Monday, December 2, 2013

ಪರಿಪೂರ್ಣ ವೃತ್ತಿಪರ ಸಮಾಜಕಾರ್ಯಕರ್ತರಾಗಿ: ಬಿ.ಎಲ್ ಪಾಟೀಲ


ಈಗ್ಗೆ ಹದಿಮೂರು ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಅಂತಿಮ ವರ್ಷದ ಸಮಾಜಕಾರ್ಯದ ಸ್ನಾತಕೋತ್ತರ ವಿದ್ಯಾರ್ಥಿನಿ ನಾನು. ವಿಶ್ವವಿದ್ಯಾಲಯದ ಅಣತಿಯಂತೆ ಅಥಣಿಯ ವಿಮೋಚನಾ ಸಂಸ್ಥೆಗೆ Block Placement ಗಾಗಿ ಬಂದಿದ್ದು ನನ್ನ ಅದೃಷ್ಟವೇ ಎನ್ನಬೇಕು. ವರ್ಷದಲ್ಲಿ ನಾಲ್ಕಾರು ಕಡೆ ನೌಕರಿ ಬದಲಿಸುವ ಸಮಾಜಕಾರ್ಯಕರ್ತರನ್ನ ಕಂಡಿದ್ದೇನೆ. ಅದಕ್ಕೆ ಕಾರಣಗಳೇನು ಕಡಿಮೆ ಇಲ್ಲ. ಆದರೆ ವಿದ್ಯಾರ್ಥಿನಿಯಾಗಿ ಬಂದ ನನಗೆ Result ಬರುವ ಮೊದಲೇ ನೌಕರಿಗಾಗಿ ಆಫರ್ ನೀಡಿದ್ದು ವಿಮೋಚನಾ ಸಂಸ್ಥೆ. 2 ವರ್ಷಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಡಾ.ಜಿ.ಎಸ್. ಬಿದರಿಕೊಪ್ಪ, ಡಾ. ಶೇಖರ ಪೂಜಾರ್, ಡಾ.ಜಿ.ಎನ್. ಗನಿಹಾರ, ಡಾ. ವಿನೀತಾ ಪೈ, ಡಾ. ಶೋಭಾದೇವಿ ಮತ್ತು ಡಾ. ಸ್ವಾದಿ ಗುರುವೃಂದದ ಪರಿಣಿತ ಮತ್ತು ಗಟ್ಟಿತನದ ಸಮಾಜಕಾರ್ಯದ ಪ್ರಾಯೋಗಿಕ ಜ್ಞಾನ, ಕೌಶಲ್ಯ, ತಂತ್ರಗಾರಿಕೆ ಕಲಿತು ನನ್ನದೇ ಆದ ವೃತ್ತಿ ಪರತೆಯನ್ನು ಕಟ್ಟಿಕೊಂಡವಳು ನಾನು Block Placement ಅವಧಿಯಲ್ಲಿ ವಿಮೋಚನಾದ ಅಧ್ಯಕ್ಷರಾದ ಶ್ರೀ.ಬಿ.ಎಲ್. ಪಾಟೀಲ ಅವರಿಂದ ಸಹಕಾರ್ಯದರ್ಶಿಗಳಾದ ಶ್ರೀ.ವ್ಹಿ.ಎಸ್. ಮನವಾಡೆಯವರಿಂದ ಗುರುತಿಸಿಕೊಂಡಿದ್ದೆ. ಅಂತೆಯೇ ಅವರು ನೀಡಿದ ಆಫರ್ ಬಗ್ಗೆ ಡಾ. ವಿನೀತಾ ಪೈ ಮ್ಯಾಡಂ ಅವರ ಹತ್ತಿರ ಚರ್ಚಿಸಿದಾಗ, ಒಂದೆರಡು ವರ್ಷ ಕೆಲಸ ಮಾಡುವ Field ಅನುಭವವಾಗುತ್ತದೆ, ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ತೊಡಗು ಎಂದು ಮಾರ್ಗದರ್ಶನ ನೀಡಿದರು. ಅಂತೆಯೇ ಇಂದೂ ಅಂದರೆ 1999 ಅಕ್ಟೋಬರ್ 10 ರಿಂದ ನಿರಂತರವಾಗಿ ವಿಮೋಚನಾ ಬಳಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಾರ್ಥಕ ಬದುಕು ನನ್ನದು.

            ಕರ್ನಾಟಕ ರಾಜ್ಯದ ಎಲ್ಲ ಸಮಾಜಕಾರ್ಯಕರ್ತರಿಗೂ ಗುರುಗಳಾದ ಡಾ.ಎಚ್.ಎಂ. ಮರುಳಸಿದ್ಧಯ್ಯ ಅವರು ದೂರವಾಣಿಯ ಮುಖಾಂತರ ಮಾತನಾಡಿ, ಶ್ರೀ.ಬಿ.ಎಲ್. ಪಾಟೀಲರ ಕುರಿತು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯಲ್ಲಿ ಒಂದು ಲೇಖನ ಬರಬೇಕಮ್ಮ ಅಂದಾಗ ನಿಜಕ್ಕೂ ಹೆಮ್ಮೆ ಅನ್ನಿಸಿತ್ತು. ಏಕೆಂದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆ, ಮಾಧ್ಯಮಗಳಲ್ಲಿ ಮಿಂಚಿದ ಶ್ರೀ ಬಿ.ಎಲ್. ಪಾಟೀಲರನ್ನು ಸಮಾಜ ಸೇವಕರಾಗಿ ಗುರುತಿಸಿದ್ದಿದೆ. ಆದರೆ ಅತ್ಯಂತ ಮುತ್ತ್ಸದ್ದಿತನದಿಂದ, ಕಾರ್ಯಕುಶಲತೆಯಿಂದ, ವೈಜ್ಞಾನಿಕ ದೃಷ್ಟಿಕೋನದಿಂದ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರನ್ನು ವೃತ್ತಿಪರ ಸಮಾಜಕಾರ್ಯದ ಪತ್ರಿಕೆಯೊಂದು ಗುರುತಿಸಿದ್ದು ವಿಮೋಚನಾ ಸಂಸ್ಥೆಗೊಂದು ಗರಿಯಾಗಿದೆ. ಅಂಥವರ ಕುರಿತು ಲೇಖನ ಬರೆಯುವುದೇ ಒಂದು ಸುಸಂಧಿ.

            ಕಳೆದ ವರ್ಷ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿ ನೋಂದಣಿ ಪಡೆದ ನಾನು, ಶ್ರೀ ಬಿ.ಎಲ್. ಪಾಟೀಲ ಅವರ ಹತ್ತಿರ ಅಂಕಲ್, ತುಂಬಾ ಓದಲಿಕ್ಕಿದೆ, ಆದರೆ ಸಮಯ ತುಂಬಾ ಕಡಿಮೆ ಅನ್ನಿಸುತ್ತಿದೆ ಅಂದಾಗ, ನನಗೂ ಅಷ್ಟು ಪುಸ್ತಕಗಳನ್ನು ಕೊಡು, ನಾನು ಓದಿ ನಿನಗೆ ಬೇಕಾದಂತೆ Review ಮಾಡಿ ಕೊಡುತ್ತೇನೆ ಅಂದಾಗ ಅದೆಂತಹ ಧೀಮಂತ ವ್ಯಕ್ತಿತ್ವ ಎಂದೆನ್ನಿಸುತ್ತದೆ. ಅವರ ಫಲಾನುಭವಿ ಮಕ್ಕಳಿಂದು ವಿದೇಶದಲ್ಲಿಯೂ ನೌಕರಿ ಮಾಡುತ್ತಿದ್ದಾರೆ. ಅರ್ಥಶಾಸ್ತ್ರದಲ್ಲಿ, ಸಮಾಜಕಾರ್ಯದಲ್ಲಿ, ಭೌಗೋಳಶಾಸ್ತ್ರದಲ್ಲಿ ಸಂಶೋಧನೆ ನಡೆಸಿದ್ದಾರೆ. ಇಂಜಿನೀಯರ್, ಡಾಕ್ಟರ್, ನರ್ಸ್, ಶಿಕ್ಷಕ, ಸೈನಿಕ, ಸ್ವಯಂ-ಉದ್ಯೋಗಿಗಳು ಹೀಗೆ ಹತ್ತು ಹಲವು ರಂಗಗಳಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಮೊನ್ನೆ ತಾನೆ ಫಲಾನುಭವಿ ಮಗುವೊಬ್ಬ KAS ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡು ಸಂದರ್ಶನದಲ್ಲಿ ಉತ್ತಮ ಅಂಕ ಪಡಿದಿದ್ದಾನೆ. ಇನ್ನೇನು ಆಯ್ಕೆ ಪಟ್ಟಿ ನೀಡುವುದೊಂದೇ ಬಾಕಿ ಇದೆ.

 

ವಿಮೋಚನಾ ಸಂಸ್ಥೆಯ ಪ್ರಾರಂಭ

            ಯಾರೋ ನಾಲ್ಕು ಜನ ಸೇರಿ, ಏನೋ ಮಾಡಬೇಕು ಎಂದು ಹುಟ್ಟಿದ ಸಂಸ್ಥೆ ಇದಲ್ಲ. ಅತ್ಯಂತ ಯೋಜನಾಬದ್ಧವಾಗಿ, ಉತ್ತಮ ಧ್ಯೇಯ ಹೊಂದಿದ ಆಡಳಿತ ಮಂಡಳಿಯಿಂದ ಪ್ರಾರಂಭವಾಗಿದ್ದು ವಿಮೋಚನಾ.

            ಸಂಶೋಧಕರೊಬ್ಬರು ಮನಸ್ಸು ಮಾಡಿದರೆ ಏನೆಲ್ಲ ಬದಲಾವಣೆಗಳಾಗಬಹುದು ಎಂಬುದುಕ್ಕೆ ನಮ್ಮ ಇಂದಿನ ಬೆಳವಣಿಗೆಗಳೇ ಸಾಕ್ಷಿ. ವಿಮೋಚನಾ ಇಂದು ತನ್ನ ಗುರಿಯನ್ನು ತಲುಪಿದೆ ಎಂದು ಹೇಳಬೇಕಾದರೆ, ಅದಕ್ಕೆ ಕಾರಣ ಉತ್ತಮ ಪ್ರಾರಂಭ ಮತ್ತು ಆವಶ್ಯಕತೆ. ಸಮಾಜದಲ್ಲಿ ದೇವದಾಸಿ ಪದ್ಧತಿಗೆ ಬಲಿಯಾಗಿ, ತಮ್ಮನ್ನು ತಮ್ಮ ಮಕ್ಕಳನ್ನು ಅಮಾನವೀಯ, ಅಸಹನೀಯ ಪ್ರಸಂಗಗಳು ಬದುಕಿಗೆ ಎಡೆಮಾಡಿಕೊಟ್ಟ ಹೆಣ್ಣುಮಕ್ಕಳ ಸ್ಥಿತಿಯನ್ನು ತಮ್ಮ ಸಂಶೋಧನೆಗೆ ವಿಷಯವನ್ನಾಗಿ ಆರಿಸಿಕೊಂಡವರು ಡಾ. ಜೋಗನ್ ಶಂಕರ್ ಅವರು. ಅವರು ಇಂದು ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ 1985-86 ದಿನಗಳಲ್ಲಿ ಅಥಣಿಯ KLE ಸಂಸ್ಥೆಯ ಪ್ರಾಧ್ಯಾಪಕರಾಗಿ ಬಂದಂಥ ಜೋಗನ ಶಂಕರ ಅವರು ತಮ್ಮ ಸಂಶೋಧನಾ ಕಾರ್ಯಕ್ಷೇತ್ರವನ್ನು ಅಥಣಿಯಲ್ಲಿ ಆಯ್ದುಕೊಂಡಿದ್ದರು. ಅಂದು ಬಿ.ಎಲ್. ಪಾಟೀಲರು ಒಬ್ಬ ವೃತ್ತಿಪರ ಮತ್ತು ಜನಪ್ರಿಯ ವಕೀಲರಾಗಿದ್ದರು. ಜೊತೆಗೆ KLE ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ರೈತಪರ ಹೋರಾಟಗಾರ, ಸಾಮಾಜಿಕ ಚಿಂತಕರೆಂದು ಗುರುತಿಸಿಕೊಂಡಿದ್ದ ಇವರನ್ನು ಸಂಶೋಧಕ ಪ್ರೊ. ಜೋಗನ್ ಶಂಕರ ಅವರು ಭೇಟಿ ಮಾಡುತ್ತಾರೆ. ಅವರು ತಮ್ಮ Devadasi cult ಎಂಬ ಸಂಶೋಧನೆಯಲ್ಲಿ ಗುರುತಿಸಿದ ಮತ್ತು ಕಂಡುಕೊಂಡ ಅಂಶಗಳ ಕುರಿತು ಚರ್ಚಿಸುತ್ತಾರೆ. ಚರ್ಚೆಯಲ್ಲಿ ದೇವದಾಸಿ ಸಮಸ್ಯೆ, ಕಾರಣ, ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ ಸ್ಥಿತಿಗತಿಯ ಕುರಿತು ಹಾಗೂ ಮಹಿಳೆಯರು ಮತ್ತು ಮಕ್ಕಳನ್ನು ಮುಂಬೈ ವೇಶ್ಯಾಗೃಹಗಳಿಗೆ ಕಳಿಸುವುದು ಮತ್ತು ಮಾರುವುದು ಇವೇ ಮೊದಲಾದ ವಿಷಯಗಳ ಕುರಿತು ಚರ್ಚಿಸುತ್ತಾರೆ. ಚರ್ಚೆಯ ಫಲವೇ ಇಂದಿನ ವಿಮೋಚನಾ. ಶ್ರೀ ಬಿ.ಎಲ್. ಪಾಟೀಲರು- ವಿಮೋಚನೆಯ ಡಾ. ಜೋಗನ್ ಶಂಕರ್ ಅವರ ಸಂಶೋಧನೆಯ ಹಾಗೂ ನಮ್ಮ ಪ್ರಯತ್ನಗಳ ಫಲ ಎಂದು ಉದ್ಗರಿಸುತ್ತಾರೆ.

 

ಸಂಸ್ಥೆಯ ಕಾರ್ಯತಂತ್ರ (Working Methodology of the organisation)

            ಸಂಸ್ಥೆಯು ಪ್ರಾರಂಭದಲ್ಲಿ ಡಾ. ಜೋಗನ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಸಮಿತಿಯೊಂದನ್ನು ರಚಿಸಿಕೊಂಡಿತು. ಮೂಲಕ ದೇವದಾಸಿ ಮಹಿಳೆಯರನ್ನು ಮದುವೆ ಮಾಡಿಕೊಳ್ಳಲು ಮನವೊಲಿಸಿ, ಅವರನ್ನು ಮದುವೆ ಮಾಡಿಕೊಳ್ಳಲು ಮುಂದೆ ಬಂದವರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಗುತ್ತಿತ್ತು. ದೇವದಾಸಿ ವಧುವಿಗೆ ಮಂಗಳಸೂತ್ರ, ಸಂಸಾರ ನಡೆಸಲು ಬೇಕಾಗುವ ಪಾತ್ರೆ ಪಗಡೆಗಳನ್ನು ಕೊಟ್ಟು ಮದುವೆ ಮಾಡುತ್ತಿದ್ದರು. ಮದುವೆಗಳೇನೋ ನಡೆದವು. ಆದರೆ ಯಶಸ್ವಿಯಾದದ್ದು ಬಲು ಕಡಿಮೆ. ಏಕೆಂದರೆ ಜನ ವ್ಯವಸ್ಥೆಯ ದುರುಪಯೋಗಪಡಿಸಿಕೊಳ್ಳತೊಡಗಿದರು. ಹಣದ ಆಸೆಗಾಗಿ ತಾವೇ ದೇವದಾಸಿಯನ್ನು ತರತೊಡಗಿದರು. ಹಣ ಸಿಕ್ಕ ಕೂಡಲೇ ಅವಳನ್ನು ಬಿಟ್ಟು ಹೋಗುತ್ತಿದ್ದರು. ಇದು ಸಮಿತಿಯಲ್ಲಿ ಚರ್ಚೆಯಾಗಿ ನಂತರದಲ್ಲಿ ಶಾಶ್ವತವಾಗಿ ದೇವದಾಸಿಯರ ಪುನಾವಸತಿ ಕೈಗೊಳ್ಳಲು ಏನು ಮಾಡಬಹುದೆಂದು ಚಿಂತಿಸಿ, ವಿಮೋಚನಾ ಸಂಸ್ಥೆಯನ್ನು ದೇವದಾಸಿಯರ ಶಾಶ್ವತ ಪುನಾವಸತಿ ಕೇಂದ್ರವನ್ನಾಗಿ ಪ್ರಾರಂಭಿಸಿದರು. 1960 ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆಯಡಿ ನೋಂದಣಿ ಮಾಡಿಸಿದರು. ನಂತರ ರಾಜ್ಯ ಸರಕಾರದಿಂದ, ಕೇಂದ್ರ ಸರಕಾರದಿಂದ, ಸಮಾಜಕಲ್ಯಾಣ ಮಂಡಳಿಗಳಿಂದ ವಿವಿಧ ಯೋಜನೆಗಳನ್ನು ಪಡೆಯುತ್ತಾ ದೇವದಾಸಿಯರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ತರಬೇತಿಗಳನ್ನು ಹಮ್ಮಿಕೊಳ್ಳತೊಡಗಿದರು. ಹಾಗೆಯೇ ಅನುಭವದಿಂದ ಅನ್ನಿಸಿದ್ದು, ದೇವದಾಸಿ ಮಹಿಳೆಯರ ಪುನಾವಸತಿಯ ಜೊತೆಗೆ ಅವರ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಲೇಬೇಕು ಎಂಬುದು. ಆದ್ದರಿಂದ ಮಗು-ತಾಯಿ-ಕುಟುಂಬ-ಸಮುದಾಯ-ಸಮಾಜ ಹೀಗೆ ಒಂದು ವೈಜ್ಞಾನಿಕ ಕಾರ್ಯತಂತ್ರವನ್ನು ರೂಪಿಸಿಕೊಂಡು ಮಕ್ಕಳ ಶಿಕ್ಷಣ, ಆರೋಗ್ಯ ಇವುಗಳ ಕಡೆಗೆ ಸಂಪೂರ್ಣವಾಗಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳತೊಡಗಿದರು.

 

ವಸತಿ ಶಾಲೆಯ ಪ್ರಾರಂಭ

            ದೇವದಾಸಿ ಪದ್ಧತಿ ಮುಂದುವರಿಯಲು ಕುಟುಂಬದ ಆರ್ಥಿಕ ಪರಿಸ್ಥಿತಿ, ಧಾರ್ಮಿಕತೆ ಮತ್ತು ಮೂಢನಂಬಿಕೆಗಳು ಎಷ್ಟು ಕಾರಣವೋ, ಅಷ್ಟೇ ಮುಖ್ಯವಾದುದು, ಅವರು ವಾಸಿಸುವ ಪರಿಸರ. ಸುತ್ತಮುತ್ತಲಿನ ಜನ ಅದನ್ನೇ ಮಾಡುತ್ತಿರುವಾಗ ಒಬ್ಬನೇ ಒಬ್ಬನು ಅದಕ್ಕೆ ತದ್ವಿರುದ್ಧವಾಗಿ ವರ್ತಿಸಲಾರ. ಆದ್ದರಿಂದ ಸಂದರ್ಭದಲ್ಲಿ ಬಿ.ಎಲ್. ಪಾಟೀಲರು ಪ್ರಾರಂಭಿಸಿದ್ದು ವಸತಿಶಾಲೆಯನ್ನು ಯಾವ ಪರಿಸರವು ಮಕ್ಕಳನ್ನು ತಪ್ಪು ದಾರಿಗೆ ಎಳೆಯುತ್ತಿತ್ತೋ, ಯಾವ ಪರಿಸರ ಮಕ್ಕಳಿಗೆ ರಕ್ಷಣೆ, ಶಿಕ್ಷಣ ಕೊಡುತ್ತಿರಲಿಲ್ಲವೋ ಅಂಥ ಜಾಗದಿಂದ ಮುಂದೆ ದೇವದಾಸಿ ಪದ್ಧತಿಗೆ ತೊಡಗುವ ಹೆಣ್ಣು ಮಕ್ಕಳನ್ನು ಮತ್ತು ಅದಕ್ಕೆ ಪ್ರೇರೇಪಣೆ ನೀಡುವ ಗಂಡು ಮಕ್ಕಳನ್ನು ಹೊರತಂದು ಕರ್ನಾಟಕ ರಾಜ್ಯದ ಗಡಿಗ್ರಾಮ ಮಲಾಬಾದ ಎಂಬ ಊರಿನ ಪ್ರಶಾಂತ ವಾತಾವರಣದಲ್ಲಿ ವಸತಿ ಶಾಲೆ ಪ್ರಾರಂಭಿಸಿದರು. 45 ಮಕ್ಕಳಿಂದ ಪ್ರಾರಂಭವಾದ ಶಾಲೆಯು ಈಗ 600ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದೆ. ಸಂಸ್ಥೆಯಲ್ಲಿ ಪ್ರಾರಂಭದಲ್ಲಿ ತುಂಬಾ ಕಡಿಮೆ ದೇವದಾಸಿ ಮಕ್ಕಳಿದ್ದರು ನಂತರ ಸಂಖ್ಯೆಯು ಜನರಲ್ಲಿ ವ್ಯವಸ್ಥೆಯ ಬಗ್ಗೆ, ಸಮಸ್ಯೆಯ ಬಗ್ಗೆ ಅರಿವು ಜಾಗೃತಿ ಮೂಡುತ್ತಾ ಬಂದಂತೆ, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂದಿತು. ತದನಂತರದಲ್ಲಿ ಪುನಾವಸತಿಗೊಂಡಂತೆ ಮಕ್ಕಳ ಸಂಖ್ಯೆಯು ಕಡಿಮೆಗೊಳ್ಳುತ್ತಾ ಬಂದಿತು. ಈಗ ಶಾಲೆಯಲ್ಲಿ 30 ದೇವದಾಸಿ ಮಕ್ಕಳಿದ್ದಾರೆ. ಇದು ತುಂಬಾ ಹೆಮ್ಮೆಯ ಸಂಗತಿ. ಒಂದು ಸಮಯದಲ್ಲಿ ದೇವದಾಸಿಯರ ಮಕ್ಕಳಿಗೆ ಹೆಚ್ಚಾಗಿ ಸೀಟು ಸಿಗುತ್ತಿರಲಿಲ್ಲ. ಆದರೆ ದೇವದಾಸಿ ತಾಯಂದಿರು ಪುನಾವಸತಿಗೊಂಡಂತೆ, ಮಕ್ಕಳು ವಿದ್ಯಾವಂತರಾಗಿ, ಉದ್ಯೋಗ ತೊಡಗಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಹೊಸ ದೇವದಾಸಿಯರು ಹುಟ್ಟಲಿಲ್ಲ. ಅವರ ಮಕ್ಕಳೂ ಇಲ್ಲವಾದರು. ಇದು ನಿಜಕ್ಕೂ ಸಂಭ್ರಮದ ಕ್ಷಣ. ಆಗ ಅಥಣಿ ತಾಲ್ಲೂಕನ್ನು ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಗಳ ಮಕ್ಕಳನ್ನು ಸಂಸ್ಥೆಯು ಶಿಕ್ಷಣಕ್ಕಾಗಿ ನೋಂದಾಯಿಸಿಕೊಳ್ಳುತ್ತಿದೆ. ಪ್ರಕ್ರಿಯೆಯು ನಿಧಾನವಾಗಿ ನಡೆಯುತ್ತಿದೆ. ವಸತಿ ಶಾಲೆಯಲ್ಲಿ ಕಲಿತ ಮಕ್ಕಳಿಂದು ಉನ್ನತ ಹುದ್ದೆಗಳಲ್ಲಿದ್ದಾರೆ ವಿವಿಧ ವೃತ್ತಿಗಳಿಂದ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗೆ ಮಗುವಿಗೆ ಶಿಕ್ಷಣ ನೀಡಿ, ವಿದ್ಯಾವಂತರನ್ನಾಗಿ ಮಾಡುವ ಮೂಲಕ, ತಾಯಿಯನ್ನು ಸುಧಾರಿಸಬಹುದು. ಅವಳ ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸಿ ವಿದ್ಯಾವಂತ ಮಗುವಿನ ಮೂಲಕ ದೇವದಾಸಿ ತಾಯಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮತ್ತು ಅಂಥ ಆದರ್ಶ ಕುಟುಂಬದಿಂದ ಸಮುದಾಯವನ್ನು, ಸಮುದಾಯದಿಂದ ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ವಿಮೋಚನಾ ಕಾರ್ಯಪ್ರವೃತ್ತರಾಗಿರುವಂತೆ ಶ್ರೀ ಬಿ.ಎಲ್. ಪಾಟೀಲರು ಯೋಜನೆ ಆಯೋಜಿಸಿದ್ದು ಯಾವ ವೃತ್ತಿಪರತೆಗೂ ಉಣಬಡಿಸಿದ ವಿವೇಚನೆಯಾಗಿದೆ.

