Sunday, September 22, 2013

'ಹಣತೆಯ ಅಡಿ ಕತ್ತಲೆ ಏಕೆ?'



ಈ ಪ್ರಶ್ನೆಯನ್ನು ಬಹುಷಃ ನಾವೆಲ್ಲ ಬಹಳ ಸಲ ನಮ್ಮಲ್ಲೇ ಕೇಳಿಕೊಂಡಿರುತ್ತೇವೆ. ನಮಗೇ ಕೆಲವು ಬಾರಿ ಅನ್ವಯಿಸಿರುತ್ತದೆ. ಸಮಾಜಕ್ಕಾಗಿ ಹಗಲಿರುಳೆನ್ನದೆ, ತನ್ನೆಲ್ಲಾ ಸುಖ-ದುಃಖಗಳನ್ನೆಲ್ಲಾ ಪಕ್ಕಕ್ಕಿಟ್ಟು ಸೇವೆಸಲ್ಲಿಸುತ್ತಿರುವ ಸಮಾಜ ಕಾರ್ಯಕರ್ತರಿಗಾದರೂ ಈ ಮಾತು ಕರುಣೆ ತೋರುತ್ತದೆಯೇ? ಎಂದು ಪ್ರಶ್ನಿಸಿಕೊಂಡರೆ, 'ಇಲ್ಲ'ವೆಂಬ ಉತ್ತರ ಸಿಗುತ್ತದೆ. ಅದಕ್ಕೆ ಈ ಕೆಳಗಿನ ದುಷ್ಟಾಂತಗಳು ಪುಷ್ಟಿ ನೀಡುತ್ತವೆ. 



