Sunday, December 1, 2013

ಜವಾಬ್ದಾರಿ ಸರ್ಕಾರಕ್ಕಾಗಿ ಹೋರಾಟ: ಮೈಸೂರು ಚಲೋ ಚಳುವಳಿಯಲ್ಲಿ ಡಾ|| ಹೆಚ್. ನರಸಿಂಹಯ್ಯನವರ ಪಾತ್ರ

 

1.      ಡಾ.ಹೆಚ್. ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು; ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು; ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿದ್ದರು; ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಬಹು ಮುಖ್ಯವಾಗಿ ವೈಜ್ಞಾನಿಕ ಮನೋಭಾವವನ್ನು ಹೊಂದಿದ್ದ ಇವರು ರಾಷ್ಟ್ರೀಯ ಸೇವಾಯೋಜನೆಯ ಚೇತನರಾಗಿದ್ದರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗದ ಸ್ಥಾಪನೆ ಹಾಗೂ ಬೆಳವಣಿಗೆಗೆ ಶ್ರಮಿಸಿದರು.

ಭಾರತವನ್ನು ಬ್ರಿಟಿಷರ ದಾಸ್ಯ ಸಂಕೋಲೆಗಳಿಂದ ಬಂಧಮುಕ್ತಗೊಳಿಸಲು ಕೋಟ್ಯಂತರ ಭಾರತೀಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರುಮಹಾತ್ಮಾ ಗಾಂಧೀಜಿಯವರು ಭಾರತಕ್ಕೆ ಬಂದಾಗಿನಿಂದ ಚಳುವಳಿಯು ಅಹಿಂಸಾತ್ಮಕ ಸ್ವರೂಪವನ್ನು ಪಡೆದು ಭಾರತದ ಪ್ರತಿಯೊಂದು ಪ್ರಾಂತ್ಯವೂ ಗಾಂಧೀ ನಾಯಕತ್ವದಡಿಯ ಚಳುವಳಿಯಲ್ಲಿ ಪಾಲ್ಗೊಂಡಿತ್ತು ದಿಸೆಯಲ್ಲಿ ಮೈಸೂರು ಪ್ರಾಂತ್ಯವೂ ಹೊರತಾಗಿರಲಿಲ್ಲ. ಟಿ. ಸಿದ್ದಲಿಂಗಯ್ಯ, ಎಸ್.ನಿಜಲಿಂಗಪ್ಪ, ಕೆ.ಸಿ.ರೆಡ್ಡಿ, ಎನ್.ಎಸ್. ಹರ್ಡೇಕರ್, ಹರ್ಡೇಕರ ಮಂಜಪ್ಪ, ನಿಟ್ಟೂರು ಶ್ರೀನಿವಾಸರಾವ್, ಬಳ್ಳಾರಿ ಸಿದ್ದಮ್ಮ, ಮೊದಲಾದ ನಾಯಕರ ನಾಯಕತ್ವದಲ್ಲಿ ಸ್ವಾತಂತ್ರ್ಯ ಚಳುವಳಿಯು ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಸಂದರ್ಭದಲ್ಲಿ ತನ್ನ ಭವಿಷ್ಯವನ್ನೂ ಲೆಕ್ಕಿಸದೆ ವ್ಯಾಸಂಗವನ್ನು ತೊರೆದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಮಹಾನ್ ಗಾಂಧೀವಾದಿ ಡಾ. ಹೆಚ್. ನರಸಿಂಹಯ್ಯನವರುಇವರು ಸ್ವಾತಂತ್ರ್ಯ ಚಳುವಳಿಯೊಂದೇ ಅಲ್ಲದೆ, ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯ ಸಂದರ್ಭದಲ್ಲೂ ತನ್ನ ಅಧ್ಯಾಪಕ ವೃತ್ತಿಯನ್ನು ತೊರೆದು ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಂಡು ಅತ್ಯುತ್ತಮ ರಾಷ್ಟ್ರೀಯವಾದಿ ಎನಿಸಿಕೊಂಡರು, ನಂತರ ತಮ್ಮ ಜೀವಮಾನ ಪರ್ಯಂತ ಗಾಂಧೀವಾದಿಯಾಗಿದ್ದು ಗಾಂಧೀ ತತ್ತ್ವಗಳ ಅಡಿಯಲ್ಲಿಯೇ ಜೀವನವನ್ನು ಮುಡಿಪಾಗಿಟ್ಟರು

