Wednesday, September 25, 2013

"ಇಂದು ನಾವು ರೋಗಿಷ್ಟ ಸಮಾಜದಲ್ಲಿ ವಾಸಿಸುತ್ತಿದ್ದೇವೆ"

ಸಂಪಾದಕೀಯ

"ಇಂದು ನಾವು ರೋಗಿಷ್ಟ ಸಮಾಜದಲ್ಲಿ ವಾಸಿಸುತ್ತಿದ್ದೇವೆ"
ಎರಿಕ್ ಪ್ರಾಮ್

            ಪ್ರಪಂಚದಾದ್ಯಂತ ಮಾರ್ಚ್ 20 ರಂದು ಸಮಾಜಕಾರ್ಯಕರ್ತರ ದಿನವನ್ನಾಗಿ ಆಚರಿಸಲಾಗುತ್ತಿದೆ.   ದಿನವನ್ನು ಕಳೆದ ವರ್ಷ ಆಚರಿಸಿದ ನೆನಪು ಮರೆಯಾಗುವ ಮುಂಚೆಯೇ ವರ್ಷದ ಆಚರಣೆಗೆ ಕರ್ನಾಟಕದಾದ್ಯಂತ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ನಮ್ಮ ವೃತ್ತಿಪರತೆಯ ಬದ್ಧತೆಯನ್ನು ಅಣಕಿಸುವಂತಿದೆ. ಇದೊಂದೆ ಅಲ್ಲದೆ ರೀತಿಯ ಯಾವುದೇ ವೃತ್ತಿಪರ ಕಾರ್ಯಕ್ರಮಗಳು ನಡೆದಾಗಲೂ ನಮ್ಮ ಸಮಾಜಕಾರ್ಯ ವೃತ್ತಿಪರರು ಪ್ರತಿಕ್ರಿಯಿಸುವುದಿಲ್ಲ. ಕೇವಲ ವೃತ್ತಿಯಿಂದ ತಮ್ಮ ತಮ್ಮ ಭವಿಷ್ಯ, ಆರ್ಥಿಕ ಭದ್ರತೆಯನ್ನು ಮಾತ್ರ ನಿರೀಕ್ಷಿಸುವುದು ಎಷ್ಟು ಸರಿ?      ಎರಿಕ್ ಪ್ರಾಮ್ ( Eric Fromm 1900-1930) ಇಂದು ನಾವು ಒಂದು  ರೋಗಿಷ್ಠ ಸಮಾಜದಲ್ಲಿ ವಾಸಿಸುತ್ತಿದ್ದೇವೆ" ಎನ್ನುವ ಮಾತು ನಮ್ಮ ಸಮಾಜಕಾರ್ಯ ವೃತ್ತಿಗೆ ಅನ್ವಯಿಸುವುದಾದರೆ ನಾವು ಇಂದು ಒಂದು ರೋಗಿಷ್ಠ ವೃತ್ತಿಯಲ್ಲಿ ವೃತ್ತಿನಿರತರಾಗಿದ್ದೇವೆ ಎಂಬುದರಲ್ಲಿ ಎರಡು ಮಾತಿಲ್ಲ. 75 ವರ್ಷಗಳ ಇತಿಹಾಸವಿರುವ ವೃತ್ತಿಯಲ್ಲಿ ವೃತ್ತಿಪರವಾಗಿ  ಚಿಂತನೆ-ನುಡಿ-ಆಚರಣೆ ಮೂರನ್ನು ಭೂತಗನ್ನಡಿ ಹಾಕಿ ಹುಡಿಕಿದರೂ ಒಂದು ಕಡೆ ಕಾಣಸಿಗುವುದು ಕಷ್ಟವಾಗಿದೆ. ಇತ್ತೀಚೆಗೆ ಸಮಾಜಕಾರ್ಯದ ಹಿರಿಯ ಪ್ರೊಫೆಸರ್ ಒಬ್ಬರು ಕರ್ನಾಟಕದ ಸಮಾಜಕಾರ್ಯ ಶಿಕ್ಷಕರನ್ನು ಕುರಿತಂತೆ ವೃತ್ತಿಪರವಾದ ಯಾವುದೇ ಚಟುವಟಿಕೆಗಳಿರದವರು ಸಮಾಜಕಾರ್ಯ ಶಿಕ್ಷಣದಲ್ಲಿ ತೊಡಗಿದ್ದಾರೆ ಹಾಗೂ ಸಕ್ರಿಯವಾದ ಹಾಗೂ ವೃತ್ತಿಪರ ಆಲೋಚನಾ ಶೂನ್ಯ ಸ್ಥಿತಿ ತಲುಪಿದ್ದಾರೆ. ಕರ್ನಾಟಕದಲ್ಲಿ ಸಮಾಜಕಾರ್ಯ ವೃತ್ತಿಯ ಸಂಘಟನೆ ಅಗತ್ಯವಾಗಿದೆ, ಆದರೆ ಶಿಕ್ಷಕರನ್ನು ಒಗ್ಗೂಡಿಸಿ ಸಂಘಟಿಸುವ ಬದಲು ಸಮಾಜಕಾರ್ಯ ಕ್ಷೇತ್ರದಲ್ಲಿರುವವರನ್ನು ಗುರುತಿಸಿ ಸಂಘಟಿಸಬೇಕಾದ ಅನಿವಾರ್ಯತೆ ಇದೆ ಎಂದರು. ಹಾಗೆಯೇ ಸಮಾಜಕಾರ್ಯ ಶಿಕ್ಷಕರ  ಅಸಹನೆ ವ್ಯಕ್ತಪಡಿಸಿದರು. ಇನ್ನು ಮುಂದಾದರೂ ಸಮಾಜಕಾರ್ಯ ಶಿಕ್ಷಕರು ಬಗ್ಗೆ ಸಕಾರಾತ್ಮಕವಾಗಿ ಆಲೋಚಿಸಬೇಕಾಗಿದೆ
