Sunday, December 1, 2013

ದೇವಿ

           ಪಾರಕ್ಕ ಹಾಸಿಗೆ ಹಿಡಿದಾಳಂತೆ ಪಾರವ್ವನ ಕೈ ಕಾಲು ಬಾತಾವಂತೆ ಪಾರಿ ಇನ್ನೇನ ಉಳಿಯಾಂಗ ಕಾಣೂದಿಲ್ಲಂತ ಸುದ್ದಿ ಚಿತ್ರ-ವಿಚಿತ್ರ ರೂಪ ತಳೆದು ಮಣ್ಣೂರಿನ ತುಂಬ ಸುಳಿದಾಡಿತು. ಕಣ್ಣಿಂದ ನೋಡಿದವರಿಗಿಂತ ಹೆಚ್ಚಾಗಿ ವರ್ಣರಂಜಿತವಾಗಿ ಬಣ್ಣಿಸಿ ಮಾತನಾಡಿದರು. ಊರಿನ ಗಂಡು-ಹೆಣ್ಣು ಮಕ್ಕಳೆಲ್ಲ, ಮನಿಷ್ಯಾ ಅಂದಮ್ಯಾಲೆ ಜಡ್ಡು ಜಾಪತ್ರಿ ಬರೂವ. ಹುಟ್ಟಿದವರು ಸಾಯೂವವರ. ಆದರ ಪಾರವ್ವಗ ಜಡ್ಡಾತು ಅಂದರ ನಂಬಾಕ ಆಗಾಕಿಲ್ಲ ಎಂದು ಒಳಗೇ ತಳಮಳಿಸಿದರು ಕೆಲವರುಈಟ ದಿನಾ ಮೆರದಾಡಿ ಕಡೀಕ ಬಕಬಾರ್ಲೆ ಬಿದ್ಲಲ್ಲ ಎಂದು ಒಳಗೊಳಗೇ ಹಿಗ್ಗಿ ಹಿರೇಕಾಯಾಗಿ ಹಾಲು ಕುಡಿದವರೂ ಹಲವರಿದ್ದರು ಮಣ್ಣೂರಿನಲ್ಲಿ.

            ಬರೇ ಮಾತಾಡ್ತೀರಲ್ರೇ, ಪರದೇಶಿ ಮಗಳು, ಗಂಡನ್ನ ಕಳಕೊಂಡು, ಗೇಣು-ಚೋಟಿ ಮಕ್ಕಳ್ನ ಕಟಿಕೊಂಡು ಗಂಡಸಿನಾಂಗ ಹೊಲದಾಗ, ಮನ್ಯಾಗ ದುಡದು ಸತ್ಲು ಪಾರಿ. ಮಣ್ಣಿಗೆ ಹೋಗ್ರಿ, ನನ್ನೂ ಯಾರರೇ  ಬಗಲಾಗ ಕೈ ಹಾಕಿ ಕರಕೊಂಡು ಹ್ವಾದರ ಹಿಡಿ ಮಣ್ಣು ಹಾಕಿ ಬಂದೇನ ಸಂಕಟದಿಂದ ಕಣ್ಣೀರು ಹಾಕಿತು ಮುದುಕಿ ಕಾಳವ್ವ, ಪಾರವ್ವನ ಗಂಡ ಮಲ್ಲಪ್ಪನ ಸೋದರತ್ತಿ. ಕಾಳವ್ವ ಮೊಮ್ಮಗ ಕೆಂಚನನ್ನು ಹೊಲಕ್ಕೆ ಓಡಿಸಿದಳು. ಅವನು ತಂದ ಸುದ್ದಿ ಮಾತ್ರ ತೀರಾ ಬೇರೆಯೇ ಇತ್ತು. ಪಾರವ್ವ ಸತ್ತಿರಲಿಲ್ಲ, ಜ್ವರದಿಂದ ಹಾಸಿಗೆ ಹಿಡಿದದ್ದು ನಿಜ.

            ದೇವಿ ನಮ್ಮವ್ವಾ, ನೀ ಖರೇನ ಇದ್ದರ ಪಾರೀನ ಬಯ್ಯಬ್ಯಾಡವ್ವ. ಮಕ್ಕಳು ದಿಕ್ಕೇಡಿ ಆಕ್ಕಾವು. ಇನ್ನೊಂದ ನಾಕೊಪ್ಪತ್ತ ಆಯುಸ್ಯಾ ಹಾಕು ಆಕೀಗೆ ಗಲ್ಲ ಗಲ್ಲ ಬಡಿದುಕೊಂಡು ಮೇಲೆ ಕೈ ಎತ್ತಿ ಮುಗಿದಳು ಕಾಳವ್ವ.

            ಪಾರವ್ವನ ಮೈದುನ ಫಕ್ಕೀರ ಹಾರಾಡಿದ. ದಿಕ್ಕೇಡಿ ಯಾಕ ಆಗ್ವಾಳ್ಳು, ಸಾಯಲಿ ರಂಡಿ. ಆಕಿ ಇದ್ದ ಹೊಲ ನಮಗ ಬರಬೇಕ, ರಟ್ಟೀ ಮುರದು ದುಡದೇನಿ ನಾ ಹೊಲದಾಗ.

             ಪಾರವ್ವ ನಿಮ್ಮಣ್ಣನ ಹೇಣ್ತಿ. ಅದರಾಗ ದ್ಯಾಮವ್ವನ ಪೂಜಾರಿ, ಆಕಿ ಮೈಯಾಗ ದೇವಿ ಬರತಾಳ. ನೀ ಹಾಂಗೆಲ್ಲಾ ಬೈದರ ನಿನ ಮನೀ ಉಜ್ಜಳ ಆಗಾಕಿಲ್ಲ. ತಪ್ಪಾತು ಅನ್ನು ಎಂದ ನೆರೆಮನೆ ಮುದುಕಿ ಹಾಲವ್ವನ ಸೊಸೆಗೆ ಗಂಡು ಮಗು ಹುಟ್ಟಿದ್ದು ಪಾರವ್ವನ ಆಶೀರ್ವಾದದಿಂದ. ಕೂಡಿದ ಜನರೂ ಛೀ ಹಾಕಿದ್ದರಿಂದ ಫಕ್ಕೀರ ಹಲ್ಲು ಕಡಿಯುತ್ತ ಸುಮ್ಮನಾದ. ಅವನ ಹೆಂಡತಿ ನೀಲವ್ವ ಕಂಬದ ಮರೆಯಲ್ಲಿ ಬೆರಳು ಲಟಿಗೆ ಮುರಿದು ಶಾಪ ಹಾಕಿದಳು. ಈಕಿ ಬಾಯಾಗ ಮಣ್ಣು ಬೀಳಲಿ.