 

ಜೀವ ತೇಯ್ದುಹರಿಸಿದ ಹಿರಿಜೀವ

            ಶ್ರೀ ಬಿ.ಎಲ್. ಪಾಟೀಲರಲ್ಲಿ ಇಂಥ ಗುಣ ಸ್ವಭಾವಗಳರಬೇಕಾದರೆ, ಅವರ ಹೆತ್ತವರು ಹೇಗಿರಬೇಡ! ದಿ|| ಶ್ರೀಮತಿ ಸೇವಂತಾ ಲಖಮಗೌಡ ಪಾಟೀಲ ಇವರು ಶಾಲೆ ಪ್ರಾರಂಭಿಸಲು ಸ್ವತಃ ತಾವಿದ್ದ ಮನೆಯನ್ನೇ ದಾನವಾಗಿ ನೀಡಿದರು. ಮಕ್ಕಳ ಸಂಖ್ಯೆ ಹೆಚ್ಚಿದಾಗ ಅವರ ಶ್ರೀಮತಿ ಶಾಂತಾದೇವಿ ಶಾಲಾ ಕಟ್ಟಡ ಕಟ್ಟಿಕೊಳ್ಳಲು ತಮ್ಮ ಎಂಟು ಎಕರೆ ಹೊಲವನ್ನೇ ದಾನವಾಗಿ ನೀಡಿದರು. ತಾಯಿಯವರು ಪ್ರಾರಂಭದಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ ತಾವೇ ಅಡುಗೆ ಮಾಡಿ ಊಟ ಬಡಿಸುತ್ತಿದ್ದರು. ಅವರ ಕೈ ಊಟ ಉಂಡ ಮಕ್ಕಳು ಬದುಕಿನಲ್ಲಿ ನೆಮ್ಮದಿಯಿಂದ ಇದ್ದಾರೆ.

 

ಜನರೇಶನ್ ಗ್ಯಾಪ್

            ಶ್ರೀಯುತ ಬಿ.ಎಲ್. ಪಾಟೀಲರು ರೂಪಿಸಿದ ಕಾರ್ಯತಂತ್ರದಿಂದಾಗಿ  ಇಂದು ದೇವದಾಸಿಯರಾಗಿರ ಬಹುದಾಗಿದ್ದಂಥ ಒಂದು ಜನರೇಶನ್ನೇ (ಪೀಳಿಗೆ) ಗ್ಯಾಪ್ ಆಗಿ ಹೋಗಿದೆ. ಅಥಣಿ ತಾಲ್ಲೂಕಿನಲ್ಲಿ ನಡೆದ ದೇವದಾಸಿಯರ ಪುನಾವಸತಿ ಕಾರ್ಯಕ್ರಮಗಳಿಂದ ದೇವದಾಸಿಯರಾಗಿ ನಿಲ್ಲಬೇಕಾಗಿದ್ದ ಹೊಸ ತಲೆಮಾರಿನ ಮಕ್ಕಳು ವಿದ್ಯಾವಂತರಾಗಿ ಉತ್ತಮ ಉದ್ಯೋಗಗಳಲ್ಲಿದ್ದಾರೆ. ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾರೆ. ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಈಗ ವಿಮೋಚನಾ ದೇವದಾಸಿಯರಾಗಬೇಡಿ ಎಂದು ಹೇಳುವ ಪ್ರಮೇಯವೇ ಇಲ್ಲ. ಏಕೆಂದರೆ ವಿಮೋಚನಾದ ಮಕ್ಕಳು ಇಂದು ಸಾವಿರಾರು ಸಂಖ್ಯೆಯಲ್ಲಿ ಸಾಮಾಜಿಕ ಬದಲಾವಣೆಯ ಹರಿಕಾರರಾಗಿ, ಸೈನಿಕರಾಗಿ ಕ್ಷೇತ್ರದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ನೈತಿಕ ಸಾತ್ತ್ವಿಕ ಬದುಕೇ ಸಮುದಾಯ, ಸಮಾಜಕ್ಕೊಂದು ದಾರಿಯಾಗಿದೆ. ನಿಟ್ಟಿನಲ್ಲಿ ಒಂದು ಪೀಳಿಗೆಯನ್ನೇ ರಕ್ಷಿಸಿದ ಹೆಗ್ಗಳಿಕೆ ಶ್ರೀ ಬಿ.ಎಲ್. ಪಾಟೀಲರದು.

 

ಸಿ.ಸಿ.ಎಫ್. ಎಂಬ ಬೆನ್ನೆಲುಬು

            ದೇವದಾಸಿ ಎಂಬ ಭೀಕರ ಸಮಸ್ಯೆಯನ್ನು ಹೋಗಲಾಡಿಸಲು ಪಣತೊಟ್ಟ ಬಿ.ಎಲ್. ಪಾಟೀಲರಿಗೆ ನೂರು ಆನೆಯ ಬಲ ನೀಡಿದ್ದು ಸಿ.ಸಿ.ಎಫ್. (ಕ್ರಿಶ್ಚಿಯನ್ ಚಿಲ್ಡ್ರನ್ ಫಂಡ್) ಎಂಬ ಅಂತಾರಾಷ್ಟ್ರೀಯ ಸಂಸ್ಥೆ. (ಈಗ ಅದು ಸಿ.ಎಫ್.. ಎಂದು ಬದಲಾಗಿದೆ.) 500 ಜನ ದೇವದಾಸಿ ಮಕ್ಕಳನ್ನು ಆರೋಗ್ಯ ಮತ್ತು ಶಿಕ್ಷಣ ನೀಡುವ ಯೋಜನೆಗಾಗಿ ವಿಮೋಚನಾದ ಮೂಲಕ ಪೋಷಕತ್ವ ನೀಡಲು ಮುಂದೆ ಬಂದಾಗ ಸಂಸ್ಥೆಗೆ FCRA  (Foreign Contribution Registration Act) ನೋಂದಣಿ ಇರಲಿಲ್ಲ. ಸಿ.ಸಿ.ಎಫ್. ಸಂಸ್ಥೆಯ ಮಾರ್ಗದರ್ಶನದಂತೆ FCRA ನೋಂದಣಿ ಮಾಡಿಕೊಳ್ಳಲಾಯಿತು.

            ಪ್ರಾರಂಭದ ಹಂತದಲ್ಲಿ ಪೋಷಕತ್ವ ಪಡೆಯಲು ಮಕ್ಕಳ ಭಾವಚಿತ್ರ ತೆಗೆದು ಅಮೆರಿಕಾಕ್ಕೆ ಕಳುಹಿಸುವ ಸಮಯದಲ್ಲಿ ಸಂಸ್ಥೆಯು ಆರ್ಥಿಕ ಸಬಲತೆ ಹೊಂದಿರಲಿಲ್ಲ. ಸಂದರ್ಭದಲ್ಲಿ ಬಿ.ಎಲ್. ಪಾಟೀಲರ ವ್ಯಕ್ತಿತ್ವ ಔದಾರ್ಯತೆ ತಿಳಿದ ಊಗಾರ ಶುಗರ್ ಮಾಲೀಕರಾದ ಶಿರಗಾಂವಕರವರು 500 ಮಕ್ಕಳ ಫೋಟೋ ತೆಗೆದುಕೊಡುವ ಖರ್ಚನ್ನು ವಹಿಸಿಕೊಂಡಿದ್ದರು. ನೋಂದಣಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಇಳಕಲ್ಲದ ಸ್ವಾಮಿಜಿ ಶ್ರೀ ಗುರು ಮಾಹಾಂತರು 27,000 ರೂ. ಕೊಡುವ ಮೂಲಕ ಕೆಲಸಕ್ಕೆ ಚಾಲನೆ ನೀಡಿದ್ದರು. ಇವೆಲ್ಲ ಪವಾಡಗಳು ನಡೆದದ್ದು ಬಿ.ಎಲ್. ಪಾಟೀಲರ ವ್ಯಕ್ತಿತ್ವ ಮತ್ತು ಶ್ರಮಭರಿತ ಜೀವನದಿಂದಾಗಿಯೇ.

