Wednesday, September 25, 2013

ಬದಲಾವಣೆಯ ಸಮಯ

ಸಂಪಾದಕೀಯ


ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆತ್ಮಹತ್ಯೆ (ವಿಜಯ ಕುಮಾರ್ ಸೂರ್ಯವಂಶಿ, ಬೀದರ್, ಮಂದಾಕಿನಿ, ಗುಲಬರ್ಗಾ) ಮತ್ತು ಸಾಮೂಹಿಕ ರಾಜಿನಾಮೆಗೆ ಸರ್ಕಾರದ ಆಡಳಿತ ಯಂತ್ರದ ವೈಪಲ್ಯತೆಗೆ ಸಾಕ್ಷಿಯಾಗಿವೆ. ವ್ಯವಸ್ಥೆಯನ್ನು ಮುಖ್ಯವಾಹಿನಿಗೆ ತರಲು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ್ದಾರೆ. ಇದೊಂದೆ ಕ್ರಮ ಪರಿಹಾರವಾಗಲಾರದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಂಧಿಗ್ದ ಪರಿಸ್ಥಿತಿಗಳನ್ನು ಎದುರಿಸುವ ಸೂಕ್ತ ತರಬೇತಿ ನೀಡಿ ಅವರನ್ನು ಆಡಳಿತ ಯಂತ್ರದ ಭಾಗವಾಗಿಸಿಕೊಂಡಾಗ ಮಾತ್ರ ಪಂಚಾಯಿತಿ ವ್ಯವಸ್ಥೆಯ ಆಡಳಿತವು ಸುಗಮವಾಗುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷರಹಿತ ಚುನಾವಣೆ ಇದ್ದರೂ  ಗ್ರಾಮ ಪಂಚಾಯಿತಿಗಳ ಆಡಳಿತವು ಹಲವಾರು ರಾಜಕೀಯ ಪಕ್ಷಗಳ ಹಿಡಿತದಲ್ಲಿವೆ. ವ್ಯವಸ್ಥೆಯನ್ನು ಸುಧಾರಿಸಿದ ಹೊರತು ಅನ್ಯಮಾರ್ಗವಿಲ್ಲ. ಆದ್ದರಿಂದ ಪಕ್ಷರಹಿತ, ಜನೋಪಕಾರಿ ಹಾಗೂ ದಕ್ಷ, ಪ್ರಾಮಾಣಿಕ ವ್ಯಕ್ತಿಯನ್ನು ಆಯ್ಕೆ ಮಾಡಿ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ನೇಮಿಸಿದರೆ ವ್ಯವಸ್ಥೆ ಸ್ವಲ್ಪವಾದರೂ ಸುಧಾರಣೆ ಕಾಣುವುದು. ಇದಕ್ಕೆ ಪೂರಕವಾಗಿ ನಾವುಗಳು ಸ್ಪಂಧಿಸಬೇಕು. ಜನಜಾಗೃತಿ ಮೂಡಿಸಬೇಕು.
