Wednesday, September 25, 2013

ಆಧುನಿಕ ಯುಗದಲ್ಲಿ ನಾವೆಲ್ಲರೂ ಸ್ವರ್ಧಾತ್ಮಕ, ವರ್ಣರಂಜಿತ, ಆಕರ್ಷಣೆಯ ಮುಂದುವರೆದ ಜಗತ್ತಿನಲ್ಲಿದ್ದೇವೆ.

ಸಂಪಾದಕೀಯ


ಆಧುನಿಕ ಯುಗದಲ್ಲಿ ನಾವೆಲ್ಲರೂ ಸ್ವರ್ಧಾತ್ಮಕ, ವರ್ಣರಂಜಿತ, ಆಕರ್ಷಣೆಯ ಮುಂದುವರೆದ ಜಗತ್ತಿನಲ್ಲಿದ್ದೇವೆ. ಆವಿಷ್ಕಾರಗಳನ್ನು ಎಲ್ಲಾ ರಂಗಗಳಲ್ಲಿಯೂ ಮಾಡಿದ್ದೇವೆ, ಮಾಡುತ್ತಿದ್ದೇವೆ. ಚಂದ್ರಗ್ರಹಕ್ಕೆ ಕಾಲಿಟ್ಟಿದ್ದೇವೆ ಆದರೆ, ನಮ್ಮದೇ ಪಕ್ಕದ ಮನೆಯವರಲ್ಲಿ ಅಪರಿಚಿತರಾಗಿದ್ದೇವೆ, ಸಮಾಜಕಾರ್ಯಕರ್ತರು ಸಮಾಜಕಾರ್ಯಕರ್ತರಿಗೆ ಅಪರಿಚಿತರಾಗಿದ್ದೇವೆ. ನಮ್ಮೆಲ್ಲ ಸಮಾಜಕಾರ್ಯರ್ತರೆಲ್ಲರೂ ವ್ಯಕ್ತಿಗತ ನೆಲೆಯಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ ಸಮಾಜಕಾರ್ಯಕ್ಷೇತ್ರದ ಸಂಘಟನೆಯನ್ನು ಮರೆಯುತ್ತಿದ್ದೇವೆ. ಮಾತುಗಳು ನಮ್ಮ ಸಮಾಜಕಾರ್ಯ ಕ್ಷೇತ್ರಕ್ಕೆ ಅದರಲ್ಲೂ ಕರ್ನಾಟಕದ ಮಟ್ಟಿಗೆ ಸತ್ಯವಾಗಿವೆಯೆಂದರೆ ತಪ್ಪಾಗಲಾರದು
            ಸಮಾಜಕಾರ್ಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಶಿಕ್ಷಣ ಸಂಸ್ಥೆಗಳು ಹೆಚ್ಚಾಗುತ್ತಿವೆ. ಸಮಾಜಕಾರ್ಯವನ್ನು ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ. (ಡಾ. ಎಚ್.ಎಂ. ಮರುಳಸಿದ್ಧಯ್ಯನವರ "ಸಮಾಜಕಾರ್ಯ" ಪುಸ್ತಕಗಳನ್ನು ಹೊರತುಪಡಿಸಿ)  ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಊಹಿಸಿಕೊಂಡರೆ ಸಮಾಜಕಾರ್ಯ ಸಾಹಿತ್ಯ ಶೂನ್ಯ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಕಾರ್ಯವನ್ನು ಕಲಿಯುತ್ತಿರುವ ಸಂದರ್ಭದಲ್ಲಿ ಸಮಾಜಕಾರ್ಯ ಸಾಹಿತ್ಯದ ಕೊರತೆಯನ್ನು ನೀಗಿಸಬೇಕಾದದ್ದು ಕ್ಷಣದ ಅಗತ್ಯತೆಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಕೇವಲ ಕನ್ನಡದಲ್ಲಿ ಮಾತ್ರವೇ ಸಮಾಜಕಾರ್ಯ ಸಾಹಿತ್ಯದ ಕೊರೆತೆಯಿಲ್ಲ. ಇಂಗ್ಲಿಷ್ನಲ್ಲಿಯೂ ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತೀಯ ಬರವಣಿಗೆಯ ಕೊರತೆ ಎದ್ದು ಕಾಣುತ್ತಿದೆ. ಮೇಲ್ಕಂಡ ವಿಷಯಗಳು ನಮ್ಮೆಲ್ಲರಿಗೂ ತಿಳಿದ ನಗ್ನ ಸತ್ಯಗಳೇ ಆದರೂ ಸಾಹಿತ್ಯ ಸೃಷ್ಟಿಯ ಕಡೆಗಾಗಲಿ, ವೃತ್ತಿಪರರ ಸಂಘಟನೆಗಳ ಕಡೆಗಾಗಲಿ ನಮ್ಮೆಲ್ಲರ ಪ್ರಯತ್ನ ಶೂನ್ಯ. ವೃತ್ತಿಪರ ಸಮಾಜಕಾರ್ಯದ ರೀತಿಯ ತ್ರಿಶಂಕು ಸ್ಥಿತಿಗೆ ನಾವೆಲ್ಲರೂ ಕಾರಣಕರ್ತರೆ. ಸಮಾಜವು ವೃತ್ತಿಪರ ಸಮಾಜಕಾರ್ಯಕರ್ತರನ್ನು ಗುರುತಿಸಿ ಇತರೆ ವೃತ್ತಿಗಳ ಹಾಗೆ ಇವರನ್ನು ಗೌರವಿಸಬೇಕಾದರೆ "ನಾವು ಪರಿಹಾರದ ಭಾಗವಾಗದಿದ್ದರೆ, ನಾವೇ ಸಮಸ್ಯೆಗಳ ಭಾಗವಾಗುತ್ತೇವೆ" (If we are not part of the solution, then we are part of the problem) ಎಂಬ ವಾಕ್ಯ ನಮ್ಮನ್ನು ಚಿಂತಿಸುವಂತೆ ಮಾಡಿ ಕಾರ್ಯೋನ್ಮುಖರನ್ನಾಗಿಸಬೇಕು.
            ಶೃತಿಯಾಗಿರುವ ವಾದ್ಯವನ್ನು ಚೇಷ್ಟೆಗೆಂದು ಮುಟ್ಟಿದರೂ ಸ್ವರ ಶೃತಿಯಲ್ಲಿಯೇ ಹೊರಡುವಂತೆ. ಸ್ವಭಾವ ಪರಿಶುದ್ಧವಾದ ಮನುಷ್ಯನ ಮಾತು ಎಂಥ ಹೊತ್ತಿನಲ್ಲಿಯೂ ಶುದ್ಧವಾಗಿಯೇ ಇರುವುದು ಎಂಬಂತ್ತಿರುವ ಕನಸುಗಾರ, ದಾರ್ಶನಿಕ, ಹಟಮಾರಿ ಹೀಗೆ ಸಮಾಜಕಾರ್ಯದ ಒಳ - ಹೊರಗಿನ ಯಾವುದೇ ಇತ್ಯಾತ್ಮಕ ಸಂಗತಿಯನ್ನು  ಚಿಂತಿಸುವಾಗ ಹೊಳೆಯುವ, ಕಾಣುವ, ಕೇಳುವ, ಹೆಸರೇ  ಶ್ರೀ ಡಾ. ಎಚ್. ಎಂ. ಮರುಳಸಿದ್ಧಯ್ಯ. ಅವರ ಸಲಹೆ, ಸೂಚನೆ, ಪ್ರೀತಿ ಇರದಿದ್ದಲ್ಲಿ ನಮ್ಮ ನಿಯತಕಾಲಿಕೆ ಹೊರತರಲು ಸಾಧ್ಯವಾಗುತ್ತಿರಲಿಲ್ಲ.
            'ನಿರಾತಂಕ' ಕಟ್ಟುವ ಪ್ರಯತ್ನಕ್ಕೆ ಶ್ರೀಯುತ ಹನುಮಂತರಾಯಪ್ಪ, ಮಾಜಿ ಅಧ್ಯಕ್ಷರು, ರಾಜರಾಜೇಶ್ವರಿ ನಗರಸಭೆ, ಬೆಂಗಳೂರು. ಇವರ ಸಲಹೆ, ಸಹಕಾರ ಹಾಗೂ ಬೆಂಬಲದಿಂದ ನಮ್ಮ ನಿರಾತಂಕ ತಂಡ ಸುಸೂತ್ರವಾಗಿ ಇದುವರೆಗೂ ಹೆಜ್ಜೆ ಹಾಕಿದೆ. ನಮ್ಮ 'ನಿರಾತಂಕ' ಬಳಗದ ಸದಸ್ಯರಾದ, ಪೊನ್ನಸ್ವಾಮಿ ಎನ್, ಅನಿತಾ ಬಿ, ವೆಂಕಟೇಶ್ ಕೆ, ಮಹಾಲಕ್ಷ್ಮೀ, ಇಂದಿರಾ, ಗಂಗರಾಜು, ವೈಶಾಲಿ, ನಿರ್ಮಲ ಇವರೆಲ್ಲರ ಪ್ರತಿಫಲಾಪೇಕ್ಷೆಯಿಲ್ಲದ ಕೆಲಸದ ಸಾಕ್ಷಿ ನಮ್ಮ `ಸಮಾಜಕಾರ್ಯದ ಹೆಜ್ಜೆಗಳು'. 
            ಸಂಚಿಕೆಯಲ್ಲಿ ನಿಮಗೆ ಸಮಾಜಕಾರ್ಯ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳು ಹಾಗೂ ಇತ್ತೀಚೆಗೆ ಸಮಾಜಕಾರ್ಯ ಕ್ಷೇತ್ರದಲ್ಲಿನ ವಿದ್ಯಮಾನಗಳ ಬಗ್ಗೆ ಪರಿಚಯಿಸಲಾಗಿದೆ. ನಮ್ಮ ಮೊಟ್ಟಮೊದಲ ಸಂಚಿಕೆಗೆ ಸ್ಪಂದಿಸಿ ಲೇಖನಗಳನ್ನು ಬರೆದಂತಹ ಸಮಾಜಕಾರ್ಯ ವೃತ್ತಿಪರರೆಲ್ಲರಿಗೂ ಧನ್ಯವಾದಗಳು. ವೃತ್ತಿಪರ ಸಮಾಜಕಾರ್ಯಕರ್ತರು ನಮ್ಮ ಕೆಲಸಗಳನ್ನು ಗಮನಿಸಿ ರಚನಾತ್ಮಕ ಸಲಹೆಗಳೊಂದಿಗೆ ನಮ್ಮ ತಂಡವನ್ನು ಪ್ರೋತ್ಸಾಹಿಸಲು ವಿನಂತಿ.

ರಮೇಶ  ಎಂ.ಎಚ್.


No comments:

Post a Comment