Sunday, December 1, 2013

ಪ್ರಾದೇಶಿಕ ಅಸಮಾನತೆ ಮತ್ತು ವಲಸೆ (ಒಂದು ಅನಿಸಿಕೆ)


ಅಭಿವೃದ್ಧಿ ಸಂಬಂಧ ಪ್ರಾದೇಶಿಕ ಅಸಮಾನತೆ ಎಂಬುದು ಕರ್ನಾಟಕವನ್ನು 1956 ರಿಂದಲೂ ಕಾಡುತ್ತಿರುವ ಬಾಲಗ್ರಹ ಪೀಡೆಯಾಗಿದೆ. ಕರ್ನಾಟಕದ ಹುಟ್ಟಿನೊಂದಿಗೆ ಜನ್ಮತಳೆದ ರೋಗ ಇದಾಗಿದೆ. ವಾಸ್ತವವಾಗಿ ಇದು ಕರ್ನಾಟಕಕ್ಕೆ ವಿಶಿಷ್ಟವಾದ ಸಮಸ್ಯೆಯೇನೂ ಅಲ್ಲ. ಆಂದ್ರಪ್ರದೇಶದಲ್ಲಿ (ತೆಲಂಗಾಣ), ಮಹಾರಾಷ್ಟ್ರದಲ್ಲಿ (ಮರಾಠವಾಡ), ಗುಜರಾತ್ ನಲ್ಲಿ (ಕಚ್ ಪ್ರದೇಶ), ಒರಿಸ್ಸಾದಲ್ಲಿ (ಪಶ್ಚಿಮ ಭಾಗ) ಇಂತಹ ಸಮಸ್ಯೆಗಳು ಇರುವುದು ಕಂಡುಬರುತ್ತದೆ. ಕರ್ನಾಟಕದಲ್ಲಿನ ಅಭಿವೃದ್ಧಿ ಸಂಬಂಧ ಪ್ರಾದೇಶಿಕ ಅಸಮಾನತೆಯನ್ನು ಚಾರಿತ್ರಿಕವಾಗಿ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಇಂದು ನಾವು ಯಾವ ಜಿಲ್ಲೆಗಳನ್ನು ಅತ್ಯಂತ ಹಿಂದುಳಿದವುಗಳೆಂದು ವರ್ಗೀಕರಿಸುತ್ತಿದ್ದೇವೆಯೋ ಅವು ಒಂದು ರೀತಿಯ ಚಾರಿತ್ರಿಕ ವಿಕಲತೆಗೆ ಒಳಗಾಗಿರುವುದು ಸ್ಪಷ್ಟವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ವಸಾಹತುಶಾಹಿ ಆಡಳಿತಕ್ಕೆ ಮತ್ತು ಅಭಿವೃದ್ಧಿಗೆ  ಒಳಪಡದಿದ್ದ ಪ್ರದೇಶಗಳೇ ಇಂದು ಹಿಂದುಳಿದಿರುವ ಸ್ಥಿತಿಯಲ್ಲಿವೆ.

            ಕರ್ನಾಟಕದಲ್ಲಿ ಅಭಿವೃದ್ಧಿಗೆ ಸಂಬಂಧಿಸಿರುವಂತೆ ಪ್ರಾದೇಶಿಕ ಅಸಮಾನತೆ ಇರುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಕರ್ನಾಟಕ  ಸರ್ಕಾರದ ಯೋಜನಾ ಇಲಾಖೆಯು ಪ್ರಕಟಿಸಿರುವ  ಕರ್ನಾಟಕ ಮಾನವ ಅಭಿವೃದ್ಧಿ ಕುರಿತು ಎರಡು ವರದಿಗಳು (1999 ಮತ್ತು 2006) ಇಂದು ನಮ್ಮ ಮುಂದಿವೆ. ಕೇಂದ್ರ ಯೋಜನಾ ಆಯೋಗ 2006ರಲ್ಲಿ ಪ್ರಕಟಿಸಿರುವ ಕರ್ನಾಟಕ ಅಭಿವೃದ್ಧಿ ವರದಿ ನಮ್ಮ ಮುಂದಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಕುರಿತಂತೆ ಅಧ್ಯಯನ ನಡೆಸಲು ಸರ್ಕಾರವು 2000ರಲ್ಲಿ ನೇಮಿಸಿದ್ದ ಉನ್ನತಾಧಿಕಾರ ಸಮಿತಿ (ಡಾ.ಎಂ ನಂಜುಂಡಪ್ಪ ಸಮಿತಿ) ವರದಿ (2002) ನಮಗೀಗ ಲಭ್ಯವಿದೆ. ಜನಗಣತಿ ವರದಿಗಳಿವೆ. ಇವೆಲ್ಲವೂ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಇರುವುದನ್ನು ದೃಢಪಡಿಸಿದೆ.

            ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಹೇಗೆ ? ರಾಜ್ಯದ ಹಿಂದುಳಿದ ಜಿಲ್ಲೆಗಳಾದ ಬೀದರ್, ಬಳ್ಳಾರಿ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಕೊಪ್ಪಳ, ಚಾಮರಾಜನಗರ, ಬಾಗಲಕೋಟೆ ಇವುಗಳ ಅಭಿವೃದ್ಧಿಯ ಮಟ್ಟವು ರಾಜ್ಯದ ಅಭಿವೃದ್ಧಿ ಮಟ್ಟಕ್ಕೆ ಸಮನಾಗುವಂತೆ ಮಾಡಲು ಏನು ಮಾಡಬೇಕು? ಒಂದೇ ರಾಜ್ಯದಲ್ಲಿ ಶೇ40 ರಷ್ಟು ಸಾಕ್ಷರತೆ ಇರುವ ತಾಲ್ಲೂಕುಗಳು ಹಾಗೂ ಶೇ 80ರಷ್ಟು ಸಾಕ್ಷರತೆ ಇರುವ ತಾಲ್ಲೂಕುಗಳು ಒಟ್ಟಿಗೆ ಇರುವುದು ಹೇಗೆ ಸಾಧ್ಯ? ತಲಾದಾಯ ಒಂದು ಜಿಲ್ಲೆಯಲ್ಲಿ ರೂ 40,000 ಮತ್ತೊಂದು ಜಿಲ್ಲೆಯಲ್ಲಿ ರೂ 13,000 ಇರುವುದು ಸಾಧ್ಯವೇ? ಇದೆ! ಭೂರಹಿತ ದಿನಗೂಲಿಗಳ ಪ್ರಮಾಣ ಹಿಂದುಳಿದ ಜಿಲ್ಲೆಗಳಲ್ಲಿ ಶೇ 40ರಷ್ಟಿದ್ದರೆ ಮುಂದುವರಿದ ಜಿಲ್ಲೆಗಳಾದ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಅದು ಶೇ 20ರಷ್ಟಿದೆ. ಸಮಾನತೆಗೆ ಬದ್ಧವಾದ ಸಮಾಜದಲ್ಲಿ ಇಂತಹ ಅಂತರ, ಅಸಮಾನತೆಗಳನ್ನು ಒಪ್ಪಿಕೊಳ್ಳವುದು ಸಾಧ್ಯವಿಲ್ಲ.

            ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಚಾರಿತ್ರಿಕವಾಗಿ ಯಾವುದನ್ನು ಹೈದರಾಬಾದ್ ಕರ್ನಾಟಕ ಪ್ರದೇಶವೆಂದು ಕರೆಯಲಾಗುತ್ತದೆಯೋ ಅದರಲ್ಲಿ ಗುಲ್ಬರ್ಗಾ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಮಾತ್ರ ಸೇರುತ್ತವೆ. ಆಡಳಿತದ ಅನುಕೂಲಕ್ಕೆ ಏಕೀಕರಣದ ಸಂದರ್ಭದಲ್ಲಿ ಮದರಾಸು ಪ್ರಾಂತ್ಯದಿಂದ ವರ್ಗಾವಣೆಯಾಗಿ ಕರ್ನಾಟಕವನ್ನು ಸೇರಿದ ಬಳ್ಳಾರಿ ಜಿಲ್ಲೆಯನ್ನು ಗುಲ್ಬರ್ಗಾ ವಿಭಾಗಕ್ಕೆ ಸೇರಿಸಲಾಯಿತು. ಬೀದರ್, ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಹೈದರಾಬಾದ್ ನಿಜಾಮನ ಪ್ರಾಂತ್ಯದ ಭಾಗಗಳಾಗಿದ್ದವು. ರಾಜ್ಯ ಪುನಾವಿಂಗಡಣೆ ಸಂದರ್ಭದಲ್ಲಿ ಹೈದರಾಬಾದ್ ನಿಜಾಮ ಸಂಸ್ಥಾನವನ್ನು ಭಾಷಾನ್ವಯ ಮೂರು ಭಾಗಗಳಾಗಿ ವಿಂಗಡಿಸಲಾಯಿತು. ಮರಾಠಿ ಮಾತನಾಡುವ ಮರಾಠವಾಡ ಪ್ರದೇಶವನ್ನು ಮಹಾರಾಷ್ಟ್ರಕ್ಕೆ, ತೆಲುಗು ಭಾಷೆ ಮಾತನಾಡುವ ತೆಲುಗು ಪ್ರದೇಶವನ್ನು ಆಂದ್ರಪ್ರದೇಶಕ್ಕೆ ಮತ್ತು ಕನ್ನಡ ಮಾತನಾಡುವ ಪ್ರದೇಶವನ್ನು ಕರ್ನಾಟಕಕ್ಕೆ ವರ್ಗಾವಣೆ ಮಾಡಲಾಯಿತು. ಬಹಳ ಕುತೂಹಲದ ಸಂಗತಿಯೆಂದರೆ ನಿಜಾಮನ ಪ್ರಾಂತ್ಯದಿಂದ ವರ್ಗಾವಣೆಯಾದ ಪ್ರದೇಶಗಳು ಆಯಾ ರಾಜ್ಯಗಳಲ್ಲಿ ಇಂದಿಗೂ ಹಿಂದುಳಿದ ಪ್ರದೇಶಗಳಾಗಿ ಉಳಿದಿವೆ!

