Wednesday, September 25, 2013

ಪೌಷ್ಟಿಕತೆಯ ಕೊರತೆ



ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಒಲಿದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಸಂತೋಷದ ಸಂದರ್ಭವನ್ನು ಅನುಭವಿಸುತ್ತಿರುವಾಗಲೇ ಕಾರ್ಮೋಡದಂತೆ ಎರಗಿ ಬಂದ ಸತ್ಯ ಘಟನೆಯೊಂದು ನಮ್ಮೆಲ್ಲರನ್ನು  ಚಿಂತಿಸುವಂತೆ ಮಾಡಿದೆ. ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದ ಪೌಷ್ಟಿಕ ಆಹಾರದ ಕೊರತೆಯಿಂದ ಸುಮಾರು 600ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವುದು ವಾಸ್ತವ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಾವೆಲ್ಲಿ ಆಫ್ರಿಕಾದ ಬಡದೇಶಗಳ ಸ್ಥಿತಿಯಲ್ಲಿದ್ದೇವೆಯೋ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಸ್ಥಿತಿ ಬರಿ ರಾಯಚೂರು ಜಿಲ್ಲೆಯೊಂದರಲ್ಲಿಲ್ಲ, ನಮ್ಮ ನಿಮ್ಮ ಮನೆ, ಬೀದಿ, ಹಳ್ಳಿಗಳಲ್ಲೂ, ನಗರಗಳಲ್ಲೂ ನಾವಿಂದು ಅನುಭವಿಸುತ್ತಿದ್ದೇವೆ. ರಾಜಕೀಯ ಪ್ರಚಾರಕ್ಕೆ ಅಥವಾ ಚಟುವಟಿಕೆಗಳಿಗೆ ಒಗ್ಗೂಡುವ ಜನರು ಇಂತಹ ಅನಾಗರಿಕ ಪರಿಸ್ಥಿತಿಯ ವಿರುದ್ಧ ಹೋರಾಡುವುದಕ್ಕೆ ಒಗ್ಗೂಡುವುದಿಲ್ಲ ಎಂಬುದು ನಾಚಿಕೆಯ ಸಂಗತಿ. ಕ್ರಮವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸೂಕ್ತ ಕ್ರಮ ಕೈಗೊಂಡು ನೊಂದವರ ಪಾಲಿನ ಸಂಜೀವಿನಿಯಾಗಬೇಕಾಗಿದೆ.
            ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ರವರು ತಮ್ಮ ಭಾಷಣದಲ್ಲಿ ಹೇಳಿದ ಸತ್ಯ ಸಂಗತಿಯೊಂದು ನಮ್ಮ ಆಹಾರ ಭದ್ರತೆಯ ಬಗ್ಗೆ ಇದ್ದ ಭ್ರಮೆಯನ್ನು ದೂರಮಾಡಿ ಚಿಂತೆಗೆ ಈಡು ಮಾಡುತ್ತದೆ. 1991 ಆರ್ಥಿಕ ಉದಾರ ನೀತಿಯ ಧ್ಯೇಯೋದ್ದೇಶಗಳಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ಪ್ರತಿನಿತ್ಯ 500ಗ್ರಾಂಗಳಿಗಿಂತ ಹೆಚ್ಚು ಆಹಾರವನ್ನು ಒದಗಿಸುವುದಾಗಿತ್ತು. ಆದರೆ, ಇಪ್ಪತ್ತು ವರ್ಷಗಳು ಕಳೆದರೂ ಪ್ರಸ್ತುತವಾಗಿ ನಮಗೆ ಸಿಗುತ್ತಿರುವುದು ಕೇವಲ 350ಗ್ರಾಂಗಳು. ಪರಿಸ್ಥಿತಿ ಹೀಗಿರುವಾಗ ಆಹಾರ ಭದ್ರತೆ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ ಮತ್ತು ಸೂಕ್ತವಾದ ಯೋಜನೆಗಳನ್ನು ರೂಪಿಸಬೇಕಾಗಿದೆ