ಅವರು ಮದ್ರಾಸ್ ಕೆಮಿಕಲ್ ಇಂಡಸ್ಟ್ರಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ಕೈತುಂಬಾ ಸಂಬಳ, ಮುದ್ದಿನ ಮಡದಿ, ಒಬ್ಬಳೇ ಮಗಳನ್ನೊಳಗೊಂಡ ನೆಮ್ಮದಿಯ ಕುಟುಂಬ ಅವರದು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಅದೊಂದು ದಿನ ಅವರು ತನ್ನ ಹುಟ್ಟೂರಿಗೆ ತೆರಳಿದರು. ಆಗ ಅಲ್ಲಿ ಕಂಡ ಹಳ್ಳಿಜನರ ಕುಡಿತ, ಸಾಮಾಜಿಕ, ಆಥರ್ಿಕ ಅಸಮಾನತೆ, ಅನಾಗರೀಕತೆ, ಬಡತನ, ಅನಕ್ಷರತೆ ಇವೇ ಮೊದಲಾದ ಸಮಸ್ಯೆಗಳು ಅವರ ಮನಸ್ಸಿಗೆ ಅತ್ಯಂತ ನೋವನ್ನು ತಂದವು. ತಾನು ಬಾಲ್ಯದಿಂದಲೂ ಕಂಡ, ಅನುಭವಿಸಿದ ಆ ಸಮಸ್ಯೆಗಳು ಇನ್ನೂ ಹಾಗೇ ಇದೆಯಲ್ಲ ಎಂದು ನೊಂದುಕೊಂಡರು. ಆ ಕ್ಷಣದಲ್ಲೇ ಅವರು ನಿರ್ಧರಿಸಿದ್ದು, 'ನನ್ನ ಹುಟ್ಟೂರಿನ ಜನರ ಉದ್ಧಾರಕ್ಕೋಸ್ಕರ ನಾನು ಏನನ್ನಾದರೂ ಮಾಡಬೇಕು'. ಎಂದು. 
ಅಂದೇ ತನ್ನ ಸಕರ್ಾರೀ ಕೆಲಸಕ್ಕೆ ರಾಜಿನಾಮೆ ನೀಡಿದರು!!! ಹುಟ್ಟೂರಿಗೆ ಅಭಿವೃದ್ಧಿಯ ಕನಸು ಹೊತ್ತು ಹೊರಟು ಬಿಟ್ಟರು. ಮಡದಿಗೆ ಗಂಡನ ಈ ಕ್ರಮ ಆಶ್ಚರ್ಯವೂ, ಬೇಸರವೂ ತರಿಸಿತು. ಗಂಡನೊಂದಿಗೆ ಮಾತು ಬಿಟ್ಟರು. ಜನರ ನೆಮ್ಮದಿಯನ್ನೇ ಜೀವನ ಧ್ಯೇಯವಾಗಿಸಿಕೊಂಡಿದ್ದ ಆ ಬಿಸಿರಕ್ತದ ವ್ಯಕ್ತಿಗೆ ಇದಾವುದೂ ತನ್ನ ಮಾರ್ಗಕ್ಕೆ ಅಡ್ಡವೆಂದು ಕಾಣಲಿಲ್ಲ. ಹಗಲಿರುಳೆನ್ನದೆ ಹಳ್ಳಿಯ ಜನರ ಸೇವೆಗೈ.ದರು. ಯಶಸ್ಸು ಕಂಡರು. ಜನರೆಲ್ಲರ ಪ್ರೀತಿಗೆ ಪಾತ್ರರಾದರು. ಗ್ರಾಮವನ್ನು ಕುಡಿತ ಮುಕ್ತಗೊಳಿಸಿದರು. ಜನರಿಗೆ ಗುಡಿಕೈಗಾರಿಕೆಗಳನ್ನು ಸ್ಥಾಪಿಸಿ ಕೈಗೊಂದು ಉದ್ಯೋಗ ಕೊಟ್ಟರು.  ಪಂಚಾಯ್ತಿ ಚುನಾವಣೆಗೆ ನಿಂತು ಗೆಲುವು ಸಾಧಿಸಿ ಅಧಿಕಾರ ಗಳಿಸಿ, ಊರಿನ ಮೂಲ ಸೌಕರ್ಯ ಉತ್ತಮಪಡಿಸಿದರು. ಹಳ್ಳಿಯಲ್ಲಿ ಮೇಲು-ಕೀಳೆಂಬ ಭಾವನೆಯನ್ನು ದೂರಾಗಿಸಿ ಒಂದು ಹಂತಕ್ಕೆ ಸಾಮಾಜಿಕ ಸುಧಾರಣೆಯನ್ನು ತಂದರು. ಒಟ್ಟಾರೆ, ದಕ್ಷಿಣ ಭಾರತದಲ್ಲೇ ಆ ಗ್ರಾಮವನ್ನು 'ಮಾದರೀ ಗ್ರಾಮ'ವೆಂದು ಕೇಂದ್ರ ಸಕರ್ಾರ ಗುರುತಿಸುವಂತೆ ಮಾಡಿದರು. ವ್ಯಕ್ತಿ ತಾನು ಅಂದುಕೊಂಡಿದ್ದು ಸಾಧಿಸಿದರು. 