·         ಇತ್ತೀಚಿಗೆ ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ರಾಷ್ಟ್ರೀಯ ಕೃಷಿ ಸಮ್ಮೇಳನ-2011 ಬಹಳ ಯಶಸ್ವಿಯಾಗಿ ಮುಕ್ತಾಯಗೊಂಡು ಸ್ಥಳೀಯವಾಗಿ ಸಾಧನೆಗೈದ ಅನೇಕ ಪ್ರಗತಿಪರ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಒಂದು ಒಳ್ಳೆಯ ಬೆಳವಣಿಗೆ. ಇಲ್ಲಿ ಕಾಡಿದ ಒಂದು ಕೊರತೆಯೆಂದರೆ ರಾಜಕೀಯ ವ್ಯಕ್ತಿಗಳ ಇಚ್ಛಾಶಕ್ತಿ. 2009ರಲ್ಲಿ ಇದೇ ಬೆಂಗಳೂರಿನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಾಗ ಇಡಿ ರಾಜಕಾರಣಿಗಳ ದಂಡೇ ಬೀಡು ಬಿಟ್ಟಿತ್ತು. ಕೃಷಿ ಸಮಾವೇಶ ಎಂದಾಗ   ದಂಡು ಎಲ್ಲಿ ಹೋಗಿತ್ತು? ಇಂಥ ತಾರತಮ್ಯ ನೀತಿ ಬದಲಾಗಬೇಕಿದೆ. ದೇಶದ ಆರ್ಥಿಕತೆಯ ಬೆನ್ನೆಲುಬಾದ ಕೃಷಿಗೆ ಗ್ರಾಮೀಣ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಕನಿಷ್ಠ ವರ್ಷಕ್ಕೆ ಒಂದು ಕೃಷಿ ಮೇಳಗಳನ್ನು ಸರ್ಕಾರದ ವತಿಯಿಂದ ಹಮ್ಮಿಕೊಂಡು ಪ್ರೋತ್ಸಾಹಿಸಿದರೆ ರೈತರಿಗೆ ಒಂದು ಆಶಾದೀಪವಾದೀತು. ಅಲ್ಲದೇ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಗಳನ್ನು ಕಲ್ಪಿಸಿಕೊಟ್ಟು ಅವರ ಶ್ರಮಕ್ಕೆ ಪ್ರತಿಫಲವನ್ನು ಒದಗಿಸಬೇಕಾಗಿದೆ. ದಿಕ್ಕಿನಲ್ಲಿ ಸರ್ಕಾರಿ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಬ್ಯಾಂಕುಗಳು, ಸ್ಥಳೀಯ ಪ್ರತಿನಿಧಿಗಳು, ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸ್ತ್ರೀಶಕ್ತಿಗಳ ಸ್ವರೂಪಗಳಲ್ಲಿ ರೈತ ಸಂಘಗಳನ್ನು ಸ್ಥಾಪಿಸಿ ಹಣಕಾಸಿನ ನೆರವನ್ನು ಒದಗಿಸಬೇಕು.
·         ಇತ್ತೀಚೆಗೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿಗೆ ಸೇರಿದ ಎಂಟು ಜನ ರೈತರು ಒಂದೇ ತಿಂಗಳಿನಲ್ಲಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕರ್ನಾಟಕದ ರೈತರ ಚಿಂತಾಜನಕ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಸ್ತ್ರೀಶಕ್ತಿಗಳಂಥ ಸಂಘಟನೆಗಳು ರೈತ ಸಮುದಾಯದಲ್ಲಿ ಮೂಡಿದ್ದೇ ಆದರೆ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಕಾಣಬಹುದಾಗಿದೆ.
·         ಪ್ರೊ. ಶಂಕರ ಪಾಠಕ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸ್ವೀಡನ್ನ್ನಿನ ಸಮಾಜಕಾರ್ಯ (ಕಳೆದ ಸಂಚಿಕೆಯಲ್ಲಿ ಪ್ರಕಟಗೊಂಡ ಮ್ಯಾಗ್ನಸ್ ಒಟಿಲಿಡ್ ಅವರ ಲೇಖನ) ವ್ಯವಸ್ಥೆಯನ್ನು ಕುರಿತು ಸಂತಸ ವ್ಯಕ್ತಪಡಿಸುತ್ತಾ ಸ್ವೀಡನ್ನಿನಲ್ಲಿ ಇರುವ ವ್ಯವಸ್ಥೆಗಳು ನಮ್ಮಲ್ಲೂ ಆಗಬೇಕಿದೆ. ಅದೇ ರೀತಿ ನಮ್ಮ ನೆರೆಯ ದೇಶಗಳಾದ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸಮಾಜಕಾರ್ಯದ ಸ್ಥಿತಿಗಳ ಬಗ್ಗೆ ಲೇಖನ ಬರೆದು ಪ್ರಕಟಿಸಿ ಎಂದು ಸಲಹೆ ನೀಡಿದರು.