            ಮೈಸೂರು ರಾಜ್ಯದಲ್ಲಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಚಳುವಳಿಯು ನಡೆಯುತ್ತಿದ್ದ ಸಂದರ್ಭದಲ್ಲಿ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯ ಬೇಡಿಕೆಯು 1938ರಲ್ಲಿ ಶಿವಪುರದಲ್ಲಿ ಶ್ರೀ. ಟಿ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಣಯವನ್ನು ಕೈಗೊಂಡಿತು.(1)  1947 ಆಗಸ್ಟ್ 15ನೇ ತಾರೀಖಿನಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮೈಸೂರಿನ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರು ಭಾರತ ಒಕ್ಕೂಟಕ್ಕೆ ಸೇರುವ ಕಾಯ್ದೆಗೆ ಸಹಿ ಹಾಕಿದರಾದರೂ ರಾಜ್ಯದಲ್ಲಿ ಪ್ರಜಾಪ್ರಭುತ್ವದನ್ವಯ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಲು ಮುಂದಾಗಲಿಲ್ಲ, ಪರಿಣಾಮವಾಗಿ ಮೈಸೂರು ರಾಜ್ಯದ ಕಾಂಗ್ರೆಸ್ ನಾಯಕರು ಮತ್ತು ರಾಷ್ಟ್ರೀಯವಾದಿಗಳು ಜವಾಬ್ದಾರಿ ಸರ್ಕಾರ ರಚನೆಗಾಗಿ ಮೈಸೂರು ಚಲೋ ಚಳುವಳಿಯನ್ನು ಕೈಗೊಳ್ಳಲು ನಿರ್ಣಯಿಸಿದರು.   1947 ಸೆಪ್ಟೆಂಬರ್ 1 ರಂದು ಬೆಂಗಳೂರಿನ ಸುಭಾಷ್ ನಗರದಲ್ಲಿ ಒಂದು ಬೃಹತ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಸಿ. ರೆಡ್ಡಿಯವರು ರಾಷ್ಟ್ರ ಧ್ವಜವನ್ನು ಹಾರಿಸಿ ಮೈಸೂರು ರಾಜ್ಯದಲ್ಲಿ ಸಂಪೂರ್ಣ ಜವಾಬ್ದಾರಿ ಸರ್ಕಾರ ತಕ್ಷಣದಿಂದಲೇ ಸ್ಥಾಪನೆಯಾಗಬೇಕೆಂದು ಘೋಷಿಸಿದರುಇದರ ಸಾಧನೆಗಾಗಿ ಮೈಸೂರಿಗೆ ಹೊರಟು ಅಲ್ಲಿನ ಪ್ರತಿಬಂಧಕಾಜ್ಞೆಯನ್ನು ಮುರಿಯಬೇಕೆಂದು ಜನತೆಗೆ ಕರೆ ನೀಡಿ ಮೈಸೂರು ಚಲೋ ಚಳುವಳಿಯನ್ನು ಪ್ರಾರಂಭಿಸಿದರು.(2)

