Monday, December 2, 2013

ಹಸಿದವರ ಅನ್ನದಾತ: ಶಿವಕುಮಾರ್


            ಬಾಳೆ ಎಲೆ ಶಿವಕುಮಾರ್ ಅವರ ಬಗ್ಗೆ ಬೆಂಗಳೂರಿನ ಪ್ರತಿಯೊಬ್ಬರಿಗೂ ಬಹುಶಃ ತಿಳಿದಿರಬಹುದು. ಬೆಂಗಳೂರಿನ ಯಾವುದೋ ಒಂದು ಕಲ್ಯಾಣ ಮಂಟಪದಲ್ಲಿ ಅಥವಾ ಇನ್ನಾವುದೋ ಶುಭ ಸಮಾರಂಭದಲ್ಲಿ ಉಳಿದ ಆಹಾರವನ್ನು ಹಸಿದ ಹತ್ತಿರದ ಕೊಳೆಗೇರಿಯ ಜನಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಉಂಡು ಮಿಕ್ಕಿದ ಆಹಾರವನ್ನು ಹಸಿದ ಹೊಟ್ಟೆಗಳಿಗೆ ತಲುಪಿಸುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿದ್ದಾರೆ ಶ್ರೀಯುತ ಶಿವಕುಮಾರ್ ಅವರು.

            ಶಿವಕುಮಾರ್ ಮೂಲತಃ ಬಾಳೆಎಲೆ ವ್ಯಾಪಾರಿ. ಬಾಳೆಎಲೆ ಪೂರೈಸಲು ಕಲ್ಯಾಣಮಂಟಪಗಳಿಗೆ ಭೇಟಿ ನಿಡಿದಾಗ ಅಲ್ಲೆಲ್ಲ ಮಿಕ್ಕಿದ ಆಹಾರವನ್ನು ಚರಂಡಿಗೆ ಎಸೆಯುತ್ತಿರುವ ದೃಶ್ಯವನ್ನು ಕಂಡ ಶಿವಕುಮಾರ್ ಅವರ ಮನಸ್ಸು ತೀವ್ರವಾಗಿ ಕಾಡಿತು. ವ್ಯವಸ್ಥೆಗೆ ಏನಾದರೂ ಮಾಡಬೇಕು ಎಂದು ಆಲೋಚಿಸಿದಾಗ ಪ್ರಾರಂಭಗೊಂಡಿದ್ದೇ ಸೇವಾ ಯೋಜನೆಶಿವಕುಮಾರ್ ಅವರು ಮೊದಲು ಆಟೋದಲ್ಲಿ ಕಾರ್ಯವನ್ನು ಆರಂಭಿಸಿದರು. ಬಳಿಕ ಇದಕ್ಕಾಗಿಯೇ ಪ್ರತ್ಯೇಕ ವಾಹನ ಮತ್ತು ಐದು ಸಿಬ್ಬಂದಿ ನೇಮಿಸಿಕೊಂಡು ತನ್ನ ಸಮಾಜಸೇವೆಯನ್ನು ಮುಂದುವರೆಸುತ್ತಿದ್ದಾರೆ.

            ಸ್ವತಃ ಶಿವಕುಮಾರ್ ಅವರೇ ಬೆಂಗಳೂರಿನ ಕೆಲವು ಕಲ್ಯಾಣಮಂಟಪಗಳಿಗೂ ಭೇಟಿ ನೀಡಿ, ಇಂತಹದ್ದೊಂದು ಸೇವೆ ಆರಂಭಿಸಿದ್ದೇವೆ, ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಆಹಾರ ಮಿಕ್ಕಾಗ ಅದನ್ನು ಚರಂಡಿಗೆ ಸುರಿಯದೆ ನಮಗೆ ಕರೆಮಾಡಿ. ಅದನ್ನು ಹಸಿದ ಹೊಟ್ಟೆಗಳಿಗೆ ತುಂಬಿಸಲು ನೆರವು ನೀಡಿ ಎಂದು ಮನವಿ ಮಾಡಿದ್ದಾರೆ. ಎಲ್ಲ ಕಲ್ಯಾಣಮಂಟಪಗಳಿಗೂ ಪಾತ್ರೆ ನೀಡಿ, ಉಳಿದ ಆಹಾರ ಪದಾರ್ಥವನ್ನು ಅದರಲ್ಲಿ ಹಾಕುವಂತಹ ವ್ಯವಸ್ಥೆ ಕಲ್ಪಿಸುವುದು ಅವರ ಮುಂದಿನ ಯೋಜನೆಯಾಗಿದೆ. ಹಾಗೆಯೇ ಯಾವುದೇ ಕಾರಣಕ್ಕೂ ಅವರು ಹಳಸಿದ ಆಹಾರವನ್ನು ಸ್ವೀಕರಿಸುವುದಿಲ್ಲ. ಜೊತೆಗೆ ಕಲ್ಯಾಣಮಂಟಪದಲ್ಲಿಯೇ ಆಹಾರ ಚೆನ್ನಾಗಿದೆ ಎಂದು ತಿಳಿದಾಗ ಮಾತ್ರ ಅದನ್ನು ಕೊಂಡೊಯ್ಯಲು ಮುಂದಾಗುತ್ತಾರೆ. ಯಾವ ಭಾಗದಿಂದ ಕರೆ ಬರುತ್ತದೆಯೋ ಬಾಗದ ಕೊಳೆಗೇರಿಯಲ್ಲಿಯೇ ಆಹಾರ ವಿತರಿಸಲಾಗುತ್ತದೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ.