            ರಾಜಕೀಯದ ಹೊಲಸು ರಾಡಿ ಮತ್ತು ಭ್ರಷ್ಟಾಚಾರತೆಯಲ್ಲಿ ಕೊಚ್ಚಿ ಹೋಗುತ್ತಿರುವ ಮಾನವೀಯ ಮೌಲ್ಯಗಳ ಉಳಿವಿಗಾಗಿ ಸಮಾಜಕಾರ್ಯಕರ್ತರಾದ ನಾವುಗಳು ಸ್ಥಳೀಯ ಮಟ್ಟದಲ್ಲಿ ಶಿಬಿರಗಳನ್ನು ಏರ್ಪಡಿಸಿ ಮಹಿಳೆ, ಮಕ್ಕಳ, ವಯೋವೃದ್ಧರ, ದುರ್ಬಲರ, ಅಸಹಾಯಕರ ಹಕ್ಕುಗಳ ರಕ್ಷಣೆಗೆ ಆಧಾರ ಸ್ತಂಭವಾಗಿ ಸಮಾಜಕಾರ್ಯದ ಅಸ್ತಿತ್ವವನ್ನು ಉಳಿಸಬೇಕಾಗಿದೆ. ಇಲ್ಲದಿದ್ದರೆ ಸಮಾಜಕಾರ್ಯ ಕೇವಲ ವಿದ್ಯಾಭ್ಯಾಸ ಪಡೆದವರ ಉದರ ಪೋಷಣೆಯ ವಿಷಯವಾಗಿ ಇರಬೇಕಾದೀತು!
            ಬೆಂಗಳೂರಿನ ವಿಶ್ವವಿದ್ಯಾನಿಲಯದ ಹಲವು ಸಂಯೋಜಿತ ಕಾಲೇಜುಗಳಲ್ಲಿ ಸಮಾಜಕಾರ್ಯ ವಿಭಾಗಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಬೆರಳೆಣಿಕೆಯಷ್ಟು. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ಸಿಗುವುದು ಹಲವಾರು
            ಕರ್ನಾಟಕದಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಹೆಚ್ಚಿನ ಜನರಿಗೆ ಎಂ.ಎಸ್.ಡಬ್ಲ್ಯೂ. ಸ್ನಾತಕೋತ್ತರ ಪದವಿಯ ಇರುವಿಕೆಯ ಬಗ್ಗೆ ಅರಿವೇ ಇಲ್ಲ.
            ಪ್ರಸ್ತುತ ಸಮಾಜಕಾರ್ಯ ಕಾಲೇಜುಗಳ ಗುಣಮಟ್ಟ ಕಳಪೆಯಿಂದ ಕೂಡಿದ್ದು, ಇಲ್ಲಿಂದ ಹೊರ ಬರುತ್ತಿರುವ ವಿದ್ಯಾರ್ಥಿಗಳ ಗುಣಮಟ್ಟವೂ ಕಳಪೆಯಾಗಿದೆ.
            ಕೇವಲ ಹಣದ ಉದ್ದೇಶಕ್ಕಾಗಿ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವಲ್ಲಿ ಅವು ವಿಫಲವಾಗಿವೆ
            ಪ್ರತಿಷ್ಠಿತ ಸ್ವಯಂಸೇವಾಸಂಸ್ಥೆಯೊಂದರ ನಿರ್ದೇಶಕರ ಪ್ರಕಾರ- ಕ್ಷೇತ್ರಾಧ್ಯಯನಕ್ಕೆಂದು ಬರುತ್ತಿರುವ ಬಹುಪಾಲು ವಿದ್ಯಾರ್ಥಿಗಳಿಗೆ Basic Knowledge ಕೂಡ ಇರುವುದಿಲ್ಲ ಮತ್ತು ಕಲಿಕೆಯಲ್ಲಿ ಆಸಕ್ತಿ ವಹಿಸದೆ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿರುವುದು ಸಹ ಒಂದು ಕಾರಣವಾಗಿದೆ ಎಂದಿದ್ದಾರೆ.