            ಸಮಾಜಕಾರ್ಯ ವೃತ್ತಿಗಳ ಮಾಹಿತಿ ಕೈಪಿಡಿ ತರಲು ನಿರಾತಂಕ ತಂಡ ಮುಂದಾಗಿದೆ ಮಾಹಿತಿ ಕೈಪಿಡಿಯಲ್ಲಿ ಸಮಾಜಕಾರ್ಯ ಕ್ಷೇತ್ರದಲ್ಲಿರುವ ವೃತ್ತಿ ವಿವರಗಳ ಕುರಿತಾಗಿ ಸಮಗ್ರ ಮಾಹಿತಿ ಇರುತ್ತದೆ. ಆಸಕ್ತರು ಸಮಾಜಕಾರ್ಯ ಕ್ಷೇತ್ರದಲ್ಲಿ 20 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿರುವವರನ್ನು ಸಂದರ್ಶಿಸಿ ಮಾಹಿತಿಯನ್ನು ನಮಗೆ ಕಳುಹಿಸಿಕೊಡಬಹುದು. ಸಂದರ್ಶನಗಳನ್ನು ಮೊದಲಿಗೆ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ನಂತರದ ದಿನಗಳಲ್ಲಿ ಐಎಸ್ಬಿಎನ್ ನಂಬರ್ನೊಂದಿಗೆ ಮಾಹಿತಿ ಕೈಪಿಡಿ ತರಲು ಯೋಚಿಸಿದ್ದೇವೆ. ಆಸಕ್ತರು ನಿರಾತಂಕವನ್ನು ಸಂಪರ್ಕಿಸಿ ನಿಮ್ಮ ಸಲಹೆ ಸೂಚನೆಗಳನ್ನು ನೀಡಬಹುದು.
·         ನಮ್ಮ ತಂಡದ ಕೋರಿಕೆಯ ಮೇರೆಗೆ ಡಾ.ಟಿ.ಬಿ.ಬಿ.ಎಸ್.ವಿ. ರಮಣಯ್ಯ, ಮೈಸೂರು ವಿಶ್ವವಿದ್ಯಾಲಯ. ಡಾ.ವೈ.ಎಸ್.ಸಿದ್ದೇಗೌಡ, ಮೈಸೂರು ವಿಶ್ವವಿದ್ಯಾಲಯ. ಡಾ.ಟಿ.ಎಸ್. ಚಂದ್ರಶೇಖರ್, ಕ್ರಿಸ್ತು ಜಯಂತಿ ವಿದ್ಯಾಲಯ, ಡಾ.ಕೆ. ಹೇಮಲತಾ, ಕ್ರೈಸ್ಟ್ ವಿಶ್ವವಿದ್ಯಾಲಯ. ಎನ್.ವಿ. ವಾಸುದೇವ ಶರ್ಮಾ, ಚೈಲ್ಡ್ ರೈಟ್ಸ್ ಟ್ರಸ್ಟ್. ಇವರುಗಳು ಒಂದೊಂದು ತಿಂಗಳಿಗೆ ಗೌರವ ಸಂಪಾದಕರಾಗಿ ಸಹಕಾರ ನೀಡಲು ಒಪ್ಪಿಕೊಂಡಿರುವುದು ನಮಗೆ ಸಂತಸ ನೀಡಿದೆ. ಮತ್ತು ಪತ್ರಿಕೆಗೆ ಚೈತನ್ಯ ಬಂದಿದೆ. ಇವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
·         ಬೆಂಗಳೂರಿನ ನಿಮ್ಹಾನ್ಸ್ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರೂ ಆಗಿದ್ದ ಡಾ.ಆರ್.ಎನ್. ಭಟ್ಟಿ ಅವರು ಇತ್ತೀಚೆಗೆ ನಿಧನರಾದರು. ಇವರು ವಿಭಾಗವನ್ನು ಕಟ್ಟಿ ಬೆಳೆಸಿದರು; ವಿಷಯದ ಅಧ್ಯಯನಕ್ಕೆ ಒಂದು ನಿಶ್ಚಿತ ದಿಕ್ಕು ತೋರಿಸಿದವರು. ಪ್ರೊ. ಭಟ್ಟಿ ಅವರ ನಿಧನದಿಂದ ಸಮಾಜಕಾರ್ಯ ವೃತ್ತಿಗೆ ತುಂಬಲಾರದ ನಷ್ಟವಾಗಿದೆ