            ಪಾರವ್ವನೇನು ಸಾಹಿತಿ-ಕಲಾವಿದೆಯಲ್ಲ. ಮಂತ್ರಿ ಶಾಸಕಳೂ ಅಲ್ಲ. ಮೂರು ಮಕ್ಕಳ ತಾಯಿ, ವಿಧವೆ ಪಾರವ್ವ. ಮಣ್ಣೂರಿನ ಜನರ ತರದ ವಿವಿಧ ಪ್ರತಿಕ್ರಿಯೆಗಳಿಗೆ ಕಾರಣವಾದದ್ದು ಸೋಜಿಗವಾಗಿರಬೇಕಲ್ಲವೇ? ವಾಚಕ ಮಹಾಶಯರೇ, ಹಾಗಾದರೆ ಅವಳ ಪೂರ್ವೇತಿಹಾಸ ಸ್ವಲ್ಪ ಕೇಳಿ:

            ಮಣ್ಣೂರಿನ ಹತ್ತಿರದ ಹಳ್ಳಿ ಮಾಸೂರಿನಲ್ಲಿ ಬಡ ರೈತ ಕುಟುಂಬದಲ್ಲಿ ಪಾರವ್ವ ಹುಟ್ಟಿದಳು. ಯಾವ ಕೆಟ್ಟ ಗಳಿಗೆಯಲ್ಲಿ ಹುಟ್ಟಿದಳೋ ಅಲ್ಲಿಂದಲೇ ಅವಳ ಕಷ್ಟ ಶುರುವಾಯಿತು. ಹುಟ್ಟಿದ ತಿಂಗಳಲ್ಲಿ ಹೆತ್ತ ತಾಯಿ ಸತ್ತಳುಕರಿ ಹೆಗ್ಗಣದ ಮರಿ ಹಡದಾಳು ಎನ್ನುವ ಹರಲಿ ಕೇಳಲಾರದೆ ಕಣ್ಣು ಮುಚ್ಚಿಕೊಂಡ ಪುಣ್ಯವಂತೆ ಅವಳು. ಮನೆಯಲ್ಲಿ ಒಲೆ ಹೊತ್ತಬೇಕಲ್ಲ! ಅಪ್ಪನಿಗೆ ಮತ್ತೊಬ್ಬ ಹೆಂಡತಿ ಬಂದಳು. ಕರಿ ಪಾರವ್ವನಿಗೆ ತಂಗಿ ತಮ್ಮಂದಿರು ಬಂದರು. ಆರು ವರುಷವಾದೊಡನೆ ಎಮ್ಮೆ ಕಾಯಲು, ಎಂಟು ವರುಷವಾದೊಡನೆ ರೊಟ್ಟೀ ಬಡಿಯಲು ಕಲಿತ ಪಾರವ್ವ ಕೆಲಸದಲ್ಲಿ ನುರಿತದ್ದಕ್ಕೆ ಮಲಅವ್ವನಿಗೆ ಋಣಿಯಾಗಿರಲೇಬೇಕು. ಹೊಟ್ಟೆ ತುಂಬ ರೊಟ್ಟಿ ಇಲ್ಲದೆ, ಹೊಲದಲ್ಲಿ ಮನೆಯಲ್ಲಿ ಯಂತ್ರದಂತೆ ದುಡಿಯುವ ಕರೀ ಕೊಡ್ಡದಂಥ ಪಾರವ್ವನೂ ಒಂದು ದಿನ ಹೆಣ್ಣಾದಳು. ಅವ್ವ ಸತ್ತರೂ ಸೋದರಮಾವನಿರಬೇಕು ನಿಜ. ಆದರೆ ಪಾರವ್ವನ ಪಾಲಿಗೆ ಅವನು ಇದ್ದೂ ಇಲ್ಲದಂತಿದ್ದ. ಹಚ್ಚಿಕೊಂಡರೆ ಎಲ್ಲಿ ಹೆಗಲ ಮೇಲೆ ಏರುವಳೂ ಎನ್ನುವ ಹೆದರಿಕೆಯಿಂದ ಇಪ್ಪತ್ತು ರೂಪಾಯಿ ಪತ್ತಲ, ಹತ್ತು ರೂಪಾಯಿ ಹಿಟ್ಟಕ್ಕಿಗೆ ಕೊಟ್ಟು ಕೈ ತೊಳೆದುಕೊಂಡ ಅತ್ತೆ-ಮಾವ ತಿರುಗಿ ಇತ್ತ ನೋಡಲಿಲ್ಲ. ಮಗಳ ಮದುವೆ ಮಾಡುವ ಚಿಂತೆಯಿಂದ ತಲೆಗೆ ಕೈಕೊಟ್ಟು ಕುಳಿತ ಗಂಡನಿಗೆ ಉಪಾಯ ತೋರಿದಳು ಪಾರವ್ವನ ಮಲ ಅವ್ವ.

            ಮಣ್ಣೂರಿಗೆ ಹೋಗಿ ಬರೂಣ, ಅಲ್ಲೇ ನಮ್ಮ ದೊಡ್ಡಪ್ಪನ ಮಕ್ಕಳು ಅದಾರ. ದೊಡ್ಡಾಂವನ  ಹೇಣ್ತಿ ಸತ್ತು ನಾಕ ವರ್ಷ ಆದ್ವು. ಎಡ್ಡ ಹೆಣ್ಣು ಮಕ್ಕಳು ಮದುವಿ ಆಗಿ ಹೋಗ್ಯಾರ, ಹೊಲ ಮನಿ ಐತಿ ಮಲ್ಲಣ್ಣಗ ಪಾರೀನ ಕೊಡೂಣು. ನಾ ಅವಂಗೆಲ್ಲಾ ಹೇಳ್ತೀನಿ. ಇಲ್ಲ ಅನ್ನಾಂಗಿಲ್ಲ.

            ದಿನಕ್ಕೆ ಇಪ್ಪತ್ತು ರೊಟ್ಟಿ ತಿನ್ನುವ ಭಾವನಿಗೆ ರೊಟ್ಟಿ ಬಡಿದು ಬಡಿದು ಬೇಸತ್ತ ತಮ್ಮಂದಿರ ಹೆಂಡಂದಿರು ಸುದ್ದಿ ಕೇಳಿ ಖುಷಿ ಪಟ್ಟರು. ಗಂಡು ಮಕ್ಕಳಿಲ್ಲದ ಅಣ್ಣನ ಪಾಲಿನ ಹೊಲ ನುಂಗಲು ಜೊಲ್ಲು ಸುರಿಸುತ್ತಿದ್ದ ಫಕ್ಕೀರ ಮಾತ್ರ ಅಡ್ಡಗಾಲು ಹಾಕಿದ. ಮುದುಕಗೆ ಈಗೆಂತ ಮದುವೆ ಎಂದು ಮಂದೀ ಎದುರು ಕೂಗಾಡಿದ. ಚೆನ್ನಾಗಿ ಕಿವಿ ತುಂಬಿಸಿಕೊಂಡಿದ್ದ ಮಲ್ಲಣ್ಣನಿಗೆ ಬಾಸಿಂಗ ಬಲ ಕೂಡಿಬಂದಿತ್ತು. ಪಾರವ್ವ ಮದಲಗಿತ್ತಿಯಾಗಿ ಮಣ್ಣೂರಿಗ ಬಂದಾಗ ಹದಿನಾಲ್ಕು ವರ್ಷದ ಹುಡುಗಿ.