            ಭಾರತದ ಸ್ವಾತಂತ್ರ್ಯಕ್ಕಾಗಿ ಕಾಲೇಜಿನ ವಿದ್ಯಾಭ್ಯಾಸವನ್ನು ತೊರೆದು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಡಾ|| ಹೆಚ್. ನರಸಿಂಹಯ್ಯನವರು ಮೈಸೂರು ಚಲೋ ಚಳುವಳಿಯ ಸಂದರ್ಭದಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಕೆ.ಸಿ.ರೆಡ್ಡಿ ಮುಂತಾದ ನಾಯಕರುಗಳ ಪ್ರಭಾವವು ನರಸಿಂಹಯ್ಯನವರು ಜವಾಬ್ದಾರಿ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು. ಕ್ವಿಟ್ ಇಂಡಿಯಾ ಚಳುವಳಿಯು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದರೆ ಮೈಸೂರು ಚಲೋ ಚಳುವಳಿ ಮೈಸೂರು ರಾಜ್ಯದ ಸ್ವಾತಂತ್ರ್ಯಕ್ಕಾಗಿ ನಡೆಯುವ ಚಳುವಳಿ ಎಂದು ಭಾವಿಸಿದ ನರಸಿಂಹಯ್ಯನವರು ಚಳುವಳಿಯಲ್ಲಿ ಭಾಗವಹಿಸಲು ನಿರ್ಧರಿಸಿದರುಆದರೆ ತನಗೆ ಹೈಸ್ಕೂಲ್ ವ್ಯಾಸಂಗದ ಸಂದರ್ಭದಿಂದಲೂ ಆಶ್ರಯ ವಿದ್ಯಾ-ದಾನ ನೀಡಿದ ಮತ್ತು ವ್ಯಾಸಂಗ ಮುಗಿದ ನಂತರ ಅಧ್ಯಾಪಕ ವೃತ್ತಿಯನ್ನೂ ನೀಡಿದ ಸಂಸ್ಥೆಗೆ ರಾಜೀನಾಮೆ ನೀಡಿದರೆ ಎಲ್ಲಿ ಸಂಸ್ಥೆಯೊಡನೆ ಸಂಬಂಧ ಕಡಿದು ಬೀಳುವುದೋ ಎಂಬ ಅತಂಕ ಒಂದೆಡೆಯಾದರೆ ಮತ್ತೊಂದೆಡೆ ರಾಜೀನಾಮೆ ನೀಡದೆ ಅಧ್ಯಾಪಕನಾಗಿ ಚಳುವಳಿಯಲ್ಲಿ ದುಮುಕಿದರೆ, ಕಾಲೇಜನ್ನು ರಾಜಕೀಯಕ್ಕೆಳೆದು ಅದಕ್ಕೆ ದ್ರೋಹ ಬಗೆದಂತಾಗುತ್ತದೆ ಮತ್ತು ತನ್ನ ಭವಿಷ್ಯದ ಯೋಚನೆಯು ಅನಿಶ್ಚಿತತೆ, ಇವೆಲ್ಲವುಗಳನ್ನು ಯೋಚನೆ ಮಾಡಿ ಕಡೆಗೆ ತನ್ನ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಚಳುವಳಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ತಮ್ಮ ಸಹೋದ್ಯೋಗಿ ಮತ್ತು ರಸಾಯನಶಾಸ್ತ್ರದ ಅಧ್ಯಾಪಕರಾದ ಶ್ರೀ. ಕೆ. ಶ್ರೀನಿವಾಸನ್ ರವರೊಡನೆ ಲಾಲ್ಬಾಗ್ನಲ್ಲಿ ನಡೆದಾಡುತ್ತಾ ಡಾ|| ನರಸಿಂಹಯ್ಯನವರು ತಾವು ರಾಜೀನಾಮೆ ನೀಡಿ ಚಳುವಳಿಯಲ್ಲಿ ಭಾಗವಹಿಸುವ ನಿರ್ಧಾರವನ್ನು ತಿಳಿಸಿದಾಗ ಶ್ರೀ. ಕೆ. ಶ್ರೀನಿವಾಸನ್ರವರು ತಮ್ಮ ಸಹಮತವನ್ನು ವ್ಯಕ್ತ ಪಡಿಸಿದರಲ್ಲದೆ ಅವರೂ ರಾಜೀನಾಮೆ ನೀಡಿ ಚಳುವಳಿಯಲ್ಲಿ ಭಾಗವಹಿಸಲು ಮುಂದಾದರು.(3)

            ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿದ ಡಾ. ಹೆಚ್. ನರಸಿಂಹಯ್ಯನವರು ಮತ್ತು ಕೆ. ಶ್ರೀನಿವಾಸನ್ ರವರು ಪ್ರತಿಬಂಧಕಾಜ್ಞೆಯನ್ನು ಮುರಿದು ಸೆರೆಮನೆಯನ್ನು ಸೇರುವುದನ್ನು ತಿರಸ್ಕರಿಸಿ ಒಂದು ಭೂಗತ ಪತ್ರಿಕೆಯನ್ನು ಹೊರಡಿಸಿ ಜನರು ಚಳುವಳಿಯಲ್ಲಿ ಧುಮುಕುವಂತೆ ಪ್ರೆರೇಪಿಸುವುದು ಎಂದು ನಿರ್ಧರಿಸಿ ಇನ್ ಕಿಲಾಬ್ ಎಂಬ ಪತ್ರಿಕೆಯನ್ನು ಹೊರಡಿಸಲು ಮುಂದಾದರು.(4)  (ಇನ್ ಕಿಲಾಬ್ ಎಂದರೆ ಕ್ರಾಂತಿ ಎಂದರ್ಥ) ಪತ್ರಿಕೆಯನ್ನು ಮುದ್ರಿಸಲು ಆರ್ಥಿಕ ತೊಂದರೆ ಮತ್ತು ಸ್ಥಳಾಭಾವವಿದ್ದುದರಿಂದ ಸೈಕ್ಲೋಸ್ಟೈಲ್ ಮಾಡಲು ನಿರ್ಧರಿಸಿ ಕಾಲೇಜು ಆವರಣದಲ್ಲಿಯೇ ಇದ್ದ ಶ್ರೀ ರಂಗನಾಥ ಇನ್ಸ್ ಟಿಟ್ಯೂಟ್ ಆಫ್ ಕಾಮರ್ಸ್ ಸಂಸ್ಥೆಯ ಮಾಲೀಕರಾದ ಶ್ರೀ. . ಆರ್. ಶಾಮಣ್ಣನವರಿಂದ ಸೈಕ್ಲೋಸ್ಟೈಲ್ ಯಂತ್ರವನ್ನು ಪಡೆದು ಪತ್ರಿಕೆಯನ್ನು ಮುದ್ರಿಸಲು ತಮ್ಮ ಸ್ನೇಹಿತರು ಮುಂದಾದರುಆದರೆ ರಾಜ್ಯದಾದ್ಯಂತ ಪೋಲಿಸ್ ಪ್ರತಿಬಂಧಕಾಜ್ಞೆ ಜಾರಿಯಲ್ಲಿದ್ದು ಅನುಮಾನ ಬಂದವರನ್ನೆಲ್ಲಾ ದಸ್ತಗಿರಿ ಮಾಡುತ್ತಿದ್ದರುಡಾ||ನರಸಿಂಹಯ್ಯನವರ ಚುಟುವಟಿಕೆಗಳ ಕೇಂದ್ರ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನವಾಗಿದ್ದು ಇದು ಮೊದಲಿನಿಂದಲೂ ರಾಜಕೀಯ ಚಟುವಟಿಕೆಗಳ ಕೇಂದ್ರವಾದುದರಿಂದ ಸರ್ಕಾರ ಪ್ರದೇಶದ ಮೇಲೆ ನಿಗಾ ಇಡುವುದಕ್ಕಾಗಿ ಕಾಲೇಜಿನ ಮುಂಭಾಗದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ಸ್ಥಾಪಿಸಿತುಆದುದರಿಂದ ತಮ್ಮ ಸ್ನೇಹಿತರಾದ ಶ್ರೀ. ಎಲ್. . ಅಶ್ವತ್ಥನಾರಾಯಣಗೌಡರ ಮನೆಯಲ್ಲಿ ಪತ್ರಿಕೆಯನ್ನು ಮುದ್ರಿಸಲು ಅನುಮತಿಯನ್ನು ಪಡೆದು, ಸೈಕ್ಲೋಸ್ಟೈಲ್ ಯಂತ್ರವನ್ನು ಸಾಗಿಸುವಾಗ ಯಾರಿಗೂ ಅನುಮಾನ ಬಾರದಿರಲಿ ಎಂದು ನರಸಿಂಹಯ್ಯನವರು ಕತ್ತಲೆಯಲ್ಲಿ ಹಳ್ಳಿಯವರಂತೆ ಚಡ್ಡಿಯನ್ನು ಧರಸಿ ತಲೆಯ ಮೇಲೆ ಗೋಣಿಚೀಲ ಹಾಕಿಕೊಂಡು ಮುಚ್ಚಿದ ಯಂತ್ರವನ್ನು ಹೊತ್ತುಕೊಂಡು ತಮ್ಮ ಸ್ನೇಹಿತ ಶ್ರೀ. ಶ್ರೀನಿವಾಸನ್ ರೊಡನೆ ಶ್ರೀ. ಎಲ್. ಟಿ. ಅಶ್ವತ್ಥನಾರಾಯಣಗೌಡರ ಮನೆಗೆ ಹೋದರುಇದು ನರಸಿಂಹಯ್ಯನವರಲ್ಲಿ ದೇಶಭಕ್ತಿ ಎಷ್ಟಿತ್ತೆಂಬುದನ್ನು ತೋರಿಸುತ್ತದೆ.