ಆದರೆ, ಅಲ್ಲಿಯವರೆಗೂ ತನ್ನ ಕುಟುಂಬವನ್ನು ತಾತ್ಸಾರಮಾಡಿದ್ದ ಆ ವ್ಯಕ್ತಿಗೆ ವಯಸ್ಸಾದಂತೆ ಒಂದು ರೀತಿಯ ಪಶ್ಚಾತ್ತಾಪ / ಗಿಲ್ಟ್ ಕಾಡತೊಡಗಿತು. ಹೆಂಡತಿ ಪಡಬಾರದ ಪಾಟಲು ಪಟ್ಟು ಮಗಳನ್ನು ಸುಶಿಕ್ಷಿತಳನ್ನಾಗಿಸಿದ ಪರಿಣಾಮ, ಮಗಳು ಬೆಳೆದು ಕಾಲೇಜಿನಲ್ಲಿ ಓದುತ್ತಿದ್ದಳು.  ಅದೊಂದು ದಿನ ಮುದ್ದಿನ ಮಗಳನ್ನು ಕಾಣಲು ಕಾಲೇಜಿನ ಕಡೆ ಹೊರಟ ಆ ವ್ಯಕ್ತಿಗೆ, ಎದುರಿಗೆ ಮಗಳು ಎದೆಎತ್ತರಕ್ಕೆ ಬೆಳೆದು ನಗುತ್ತಾ ಸ್ನೆಹಿತೆಯರ ಜೊತೆ ಬರುತ್ತಿರುವುದು ಕಂಡಿತು. ಸಂತೋಷದಿಂದ ಹತ್ತಿರಕ್ಕೆ ಹೋದ ತಂದೆಯನ್ನು ಕಂಡದ್ದೇ ಆಕೆಯ ಮುಖದಲ್ಲಿದ್ದ ನಗು ಮಾಯವಾಯಿತು. ಒಂದು ರೀತಿಯ ಅಸಹ್ಯ ಭಾವನೆ ತೋರಿತು. ಇದನ್ನು ಗಮನಿಸದ ಆ ವ್ಯಕ್ತಿಯು ಮಗಳನ್ನು ಮಾತನಾಡಿಸಲು ಹೋದಾಗ, ಆಕೆ ಅಪರಿಚಿತರನ್ನು ಕಂಡಂತೆ ಕಂಡು ಈತನ ಮುಖ ನೋಡದೆ ತೆರಳಿದಳು! ಇದು ಆ ವ್ಯಕ್ತಿಗೆ ತನ್ನ ತಪ್ಪನ್ನು ನೆನಪಿಸಿದಂತಿತ್ತು. ಮನೆಗೆ ಹೋದಾಗ ಆತನ ಹೆಂಡತಿಯ ಸ್ಪಂದನೆ ಇದಕ್ಕಿಂತ ಭಿನ್ನವಿರಲಿಲ್ಲ. ಕೊನೆಗೆ, ಆ ವ್ಯಕ್ತಿಗೆ ಕುಟುಂಬದಲ್ಲಿ ಜಾಗವೇ ಇಲ್ಲದಂತಾಗಿತ್ತು. ವಿಧಿಯಿಲ್ಲದೆ ತನ್ನ ಜೀವನದ ಬಹುಮುಖ್ಯ ದಿನಗಳನ್ನು ಕಳೆದ ಹಳ್ಳಿಯ ಜನರ ನಡುವೆಯೇ ನೆಮ್ಮದಿ ಕಾಣಲು ನಿರ್ಧರಿಸಿ ಹಿಂದಿರುಗಿದರು. 

ಆದರೆ..... ಜನರು ಕಾಲಕಳೆದಂತೆ ಬದಲಾಗತೊಡಗಿದರು. ಅಭಿವೃದ್ಧಿಯನ್ನು ಸಹಿಸದ ಊರಿನ ಕೆಲವರು ಇವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡತೊಡಗಿದರು. ಜನರು ಇವರನ್ನು ತಾತ್ಸಾರ ಮಾಡುವಂತೆ ಮಾಡಿದರು. ಜೊತೆಗೆ ಇವರಿಗೆ ಮೊದಲಿನಿಂದ ಹಣ ಸಹಾಯ ಮಾಡುತ್ತಿದ್ದ ಹಣಕಾಸು ಸಂಸ್ಥೆಗಳು ನೆರವನ್ನು ನಿಲ್ಲಿಸಿದವು. ಜೊತೆಗಿದ್ದ ಅಳಿದುಳಿದ ಜನರೂ ದೂರಾದರು. ಅತ್ತ ಕುಟುಂಬದಿಂದಲೂ, ಇತ್ತ ಗ್ರಾಮದವರಿಂದಲೂ ತಿರಸ್ಕಾರಕ್ಕೊಳಗಾದ ಆ ವ್ಯಕ್ತಿ ಒಂಟಿಯಾದರು. ಜಿಗುಪ್ಸೆಯಿಂದ ಜೀವನ ಸಾಗಿಸಿದರು. ಆಗ ನನಗೆ ಮೂಡಿದ ಪ್ರಶ್ನೆ: 
'ಹಣತೆಯ ಅಡಿ ಕತ್ತಲೇಕೆ?'