            ಭಾರತೀಯ ಸಮಾಜಕಾರ್ಯ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ, ಭಾರತೀಯ ಸಂಸ್ಕೃತಿಯ ಸೊಗಡಿಗೆ ಹೊಂದಿಕೊಳ್ಳುವಂಥ ಸಮಾಜಕಾರ್ಯ ಕ್ಷೇತ್ರ ಅಧ್ಯಯನ ಕಾರ್ಯದ ಬಗ್ಗೆ ಪುಸ್ತಕಗಳನ್ನು ಬರೆದುದಲ್ಲದೆ ಸಮಾಜಕಾರ್ಯ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿ, 12ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಬರೆದು ಸಮಾಜಕಾರ್ಯ ವೃತ್ತಿಪರರ ಮನದಾಳದಲ್ಲಿ ನೆಲೆಸಿದ್ದ ಡಾ.ಇಕ್ಬಾಲ್ ಸುಬೇದರ್ ಅವರು ನವೆಂಬರ್ 19ರಂದು ನಿಧನರಾದರು.  ಇವರಿಬ್ಬರ ಅಗಲಿಕೆ ಭಾರತೀಯ ಸಮಾಜಕಾರ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ನಮ್ಮನಗಲಿದ ಪ್ರೊ.ಆರ್.ಎನ್. ಭಟ್ಟಿ ಹಾಗೂ ಡಾ.ಇಕ್ಬಾಲ್ ಸುಬೇದರ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ.
·         ಸಮಾಜಕಾರ್ಯದ ಹೆಜ್ಜೆಗಳು ಮಾಸಪತ್ರಿಕೆಯು ತನ್ನ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿ ಎರಡನೆಯ ವರ್ಷಕ್ಕೆ ಕಾಲಿಡುತ್ತಿದೆ. ಯಶಸ್ವಿಗೆ ಕಾರಣಕರ್ತರಾದ ನಮ್ಮ ಎಲ್ಲ ಸ್ನೇಹಿತರಿಗೂ, ವೃತ್ತಿಪರರಿಗೂ, ಹಿತೈಷಿಗಳಿಗೂ, ಸಲಹಾಗಾರರಿಗೂ, ತುಂಬು ಹೃದಯದ ಧನ್ಯವಾದಗಳು.
·         ನಮ್ಮ ಪತ್ರಿಕೆಯ ಮುಖಬೆಲೆಯನ್ನು ಸಂಚಿಕೆಯಿಂದ ರೂ.30 ಮಾಡಿದ್ದೇವೆ. ಜೊತೆಗೆ ಚಂದಾ ದರವನ್ನು ಹೆಚ್ಚಿಸಲಾಗಿದೆ. ಇದೇ ಸಂದರ್ಭದಲ್ಲಿ ಸಮಾಜಕಾರ್ಯ ವೃತ್ತಿಪರರು ಪತ್ರಿಕೆಯನ್ನು ಕೊಂಡು ಓದುವುದರ ಮೂಲಕ, ಚಂದಾದಾರರಾಗುವ ಮೂಲಕ ನಮ್ಮ ಪ್ರಯತ್ನಕ್ಕೆ ಸಹಕಾರ ನೀಡಬೇಕಾಗಿ ವಿನಂತಿ
            ನಮ್ಮ ಪತ್ರಿಕೆಗೆ ಮಲ್ಲಿಕಾರ್ಜುನಸ್ವಾಮಿ, ರೇವಣ್ಣ ಹಾಗೂ ಶ್ರೀ ಗಿರೀಶ್ರವರ ಸಹಕಾರದಿಂದ ಕೂಡ್ಲಿಗಿ ತಾಲ್ಲೂಕಿನ 30 ಪ್ರೌಢಶಾಲೆಗಳು  ನಮ್ಮ ಪತ್ರಿಕೆಯ ಚಂದಾದಾರರಾಗಿದ್ದಾರೆ. ಇವರೆಲ್ಲರಿಗೂ ನಮ್ಮ ತಂಡ ಕೃತಜ್ಞತೆಯನ್ನು ಸಲ್ಲಿಸುತ್ತದೆ.

ರಮೇಶ  ಎಂ.ಎಚ್.


No comments:

Post a Comment