Sunday, December 1, 2013

ಕೌಟುಂಬಿಕ ವಿಘಟನೆ ಹಾಗೂ ವಯೋವೃದ್ಧರ ದುರ್ಲಕ್ಷ್ಯ


ಕಳೆದ ಕೆಲ ದಶಕಗಳಲ್ಲಿ ಕುಟುಂಬವೆಂಬ ಸಂಸ್ಥೆ, ಅದರ ರಚನೆ ಮತ್ತು ಕಾರ್ಯ ವಿಧಾನಗಳಲ್ಲಿ ಮಹತ್ವದ ಬದಲಾವಣೆಗಳನ್ನು ಕಾಣುತ್ತಾ ಇದೆ. ಅದರ ಬಹುತೇಕ ಪಾರಂಪರಿಕ ಕಾರ್ಯಗಳನ್ನು ಮಕ್ಕಳು ಹೆರುವುದು, ಅವುಗಳನ್ನು ಪಾಲನೆ ಮಾಡುವುದು ಬಿಟ್ಟರೆ ಹೊರಗಣ ಸೇವಾ ಸಂಸ್ಥೆಗಳು ವಹಿಸಿಕೊಂಡಿವೆ. ಉದಾಹರಣಾರ್ಥವಾಗಿ, ಶಾಲೆ, ಮಾರುಕಟ್ಟೆ, ಸಮೂಹ ಮಾಧ್ಯಮಗಳು ಇತ್ಯಾದಿ. ನಗರೀಕರಣ, ಔದ್ಯಮೀಕರಣ ಮುಂತಾದ ಆಧುನಿಕ ಪ್ರಕ್ರಿಯೆಗಳು ಕುಟುಂಬದ ಪಾರಂಪರಿಕ ಸಂಘಟನೆ ಹಾಗೂ ಸ್ಥಿರತೆಯನ್ನು ಬಹುಮಟ್ಟಿಗೆ ಅಸ್ಥಿರಗೊಳಿಸಿವೆ. ತತ್ಪರಿಣಾಮವಾಗಿ, ಕುಟುಂಬವು ಹಲವಾರು ಸಾಮಾಜಿಕ, ಮಾನಸಿಕ ಹಾಗೂ ಆರ್ಥಿಕ ವಿವಾದಾತ್ಮಕ ವಿಷಯಗಳನ್ನು ಹುಟ್ಟು ಹಾಕಿದೆ. ಉದಾಹರಣಾರ್ಥವಾಗಿ, (ಇಂದು) ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಅಪಮಾರ್ಗದ ಕಡೆಗಿನ ಸೆಳೆತವನ್ನು ಹೆಚ್ಚು ಪ್ರಮಾಣದಲ್ಲಿ ಕಾಣುತ್ತೇವೆ. ತಮ್ಮ ಸ್ವಕೀಯತೆಯನ್ನು ಉದ್ಘೋಷಿಸುವ, ಸ್ಥಾಪಿಸಬಯಸುವ ಪ್ರಯತ್ನದಲ್ಲಿ, ತರುಣ ತರುಣಿಯರು ಕೌಟುಂಬಿಕ ರೂಢಿಗಳನ್ನು, ಸಾಂಪ್ರದಾಯಿಕ ಕಟ್ಟಳೆಗಳನ್ನು ಮೀರುತ್ತಿದ್ದಾರೆ. ಮಾದಕ ಪದಾರ್ಥಗಳ ವ್ಯಸನ, ಮದ್ಯಸೇವನೆ, ದಾಂಪತ್ಯ ಜೀವನದಲ್ಲಿ ಬಿರುಕು, ಗಂಡಹೆಂಡಿರು ಬೇರಾಗುವಿಕೆವಿಮುಖರಾಗುವಿಕೆ ಮತ್ತು ವಿವಾಹ-ವಿಚ್ಛೇದನ, ಪ್ರೇಮವಿವಾಹ, ದಿನನಿತ್ಯದ ಸಂಸಾರದಲ್ಲಿ ನೀಡಲ್ಪಡುವ ಹಿಂಸೆ ಮತ್ತು ವಯೋವೃದ್ಧರ ದುರ್ಲಕ್ಷ್ಯ ಇವುಗಳು ಆಧುನಿಕ ಸಮಾಜದಲ್ಲಿ ಕುಟುಂಬದ ಒಡೆದು ಕಾಣುವ ಲಕ್ಷಣಗಳಾಗುತ್ತವೆ.

            ಕೌಟುಂಬಿಕ ವಿಘಟನೆಯು ಅನೇಕ ವಿವಾದಾತ್ಮಕ ಸಂಗತಿಗಳಿಗೆ ಎಡೆಮಾಡಿ ಕೊಟ್ಟಿದ್ದಾಗ್ಯೂ, ಲೇಖನ ವ್ಯಾಪ್ತಿಯ ಮಿತಿಯ ಕಾರಣ, ಕುಟುಂಬದ ಅವಿಭಾಜ್ಯ ಅಂಗವಾಗಿರುವ ವೃದ್ಧರ ಸಮಸ್ಯೆಗಳಿಗೆ ಮಾತ್ರ ಲೇಖನದಲ್ಲಿ ಲಕ್ಷ್ಯ ಹರಿಸಲು ಪ್ರಯತ್ನಿಸಲಾಗಿದೆ. ಪ್ರಸ್ತುತ ಲೇಖನದ ಮೂಲ ಪ್ರಶ್ನೆ : ಕೌಟುಂಬಿಕ ವಿಘಟನೆಯ ಸಂದರ್ಭದಲ್ಲಿ ವೃದ್ಧರ ಗತಿಯೇನು ?

            ವಿಶಾಲಾರ್ಥದಲ್ಲಿ ಹೇಳುವುದಾದರೆ, ಲೇಖನದ ಉದ್ದೇಶವು, ಕೌಟುಂಬಿಕ ವಿಘಟನೆಯ ಸಂದರ್ಭದಲ್ಲಿ ಪ್ರಕಟಗೊಳ್ಳುತ್ತಿರುವ ವೃದ್ಧರ ಸಂಬಂಧದ ಸಮಸ್ಯೆಗಳನ್ನು ಅವಲೋಕಿಸುವುದು.

           

ವಿಶೇಷತಃ, ಲೇಖನದ ಉದ್ದೇಶಗಳು ಇವು:

1)         ಭಾರತದಲ್ಲಿ ಪ್ರಚಲಿತವಿರುವ ಅವಿಭಜಿತ ಕುಟುಂಬದ ಸಂದರ್ಭದಲ್ಲಿ ಕೌಟುಂಬಿಕ ವಿಘಟನೆ ಎಂಬ ಕಲ್ಪನೆಯನ್ನು ವಿಶ್ಲೇಷಿಸುವುದು.

2)         ಬದಲಾಗುತ್ತಿರುವ ಜನನಿಬಿಡತೆಯ ಪ್ರವೃತ್ತಿಗಳಿಂದ ವೃದ್ಧರ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಪರಿಶೀಲಿಸುವುದು

3)         ಕೌಟುಂಬಿಕ ವಿಘಟನೆಯ ಸಂದರ್ಭದಲ್ಲಿ ಮುಪ್ಪಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸುವುದು.

4)         ಆವಿಷ್ಕಾರಗೊಳ್ಳುತ್ತಿರುವ ಮುಪ್ಪಿನ ಪರಿಕಲ್ಪನೆಯನ್ನು ಪರಿಶೀಲಿಸುವುದು.

ವೃದ್ಧರ ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಕುಟುಂಬವನ್ನು ಸಬಲಗೊಳಿಸುವ ಕ್ರಮಗಳನ್ನು ಸೂಚಿಸುವುದು.