            ಸುಮಾರು 1024 ದೇವದಾಸಿ ಮಕ್ಕಳಿಗೆ 20 ವರ್ಷಗಳ ಕಾಲ ಶಿಕ್ಷಣ, ಆರೋಗ್ಯ ನೀಡಿ ಅವರ ತಾಯಂದಿರಿಗೆ ಆರ್ಥಿಕ ಸಬಲತೆ ಸಾಧಿಸಿಕೊಳ್ಳಲು ಸಹಾಯಧನವನ್ನು ಸಿ.ಸಿ.ಎಫ್. ನೀಡಿದೆ. ಒಂದು Funding Agency ತನ್ನ ಗುರಿಯನ್ನು ಸಾಧಿಸಿದ ಮೇಲೆ ಅಲ್ಲಿಂದ ಹಿಂದೆ ಸರಿಯುತ್ತದೆ. ಆದರೆ ಬಿ.ಎಲ್. ಪಾಟೀಲರ ನೇತೃತ್ವದ ವಿಮೋಚನಾದಲ್ಲಿ ಹೀಗಾಗಲಿಲ್ಲ, 20 ವರ್ಷಗಳ ಅಥಣಿಯ ಯೋಜನೆಯ ನಂತರ ಗುಲ್ಬರ್ಗಾದ ಚಿತ್ತಾಪುರದಲ್ಲಿ ಬಡಮಕ್ಕಳಿಗೆ ಶಿಕ್ಷಣ ನೀಡಲು ಮುಂದೆ ಬಂದಿತು. ನಂತರ 2010-11ರಲ್ಲಿ ಅದು ಮುಗಿದಿದ್ದು 2009-10ರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಂಗವಿಕಲ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಸಹಾಯಧನ ನೀಡುತ್ತದೆ. ಇದು ಬಿ.ಎಲ್. ಪಾಟೀಲರ ಕಾರ್ಯಕ್ಷಮತೆ, ಪ್ರಾಮಾಣಿಕತೆ, ಡೆಡಿಕೇಶನನ್ಗೆ ಹಿಡಿದ ಕೈಗನ್ನಡಿಯಾಗಿದೆ.

 

ತಣಿದ ಭೂಮಿಗೆ ಮರಳಿದ ಜನ

            2005ರಲ್ಲಿ ಜನ ಅನುಸಂಧಾನ, ಸಿ.ಸಿ.ಎಫ್. ಸಹಾಯ, ದಾನಿಗಳ ಸಹಾಯದಿಂದ, ಸ್ವ-ಸಹಾಯ ಸಂಘಗಳ ಸದಸ್ಯೆಯರು ಮತ್ತು ವಿದ್ಯಾರ್ಥಿಗಳ ಶ್ರಮಶಕ್ತಿಯಿಂದ ಅಥಣಿ ತಾಲ್ಲೂಕಿನ ಅಗಹಾರಿಣಿ ನದಿಗೆ ಅಡ್ಡಲಾಗಿ ಚೆಕ್ಡ್ಯಾಂ ನಿರ್ಮಿಸಿ, ಬರಡಾದ ಹೊಸಟ್ಟಿ ಗ್ರಾಮದ ಭೂಮಿಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದ ಕೀರ್ತಿ ಬಿ.ಎಲ್. ಪಾಟೀಲರದು. ಒಂದು ಕಾಲದಲ್ಲಿ ರೈತ ಕುಟುಂಬಗಳು ನೀರಿರದ ಊರಲ್ಲಿ ಏನು ಮಾಡುವುದೆಂದು ಪರ ಊರಿಗೆ ಉದ್ಯೋಗ ಅರಸಿ ವಲಸೆ ಹೋಗಿದ್ದರು. ಡ್ಯಾಂ ನಿರ್ಮಾಣದ ನಂತರ ಕುಡಿಯಲು ನೀರಿಲ್ಲದ ಊರಿನಲ್ಲಿ ಕಬ್ಬು ಬೆಳೆಯತೊಡಗಿದಾಗ ವಲಸೆ ಹೋದ ಜನ ಮರಳಿ ಬಂದಿದ್ದಾರೆ; ಅಂತರ್ಜಲಮಟ್ಟದ ಹೆಚ್ಚಳದಿಂದಾಗಿ ಬೋರ್ವೆಲ್ಗಳು, ಕೆರೆ, ಬಾವಿಗಳು ತುಂಬಿಕೊಂಡಿವೆ; ಚಿಕ್ಕ ಚಿಕ್ಕ ಹಿಡುವಳಿದಾರರು ಮೊದಲ್ಗೊಂಡು ನೀರಾವರಿ ಮಾಡಿದ್ದಾರೆ; ಜನ ಉಂಡುಟ್ಟು ಸುಖವಾಗಿದ್ದಾರೆ. ಲೋಕಾರ್ಪಣ ಕಾರ್ಯಕ್ರಮಕ್ಕೆ ಕೇಂದ್ರ ಯೋಜನಾ ಆಯೋಗದ ಮಂತ್ರಿ ಎಂ.ವಿ. ರಾಜಶೇಖರನ್ ಅವರು ಮತ್ತು ರಾಜಸ್ತಾನದ ನೀರಿನ ಹರಿಕಾರ ರಾಜೇಂದ್ರ ಸಿಂಗ್ ಅವರು ಆಗಮಿಸಿದ್ದರು.

 

ನಿರುದ್ಯೋಗಿಗಳಿಗೆ ವರವಾದವರು

            ಅಥಣಿ ತಾಲ್ಲೂಕಿನ ನಿರುದ್ಯೋಗಿ ದೇವದಾಸಿ ಮತ್ತು ಇತರೇ ಹಿಂದುಳಿದ ಯುವಕ ಯುವತಿಯರಿಗಾಗಿ ಸ್ವಯಂ-ಉದ್ಯೋಗ ತರಬೇತಿ ಘಟಕವನ್ನು ಪ್ರಾರಂಭಿಸಿದ್ದಾರೆ. ಜರ್ಮನಿಯ ಕ್ರಿಶ್ಚಿಯನ್ ಎಜ್ಯುಕೇಶನ್ ಫಂಡ್ನ ಅನುದಾನದಲ್ಲಿ ನಡೆಯುತ್ತಿರುವ ಘಟಕದಲ್ಲಿ 36ಕ್ಕಿಂತಲೂ ಹೆಚ್ಚು ತರಬೇತಿಗಳನ್ನು ನಡೆಸಿಕೊಟ್ಟಿದ್ದಾರೆ. 2000ದಿಂದ ನಡೆಯುತ್ತಿರುವ ಯೋಜನೆ ಕಳೆದೆರಡು ವರ್ಷಗಳಿಂದ ಜಮಖಂಡಿ ತಾಲ್ಲೂಕಿನ ದೇವದಾಸಿ ಸೇವೆಯನ್ನು ವಿಸ್ತ್ತರಿಸಿದೆ. 2012-13ನೆಯ ಸಾಲಿನಲ್ಲಿ ಸ್ತಗಿತಗೊಳ್ಳುವ ಯೋಜನೆಯಲ್ಲಿ 1500 ಜನ ನಿರುದ್ಯೋಗಿಗಳು ತರಬೇತಿ ಪಡೆದು ಸ್ವಯಂ-ಉದ್ಯೋಗಿಗಳಾಗಿದ್ದಾರೆ ಇದರ ಜೊತೆಗೆ ಒಂದು ಉನ್ನತ ಉದ್ದೇಶದಿಂದ ಪ್ರಾರಂಭಿಸಿದ ನರ್ಸಿಂಗ್ ಶಾಲೆಯಲ್ಲಿ 46 ಜನ ದೇವದಾಸಿ ಮಕ್ಕಳು ಮತ್ತು 50 ಜನ ಇತರೇ ಮಕ್ಕಳು ತರಬೇತಿ ಪಡೆದು ಸರಕಾರೀ ಆಸ್ಪತ್ರೆಗಳಲ್ಲಿ, K.L.E., SDM ಸಂಸ್ಥೆಯ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಣಿತ ತರಬೇತಿ ನೀಡಿ ನೊಂದವರಿಗೆ ಆಸರೆಯಾಗುತ್ತಿದ್ದ ಶಾಲೆಗೆ ಸ್ವಂತ ಆಸ್ಪತ್ರೆ ಇಲ್ಲ ಎಂಬ ಕಾರಣ ನೀಡಿ ಸರಕಾರವು ಕಳೆದೆರಡು ವರ್ಷಗಳಿಂದ ಪ್ರವೇಶವನ್ನು ಸ್ಥಗಿತಗೊಳಿಸಿದೆ. ಇಂಥ ಅಡೆತಡೆಗಳು, ನೋವುಗಳ ಮಧ್ಯದಲ್ಲಿಯೂ ಹಿಂಜರಿಯದೇ ನೊಂದವರ ಪಾಲಿಗೆ ಬೆಳಕಾಗಿದ್ದಾರೆ, ಪಾಟೀಲರು.