            ಮಂಚ, ಹೂವಿನ ಸರ, ಹಾಲು-ಹಣ್ಣು ಇಲ್ಲದೆ ಪಾರವ್ವನ ಪ್ರಥಮ ರಾತ್ರಿ ಬೇರೊಂದು ವಿಶಿಷ್ಟ ರೀತಿಯಲ್ಲಿಯೇ ನಡೆಯಿತು. ತಡಿಕೆ ಮರೆ ಮಾಡಿದ ಪಡಸಾಲೆಯಲ್ಲಿ ನಿದ್ದೆ ಬಾರದೆ ಹೊರಳಾಡಿದ ಪಾರವ್ವನಿಗೆ ಯಾವಾಗ ಜಂಪು ಹತ್ತಿತ್ತೊ ತಿಳಿಯದು. ಸರಿ ರಾತ್ರಿಯ ಹೊತ್ತು ಬೆನ್ನ ಮೇಲೊಂದು ಒದೆ ಬಿತ್ತು. ಅಂಗತ್ತ ಬಿದ್ದಳು ಪಾರವ್ವ. ಚೀರಬೇಕೆಂದರೂ ಭಯತುಂಬಿದ ದನಿ ಏಳಲಿಲ್ಲ. ಕುಡಿದು ಬಂದ ಮಲ್ಲಪ್ಪ ಅವಳ ಮೇಲೆ ಬಿದ್ದ. ರಾಕ್ಷಸನಂತಹ ಆಳು. ಜೀವ ಬಾಯಿಗೆ ಬಂದಿತು. ಒದ್ದಾಡಿ ಕೊಸರಾಡಿ ಜೋಲಿ ತಪ್ಪುತ್ತಿದ್ದ ಗಂಡನನ್ನು ತಳ್ಳಿ ಹೊರಗೆ ಓಡಿದಳು, ಏನೂ ಅರಿಯದ ಪಾರವ್ವ. ಅಲ್ಲಿ ಕೆಮ್ಮುತ್ತ ಮಲಗಿದ್ದ ಕಾಳವ್ವತ್ತಿಯ ಮಗ್ಗಲು ಸೇರಿದಳು. ಹೆದರಿ ನಡುಗುತ್ತಿದ್ದ ಬಾಲೆಯನ್ನು ಅವುಚಿ ಹಿಡಿದುಕೊಂಡಳು ಮುದುಕಿ. ತನ್ನ ಮದುವೆಯಾದದ್ದೇ ಮರೆತುಬಿಟ್ಟಂತೆ ಮಲ್ಲಪ್ಪ ಒಳಗೆ ನಿದ್ದೆ ಮಾಡಿದ್ದ. ಮರುದಿನ ಮನೆಮಂದಿಯಲ್ಲ ಛೀ ಹಾಕಿದರು, ಗಂಡನ ಮಗ್ಗಲು ಬಿಟ್ಟು ಓಡಿದ್ದಕ್ಕೆ. ಮಲ್ಲಪ್ಪನಂತೂ ಇವತ್ತು ರಾತ್ರಿ ಓಡಿದರೆ ಎಲುಬು ಮುರಿಯುತ್ತೇನೆ ಎಂದು ಗುದ್ದಿ ಹೇಳಿದ. ಹೀಗೆ ಶುರುವಾದ ಅವಳ ದಾಂಪತ್ಯ ಹುಲುಸಾದ ಫಲ ಕೊಟ್ಟಿತು. ನಾಲ್ಕು ವರ್ಷಗಳಲ್ಲಿ ಮೂರು ಮಕ್ಕಳ ತಾಯಾದಳು. ಕೊಡ್ಡದಂತೆ ಗಟ್ಟಿಮುಟ್ಟಾಗಿದ್ದ ಪಾರವ್ವ ಹಂಚೀಕಡ್ಡಿಯಾದಳು. ಹಗಲು ಮನೆ ಮಂದಿಯ ಕೈಯಲ್ಲಿ ರಾತ್ರಿ ಗಂಡನ ಕೈಯಲ್ಲಿ ಅವಳು ಅರೆಜೀವವಾದಳು. ಸತ್ತು ಹೋಗಬೇಕೆಂದು ಒಮ್ಮೊಮ್ಮೆ ಗೋಳಿಟ್ಟಾಗ ಮುತ್ತಿನಂತಹ ಮಕ್ಕಳನ್ನು ಮೊದಲುಕೊಂದು ಆಮೇಲೆ ಸಾಯಿ ಎನ್ನುವಳು ಕಾಳವ್ವತ್ತಿ. ಹೆಂಡತಿಯನ್ನು ಹೊಲದಲ್ಲಿ ದುಡಿಸುತ್ತ, ಸಿಕ್ಕಷ್ಟು ವೇಳೆಯಲ್ಲೂ ಕುಡಿತವನ್ನೇ ಕಸುಬು ಮಾಡಿಕೊಂಡ ಮಲ್ಲಪ್ಪ ಹೊಟ್ಟೆ ನೋವಿನಿಂದ ನರಳಿ ನರಳಿ ಒಂದು ದಿನ ಸತ್ತು ಹೋದ. ರಾತ್ರಿಯ ನರಕದಿಂದ ಪಾರವ್ವ ಪಾರಾದಳು. ಆದರೆ ಮೈದುನ ಫಕ್ಕೀರನ ಹೊಟ್ಟೆ ಕಿಚ್ಚು ಅವಳನ್ನು ಇಡಿಯಾಗಿ ನುಂಗಲು ಹವಣಿಸುತ್ತಿತ್ತು.  

