Monday, December 2, 2013

ಪ್ರಸ್ತಾವನೆ ಲೋಕದ ಲೇಸಿನ ಮೌಲ್ಯಮಾಪನ


ಮುನ್ನುಡಿ

ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಶರಣ ಚಿಂತನೆ ಮತ್ತು ಸಮಾಜಕಾರ್ಯದ ತೌಲನಿಕ ಚೌಕಟ್ಟಿನಲ್ಲಿ ನನ್ನೀ ಪ್ರಸ್ತಾವನೆಯನ್ನು ಮಂಡಿಸಲು ಬಯಸುತ್ತೇನೆ.

            ಸಕಲ ಜೀವಾತ್ಮರಿಗೆ ಬಯಸುವ ಲೇಸಿನ ಮಾರ್ಗವನ್ನು ಹನ್ನೆರಡನೆಯ ಶತಮಾನದ ಶಿವಶರಣರು ಹಿಡಿದರು. ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದಲ್ಲಿ ರೂಪುತಳೆದ ಆಧುನಿಕ ಸಮಾಜಕಾರ್ಯವು ಮಾನವರ ಕಲ್ಯಾಣ ಮತ್ತು ಅಭ್ಯುದಯವನ್ನು ತನ್ನ ಗುರಿಯಾಗಿಸಿಕೊಂಡಿತು. ಎರಡೂ ಮಾರ್ಗಗಳ ಗುರಿಯು, ಒಟ್ಟಿನಲ್ಲಿ, ಲೋಕದಲೇಸು, ಒಳಿತು, ಕಲ್ಯಾಣ ಮತ್ತು ಅಭ್ಯುದಯ. ಎರಡೂ ಮಾರ್ಗಗಳ ಗುರಿಯಾದ ಲೇಸು ಅಂದರೇನು ಎಂಬುದನ್ನು ನಾವು ನಿರ್ವಚಿಸಬೇಕಾಗಿದೆ. ಜೊತೆಗೆ, ಲೇಸನ್ನು ಅಳೆಯುವುದು ಹೇಗೆ, ಮತ್ತು ಅಳೆಯುವ ಮಾಪಕಗಳಾವುವು, ಎಂಬುದನ್ನು ನಾವು ನಿರ್ಧರಿಸಬೇಕಾಗಿದೆ.

            ಸ್ಪಷ್ಟವಾಗಿ ಕಾಣುವ ಇವುಗಳಲ್ಲಿನ ಭಿನ್ನ ನಿಲುವುಗಳೆಂದರೆ, ಮೊದಲನೆಯ ಮಾರ್ಗದ್ದು, ಪ್ರಧಾನವಾಗಿ, ಧರ್ಮೋ-ಆಧ್ಯಾತ್ಮಿಕ, ಎರಡನೆಯದರದ್ದು ಲೌಕಿಕ. ಆದರೂ, ಆಳವಾಗಿ ಶೋಧಿಸಿ ನೋಡಿದರೆ ಎರಡೂ ಮಾರ್ಗಗಳು ಸಂಧಿಸುವ ಬಿಂದು ಲೋಕದ ಲೇಸು. ಬಿಂದುವನ್ನು ಅರಿತುಕೊಳ್ಳುವ ಸಂದರ್ಭದಲ್ಲಿ ಮಾರ್ಗಗಳು ನೆರವಾಗಬಲ್ಲುವೆ, ಎಂಬುದನ್ನು ಪರೀಕ್ಷಿಸುವ ಪ್ರಯತ್ನವೇ ವಿಚಾರ ಸಂಕಿರಣದ ಮೂಲ ಅಥವಾ ಪ್ರಧಾನ ಆಶಯ.

            ಶರಣರು ತಮ್ಮ ಜೋಡು ಪರಿಕಲ್ಪನೆಗಳಾದ ಕಾಯಕ-ದಾಸೋಹಗಳ ಮೂಲಕ ಜನರ ಆರೋಗ್ಯಕರವಾದ ವ್ಯಕ್ತಿತ್ವವನ್ನು ರೂಪಿಸಲು ಸಮೂಹ-ಸಮುದಾಯಗಳಲ್ಲಿ ಸೌಹಾರ್ದ-ಸಾಮರಸ್ಯವನ್ನು ಸಂಪೋಷಿಸಲು, ಮಾನವರೆಲ್ಲರೂ ಒಂದೇ ಎಂಬುವ ಸಮಾನತೆಯ ಸೂತ್ರವನ್ನು ಆಧಾರವಾಗಿರಿಸಿಕೊಂಡು ಇತರ ಜೀವರಾಶಿ ಮತ್ತು ಜಡವಸ್ತುಗಳ ಜೊತೆಗೂ ಸಮಾನ ದೃಷ್ಟಿಯಿಂದ ಮಾನವರು ಬಾಳಬೇಕು ಎಂಬುದನ್ನು ತಮ್ಮ ನಡೆ-ನುಡಿಗಳ ಮೂಲಕ ತೋರಿಸಿಕೊಟ್ಟರು. ಆಧುನಿಕ ಸಮಾಜಕಾರ್ಯವು ಜನರ ಮೂಲ ಆವಶ್ಯಕತೆಗಳನ್ನು ಪೂರೈಸುವುದಲ್ಲದೆ ಜನರ ಆರೋಗ್ಯಕರವಾದ ವ್ಯಕ್ತಿತ್ವವನ್ನು ರೂಪಿಸಿ, ಜನರೊಳಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ

            ಎರಡೂ ಮಾರ್ಗಗಳ ತೌಲನಿಕ ಚಿಂತನೆ, ಇವು ತಮ್ಮ ಮುಂದಿರಿಸಿಕೊಂಡಿರುವ ಗುರಿ ಮತ್ತು ಅಳವಡಿಸಿಕೊಂಡಿರುವ ಸಾಧನಗಳಿಗಿರುವ ಸಾಮ್ಯ-ವೈಷಮ್ಯಗಳೇನು ಎಂಬುದನ್ನು ಪರಿಶೀಲಿಸುವ, ಭಕ್ತಿಯೋಗವು ಪಾರಲೌಕಿಕ ಮತ್ತು ಲೌಕಿಕ ವ್ಯವಹಾರಗಳನ್ನು ಬೆಸೆಯುವ ಸಾಧ್ಯಾಸಾಧ್ಯತೆಯನ್ನು ಪರೀಕ್ಷಿಸುವ, ಕೊನಗೆ ಶರಣರ ಮಾರ್ಗವು ಕೇವಲ ಆಧ್ಯಾತ್ಮಿಕವೆ, ಸಮಾಜಕಾರ್ಯದ್ದು ಕೇವಲ ಲೌಕಿಕವೆ ಎಂಬುದನ್ನು ತಾಳೆ ನೋಡುವ ಪ್ರಯತ್ನವು ಇಲ್ಲಿ ನಡೆದಿದೆ. ಇಂಥ ಪರೀಕ್ಷಣದಿಂದ  ಲೋಕದ ಲೇಸಿನ ಮೌಲ್ಯಮಾಪನವು ಸಾಧ್ಯವಾಗುತ್ತದೆ ಎಂಬುದು ನಮ್ಮ ಆಶಯ.

            ಇಪ್ಪತ್ತನೆಯ ಶತಮಾನದಲ್ಲಿ ಜಯಪ್ರಕಾಶ ನಾರಾಯಣರು ಗಾಂಧೀಯ ಮಾರ್ಗ ಮತ್ತು ವೃತ್ತೀಯ ಸಮಾಜಕಾರ್ಯವನ್ನು ಒಂದುಗೂಡಿಸುವ ಪ್ರಯತ್ನ ಮಾಡಿದರು. ಇಂದು ನಾವು ಇನ್ನೊಂದು ಆಯಾಮವನ್ನು ಕೈಗೆತ್ತಿಕೊಂಡು ಭಕ್ತಿಮಾರ್ಗ ಮತ್ತು ಆಧುನಿಕ ಸಮಾಜಕಾರ್ಯವನ್ನು ಹತ್ತಿರ ತಂದು ನಮ್ಮ ಪ್ರಾಚ್ಯ ಸಂಸ್ಕೃತಿಗೆ ಹೊಂದುವ ರೀತಿಯಲ್ಲಿ, ಪ್ರಜಾಪ್ರಭುತ್ವಾತ್ಮಕ ಸಮಾಜವಾದದ ಸೀಮೆಯನ್ನು ದಾಟಿ, ಆಧುನಿಕ ದಿಗ್ಬ್ರಾಂತ ಸಮಾಜದ ಸವಾಲುಗಳನ್ನು ಸಮರ್ಥವಾಗಿ ಇದುರಿಸುವ ಸೂಕ್ತ ಮಾರ್ಗವನ್ನು ಕಂಡರಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ವಿಚಾರ ಸಂಕಿರಣವು ಇದಕ್ಕೆ ನಾಂದಿ ಹಾಡಬೇಕೆಂಬುದು ನಮ್ಮ ಹಂಬಲ.