********
ಆಕೆ ಬೆಂಗಳೂರಿನ ಸುಪ್ರಸಿದ್ದ ಸಲಹಾಸಮಾಲೋಚಕಿ. ನೂರಾರು ಕುಟುಂಬಗಳು ಆಕೆಯಿಂದ ಸೇವೆ ಪಡೆದು ನೆಮ್ಮದಿಯಿಂದ ಬದುಕುತ್ತಿವೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕಾದ ವಯಸ್ಸಿನಲ್ಲಿಯೇ ಪಕ್ಕದ ಮನೆಯ ಹುಡುಗನೊಬ್ಬನ ಆಕರ್ಷಣೆಗೆ ಒಳಗಾಗಿ ಮನೆಬಿಟ್ಟು ಬಂದ ಹೆಣ್ಣು ಮಗುವಿಗೆ ತನ್ನ ತಪ್ಪಿನ ಅರಿವಾಗಿಸಿ ತಂದೆ ತಾಯಿಯ ಜೊತೆ ಮನೆಗೆ ಕಳಿಸಿದಾಕೆ. ಅಮ್ಮ ಚಪಾತಿಯ ಬದಲು ರೊಟ್ಟಿಯನ್ನು ಕೊಟ್ಟಳು ಎಂಬ ಕಾರಣಕ್ಕೆ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದ ಹುಡುಗಿಯ ಮನಃಪರಿವರ್ತನೆ ಮಾಡಿ ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟಾಕೆ. ಮೊಬೈಲ್ ಕೊಡಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಮನೆಬಿಟ್ಟು ಹೋದ ಹದಿಹರೆಯದ ಹುಡುಗನನ್ನು ತನ್ನ ಬುದ್ದಿವಂತಿಕೆ, ತಂತ್ರ ಕೌಶಲ್ಯಗಳಿಂದ ಜೀವನದ ನಿಜಗಳನ್ನು ಅರಿವು ಮಾಡಿಸಿ ಕುಟುಂಬಕ್ಕೆ ಸೇರಿಸಿದ ಆಕೆಗೆ ಒಂದು ಸಮಸ್ಯೆ ಕಾಡಿತ್ತು!!!. ಅದು: 'ತಾನು ಹೆತ್ತ ಮಗಳು ತನ್ನ ಮಾತು ಕೇಳುವುದಿಲ್ಲ ಎಂಬುದು'. 
ಅವರ ಮಗಳ ವಿಚಿತ್ರಗಳನ್ನು ನಿಮಗೆ ಹೇಳಬೇಕು. ಹೊರಗೆ ಬಾಡಿಹೋದ ಉಪ್ಪಿಟ್ಟನ್ನು ಚಪ್ಪರಿಸಿಕೊಂಡು ತಿನ್ನುವ ಆಕೆ, ತಾಯಿಯು ಮಗಳಿಗೋಸ್ಕರ ರುಚಿಯಾಗಿ ಮಾಡಿಕೊಟ್ಟ ಉಪ್ಪಿಟ್ಟನ್ನು ಸ್ವಲ್ಪವೇ ತಿಂದು, 'ಇನ್ನೆಂದೂ ಈ ರೀತಿಯ ಉಪ್ಪಿಟ್ಟನ್ನು ಮಾಡಬೇಡ. ಇದು ಸ್ವಲ್ಪವೂ ಚೆನ್ನಾಗಿಲ್ಲ' ಎಂದು ಮುಖಕ್ಕೆ ರಾಚುವಂತೆ ಹೇಳಿಬಿಡುತ್ತಾಳೆ. ಆಕೆಯ ಇಷ್ಟವಾದ ವಸ್ತುಗಳನ್ನು ಅರಿತ ತಾಯಿಯು ಪ್ರೀತಿಯಿಂದ ಅವುಗಳನ್ನು