            ಮತ್ತೊಂದು ರಾತ್ರಿ ಪಾರವ್ವ ಒಳಗೆ ಮಲಗಿದ್ದ ಮಕ್ಕಳನ್ನೆಲ್ಲ ಬಿಟ್ಟು ಓಡಿ ಬಂದು ಕಾಳವ್ವತ್ತಿಯ ಮಗ್ಗಲು ಸೇರಿದಳು. ಫಕ್ಕೀರ ಕುಡಿದು ಬಂದು ಅವಳನ್ನು ಹಿಡಿದುಕೊಂಡಿದ್ದ. ಚೆಲುವೆ ಹೆಂಡತಿ ಮನೆಯಲ್ಲಿದ್ದರೂ ಮೈದುನ ತನ್ನ ಮೈ ಮೇಲೆ ಕೈ ಹಾಕಲು ಬಂದ ಕಾರಣ ಪಾರವ್ವನಿಗೆ ಸ್ಪಷ್ಟವಾಗಿ ಹೊಳೆದಿತ್ತು. ಯತ್ತೀ, ನಾಳೆ ಹೊಂತೂಟ್ಲೆ ನಾ ಮಕ್ಕಳನ್ನ ಕಟಿಗೆಂಡು ಹೊಲಕ್ಕೆ ಹೋಕ್ಕಿನಿ. ಮನ್ಯಾಗ ಕಾಲು ಹಾಕಂಗಿಲ್ಲ. ಮನಿ ಋಣಾ ಮುಗೀತು, ಕಂಠ ತುಂಬಿದರೂ ಅಳಲಿಲ್ಲ್ಲ ಪಾರವ್ವ.

ಊರ ಹಿರಿಯರ ಸಮಕ್ಷಮ ಪಾರವ್ವ ಮಕ್ಕಳ ಜೊತೆಗೆ ಹೊಲದ ಗುಡಿಸಲಲ್ಲಿ ಇರುವ ಏರ್ಪಾಡು ಮಾಡಿದಳು ಕಾಳವ್ವ. ಹೊಲ ಮಲ್ಲಪ್ಪನ ಪಾಲಿಗೇ ಬಂದದ್ದು. ಕಾಳವ್ವತ್ತಿ ಅವಳ ಜೊತೆಗಿದ್ದು ಧೈರ್ಯ ಕೊಟ್ಟಳು. ಚಿಳ್ಳೆ-ಪಿಳ್ಳೆ ಮಕ್ಕಳು-ಒಬ್ಬಂಟಿಯಾಗಿ ಹೊಲದಲ್ಲಿ ಏಗಲಾರದೆ ಹಳ್ಳಿಯಿಂದ ಮಲತಮ್ಮನನ್ನು ತಂದಿಟ್ಟುಕೊಂಡಳು ಪಾರವ್ವ. ಅವಳ ಸ್ವಾತಂತ್ರ್ಯಕ್ಕೂ ಬೆಲೆ ತೆರಬೇಕಾಗಿತ್ತು. ಮನೆಯಲ್ಲಿ ಮೈದುನನೊಬ್ಬನದೇ ಕಾಟವಾದರೆ ಹೊಲದಲ್ಲಿ ಹರೆಯದ ಗಂಡಸರೆಲ್ಲ ಹಣಿಕಿ ಹಾಕುವವರೇ. ಒಂಟಿ ಗುಡಿಸಲು ಹಗಲೆಲ್ಲ ದುಡಿದು ಹೆಣವಾದರೂ ರಾತ್ರಿ ಕಣ್ಣು ಮುಚ್ಚಲೂ ಹೆದರಿಕೆ. ಕೆಲವೊಂದು ಪ್ರಸಂಗದಲ್ಲಿ ಹತ್ತಿರ ಬಂದವರನ್ನು ಕುಡಗೋಲು ತೋರಿಸಿ ಓಡಿಸಿದ್ದಳು.

            ಇಷ್ಟು ವರ್ಷಗಳ ತನ್ನ ಬದುಕಿನಲ್ಲಿ ದೇವರು-ದಿಂಡಿರ ಉಸಾಬರಿಗೆ ಹೋದವಳಲ್ಲ ಪಾರವ್ವ. ಅದಕ್ಕೆಲ್ಲ ಅವಳಿಗೆ ವೇಳೆಯಾದರೂ ಎಲ್ಲಿತ್ತು ? ನಾಲ್ಕಾರು ತುತ್ತಿನ ಚೀಲಗಳನ್ನು ತುಂಬುವದರಲ್ಲಿಯೇ ಸೂರ್ಯ ಮೂಡಿ ಮುಳುಗುತ್ತಿದ್ದ. ವರುಷ ಮಳೆ ಸರಿಯಾಗಿ ಆಗದೆ ವರುಷ ಪೂರ್ತಿ ಹೊಟ್ಟೆ ತುಂಬುವಷ್ಟು ಬೆಳೆಯೂ ಕೈಗೆ ಹತ್ತಿರಲಿಲ್ಲ. ಗುಡಿ ಕಂಡಲ್ಲಿ ತಲೆ ಬಾಗಿ ಕೈಮುಗಿದು ತನ್ನ ಕೆಲಸಕ್ಕೆ ಸಾಗುವ ಪಾರವ್ವನನ್ನು ಕಂಡು ದೇವರಿಗೆ ಕರುಣೆ ಬಂದಿತು. ಜಾನಪದ ಕಥೆಗಳಲ್ಲಿ ನೀವು ಕೇಳಿದ್ದೀರಲ್ಲ! ಪಾರ್ವತಿ ಪರಮೇಶ್ವರರು ಲೋಕ ಸಂಚಾರಕ್ಕಾಗಿ ಹೊರಟಿರುತ್ತಾರೆ. ಅಲ್ಲಿ ಬಡವರನ್ನು ದುಃಖಿಗಳನ್ನು ಕಾಣುತ್ತಾರೆ. ಪಾರ್ವತಿ ದೇವಿಯದು ಹೆಂಗರುಳು. ಸ್ವಾಮೀ ಅವರಿಗೆ ಏನಾದರೂ ಸಹಾಯ ಮಾಡಿ ಎನ್ನುತ್ತಾಳೆ. ಧನ ಕನಕ-ವಸ್ತುಗಳು. ಅವರ ಮನೆ ತುಂಬುತ್ತವೆ. ಸರಿ, ಬಡವರ ದುಃಖಗಳೆಲ್ಲ ದೂರಾಗುತ್ತವೆ. ಪಾರ್ವತಿ-ಪರಮೇಶ್ವರರು ಸಂತುಷ್ಟರಾಗಿ ಮುಂದಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಸ್ವಲ್ಪ ವ್ಯತ್ಯಾಸವಾಯಿತು. ದೇವಿ ಮುಂದೆ ಹೋಗಲಿಲ್ಲ. ಪಾರವ್ವನ ಮನೆಯಲ್ಲಿಯೇ ಕುಳಿತು ಬಿಟ್ಟಳು.

