಕಕ್ಕೆ ಕೊಡುವ ಮಹತ್ತ್ವ ಗುಂಪಿಗೆ, ಸಂಘ ಜೀವನಕ್ಕೆ ಕೊಡುವುದಿಲ್ಲ. ಸಮಾಜಕಾರ್ಯಕರ್ತ ಯಾರು? ಎಂದರೆ ನಮ್ಮ ಜನಸಾಮಾನ್ಯರು ಕೊಡುವ ಉತ್ತರ: ರಾಜಕಾರಣಿ, ಎನ್ಎಸ್ಎಸ್, ಆರ್ಎಸ್ಎಸ್. ಅಂದರೆ, ನಾವು ಸಮಾಜಕಾರ್ಯಕರ್ತರಾಗಿ ಜನರ ಬಳಿಗೆ ಹೋಗುವ ಕೆಲಸ ಮಾಡಿಲ್ಲ.
            ರಾಮರಾಜ್ಯದ ಕನಸನ್ನು ಹೊತ್ತ ಉದ್ಯೋಗ ಖಾತ್ರಿ ಯೋಜನೆ ಮತ್ತು ಸ್ಥಳೀಯ ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಪಂಚಾಯಿತಿಗಳ ಅಭಿವೃದ್ಧಿಗೆ ನೇಮಕಗೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಮಂದಾಕಿನಿ, ಗುಲಬರ್ಗಾ ಜಿಲ್ಲೆಯ ಪಿಡಿಒ) ಆತ್ಮಹತ್ಯೆ ಹಾಗೂ ಸಾಮೂಹಿಕ ರಾಜೀನಾಮೆಗೆ ಸರ್ಕಾರಗಳೇ ಹೊಣೆಗಾರಿಕೆಯನ್ನು ಹೊರಬೇಕಾಗಿದೆ. ಅಪ್ರಸ್ತುತ ನೇಮಕಾತಿ ಪದ್ಧತಿ, ಅರ್ಹತೆಯಿಲ್ಲದವರ ನೇಮಕ(ಕೇವಲ ಪದವಿ) ಹಾಗೂ ಪಂಚಾಯಿತಿ ಅಧ್ಯಕ್ಷರ, ಸದಸ್ಯರ ದಬ್ಬಾಳಿಕೆ, ದೌರ್ಜನ್ಯ ಇವುಗಳಿಂದ ನೊಂದು ರೋಸಿಹೋದ ಯುವ ಅಧಿಕಾರಿಗಳು ಪರಿಸ್ಥಿತಿಯನ್ನು ಎದುರಿಸಲಾಗದೆ ಆತ್ಮಹತ್ಯೆ ಹಾಗೂ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣವನ್ನು ಪಂಚಾಯಿತಿ ಸದಸ್ಯರುಗಳು ಬೋಗಸ್ ಬಿಲ್ಲುಗಳನ್ನು ಸೃಷ್ಟಿಸಿ  ನುಂಗಿ ನೀರು ಕುಡಿಯುತ್ತಿರುವುದು ಸಮಾಜದ ಬೇರು ಮಟ್ಟದಲ್ಲಿ ನೆಲೆಯೂರಿರುವ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಾಮಾಜಿಕ ವಿಜ್ಞಾನಗಳ ಜ್ಞಾನವನ್ನು ಹೊಂದಿರುವ ಪದವೀಧರರನ್ನು ನೇಮಕ ಮಾಡಿಕೊಂಡಿದ್ದರೆ ಪರಿಸ್ಥಿತಿಯನ್ನು ಸುಧಾರಿಸಿ ಭ್ರಷ್ಟಾಚಾರಿ ಅಧ್ಯಕ್ಷರು, ಸದಸ್ಯರುಗಳನ್ನು ಸರಿ ದಾರಿಗೆ ತರಬಹುದಾಗಿತ್ತು
            ಉಪ್ಪುತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆ ಮಾತು ಕಾಲ-ದೇಶಗಳ ಆಚೆಗೂ ಅನ್ವಯವಾಗುವಂಥದ್ದು. ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ನ್ಯಾಯಾಂಗ ವ್ಯವಸ್ಥೆ ನೀಡುತ್ತಿರುವ ತೀರ್ಪುಗಳು ಜನಸಾಮಾನ್ಯರ ಮನದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಭಾವನೆಯನ್ನು ಮೂಡಿಸುತ್ತಿವೆ. ಸಂತ್ರಸ್ತರು ನಿಟ್ಟುಸಿರು ಬಿಡುವಂತಾಗಿದೆ. ಭ್ರಷ್ಟಾಚಾರಿಗಳಲ್ಲಿ ನಡುಕ ಮೂಡಿಸಿದೆ.
            ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ ಸುಮಾರು 10ಕೋಟಿಗಿಂತ ಹೆಚ್ಚು ಮಕ್ಕಳು ಪ್ರಾಥಮಿಕ ಶಾಲೆಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಾರೆ. ಸಂಖ್ಯೆ, ಇವರು ಹತ್ತನೆಯ ತರಗತಿ ಮುಗಿಸುವುದರೊಳಗೆ 2ಕೋಟಿಗಿಂತ ಕಡಮೆಯಿರುತ್ತದೆ. ಉಳಿದ 8ಕೋಟಿ ಮಕ್ಕಳು ಏನಾದರು ಎಂಬುದು ನಮಗೆ ತಿಳಿಯದಿರುವ ಸತ್ಯವೇನಲ್ಲ! ಸರಿಯಾದ ಆರೈಕೆ ಇಲ್ಲದೆ, ಶುಲ್ಕ ಪಾವತಿಸಲಾಗದೆ, ಸರಿಯಾದ ಮಾರ್ಗದರ್ಶನವಿಲ್ಲದೆ ಆರ್ಥಿಕ ಮುಗ್ಗಟ್ಟಿನಿಂದ ವಿದ್ಯಾಭ್ಯಾಸ ಮುಂದುವರಿಸಲಾಗದೆ ಶಾಲೆಯನ್ನು ಮಧ್ಯದಲ್ಲೇ ಬಿಟ್ಟು ನಿರುದ್ಯೋಗಿಗಳಾಗುತ್ತಿದಾರೆ. ಘಟನೆಗಳು ಬಾಲಪರಾಧಿಗಳಿಗೆ, ಬಾಲಕಾರ್ಮಿಕ ಪದ್ಧತಿಗಳಿಗೆ, ನಿರುದ್ಯೋಗಕ್ಕೆ ಕಾರಣಗಳೆಂದು ಪರಿಗಣಿಸಿದ ಕೇಂದ್ರ ಸರ್ಕಾರವು ಒಂಬತ್ತನೆಯ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ಶಿಕ್ಷಣವನ್ನು ಕಡ್ಡಾಯ ಮಾಡುವ ಪ್ರಯತ್ನ ಸ್ವಾಗತಾರ್ಹ ಕ್ರಮವಾಗಿದೆ. ಹಾಗೆಯೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಮಾನವ ಸಂಪನ್ಮೂಲ ಸಚಿವರಾದ ಕಪಿಲ್ ಸಿಬಲ್ರವರ ಕನಸಿನ ಕೂಸು ಯೋಜನೆಯಾದ ಅತೀ ಕಡಮೆ ಬೆಲೆಯಲ್ಲಿ ಕಂಪ್ಯೂಟರ್ (Laptop) ಒದಗಿಸಿ ಮಕ್ಕಳ ತಾಂತ್ರಿಕ ಜ್ಞಾನವನ್ನು ಹೆಚ್ಚಿಸಿ ವಿದೇಶೀ ತಂತ್ರಜ್ಞಾನಕ್ಕೆ ಸರಿಸಮನಾಗಿ ರೂಪಿಸುವ ಯೋಜನೆಯಾಗಿದ್ದು, ಭಾರತದಂಥ ಹಳ್ಳಿಗಳ ದೇಶಕ್ಕೆ ವರದಾನವೇ ಸರಿ. ಇದರ ಅನುಷ್ಠಾನ ಮಾತ್ರ ಕಷ್ಟಸಾಧ್ಯ!
            ನೆರೆ ಸಂತ್ರಸ್ತರ ಬದುಕು ಹಸನಾಗುವ ಮುನ್ನ ನಾಡಲ್ಲಿ ಬರದ ಛಾಯೆ ಮೂಡುತ್ತಿದ್ದರೂ, ಜನರ ಬಗ್ಗೆ ಕಾಳಜಿಯಿಲ್ಲದ ರಾಜಕಾರಣಿಗಳು ಮತ್ತು ಸಮೂಹ ಮಾಧ್ಯಮಗಳು ತಮ್ಮ ನೈತಿಕ ಮೌಲ್ಯಗಳನ್ನೇ ಮರೆತು ವರ್ತಿಸುತ್ತಿರುವುದು ಸಮಾಜದಲ್ಲಿನ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿಯಾಗಿದೆ. ಒಂದೆಡೆ ದೇಶದ ಬಡಜನರು ಆಹಾರಕ್ಕೆ ಪರದಾಡುತ್ತಿದ್ದರೆ. ಮತ್ತೊಂದೆಡೆ ಅಪಾರ ಪ್ರಮಾಣದ ಆಹಾರವನ್ನು ಎಸೆಯಲಾಗುತ್ತಿದೆ. ಬೆಂಗಳೂರು ನಗರವೊಂದರಲ್ಲೇ ವಾರ್ಷಿಕ 250 ಕೋಟಿ ರೂ ಮೊತ್ತದ ಆಹಾರವನ್ನು