 

ಅತ್ಯುತ್ತಮ ಸಲಹೆಗಾರರಾಗಿ ಬಿ.ಎಲ್.ಪಾಟೀಲ

            ಶ್ರೀ ಬಿ.ಎಲ್. ಪಾಟೀಲ ಅವರು ಸಲ್ಲಿಸುತ್ತಿರುವ ಸೇವೆಯ ಹಿನ್ನೆಲೆಯಲ್ಲಿ 1994 ರಿಂದ "Central advisory committee on child prostitution"  ಸದಸ್ಯರಾಗಿ ಆಯ್ಕೆಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನೊಳಗೊಂಡ ಸಮಿತಿಯು ಬಾಲ್ಯವೇಶ್ಯಾವಾಟಿಕೆ ಹಾಗೂ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಮಟ್ಟದಿಂದ Vigilance Committee ಗಳು ರಚನೆಯಾಗಬೇಕು, ಅವು ಹಾಗೆಯೇ ಮುಂದುವರಿದು ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದವರೆಗೂ ವಿಸ್ತರಣೆಯಾಗಬೇಕು. ಅದರಿಂದಾಗಿ ತಳಹದಿಯಿಂದ ಸಮಸ್ಯೆಯನ್ನು ನಿಯಂತ್ರಣಗೊಳಿಸಬಹುದು ಎಂಬ ಸಲಹೆಯಂತೆ ಇಂದು ರಾಜ್ಯದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಜ್ಯಮಟ್ಟದವರೆಗೂ ಕಾವಲು ಸಮಿತಿಗಳು ಹುಟ್ಟಿಕೊಂಡಿವೆ. ಸಂಬಂಧಿಸಿದ ಅಧಿಕಾರಿಗಳಿಗೆ Trafficking ವಿಷಯದಲ್ಲಿ ತರಬೇತಿಗಳು, ಕಾರ್ಯಾಗಾರಗಳು ನಡೆಯುತ್ತಿವೆ.

            2009-10 ರಲ್ಲಿ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮವು ತನ್ನ ಸಲಹಾ ಮಂಡಲಿಯ ಸದಸ್ಯರಾಗಿ ಇವರನ್ನು ಆಯ್ಕೆ ಮಾಡಿಕೊಂಡಿದೆ.

 

ಅಭೂತಪೂರ್ವ ಕಾಳಜಿ ಮತ್ತು ಸಮಯಪ್ರಜ್ಞೆ

            ದಿನಾಂಕ: 22.09.2011 ಬೆಳಗ್ಗೆ ಟಿ.ವಿ.9 ವಾಹಿನಿಯಲ್ಲಿ ವರದಿಗಾರ ಸಿದ್ದು ಬಿರಾದಾರ ಅವರಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಪೌಷ್ಟಿಕತೆಯ ಕೊರತೆಯಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಮಕ್ಕಳ ಕುರಿತು ಒಂದು ವರದಿ ಬಿತ್ತರವಾಯಿತು. ಸರಕಾರೀ ಅಧಿಕಾರಿಗಳೇ ಹೇಳುವಂತೆ 4531 ಮಕ್ಕಳು ದುಃಸ್ಥಿತಿಯನ್ನೆದುರಿಸುತ್ತಿದ್ದಾರೆಂಬುದು ವರದಿಯಲ್ಲಿ ಗೋಚರವಾಗಿತ್ತು.

            ಅದನ್ನು ನೋಡಿದ ಬಿ.ಎಲ್. ಪಾಟೀಲರ ಹೃದಯ ತಲ್ಲಣಿಸಿತು. ನೋವಿನಿಂದಲೇ ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೊಂದು ಪತ್ರ ಬರೆಯುತ್ತಾರೆ. ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ದೇಶವೆಂದು ಹೇಳಿಕೊಳ್ಳುತ್ತಿರುವ ದೇಶಕ್ಕೆ ಇದೊಂದು ಕಪ್ಪು ಚುಕ್ಕೆ ಸಂಬಂಧಿಸಿದ ಇಲಾಖೆಯವರು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳುತ್ತ ಚಿಲಿ ದೇಶದ ನೊಬೆಲ್ ಪ್ರಶಸ್ತಿ ವಿಜೇತ ಗ್ಯಾಬ್ರಿಲಾ ಮಿಸ್ಟ್ರೇಲ್ ಅವರ ಮಾತೊಂದನ್ನು ಕೋಟ್ ಮಾಡುತ್ತಾರೆ: "The child cannot wait, right now is the time, his bones are being formed, his blood is being made and his senses are being developed. To him we cannot answer 'tomorrow'. His name is today". ಮೂಳೆಗಳು ಗಟ್ಟಿಗೊಳ್ಳುತ್ತಿರುವ, ರಕ್ತವು ತಯಾರಾಗುತ್ತಿರುವ ವೇಳೆಯಲ್ಲಿ, ಮತ್ತು ಅವನ ಬುದ್ಧಿ ಮತ್ತತೆಯು ಬೆಳೆಯುತ್ತಿರುವ ವೇಳೆಯಲ್ಲಿ ಅವನಿಗೆ ನಾವು ನಾಳೆ ಎಂದು ಉತ್ತರ ಕೊಡುವಂತಿಲ್ಲ. ಅವನ ಹೆಸರೇ ಇಂದು. ನಾವು ಅವನಿಗೆ ಇಂದೇ ಉತ್ತರ ಕೊಡಬೇಕು ಇಂಥ ತೀಕ್ಷ್ಣ ಮತ್ತು ಕುಶಲಮತಿಯ ಬರಹದಿಂದ ಕೂಡಿದ ಪತ್ರವನ್ನು ಕರ್ನಾಟಕ ರಾಜ್ಯದ ಕಾರ್ಯದರ್ಶಿಯವರಿಗೂ ಹಾಗೆಯೇ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಿಗೂ ಒಂದು ಪತ್ರವನ್ನು ಮಾಹಿತಿಗಾಗಿ ರವಾನಿಸುತ್ತಾರೆ. ಪತ್ರ ತಲುಪಿದ ಕ್ಷಣಕ್ಕೇನೆ, ಹೈಕೋರ್ಟ್ ಪತ್ರವನ್ನು P.I.L (Public Interest Litigation) ಎಂದು ಪರಿಗಣಿಸಿ ಸರಕಾರಕ್ಕೆ ಉತ್ತರ ಕೊಡುವಂತೆ ನೋಟಿಸ್ ನೀಡಿದೆ. ಈಗಾಗಲೇ 2-3 ಹೀಯರಿಂಗ್ ಗಳಾಗಿವೆ. ಕೇಸ್ ನಡೆಯುತ್ತಿದೆ. ಸದ್ಯದ ಬೆಳವಣಿಗೆ ಅಂದರೆ-ರಾಜ್ಯದ ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ಪದ್ಧತಿ ಮತ್ತು ಪ್ರಮಾಣಗಳಲ್ಲಿ ಬದಲಾವಣೆಯಾಗಿದೆ. ಮತ್ತು ಕರ್ನಾಟಕದ ಉಚ್ಚ ನ್ಯಾಯಾಲಯವು-ರಾಜ್ಯದಲ್ಲಿರುವ ಶಿಶುಮರಣ ತಡೆಯಲು ಮತ್ತು ಅಪೌಷ್ಟಿಕತೆಯ ಪ್ರಮಾಣ ಕಡಿಮೆಗೊಳಿಸಲು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಆದೇಶಿಸಿದ ಪ್ರಕಾರ ಸಮಿತಿಯು ಬಿ.ಎಲ್. ಪಾಟೀಲರನ್ನು ಸದಸ್ಯರನ್ನಾಗಿಸಿಕೊಂಡು ಕಾರ್ಯಪ್ರವೃತ್ತವಾಗಿದೆ.