            ಸೆಪ್ಟೆಂಬರ್ 5ರಂದು ಇನ್ ಕಿಲಾಬ್ ನ ಮೊದಲ ಸಂಚಿಕೆ ಇಂಗ್ಲಿಷಿನಲ್ಲಿ ಪ್ರಕಟವಾಯಿತುಸಾವಿರಾರು ಪತ್ರಿಕೆಗಳನ್ನು ಉಚಿತವಾಗಿ ಹಂಚಲಾಗಿ ಹಲವಾರು ತರುಣರು, ವಿದ್ಯಾರ್ಥಿಗಳು, ಉತ್ಸಾಹದಿಂದ ಇನ್ಕಿಲಾಬ್ ಪತ್ರಿಕೆಗಳನ್ನು ಗೌಪ್ಯವಾಗಿ ವಿವಿಧ ಪ್ರದೇಶಗಳಲ್ಲಿ ಹಂಚುತ್ತಿದ್ದರು. ಕೆಲವು ದಿನಗಳ ನಂತರ ಶ್ರೀ. ಅಶ್ವತ್ಥನಾರಾಯಣಗೌಡರ ಮನೆಯ ಮುಂದೆ ಅಪರಿಚಿತರು ಓಡಾಡುತ್ತಿದ್ದುದರಿಂದ ಸೈಕ್ಲೋಸ್ಟೈಲ್ ಯಂತ್ರವನ್ನು ಕಾಲೇಜಿನ ಗಣಿತಶಾಸ್ತ್ರ ಅಧ್ಯಾಪಕರಾದ ಶ್ರೀ.ಎಂ.ಎಸ್. ಸೂರ್ಯನಾರಾಯಣ ಶಾಸ್ತ್ರಿಯವರ ಅನುಮತಿಯನ್ನು ಪಡೆದು ಅವರ ಮನೆಯಲ್ಲಿಡಲು ಡಾ||ನರಸಿಂಹಯ್ಯನವರು ಮತ್ತೆ ಹಳ್ಳಿ ಕೂಲಿಗಾರರ ಸಮವಸ್ತ್ರವನ್ನು ಧರಿಸಿದರುಆದರೆ ಕೇವಲ ಮೂರು ದಿನಗಳಲ್ಲೇ ಪೊಲೀಸರಿಗೆ ಅನುಮಾನ ಬರುವುದರ ಮೂಲಕ ಸೆಪ್ಟೆಂಬರ್ 13ರಂದು ಎಂ. ಎಸ್. ಸೂರ್ಯನಾರಾಯಣ ಶಾಸ್ತ್ರಿಗಳ ಮನೆ ಮೇಲೆ ಪೊಲೀಸ್ ದಾಳಿ ನಡೆಯಿತು. ಮನೆಯಲ್ಲಿ ಸೈಕ್ಲೋಸ್ಟೈಲ್ ಯಂತ್ರ, ಮತ್ತು ಇನ್ಕಿಲಾಬ್ ಪತ್ರಿಕೆಗಳು ದೊರೆತುದರಿಂದ ಸೈಕ್ಲೊಸ್ಟೈಲ್ ಯಂತ್ರವನ್ನು ಜಪ್ತಿಮಾಡಿ ಸತ್ಯನಾರಾಯಣಶಾಸ್ತ್ರಿಯವರನ್ನು ದಸ್ತಗಿರಿ ಮಾಡಿದರು. ದಸ್ತಗಿರಿಯ ವಿಷಯವನ್ನು ಅರಿತ ಡಾ|| ಹೆಚ್. ನರಸಿಂಹಯ್ಯನವರು ಮತ್ತು ಸ್ನೇಹಿತರು ಸಂಜೆಯೆ ಪತ್ರಿಕೆಯನ್ನು ಪ್ರಕಟಿಸಿ ಪೊಲೀಸರಿಗೆ ಸತ್ಯನಾರಾಯಣ ಶಾಸ್ತ್ರಿಯವರ ಮೇಲೆ ಅನುಮಾನಬಾರದ ಹಾಗೆ ಮಾಡಬೇಕೆಂದು ನಿರ್ಧರಿಸಿದರು. ನಿಟ್ಟಿನಲ್ಲಿ ನ್ಯಾಷನಲ್ ಕಾಲೇಜಿನಲ್ಲಿದ್ದ ಹಳೆಯ ಸೈಕ್ಲೋಸ್ಟೈಲ್ ಯಂತ್ರವನ್ನು ವಾಚ್ ಮೆನ್ ವೆಂಕಟಯ್ಯನವರಿಂದ ಪಡೆದು ಪೊಲೀಸರ ಕಣ್ತಪ್ಪಿಸಿ 14ನೆಯ ತಾರೀಖಿನ ಸಂಜೆಯೆ ಪತ್ರಿಕೆಯನ್ನು ಪ್ರಕಟಿಸಿದರು.(5)

            ಬೆಂಗಳೂರಿನಲ್ಲೊಂದೇ ಅಲ್ಲದೆ ಇತರೆ ಹಳ್ಳಿಗಳಲ್ಲಿಯೂ ಪತ್ರಿಕೆಗಳನ್ನು ಪ್ರಕಟಿಸಿ ಗ್ರಾಮೀಣ ಜನತೆಯಲ್ಲೂ ರಾಷ್ಟ್ರೀಯತೆಯನ್ನು ಮೂಡಿಸಿ ಕರ್ನಾಟಕದ ಏಕೀಕರಣ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಶ್ರೀಯುತ ಹೆಚ್. ನರಸಿಂಹಯ್ಯನವರು ನಿರ್ಧರಿಸಿದರು ನಿಟ್ಟಿನಲ್ಲಿ ತಮ್ಮ ಸ್ನೇಹಿತರಾದ ಶ್ರೀನಿವಾಸನ್ ರವರೊಡನೆ ಬೆಂಗಳೂರಿಗೆ 35-36 ಕಿ.ಮೀ ದೂರದ ಕಾನಕಾನಹಳ್ಳಿಗೆ ಬೈಸಿಕಲ್ ಗಳ ಮೂಲಕ ಹೊರಟರುಕಾನಕಾನಹಳ್ಳಿಯ ಯುವ ಮುಖಂಡರಾದ ಕೆ.ಜಿ. ಶ್ರೀನಿವಾಸ ಮೂರ್ತಿಗಳ ಸಹಾಯದಿಂದ ಊರಲ್ಲಿ ಯುವಕರ ಸಭೆಯನ್ನು ಸಂಘಟಿಸಿ ಪತ್ರಿಕೆಗೆ ಮತ್ತು ತಮ್ಮ ರಾಷ್ಟ್ರೀಯ ಚಳುವಳಿಗೆ ಬೆಂಬಲ ನೀಡುವಂತೆ ಕೋರಿ ಮಾರನೇ ದಿನದಿಂದ ಅಂಚೆಯ ಮೂಲಕ ಪತ್ರಿಕೆಗಳನ್ನು ಕಾನಕಾನಹಳ್ಳಿಗೆ ಕಳುಹಿಸಿ ಚಳುವಳಿಯು ತೀವ್ರ ಸ್ವರೂಪ ಪಡೆಯಲು ಶ್ರಮಿಸ ತೊಡಗಿದರು.