            ಇತ್ತೀಚೆಗೆ ಕರ್ನಾಟಕ ರಾಜ್ಯ ಗೂಂಡಾರಾಜ್ಯವಾಗಿದೆಯೇ ಎಂಬ ಸಂಶಯ ಮೂಡುತ್ತಿದೆ, ನಿಜವಾದ ನಾಯಕರು ಮೂಲೆಗುಂಪಾಗಿ, ತೋರ್ಪಡಿಕೆ ನಾಯಕರು ವಿಜೃಂಭಿಸುತ್ತಿರುವುದು ಅಭಿವೃದ್ಧಿಯ ಸಂಕೇತವಲ್ಲ. ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಹಿಂದೆಂದೂ ಕಂಡಿರದಂತಹ ಅಧಃಪತನದ ಹಾದಿ ಹಿಡಿದಿದೆ. ಮಂತ್ರಿಗಳು ಜನರ ಕ್ಷೇಮಾಭಿವೃದ್ಧಿಯನ್ನು ಮರೆತು ರೆಸಾರ್ಟ್ ರಾಜಕಾರಣದತ್ತ ಒಲವು ತೋರುತ್ತಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದ ಎಲ್ಲಾ ರಂಗಗಳ ಅಭಿವೃದ್ಧಿ ಕುಂಠಿತಗೊಂಡಿದೆ. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಅದರ ನಿವಾರಣೆಗೆ ಮಾತ್ರ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ಇದರ ಪರಿಣಾಮವಾಗಿ ಅಧಿಕಾರಿಗಳಲ್ಲಿ ಸೋಮಾರಿತನ ಮನೆಮಾಡಿ ಅದಕ್ಷರಾಗುತಿದ್ದಾರೆ. ಬರಗಾಲ, ಬಿಸಿಲ ಬೇಗೆಯಿಂದ ಬಸವಳಿಯುತ್ತಿರುವ ಜನ ನೀರಿಗಾಗಿ, ಆಹಾರಕ್ಕಾಗಿ ಆಹಾಕಾರ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜನ ಸಾಮಾನ್ಯರ ತಾಳ್ಮೆಯ ಕಟ್ಟೆಯೊಡೆದು ಪ್ರತಿಭಟನೆಯ ಹಾದಿ ಬಹಳ ದೂರವಿರಲಾರದು. ಇದಕ್ಕೆ ಸಂಬಂಧಪಟ್ಟವರು ಸೂಕ್ತ ಬೆಲೆ ತೆರಬೇಕಾದೀತು
            ಇತ್ತೀಚಿಗೆ ನಡೆದ ವಕೀಲರು ಪತ್ರಕರ್ತ ಮಾಧ್ಯಮದವರ ಮೇಲೆ ನಡೆಸಿದ ಹಲ್ಲೆ  ದೌರ್ಜನ್ಯದ ಪರಮಾವಧಿಯಲ್ಲದೆ ಮತ್ತೇನು? ಇದು ನಮ್ಮ ಭದ್ರತೆಯ ವೈಫಲ್ಯತೆ ಮತ್ತು ನೈತಿಕ ಮೌಲ್ಯಗಳ ಕುಸಿತದ ಸೂಚಕವಾಗಿವೆ
            ಉತ್ತರ ಕರ್ನಾಟಕದಾದ್ಯಂತ ಅಪೌಷ್ಟಿಕತೆಯ ಪೆಡಂಭೂತ ತನ್ನ ರೌದ್ರಾವತಾರವನ್ನು ತೋರಿಸುವುತ್ತಿರುವುದರಲ್ಲಿ ನಮ್ಮ ಅಧಿಕಾರಿ ವರ್ಗಗಳ ನೀಚತನಗಳು ಕಾರಣವಾಗಿವೆ. ಅತ್ತ ಕೇಂದ್ರ ಸರ್ಕಾರದ ಅನುದಾನದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದು ಮೂಲಕವಾಗಿ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಗುರಿ ಇಟ್ಟುಕೊಂಡಿದ್ದರೆ, ಇತ್ತ ಉನ್ನತ ಮಟ್ಟದ ಅದಿಕಾರಿಗಳು ಅವ್ಯವಹಾರದಲ್ಲಿ ಶಾಮೀಲಾಗಿ ಮಕ್ಕಳ ಆಹಾರವನ್ನು ಕದ್ದು ಹಣ ಸಂಪಾದಿಸಿ ವೈಭೋಗ ಜೀವನ ನಡೆಸುವ ಅಧಿಕಾರಿ ವರ್ಗಗಳಿಗೆ ಸ್ವಲ್ಪವಾದರೂ ಕರುಣೆ ಇಲ್ಲವೇ? ಎಂತಹ ನಾಚಿಕೆಯ ಸಂಗತಿ.  