ಕೊಂಡು ತಂದರೆ, 'ನೀನೇಕೆ ಇದನ್ನೆಲ್ಲಾ ತಂದೆ. ನನಗೆ ಇಷ್ಟವಿಲ್ಲ. ಹೋಗಿ ವಾಪಸ್ಸು ಕೊಟ್ಟು ಬಾ' ಎಂದು ಹೇಳಿ ಮನಸ್ಸಿಗೆ ನೋವು ಮಾಡುತ್ತಾಳೆ. ಈಕೆ ತನ್ನೆಲ್ಲಾ ತಂತ್ರ, ಕೌಶಲ್ಯ, ವಿಧಾನಗಳೆಲ್ಲವನ್ನೂ ಉಪಯೋಗಿಸಿದರೂ ಫಲಿತಾಂಶ ಶೂನ್ಯ. ಇವರನ್ನು ಚೆನ್ನಾಗಿ ಬಲ್ಲ ಒಡನಾಡಿಗಳು ಛೇಡಿಸುವುದು 'ಈಕೆ ಊರವರಿಗೆಲ್ಲ ಬುದ್ಧಿ ಹೇಳಕ್ಕೋಗ್ತಾಳೆ. ತನ್ನ ಮಗಳಿಗೆ ಸರಿಯಾಗಿ ಬುದ್ಧಿ ಕಲಿಸಲಿಕ್ಕೆ ಆಗಿಲ್ಲ' ಎಂದು. ಆಗ ನನಗೆ ಅನ್ನಿಸಿದ್ದು: 
'ಹಣತೆಯ ಅಡಿ ಕತ್ತಲೇಕೆ?' 
******
ಈ ಮೇಲಿನ ದುಷ್ಟಾಂತಗಳನ್ನು ಗಮನಿಸುತ್ತಿದ್ದರೆ, ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು, ಓರೆ-ಕೋರೆಗಳನ್ನು ತಿದ್ದಲು ಹೊರಡುವ ಸಮಾಜಕಾರ್ಯಕರ್ತರೇ ಸಮಸ್ಯೆಗಳಲ್ಲಿ ಸಿಕ್ಕಿ ಹೊರಬರಲಾಗದೇ ಒದ್ದಾಡುತ್ತಿರುವುದು ಏಕೆ? ತನ್ನ ಸಮಸ್ಯೆಯನ್ನು ತಾನು ಬಗೆಹರಿಸಿಕೊಂಡು, ಬದುಕನ್ನು ಹಸನುಗೊಳಿಸಿಕೊಳ್ಳಲು ಆಗದವರು ಸಮಾಜದ ಒಳಿತನ್ನು ಮಾಡುವುದಾದರೂ ಹೇಗೆ? ತನ್ನ ತಾನು ಅರಿಯದವನು, ಜಗತ್ತನ್ನು ಅರಿಯುವನು ಹೇಗೆ? ಈ ನಿಟ್ಟಿನಲ್ಲಿ ನಿಮಗೆ ಮತ್ತೂ ಹಲವು ಉದಾಹರಣೆಗಳು ಕಣ್ಣ ಮುಂದೆ ಬರಬಹುದು. 'ನನ್ನ ಪ್ರಶ್ನೆಗೆ ಉತ್ತರವೇನು?' ಎಂಬ ಗೊಂದಲದಲ್ಲಿ ನೀವೂ ಸಿಕ್ಕಿಹಾಕಿಕೊಳ್ಳಬಹುದು. ಇದಕ್ಕೇನಾದರೂ ಪರಿಹಾರಗಳಿವೆಯೋ ಅಥವಾ..... 'ದೀಪದ ಕೆಳಗೆ ಕತ್ತಲೆಯಿರುವುದು ನಿಸರ್ಗದ ನಿಯಮ' ಎಂದು ಹೇಳಬಹುದೋ!!!

ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ..... 

ಆನಂದ ಎನ್.ಎಲ್, ಬೆಂಗಳೂರು.
9164473560

No comments:

Post a Comment