           

ಕೌಟುಂಬಿಕ ವಿಘಟನೆ :

            ಒಂದು ಪರಿಕಲ್ಪನಾತ್ಮಕ ವಿಶ್ಲೇಷಣೆ :

ಕುಟುಂಬ ಎಂದರೆ ಅದೊಂದು ಸಂಬಂಧಗಳ, ಪಾತ್ರಗಳ, ಅಂತಸ್ತು, ಅಧಿಕಾರ, ದತ್ತಾಧಿಕಾರ, ರೂಢಿಯಾಚರಣೆಗಳು, ಮೌಲ್ಯಗಳು, ಪ್ರಮಾಣಗಳು-ಇವೆಲ್ಲವುಗಳ ಸಂಘಟನೆ, ವಿಶಾಲಾರ್ಥದಲ್ಲಿ ಯಾವುದೇ ಸಾಮೂಹಿಕ ಪ್ರಯತ್ನದ ಸಂದರ್ಭದಲ್ಲಿ, ಅದರಲ್ಲಿ ತೊಡಗಿಕೊಂಡ ವಿವಿಧ ಸಂಗತಿಗಳ ಮಧ್ಯದ ಸುಬದ್ಧವಾದ ಸಂಬಂಧ. ಕೌಟುಂಬಿಕ ಸಂರಚನೆಯು, ಕುಟುಂಬದಲ್ಲಿನ ಕರ್ತವ್ಯಗಳು ಹಾಗೂ ಜವಾಬ್ದಾರಿಗಳ ಮಧ್ಯದ ಆಂತರಿಕ ಸಂಬಂಧಗಳನ್ನು ಸುಭಧ್ರಗೊಳಿಸುವ ಹೊಣೆಯುಳ್ಳದ್ದು.

            ಇನ್ನೊಂದು ಕಡೆ, ಕೌಟುಂಬಿಕ ವಿಘಟನೆಯೆಂಬುದು ನಿರೀಕ್ಷಿತ ಪಾತ್ರಗಳು, ಅಂತಸ್ತುಗಳು, ಅಧಿಕಾರ, ಇತ್ಯಾದಿಗಳಿಂದ ಸರಿದು ಅಡ್ಡದಾರಿಗೆ ಹೋಗುವುದನ್ನು ಸೂಚಿಸುತ್ತದೆ. ಯಾರು ತಮ್ಮ ನಿರೀಕ್ಷಿತ ಪಾತ್ರಗಳನ್ನು ಆಡುವುದಿಲ್ಲವೋ, ಅಧಿಕಾರವನ್ನು ಚಲಾಯಿಸಲಾರರೋ ಅಂಥವರಿಗೆ ಸಿಗಬೇಕಾದ ಗೌರವ ಸಿಕ್ಕುವುದಿಲ್ಲ. ಸದಸ್ಯರ ಮಧ್ಯೆ ತಮ್ಮ ವೈಯಕ್ತಿಕ ಹಿತಸಾಧನೆಗಾಗಿ ಒಳಜಗಳಗಳು ನಿರಂತರವಾಗಿ ನಡೆದೇ ಇರುತ್ತವೆ. ಅತಿ ವ್ಯಾಪಕಾರ್ಥದಲ್ಲಿ, ಕೌಟುಂಬಿಕ ವಿಘಟನೆ (ಕುಟುಂಬ ಮುರಿದುಬೀಳುವಿಕೆ) ಎಂಬುದು, ಕುಟುಂಬಗಳಿಗೆ ಯಾವುದೇ ಸಾಮರಸ್ಯರಹಿತ ಕಾರ್ಯನಿರ್ವಹಣಕ್ಕೆ ಅನ್ವಯಿಸುತ್ತದೆ. ಕೌಟುಂಬಿಕ ವಿಘಟನೆ ಗಂಡಹೆಂಡತಿ ಮಧ್ಯದ, ತಂದೆತಾಯಿ ಹಾಗೂ ಮಕ್ಕಳ ಮಧ್ಯದ ಅಥವಾ ಹಳೇ ತಲೆಮಾರು ಹೊಸ ತಲೆಮಾರು ಇವುಗಳ ಮಧ್ಯದ ವಿರಸ, ಜಗ್ಗಾಟ ಇವನ್ನೆಲ್ಲ ಒಳಗೊಳ್ಳುತ್ತದೆ. ವಿಘಟನೆಯೆಂದರೆ ಸದಸ್ಯರ ಮಧ್ಯೆ ಪರಸ್ಪರ ವಿಶ್ವಾಸ, ನಂಬುಗೆ ಅಥವಾ ಆತ್ಮ ವಿಶ್ವಾಸ ಹಾರಿಹೋಗುವಿಕೆ; ಇದರ ಕೊನೆಯ ಘಟ್ಟ ಎಂದರೆಎಲ್ಲರ ವಿಶ್ವಾಸವನ್ನು ಗಳಿಸಿದ ಅಧಿಕಾರ, ವರ್ಚಸ್ಸು ಕುಸಿದು ಬೀಳುವಿಕೆ.

            ಕೌಟುಂಬಿಕ ವಿಘಟನೆಯು ಮನೆ ತೊರೆಯುವಿಕೆ, ಬೇರೆಯಾಗಿ ಸಂಪರ್ಕವಿಲ್ಲದೆ ಬದುಕುವಿಕೆ, ವಿವಾಹ ವಿಚ್ಛೇದನ, ಕೋರ್ಟಿನಲ್ಲಿ ದಾವೆ ಹೊಡುವಿಕೆ ಮತ್ತು ಹೆಣ್ಣುಮಕ್ಕಳ ಮತ್ತು ಮಕ್ಕಳ ಮೇಲೆ ಎಸಗಲಾದ ಹಿಂಸೆ ಇವುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೌಟುಂಬಿಕ ಕರ್ತವ್ಯ ಪಾಲನೆಯು ಕಳಚಿ ಬೀಳುತ್ತವೆಯೆಂಬ ಪ್ರಮೇಯವನ್ನು ವಿಲಿಯಂ ಆಗ್ ಬರ್ನ್ ಚರ್ಚಿಸಿದ್ದಾನೆ (1955). ಆಗ್ ಬರ್ನ್ ಪ್ರಕಾರ ವಿಘಟನೆಯತ್ತ ಸಾಗುತ್ತಿರುವ ಒಂದು ಕುಟುಂಬದ ಲಕ್ಷಣವೇನೆಂದರೆ ಅದು ಮುರಿದ ಮನೆಗಳಲ್ಲಿ ಪರಿಣಮಿಸುತ್ತದೆ. ಕೌಟುಂಬಿಕ ವಿಘಟನೆಯೆಂಬುದು ಸಾಪೇಕ್ಷ ಪದ. ನೂರಕ್ಕೆ ನೂರು ಸುಸಂಘಟಿತ ಕುಟುಂಬಗಳು ಅಥವಾ ವಿಘಟಿತ ಕುಟುಂಬಗಳು ಇರುವುದು ಸಾಧ್ಯವಿಲ್ಲ. ಸಂಘಟಿತೆ, ಹಾಗೆಯೇ ವಿಘಟಿತೆ ಹೆಚ್ಚೂ ಕಡಿಮೆ ಪ್ರಮಾಣಗಳಿರುತ್ತದೆ.

           

ಕುಟುಂಬ :

            ಕುಟುಂಬವೆಂಬುದು ಮಾನವ ಸಮಾಜದ ಪ್ರಾಥಮಿಕ ಮತ್ತು ಅತ್ಯಂತ ಪ್ರಾಚೀನವಾದ ಸಂಸ್ಥೆಗಳಲ್ಲೊಂದು. ಮಾನವ ಜನಾಂಗವು ಕುಟುಂಬದ ಮೂಲಕ ತನ್ನನ್ನು ತಾನು ಶಾಶ್ವತವಾಗಿಸಿಕೊಂಡಿದೆ. ಕುಟುಂಬಕ್ಕೆ ಹಲವು ಸವಾಲುಗಳು ಎದುರಾಗಿದ್ದರೂ, ಅವುಗಳನ್ನೆಲ್ಲ ಜಯಿಸಿ ಬದಲಾದ ಕಾಲಮಾನದ ಆಘಾತಗಳನ್ನು, ಒತ್ತಡಗಳನ್ನು ತನ್ನೊಳಗೆ ಅರಗಿಸಿಕೊಂಡು, ಅದು ಸಮಾಜದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡು ಬಂದಿದೆ.