            ಅದು ಹೇಗೆ ಸಾಧ್ಯ ಎಂದು ಅಚ್ಚರಿಯಾಯಿತೇ? ಹಾಗಾದರೆ ಪ್ರಸಂಗವನ್ನೂ ಕೇಳಿ. ಒಂದು ಮಂಗಳವಾರ ಸಂತೆಯ ದಿನ. ಉಪ್ಪು, ಬೆಲ್ಲ, ಚಾ ಪುಡಿ, ಎಣ್ಣೆಗಾಗಿ ಪಾರವ್ವ ನಗರಕ್ಕೆ ಹೋಗಿದ್ದಳು. ಮನೆಯಲ್ಲಿ ಅವಳ ಚಿಕ್ಕಮಗ ಒಳ್ಳೆಣ್ಣೆ ಬಾಟ್ಲಿ ಒಡೆದಿದ್ದ. ಅವನನ್ನು ಹುಣಸೇ ಬರಲಿನಿಂದ ಚೆನ್ನಾಗಿ ತದಕಿ ಪೇಟೆಗೆ ಬಂದಿದ್ದಳು. ಅಲ್ಲಲ್ಲಿ ಸುತ್ತಾಡಿ, ಚೌಕಾಶಿ ಮಾಡಿ ಮೋಡಕಾ ಬಜಾರಿನಲ್ಲಿ ಎಂಟಾಣೆಗೆ ಒಂದು ಎಣ್ಣೆಯ ಬಾಟ್ಲಿ ಕೊಂಡಳು. ಎಲ್ಲಿಯಾದರೂ ಸೀಳು ಇದೆಯೇನೋ ಪರೀಕ್ಷಿಸಲು ಆಕಾಶಕ್ಕೆ ಎತ್ತಿ ಹಿಡಿದಳು. ಅಲ್ಲಿ ಒಂದು ಮುಖ! ಅಂದರೆ ಪೂರ್ತಿ ಮುಖವಲ್ಲ-ಕಣ್ಣು, ಮೂಗು ಕಂಡವು. ಮತ್ತೆ ಮತ್ತೆ ದಿಟ್ಟಿಸಿದಳು. ಬಾಟಲಿ ಸರಿಸಿ ಆಕಾಶ ನೋಡಿದಳು. ಏನೂ ಇಲ್ಲ. ಸೋಜಿಗವಾಯಿತು. ಓಡುತ್ತ ಹೊಲಕ್ಕೆ ಬಂದಳು. ಕಾಳವ್ವ. ಹಣಮಂತರಿಗೂ ಬಾಟಲಿಯಲ್ಲಿ ಮುಖ ಕಂಡಿತು. ಏನಿದು? ಯಾಕೆ ಹೀಗೆ? ಒಂದೂ ತಿಳಿಯದೆ ಪೇಚಾಡಿದರು. ಕಾಳವ್ವತ್ತಿ ಅನುಭವಸ್ಥೆ.

            ಪಾರೀ ಮಾರಿ ಎಲ್ಲೋ ನೋಡಿದಂಗ ಐತೆಲ್ಲಾ.

            ಹೌದ ಯತ್ತೀ, ನನಗೂ ಹಾಂಗ ಅನಸ್ತೈತಿ.

            ಇದೇನು ಕೇಡುಗಾಲಕ್ಕೆ ಬಂತೋ ಹೇಗೆ ತಿಳಿಯುವದು? ರಾತ್ರಿ ಇಬ್ಬರೂ ನಿದ್ದೆ ಮಾಡಲಿಲ್ಲ. ಬೆಳಗ್ಗೆ ತಂಗಳುಣ್ಣವಾಗ ಕಾಳವ್ವ ಮೆಟ್ಟಿ ಬಿದ್ದಳು. ರೊಟ್ಟೀ ಕೆಳಗೆ ಇಟ್ಟವಳೇ ಓಡಿ ಹೋಗಿ ಕೈ ತೊಳೆದು ಮತ್ತೆ ಬಾಟಲಿ ದಿಟ್ಟಿಸಿದಳು. ಹಾಗೆಯೇ ಅವಳ ಕಣ್ಣಲ್ಲಿ ನೀರು ಹರಿಯಿತು. ಬಾಟಿಲಿ ಕಣ್ಣಿಗೊತ್ತಿಕೊಂಡಳು.

            ತಾಯಿ ನಮ್ಮವ್ವಾ. ನಿನ ಮಕ್ಕಳ್ನ ಸಲಹವ್ವಾ ಬಾಯಿ ತೆರೆದು ನೋಡುತ್ತಿದ್ದ ಪಾರವ್ವನಿಗೆ, ಪ್ಯಾರೀ ನಿನ ದೈವ ತೆರೀತು. ಕಷ್ಟ ಹರೀತು. ನನ ಮಗಳ, ದ್ಯಾಮವ್ವ ದೇವಿ ನಿನ ಮನೀ ಬಾಗಲಕ ಬಂದಾಳ. ತೊಳದು ಇಬೂತಿ, ಕುಂಕುಮ ಹಚ್ಚಿ ಪೂಜಿ ಮಾಡು. ನಿನಗ ಎಲ್ಲಾ ಛೊಲೋ ಆಗತೈತಿ ಎಂದಳು.

            ಮೊದಲು ಕಾಳವ್ವತ್ತಿಯ ತೆಕ್ಕೆಗೆ ಬಿದ್ದು ಭೋರೆಂದು ಅತ್ತಳು ಪಾರವ್ವ ಆಮೇಲೆ ಬಾಟಲಿಗೆ ಅಡ್ಡ ಬಿದ್ದಳು.

            ನಾ ನಿನ್ನ ಕೂಸು ನಮ್ಮವ್ವಾ, ಅರೀದ ಮಳ್ಳಿ. ಏನಾದ್ರೂ ತೆಪ್ಪಾದ್ರ ಹೊಟ್ಯಾಗ ಹಾಕ್ಕೋ. ದಿನಾ ನಿನ್ನ ಪೂಜಿ ಮಾಡ್ತೀನಿ. ಮಕ್ಕಳನ್ನೂ ಅಡ್ಡ ಬೀಳಿಸಿ ಬಾಟಲಿಯನ್ನು ಒಂದು ಚಿಕ್ಕ ಮಣೆಯ ಮೇಲೆ ಇಟ್ಟು ಪೂಜೆ ಮಾಡಿದಳು.

            ಕಾಳವ್ವನಿಂದ ಸಮಾಚಾರ ತಿಳಿದ ಊರ ಜನ ಹಿಂಡು ಹಿಂಡಾಗಿ ಸೋಜಿಗ ನೋಡಲು ಬಂದರು. ಬಂದವರಿಗೆಲ್ಲ ಕಾಳವ್ವ ಹೇಳಿದ್ದೊಂದೇ ಮಾತು.