 

ಹಿನ್ನೆಲೆ

            ಹನ್ನೆರಡನೆಯ ಶತಮಾನದ ಕರ್ನಾಟಕದ ಶಿವಶರಣರು ಪರಂಪರೆಯ ಗಾಢಾಂಧಕಾರದಲ್ಲಿಯೇ ದ್ವೈತಾದ್ವೈತದ ಸಿದ್ಧಾಂತದ ಮೂಲಕ ಒಂದು ಪ್ರಕಾಶಮಾನ ಬೆಳಕನ್ನು ಕಂಡುಕೊಂಡರು. ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ಮಾತಿನಲ್ಲಿ, ತಮಂಧ ಘನವಾದಂದಿನಾವರಣಗಳ ತುಂಬ ಕಿರಣ ಸಂಚಾರ. ಹೊತ್ತಿ ಕಲ್ಯಾಣವೆನ್ನುವ ಪ್ರಣತಿ ತೊಳಗಿ ಬೆಳಗಿತ್ತು ಶಿವನ ಪ್ರತಾಪ... ಅದು ಸಕಲ ಜೀವಾತ್ಮರ ಲೇಸು. ಇದು ಮಾನವ ಕುಲದ ಗಡಿಯನ್ನೂ ಒಳಗೊಂಡಂತೆ ಅದರಾಚೆಗಿನ ಜೀವರಾಶಿಗಳಿಗೂ ವಿಸ್ತಾರಗೊಂಡ ಸಂಗತಿಯಾಗಿತ್ತು. ಪ್ರಾಚೀನಕಾಲದಿಂದಲೂ ಅಂತರ ಗಂಗೆಯಾಗಿ ಮಾನವ ಮತ್ತು ಇತರ ಜೀವರಾಶಿಗಳಿಗೆ ಕಲ್ಯಾಣಕಾರಕವಾದ ಚೇತನವು ಹರಿದು ಬರುತ್ತಿದ್ದುದನ್ನು ಶರಣರು (ಆನಂತರ ದಾಸರು) ತಮ್ಮ ಒಳಗಣ್ಣಿನಿಂದ ಕಂಡುಕೊಂಡರು. ಇದು ಸಾಧ್ಯವಾದದ್ದು ಚೇತನಕ್ಕೆ ಮುಸುಕಿದ್ದ ಪರದೆಯನ್ನು ಸರಿಸಿ, ಅದರ ನಿಜದ ನೆಲೆಯನ್ನು ಕಂಡು ಗುರುತಿಸುವ ಶಕ್ತಿಯನ್ನು ಅವರು ಗಳಿಸಿ, ಬೆಳಸಿಕೊಂಡದ್ದರಿಂದ, ಕಷ್ಟ-ಸಂಕಷ್ಟಗಳನ್ನು ಕ್ಲೇಶ-ಕೋಟಲೆಗಳನ್ನು ಇದಿರಿಸುವ ಅಳವನ್ನು ಸ್ಥೈರ್ಯವನ್ನು ಗಳಿಸಿಕೊಂಡಿದ್ದರಿಂದ. ಮೇಲೆ ಸೂಚಿಸಿದ ಹಾಗೆ, ಅವರ ದೃಷ್ಟಿಯು ಕೇವಲ ಮನುಷ್ಯ ಕೇಂದ್ರಿತವಾಗಿರದೆ, ಇಡೀ ವಿಶ್ವ-ವ್ಯಾಪ್ತಿಯನ್ನು ಹೊಂದಿತ್ತು; ಜಡ ಚೇತನಗಳೆರಡನ್ನೂ ಒಳಗೊಂಡದ್ದಾಗಿತ್ತು. ಜಡದಲ್ಲೂ ಚೇತನವನ್ನು, ಶಬ್ದದೊಳಗೆ ನಿಶ್ಯಬ್ದವನ್ನು ಗುರುತಿಸುವ ಸಾಮರ್ಥ್ಯ ಅವರದಾಗಿತ್ತು. ಅವರ ಆಶಯವು ಸಕಲ ಜೀವಾತ್ಮರ ಲೇಸನ್ನು ಬಯಸುವುದೇ ಆಗಿತ್ತು; ಆಶಯವು ಕೇವಲ ಆಶಯವಾಗಿರದೆ ಅದು ಕಾರ್ಯಗತವಾಗಲು ತಮ್ಮನ್ನು ತೊಡಗಿಸಿಕೊಂಡಿದ್ದರು. ಯಾಕೆಂದೆರೆ, ಅಂತರಂಗದಲ್ಲಿ ಅರಿವಾದಡೇನು ಬಹಿರಂಗದಲ್ಲಿ ಕ್ರೀಯಾಗದನ್ನಕ್ಕ ಎಂಬುದು ಅವರ ದೃಢನಿಲುವು. ಅವರ ದಾರ್ಶನಿಕ ದೃಷ್ಟಿಗೆ ಲೋಕದ ಲೇಸು  ಬಹುಶಃ ಸುಸ್ಪಷ್ಟವಾಗಿ ಕಾಣಿಸುತ್ತಿತ್ತು. ವೈದಿಕರ ಕರ್ಮಕಾಂಡವನ್ನು ದೂರವಿರಿಸಿ, ಅವರ ಜ್ಞಾನಕಾಂಡದ ತಿರುಳಿನಲ್ಲಿ ತಮ್ಮ ನಿಲುವನ್ನು ಶರಣರು ಕಂಡರಿಸಿಕೊಂಡರು, ಎಂದು ತೋರುತ್ತದೆ.

            ಆದರೆ, ನಮಗೆ ಶರಣರ ಪರಿಕಲ್ಪನೆಯ ಲೇಸು ಯಾವುದು; ಅದರ ವೈಲಕ್ಷಣ್ಯಗಳಾವುವು; ಅದನ್ನು ಅಳೆಯುವ ಮಾಪಕಗಳಾವುವು; ಲೇಸನ್ನು ಸಾಧಿಸುವ ಮಾರ್ಗೋಪಾಯಗಳೇನು; ಮಾಪಕಗಳನ್ನು, ಮಾರ್ಗೋಪಾಯಗಳನ್ನು ರೂಪಿಸುವ, ಅವುಗಳ ಕ್ಷಮತೆಯನ್ನು ಪರೀಕ್ಷಿಸುವ, ಅವುಗಳನ್ನು ಪ್ರಯೋಗಿಸುವ ಕ್ರಮಗಳಾವುವು? ಇಂತಹ ಹಲವಾರು ಪ್ರಶ್ನೆಗಳು ಇದಿರಾಗುತ್ತವೆ. ಇವುಗಳಿಗೆ ಸೂಕ್ತವಾದ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನವೇ ವಿಚಾರ ಸಂಕಿರಣ. ವಿಶ್ಲೇಷಣೆಗೆ ಗುರುತಿಸುವ ಇಲ್ಲಿನ ವಿಷಯಗಳು ಕೇವಲ ಪ್ರಾತಿನಿಧಿಕ.

            ಇವುಗಳ ಇಂದಿನ ವಿಶ್ಲೇಷಣೆಯಿಂದಲೇ ಲೋಕದ ಲೇಸಿನ ರೂಪುರೇಖೆಗಳನ್ನು ಅಥವಾ ಅದರ ಸ್ವರೂಪವನ್ನು ನಿಶ್ಚಿತವಾಗಿ ಗುರುತಿಸುತ್ತೇವೆ; ಲೇಸನ್ನು ಅಳೆಯುವ ಮಾಪಕಗಳನ್ನು, ಲೇಸನ್ನು ಸಾಧಿಸುವ ಮಾರ್ಗೋಪಾಯಗಳನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ಭರವಸೆಯೇನೂ ಇಲ್ಲ. ಆದರೂ ನಾವು ಮುಖವಾಗಿ ಪ್ರಯತ್ನಶೀಲರಾಗುವ ಅನಿವಾರ್ಯತೆಯು ಬಂದೊದಗಿದೆ. ಅನಿವಾರ್ಯತೆಯಾದರೊ ಇಂದಿನ ದಿಗ್ಭ್ರಾಂತ ಸ್ಥಿತಿಯ ನಿರ್ಮಾಣದಿಂದ ಉದ್ಭವವಾಗಿದೆ.

 

ದಿಗ್ಭ್ರಾಂತ ಸ್ಥಿತಿ

            ಮಾನವ ಜಗತ್ತು, ಅಂತೆಯೇ ಭೌತ ಜಗತ್ತು ತೀವ್ರಗತಿಯಲ್ಲಿ ಬದಲಾವಣೆ ಆಗುತ್ತಲಿವೆ. ಗತಿಯ ಪರಿಣಾಮವಾಗಿ ಎಲ್ಲಾ ಕಡೆ ಗೊಂದಲ, ಅಲ್ಲೋಲಕಲ್ಲೋಲಗಳು ವ್ಯಾಪಿಸಿವೆ. ಜೀವನದ ಯಾವ ಕ್ಷೇತ್ರದಲ್ಲೂ ಸಮಾಧಾನ, ತೃಪ್ತಿ, ಸಂತುಷ್ಟಿ ಕಾಣುತ್ತಲಿಲ್ಲ. ರಾಜಕೀಯ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ನ್ಯಾಯಿಕ ಒಟ್ಟಿನಲ್ಲಿ ಇಡೀ ಸಾಮಾಜಿಕ ವ್ಯವಸ್ಥೆಯ ಯಾವ ವಲಯದಲ್ಲೂ ನಿರ್ದಿಷ್ಟವಾದ, ಇತ್ಯಾತ್ಮಕವಾದ ಗುರಿಗಳು ಸ್ಪಷ್ಟವಾಗಿ ಕಾಣಿಸುತ್ತಲಿಲ್ಲ. ಗುರಿಗಳೇನಾದರೂ ಅಸ್ಪಷ್ಟವಾಗಿ ದೂರದೂರದಲ್ಲಿ ಕಂಡರೂ ಅವುಗಳನ್ನು ತಲುಪಲು ಬೇಕಾದ ಸಾಧನಗಳು, ಅದರಲ್ಲೂ ಸಮರ್ಥವಾದ ಸಾಧನಗಳು, ದೊರಕುತ್ತಲಿಲ್ಲ. ವ್ಯಕ್ತಿಗಳು, ಗುಂಪುಗಳು, ಸಮುದಾಯಗಳು, ಸಂಘ-ಸಂಘಟನೆಗಳು ಅವ್ಯವಸ್ಥೆಯ ಆಗರಗಳಾಗಿವೆ. ಆರೋಗ್ಯಕರವಾದ ಮನೋದೃಷ್ಟಿಯಿಲ್ಲದ ಮನುಷ್ಯನು ದಿಗ್ಭ್ರಾಂತಿಗೆ ಒಳಗಾಗಿದ್ದಾನೆ.