           

ಅವಿಭಕ್ತ ಕುಟುಂಬದ ವಿಘಟನೆ :

            ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಅವಿಭಕ್ತ ಕುಟುಂಬವು ಮೂಲಭೂತವಾದ ಹಾಗೂ ಪ್ರಧಾನವಾದ ಕುಟುಂಬ ವಿಧಾನವಾಗಿದೆ. ಅದು ಆಪ್ತತೆ, ಆಸಕ್ತಿಗಳ ಸಾರಸರ್ವಸ್ವ ನಿಯಂತ್ರಣ, ಮತ್ತು ಬೇಕಾದ ಹೊತ್ತಿನಲ್ಲಿ ಒದಗುವ ಪರಸ್ಪರ ಸಹಾಯ ಇವುಗಳ ಮೇಲೆ ಗಟ್ಟಿಮುಟ್ಟಾದ ಪ್ರಾಥಮಿಕ ಗುಂಪು ಆಧಾರಿತವಾಗಿರುತ್ತದೆ.

            ಸಾಂಪ್ರದಾಯಿಕವಾಗಿ, ಅವಿಭಕ್ತ ಕುಟುಂಬವು ತನ್ನ ಸಮೀಪದ ಹಾಗೂ ದೂರದ ನೆಂಟರ ಸಾಮಾಜಿಕ ಕಲ್ಯಾಣವನ್ನು ಸಾಧಿಸುವ ಕಾರಕ ಶಕ್ತಿಯಾಗಿ ಮಹತ್ವದ ಪಾತ್ರವನ್ನಾಡಿದೆ. ಅದು ವೃದ್ಧರ, ಅಶಕ್ತರ, ರೋಗದಿಂದ ಬಳಲುತ್ತಿರುವ ತಂದೆ-ತಾಯಿಯವರು, ಅಜ್ಜ-ಅಜ್ಜಿಯರು ಇಂಥವರ ಪರಿಪಾಲನೆ ಜವಾಬ್ದಾರಿಯನ್ನು ಹೊತ್ತಿತ್ತು; ಅನಾಥರಿಗೆ, ವಿಧವೆಯರಿಗೆ, ನಿರ್ಗತಿಕರಿಗೆ ಅನ್ನ ಮತ್ತು ಆಸರೆಯನ್ನೊದಗಿಸಿತು. ಸಂಕ್ಷೇಪದಲ್ಲಿ, ದುರ್ಬಲರು ಮತ್ತು ಮುಪ್ಪಿನವರು ಅವಿಭಕ್ತಕುಟುಂಬದ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದುಕೊಂಡು ಬಂದಿದ್ದಾರೆ.

           

ಅವಿಭಕ್ತ ಕುಟುಂಬ ಮತ್ತು ವೃದ್ಧರ    

ಇಳಿಮುಖವಾಗುತ್ತಿರುವ ಸ್ಥಾನಮಾನ :

ಸಾಮಾನ್ಯವಾಗಿ ಅಧಿಕಾರ ಮತ್ತು ದತ್ತಾಧಿಕಾರ ಹಿರಿಯರ, ಅಂದರೆ, ತಂದೆ-ತಾಯಿಯವರ, ಕೈಯಲ್ಲಿ ಕೇಂದ್ರಿತವಾಗಿರುತ್ತಿದ್ದವು-ಅವರೇ ಎಲ್ಲ ಸಾಮಾಜಿಕ, ಆರ್ಥಿಕ, ಕಾನೂನಿನ ಹಾಗೂ ಕೌಟುಂಬಿಕ ವಿಷಯಗಳನ್ನು ಬಗೆಹರಿಸುತ್ತಿದ್ದರು. ಆದಾಗ್ಯೂ ಒಮ್ಮೆ ತಂದೆ-ತಾಯಿವರು ಅಜ್ಜ-ಅಜ್ಜಿಯವರಾದ ಮೇಲೆ, ಅವರು ಸಾಂಕೇತಿವಾಗಿಯಷ್ಟೇ ಮಹತ್ವದವರಾಗುತ್ತಿದ್ದರು. ವ್ಯಾವಹಾರಿಕವಾಗಿ ಅವರ ಮಹತ್ವ ನಗಣ್ಯವೆಂದೇ ಹೇಳಬೇಕು. ನಗರೀಕರಣ, ಔದ್ಯಮೀಕರಣ ಹಾಗೂ ಆಧುನೀಕರಣಗಳ ಪ್ರಭಾವದಿಂದಾಗಿ ವಿಸ್ತೃತ ಅವಿಭಕ್ತ ಕುಟುಂಬವು ಬಿಡಿ ಕುಟುಂಬವಾಗಿ  (ತಂದೆ ತಾಯಿ ಮಕ್ಕಳನ್ನು ಮಾತ್ರ ಒಳಗೊಂಡ ಕುಟುಂಬ) ಪರಿವರ್ತಿತವಾಗುತ್ತಿದೆ.

            ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಸ್ಟಷ್ಟವಾದ ಎರಡು ಬದಲಾವಣೆಗಳನ್ನು ಕಾಣಬಹುದಾಗಿದೆ.

1.         ಗಾತ್ರ

2.         ಅಂತರ ವ್ಯಕ್ತಿಗತ ಸಂಬಂಧಗಳು (Interpersonal Relations)

           

ಬದಲಾಗುತ್ತಿರುವ ಕುಟುಂಬ ಗಾತ್ರ :

ಏರುತ್ತಿರುವ ಜೀವನದ ಮಟ್ಟ, ವ್ಯಕ್ತಿಗತ ಪ್ರಗತಿಯ ಅಭಿಲಾಷೆಗಳು ಮತ್ತು ಮಕ್ಕಳ ಬಗೆಗಿನ ಧೋರಣೆ- ಇವುಗಳಿಗನುಗುಣವಾಗಿ, ಕುಟುಂಬದ ಗಾತ್ರವು ಚಿಕ್ಕದರಿಂದ ಇನ್ನೂ ಚಿಕ್ಕದಾಗುತ್ತಾ ನಡೆದಿದೆ. ಗ್ರಾಮೀಣ ಪ್ರದೇಶಗಳಲ್ಲೂ ಅವಿಭಕ್ತ ಕುಟುಂಬವು ಗಾತ್ರದಲ್ಲಿ ಬಹಳಷ್ಟು ಕಡಿತ ಅನುಭವಿಸುತ್ತಾ ಇದೆ. ಅವಿಭಕ್ತ ಕುಟುಂಬವು ಜಗ್ಗಾಟ, ಒತ್ತಡ, ಸಂಘರ್ಷ ಮತ್ತು ಬಿರುಕುಗಳಿಗೆ ಒಳಗಾಗುತ್ತಾ ಇದೆ. ಹೆಚ್ಚುತ್ತಿರುವ ಹಿರಿಯರ ಆವಶ್ಯಕತೆಗಳ ಕಡೆಗೆ ಲಕ್ಷ್ಯ ಪೂರೈಸುವುದು ಆಗುತ್ತಿಲ್ಲವೆಂದು ಅಭಿಪ್ರಾಯಿಸಬಹುದು. ಮದುವೆಯಾದ ಗಂಡು ಮಕ್ಕಳು ಇಂದು ಎಂದಿಗಿಂತ ಜಟಿಲಗೊಂಡ ತಂದೆ ತಾಯಿಯರ ಸಮಾಜೋ, ಆರ್ಥಿಕ, ವೈದ್ಯಕೀಯ ಹಾಗೂ ಮನೋರಂಜನೆಯ ಆವಶ್ಯಕತೆಗಳಿಗೆ ಲಕ್ಷ್ಯ ಪೂರೈಸದೆ, ತಮ್ಮ ಮಕ್ಕಳಿಗೆ ಹೆಚ್ಚು ಲಕ್ಷ್ಯ ಪೂರೈಸುತ್ತಿದ್ದಾರೆ. ಹಾಗೂ ಅವರಿಗಾಗಿ ತಮ್ಮ ಸಾಧನ ಸಂಪತ್ತನ್ನು ವಿನಿಯೋಗಿಸುತ್ತಿದ್ದಾರೆ. ಇದರಿಂದಾಗಿ, ತಪ್ಪು ತಿಳುವಳಿಕೆ ಹಾಗೂ ಅವಿಶ್ವಾಸಗಳ ರೂಪದಲ್ಲಿ ಒಂದು ಪ್ರಮಾಣದ ಕೌಟುಂಬಿಕ ವಿಘಟನೆ ಪ್ರಕಟಗೊಳ್ಳುತ್ತಿದೆ. ಇನ್ನೊಂದು ಕಡೆಯಿಂದ ನೋಡಲಾಗಿ, ವೃದ್ಧರು ಕೆಲವರ್ಷಗಳ ಹಿಂದೆ ಬದುಕುತ್ತಿದ್ದುದಕ್ಕಿಂತ ಹೆಚ್ಚು ಕಾಲ ಬದುಕುತ್ತಿದ್ದಾರೆ ಎಂಬ ಸಂಗತಿಯು ಒಂದು ಮಟ್ಟದ ಅನಿಶ್ಚಿತತೆ, ಅಸ್ಪಷ್ಟತೆ, ಗೊಂದಲವನ್ನು ನಿರ್ಮಾಣ ಮಾಡಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವೃದ್ಧರ ಆವಶ್ಯಕತೆಗಳನ್ನು ಪರಿಹರಿಸುವ ಸಿದ್ಧತೆ ಕುಟುಂಬದಲ್ಲಿಲ್ಲ; ಇನ್ನೊಂದೆಡೆ, ವೃದ್ಧರು ತಮ್ಮ ಬದಲಾದ ಪಾತ್ರ, ಸ್ಥಾನಮಾನ ಮತ್ತು ಭವಿಷ್ಯ ಯೋಜನೆಗಳ ಬಗೆಗೆ ಸ್ಟಷ್ಟ ಕಲ್ಪನೆ ಹೊಂದಿಲ್ಲ. ಪಿ.ಎನ್. ಸತಿ (1988) ಅವರು ಸರಿಯಾಗಿಯೇ ಹೇಳಿರುವಂತೆ ಕಳೆದ ಐವತ್ತು ವರ್ಷಗಳಲ್ಲಿ ವೃದ್ಧರ ಸಮಸ್ಯೆಗಳಲ್ಲಿ ಕೆಲವು ಮೂಲಭೂತ ಬದಲಾವಣೆಗಳು ಆಗಿವೆ. ಸಂಪ್ರದಾಯ ರೂಢವಾದ ಕೌಟುಂಬಿಕ ಸಂರಚನೆಯಲ್ಲಿ ಉದ್ದ-ಅಡ್ಡ ಬದಲಾವಣೆಗಳು-ಪರಿವರ್ತನೆ ವೃದ್ಧರನ್ನು ಸಾಂಪ್ರದಾಯಿಕ ಸಾಮಾಜಿಕ ಮತ್ತು ಕೌಟುಂಬಿಕ ವಲಯದಲ್ಲಿನ ಪ್ರತಿಷ್ಠೆಯ ಪಾತ್ರಗಳಿಂದ ಕ್ರಮೇಣ ಹೊರತುಪಡಿಸುತ್ತಿವೆ; ಅಂದರೆ ಇವು ಅವರನ್ನು ಅಂಚಿನ ಸ್ಥಾನಕ್ಕೆ ತಳ್ಳಿವೆ.