 

ಸೇವೆಗೆ ಸಂದ ಗೌರವ

            1999ರಲ್ಲಿ ಕೇಂದ್ರ ಸರಕಾರವು (CAPART (Council for the Advancement of People Action & Rural Development) ಧಾರವಾಡ ವಲಯದ (ಕರ್ನಾಟಕ, ಕೇರಳ, ಗೋವಾ, ಲಕ್ಷದ್ವೀಪ ವ್ಯಾಪ್ತಿ) ಪ್ರಥಮ ಅಧ್ಯಕ್ಷರಾಗಿ ಆಯ್ಕೆ ಮಾಡಿತು. ಮೂಲಕ ಹಲವಾರು ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಉತ್ತಮ ಸರಕಾರೇತರ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಿ ಅವುಗಳಿಗೆ ಮಾರ್ಗದರ್ಶನ ನೀಡಿದರು.

            ದೇಶ ವಿದೇಶಗಳಲ್ಲಿ ಸ್ನೇಹಿತರನ್ನು, ತಾಂತ್ರಿಕ ಸಲಹೆಗಾರರನ್ನು ಹೊಂದಿರುವ ಬಿ.ಎಲ್. ಪಾಟೀಲರು ಅತ್ಯುತ್ತಮ ವಾಗ್ಮಿಗಳು, ಬರಹಗಾರರು, ಕೇಳುಗರು, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಉತ್ತಮ ಓದುಗರು. ಸಾಮಾಜಿಕ ಚಿಂತಕರ, ಅಭಿವೃದ್ಧಿ ಚಿಂತಕರ ಉತ್ತಮ ಪುಸ್ತಕಗಳನ್ನು, ಲೇಖನಗಳನ್ನು ಓದುತ್ತಾರೆ. ಒಮ್ಮೆ ಹಿಡಿದ ಪುಸ್ತಕವನ್ನು ಸಂಪೂರ್ಣ ಓದಿ ಮನನ ಮಾಡಿಕೊಳ್ಳುವವರೆಗೂ ನಿದ್ರೆ ಮಾಡುವುದಿಲ್ಲ.

            ಫಲಾನುಭವಿಗಳ ಜೊತೆ, ಸಿಬ್ಬಂದಿಗಳ ಜೊತೆ ಮಾತನಾಡುವಾಗ ಸದಾ ಪ್ರೇರಣೆ ತುಂಬಿದ ಮಾತುಗಳೇ. ಭವ್ಯ ಕನಸುಗಾರರಾದ ಇವರು ಇತರರು ಕನಸು ಕಟ್ಟುವಂತೆ ಮಾಡುತ್ತಾರೆ. ಸಿಟ್ಟು, ಬೇಸರ, ಎಂದೂ ಅವರಲ್ಲಿ ಕಾಣುವುದಿಲ್ಲ.

 

ನನ್ನನ್ನು ನಾನು ಕಂಡಂತೆ

(ಬಿ.ಲ್ ಪಾಟೀಲರ ಮಾತುಗಳಲ್ಲಿ)

            ನನ್ನ ತಂದೆ, ಚಿಕ್ಕಪ್ಪ ಮತ್ತು ದೂರದ ಬಂಧುಗಳೊಬ್ಬರ ಪ್ರಭಾವದಿಂದ ಸಾಮಾಜಿಕ ಸೇವಾ ಪರಂಪರೆಯನ್ನು ಮೈಗೂಡಿಸಿಕೊಂಡು ಬೆಳೆದ ನನಗೆ, ಚಿಕ್ಕಿಂದಿನಿಂದಲೇ ನೂತನವಾದ ಕ್ಷೇತ್ರಗಳಲ್ಲಿ ಧುಮ್ಮಿಕ್ಕುವ ಪ್ರವೃತ್ತಿ. ಸಹಜವಾಗಿಯೇ ಅಂದಿನ ದಿನಮಾನದ ಪರಿಶುಭ್ರ ಚಾರಿತ್ರ್ಯದ ನೇತಾರರು ನನ್ನನ್ನು ಗುರುತಿಸಿದ್ದುದು ನನ್ನ ದೈವ.

            1972ರಲ್ಲಿ ನ್ಯಾಯವಾದಿಯಾಗಿ ಬಂದ ನಾನು 1975 ಹೊತ್ತಿಗೆ ಪ್ರಸಿದ್ಧಿ ಪಡೆದು, ವೃತ್ತಿ ಜೀವನದ ಮುಂಚೂಣಿಯಲ್ಲಿದ್ದೆ. ಒಂದೆರಡು ವರ್ಷಗಳಲ್ಲಿ ಡಿ.ಸಿ.ಸಿ. ಬ್ಯಾಂಕ್, ಬೆಳಗಾವ, ಕೋ-ಆಪರೇಟಿವ್ ಯೂನಿಯನ್ ಬೆಳಗಾವ, ಸೇಲ್ಸ್ ಆ್ಯಂಡ್ ಪರ್ಚೇಜ ಯೂನಿಯನ್, ಬೆಳಗಾಂ ಮತ್ತು ರೆ.ಎಲ್. ಸಂಸ್ಥೆ ಬೆಳಗಾವಿ ಇವುಗಳಲ್ಲಿ ನನ್ನ ಸ್ಥಾನ ಗುರುತಿಸಿಕೊಂಡೆ. ನಾಗಾಲೋಟದ ಮಧ್ಯದಲ್ಲಿ, ನನಗೆ ಅರಿವೇ ಇರದ ಕ್ಷೇತ್ರಕ್ಕೆ ನನ್ನನ್ನು ಪರಿಚಯಿಸಿದವರು ಪ್ರೊ. ಶಂಕರ ಜೋಗನ್. ನೀವು ಎಷ್ಟೇ ದೊಡ್ಡವರಾಗಿ ಬೆಳೆಯಬಹುದು. ಆದರೆ ನಿಮ್ಮ ತಾಲ್ಲೂಕಿನ ಕಳಂಕ ಕಳೆಯದಿದ್ದರೆ ನೀವು ಏನಾದರೇನು? ಮುಂಬಯಿ ಕಾಮಾಟಿಪುರದಲ್ಲಿ ಸಾವಿರಾರು ಜನ ನಮ್ಮ ಅಕ್ಕ-ತಂಗಿಯರು ಮೈಮಾರುತ್ತಿರುವಾಗ, ಅವರ ಸಹಸ್ರಾರು ಮಕ್ಕಳು ಬೀದಿಯ ಮಕ್ಕಳಾಗಿ ಬಾಳುತ್ತಿರುವಾಗ, ಅವರ ಬಗ್ಗೆ ಚಿಂತಿಸದಿದ್ದರೆ ನೀವಿದ್ದು ಫಲವೇನು? ನಿಮ್ಮ ಜನಕ್ಕೆ ಯಾವ ಸಾರ್ಥಕತೆ? ಎಂದು ಹೇಳುವ ಮೂಲಕ ನನ್ನನ್ನು ವಿಮೋಚನೆಯ ಅಂಗಳಕ್ಕೆ ತಂದವರು ಅವರು. ಶತಮಾನಗಳಿಂದ ತುಳಿಯಲ್ಪಟ್ಟ ಧ್ವನಿಯ ಸಿಟ್ಟಿನ ಅಭಿವೃದ್ಧಿ ಅದಾಗಿತ್ತು. ಧ್ವನಿಯ ಹಿಂದಿದ್ದ ನೋವು ನನ್ನ ಅಂತರ್ಯಾಮಿಯ ಬಾಗಿಲು ತೆರೆದಿತ್ತು. ಧ್ವನಿಗೆ ಸ್ಪಂದಿಸಲು ಆಸರೆಯಾಗಿ, ಶಕ್ತಿಯಾಗಿ, ಮುನ್ನುಗ್ಗಲು ಪ್ರೇರಣೆ ನೀಡಿದವರು ಇಲಕಲ್ದ ಶ್ರೀ ಮಹಾಂತ ಸ್ವಾಮಿಗಳು ಮತ್ತು ಗದುಗಿನ ತೋಂಟದಾರ್ಯ ಜಗದ್ಗುರು ಸನ್ನಿಧಿಯವರು. ಪ್ರಾರಂಭದಲ್ಲಿಯೇ ಅನಾಮಧೇಯ ಪತ್ರಗಳ ಸುರಿಮಳೆ ಆದಾಗ ನನಗೂ ನನ್ನ ಶ್ರೀಮತಿಗೂ ಧೈರ್ಯ ತುಂಬಿ ದೇವತೆಗಳೂ ಬಳಿ ಸಾರಲು ಅಂಜುವ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪ್ರೇರಣೆ ನೀಡಿದ ನನ್ನ ದೇವರುಗಳು ಅವರು.