ವೈಭೋಗ ಜೀವನಕ್ಕೆ ಮಕ್ಕಳ ಆಹಾರವೇ ಬೇಕಿತ್ತೇನು? ಇದರ ಬಗ್ಗೆ ಸರ್ಕಾರ ನಿಲುವೇನು? ಸಂಬಂಧಪಟ್ಟ ಅಧಿಕಾರಿಗಳನ್ನು ಕನಿಷ್ಠ 2 ರಿಂದ 3 ವರ್ಷ ಹುದ್ದೆಯಿಂದ ಅಮಾನತುಗೊಳಿಸಿ ಕಠಿಣ ಶಿಕ್ಷೆ ನೀಡಿದರೆ ಅಪೌಷ್ಟಿಕತೆಯಿಂದ ಸಾವನ್ನಪ್ಪಿದ ಮಕ್ಕಳ ಆತ್ಮಕ್ಕೆ ಕಿಂಚಿತ್ ಶಾಂತಿಯಾದರೂ ಸಿಗುತ್ತಿತ್ತು.. ಇದು ಇನ್ನು ಮುಂದೆ ಬರುವ ಅಧಿಕಾರಿಗಳಿಗೆ ಒಂದು ಪಾಠವಾದಾಗ ಮಾತ್ರ ಅರ್ಥಪೂರ್ಣ. ಆದರೆ ಸರ್ಕಾರ ಮಾಡಿದ್ದೇನು? ಸಂಬಂಧಪಟ್ಟ ಅಧಿಕಾರಿಗಳನ್ನು ಪದೋನ್ನತಿ ಮಾಡಿ ಬೇರೊಂದು ಪ್ರದೇಶಕ್ಕೆ ವರ್ಗಾಯಿಸಿದೆ. ಇಂತಹ ಅನ್ಯಾಯದ ವಿರುದ್ಧ ಹೋರಾಟ ಮಾಡುವವರಾರು
            ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿಯಿದ್ದ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಕಾನೂನು ಪದವಿ ಮಾಡಿದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಕಾರಣ ಕಾನೂನು ಪದವೀದರರ ಒಗ್ಗಟ್ಟಿನ ಹೋರಾಟದ ಫಲ. ಹುದ್ದೆಗಳಿಗೆ ಸಮಾಜಕಾರ್ಯಕರ್ತ ಪದವೀಧರರು ಅರ್ಹರಾಗಿದ್ದರೂ, ನಮ್ಮಲ್ಲಿನ ಹೋರಾಟ ಮನೋಭಾವದ ಕೊರತೆಯಿಂದಾಗಿ ಕೈಕಟ್ಟಿ ಕೂರುವಂತಾಗಿದೆ
            ಕೆಲವು ಕಾರಣಗಳಿಂದಾಗಿ ಸಂಚಿಕೆಯನ್ನು ವಿಶೇಷ ಸಂಪಾದಕತ್ವದಲ್ಲಿ ಪ್ರಕಟಿಸಲಾಗುತ್ತಿಲ್ಲ
            ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನಿರಾತಂಕ ತಂಡ ದಿನಾಂಕ 15-04-2012 ಭಾನುವಾರದಂದು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು  ಆಯೋಜಿಸುತ್ತಿದೆ. ಎಲ್ಲ ವಿದ್ಯಾರ್ಥಿಗಳು ಮತ್ತು ಸಮಾಜಕಾರ್ಯ ವೃತ್ತಿಪರರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕೇಳಿಕೊಳ್ಳುತ್ತೇವೆ.

ರಮೇಶ  ಎಂ.ಎಚ್.



No comments:

Post a Comment