           

ಬದಲಾಗುತ್ತಿರುವ ವ್ಯಕ್ತಿ-ವ್ಯಕ್ತಿ ಮಧ್ಯದ

ಸಂಬಂಧಗಳು :

ಶಿಕ್ಷಣ, ಉದ್ಯೋಗ ಹಾಗೂ ಮಹಿಳೆಯರಿಗೆ ಸಂವಿಧಾನದಲ್ಲಿ ನೀಡಲಾದ ಖಾತರಿಯ ಕಾರಣದಿಂದಾಗಿ, ಕೌಟುಂಬಿಕ ಸಂಬಂಧಗಳಲ್ಲಿ ಸ್ಥಿತ್ಯಂತರವಾಗಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ವ್ಯಕ್ತಿಗತ ಸ್ವಾತಂತ್ರ್ಯ ಬೇಕೆನ್ನುತ್ತಿದ್ದಾನೆ. ಇದರಿಂದಾಗಿ ಸದಸ್ಯರ ವ್ಯಕ್ತಿಗತ ನಿರೀಕ್ಷೆಗಳಲ್ಲಿ ಒಂದು ಬದಲಾವಣೆಯನ್ನು ಕಾಣಬಹುದು. ಇದು ಒಂದು ಮಟ್ಟದ ಕೌಟುಂಬಿಕ ವಿಘಟನೆಯು ಶುರುವಾಗಿದೆ ಎನ್ನುವುದರ ಸುಸ್ಪಷ್ಟ ಸೂಚನೆ.

            ವೃದ್ಧಾಪ್ಯವು ಇಪ್ಪತ್ತನೆಯ ಶತಮಾನದ ಒಂದು ವಿದ್ಯಮಾನ. ಸಾಂಪ್ರದಾಯಿಕ ಸಮಾಜದಲ್ಲಿ ಮುಪ್ಪಾಗುವಿಕೆಯಂಥ ಒಂದು ಕಲ್ಪನೆಯೇ ಇರಲಿಲ್ಲ. ವೃದ್ಧರೆಂಬ ಒಂದು ಮಹತ್ವ ಪೂರ್ಣ ಸಮುದಾಯವು ಆಧುನಿಕ ಸಮಾಜದಲ್ಲಿ ಗಣನೀಯ ಶಕ್ತಿಯಾಗಿ ಹೊರ ಹೊಮ್ಮಿದೆ.

           

ಜನ ಸಂಖ್ಯಾ ವಾಸ್ತವಾಂಶಗಳು ಹಾಗೂ ಹೆಚ್ಚುತ್ತಿರುವ ಆಯುರ್ಮಾನ :

ಹತ್ತೊಂಬತ್ತನೆಯ  ಶತಮಾನವು ಹಲವು ಸಮಾಜೋ-ಆರ್ಥಿಕ, ಶೈಕ್ಷಣಿಕ, ವೈದ್ಯಕೀಯ ಮತ್ತು ತಾಂತ್ರಿಕ ಶಕ್ತಿಗಳನ್ನು ಆವಿರ್ಭಾವಕ್ಕೆ ಕಾರಣವಾದುದರಿಂದ, ಜಗತ್ತಿನ ಜನಸಂಖ್ಯಾ ನಕ್ಷೆಯು ಹೊಸ ಆಕಾರ ಪಡೆದುಕೊಳ್ಳತೊಡಗಿತು. ಮರಣ ಪ್ರಮಾಣದಲ್ಲಿ ಮತ್ತು ಫಲವಂತಿಕೆಯಲ್ಲಿ ತೀವ್ರತರವಾದ ಇಳಿಕೆಯು ಆಯುರ್ನಿರೀಕ್ಷೆಗೆ ಪುಷ್ಟಿ ನೀಡಿತು. ಉದಾಹರಣೆಗೆ ಜನನ ಸಮಯದಲ್ಲಿ ಆಯುರ್ಮಾನ ನಿರೀಕ್ಷೆ 1951 ರಲ್ಲಿ 32.1 ವರ್ಷ ಆಗಿದ್ದರೆ, ಮುಂದಿನ ದಶಕಗಳಲ್ಲಿ ಅದು (2001) ರಲ್ಲಿ 63.5 ವರ್ಷಗಳಿಗೆ ಏರುವ ಮಟ್ಟಿಗೆ ಹೆಚ್ಚಿತು. ಹೆಣ್ಣುಮಕ್ಕಳ ಆಯುರ್ಮಾನ (64.2 ವರ್ಷಗಳು) ಗಂಡಸರಿಗೆ ಇರುವುದಕ್ಕಿಂತ (62.8 ವರ್ಷಗಳು) ಸ್ವಲ್ಪ ಹೆಚ್ಚು ದೀರ್ಘವೇ ಇದೆ. ತತ್ಪರಿಣಾಮವಾಗಿ, ಅರವತ್ತಕ್ಕೆ ಮಿಕ್ಕಿದ ವಯಸ್ಸಿನ ವೃದ್ಧರ ಜನಸಂಖ್ಯೆಯು 19.61 ದಶಲಕ್ಷದಿಂದ 1951 ರಲ್ಲಿ ಶೇಕಡ 5.43 ವೃದ್ಧಿಹೊಂದಿದ್ದುದು, 2001 ರಲ್ಲಿ ಶೇಕಡ 7.70 ವೃದ್ಧಿಹೊಂದಿತು, ಅಂದರೆ 75.93 ದಶಲಕ್ಷಕ್ಕೇರಿತು.