ವ್ಯರ್ಥವಾಗಿ ಚೆಲ್ಲಲಾಗುತ್ತಿದ್ದರೆ, ರಾಜ್ಯದ-ದೇಶದ ಅನೇಕ ಕಡೆ ಒಪ್ಪತ್ತಿನ ಅನ್ನಕ್ಕೆ ಹಾಹಾಕಾರವಿದೆ. ಹಸಿವಿನಿಂದ ಸಾಯುವಂಥ ಸ್ಥಿತಿ ನಿರ್ಮಾಣವಾಗುತ್ತಿದೆ. ನಿಟ್ಟಿನಲ್ಲಿ ಸರ್ಕಾರ ಕೃಷಿ ಮತ್ತು ಅದರ ಉತ್ಪನ್ನಗಳ ಸಂರಕ್ಷಣೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಆಹಾರ ಪದಾರ್ಥಗಳು ವಿಷಮಯವಾಗುವುದನ್ನು ತಡೆಯಲು ಸಾವಯವ ಕೃಷಿ ಪದ್ಧತಿಗಳಿಗೆ ಪ್ರೋತ್ಸಾಹಿಸಿ ಭಾರತದ ಆರ್ಥಿಕತೆಯ ಬೆನ್ನೆಲುಬಾದ ಕೃಷಿಗೆ ಪ್ರೋತ್ಸಾಹ ನೀಡಿ ಯುವಕರ ಮನಸ್ಸನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕಾಗಿದೆ. ಕೇವಲ ಯುವ ಕ್ರೀಡೆ, ಯುವ ಉತ್ಸವ, ಯುವ ರಂಜನೆ ಎನ್ನುವ ಹೆಸರಿನಲ್ಲಿ ಕೊಟ್ಯಂತರ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿ, ಯುವ ಕೃಷಿಕರನ್ನು ಗುರುತಿಸಿ ಅವರಲ್ಲಿ ಭರವಸೆ ಮೂಡಿಸಬೇಕಾಗಿದೆ.
            ವಾಹನ ಸಾಲ, ಗೃಹ ಸಾಲ, ಖರೀದಿ ಸಾಲ ಎಂದು ಕೋಟಿ ಕೋಟಿ ಸಾಲ ಸೌಲಭ್ಯಗಳನ್ನು ಕನಿಷ್ಠ ಖಾತ್ರಿಯ ಮೇಲೆ ನೀಡುವ ದೇಶದ ಬ್ಯಾಂಕುಗಳು ಕೃಷಿಯ ಭೂಮಿಯನ್ನು ಅಡವಿಟ್ಟ ಕೃಷಿಕನಿಗೆ 50ಸಾವಿರ ರೂ. ಗಳಿಂತ ಹೆಚ್ಚು ಸಾಲ ಕೊಟ್ಟರೆ ಅದು ಅವನ ಅದೃಷ್ಟ. ವ್ಯವಸ್ಥೆ ಬದಲಾಗಾಬೇಕಿದೆ, ಬದಲಾಯಿಸಬೇಕಾಗಿದೆ. ಸಮಾಜಕಾರ್ಯಕರ್ತರಾದ ನಾವುಗಳು ಪದವಿ ಪಡೆದು ನಗರಾಭಿಮುಖವಾಗಿ ಮುಖ ಮಾಡದೆ ಅನ್ನದಾತನ ಕಡೆಗೆ ಕನಿಷ್ಠ ಕರುಣೆಯನ್ನಾದರೂ ತೋರಿಸಬೇಕಾಗಿದೆ. ನಿಟ್ಟಿನಲ್ಲಿ ಸಮಾಜಕಾರ್ಯಕರ್ತರ ಪಾತ್ರ ಹಿರಿದಾಗಿದ್ದು ಸಂಘಟನೆಗಳ ಮೂಲಕ ಪ್ರಯತ್ನಿಸೋಣ.
            ಸರಳ ಸಮಾಜಕಾರ್ಯ ಎಂಬ ಲೇಖನ ಮಾಲೆ ವಿನೂತನ ಪ್ರಯೋಗ ಡಾ.ಎಚ್.ಎಂ.ಮರುಳಸಿದ್ಧಯ್ಯನವರ ನೇತೃತ್ವದಲ್ಲಿ ನಿರಾತಂಕ ಬಳಗ ಸಾಯಿಮಣಿ ಪ್ರಕಾಶನದ ಸಹಯೋಗದಲ್ಲಿ 2012ರಲ್ಲಿ ಮೂಡಿಬರುತ್ತಿದೆ.
            ಸಮಾಜಕಾರ್ಯದ ಹೆಜ್ಜೆಗಳ ಮಾಸಪತ್ರಿಕೆಯು ನವೆಂಬರ್ 2011ಕ್ಕೆ ತನ್ನ ಪ್ರಥಮ ವರ್ಷವನ್ನು ಪೂರೈಸುತ್ತಿದೆ. ನಮ್ಮ ಪತ್ರಿಕೆಗೆ ಸಹಕಾರ ನೀಡಿದ ಎಲ್ಲ ವೃತ್ತಿಪರರಿಗೂ ನಿರಾತಂಕ ತಂಡ ಋಣಿಯಾಗಿದೆ.

ರಮೇಶ  ಎಂ.ಎಚ್.



No comments:

Post a Comment