            ಡಾ.ಡಿ.ವಿ.ಗುಂಡಪ್ಪನವರ ಮಾತುಗಳು ಇಲ್ಲಿ ನೆನಪಾಗುತ್ತವೆ. ಅವರು ಮಂಕುತಿಮ್ಮನ ಮೂಲಕ ಇಂದಿನ ಸ್ಥಿತಿಯನ್ನು ಹಲವಾರು ದಶಕಗಳ ಹಿಂದೆಯೇ ಹೇಳಿದ್ದಾರೆ ಹೀಗೆ:

ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು|

ತೊಂದೆ ಧಾನ್ಯವನ್ನುಣ್ಣುತೊಂದೆ ನೀರ್ಗುಡಿದು ||

ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು |

ಬಂದುದೀ ವೈಷಮ್ಯ?....||

 

ಹಳೆಯ ಭಕ್ತಿ ಶ್ರದ್ಧೆಯಳಿಸಿ ಹೋಗಿವೆ ಮಾಸಿ|

ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||

ಪಳಗಿದ್ದ ಮನೆಬಿದ್ದ ಕುಂಟ ಕುರುಡನ ತೆರದಿ

ತಳಮಳಿಸುತಲಿದೆ ಲೋಕ....||

 

ತಳಮಳವದೇನಿಳೆಗೆ? ದೇವದನುಜರ್ ಮಥಿಸೆ |

ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ ?||

ಹಾಳಹಳವ ಕುಡಿವ ಗಿರಿಶನಿದ್ದಿರ್ದೊಡೀ |

ಕಳವಳದೇತಕೆಲೊ...||

            ಇಲ್ಲಿ ಡಿವಿಜಿಯವರ ಪೀಠಿಕೆಯ ಸುಧೆಯೇ ಗಿರಿಶನ ಭಕ್ತರಾದ ಶರಣರು ಬಯಸಿದ ಲೇಸು ಆಗಿದ್ದಿರಬಹುದೆ? ಎಂಬ ನಿರೀಕ್ಷೆ ನಮ್ಮದೆಂದುಕೊಳ್ಳೋಣ.

            ಆದರೆ ಮುನ್ನವೇ ಸೂಚಿಸಿದಂತೆ ಹಾಳ ಹಳದ ಕಳವಳವು ಒಂದು ಕ್ಷೇತ್ರಕ್ಕೇ ಸೀಮಿತವಾಗಿಲ್ಲವೆಂಬುದು ನಮಗೆ ಅನುಭವಪೂರಿತ ಸಂಗತಿಯೇ. ಭೌತಜಗತ್ತನ್ನು ಗಮನಿಸಿದರೆ ದೊಡ್ಡ ಪ್ರಮಾಣದಲ್ಲಿ ಹವಾಗುಣ ವೈಪರೀತ್ಯ ಕಂಡುಬರುತ್ತದೆ. ಸುನಾಮಿಗಳು, ಭೂಕಂಪಗಳು ಉಲ್ಕಾಪಾತಗಳು, ಏರುತ್ತಿರುವ ತಾಪ, ವ್ಯಾಪಕವಾಗುತ್ತಿರುವ ಅತಿವೃಷ್ಟಿ-ಅನಾವೃಷ್ಟಿಗಳು, ಬತ್ತುತ್ತಿರುವ ಅಂತರ್ಜಲ, ಹರಡುತ್ತಿರುವ ವಿಷವಾಯು, ಅಳಿಯುತ್ತಲಿರುವ ಸಸ್ಯ ಪ್ರಾಣಿ ಸಂಪತ್ತು, ಎಲ್ಲವುಗಳಿಂದ ಮಾನವನ ಮೇಲಾಗುತ್ತಿರುವ ದುಷ್ಪರಿಣಾಮಗಳು, ಹೀಗೆಯೇ ಪಟ್ಟಿ ಬೆಳೆಯುತ್ತದೆ.

            ಮನುಷ್ಯ ಲೋಕಕ್ಕೇ ನಮ್ಮ ದೃಷ್ಟಿಯನ್ನು ಸೀಮಿತಗೊಳಿಸಿದರೆ, ಮಹತ್ವಾಕಾಂಕ್ಷೆಯಿಂದ ಭೌತಜಗತ್ತಿನ ಮೇಲೆ ಅವಿವೇಕಿಯಾಗಿ ಮನುಷ್ಯನು ದಾಳಿ ಮಾಡುತ್ತಿರುವುದು ಸ್ಫುಟವಾಗುತ್ತದೆ. ಜಡವಸ್ತು ನಿಕರ, ಸಸ್ಯಕಾಶಿ ಮತ್ತು ಪ್ರಾಣಿ-ಪಕ್ಷಿಸಂಕುಲಗಳು ತನಗಾಗಿಯೇ ಸೃಷ್ಟಿಯಾದವುಗಳು, ತಾನು ಅವೆಲ್ಲವುಗಳ ಒಡೆಯ, ಅವುಗಳನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂಬ ದುರಹಂಕಾರದಿಂದ ನಡೆದುಕೊಳ್ಳುತ್ತಿರುವುದರಿಂದ ಆಗುತ್ತಿರುವ ದುಷ್ಪರಿಣಾಮಗಳು ಸುಸ್ಪಷ್ಟ. ಸಂದರ್ಭದಲ್ಲಿ ಶ್ರೇಷ್ಠ ಸಮಾಜ ವಿಜ್ಞಾನಿ ಪ್ರೊ.ರಾಧಾಕಮಲ ಮುಖರ್ಜಿಯವರ ಚಿಂತನೆಯನ್ನು ನಾವು ಗಮನಿಸಲೇಬೇಕಾಗಿದೆ. ಅವರ ಪ್ರಕಾರ ಪ್ರಕೃತಿಯನ್ನು ನಿಯಂತ್ರಿಸಲು ಪ್ರಕೃತಿಯನ್ನು ಅನುಸರಿಸುವುದು ಮನುಷ್ಯನಿಗೆ ಆವಶ್ಯಕ. ಯಾಕೆಂದರೆ, ಆಕೆಗೆ ಆಕೆಯದೇ ಆದ ವಿವೇಕವಿದೆ. ಆನಂದ ತುಂದಿಲವಾಗಿರುವ ಪ್ರಕೃತಿಯ ಸಮತೋಲನ ಮತ್ತು ಲಯವನ್ನು ಉಗ್ರವಾಗಿ ಕದಡುವುದು ಮನುಷ್ಯನಿಗೆ ವಿವೇಕವಲ್ಲದ ಕೃತಿ. ಹಾಗೇನಾದರೂ ಕದಡಿದರೆ, ಬಹು ಶೀಘ್ರವಾಗಿ ಪ್ರತೀಕಾರದ ಬುತ್ತಿ ಬಿಚ್ಚಿಕೊಳ್ಳುತ್ತದೆ. ಇಷ್ಟೇ ಅಲ್ಲದೆ, ಮನುಷ್ಯ ಮನುಷ್ಯನನ್ನೇ ಶೋಷಿಸುತ್ತಿದ್ದಾನೆ. ಇತರರ ಮೇಲೆ ಪ್ರಭುತ್ವವನ್ನು ಸ್ಥಾಪಿಸಿ, ಅವರನ್ನು ದಾಸರನ್ನಾಗಿಸಿಕೊಳ್ಳುವ ಪ್ರವೃತ್ತಿಯು ಪ್ರಾಚೀನ ಕಾಲದಿಂದ ನಡೆದುಬಂದಿದ್ದರೂ ಇಂದು ಅದು ಹದ್ದು ಮೀರಿದೆ. ಇದರ ಸಂಚಿತ ಪರಿಣಾಮವಾಗಿ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಎಲ್ಲ ದಿಕ್ಕುಗಳಲ್ಲೂ ಯುದ್ಧಭೀತಿಯ ಕಾರ್ಮೋಡ ಕವಿದಿದೆ. ಮೂರನೆಯ ಜಾಗತಿಕ ಸಮರದ ಮುನ್ಸೂಚನೆಯೇ ಇಂದಿನೀ ಅರ್ಥೋ-ರಾಜಕೀಯ ಉಲ್ಬಣ ಸ್ಥಿತಿಯಾಗಿದೆ. ರಾಜಕೀಯ ತತ್ತ್ವಾದರ್ಶಗಳ, ಆರ್ಥಿಕ ಸಿದ್ಧಾಂತಗಳ, ಧಾರ್ಮಿಕ ಭಾವನೆಗಳ ನೆಪದಲ್ಲಿ ಜನರು ಹೋರಾಟದ ಬಣಗಳಾಗಿ ಗಟ್ಟಿಗೊಂಡು ತಮ್ಮ ತಮ್ಮ ಮೇಲ್ಮೆಯನ್ನು ಸಾಬೀತುಗೊಳಿಸಲು ಬಲಪ್ರಯೋಗ ಮಾಡಲು ತವಕಿಸುತ್ತಲ್ಲಿದ್ಧಾರೆ; ಅನೇಕಕಡೆ, ವಿವಿಧ ಸಂದರ್ಭಗಳಲ್ಲಿ ನಿಟ್ಟಿನಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದಾಗಿ ಜಗತ್ತಿನ ಎಲ್ಲ ಕಡೆಯೂ ಅಶಾಂತಿಯ, ಉಲ್ಬಣದ ಸ್ಥಿತಿಯೇ ಕಂಡುಬರುತ್ತಲಿದೆ. ಹೀಗಾಗಿ ಲೋಕದ ಲೇಸು ಎಲ್ಲೂ ಕಾಣುತ್ತಲಿಲ್ಲ. ಇದನ್ನು ಸಾಧಿಸುವಲ್ಲಿ ಅಧ್ಯಾತ್ಮ ಮತ್ತು ಸಮಾಜಕಾರ್ಯ ನೆರವಿಗೆ ಬರಲು ಸಾಧ್ಯವೇ? ಎಂಬ ಚಿಂತನೆಯು ಸುಳಿದಾಡುತ್ತಲಿದೆ. ಹೀಗಾಗಿಯೇ ಚಿಂತನೆಯ ಪ್ರಯತ್ನ.