            ಇನ್ಕಿಲಾಬ್ ಪತ್ರಿಕೆ ಮತ್ತು ನಾಯಕರುಗಳ ಪ್ರಭಾವದಿಂದಾಗಿ ಜವಾಬ್ದಾರಿ ಸರ್ಕಾರಕ್ಕಾಗಿ ರಾಜ್ಯದಾದ್ಯಂತ ಚಳುವಳಿಗಳು ತೀವ್ರ ಸ್ವರೂಪವನ್ನು ಪಡೆದುಕೊಳ್ಳತೊಡಗಿದವುಕಾನಕಾನಹಳ್ಳಿಯ ತಾಲ್ಲೂಕು ಕಛೇರಿಯ ಮುಂದೆ ಪಿಕೆಟಿಂಗ್, ಕೃಷ್ಣರಾಜಪುರ ಪೋಲಿಸ್ ಠಾಣೆಯ ಮೇಲೆ ಕಾಂಗ್ರೇಸ್ ಬಾವುಟಗಳನ್ನು ಹಾರಿಸಲಾಯಿತುಹಾಗೂ ಸುಮಾರು 250 ಮಂದಿ ಸತ್ಯಾಗ್ರಹಿಗಳು ಮೈಸೂರು ಅರಮನೆ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಲು ನಿರ್ಧರಿಸಿದರು.(6)  ಸುಮಾರು 80 ಮೈಲು ದೂರದ ಮಾರ್ಗವನ್ನು ಕ್ರಮಿಸಲು ಮುಂದಾದ ಸತ್ಯಾಗ್ರಹಿಗಳನ್ನು ಪೊಲೀಸರು ಮಾರ್ಗ ಮಧ್ಯದಲ್ಲಿಯೇ ಬಂಧಿಸಿ ಕಾಡು ಪ್ರದೇಶಗಳಿಗೆ ಕೊಂಡೊಯ್ದು ಬಿಡುಗಡೆ ಮಾಡತೊಡಗಿದರುಆದರೂ ಚಳುವಳಿಗಳನ್ನು ನಿಯಂತ್ರಿಸಲು ಸರ್ಕಾರ ವಿಫಲವಾಯಿತು. ಚಳುವಳಿಕಾರರ ಮೇಲೆ (ರಾಷ್ಟ್ರೀಯವಾದಿಗಳ ಮೇಲೆ) ದಮನಕಾರಿ ಕ್ರಮಗಳನ್ನು ಕೈಗೊಳ್ಳಲು ಮೈಸೂರು ರಾಜ್ಯದ ದಿವಾನರಾದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಮತ್ತು ಅವರ ಸಲಹಾ ಸಮಿತಿಯ ಸದಸ್ಯರಾದ ತಂಬೂ ಚೆಟ್ಟಿಯವರ ವಿರುದ್ಧ ಪ್ರತಿಭಟನಕಾರರು ಆರ್ಕಾಟ್ ಬಾಯ್ಕಾಟ್, ತಂಬೂಚಟ್ಟಿ ಚಟ್ಟಕಟ್ಟಿ ಎಂಬ ಘೋಷಣೆಗಳನ್ನು ಕೂಗುವುದರ ಮೂಲಕ ಅವರುಗಳ ದಮನಕಾರಿ ಕ್ರಮಗಳನ್ನು ಖಂಡಿಸತೊಡಗಿದರು.(7)

