Sunday, December 1, 2013

ಆದಿವಾಸಿ ಮಕ್ಕಳ ಚೇತನ: ಅಚ್ಯುತ ಸಮಂತ


ಭಾರತದ ಎರಡನೆಯ ಶಾಂತಿನಿಕೇತನ ಎಂದೇ ಖ್ಯಾತಿ ಪಡೆದ ಒರಿಸ್ಸಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಂಸ್ಥೆಯು (KISS) ಇಂದು 15.000 ಕ್ಕೂ ಅಧಿಕ ಆದಿವಾಸಿ ಮಕ್ಕಳಿಗೆ ಉಚಿತ ಊಟ, ಶಿಕ್ಷಣ ಮತ್ತು ವಸತಿಯನ್ನು ನೀಡುತ್ತಿದೆ. ಇಂದು ಜಗತ್ತಿನ ಅತಿ ದೊಡ್ಡ ವಸತಿ ವಿದ್ಯಾಲಯವಾಗಿದೆಶ್ರೀಯುತ ಅಚ್ಯುತ ಸಮಂತ ಸಂಸ್ಥೆಯನ್ನು ಪ್ರಾರಂಭಿಸಿದವರು. ವಿದ್ಯಾಭ್ಯಾಸದ ಮೂಲಕ ಸಬಲೀಕರಣ ಮಾಡುವುದು ಇವರ ಪ್ರಮುಖ ಧ್ಯೇಯವಾಗಿದೆಇಲ್ಲಿ ಎಲ್.ಕೆ.ಜಿ ಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾಭ್ಯಾಸ ನೀಡಲಾಗುತ್ತದೆ. ಇಲ್ಲಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ತರಬೇತಿ ನೀಡಲಾಗುತ್ತದೆ.

            ಸುಮಾರು 80 ಎಕರೆ ವಿಸ್ತೀರ್ಣವನ್ನು ಒಳಗೊಂಡಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾದ ವಸತಿನಿಲಯಗಳಿವೆ. ಇಲ್ಲಿ ಶೇ 60ರಷ್ಟು ಬಾಲಕರು. ಶೇ 40ರಷ್ಟು ಬಾಲಕಿಯರು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಎಲ್ಲ ಸೌಕರ್ಯಗಳನ್ನು ಒಳಗೊಂಡ ಉತ್ತಮ ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿದೆ. ಸುಮಾರು 20,000 ಕ್ಕೂ ಹೆಚ್ಚಿನ ಪುಸ್ತಕಗಳನ್ನು ಗ್ರಂಥಾಲಯ ಒಳಗೊಂಡಿದೆ. 1993 ರಲ್ಲಿ 125 ಮಕ್ಕಳಿಂದ ಪ್ರಾರಂಭವಾದ ಸಂಸ್ಥೆ ಇಂದು 15.000 ಕ್ಕೂ ಹೆಚ್ಚಿನ ಮಕ್ಕಳಿಗೆ ಆಶ್ರಯತಾಣವಾಗಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದಂತಹ ವಿದ್ಯಾರ್ಥಿಗಳು ಇಂದು ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಇನ್ಫೋಸಿಸ್, ಆಕ್ಸೆಚಂರ್, ವಿಪ್ರೋ, ಟಿ.ಸಿ.ಎಸ್, ಮುಂತಾದವುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಉಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಉದ್ಯೋಗ ತರಬೇತಿ

            ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಂಸ್ಥೆಯು ಶಿಕ್ಷಣದ ಜೊತೆಗೆ ನೂರಾರು ಉದ್ಯೋಗ ತರಬೇತಿಗಳನ್ನು ನೀಡುತ್ತಿದೆ. ವಿದ್ಯಾಭ್ಯಾಸದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹಣ ಗಳಿಕೆಯ ಉದ್ದೇಶದಿಂದ ಟೈಲರಿಂಗ್, ಸಾವಯವ ಕೃಷಿ. ಆಹಾರ ಉತ್ಪಾದನೆ. ಪಶು ಸಂಗೋಪನೆ. ಅಗರಬತ್ತಿ ತಯಾರಿಕೆ, ಕಸೂತಿ. ರಾಸಾಯನಿಕ ಔಷಧಗಳ ತಯಾರಿಕೆ, ಬೇಕರಿ ವಸ್ತುಗಳ ತಯಾರಿಕೆ, ಆಟಿಕೆಗಳ ತಯಾರಿಕೆ, ಚಿತ್ರಕಲೆ, ಪುನರ್ಬಳಕೆ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

            ಶಿಕ್ಷಣದ ಮೂಲಕ ಸಬಲೀಕರಣ, ಆದಿವಾಸಿಗಳ ಬಡತನ ನಿರ್ಮೂಲನೆ, ಆದಿವಾಸಿ ಜನರ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು, ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಉತ್ತಮ ಜೀವನ ನಿರ್ವಹಣೆ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಂಸ್ಥೆಯ ಪ್ರಮುಖ ಉದ್ದೇಶಗಳಾಗಿವೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಶ್ರೀಯುತ ಅಚ್ಯುತ ಸಮಂತ ಅವರು ಒರಿಸ್ಸಾದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದೇ ಪ್ರಖ್ಯಾತಿಯಾಗಿದ್ದಾರೆ. ನೂರಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

 

ವೆಂಕಟೇಶ್ ಕೆ., ನಿರಾತಂಕ

No comments:

Post a Comment