 

ಲೇಸಿನ ವಿಚಾರ

            ಲೋಕದ ಲೇಸಿನ ಹುಡುಕಾಟದಲ್ಲಿ ಜಗತ್ತು ಪುರಾತನ ಕಾಲದಿಂದಲೂ ತೊಡಗಿಕೊಂಡಿದೆ ನಿಜ. ಇಜಿಪ್ಟಿನಲ್ಲಿ, ಗ್ರೀಸಿನಲ್ಲಿ, ಭಾರತದಲ್ಲಿ, ಚೀನಾದಲ್ಲಿ, ಮೆಕ್ಸಿಕೋದಲ್ಲಿ, ಮತ್ತೆ ಇತರೆ ಅನೇಕ ಕಡೆಗಳಲ್ಲಿ ಪುರಾತನರು ಶೋಧಕಾರ್ಯದಲ್ಲಿ ತೊಡಗಿದ್ದುದನ್ನು ಇತಿಹಾಸ ಹೇಳುತ್ತದೆ. ಸಂತತಿಯ ರಸಗಟ್ಟಿ ಎಂದೆನಬಹುದಾದದ್ದು ಭಾರತದ ಶರಣ-ದಾಸ ಗಡಣ ಎಂದೆನಿಸುತ್ತದೆ. ಸಮಾಜದ ಸಂರಚನೆಯ ಜೀವಜೀವಾಳವಾದ ಸಮಾಜಕಾರ್ಯವೂ ವೈವಿಧ್ಯಮಯವಾದ ಚಿಂತನೆಯ ಪ್ರವಾಹಕ್ಕೆ ಸಿಲಿಕಿಕೊಂಡು ಔದ್ಯೋಗಿಕಕ್ರಾಂತಿಯ ಮನ್ವಂತರದಲ್ಲಿ ವೃತ್ತೀಯ ಪೋಷಾಕನ್ನು ಧರಿಸಿಕೊಂಡಿದೆ.

            ಶ್ರೀ ಆರ್.ಜಿ. ಹಳ್ಳಿ ನಾಗರಾಜ ಅವರು ಡಾ..ರಾ. ಬೇಂದ್ರೆಯವರ ಸಾಲುಗಳನ್ನು ಉಲ್ಲೇಖಿಸಿ, ಲೇಸಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದುದ್ದನ್ನು ಸಂದರ್ಭದಲ್ಲಿ ನಾವು ಗಮನಿಸಬಹುದು.

ಲೇಸೆ ಕೇಳಿಸಲು ಕಿವಿಗೆ, ನಾಲಗೆಗೆ ಲೇಸೆ ನುಡಿದು ಬರಲಿ

ಲೇಸೇ ಕಾಣಿಸಲಿ ಕಣ್ಗೆ, ಜಗದೊಳಗೆ ಲೇಸೆ ಹಬ್ಬುತ್ತಿರಲಿ

ಲೇಸೆ ಕೈಗಳಿಂದಾಗುತಿರಲಿ, ತಾ ಬರಲಿ ಲೇಸೆ ನಡೆದು,

ಲೇಸನುಂಡು, ಲೇಸುಸಿರಿ, ಇಲ್ಲಿರಲಿ ಲೇಸೆ ಮೈಯಪಡೆದು.

            ಕೇಳುವ ಮಾತು, ನುಡಿವ ನಾಲಗೆ, ಕಾಣುವ ನೋಟ-ಎಲ್ಲವೂ ಮಧುರವಾಗಿರಬೇಕು ಎಂಬುದೊಂದು ಅಪೇಕ್ಷೆ ಮನುಷ್ಯನಲ್ಲಿ ಸದಾ ಮಿಡಿಯುತ್ತಿರುತದೆ. ಹಿತವಾದದ್ದನ್ನು ಮನದೊಳಗೆ ತೆಗೆದುಕೊಂಡು ಪ್ರೀತಿ ವಿಶ್ವಾಸದಿಂದ ಅಪ್ಪುವಂತೆ, ಅಪ್ರಿಯ ಹಾಗೂ ಕಹಿಯನ್ನು ನಮ್ಮೊಳಗೆ ಪ್ರವೇಶಿಸಲು ಬಿಡದ ಇನ್ನೊಂದು ಮನಸ್ಸು ಇರುತ್ತದೆ. ಮನುಷ್ಯ ಸ್ವಭಾವವೇ ಹಾಗೆ. ತನಗೆ, ತನ್ನ ಕುಟುಂಬಕ್ಕೆ ಸದಾ ಒಳ್ಳೆಯದಾಗುತ್ತಿರಲಿ ಎಂದೇ ಲೇಸು ಬಯಸಿಕೊಳ್ಳುವವ ಪರಚಿಂತೆ, ಪರಹಿತವನ್ನು ದೂರವೇ ಇಟ್ಟಿರುತ್ತಾನೆ. ಲೇಸೆ ಕೇಳಿಸಲು ಕಿವಿಗೆ, ನಾಲಗೆಗೆ ಲೇಸೆ ನುಡಿದು ಬರಲಿ ಎಂಬ ಕವಿ ಮಾತು ಸದಾಶಯದ ಸಿಂಚನವೆಂಬುದು ನಿಜ. ಸಂದರ್ಭದಲ್ಲಿ ಗಾಂಧೀಜಿಯವರ ಬಳಿ ಇದ್ದ ಮೂರು ಮಂಗಗಳ ಚಿತ್ರ ಕಣ್ಣೆದುರು ಬರುತ್ತದೆ. ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ನುಡಿಯಬೇಡ; ಕವಿಯ ಅರ್ಥ, ಗಾಂಧಿ ಸಾಂಕೇತಿಕರಿಸಿದ ಮಂಗಗಳ ಕತೆಗೂ ಒಂದೇ ಅರ್ಥ-ವ್ಯಾಖ್ಯೆ. ಯಾವುದೇ ಕವಿ, ಚಿಂತಕ, ದಾರ್ಶನಿಕ, ಸದಾ ಜಗದ ಒಳಿತ್ತನ್ನೇ ಅಪೇಕ್ಷಿಸುತ್ತಾನೆ.

            ಆದರೂ ನಮ್ಮ ಪ್ರಶ್ನೆ ಲೇಸು ಅಂದರೆ ಎಂಬುದು ಮನದಲ್ಲಿ ಉಳಿದೇ ಉಳಿಯುತ್ತದೆ. ಆದುದರಿಂದಲೇ ವಿಚಾರ ಸಂಕಿರಣದಲ್ಲಿ ಲೋಕದ ಲೇಸಿನ ಸ್ವರೂಪವನ್ನು, ಹಾರದೊಳಗಣ ದಾರದಂತೆ, ವಿಷಯಗಳ ಮಂಡನೆಯ ಸಂದರ್ಭದಲ್ಲಿ, ಪರಿಚಯಿಸುತ್ತ ಅದರ ಮೌಲ್ಯಮಾಪನ ಮಾಡಲು ಬುಧಜನರು ಪ್ರಯತ್ನಿಸುತ್ತಾರೆ ಎಂಬುದು ನಮ್ಮ ಭರವಸೆ. ಸಂದರ್ಭದಲ್ಲಿ ನಿಮ್ಮೆಲ್ಲರ ಒಳಗಿರುವಂತೆ ನನ್ನೊಳಗೂ ಲೇಸಿನ ಬಗ್ಗೆ ಅನೇಕ ಪ್ರಶ್ನೆಗಳು ಇದಿರಾಗುತ್ತಲಿವೆ.

            ಲೇಸು ಅಂದರೆ ಒಳ್ಳೆಯದು, ಹಿತವಾದದ್ದು ಎಂಬಿತ್ಯಾದಿಯಾಗಿ ನಾವು ತಿಳಿದುಕೊಳ್ಳುತ್ತೇವೆ. ಲೋಕದಲ್ಲಿ ಎಲ್ಲರೂ ಬಯಸುವುದು ಒಳ್ಳೆಯದನ್ನು, ಎಲ್ಲರಿಗೂ ಬೇಕಾದದ್ದು ಒಳ್ಳೆಯ ನಡವಳಿಕೆ-ಅಲ್ಲವೇ? ಒಳ್ಳೆಯದು ಅಂದರೆ ಏನು? ಯಾವುದು ಒಳ್ಳೆಯದು? ನಮಗೆ ಯಾವಯಾವುದು ಸವಿಯೆಂದೂ ಸೊಗಸೆಂದೂ ತೋರುತ್ತದೆಯೋ ಅದೆಲ್ಲ ಒಳ್ಳೆಯದೇ?... ಹೀಗೆ ಡಿ.ವಿ.ಜಿ. ಯವರು ಒಳ್ಳೆಯದರ ವ್ಯಾಖ್ಯಾನ ಮಾಡುತ್ತಾ ಹೆಂಡ ಸೇವನೆಯಂಥ ಉದಾಹರಣೆಯನ್ನು ಕೊಟ್ಟು ಅದರ ಮಗ್ಗಲಿಗಿರುವ ಒಳಿತಲ್ಲದುದರ, ಕೆಡುಕಿನ ಕಡೆ ನಮ್ಮ ಗಮನವನ್ನು ಸೆಳೆಯುತ್ತಾರೆ. ಅವರು ಮುಂದುವರೆದು ಒಳ್ಳೆಯದು ಎಂಬುದರ ಸ್ವರೂಪವೆಂಥಾದ್ದು? ಎಂದು ಪ್ರಶ್ನಿಸುತ್ತಾ, ಒಳ್ಳೆಯದು ಎಂಬುದು ಕನ್ನಡ ಮಾತು, ಅದರ ಬೇರು ಒಳ್, ಒಳ್ ಎಂದರೆ ಇರುವುದು ಎನ್ನುತ್ತಾ, ಮಾತಿಗೆ ಒಡಹುಟ್ಟಿನಂತೆ ಇರುವ ಕನ್ನಡ ಮಾತು ಉಳ್ ಎಂಬುದು. ಉಳ್ ಎಂದರೂ, ಕುಂದದೆ ಇರುವುದು ಎಂದರ್ಥ, ಒಳ್ಳೆಯದು ಎಂದರೆ ಬಹುಕಾಲ ಇರುವುದು ಎಂದರ್ಥ. ಯಾವುದು ಅಳಿಯದೆ ಉಳಿದುಕೊಂಡಿರುತ್ತದೆಯೊ ಅದೇ ಉಳ್; ಅದೇ ಒಳ್ಳೆಯದು, ಸಂಸ್ಕೃತದಲ್ಲಿಯೂ ಹಾಗೆಯೇ- ಸತ್ ಎಂಬ ಪದ. ಸತ್ ಎಂದರೆ ಒಳ್ಳೆಯದು ಎಂದೂ ಶಾಶ್ವತವಾದದ್ದು ಎಂದೂ ಅರ್ಥ. ಎಂದು ಹೇಳುತ್ತಾರೆ. ಅಂದರೆ, ಲೇಸು ಎಂಬುದನ್ನು ಒಳ್ಳೆಯದು, ಇರುವುದು, ಶಾಶ್ವತವಾದದ್ದು, ಕಲ್ಯಾಣಕಾರಕವಾದದ್ದು, ಎಂದೆಲ್ಲಾ ನಾವು ತಿಳಿದುಕೊಳ್ಳಬೇಕಾಗುತ್ತದೆ. ಯಾವುದು ಶಾಶ್ವತವೊ ಅದು ಕೆಟ್ಟದ್ದು ಅಲ್ಲ, ಅಹಿತಕರವಾದದ್ದು ಅಲ್ಲ, ಹಾನಿಕರವಂತೂ ಅಲ್ಲವೇ ಅಲ್ಲ ಎಂದು ನಾವು ದೃಢವಾಗಿ ನಂಬಬೇಕಾಗುತ್ತದೆ. ಅದೇ ಸತ್ಯ, ಸುಂದರ ಮತ್ತು ಶಿವ.