            ಪಾರವ್ವ ಯಾರಿಗೂ ಕೇಡು ಬಗದಾಕಿ ಅಲ್ಲಾ, ಭಾಳ ಕಷ್ಟ ಉಂಡಾಳ. ದೇವರಿಗೆ ಸತರ್ಿ ಆಗಿ ನಡಕೊಂಡಾಳ. ಅವಳ ನಡತೀಗೆ ಮೆಚ್ಚಿ  ದೇವೀ ಆಕಿ ಮನೀಗೆ ಬಂದಾಳ. ಸತ್ತ್ಯುಳ್ಳವರಿಗೆ ಕಾಣತಾಳ.

            ಕಾಳವ್ವನ ಕೊನೆಯ ಮಾತು ಬಂದ ಜನರಿಗೆಲ್ಲ ಸವಾಲಾಯಿತು. ಎಲ್ಲರಿಗೂ ಬಾಟಲಿಯಲ್ಲಿ ದೇವಿಯೇ ಕಂಡಳು. ದರ್ಶನ ಮಾಡಿ ಸಾಷ್ಟಾಂಗ ಬಿದ್ದರು. ಹರಕೆ ಹೊತ್ತರು. ಕಾಣಿಕೆ ಇತ್ತರು. ಮಣ್ಣೂರು, ಮಸ್ಯಾಳ, ನಿಚ್ಚಣಿಕ, ಬಾರಿಕೊಪ್ಪ, ಮದಗ ಎಲ್ಲ ಹಳ್ಳಿಯ ಭಕ್ತರೂ ದೇವಿಗೆ ನಡೆದುಕೊಳ್ಳುತ್ತ, ಪಾರವ್ವನ ಬದುಕಿಗೆ ಸಂಪತ್ತು, ಸಮೃದ್ಧಿ ತುಂಬಿಕೊಟ್ಟರು. ದೇವಿಯ ಹೆಸರಿನಲ್ಲಿ ಇಷ್ಟೊಂದು ಸುಖ ಸಿಗುತ್ತಿರುವಾಗ ಪಾರವ್ವ ನೇಮ-ನಿಷ್ಠೆಯಿಂದ ಪೂಜೆ ಮಾಡಿದಳು. ಉಪವಾಸ-ವ್ರತ ಮಾಡಿದಳು. ಪ್ರತಿ ಮಂಗಳವಾರ, ಹುಣ್ಣಿಮೆ, ಅಮಾವಾಸ್ಯೆಗೆ ತಲೆಸ್ನಾನ ಮಾಡಿ ವಿಭೂತಿ, ಅಂಗಾರ ಧರಿಸಿ ಕಣ್ಣು ಮುಚ್ಚಿ ಕೈ ಮುಗಿದು ಕುಳಿತರೆ ಪ್ರತ್ಯಕ್ಷ ದ್ಯಾಮವ್ವ ಅವಳಲ್ಲಿ ಇಳಿದು ಬರುವಳು. ಭಕ್ತರು ಭಯದಿಂದ ನಡುಗಿ ಅಡ್ಡಬೀಳುವರು. ಕಷ್ಟ ಸುಖ ಹೇಳಿಕೊಳ್ಳವರು.

            ಯವ್ವಾ ಮೂರದಿನಾ ಆತು, ಎಮ್ಮಿ ಮನೀಗಿ ಬಂದಿಲ್ಲ.

            ಬರೂ ಮಂಗಳವಾರ ಬರತೈತಿ. ಚಿಂತೀ ಮಾಡಬ್ಯಾಡ ಪಾರವ್ವ ದೇವಿಯ ಮೇಲಿನ ಅಂಗಾರ ಕೊಡುವಳು.

            ಯವ್ವಾ, ನನ್ನ ಮಗ್ಗ ಜರ ಬರತಾವು. ಕಣ್ಣು ಮುಚ್ಚಿಕೊಂಡೇ ಪಾರವ್ವ ಕೊಡುವ ತೀರ್ಥಕ್ಕೆ ತಾಯಿ ಕೈ ಒಡ್ಡುವಳು.

            ಯವ್ವಾ ಮದುವ್ಯಾಗಿ ಐದು ವರ್ಸಾದ್ವು. ನನ ಸೊಸಿ ಹೊಟ್ಟೀಲೆ ಆಗವಾಲ್ಲಳು. ಇನ್ನೊಂದು ಮದಿವಿ ಮಾಡಲ್ಯಾ.

            ಬ್ಯಾಡಾ, ಮನೀ ಲಕ್ಷ್ಮೀ ಆಕಿ. ಆಕಿನ್ನ ಉರಸಬಾರದು. ಹನ್ನೊಂದು ಹುಣ್ಣಿವಿ ದೇವಿಗೆ ನಡಕೋ ಅನ್ನು. ಫಲಾ ಸಿಗತೈತಿ.

            ಯವ್ವಾ, ಗೌಡನ ಕಾಟಾ ತಾಳಲಾರೆ, ಜೀಂವಾ ಕಳಕೊಳ್ಳಲ್ಯಾ ಅನಸ್ತತಿ ಹರೆಯದ ವಿಧವೆಯೊಬ್ಬಳು ಹಲಬಿದಳು.

            ಮಗಳ, ಹೆಣ್ಣಂದ್ರ ಭೂಮಿತಾಯಿ ಇದ್ದಾಂಗ ತಾಯಿ ಹಾಂಗ ತಾಳಿಕೋ. ಮಿಕ್ಕಿದಾಗ ಆಕೀನೂ ಬೆಂಕಿ ಕಾರತಾಳ ನೆಪ್ಪಿಡು.

            ತನಗ ಒಳ್ಳೆಯದು ಮಾಡಿದ ದೇವಿ ಅವರನ್ನೂ ಕಾಪಾಡಲಿ ಎಂದು ಭಕ್ತಿಯಿಂದ ಬೇಡಿಕೊಳ್ಳುವಳು ಪಾರವ್ವ. ಬಾಯಲ್ಲಿ ಹನಿ ನೀರು ಹಾಕದೆ ಸಂಜೆಯವರೆಗೂ ಬಂದ ಭಕ್ತರಿಗೆ ಅಂಗಾರ, ಹೂವು, ಕಲ್ಲುಸಕ್ಕರೆ ಕೊಟ್ಟು ಕಳಿಸಿದ ಪಾರವ್ವ ರಾತ್ರಿ ಮತ್ತೊಮ್ಮೆ ಸ್ನಾನ ಮಾಡಿ ದೇವರ ಕೋಣೆ ಒಳ ಹೊಕ್ಕು ಬಾಗಿಲು ಹಾಕಿ ಬಂದ ದಕ್ಷಿಣೆಯನ್ನೆಲ್ಲ ಎಣಿಸಿ ಸರಿ ಎರಡು ಪಾಲು ಮಾಡಿ ಒಂದು ಪಾಲು ತನ್ನ ಹಳೆಯ ಸಂದೂಕದಲ್ಲಿಟ್ಟು, ಇನ್ನೊಂದನ್ನು ಜಗಲಿಯ ಮೇಲಿನ ಹುಂಡಿಗೆ ಹಾಕುವಳು. ತಾಯೀ ನಮ್ಮವ್ವಾ ಹಿಂಗ ನಡಸವ್ವ ಎಂದು ಅಡ್ಡ ಬಿದ್ದು ಹೊರಗೆ ಬರುವಳು.