            ಅಂಕಿಸಂಖ್ಯೆ ಏನನ್ನು ಸೂಚಿಸುತ್ತದೆಯೆಂದರೆ, ವೃದ್ಧರಲ್ಲಿ ಬಹುಪಾಲಿನ ಜನರು ಅರವತ್ತಕ್ಕಿಂತಲೂ ಹೆಚ್ಚು ವರ್ಷ ಬದುಕುತ್ತಾರೆ. ಕಾಲಾನುಕ್ರಮದಲ್ಲಿ, ವೃದ್ಧರು ಒಟ್ಟು ಜನಸಂಖ್ಯೆಯ ಮಹತ್ವಪೂರ್ಣ ಪ್ರಕಾರ ಅಥವಾ ಭಾಗವಾಗುವ ಅಂದಾಜಿದೆ. ಸರ್ಕಾರವಾಗಲಿ, ಸಮಾಜವಾಗಲಿ ಅವರನ್ನಾಗಲಿ, ಅವರ ಸಮಸ್ಯೆಗಳನ್ನಾಗಲೀ ನಿರ್ಲಕ್ಷಿಸುವಂತಿಲ್ಲ. ವೃದ್ಧರ ಜನ ಸಂಖ್ಯೆ ಏರುತ್ತಿರುವ ಸನ್ನಿವೇಶದಲ್ಲಿ ಸಣ್ಣ ಬಿಡಿ ಕುಟುಂಬವು ಅವರನ್ನು ಜೋಪಾನ ಮಾಡಲು ಶಕ್ತವಾದಿತೇ ಎಂದು ಕೇಳುವುದು ಪ್ರಸ್ತುತವಾದೀತು. ಅದಕ್ಕಿಂತ ಮುಂದೆ ಹೋಗಿ ಪ್ರಶ್ನೆಯನ್ನು ಕೇಳಬಹುದಾಗಿದೆ: ಮಧ್ಯಮ ಮತ್ತು ಮೇಲ್ವರ್ಗಗಳ ವೃದ್ಧರು ತಮ್ಮ ಮಕ್ಕಳೊಂದಿಗೆ ಇರಬಯಸಬಹುದೇ? ಇರಲು ಸಾದ್ಯವೇ?

 

ಮುಪ್ಪಾಗುವಿಕೆಯ ಬಗೆಗಿನ ಬದಲಾಗುತ್ತಿರುವ ಪರಿಕಲ್ಪನೆಗಳು :

ಮನುಷ್ಯನಿಗೆ ಮುಪ್ಪು ಬರುವುದು ಒಂದು ಸಹಜ, ಅಪರಿಕಾರ್ಯ ಮತ್ತು ಸಾರ್ವತ್ರಿಕ ವಿದ್ಯಮಾನ. ಅಕ್ಷರಶಃ ಅದು ಮುಪ್ಪಿನ ಪರಿಣಾಮಗಳನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಮಾತನಾಡುವುದಾದರೆ, ಅದು ಮುಪ್ಪಿನ ಹಲವು ಪರಿಣಾಮಗಳಿಗೆ ಅಥವಾ ಅದರ ದೌರ್ಬಲ್ಯಗಳು ಪ್ರಕಟಗೊಳ್ಳುವಿಕೆಗೆ ಅನ್ವಯಿಸುತ್ತದೆ. ಅರ್ಥದಲ್ಲಿ ಅದು ಕುಟುಂಬದ ಸಂರಚನೆಯಲ್ಲಿನ ವಿವಿಧ ಪ್ರಮಾಣದ ಸಡಿಲಿಕೆಯನ್ನು ಸೂಚಿಸುತ್ತದೆ. ಸಾಂಪ್ರದಾಯಿಕವಾಗಿ, ಮುಪ್ಪೆಂಬುದು ಪೂರ್ವಗ್ರಹಗಳು, ನಕಾರಾತ್ಮಕ ಮೌಲ್ಯಗಳು, ಧೋರಣೆಗಳು ಮತ್ತು ಪಡಿಯಚ್ಚು (Stereotypes) ಗಳೊಂದಿಗೆ ಹೆಣೆದುಕೊಂಡಿರುತ್ತದೆ. ಉದಾಹರಣಾರ್ಥವಾಗಿಹರೆಯದ್ದು ಸುಂದರ, ಮುಪ್ಪಾದುದು ಕುರೂಪಿ ಎಂಬ ನಂಬಿಕೆ ಮುಪ್ಪಿನವರು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ದುರ್ಬಲರು, ಅವರಿಗೆ ತಮ್ಮ ಕಾಳಜಿ ಮಾಡಿಕೊಳ್ಳಲಾಗುವುದಿಲ್ಲ. ಎಂಬುದು ಸಾಮಾನ್ಯ ಅಭಿಪ್ರಾಯ. ಅವರು ಕುಟುಂಬಕ್ಕೆ ಸಮಾಜಕ್ಕೆ, ಸರ್ಕಾರಕ್ಕೆ ಹೊಣೆ. ನಾಗ್ (Nag) (1987) ಅವರ ಅಭಿಪ್ರಾಯದ ಮೇರೆಗೆ, ಮುಪ್ಪು, ವೃದ್ಧಾಪ್ಯ ಸಾಮಾನ್ಯವಾಗಿ ದಣಿವು ಮತ್ತು ದೈಹಿಕ ಪರಿವರ್ತನೆಯಿಂದಾಗಿ ದೇಹದ ಅಂಗಗಳ ಕಾರ್ಯನಿರ್ವರ್ವಹಣಾ ಸಾಮರ್ಥ್ಯದ ಇಳಿಕೆ ಇವುಗಳೊಂದಿಗೆ ಸಮೀಕರಿಸಲ್ಪಡುತ್ತದೆ. ಸುಡನ್ (Sudan) (1975) ಅವರ ಪ್ರಕಾರ, ವೃದ್ಧಾಪ್ಯದಲ್ಲಿ ಜನರು ಪಾತ್ರವಿಲ್ಲದ ಪಾತ್ರವನ್ನು ಹೊಂದಿರುತ್ತಾರೆ.

            ಸಂಶೋಧಕರ ಪ್ರಕಾರ, ಅರವತ್ತರ ನಂತರದ ಹಿರಿಯರು ಕುಟುಂಬದವರ ಚಕ್ರದ ಅಂಚಿಗೆ ತಳ್ಳಲ್ಪಟ್ಟವರಾಗುತ್ತಾರೆ. ಹಾಗೂ ನಿರುಪಯೋಗಿಗಳಾಗಿ ಕಾಣಿಸುತ್ತಾರೆ. ಲೇಖಕರು ಮುಪ್ಪಿನ ಪ್ರಕ್ರಿಯೆಯನ್ನು ನಕಾರಾತ್ಮಕ ಹಾಗೂ ನಿರಶಾವಾದೀ ಕೋನದಿಂದ ನೋಡಿದ್ದಾರೆ. ಮುಪ್ಪಾಗುವುದೆಂದರೆ ಅದು ದುರ್ಬಲ ಹಾಗೂ ಅತಂತ್ರರಾಗುವಿಕೆಯೆಂಬ ಕಲ್ಪನೆಯು ಇತ್ತಿಚೇಗೆ ಮೂಲಭೂತ ಬದಲಾವಣೆಗಳನ್ನು ಕಂಡಿದೆ.