            ವಾದ ಸರಣಿಯನ್ನು ಮುಂದುವರಿಸಿ, ಲೇಸಿನ ಬಗ್ಗೆ ಇನ್ನಷ್ಟು ಚಿಂತನೆ ಮಾಡಬೇಕೆನ್ನಿಸುತ್ತದೆ. ಮನುಷ್ಯ ಲೋಕಕ್ಕೆ ಸೀಮಿತವಾದ ಪುರುಷಾರ್ಥಗಳನ್ನು ಮೀರಿ ಇಡೀ ವಿಶ್ವಕ್ಕೇ ಶಾಶ್ವತವೂ, ಹಿತಕರವಾದದ್ದೂ ಆಗಿರುವಂಥಾದ್ದೇ ಲೇಸು ಎಂದು ಭಾವಿಸಬೇಕಾಗುತ್ತದೆ. ಇದನ್ನು ಸಾಪೇಕ್ಷ (relative) ಎಂದು ತಿಳಿಯದೆ, ಇದು ಕೇವಲವಾದದ್ದು (absolute) ಎಂದು ತಿಳಿಯುವುದು ಉಚಿತವೆನ್ನಿಸುತ್ತದೆ. ಆದರೂ ಮತ್ತಷ್ಟು ಚಿಂತನೆಯು ಬೇಕೆನ್ನಿಸುತ್ತದೆ, ಇದನ್ನು ಚಿಂತಕರು ಮಾಡುತ್ತಾರೆ ಎಂದು ಭಾವಿಸುತ್ತೇನೆ.

 

ಲೇಸಿನ ಸಾಧನ ಮಾರ್ಗಗಳು:

1. ಭಕ್ತಿಯೋಗ

            ಲೇಸಿನ ಸಂವೈಧಾನಿಕ ಘಟಕಗಳಾವುವು? ಶರಣ-ದಾಸರ ಚಿಂತನೆಗಳಲ್ಲಿ, ಸಮಾಜಕಾರ್ಯದ ಹರವಿನಲ್ಲಿ ಅವನ್ನು ನಾವು ಗುರುತಿಸಲು ಸಾಧ್ಯವೆ? ಲೇಸು ಒಂದು ಗುರಿ ಎಂದು ನಾವು ನಿಶ್ಚಯಿಸಿದರೆ, ಅದನ್ನು ಸಾಧಿಸಲು ಬೇಕಾದ ಸಾಧನಗಳು ಯಾವುವು ಮತ್ತು ಅವು ಹೇಗಿರಬೇಕು? ಯಾವ ಸಾಧನವಾದರೂ ಆದೀತೆ? ಗುರಿಗೆ ತಗುವ ಸಾಧನಗಳು ಇರಬೇಕೆಲ್ಲವೆ? ಇವುಗಳೊಳಗೆ ಸಂಗತ, ಕ್ರಿಯಾತ್ಮಕ ಸಂಬಂಧ ಇರುವುದು ಅಗತ್ಯವಲ್ಲವೆ? ಲೋಕದ ಲೇಸು ಕೇವಲ ಲೌಕಿಕವೇ? ಪಾರಲೌಕಿಕವೂ ಹೌದೆ? ನಮ್ಮ ಸಂಸ್ಕೃತಿಯ ಅಧ್ಯಾತ್ಮ ಕ್ಷೇತ್ರದಲ್ಲಿ ಮೂಡಿಬಂದ ಜೀವಿಯ ಲೌಕಿಕ ಸಾರ್ಥಕತೆಯು ಸಾಧ್ಯವಾಗುವುದು ಪಾರಲೌಕಿಕದೊಡನೆ ತಾದಾತ್ಮ್ಯವನ್ನು ಹೊಂದುವುದರಿಂದ ಎಂಬ ನಂಬುಗೆಯು ಮೂಡಿಬಂದು ಅದು ಯೋಗ ಪದ್ಧತಿಯಾಗಿ ಅರಳಿತು.

            ಯೋಗವು ಕರ್ಮಯೋಗ, ಜ್ಞಾನಯೋಗ, ರಾಜಯೋಗ, ತಂತ್ರಯೋಗ, ಭಕ್ತಿಯೋಗ ಮುಂತಾದ ಶಾಖೆಗಳಾಗಿ ಬಹುಕಾಲದಿಂದಲೂ ಆಚರಣೆಯಲ್ಲಿರುವುದು ವಿದಿತವಾದ ಸಂಗತಿಯೇ. ಇದರಲ್ಲಿ ಭಕ್ತಿಯೋಗವು ಶರಣರಂಥವರ ಪಾಲಿಗೆ ವರವಾಗಿ ದೊರಕಿ, ಅದರ ಮೂಲಕ ಲೌಕಿಕ ಜೀವನವನ್ನು ಕ್ರಾಂತಗೊಳಿಸಲು ಸಾಧ್ಯವಾಯಿತು. ಇದು ಲೋಕದ ಲೇಸಿನ ಸ್ವರೂಪವನ್ನು ನಿರ್ಧರಿಸಲು, ಅದನ್ನು ಸಾಧಿಸಲು ಪ್ರಯತ್ನಶೀಲವಾಗಿರಲು ನೆರವಾಯಿತು. ಇಂದ್ರಿಯಾಸಕ್ತಿಗೆ ಒಳಪಡುವ ಲೌಕಿಕ ವಿಶೇಷವು ವಾಸ್ತವಾದದ್ದು ಮತ್ತು ಅದು ಜೀವಿಯ ಬದುಕಿಗೆ ಅಗತ್ಯವಾದುದರಿಂದ ಅದರಲ್ಲಿ ಜೀವಿಯು ಗಾಢಾಸಕ್ತಿಯನ್ನು ಹೊಂದಿರುವುದು ಸಹಜ. ಗಾಢಾಸಕ್ತಿಯನ್ನು ಇಂದ್ರಿಯಾತೀತವಾದ ಶಕ್ತಿಯ ಕಡೆ ತಿರುಗಿಸುವುದೇ ಭಕ್ತಿಯಾಗುತ್ತದೆ; ಶಕ್ತಿಯನ್ನೇ ದೇವರು ಎಂದು ಗುರುತಿಸಲಾಗುತ್ತದೆ. ಯಾವ ಪ್ರೀತಿಯನ್ನು ಮೊದಲು ವಿಷಯ ವಸ್ತುಗಳ ಮೇಲೆ ತೋರಿದ್ದೆವೊ, ಅದೇ ಪ್ರೀತಿಯನ್ನು ದೇವರಿಗೆ ಕೊಟ್ಟರೆ ಅದು ಭಕ್ತಿ ಎನಿಸುವುದು ಎಂಬ ಒಂದು ವಿವರಣೆಯನ್ನು ನಾವು ಗಮನಿಸಬಹುದು. ರಾಮಾನುಜಚಾರ್ಯರು, ಬಸವಾದಿ ಶರಣರು, ಮಧ್ವಾಚಾರ್ಯ ಮುಂತಾದ ಜ್ಞಾನಿಗಳು ದೇವರಲ್ಲಿ ಗಾಢವಾದ ಪ್ರೀತಿಯನ್ನು ಇರಿಸಿದ ಭಕ್ತನು ವಿವಿಧ ರೀತಿಯಲ್ಲಿ ತನ್ನ ಶ್ರದ್ಧೆಯನ್ನು ತೋರಿಸುತ್ತಾನೆ ಎಂಬುದನ್ನು ತಮ್ಮ ಲೌಕಿಕ ಬದುಕಿನಲ್ಲಿ ತೋರಿಸಿದ್ದಾರೆ. ಭಕ್ತಿಯೋಗವು ಲೌಕಿಕಜೀವನವನ್ನು ಅಲೌಕಿಕಗೊಳಿಸುವನಿತು ಸಮರ್ಥವಾಗಿದೆ ಎಂದು ಶರಣರು ತೋರಿಸಿದರು. ಭಾರತದ ಉದ್ದಗಲಕ್ಕೂ ಹರಡಿರುವ ಭಕ್ತ ಸಮೂಹವು ಭಕ್ತಿಯೋಗದ ಮಹತ್ವವನ್ನು ಎತ್ತಿ ಕಾಣಿಸಿದೆ. ಹಿನ್ನೆಲೆಯಲ್ಲಿ, ಲೋಕದ ಲೇಸನ್ನು ಸಾಧಿಸುವುದಕ್ಕೆ ಭಕ್ತಿಯೋಗವು ನೆರವಾಗಬಹುದೆ, ಇದು ಇಹಪರಗಳೆರಡನ್ನೂ ಬೆಸೆಯಲು ಸಾಧ್ಯವೇ, ಇತ್ಯಾದಿ ಪ್ರಶ್ನೆಗಳನ್ನು ನಾವು ಬಿಡಿಸಬೇಕಾಗಿದೆ.