            ಸಹಸ್ರಾರು ಸಹಾಯ ಹಸ್ತಗಳ ಸಹಕಾರದಿಂದ ನಮ್ಮೀ ಸಂಸ್ಥೆಯ ಮಕ್ಕಳಿಂದು ತಾಯಿಯ ಮಾರ್ಗದಲ್ಲಿ ಮುನ್ನಡೆಯದೆ, ಸಮಾಜದ ಮುಖ್ಯ ವಾಹಿನಿಯಲ್ಲಿ ಒಂದಾಗಿ ಮರ್ಯಾದೆಯ ಜೀವನ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಅವರಿಗೆಲ್ಲ ಅಥಣಿ ತಾಲ್ಲೂಕಿನ ಪುಟ್ಟ ಗಡಿಗ್ರಾಮವಾದ ಮಲಾಬಾದದಲ್ಲಿ ವಸತಿ ಶಾಲೆ ಪ್ರಾರಂಭಿಸಿದ್ದು. ಇದು ದೇಶದ ಮೊದಲ ಪ್ರಯೋಗ ಎಂಬ ಖ್ಯಾತಿ ಪಡೆದಿದೆ. 'Vimochana runs a residential school for Devadasi Children, which is first of its Kind in the entire nation." (Citation given at the time of National Award in the Child Welfare-1997)

            ನಂತರದಲ್ಲಿ ಪ್ರಾರಂಭಿಸಿದ ಶುಶ್ರೂಷಾ ಶಾಲೆಯಲ್ಲಿ ಕಲಿತ ಮಕ್ಕಳಿಂದು ನಾಡಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಾಯಕದಲ್ಲಿ ನಿರತರಾದರೆ, ವೃತ್ತಿನಿರತ ತರಬೇತಿ ಪಡೆದ ಅನೇಕ ಜನ ತಾಯಂದಿರು ತಮ್ಮ ಹಿಂದಿನ ಬಾಳ ಪುಟವನ್ನು ಮುಚ್ಚಿ, ಹೊಸ ಜೀವನ ಕಂಡುಕೊಂಡಿದ್ದಾರೆ.

            ಹಾಗಾದರೆ ಸಮಸ್ಯೆಗೆ ವಿಮೋಚನಾ ಪೂರ್ತಿಯಾಗಿ ಇತಿಶ್ರೀ ಹಾಡಿತೇ? ಎಂದು ಪ್ರಶ್ನಿಸಿಕೊಂಡಾಗ, ಬಹು ದೊಡ್ಡ ಕತ್ತಲಲ್ಲಿ ಒಂದೇ ಒಂದು ಮೇಣದ ಬತ್ತಿಯನ್ನು ಹಚ್ಚಿದ ತೃಪ್ತಿ ನಮ್ಮದು. ಮಗ್ಗುಲಿನ ಜಮಖಂಡಿ, ಮುಧೋಳ ಮತ್ತು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇನ್ನೂ ಮಕ್ಕಳು ಮಾರಾಟವಾಗುತ್ತಿವೆ. ಸಹಸ್ರಾರು ಹೆಣ್ಣು ಮಕ್ಕಳು ವೇಶ್ಯಾವಾಟಿಕೆಗೆ ನೂಕಲ್ಪಡುತ್ತಿದ್ದಾರೆ. ಅವರ ಮತ್ತು ಅವರ ನತೃದೃಷ್ಟ ಮಕ್ಕಳ ಭವಿಷ್ಯವೇನು? ಸರಕಾರದ ದಿವ್ಯ ನಿರ್ಲಕ್ಷ್ಯ, ಅಂಕೆ-ಸಂಖ್ಯೆಗಳ ನಾಟಕದಲ್ಲಿಯೇ ತೃಪ್ತಿಪಡುವ ಅಧಿಕಾರಿ ವರ್ಗ ಇದಕ್ಕೆ ದಾರಿ ತೋರುವಲ್ಲಿ ವಿಫಲರಾಗಿದ್ದಾರೆ. ಶ್ರೀಮತಿ ಶಾಲಿನಿ ರಜನೀಶರಂಥ ಅಧಿಕಾರಿಗಳಿದ್ದಾಗ ಮಾತ್ರ ಗತಿ ಪಡೆದುಕೊಂಡ ಇಲಾಖೆ ಇಂದು ಎಂದಿನಂತೆ ಇದೇ ಕೇಂದ್ರ ಸರಕಾರವೂ ಇದಕ್ಕೆ ಹೊರತಾಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಹಿಳೆಯರು (ಕ್ರಿಯಾಶೀಲ) ಬಂದಾಗ ಮಾತ್ರ ಸಮಸ್ಯೆಗಳತ್ತ ಅವರ ಲಕ್ಷ್ಯ ಸೆಳೆಯಲು ಸಾಧ್ಯ ಎಂಬಲ್ಲಿ ಎರಡು ಮಾತಿಲ್ಲ. ಸಾಧ್ಯವಿದ್ದೆಡೆ ಜ್ಯೋತಿ ಬೆಳಗಿಸಬೇಕೆಂಬ ಹಿರಿದಾಶೆ ನಮ್ಮದು. ಉತ್ತರ ಕರ್ನಾಟಕದ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ವಿಭಾಗಾಧಿಕಾರಿಗಳ ಮುಖಾಂತರ ಬಗ್ಗೆ ತಿಳಿಸಿ, ಅಲ್ಲಿದ್ದ ನತದೃಷ್ಟ ಮಕ್ಕಳನ್ನು ನಮ್ಮ ವಸತಿ ಶಾಲೆಗೆ ಕಳಿಸಲು 2-3 ವರ್ಷಗಳಿಂದ ಪ್ರಯತ್ನಿಸಿದರೂ ಫಲಶ್ರುತಿ ಶೂನ್ಯ. ಇದಕ್ಕೆ ಕಾರಣ ಸರಕಾರದಲ್ಲಿರುವವರಿಗೆ ಸಹಾನುಭೂತಿಯ ಕೊರತೆ. ಸಮಸ್ಯೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ. ಜತೆಗೆ ಮೌಲ್ಯವನ್ನು ಕಳೆದುಕೊಂಡಿರುವ ನಮ್ಮ ನೇತಾರರು.

            ಇದೆಲ್ಲವುಗಳ ಮಧ್ಯ, ಕಾರ್ಗತ್ತಲೆಯ ಹಾದಿಯ ಕೊನೆಯಲ್ಲಿ ಹಣತೆಯೊಂದನ್ನು ಹಚ್ಚಲು 66 ಇಳಿವಯಸ್ಸಿನಲ್ಲೂ ಹೆಜ್ಜೆ ಹಾಕುತ್ತಿರುವೆ. ಕಾಲುಗಳು ತಮ್ಮ ಶಕ್ತಿ ಕಳೆದುಕೊಳ್ಳುವ ಮುನ್ನ, ಜೀವ ತನ್ನ ಗೂಡಿನಿಂದ ಹಾರಿ ಹೋಗುವ ಮುನ್ನ ಹಣತೆ ಹಚ್ಚುವ ಹಿರಿದಾಸೆ ನನ್ನದು. ಇಂಥ ಮಕ್ಕಳಿಗಾಗಿ ವೃತ್ತಿನಿರತ ಕೇಂದ್ರವೊಂದನ್ನು ಅನವರತರಾಗಿ ನಡೆಸಲು ಸರಕಾರದ ಸಹಾಯಕ್ಕಾಗಿ ಎದುರು ನೋಡುತ್ತಿರುವೆ.

 

ಕೊನೆಗಾಣದ ಮಾತು

            ಮಾತುಗಳಿಂದ ವಿದಿತವಾಗುವುದು ಇಷ್ಟು: ಶ್ರೀ.ಬಿ.ಲ್ ಪಾಟೀಲರನ್ನು ವಿಮೋಚನೆಯಿಂದ ಹೊರಗಿಟ್ಟು ನೋಡಲು ಸಾಧ್ಯವೇ ಇಲ್ಲ. ಅದನ್ನು ಹೊರತುಪಡಿಸಿ ಅವರು ಉಸಿರಾಡುವುದೇ ಇಲ್ಲ ಎಂದೆನಿಸುತ್ತದೆ. ಹಾಗಾಗಿ ಅವರ ವೈಯಕ್ತಿಕ ಬದುಕು ಬೇರೆಯಾಗಿಲ್ಲ.

 

ಭಾರತಿ ಕೆ. ಬಿಜಾಪುರ

ಸಂಯೋಜಕಿ. ವಿಮೋಚನ,

ಅಥಣಿ, ಬೆಳಗಾವಿ-591304

ಮೊ:9845209357

 

 

No comments:

Post a Comment