            ಇಲ್ಲೊಂದು ಮಾತನ್ನು ಹೇಳಲೇ ಬೇಕು- ಏನೆಂದರೆ ಅಧುನಿಕ ಸಮಾಜವು ಅನೇಕ ಶೋಧನೆಗಳನ್ನು ಬೆಳಕಿಗೆ ತಂದಿದೆ-ಅದು ರೋಗದ ನಿದಾನ, ಔಷಧಿಶಾಸ್ತ್ರದಲ್ಲಿನ ಹೊಸ ಸಂಶೋಧನೆಗಳು ಮತ್ತು ಆರೋಗ್ಯ ಸೇವೆಗಳನ್ನು ನಮಗೆ ಬಿಚ್ಚಿ ತೋರಿಸಿದೆ. ಔದ್ಯಮೀಕರಣವು ಅನೇಕಾನೇಕ ಹೊಸ ನೌಕರಿಗಳನ್ನು, ಉದ್ಯೋಗಗಳನ್ನು ಹುಟ್ಟುಹಾಕಿದೆ. ಆಧುನಿಕ ವಿಷಯಗಳಾದ, ಸಮಾಜವಿಜ್ಞಾನ, ಮನಃಶಾಸ್ತ್ರ, ಸಮಾಜಕಾರ್ಯ ಇವು ಮಾನಸಿಕ ತುಮುಲಗಳನ್ನು ನಿವಾರಿಸುವ, ಒಳ್ಳೆಯ ಆರೋಗ್ಯವನ್ನು ಕಾಯ್ದುಕೊಳ್ಳುವ ತಂತ್ರಗಳನ್ನು ಆವಿಷ್ಕಾರಗೊಳಿಸಿವೆ. ಇಂದು ಮುಪ್ಪಾಗುವಿಕೆಯಾಗಲಿ, ವೃದ್ಧರಿಗಾಗಲೀ, ಸರ್ಕಾರಕ್ಕಾಗಲಿ ಒಂದು ಸಮಸ್ಯೆಯಾಗಿ ತೋರುವುದಿಲ್ಲ. ವೃದ್ಧರು ಹೊರೆಯಾಗುವ ಬದಲು ಸೊತ್ತಾಗಿದ್ದಾರೆ. ಹ್ಯಾವಿಘಸ್ರ್ಟ (Havighurst) (1961) ತನ್ನ ಯಶಸ್ವೀ ಮುಪ್ಪಾಗುವಿಕೆ ಎಂಬ ಲೇಖನದಲ್ಲಿ  ಯಶಸ್ವೀ ಮುಪ್ಪಾಗುವಿಕೆಯ ಚಿತ್ತಾಕೃತಿಯು ವ್ಯಕ್ತಿಯ ವ್ಯಕ್ತಿತ್ವ ಮತ್ತು ಸಂಸ್ಕೃತಿ (ಸಂಸ್ಕಾರ) ಮೇಲೆ ಅವಲಂಬಿಸಿದೆ ಎಂದು ಹೇಳಿದ್ದಾನೆ.

            ವಿಕ್ಟರ್ ಡಿಸೋಜಾ (D' Souza) (1993) ಎಂಬಾತ ತನ್ನ  ಸಕ್ರಮ ಮುಪ್ಪಾಗುವಿಕೆಯ ಪರಿಕಲ್ಪನೆ ಎಂಬ ಲೇಖನದಲ್ಲಿ,(1993) ಆಧುನಿಕ ಸಮಾಜದಲ್ಲಿ ವೃದ್ಧರು ಮಾಮೂಲು ಹಾಗೂ ಫಲದಾಯಕ ಜೀವನವನ್ನು ಮಾಡುವ ಸಾಮರ್ಥ್ಯ ಹೊಂದಿದವರಾಗಿರುತ್ತಾರೆ. ಅವರಿಗೆ ಬೇಕಾಗಿರುವುದೇನೆಂದರೆ, ಅವರನ್ನು ಬಲಪಡಿಸುವ ಶಕ್ತಿವರ್ಧಕ ಕ್ರಮಗಳು, ಜಯಶ್ರೀ (2000) ನಡೆಸಿದ ಒಂದು ಅಧ್ಯಯನದ ಆವಿಷ್ಕಾರಗಳು (Findings) ನಿವೃತ್ತರು ಸುಖೀ ಜೀವನ ನಡೆಸುವವರಾಗಿದ್ದರು ಎಂಬ ಸಂಗತಿಯನ್ನು ತೋರ್ಪಡಿಸಿದೆ.

           

ಆಧುನಿಕ ಭಾರತದಲ್ಲಿ ಕುಟುಂಬ ಮತ್ತು ವೃದ್ಧರು :

ಪುನಾಸಂಘಟನೆಯ ಆವಶ್ಯಕತೆ :

ಒಟ್ಟಾರೆ, ಕುಟುಂಬವೆಂಬ ಸಂಸ್ಥೆ ತನ್ನ ಸದಸ್ಯರಿಗೆ ರೂಢಿಗತ, ಸಾಂಪ್ರದಾಯಿಕ ಸೇವೆಗಳನ್ನು ನೀಡುವ ಸ್ಥಿತಿಯಲ್ಲಿಲ್ಲವೆಂಬುದು ಕಂಡುಬರುತ್ತಿದೆ. ಇದರರ್ಥ ಕುಟುಂಬವು ಒಂದು ಪ್ರಾಥಮಿಕ ಗುಂಪು ಎಂದು ಮುಂದುವರಿಯದು ಎಂದಲ್ಲ. ಸೂಚಿಸಬಯಸುವುದೇನೆಂದರೆ, ಇಷ್ಟೇ: ಕುಟುಂಬವು ದುರ್ಬಲರ ಹಾಗೂ ವಯಸ್ಸಾದವರನ್ನು ಕಾಪಾಡುವ ಹಾಗೂ ಸಲಹುವ ತನ್ನ ಸಾಂಪ್ರದಾಯಿಕ ಪಾತ್ರವನ್ನು ಪುನಃ ವಹಿಸಿಕೊಳ್ಳುವಂತಾಗಬೇಕಾದರೆ ಅದು ಹೊರಗಣ ಸೇವಾ ಸಂಸ್ಥೆಗಳಿಂದ ಬಲಪಡಿಸಲ್ಪಡಬೇಕು. ಡಿಸೋಜಾ (D' Souza) (1993)  ಅವರ ಪ್ರಕಾರ, ಕುಟುಂಬವು ವೃದ್ಧರ ಕ್ಷೇಮಕ್ಕಾಗಿ ತನ್ನ ಪಾತ್ರವನ್ನು ಪರಮಾಧಿಕಾರಿಯಾಗಿ ನಿರ್ವಹಿಸಬೇಕೆಂದರೆ ಸಮುದಾಯದ ಸೇವೆಗಳಿಂದ ಅದಕ್ಕೆ ಬೆಂಬಲ ಹರಿದು ಬರಬೇಕು.

           

ಕುಟುಂಬ ಮತ್ತು ವೃದ್ಧರು :

ಕುಟುಂಬ ಹಾಗೂ ವೃದ್ಧರ ಮಧ್ಯೆ ಒಂದು ನಿಕಟವಾದ ಸಂಬಂಧ ಇದೆ. ವೃದ್ಧರನ್ನು ಕಾಪಾಡುವಲ್ಲಿ ಕುಟುಂಬವು ಆಡಬಹುದಾದ ಪಾತ್ರವನ್ನು ಮೂರು ಮಾದರಿಗಳ ಕೋನದಿಂದ ವಿವೇಚಿಸಬಹುದು

           

ಕುಟುಂಬದಲ್ಲಿ ವೃದ್ಧರ ಏಕೀಕರಣ :

ಗ್ರಾಮೀಣ ಪ್ರದೇಶದಲ್ಲಿ ಕುಟುಂಬವು ಇನ್ನೂ ಅವಿಭಕ್ತ ಕುಟುಂಬವಾಗಿಯೇ ಮುಂದುವರೆದಿದೆ. ಬಹಳಷ್ಟು ಮಾರ್ಪಾಡುಗಳಾದರೂ ವೃದ್ಧ ತಂದೆ-ತಾಯಿವರು ಗ್ರಾಮೀಣ ಸಮಾಜದ ಅವಿಭಾಜ್ಯ ಅಂಗವಾಗಿರುತ್ತಾರೆ. ಕುಟುಂಬ ಯೋಜನೆಯ ನೀತಿ ಹಾಗೂ ಕ್ರಿಯಾ ಯೋಜನೆಗಳು ಗ್ರಾಮೀಣ ಸಮಾಜದೊಳಕ್ಕೆ ನುಗ್ಗಿವೆಯಾದರೂ, ಕುಟುಂಬದ ಗಾತ್ರವು (ತೌಲನಿಕವಾಗಿ) ಇನ್ನೂ ದೊಡ್ಡದೇ. ಸರಾಸರಿ ಗಾತ್ರ, ಐದು ಮಕ್ಕಳನ್ನೊಳಗೊಂಡುದು. ಮುಪ್ಪಿನವರಿಗೆ ಈಗಲೂ ಜನ ಮರ್ಯಾದೆ ಕೊಡುತ್ತಾರೆ. ವಯಸ್ಸಿಗೆ ಬಂದ ಮಕ್ಕಳು, ಲಗ್ನವಾದ ನಂತರ, ಬೇರೆ ಮನೆಯನ್ನು ಮಾಡಿಕೊಳ್ಳುತ್ತಾರೆ, ನಿಜ. ಆದರೆ, ಇಷ್ಟು ಮಾತ್ರ ನಿಜ, ಮದುವೆಯ ನಂತರ ಒಬ್ಬ ಮಗನಾದರೂ ವೃದ್ಧ ತಂದೆ-ತಾಯಿಯೊಂದಿಗೆ ಬಾಳ್ವೆ ಹೂಡಿಕೊಂಡಿರುತ್ತಾನೆ ಎಂಬುದು ಕಂಡು ಬರುವ ಸಂಗತಿ. ಮುಪ್ಪಿನ ವಯಸ್ಸಿನ ಜನಗಳಿಗೆ ಊಟ, ಬಟ್ಟೆ, ಹಾಗೂ ಆಶ್ರಯ-ಅವರಿಗೆ ಸಲ್ಲುವ ಕಾಳಜಿಯೊಂದಿಗೆ ಈಗಲೂ ನೀಡಲ್ಪಡುವುದನ್ನು ಅಧ್ಯಯನಗಳು ಎತ್ತಿ ತೋರಿಸುತ್ತವೆ.