            ಜವಾಬ್ದಾರಿ ಸರ್ಕಾರಕ್ಕಾಗಿ ಮೈಸೂರು ರಾಜ್ಯದಾದ್ಯಂತ  ಚಳುವಳಿಗಳು ತೀವ್ರ ಸ್ವರೂಪವನ್ನು ಪಡೆದುಕೊಳ್ಳತೊಡಗಿದವು ಚಳುವಳಿಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಕಡೆಗೆ ಮಹಾರಾಜರಾದ ಜಯಚಾಮರಾಜ ಒಡೆಯರು ಆಗಸ್ಟ್ 6 ರಂದು ಸೆರೆಮನೆಯಲ್ಲಿದ್ದ ಎಲ್ಲಾ ನಾಯಕರನ್ನು ಬಿಡುಗಡೆಗೊಳಿಸಿಸಂಧಾನ ಮಾತುಕತೆಗಳನ್ನು ನಡೆಸಿದರು. ಒಡೆಯರು, ದಿವಾನರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಶಾಂತಿಯುತ ಮಾತುಕತೆಗಳು ನಡೆದು, ಜಯಚಾಮರಾಜ ಒಡೆಯರು ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರ ರಚನೆಗೆ ಒಪ್ಪಿಕೊಳ್ಳುವುದರ ಮೂಲಕ ಸೆಪ್ಟಂಬರ್ 12ರಂದು ಜವಾಬ್ದಾರಿ ಸರ್ಕಾರಕ್ಕಾಗಿ ಪ್ರಾರಂಭವಾದ ಚಳುವಳಿಯು ನಿಂತಿತುಅಂದೇ ಅಂದರೆ ಸೆಪ್ಟಂಬರ್ 12 ರಂದು ನ್ಯಾಷನಲ್ ಕಾಲೇಜಿನ ಶಾಲಾ ಆವರಣದಲ್ಲಿ ಬಹಿರಂಗವಾಗಿ ಸೈಕ್ಲೋಸ್ಟೈಲ್ ಯಂತ್ರವನ್ನಿಟ್ಟು ಚಳುವಳಿಗೆ ಬೆಂಬಲ ನೀಡಿದ ಜನತೆಗೆ ವಂದನೆಗಳನ್ನು ತಿಳಿಸುವ ಸಲುವಾಗಿ ಇನ್ಕಿಲಾಬ್ ಪತ್ರಿಕೆಯು ತನ್ನ ಕಡೆಯ ಸಂಚಿಕೆಯನ್ನು ಪ್ರಕಟಿಸಿ ಸುಮಾರು ಎರಡು ಸಾವಿರ ಪ್ರತಿಗಳನ್ನು ಉಚಿತವಾಗಿ ಹಂಚಿದರು.(8)

            ಬಾಲ್ಯದಿಂದಲೇ ಗಾಂಧೀಜಿಯವರನ್ನೊಳಗೊಂಡಂತೆ ಹಲವಾರು ರಾಷ್ಟ್ರೀಯ ನಾಯಕರುಗಳಿಂದ ಪ್ರಭಾವಿತರಾಗಿದ್ದ ಡಾ|| ಹೆಚ್. ನರಸಿಂಹಯ್ಯನವರು ತಮ್ಮ ಭವಿಷ್ಯವನ್ನೂ ಲೆಕ್ಕಿಸದೆ ಕಾಲೇಜು ವ್ಯಾಸಂಗವನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ದುಮುಕಿ ಸೆರೆಮನೆ ವಾಸವನ್ನು ಅನುಭವಿಸಿದರು. ನಂತರ ಮೈಸೂರು ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರ ಸ್ಥಾಪನೆಗಾಗಿ ಅಧ್ಯಾಪಕ ವೃತ್ತಿಯನ್ನು ತೊರೆದು ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿದರು. ನಿಟ್ಟಿನಲ್ಲಿ ತಮ್ಮ ಸ್ನೇಹಿತರೊಂದಿಗೆ ಸೇರಿ ಇನ್ಕಿಲಾಬ್ ಎಂಬ ಭೂಗತ ಪತ್ರಿಕೆಯನ್ನು ಹೊರಡಿಸಿ ಚಳುವಳಿಯು ತೀವ್ರ ಸ್ವರೂಪವನ್ನು ಪಡೆದುಕೊಳ್ಳಲು ಕಾರಣೀಭೂತರಾದರುನಾಡು ನನ್ನದು ಎನ್ನದವನ ಎದೆ ಸುಡುಗಾಡು ಎಂಬ ಕುವೆಂಪು ಅವರು ವಾಣಿ ಇಂದಿನ ಸಂದರ್ಭದಲ್ಲಿ ನಮಗೆ ಸ್ಫೂರ್ತಿಯಾಗಬೇಕಾಗಿದೆದೇಶಕ್ಕಿಂತ ದೇಶಾಭಿಮಾನ ದೊಡ್ಡದು ಎಂಬ ದಿವ್ಯ ಆದರ್ಶ ನಮ್ಮದಾಗಬೇಕಿದೆರಾಷ್ಟ್ರದ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಹುತಾತ್ಮ ಪುಣ್ಯ ಪುರುಷರ ಸಾಧನೆಯ ಬದುಕು ನಮಗೆ ದಾರಿದೀಪವಾಗಬೇಕಿದೆ. ಅದರಲ್ಲೂ ಹೆಚ್. ನರಸಿಂಹಯ್ಯನವರ ಶಿಸ್ತುಬದ್ಧತೆ, ವೈಚಾರಿಕತೆ, ಕರ್ತವ್ಯ ಪ್ರಜ್ಞೆ ಮತ್ತು ಸಾಮಾಜಿಕ ಕಾಳಜಿ ಇಂದಿನ ಪೀಳಿಗೆಗೆ ಆದರ್ಶವಾಗಬೇಕಿರುವುದು ಅತ್ಯವಶ್ಯಕವಾಗಿದೆ.