            ಪಾರವ್ವನ ಗುಡಿಸಲು ಹಂಚಿನ ಮನೆಯಾಯಿತು. ದೇವಿಗೆ ಪ್ರತ್ಯೇಕ ಕೋಣೆಯಾಯಿತು. ಬಾಟಲಿಗೆ ಬೆಳ್ಳಿಯ ದೇವಿ ಮುಖವಾಡ ಬಂದಿತು. ಮಕ್ಕಳು ಕೈಗೆ ಬಂದರು. ಹೊಲಗೆಲಸಕ್ಕೆ ಎತ್ತು, ಹೈನಿಗೆ ಆಕಳುಗಳು ಬಂದವು. ಕಾಳವ್ವತ್ತಿ ತನ್ನ ಮಕ್ಕಳ ಜೊತೆ ಇರಲು ಮಣ್ಣೂರಿಗೆ ಹೋದಳು. ಅಪ್ತ ಸತ್ತ ಮೇಲೆ ಹಣಮಂತ ಮಾಸೂರಿಗೆ ತಿರುಗಿ ಹೋದ. ದೇವಿ ಪೂಜೆಯ ದಿನ ಬಿಟ್ಟು ಉಳಿದ ದಿನ ಪಾರವ್ವ ಮಕ್ಕಳೊಡನೆ ಹೊಲದಲ್ಲಿ ದುಡಿಯುವಳು. ದೇವಿ ನೈವೇದ್ಯವಾಗಿ ಹೆಚ್ಚಾದ ಹಾಲು ಮಾರಲು ಪೇಟೆಗೆ ಹೋಗುವಳು. ತಾನು ಹಾಲು ಕೊಡುವ ಸಾಹೇಬರ ಗುರುತಿನಿಂದ ಹುಂಡಿ ಮತ್ತು ಸಂದೂಕದಲ್ಲಿದ್ದ ಹಣವವನ್ನೆಲ್ಲ ಬ್ಯಾಂಕಿಗೆ ಜಮಾ ಮಾಡಿದಳು. ಚಿಕ್ಕ ಮಗನನ್ನು ಶಾಲೆಗೆ ಹಾಕಿದಳು.

            ದೇವಿಯ ಎದುರು ಕಣ್ಣು ಮುಚ್ಚಿ ಕುಳಿತಾಗ ಅವಳ ಮನಸ್ಸಿನ ಆಳದಲ್ಲಿ ಆಗಾಗ ಒಂದು ಪ್ರಶ್ನೆ ಎದ್ದು ಕುಣಿಯುವದು.

            ಬಾಟಲಿಯಲ್ಲಿ ನಿಜವಾಗಿಯೂ ದ್ಯಾಮವ್ವ ಇರುವಳೇ? ತನ್ನ ಬುದ್ದಿಗೆ ತೋಚಿದಂತೆ ಭಕ್ತರಿಗೆ ಉತ್ತರ ಹೇಳುವವಳು ತಾನೇ ಅಲ್ಲವೇ? ದೇವಿ ತನಗೆ ಒಂದು ದಿನವೂ ಕಂಡಿಲ್ಲ. ಮಾತಾಡಿಲ್ಲ, ಅವಳು ಇದ್ದಾಳೆಯೆ? ಇದ್ದರೆ ಎಲ್ಲಿದ್ದಾಳೆ? ಹೇಗಿದ್ದಾಳೆ? ಜನರ ಕ್ರೌರ್ಯ, ಮೋಸ, ದುಷ್ಟತನಗಳೆಲ್ಲ ತನಗೆ ಅರಿಯದ್ದಲ್ಲ. ದೇವಿ ಇದ್ದರೆ ದುಃಖಿಗಳಿಗೆ ಯಾಕೆ ಮತ್ತಷ್ಟು ಕಷ್ಟ ಕೊಡುತ್ತಾಳೆ? ಒಳ್ಳೆಯವರಿಗೆ ಒಳ್ಳೆಯದು ಯಾಕೆ ಮಾಡುವದಿಲ್ಲ? ಎಲ್ಲ ಸಂಶಯಗಳು ಅವಳನ್ನು ಕಾಡಿದವು. ಇದೇ ಚಿಂತೆಯಲ್ಲಿ ಅಂತರ್ಮುಖಿಯಾಗುವಳು. ದ್ಯಾಮವ್ವ ಇಲ್ಲವೇ ಇಲ್ಲ, ಎನ್ನುವ ಮಾತು ಮನಸ್ಸಿಗೆ ತಟ್ಟಿ ತಟ್ಟಿ ಹೋಗುತ್ತಿತ್ತು.

            ಅಂದು ಸಾಹೇಬರ ಹೆಂಡತಿ ಹೇಳುತ್ತಿದ್ದರಲ್ಲ. ಜಗತ್ತನ್ನು ಹುಟ್ಟಿಸಿದ್ದು ಒಂದು ಶಕ್ತಿ. ಶಕ್ತಿ ಮಾಡಿದ ನಿಯಮದಂತೆ ಸೂರ್ಯ, ಚಂದ್ರ, ಜಗತ್ತು, ಎಲ್ಲಾ ನಡೆಯುತ್ತದೆ. ಅದನ್ನೇ ದೇವರು ಎಂದು ಬೇರೆ ಬೇರೆ ಹೆಸರಿಟ್ಟು ಎಲ್ಲರೂ ಪೂಜೆ ಮಾಡ್ತಾರೆ. ಬರಿ ಪೂಜೆ ಮಾಡುವದರಿಂದ ಏನು ಆಗೋದಿಲ್ಲ. ನೀನು, ಮಕ್ಕಳು ಹೊಲದಲ್ಲಿ ದುಡಿತೀರಿ, ಹೊಟ್ಟೆ ತುಂಬ್ತದೆಸಾಹೇಬರು ಆಫೀಸ ಕೆಲಸ ಮಾಡ್ತಾರ. ನಾನು ಮನೆ-ಮಕ್ಕಳು ನೋಡಿಕೋತೀನಿ. ಹೀಗೆ ಎಲ್ಲರೂ ತಮ್ಮ ತಮ್ಮ ಕೆಲಸ ಮಾಡ್ತಾ ಹೋದರೆ ಜೀವನ ಸರಿಯಾಗಿ ನಡೀತದೆ. ನಿಮ್ಮ ಪಾಲಿಗೆ ಬಂದ ಕೆಲಸಾನ ಪೂಜೆ ಅನ್ನೋ ಹಾಗೆ ನಿಷ್ಠೆಯಿಂದ, ಪ್ರೀತಿಯಿಂದ ಮಾಡಬೇಕು ಎಂದು. ಅವರ ಮಾತು ಕೇಳಿದಾಗಿನಿಂದ ತಾನು ತಪ್ಪು ಮಾಡುತ್ತಿದ್ದೀನೇ ಎಂದು ಅನ್ನಿಸ್ತದೆ. ತನಗೆ ಭಕ್ತಿ ಇದ್ದರೆ, ನಂಬಿಕೆ ಇದ್ದರೆ ತಾನೊಬ್ಬಳು ಪೂಜೆ ಮಾಡಿದರೆ ಸಾಕು. ಉಳಿದವರನ್ನೂ ನಂಬಿಸೋದು ಮೋಸ ಪ್ರಪಂಚದಲ್ಲಿಯ ಮೋಸದಲ್ಲಿ ತನ್ನ ಪಾಲೂ ಇದೆಯಲ್ಲಾ! ತರದ ವಿಚಾರಗಳ ತಾಕಲಾಟ. ಪಾರವ್ವ ದಿನ ದಿನಕ್ಕೆ ಸೋಲುತ್ತಿದ್ದರೂ ತನ್ನ ಕಾಯಕ ಬಿಟ್ಟಿರಲಿಲ್ಲ.