            ಹಳ್ಳಿಗಳೊಳಗಿನ ವೃದ್ಧರು ಒಂಟಿತನ ಹಾಗೂ ದೂರೀಕಣದಂತಹ ಸಾಮಾಜಿಕ ಅಥವಾ ಮಾನಸಿಕ ಸಮಸ್ಯೆಗಳಿಂದ ಬಳಲದೆ, ಅವರು ಔಷಧಿ ಸಿಕ್ಕದಿರುವಿಕೆ ಅಥವಾ ವೈದ್ಯಕೀಯ ಸೌಲಭ್ಯಗಳಿಲ್ಲದಿರುವಿಕೆ, ಪೌಷ್ಟಿಕ ಆಹಾರ, ವಸತಿ ಹಾಗೂ ಮನರಂಜನೆಯಂತಹ ಸೌಲಭ್ಯಗಳಿಲ್ಲದೆ ಸಮಸ್ಯೆಗಳಿಂದ ಬಳಲುತ್ತಾರೆ. ಪುಕ್ಕಟೆ ವೈದ್ಯಕೀಯ ಸೌಲಭ್ಯಗಳು-ವೈದ್ಯರ ಆಸ್ಪತ್ರೆಗಳು, ಶುಲ್ಕ ರಹಿತ ಕಣ್ಣು, ಕಿವಿ, ಹಲ್ಲು, ಮೂಗು ಇವುಗಳ ತಪಾಸಣೆಯ ಶಿಬಿರಗಳ ಮೂಲಕ ಆರೋಗ್ಯ ಸೇವೆಗಳು ಲಭಿಸುವಂತೆ ಪ್ರಯತ್ನಗಳು ನಡೆಯಬೇಕು. ವೃದ್ಧರು ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಸ್ವಾವಲಂಬಿಗಳಾಗುವಂತೆ ಮಾಡುವ ಹಾಗೂ ಅವರನ್ನು ಸಂಘಟಿಸುವ, ಪ್ರೇರೇಪಿಸುವ ದಿಶೆಯಲ್ಲಿ ಎನ್.ಜಿ.. (NGO)ಗಳು ಅರ್ಥ ಪೂರ್ಣ ಪಾತ್ರವನ್ನಾಡಬೇಕು.

           

ನಗರ ಪ್ರದೇಶಗಳಲ್ಲಿ ವೃದ್ಧರು ಮತ್ತು ಬಿಡಿ ಕುಟುಂಬಗಳು :

            ತೌಲನಿಕವಾಗಿ, ನಗರ ಪ್ರದೇಶಗಳಲ್ಲಿನ ವೃದ್ಧರ ಸಮಸ್ಯೆಗಳು ವಿಧವಿಧ ತೆರನಾದ ಮತ್ತು ಹೆಚ್ಚು ಗಂಭೀರವಾದವುಗಳಾಗಿರುತ್ತವೆ. ನಗರ ಪ್ರದೇಶಗಳಲ್ಲಿ ಕುಟುಂಬಗಳ ಗಾತ್ರವು ಹೆಚ್ಚು ಕಡಿಮೆ ಸಣ್ಣದಾಗಿರುತ್ತದೆ. ಮತ್ತು ಸ್ವರೂಪದಲ್ಲಿ ಪ್ರಾಥಮಿಕವಾಗಿರುವುದಿಲ್ಲ. ಗಂಡು ಮಕ್ಕಳು ಹಾಗೂ ಸೊಸೆಯಂದಿರು, ಒಂದಿಲ್ಲೊಂದು ತರಹದ ಸಂಬಳ ತರುವ ಉದ್ಯೋಗದಲ್ಲಿರುವಂಥವರಾಗಿ, ಹಿರಿಯರನ್ನು ಸಂರಕ್ಷಿಸುವ ಭಾರ ಹೊರುವ ಸ್ಥಿತಿಯಲ್ಲಿರುವುದಿಲ್ಲ. ವಯಸ್ಕ ತಂದೆ-ತಾಯಿವರು ಹಾಗೂ ಅವರ ಗಂಡುಮಕ್ಕಳು ಮತ್ತು ಸೊಸೆಯಂದಿರು ಒಂದೇ ಸೂರಿನ ಕೆಳಗೆ ವಾಸಿಸಿಯೂ ಬೇರೆ ಬೇರೆ ಸಂಸಾರಗಳನ್ನು ಮಾಡಿಕೊಂಡಿದ್ದಾರೆಗಂಡು ಮಕ್ಕಳು, ಮದುವೆಯಾದೊಡನೆ, ಅದೇ ನೆರೆಹೊರೆಯ ಪ್ರದೇಶದಲ್ಲಿಯಾಗಲೀ, ಅದೇ ನಗರದಲ್ಲಿಯಾಗಲೀ, ಪ್ರತ್ಯೇಕ ಸಂಸಾರ ಹೂಡಿದ ಉದಾಹರಣೆಗಳೂ ಇವೆ. ವಯಸ್ಕ ತಂದೆತಾಯಿಯರನ್ನು ಅವರ ಪಾಡಿಗೆ ಅವರನ್ನು ಬಿಡಲಾಗುತ್ತೆ. ವೃದ್ಧ ತಂದೆ-ತಾಯಿವರು ಏಕಾಕಿತನ ಹಾಗೂ ದೂರೀಕರಣದಂತಹ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆಆದರೆ, ಹಿರಿಯರು ಸ್ವಾವಲಂಬನ ಸಿದ್ಧಾಂತವನ್ನು ಅಪ್ಪಿಕೊಳ್ಳುವ ಕಾಲ ಬಂದಿದೆ. ಅವರು ತಮ್ಮ ಪರಾವಲಂಬನೆಯ ಪ್ರವೃತ್ತಿಯನ್ನು ಅಸಹಾಯಕತೆಯ ಭಾವವನ್ನು ತೊರೆದು ಸ್ವತಂತ್ರ ಸ್ವಾವಲಂಬೀ ಜೀವನಕ್ಕೆ ತಯಾರಾಗಬೇಕು.

 

3) ವೃದ್ಧಾಶ್ರಮಗಳು ಕುಟುಂಬದ ಪಯರ್ಾಯ ರೂಪಗಳಾಗಬಲ್ಲವೇ?