            ಕಳೆದ ವರ್ಷದ ತನಕ ಯಾವುದೇ ಪದವಿ (ಬಿ.. ಬಿ.ಎಸ್ಸಿ. ಬಿ.ಕಾಂ) ಪಡೆದವರಿಗೆ ಸಮಾಜಕಾರ್ಯ ವಿಭಾಗಕ್ಕೆ ಸೇರುವ ಅವಕಾಶವಿದ್ದು, ಪ್ರಸ್ತುತ ಇದನ್ನು ಬಿ. ಮತ್ತು ಬಿ.ಎಸ್.ಡಬ್ಲೂ. ಗೆ ಮಾತ್ರ ಸೀಮಿತಗೊಳಿಸಿರುವುದು ವಿದ್ಯಾರ್ಥಿಗಳು ಸಮಾಜಕಾರ್ಯ ಸ್ನಾತಕೋತ್ತರ ಅಧ್ಯಯನಕ್ಕೆ ಸೇರುವ ಸಂಖ್ಯೆ ಕಡಿಮೆಯಾಗಿದೆ ಎನ್ನಬಹುದು.
            ಸಮಾಜಕಾರ್ಯ ವೃತ್ತಿಪರರೆಲ್ಲರಿಗೂ ಒಂದು ಪ್ರಶ್ನೆ ಕಾಡುತ್ತಿರಬಹುದು. ನಿರಾತಂಕ ತಂಡದವರು ಅನನುಭವಿಗಳು, ಆದರೆ ರೀತಿಯ ಪತ್ರಿಕೆ ಹೊರತರಲು ಅವರಿಗೆ ಹೇಗೆ ಸಾಧ್ಯವಾಯಿತು! ಇದೇ ಪ್ರಶ್ನೆಯನ್ನು ನವಕರ್ನಾಟಕ ಪ್ರಕಾಶನದ ನಿರ್ದೇಶಕರೂ ಕೇಳಿದ್ದುಂಟು. ಹಾಗೆಯೇ ಪತ್ರಿಕೆಯನ್ನು ನಡೆಸಲು ಹಣ ಎಲ್ಲಿಂದ ಬರುತ್ತದೆ? ಹೇಗೆ ಬರುತ್ತದೆ? ಇವರೆಲ್ಲರ ಪ್ರಶ್ನೆಗಳು ಅತ್ಯಂತ ಸೂಕ್ತವಾದವುಗಳೇ. ಆದರೆ ಇದೆಲ್ಲದರ ಹಿಂದೆ ಶ್ರೀಯುತರಾದ ಹನುಮಂತರಾಯಪ್ಪ, ಮಾಜಿ ಅಧ್ಯಕ್ಷರು, ರಾ.ರಾ.ನಗರಸಭೆ, ಜಿ. ಗೋಪಾಲ್, ವೇಲ್ಫೇರ್ ಕಮಿಷನರ್, ಡಾ.ಎಚ್.ಎಸ್. ದೊರೆಸ್ವಾಮಿ, ಎನ್.ವಿ. ವಾಸುದೇವ ಶರ್ಮಾ, ಪ್ರೊ.ಕೆ.ಭೈರಪ್ಪ, ಎಸ್..ಶ್ರೀನಿವಾಸಮೂರ್ತಿ, ಜಿ.ಲಕ್ಷ್ಮೀಪ್ರಸಾದ್, ಸಿದ್ಧರಾಮಣ್ಣ, (CDPO), ಎಂ..ಬೋರಟ್ಟಿ, ಡಿ.ವೆಂಕಟೇಶ್ (ಸಾಯಿಮಣಿ ಪ್ರಕಾಶನ) ಹನುಮಂತಪ್ಪ (ಗಂಗಾವತಿ) ಮತ್ತು ಸಲಹಾ ಮಂಡಲಿ, ಕ್ರಿಯಾ ಗುಂಪಿನ ಸದಸ್ಯರು ಮುಂತಾದ ವ್ಯಕ್ತಿಗಳ ಶ್ರಮ ಅಡಗಿದೆ
            ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಗೆ ಮೊದಲು ಸ್ಫೂರ್ತಿ ನೀಡಿದವರು ಡಾ.ಎಚ್.ಎಂ.ಮರುಳಸಿದ್ಧಯ್ಯನವರು. ಪತ್ರಿಕೆಯ ಪ್ರತಿ ಸಂಚಿಕೆಯಲ್ಲೂ ಬರುವ ಎಲ್ಲಾ ಲೇಖನಗಳನ್ನು ಹೆಚ್ಚು ಆಸಕ್ತಿವಹಿಸಿ ತಿದ್ದುಪಡಿ ಮಾಡುತ್ತಾರೆ. ಹಲವರಿಗೆ ಕರೆಮಾಡಿ ನೀವು ಲೇಖನಗಳನ್ನು ಬರೆಯಬೇಕು ಎಂದು ಸಲಹೆ ನೀಡುತ್ತಿದ್ದಾರೆ. ನಿರಾತಂಕದ ಪ್ರತಿಯೊಬ್ಬ ಸದಸ್ಯರು ಮರುಳಸಿದ್ಧಯ್ಯನವರಿಗೆ ಆಪ್ತರು. ಪ್ರಿಂಟಿಂಗ್ ವಿಭಾಗದಿಂದ ಹಿಡಿದು ಡಿ.