 

2. ಸಮಾಜಕಾರ್ಯ

            ನಮ್ಮೀ ವಿಚಾರ ಸಂಕಿರಣದ ಸಂದರ್ಭದಲ್ಲಿ ನಾವು ಸಮಾಜಕಾರ್ಯದ ಸೈದ್ಧಾಂತಿಕ ಸೆಳಕಿನ ಕಡೆಗೆ ಗಮನ ಹರಿಸುವುದು  ಸೂಕ್ತವೆನ್ನಿಸುತ್ತದೆ. ನನ್ನೀ ಚಿಂತನೆಯು ಒಂದು ಪ್ರಮೇಯವೆಂದು ಭಾವಿಸುವುದು ಉಚಿತ. ಸಮಾಜಕಾರ್ಯವು ಮಾನವ ಸಮಾಜದ ಸಂರಚನೆಯನ್ನು ರೂಪಿಸುವಲ್ಲಿ, ಪರಿಪೋಷಿಸುವಲ್ಲಿ ಮಹತ್ವದ ಪಾತ್ರವನ್ನು ಆಡುತ್ತದೆ. ಹೀಗೆಂದರೆ ಇದು ಸಮಾಜದಿಂದ ಹೊರಗೆ ಅಸ್ತಿತ್ವ ಹೊಂದಿದೆ ಎಂದು ಅರ್ಥವಲ್ಲ. ಸಮಾಜದ ಶರೀರದ ಒಳಗಿನ ಸತ್ತ್ವವೇ ಇದು. ಒಂದು ಎಚ್ಚರಿಕೆಯ ಮಾತು. ಸಮಾಜಕಾರ್ಯ ಶಬ್ದವನ್ನು ಆಧುನಿಕ ವೃತ್ತೀಯ ಸಮಾಜಕಾರ್ಯ ಎಂಬ ಅರ್ಥದಲ್ಲಿ ಇಲ್ಲಿ ಬಳಸುತ್ತಲಿಲ್ಲ. ಸಮಾಜವು ಅಸ್ತಿತ್ವದಲ್ಲಿರುವುದು ಅದರ ಕ್ರಿಯಾತ್ಮಕತೆಯಲ್ಲಿದೆ (The Structure exists in its functioning) ಎಂಬ ಸಿದ್ಧಾಂತವನ್ನು ಗಮನದಲ್ಲಿರಿಸಿಕೊಂಡು, ಕ್ರಿಯಾತ್ಮಕತೆಯನ್ನು ಸಮಾಜದ ಸಂರಚನೆಯ ಚೌಕಟ್ಟಿನಲ್ಲಿ ಪರಿಶೀಲಿಸಬೇಕಾಗುತ್ತದೆ. ಸಂರಚನೆ ಮತ್ತು ಕ್ರಿಯಾತ್ಮಕತೆ ಎರಡೂ ಅಮೂರ್ತ ಪರಿಕಲ್ಪನೆಗಳಾದರೂ ಸಾಪೇಕ್ಷವಾಗಿ ಸಂರಚನೆಯು ಹೆಚ್ಚು ಮೂರ್ತಸ್ವರೂಪದ್ದು. ಮಾನವ ಸಂಬಂಧಗಳು ಸಂಕೀರ್ಣವಾಗಿ ಹೆಣೆದುಕೊಂಡು ಸಮಾಜವಾಗಿ ಸಂರಚನೆಗೊಂಡಿರುತ್ತದೆ. ಮಾನವ ಸಂಬಂಧಗಳು ವ್ಯಕ್ತಿ-ಸಮೂಹ-ಸಮುದಾಯ-ಸಂಘಟನೆಗಳ ನಡುವೆ ನಡೆಯುವ ಕ್ರಿಯೆ-ಪ್ರತಿಕ್ರಿಯೆ-ಪ್ರಕ್ರಿಯೆಗಳ ಮೂಲಕ ನಿರ್ಮಾಣವಾದ ಸಂಕೀರ್ಣ ವಿಶೇಷಗಳು. ಪ್ರಕ್ರಿಯೆಗಳ ಇನ್ನೊಂದು ಹೆಸರೇ ಕ್ರಿಯಾತ್ಮಕತೆ. ಸಮಾಜವು ಹೇಗೆ ಮಾನವನ ಎಲ್ಲ ವ್ಯವಹಾರಗಳನ್ನು ಒಳಗೊಂಡಿರುತ್ತದೋ ಹಾಗೆಯೇ ಎಲ್ಲ ವ್ಯವಹಾರಗಳ ಚೇತನವಾಗಿ ಕ್ರಿಯಾತ್ಮಕತೆಯು ಹರಡಿಕೊಂಡಿರುತ್ತದೆ.

            ಇದೇ ಸಂದರ್ಭದಲ್ಲಿ ನಾವು ಸಾಮಾಜಿಕ ಎಂಬ ವಿಶೇಷವನ್ನು ಗಮನಿಸಬೇಕಾಗುತ್ತದೆ. ನಾವು ಸಾಮಾನ್ಯವಾಗಿ, ಹಾಗೆಯೇ ವೈಜ್ಞಾನಿಕ  ಚಿಂತನೆಯಲ್ಲೂ, ಸಾಮಾಜಿಕ ಪರಿಕಲ್ಪನೆಯನ್ನು ಒಂದು ಪ್ರತ್ಯೇಕವಾದ ವಸ್ತುವಿಶೇಷ (Phenomenon) ಎಂದು ಭಾವಿಸಿ, ಬಳಸುತ್ತೇವೆ. ಇದನ್ನು ಆರ್ಥಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ನ್ಯಾಯಿಕ, ಇತ್ಯಾದಿ ವಿಶೇಷಗಳ ಜೊತೆಗೆ ಸೇರಿಸುವುದುಂಟು. ಆದರೆ ತೆರನ ವರ್ಗೀಕರಣ ಸಂಗತವಲ್ಲವೆನ್ನಿಸುತ್ತವೆ. ಯಾಕೆಂದರೆ, ಸಾಮಾಜಿಕ (Social) ಎಂಬುದು ಇಡೀ ಸಮಾಜದ ವ್ಯವಹಾರಕ್ಕೆ ಸಂಬಂಧಿದ್ದುದು. ಹೀಗಾಗಿ ಆರ್ಥಿಕ, ಇತ್ಯಾದಿ ವಿಶೇಷಗಳು ಸ್ವಭಾವತಃ ಸಾಮಾಜಿಕದ ಅಂಶಗಳೇ. ಇವನ್ನು ಪ್ರತ್ಯೇಕವಾಗಿ ಗುರುತಿಸಿ, ಇವುಗಳಿಗೆ ಅಸ್ಮಿತೆಯನ್ನು ಆರೋಪಿಸಿದಷ್ಟು ಸುಲಭವಾಗಿ ಸಾಮಾಜಿಕವನ್ನು ಗುರಿತಿಸಲು ಆಗದು. ಇದೇ ಉಸಿರಿನಲ್ಲಿ ನಾವು ಒಂದು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅದೆಂದರೆ, ಆರ್ಥಿಕ, ರಾಜಕೀಯ, ಇತ್ಯಾದಿಗಳು ಸಾಪೇಕ್ಷವಾಗಿ ಪ್ರತ್ಯೇಕತೆಯ ವಿಶೇಷಣಗಳನ್ನು ಪ್ರದರ್ಶಿಸಬಹುದೇ ಹೊರತು ಅವು ಸಂಪೂರ್ಣವಾದ ಸ್ವತಂತ್ರ ಘಟಕಗಳಲ್ಲ. ಯಾಕೆಂದರೆ, ರಾಜಕೀಯದಲ್ಲಿ ಆರ್ಥಿಕತೆಯೂ, ಧಾರ್ಮಿಕತೆಯೂ, ಹೀಗೆಯೇ ಇತರೆ ವಿಶೇಷಗಳೂ ಸೇರಿಕೊಂಡಿರುತ್ತವೆ. ಎಲ್ಲ ವಿಶೇಷಗಳನ್ನು ಒಳಗೊಂಡ ಅಂತರ್ವಿಷ್ಟ (Inclusiveವಿಶೇಷತೆಯೇ ಸಾಮಾಜಿಕ ಕ್ರಿಯಾತ್ಮಕತೆಯು ಸಾಮಾಜಿಕವಾಗಿರುವುದರಿಂದಲೇ ಸಮಾಜದ ಸಂರಚನೆಯಾಗಲಿಕ್ಕೆ ಮತ್ತು ಅದು ಸಂಪೋಷಣೆಗೊಳ್ಳಲಿಕ್ಕೆ ಸಾಧ್ಯವಾಗಿದೆ. ಜೊತೆಗೆ ಸಾಮಾಜಿಕ ಕ್ರಿಯಾತ್ಮಕತೆಯು ಸಂಚಲನಾತ್ಮಕ (Dynamic) ಆಗಿರುವುದರಿಂದಲೇ ಸಮಾಜದಲ್ಲಿ ಬದಲಾವಣೆಯೂ, ತೀವ್ರ ಬದಲಾವಣೆಯಿಂದ ಸಮಸ್ಯೆಗಳು ಉಂಟಾಗುವುದು. ಸಮಸ್ಯೆಗಳ ಪರಿಹಾರಕ್ಕೆ ಸೂಕ್ತವಾದ ಸಂಪನ್ಮೂಲಗಳನ್ನು ಕ್ರಿಯಾತ್ಮಕತೆಯೇ ಸೃಷ್ಟಿಸುತ್ತದೆ. ಸಮಸ್ಯೆಯ ಸೃಷ್ಟಿ-ಪರಿಹಾರಗಳೆರಡೂ ಜೊತೆಜೊತೆಗೇ ಇರುವುದನ್ನು ಕಂಡುಕೊಂಡು ಮುನ್ನಡೆಯುತ್ತಿರುವ ಕ್ರಿಯಾತ್ಮಕತೆಯೇ ಸಮಾಜಕಾರ್ಯ ಎಂದು ಸ್ಥೂಲವಾಗಿ ವಿಶ್ಲೇಷಿಸಬಹುದು. ಮೊದಲೇ ಹೇಳಿದ ಹಾಗೆ ಸಮಾಜಕಾರ್ಯವು ಹದಿನೆಂಟು-ಹತ್ತೊಂಬತ್ತನೆಯ ಶತಮಾನಗಳ ಅವಧಿಯಲ್ಲಿ ರೂಪುಗೊಂಡು, ಇಪ್ಪತ್ತನೆಯ ಶತಮಾನದಲ್ಲಿ ಬಲಿಷ್ಠಗೊಂಡ ವೃತ್ತ್ಯಾತ್ಮಕ ಸಮಾಜಕಾರ್ಯದಿಂದ ಭಿನ್ನವಾಗಿದೆ. ಅಂದರೆ, ಸಮಾಜದ ಸಂರಚನೆಗೆ ಕಾರಣವಾದ ಕ್ರಿಯಾತ್ಮಕ ರೂಪದ ಸಮಾಜಕಾರ್ಯವು ಆಧುನಿಕ ಸಮಾಜಕಾರ್ಯವನ್ನು ತನ್ನೊಳಗೆ ಅಡಗಿಸಿಕೊಂಡಿದೆ ಎಂಬುದನ್ನು ನಾವು ಗಮನಿಸಬೇಕು.