            ಹಿಂದುಳಿದ ಪ್ರದೇಶಗಳಿಂದ ಅನೇಕ ಕೃಷಿ ಕೂಲಿ ಕಾರ್ಮಿಕರು ಮತ್ತು ಯುವಜನರು ನಗರಗಳಿಗೆ (ದಕ್ಷಿಣ ಕರ್ನಾಟಕಕ್ಕೆ) ವಲಸೆ ಬರುವಂತೆ ಪ್ರೇರೇಪಿಸುವ ಕೆಲಸ ಸರ್ಕಾರಗಳೇ ಮಾಡುತ್ತಿರುವುದರಿಂದ ಅಸಮಾನತೆಯಿಂದ ಸಮಾನತೆಗೆ ದಾರಿ ಮಾಡಿಕೊಡುವ ನಿಟ್ಟ್ಟಿನಲ್ಲಿ ಯಾವುದೇ ಕೆಲಸಗಳು ಗ್ರಾಮೀಣ ಮಟ್ಟದಲ್ಲಿ ಆಗುತ್ತಿಲ್ಲ MGNREGA ನಿಟ್ಟಿನಲ್ಲಿ ಕಾರ್ಯಪ್ರೌವೃತ್ತವಾದರೂ ವಿಫಲವಾಗಿರುವುದನ್ನು ಕಂಡಿದ್ದೇವೆ. ಜಿಲ್ಲೆಗಳ ಜನರು ಕೃಷಿ ಅವಲಂಬನೆ ಅತಿಯಾಗಿರುವುದಕ್ಕೂ ಭೂರಹಿತ ಕೃಷಿ ಕೂಲಿಕಾರರ ಪ್ರಮಾಣ ಅಧಿಕವಾಗಿರುವುದಕ್ಕೂ, ಅನಕ್ಷರತೆ ಅಧಿಕವಾಗಿರುವುದಕ್ಕೂ, ವಲಸೆ ಪ್ರೌವೃತ್ತಿ ತೀವ್ರವಾಗಿರುವುದಕ್ಕೂ ಸಂಬಂಧಗಳಿವೆ.