            ಇವರು ಸಾವು ಸಹಜ-ಸಾಧನೆ ನಿಜ ಎಂಬ ಧ್ಯೇಯದೊಂದಿಗೆ ಸೇವೆ ಪ್ರಾರಂಭಿಸಿದ್ದಾರೆ. ಸ್ವತಃ ಖರ್ಚು ಮಾಡಿ ವಾಹನವೊಂದನ್ನು ಮೀಸಲಿಟ್ಟಿದ್ದಾರೆ. ಮದುವೆ, ನಾಮಕರಣ ಮುಂತಾದ ಸಮಾರಂಭಗಳಲ್ಲಿ ಉಳಿದ ಆಹಾರ ಪದಾರ್ಥಗಳು ಚರಂಡಿ ಪಾಲಾಗಲು ಬಿಡದೆ, ಹಸಿದವರಿಗೆ ವಿತರಿಸಲು ಅವಕಾಶ ನೀಡಿ ಎಂಬ ನಾಮಫಲಕದ ವಾಹನ ಈಗ ಅನೇಕ ಕಡೆ ಬಹು ಜನಪ್ರಿಯ. ಇದರ ಸಿಬ್ಬಂದಿ ಕಲ್ಯಾಣಮಂಟಪಗಳ ಬಳಿ ತೆರಳಿ ಅರಿವು ಮೂಡಿಸುವ ಕಾರ್ಯದಲ್ಲೂ ತೊಡಗಿದ್ದಾರೆ. ಕಲ್ಯಾಣಮಂಟಪಗಳ ಮಾಲೀಕರು ಕೂಡ ಈಗ ಸಮಾರಂಭ ಮಾಡುವವರ ಗಮನಕ್ಕೆ ತರುತ್ತಿದ್ದು, ಬಡವರಿಗೆ ಆಹಾರ ವಿತರಿಸಲು ನೆರವಾಗುತ್ತಿದ್ದಾರೆ.

            ಕಷ್ಟಪಟ್ಟು ಆಹಾರ ಬೆಳೆದ ರೈತನ, ಅಡುಗೆ ಮಾಡಿದ ಭಟ್ಟರ, ಅಡುಗೆ ಪದಾರ್ಥ ಕೊಂಡು ತಂದವರ ಶ್ರಮ, ಹಣ ವ್ಯರ್ಥವಾಗದೇ ಸದ್ಬಳಕೆಯಾಗಬೇಕು ಎಂಬುದೇ ಸೇವೆಯ ಉದ್ದೇಶ ಎನ್ನುವ ಶಿವಕುಮಾರ್: ತಯಾರಾದ ಆಹಾರ ಚರಂಡಿ ಪಾಲಾಗದೆ, ಹಸಿದವರ ಹೊಟ್ಟೆಗೆ ಸೇರಿದರೆ ಎಲ್ಲರ ಶ್ರಮ ಸಾರ್ಥಕವಾಗುತ್ತದೆ.

ವಿಳಾಸ:

ಆರ್.ಬಿ.ಶಿವಕುಮಾರ್,

ಸಹಕಾರಿ ಬಿಲ್ಡಿಂಗ್, ಭಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.

ಆಹಾರ ಉಳಿದರೆ

ಕರೆ ಮಾಡಬೇಕಾದ ಸಂಖ್ಯೆ:

ಫೋ: 080-23150195, 23200283,

ಮೊ: 9900568514, 9844358514

 

ವೆಂಕಟೇಶ್ ಕೆ., ನಿರಾತಂಕ

No comments:

Post a Comment