            ಬೃಹನ್ನಗರಗಳ  ಅವಸ್ಥೆ :

ಕೌಟುಂಬಿಕ ವಿಘಟನೆಯ ಪರಿಣಾಮವಾಗಿ ದೂರದ ನಗರಗಳಲ್ಲಿ ನೆಲೆಸಿದ ಮಗಂದಿರ, ಮಗಳಂದಿರ ತಂದೆ-ತಾಯಂದಿರಾದ ವೃದ್ಧ ದಂಪತಿಗಳೇ ಇರುವ ಕುಟುಂಬಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇಂಥ ಕುಟುಂಬಗಳು ಎಲ್ಲ ತರಹದ ಸಾಮಾಜಿಕ ಮತ್ತು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿವೆ. ಇಂಥ ಕುಟುಂಬಗಳಿಗೆ ವೃದ್ಧಾಶ್ರಮಗಳು ಕುಟುಂಬದ ತೆರವಾದ ಸ್ಥಾನವನ್ನು ತುಂಬುವ ಪಯರ್ಾಯ ವ್ಯವಸ್ಥೆಯಾಗಿ ತಲೆಯೆತ್ತುತ್ತಿವೆ. ಯೋಗೇಂದ್ರ ಸಿಂಗ (Yogendra Singh) (1997) ಅವರ ಪ್ರಕಾರ, ಆಧುನಿಕ ಕುಟುಂಬದ ಬದಲಾದ ಸಂರಚನೆಯ ಕಾರಣ ಕುಟುಂಬದ ಕಲ್ಯಾಣ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವು ಕುಂಠಿತಗೊಳ್ಳುವ ಸಾಧ್ಯತೆ ಇದೆ. ಇದು ಮುನ್ನೆಚ್ಚರಿಕೆಯ ಗಂಟೆಯೆಂದು ಭವಿಷ್ಯದ ಸವಾಲುಗಳುನ್ನೆದುರಿಸಲು ಸಜ್ಜಾಗುವುದು ಸಮಯೋಚಿತ ಕ್ರಮವಾದೀತು.

            ವೃದ್ಧಾಶ್ರಮಗಳು ಮಾಮೂಲಾಗಿ ನಿರ್ಗತಿಕರ ಆಶ್ರಯತಾಣಗಳೆಂದು ಭಾವಿಸಲಾಗುತ್ತದೆ. ಕೇವಲ ತೀರ ಬಡವರಾದ, ಮನೆಯಿಲ್ಲದ, ಅತಿಮುಪ್ಪಾದ ಜನಗಳೇ ಇಲ್ಲಿ ಪ್ರವೇಶ ಪಡೆಯುತ್ತಾರೆ ಎಂಬ ಭಾವನೆ ರೂಢವಾಗಿದೆ. ಆದರೆ ಇಂದು ವೃದ್ಧಾಶ್ರಮದ ಪರಿಕಲ್ಪನೆಯೇ ಬದಲಾಗುತ್ತಿದೆ. ತಮ್ಮ ಕುಟುಂಬ ಸದಸ್ಯರಿಗೆ ನೋಡಿಕೊಳ್ಳಲಾಗುವುದಿಲ್ಲವೋ ಅಂಥ ಶ್ರೀಮಂತ ಮತ್ತು ಸ್ಥಿತಿವಂತ ವೃದ್ಧರನ್ನು ವೃದ್ಧಾಶ್ರಮಗಳೇ ಅನ್ಯಮಾರ್ಗವೆಂದು ಅಲ್ಲಿಗೆ ಸಾಗಹಾಕಲಾಗುತ್ತದೆ. ಕಪೂರ (Kapoor) ಮತ್ತು ಇತರರ (2000) ಪ್ರಕಾರ, ವೃದ್ಧಾಶ್ರಮಗಳು ಬಡವೃದ್ಧರಿಗೆ ಅನ್ನಪೂರೈಸಿ ಅವರನ್ನು ಬದುಕಿರಿಸುವ ಕೇಂದ್ರಗಳೆಂಬ ಪರಿಕಲ್ಪನೆ ಬದಲಾಗಿದೆ. ಇಂದು ಯಾರು ತಮ್ಮ ಕುಟುಂಬಗಳಿಂದ ದೂರವಿರಬಯಸುತ್ತಾರೋ ಮತ್ತು ತಮಗೆ ಬೇಕಾಗುವ ಐಷ್ಯಾರಾಮಿನ ವಸ್ತುಗಳಿಗಾಗಿ ಹಣಕೊಡುವ ಶಕ್ತಿ ಇದೆಯೋ ಅಂಥ ನಿವೃತ್ತರಾದ ಸ್ಥಿತಿವಂತರಿಗಾಗಿ ಇಂದು ಆಶ್ರಯತಾಣಗಳಿವೆ. ಅಂಥವರಿಗೆ ಬೇಕಾದುದು ಸಂಗಾತಿಗಳು, ಮನರಂಜನೆ ಮತ್ತು ಕಾಳಜಿ ತೆಗೆದುಕೊಳ್ಳುವವರು. ಪಾಶ್ಚಾತ್ಯ ದೇಶಗಳಲ್ಲಿ ಯಾರ ಸಂಬಂಧವೂ ಇಲ್ಲದ ವ್ಯಕ್ತಿಗಳು ಗಂಡಂದಿರು, ಹೆಂಡಂದಿರು, ವಿಧವೆಯರು, ವಿವಾಹವಿಚ್ಛೇದಿತರು, ಅರವತ್ತರ ವಯಸ್ಸು ತಲುಪುತ್ತಲೇ ವೃದ್ಧಾಶ್ರಮಗಳಿಗೆ ಹೋಗುವ ತಯಾರಿ ನಡೆಸುತ್ತಾರೆ.

            ವೃದ್ಧಾಶ್ರಮದಲ್ಲಿ ಇರುವುದೆಂದರೆ ಕುಟುಂಬದ ಸದಸ್ಯರೊಂದಿಗಿನ ಆಪ್ತೇಷ್ಟರೊಂದಿಗಿನ ಸಂಬಂಧ ಕಡಿದುಕೊಳ್ಳಬೇಕಂತಿಲ್ಲ. ಅದಕ್ಕೆ ವ್ಯತ್ತಿರಿಕ್ತವಾಗಿ ವೃದ್ಧಾಶ್ರಮಗಳು ಕೌಟುಂಬಿಕ ನಂಟನ್ನು ಇನ್ನೂ ಗಟ್ಟಿಗೊಳಿಸುತ್ತವೆ. ಮಗಂದಿರು, ಮಗಳಂದಿರು ವೃದ್ಧ ತಂದೆ-ತಾಯಿಯಂದಿರನ್ನು, ಅಜ್ಜ ಅಜ್ಜಿಯಂದಿರನ್ನು ನಿಯಮಿತವಾಗಿ ಸಂದರ್ಶಿಸುತ್ತಾರೆ. ವೃದ್ಧರು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸ್ವಲ್ಪದರಲ್ಲಿ ಹೇಳುವುದಾದರೆ, ವೃದ್ಧಾಶ್ರಮಗಳಲ್ಲಿ ವಾಸವಾಗಿರುವುದು ಕುಟುಂಬಕ್ಕೆ ಹಾಗೂ ವೃದ್ಧರಿಗೆ ಸುಗಮ ಕೌಟುಂಬಿಕ ಜೀವನವನ್ನು ಸಾಧಿಸುವಲ್ಲಿ ಸಹಾಯಕಾರಿ. ಅದು ವೃದ್ಧರ ಮತ್ತು ಕುಟುಂಬದ ಯುವ ಸದಸ್ಯರ ಮಧ್ಯೆ ಒಂದು ಸಾಮರಸ್ಯ ಸೇತುವೆ ಏರ್ಪಡಿಸುತ್ತದೆ, ಎಂದು ಭಾವಿಸುವ ಸಾಧ್ಯತೆಯಿದೆ.

           

ಆಕರಗಳು:

            Ogburn, William F. (1955) : Technology and the Changing Family; Houghton, Mifflin, Boston.

          Sati, P.N. (1988) ; Retired and Ageing People; A study of their Problems. Delhi, Mittal.

          Yogendra Singh (1997) Changing Trends in the Indian Family and the Adjustment of the Aged. Helpage India Vol.3 No.2.

          Kapoor S. et al "Role of NGOs for the Older Persons in Social Defence Vol. 50, No.146 Oct.

          Nag, N.G. (1987) : "Welfare Services for the aged"  in Encyclopedia of Social Work in India, Vol.3, Government of India, Ministry of Welfare.

 

ಡಾ|| ಶಾಂತಾ ಅಸ್ಟಿಗೆ

ಸಹ ಪ್ರಾಧ್ಯಾಪಕರು, ಸರಕಾರಿ ಮಹಾವಿದ್ಯಾಲಯ,

ಗುಲಬರ್ಗಾ-58510

No comments:

Post a Comment