            ಉತ್ತರಕರ್ನಾಟಕದ ಕೃಷಿ ಕೂಲಿಕಾರ್ಮಿಕರಿಗೆ ಎರಡೇ ಆಯ್ಕೆಗಳಿವೆ, ಒಂದು ಕೃಷಿಕೂಲಿ. ಇನ್ನೊಂದು ಗುಳೆ. ಕೃಷಿಕೂಲಿಯಿಂದಾಗಿ ಅವರ ಜೀವನ ಮಟ್ಟ ಮತ್ತು ಜಾಗತೀಕರಣದಿಂದಾಗಿರುವ ಹಣದ ಅಪಮೌಲ್ಯದಿಂದಾಗಿ ಹಳ್ಳಿಗಳಲ್ಲಿ ಜೀವನ ಸಾಗಿಸಲಾಗದೆ ನಗರಗಳಿಗೆ ಮುಖ ಮಾಡುವುದು ಅನಿವಾರ್ಯವಾಗಿದೆ. ಪ್ರಾದೇಶಿಕ ಸಮಾನತೆಗಾಗಿ ಸರ್ಕಾರ ಅಭಿವೃದ್ಧಿಯೆಂದರೆ ಕೇವಲ ಕಾಮಗಾರಿಯೆಂದು ಅರ್ಥೈಸಿಕೊಂಡಿರುವುದರಿಂದ ರಸ್ತೆ, ಸೇತುವೆ, ಕಟ್ಟಡ, ಸಮುದಾಯ ಭವನಗಳು ಆಸ್ಪತ್ರೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಕಟ್ಟಿದರೆ ಸಾಕು ಸಮಾನತೆ ಬರುತ್ತದೆಂಬ ನಂಬಿಕೆಯಲ್ಲಿದೆ. ಅರ್ಥಶಾಸ್ತ್ರಜ್ಞರಾದ ಅಮತ್ರ್ಯಸೆನ್ ಮತ್ತು ಮೆಹಬೂಬ್ಉಲಾಹಕ್ರ ಪ್ರಕಾರ ಜನರ ಬದುಕು ಉತ್ತಮವಾಗಬೇಕಾದರೆ ಸಮಾಜದಲ್ಲಿ ಒದಗಿರುವ ಅವಕಾಶಗಳನ್ನು ದಕ್ಕಿಸಿಕೊಳ್ಳಲು ಸಾಮಥ್ರ್ಯವಿರಬೇಕು ಮತ್ತು ಸ್ವಾತಂತ್ರ್ಯವಿರಬೇಕು. ಬೆಂಗಳೂರಿಗೆ ಬರುವ ವಲಸಿಗರಿಗೆ ತಮ್ಮ ತಾಯ್ನಾಡಿನಲ್ಲಿ ಅವಕಾಶಗಳಿಲ್ಲ; ಇದ್ದರೂ ಅವುಗಳನ್ನು ದಕ್ಕಿಸಿಕೊಳ್ಳುವ ಸಾಮಥ್ರ್ಯವಿಲ್ಲ; ಸಾಮಥ್ರ್ಯವಿದ್ದರೂ ಸ್ವಾತಂತ್ರ್ಯವಿಲ್ಲ (ಉದಾ:-ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆ ಮತ್ತು ಸರ್ಕಾರದ ಅನೇಕ ಯೋಜನೆಗಳು ಉಳ್ಳವರ ಪಾಲಾಗುತ್ತಿರುವುದು).

            ಪ್ರಾದೇಶಿಕ ಅಸಮಾನತೆಯಿಂದ ಸಮಾನತೆಗೆ ಬರಬೇಕಾದರೆ ವಲಸೆಯನ್ನು ನಿಯಂತ್ರಿಸುವುದರ ಜೊತೆಗೆ ಹೈದ್ರಾಬಾದ್ ಕರ್ನಾಟಕಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು. ಅಧಿಕಾರವನ್ನು ಹೇಗೆ ವಿಕೇಂದ್ರಿಕರಣ ಮಾಡಿದ್ದಾರೆಯೋ ಹಾಗೆಯೇ ಪ್ರತಿಯೊಂದು ಕ್ಷೇತ್ರಗಳಲ್ಲೂ ವಿಕೇಂದ್ರಿಕರಣವಾಗಬೇಕು ಉದಾ:-ಕೈಗಾರಿಕೆಗಳು, ಶಿಕ್ಷಣ, ಆರೋಗ್ಯ, ವಸತಿ, ಸಂಪರ್ಕ, ಮಾಹಿತಿತಂತ್ರಜ್ಞಾನ, ಪ್ರವಾಸೋದ್ಯಮ, ಕೃಷಿ ಸಾಕ್ಷ್ಚರತೆ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ, ಸ್ವಾತಂತ್ರ್ಯ, ದಕ್ಕಿಸಿಕೊಳ್ಳುವ ಸಾಮಥ್ರ್ಯ ನೀಡಿದಾಗ ಮಾತ್ರ ವಲಸೆಯನ್ನು ನಿಯಂತ್ರಿಸಬಹುದು.

 

ಗುಂಡಪ್ಪ ಗುಡದನಾಳ

ಅತಿಥಿ ಉಪನ್ಯಾಸಕರು, ಪಿ.ಜಿ. ಸೆಂಟರ್,

ಕೋಲಾರ. ದೂರವಾಣಿ: 9980539006

No comments:

Post a Comment