ಟಿ.ಪಿ. ಮಾಡುವವರು ಸಹ ಮರುಳಸಿದ್ಧಯ್ಯನವರ ಬಗ್ಗೆ ಗೌರವ ಹಾಗೂ ತಪ್ಪುಮಾಡಿದರೆ ಕೇಳುತ್ತಾರೆಂಬ ಭಯ. ಪತ್ರಿಕೆಯ ಸಂಪಾದಕನಾದ ನನಗೆ ಬೇಕಾದರೂ ನೆಪಹೇಳುವ ನಮ್ಮ ತಂಡ ಮರುಳಸಿದ್ಧಯ್ಯರವರಿಗೆ ನೆಪ ಹೇಳಲು ತಡಕಾಡಬೇಕಾಗುತ್ತದೆ. ಪತ್ರಿಕೆಯ ಬಹುಪಾಲು ಚಂದಾಹಣ ಮರುಳಸಿದ್ಧಯ್ಯನವರ ಕೋರಿಕೆಯ ಮೇರೆಗೆ ತಲುಪಿದೆ. ರೀತಿ ಪ್ರತಿ ಹಂತದಲ್ಲೂ ನಮಗೆ ಪ್ರೋತ್ಸಾಹ ನೀಡುತ್ತಾ ಹುರಿದುಂಬಿಸುತ್ತಾ ಬರುತ್ತಿರುವ ಡಾ. ಎಚ್.ಎಂ.ಮರುಳಸಿದ್ಧಯ್ಯನವರ ಸಹಕಾರದಿಂದ ಮಾತ್ರ ಪತ್ರಿಕೆ ಸುಂದರವಾಗಿ ಹೊರಬರಲು ಸಾಧ್ಯವಾಗುತ್ತಿದೆ.
            ದಿಲ್ಲಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಶಂಕರಪಾಠಕರೂ ಅಮೂಲ್ಯವಾದ ಸಲಹೆ ಸೂಚನೆ ನೀಡುತ್ತಿದ್ದಾರೆ. ಅವರ ಅಮೂಲ್ಯ ಅನುಭವಗಳನ್ನು ಇಡೀ ನಮ್ಮ ತಂಡದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.     
            ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಇವರ ಸಹಯೋಗದಲ್ಲಿ 16ನೆಯ ಅಕ್ಟೋಬರ್ 2011 ಭಾನುವಾರದಂದು ನಿರಾತಂಕ ಸಂಸ್ಥೆಯು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ. ಎಸ್.ಗಂಗಾಧರಯ್ಯ, ಜನರಲ್ ಮ್ಯಾನೇಜರ್ ಎಚ್.ಆರ್. ಅಂಡ್ ಅಡ್ಮಿನ್ ವಿಭಾಗ, ಎಂ.ಎಸ್.ಪಿ.ಎಲ್.ಲಿಮಿಟೆಡ್, ಬಲ್ದೋಟ ಸಮೂಹ ಸಂಸ್ಥೆಗಳು, ಹೊಸಪೇಟೆ, ಕರ್ನಾಟಕ. ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ ಸಮಾಜಕಾರ್ಯ ಕ್ಷೇತ್ರದ ಅನೇಕ ದಿಗ್ಗಜರು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ.

ರಮೇಶ  ಎಂ.ಎಚ್.


No comments:

Post a Comment