            ಆದರೆ, ನಮ್ಮ ವಿಚಾರ ಸಂಕಿರಣದಲ್ಲಿ ಸಮಾಜಕಾರ್ಯವನ್ನು ಪ್ರಸ್ತಾಪಿಸುವಾಗ ಆಧುನಿಕ ಸಮಾಜಕಾರ್ಯವನ್ನು ಮನದ ಮುಂದಿರಿಸಿಕೊಳ್ಳಬೇಕಾಗಿದೆ. ವಿಶೇಷದ ಬೆಳವಣಿಗೆಯನ್ನು-ಅದರಲ್ಲೂ ಇದರ ಸೈದ್ಧಾಂತಿಕ ನಿಟ್ಟನ್ನು-ಪರಿಶೀಲಿಸಿ, ಇದನ್ನು ಅಧ್ಯಾತ್ಮಭೂಯಿಷ್ಠವಾದ ಶರಣಚಿಂತನೆಯೊಡನೆ ವಿಶ್ಲೇಷಿಸಬೇಕಾಗುತ್ತದೆ. ಲೋಕದ ಲೇಸನ್ನು ಎರಡೂ ಚಿಂತನಪ್ರವಾಹಗಳು ತಮ್ಮ ದೃಷ್ಟಿಪಥದಲ್ಲಿ ಇರಿಸಿಕೊಂಡಿರುವುದರಿಂದ ಇಂಥ ತೌಲನಿಕ ವಿಶ್ಲೇಷಣೆಯ ಅವಸರವಿದೆ.

            ಆಧುನಿಕ ಸಮಾಜಕಾರ್ಯವು ಸುಮಾರು ಎರಡು ಶತಮಾನಗಳಲ್ಲಿ ಬೆಳೆದು ಮಾನವನ ಕಲ್ಯಾಣ-ಅಭ್ಯುದಯಗಳನ್ನು ಸಾಧಿಸುವ ನಿಟ್ಟಿನಲ್ಲಿ ತೊಡಗಿದೆ. ಮಾನವನ ಮೂಲ ಆವಶ್ಯಕತೆಗಳಾದ ಆಹಾರ, ರಕ್ಷಣೆ, ಲೈಂಗಿಕ ತೃಪ್ತಿ, ಶಿಕ್ಷಣ, ವಿಶ್ರಾಂತಿ, ಇವನ್ನು ಪೂರೈಸುವಲ್ಲಿ, ಮನೋಸಾಮಾಜಿಕ ತೊಡಕುಗಳನ್ನು ಬಿಡಿಸುವಲ್ಲಿ, ಮಾನವರೊಳಗೆ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಲು ನೆರವಾಗುವಲ್ಲಿ ಸಮಾಜಕಾರ್ಯವು ನಿರತವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ಪರೀಕ್ಷಿಸಿದರೆ ಇದೇ ಲೋಕದ ಲೇಸು ಆಗಿರಬಹುದಲ್ಲವೇ? ಇವೆಲ್ಲವೂ ಐಹಿಕ ಲೇಸಿನ ಅಂಗಗಳೆಂದು ನಮಗೆ ಸಹಜವಾಗಿಯೇ ಅನ್ನಿಸುತ್ತದೆ. ದೇಹ-ಮನಸ್ಸುಗಳೆರಡರ ಆವಶ್ಯಕತೆಗಳನ್ನು, ವ್ಯಕ್ತಿ-ಗುಂಪು-ಸಮುದಾಯಗಳ ಬೇಡಿಕೆಗಳನ್ನು ಪೂರೈಸಿದರೆ ಲೋಕದ ಲೇಸನ್ನು ಸಾಧಿಸಿದಂತಾದೀತು. ಆದರೆ, ಲೋಕಾತೀತವಾದ, ಅಲೌಕಿಕ ಎಂದೆನ್ನಬಹುದಾದ ಅಂಶಗಳ ಕಡೆ ನಮ್ಮ ದೃಷ್ಟಿಯನ್ನು ಹಾಯಿಸಬೇಕಲ್ಲವೆ? ಮನುಷ್ಯನಷ್ಟೇ ವಿಶ್ವದಲ್ಲಿ ಇರುವುದಿಲ್ಲ, ಇವನ ಜೊತೆಗೆ, ಸುತ್ತುಮುತ್ತಲೂ ಅಚೇತನ ಅಥವಾ ಜಡ ಎನ್ನಬಹುದಾದ ವಸ್ತು ವಿಶೇಷಗಳು, ಸಸ್ಯ ರಾಶಿ, ಪ್ರಾಣಿಕುಲ ಇಲ್ಲವೆ? ಇವೆಲ್ಲವೂ ಬಾಹ್ಯಜಗತ್ತು ಮಾತ್ರವಾಗಿರದೆ ಇವು ಒಂದಲ್ಲ ಒಂದು ರೀತಿಯಲ್ಲಿ ಮಾನವನ ಒಳ ಪ್ರಪಂಚದಲ್ಲೂ ಸೇರಿಕೊಂಡಿರುತ್ತವೆ. ಹಾಗಿಲ್ಲದಿದ್ದರೆ ಮಾನವ ಜೀವನವೇ ಅಸಾಧ್ಯವಾಗಿರುತ್ತಿತ್ತು. ಆದುದರಿಂದಲೇ, ಬಹುಶಃ ಶರಣರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ್ದುದು, ಅದರ ಸಾಧನೆಗಾಗಿ ಪ್ರಯತ್ನಶೀಲವಾಗಿದ್ದುದು ಸ್ಥಿತಿಯು ಸ್ವಾವಲಂಬನೆ-ಪರಾವಲಂಬನೆ-ಪರಸ್ಪರಾವಲಂಬನೆಯ ಸೂತ್ರದ ನೆಯ್ಗೆಯಿಂದ ನಿರ್ಮಾಣವಾಗಿರುವುದನ್ನು ನಾವು ಅರಿಯಬೇಕಾಗುತ್ತದೆ. ಇದರ ಜೊತೆಗೆ, ಮೇಲೆ ಸೂಚಿಸಿದ ಹಾಗೆ ವಿಶ್ವದ ರಹಸ್ಯ, ಮಾನವ ಜೀವನದ ಗಂತವ್ಯ, ಇದರ ಬಗೆಗೂ ಚಿಂತನೆ ಮಾಡಿದಾಗ ಮಾನವತೀತವಾದ ಶಕ್ತಿ ವಿಶೇಷವು ಸುಳಿಯುತ್ತದೆ. ಇದನ್ನು ಅರಿತುಕೊಳ್ಳುವ, ಮಾನವ ಜೀವನವು ಸಾರ್ಥಕವಾಗಬೇಕಾದರೆ ಇದನ್ನು ತನ್ನ ವ್ಯಕ್ತಿತ್ವದ ಭಾಗವನ್ನಾಗಿಸುವ ಆವಶ್ಯಕತೆಯು ತಲೆದೋರುತ್ತದೆ.

            ಆಧುನಿಕ ಸಮಾಜಕಾರ್ಯವು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಅಂಕುರಗೊಂಡು ಬಲಿಷ್ಠವಾಗಿ ಬೆಳೆಯಿತು. ಮುಖ್ಯವಾಗಿ ಮುಂದುವರಿದ ರಾಷ್ಟ್ರಗಳೆಂದುಕೊಳ್ಳುವ ಯೂರೋಪಿನ, ಅಮೆರಿಕೆಯನ್ನೊಳಗೊಂಡ ಪಶ್ಚಿಮ ರಾಷ್ಟ್ರಗಳ ಸಮಾಜೋ ರಾಜಕೀಯ ಹಿನ್ನೆಲೆಯಲ್ಲಿ ವ್ಯಕ್ತಿ ಪ್ರಧಾನವಾದ ಪ್ರಜಾಪ್ರಭುತ್ವವು ಸಮಾಜಕಾರ್ಯದ ಮೂಲ ತಾತ್ತ್ವಿಕ ಸಿದ್ಧಾಂತವಾಯಿತು. ಆದರೆ, ಅಷ್ಟೇ ಅಲ್ಲದಿದ್ದರೂ ಸಮಾನವಾದ ಪ್ರಗತಿ ಸಾಧಿಸಿದ ರಷ್ಯಾ ಮತ್ತಿತರ ಆಸುಪಾಸಿನ ರಾಷ್ಟ್ರಗಳಲ್ಲಿ ಸಮಾಜೋ-ಆರ್ಥಿಕ ಹಿನ್ನೆಲೆಯಲ್ಲಿ ಸಮುದಾಯ ಕೇಂದ್ರಿತವಾದ ಸಮತಾ ಅಥವಾ ಸಮಾಜವಾದವು ಸಮಾಜಕಾರ್ಯದ ಮೂಲ ಸಿದ್ಧಾಂತವಾಯ್ತು. ಅಲ್ಲಿ ವ್ಯಕ್ತಿಯು ಗೌಣ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದುದನ್ನು ನಾವು ಕಾಣಬಹುದು. ಹಿಂದುಳಿದ ಹಣೆಪಟ್ಟಿಯನ್ನು ಪಡೆದ ನೂರಾರು ವರ್ಷಗಳ ಕಾಲ ಪಾಶ್ಚಾತ್ಯ ಪ್ರಭುತ್ವದ ದಾಸ್ಯಕ್ಕೆ ಒಳಗಾಗಿದ್ದು ಪ್ರಾಚ್ಯ ರಾಷ್ಟ್ರಗಳಲ್ಲಿ ಸಹಸ್ರಾರು ವರ್ಷಗಳಿಂದಲೂ ಸಮಾಜೋಧಾರ್ಮಿಕ-ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸಮಾಜದಲ್ಲಿನ ಕ್ಲೇಶಗಳನ್ನು ಪರಿಹರಿಸುವಲ್ಲಿ ಧರ್ಮೋ-ನೈತಿಕ ಮಾರ್ಗವನ್ನು ಅನುಸರಿಸುತ್ತಾ ಬಂದಿತು. ಆದರೆ, ಪಾಶ್ಚಾತ್ಯೀಕರಣದಿಂದಾಗಿ ಪ್ರಜಾಪ್ರಭುತ್ವ ಮೊದಲು, ರಾಜಕೀಯ ಸ್ವಾತಂತ್ರ್ಯದಾನಂತರ ಸಮಾಜವಾದೀ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾಯಿತು.