           

ಅಡಿ ಟಿಪ್ಪಣಿ

1.         ಫಾಲಾಕ್ಷ (1996)

            ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿ

            ಶಶಿಪ್ರಕಾಶನ, ಕೃಷ್ಣರಾಜ ಬಡಾವಡೆ

            ತಿಪಟೂರು.

            ಪು-511-12

2.         ಡಾ|| ಹೆಚ್. ನರಸಿಂಹಯ್ಯ(1995) :

            ಹೋರಾಟದ ಹಾದಿ (ಆತ್ಮಕಥೆ)

            ನ್ಯಾಷನಲ್ ಕಾಲೇಜು ಪ್ರಕಾಶನ,

            ಬೆಂಗಳೂರು-04

            ಪು-106-07

3.         ಪ್ರೊ|| ಬಿ.ಗಂಗಾಧರಮೂರ್ತಿ (2005):

            ಪ್ರತಿಭಾವಂತ ಸಂಸಧೀಯ ಪಟು ಪುಸ್ತಕ

            ಮಾಲಿಕೆ ಪದ್ಮಭೂಷಣ

            ಡಾ|| ಹೆಚ್. ನರಸಿಂಹಯ್ಯ

ಕರ್ನಾಟಕ ವಿಧಾನ ಮಂಡಲ ಗ್ರಂಥಾಲಯ

            ಸಮಿತಿ, ವಿಧಾನ ಸೌಧ, ಬೆಂಗಳೂರು-01.

            ಪು-10-11

4.         ಪ್ರಸಾರಾಂಗ, ಬೆಂಗಳೂರು

            ವಿಶ್ವವಿದ್ಯಾಲಯ(2008)

            ನಮ್ಮ ಸುತ್ತಣ ಗಾಂಧೀವಾದಿಗಳು

            25 ಗಾಂಧೀವಾದಿಗಳ ಕಿರುಕೃತಿಗಳ ಸಂಗ್ರಹ,

            ಸಂಪುಟ-1  ಗಾಂಧೀ ಅಧ್ಯಯನ ಕೇಂದ್ರ,

            ಬೆಂಗಳೂರು ವಿಶ್ವವಿದ್ಯಾಲಯ,

            ಬೆಂಗಳೂರು-50.

            ಪು-399

5.         ಜನಪದ (ಆಗಸ್ಟ್ 2011)

            ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ

            ನಾಯಕರು, ನಿದೇಶಕರು, ವಾರ್ತಾ ಇಲಾಖೆ,

            ಬೆಂಗಳೂರು-01

            ಪು-12

6.         ಡಾ|| ಹೆಚ್. ನರಸಿಂಹಯ್ಯ(1995)

            ಹೋರಾಟದ ಹಾದಿ (ಆತ್ಮಕಥೆ)

            ನ್ಯಾಷನಲ್ ಕಾಲೇಜು ಪ್ರಕಾಶನ,

            ಬೆಂಗಳೂರು-04

            ಪು-121

7.         ಫಾಲಾಕ್ಷ (1996)                         :

            ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿ

            ಶಶಿಪ್ರಕಾಶನ, ಕೃಷ್ಣರಾಜ ಬಡಾವಣೆ,

            ತಿಪಟೂರು.

            ಪು-65-66

8.         ಡಾ|| ಹೆಚ್. ನರಸಿಂಹಯ್ಯ(1995)

            ಹೋರಾಟದ ಹಾದಿ (ಆತ್ಮಕಥೆ)

            ನ್ಯಾಷನಲ್ ಕಾಲೇಜು ಪ್ರಕಾಶನ,

            ಬೆಂಗಳೂರು-04

            ಪು-12

No comments:

Post a Comment