            ಇಂಥ ದಿನಗಳಲ್ಲಿ ಪಾರವ್ವ ಜಡ್ಡಿಗೆ ಬಿದ್ದಳು. ಬಿಟ್ಟೂ ಬಿಡದ ಜ್ವರ ಕಾಡಿದವು. ಭಕ್ತಿಯಿಂದ ದೇವಿಯ ಮೇಲಿನ ಹೂವು, ತೊಳೆದ ತೀರ್ಥವನ್ನು ಕುಡಿದು ದಿನ ಕಳೆದಳು. ಜ್ವರ ನಿಲ್ಲಲಿಲ್ಲ. ಇಂಥ ಖಾಯಿಲೆ ಅವಳಿಗೆ ಎಂದೂ ಬಂದಿರಲಿಲ್ಲ. ಅವ್ವನ ಅವಸ್ಥೆ ಕಂಡು ಗಾಬರಿಯಾದ ಸಂಗಣ್ಣ ಡಾಕ್ಟರ ಹತ್ತಿರ ಹೋಗೋಣವೆಂದು ದುಂಬಾಲು ಬಿದ್ದ. ಪಾರವ್ವ ಒಪ್ಪಲಿಲ್ಲ. ಇನ್ನೊಂದು ವಾರ ಕಳೆಯಿತು. ಇನ್ನೂ ಹಾಸಿಗೆ ಬಿಟ್ಟೇಳಲಿಲ್ಲ. ಇದೇ ಸುದ್ದಿ ಮಣ್ಣೂರಿನ ಜನರ ಬಾಯಿಗೆ ಆಹಾರವಾಯಿತು. ಹುಣ್ಣಿವೆ ಬಂದಿತು. ಮಕ್ಕಳು ಎಷ್ಟು ಹೇಳಿದರೂ ಕೇಳದೆ ನಸುಕಿನಲ್ಲಿ ಮೈ ತೊಳೆದು ದೇವಿಯ ಮುಂದೆ ಕುಳಿತಳು ಪಾರವ್ವ. ಜನ ಕೂಡಿದರು. ಅಡ್ಡ ಬಿದ್ದರು. ಪಾರವ್ವ ಕಣ್ಣು ತೆರೆದು ಯಾರನ್ನೂ ನೋಡಲಿಲ್ಲ. ತನ್ನಷ್ಟಕ್ಕೆ, ನಾ ಹೋಕ್ಕೀನಿ, ನಾ ಒಲ್ಲೆ. ನಾ ಒಲ್ಲೆ ಇರಾಕ ಒಲ್ಲೆ. ಭೂಮಿಗೆ ಭಾರ ಆತು. ಪಾಪ ಹೆಚ್ಚಾತು. ಕೊಡಾ ತುಂಬಿತು. ಪಾಪದ ಕೊಡಾ ತುಂಬಿತು. ನನಗ ಹೊರಕ ಆಗೊದಿಲ್ಲಾ. ನಾ ಹೋಕ್ಕೀನಿ. ಹೀಗೇ ಮಧ್ಯರಾತ್ರಿಯವರೆಗೂ ಬಡಬಡಿಸಿದಳು. ಬಂದ ಜನ ನಡುಗಿ ಹೋದರು.

            ಬೆಳಕು ಹರಿಯುತ್ತಿರುವಾಗ ಸಂಗಣ್ಣನನ್ನು ಎಬ್ಬಿಸಿ ಅವನ ಕೈಯಲ್ಲೊಂದು ಕೆಂಪು ವಸ್ತ್ರದ ಗಂಟು ಕೊಟ್ಟಳು. ಏನೂ ತಿಳಿಯದೇ ಮಿಕಿ ಮಿಕಿ ನೋಡಿದ.

            ಇದನ್ನು ನಮ್ಮ ಹೊಲದ ಬಾವ್ಯಾಗ ಹಾಕಿ ಬಾ ತಿರಿಗಿ ನೋಡ ಬ್ಯಾಡಾ. ನನ್ನ ಕನಸಿನ್ಯಾಗ ದೇವೀ ಬಂದು ನಾ ಹೋಕ್ಕೀನಿ ಅಂದಾಳ. ಹೋಗಲಿ ಬಿಡು. ಖಾಲಿ ಆದ ಜಗಲಿಗೆ ಸನ ಮಾಡಿ ಸಂಗಣ್ಣ ಬಾವಿಯತ್ತ ಹೊರಟ.

            ತಿರುಗಿ ಬಂದ ಮಗನಿಗೆ ಪಾರವ್ವ, ಚಕಡೀ ಕೊಳ್ಳ ಕಟ್ಟು ಸಂಗಣ್ಣಾ, ಡಾಕ್ಟರ ಹಂತ್ಯಾಕ ಹೋಗೂಣಿ ಎಂದಳು.

 

ಶಾಂತಾದೇವಿ ಕಣವಿ

(ಕರ್ನಾಟಕ ಸರಕಾರದ ಅತ್ತಿಮಬ್ಬೆ ಪ್ರಶಸ್ತಿ ವಿಜೇತರು)

ಚೆಂಬೆಳಕು, ಕಲ್ಯಾಣನಗರ, ಧಾರವಾಡ-580007

ದೂರವಾಣಿ: 0836-2227277

(ನೀಲಿಮಾ ಸೀರೆ ಸಂಕಲನದಿಂದ)

No comments:

Post a Comment