            ಐತಿಹಾಸಿಕ ಸಿದ್ಧಾಂತದ ಸಂಕೀರ್ಣ ಸ್ಥಿತಿಯನ್ನು ಹಿನ್ನೆಲೆಯಾಗಿ ಇರಿಸಿಕೊಂಡು ಪ್ರಾಚ್ಯ ಸಂಸ್ಕೃತಿಯಲ್ಲಿ ಸಹಸ್ರ ವರ್ಷಗಳ ನಿಕಷಕ್ಕೆ ಒಳಗಾಗಿ ಅಪ್ಪಟವಾದ ಗಟ್ಟಿಮುಟ್ಟಾದ ಧರ್ಮೋ-ಅಧ್ಯಾತ್ಮ ಸಿದ್ಧಾಂತವನ್ನು ಸಮಾಜಕಾರ್ಯಕ್ಕೆ ಅಳವಡಿಸಿಕೊಂಡರೆ ನಮ್ಮ ಬಯಕೆಯ ಲೋಕದ ಲೇಸನ್ನು ಸಾಧಿಸಲು ಸಾಧ್ಯವಾದೀತೆ? ಮರ್ತ್ಯಲೋಕದ ಕಮ್ಮಟದಲ್ಲಿ ಸಲ್ಲುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ಪಾರಲೌಕಿಕವನ್ನು ಮನುಷ್ಯನು ಸಾಧಿಸುವ ಕಡೆ ಮೊಗ ಮಾಡಲು ಸಾಧ್ಯವೆ? ಎಂಬುದನ್ನೂ ನಾವು ಚಿಂತಿಸಬೇಕು ಎನ್ನುತ್ತದೆ ಶರಣಲೋಕ. ಧಾರ್ಮಿಕ ನಿಟ್ಟಿನಲ್ಲಿ ನೈತಿಕ ನಿಷ್ಠೆಯಿಂದ ಪರಿಶುದ್ಧ ವ್ರತಗಳನ್ನು ಪಾಲಿಸುತ್ತ ಆತ್ಮೋದ್ಧಾರವನ್ನು ಮಾಡಿಕೊಳ್ಳಬೇಕು. ಇದಕ್ಕೆ ಇಹಲೋಕವೇ ಮಾಧ್ಯಮವಾಗುವಂತೆ ಅದನ್ನು ಸಿದ್ಧಗೊಳಿಸಬೇಕು. ಅದರಲ್ಲಿ ಸಕಲ ಜೀವರಾಶಿಗಳು ಇರುವುದರಿಂದ ಅವೆಲ್ಲವುಗಳೊಡನೆ ಅನ್ಯೋನ್ಯತೆಯ ಸಂಬಂಧವನ್ನು ಇರಿಸಿಕೊಂಡು ಸತ್ಯಶುದ್ಧವಾಗಿ ಬಾಳಬೇಕು. ಇದಕ್ಕೆಂದೇ ಕಾಯಕ-ದಾಸೋಹಗಳೆಂಬ ಅವಳಿ ಸಾಧನಗಳನ್ನು ಕಂಡರಿಸಲಾಯಿತು. ಇವು ಕೇವಲ ಸಾಧನಗಳಲ್ಲದೆ ಜೀವನದ ಗಂತವ್ಯಗಳೂ ಹೌದು. ಇವುಗಳ ಮೂಲಕವೇ ಅಂತರಂಗದ ಹಾಗೂ ಬಹಿರಂಗದ ಪರಿಶುದ್ಧತೆಯನ್ನೂ, ಆತ್ಮಕಲ್ಯಾಣವನ್ನೂ ಗಳಿಸಲು ಸಾಧ್ಯವೊ ಎಂದು ಚಿಂತಿಸಬೇಕಾಗಿದೆ.

 

ವಿಚಾರ ಸಂಕಿರಣದ ಹಂದರ

            ಲೋಕದ ಲೇಸಿನ ಸ್ವರೂಪವನ್ನು ಕಂಡುಕೊಂಡು, ಅದನ್ನು  ಸಾಧಿಸುವ ಮಾರ್ಗಗಳನ್ನು ಗುರುತಿಸುವುದರ ಮೂಲಕ ಅದರ ಮೌಲ್ಯಮಾಪನ ಮಾಡುವ ಪ್ರಯತ್ನ ಇಲ್ಲಿ ನಡೆಯುತ್ತದೆ. ಶರಣ ಚಿಂತನೆ ಮತ್ತು ಸಮಾಜಕಾರ್ಯದ ಸೈದ್ಧಾಂತಿಕ ಚೌಕಟ್ಟನ್ನು ಪರಿಶೀಲಿಸುವ, ಗುರಿ-ಗಮ್ಯಗಳ ಸಾಮ್ಯ-ವೈಷಮ್ಯಗಳನ್ನು ಗುರುತಿಸುವ, ಲೌಕಿಕ ಪಾರಲೌಕಿಕಗಳ ಅವಲೋಕನದ ಮೂಲಕ ಭಕ್ತಿಯೋಗದ ಸ್ಥಾನ-ಸಾಮರ್ಥ್ಯದ ಬಗೆಗೆ ಚಿಂತನೆ ನಡೆದಿದೆ. ಚಿಂತನೆಯಲ್ಲಿ ಬುಧಜನರು ಮಂಡಿಸುವ ವಿಚಾರಗಳು ಬುದ್ಧಿಜನ್ಯವೂ, ವಿವೇಕಜನ್ಯವೂ ಆಗಿರುವುದರಿಂದ ಇವುಗಳ ಮಂಥನದಿಂದ ಇಂದಿನ ದಿಗ್ಭ್ರಾಂತ ಜಗತ್ತಿಗೆ ಬೇಕಾದ ಲೇಸನ್ನು ಗುರುತಿಸಲಾಗುತ್ತದೆ ಎಂದು ಭರವಸೆ ಹೊಂದೋಣ.

 

ಆಧಾರ ಸಾಹಿತ್ಯ

1.         Dr.H.M.Marulasiddiah, The Sharana  Revolution And The Indian Constitution, A.B.S Sahitya Parishat, Mysore, 2006

2.         ಡಿ.ವಿ.ಜಿ., ಮಂಕು ತಿಮ್ಮನ ಕಗ್ಗ, ಕಾವ್ಯಾಲಯ ಪ್ರಕಾಶಕರು, ಮೈಸೂರು, 1987 (11 ನೆಯ ಆವೃತ್ತಿ)

3.         E.F. Schumacher , A Guide for the Perplexed, ABACUS Edition by Sphare Books, London, 1981.

4.         Dr.H.M. Marulasiddaiah, Sectarian And Secular Bases of Welfare And Development,   IBH Prakashana, 2008, (Second Revised & Enlarged edition)

5.         ಡಿ.ವಿ.ಜಿ. ಬಾಳಿಗೊಂದು ನಂಬಿಕೆ, ಕಾವ್ಯಾಲಯ ಪ್ರಕಾಶಕರು, ಮೈಸೂರು, 2001, (ಒಂಬತ್ತನೆಯ ಮುದ್ರಣ).

6.         ಡಾ.ಎಚ್.ಎಂ. ಮರುಳಸಿದ್ಧಯ್ಯ, ಶರಣರು ನೀಡಿದ ಬೆಳಕು, .ಭಾ..ಸಾ.ಪರಿಷತ್ತು, ಮೈಸೂರು, 2011.

7.         ಡಾ.ಎಚ್.ಎಂ. ಮರುಳಸಿದ್ಧಯ್ಯ, (ಸಂ) ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು, 2009 (ವಿಸ್ತೃತ ಆವೃತ್ತಿ)

8.         ಸ್ವಾಮಿ ವಿವೇಕಾನಂದ, ಭಕ್ತಿಯೋಗ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2010 (ಹನ್ನೆರಡನೆಯ ಮುದ್ರಣ)

9.         Dr.H.M.Marulasiddaiah, Dimensions of Bhakti Movement In India, A.B.S.S.Parishat, Mysore, 1998

10.       E.S.Bogarduss, The Development of Social Thought, Peffer And Simens Pvt Ltd, Bombay, 1969 (Fourth Edition)

11.       ಮಹಾಮನೆ, (ಕನ್ನಡ ಮಾಸಿಕ,) ಸಂಪುಟ 14, ಸಂಚಿಕೆ 9, ಏಪ್ರಿಲ್ 2012 ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು

12.       ಆರ್.ಜಿ. ಹಳ್ಳಿ ನಾಗರಾಜ, ಎಚ್. ಸಿದ್ಧವೀರಪ್ಪ, ಕರ್ನಾಟಕ ವಿಧಾನ ಪರಿಷತ್ತು-ವಿಧಾನಸಭೆ, ಕರ್ನಾಟಕ ಸರ್ಕಾರ, ಬೆಂಗಳೂರು-2010

 

ಡಾ.ಎಚ್.ಎಂ. ಮರುಳಸಿದ್ಧಯ್ಯ

ಈಶಕೃಪೆ, ನಂ.62, ಮಂಜುನಾಥ ಕಾಲನಿ,

ಜೆ.ಪಿ. ನಗರ, ಬೆಂಗಳೂರು-78

ಚರವಾಣಿ-9480611307

 

 

No comments:

Post a Comment