Monday, December 2, 2013

ಶರಣರು ನೀಡಿದ ಬೆಳಕು (ಸಮಾಜಶಾಸ್ತ್ರೀಯ-ಸಮಾಜಕಾರ್ಯದ ದೃಷ್ಟಿಯಿಂದ)

 

            ಪ್ರೊ|| ಎಚ್.ಎಂ. ಮರುಳಸಿದ್ಧಯ್ಯ ಅವರ ಶರಣರು ನೀಡಿದ ಬೆಳಕು ಕೃತಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, ಇವರ ವತಿಯಿಂದ ಬೆಳ್ಳಿ ಕಿರಣ ಮಾಲೆಯ ಮೂರನೆಯ ಕಿರಣವಾಗಿ ಹೊರ ಹೊಮ್ಮಿದೆ. ಇಲ್ಲಿಯವರೆಗೆ ಶರಣ ಸಾಹಿತ್ಯವನ್ನು ಶರಣರು, ಚಿಂತಕರು ಹಾಗೂ ವ್ಯಾಖ್ಯಾನಕಾರರು ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ನೆಲೆಗಳಲ್ಲಿ ಅರ್ಥೈಸಿಕೊಂಡಿದ್ದಾರೆ, ವ್ಯಾಖ್ಯಾನಿಸಿದ್ದಾರೆ ಹಾಗೂ ವಿಮರ್ಶಿಸಿದ್ದಾರೆ. ಆದರೆ ಈಗ ಪ್ರೊ|| ಮರುಳಸಿದ್ಧಯ್ಯ ಅವರು ಪುಸ್ತಕದಲ್ಲಿ ಶರಣ ಸಾಹಿತ್ಯವನ್ನು ಸಮಾಜಶಾಸ್ತ್ರ-ಸಮಾಜಕಾರ್ಯಗಳ ದೃಷ್ಟಿಯಿಂದ ಪುನರ್ವ್ಯಾಖ್ಯಾನಿಸಿದ್ದಾರೆ.

            ಪುಸ್ತಕದಲ್ಲಿ  ಶರಣರು ಪ್ರತಿಪಾದಿಸಿದ ಸಮಾಜ ದರ್ಶನ-ಸಮಾಜವಾದ, ಭಕ್ತಿಮಾರ್ಗ, ಕಾಯಕ-ದಾಸೋಹ, ಜಾತಿ, ಸ್ತ್ರೀ ಸಮಾನತೆ. ಪರಿಸರ ಪ್ರಜ್ಞೆ, ಅಂತರಂಗ-ಬಹಿರಂಗ, ಇವುಗಳ ಶುದ್ಧೀಕರಣ ಮುಂತಾದ ಹಲವು ವಿಚಾರಗಳ ಮೇಲೆ ಒಟ್ಟು 14 ಲೇಖನಗಳನ್ನು ಬರೆದಿದ್ದಾರೆ. ಪುಸ್ತಕದ ಕೊನೆಗೆ ಪ್ರೊ. ನಿರಂಜನ . ಗೋಕರ್ಣ ಅವರು ಆಂಗ್ಲಭಾಷೆಯಲ್ಲಿ ಬರೆದ ಭಕ್ತಿಯಾಂದೋಲನ ಮತ್ತು ಸಾಮಾಜಿಕ ಅಭ್ಯುದಯ ಲೇಖನವನ್ನು ಕನ್ನಡಕ್ಕೆ ಭಾಷಾಂತರಿಸಿಕೊಟ್ಟಿದ್ದಾರೆ. ಪ್ರೊ|| ಮರುಳಸಿದ್ಧಯ್ಯ ಅವರು ತಮ್ಮ ಚಿಂತನ-ಮಂಥನ-ಪುನರ್ ವ್ಯಾಖ್ಯಾನದ ಪ್ರಕ್ರಿಯೆಯಲ್ಲಿ ಶರಣ ಸಾಹಿತ್ಯದ ಪ್ರವರ್ತಕರಾದ ಅಲ್ಲಮಪ್ರಭು, ಬಸವಣ್ಣ, ಸಿದ್ಧರಾಮ, ಚನ್ನಬಸವಣ್ಣ, ಅಂಬಿಗರ ಚೌಡಯ್ಯ, ಮಾದರಸ, ಹಡಪದ ಅಪ್ಪಣ್ಣ, ಗಣದಾಸಿ ವೀರಣ್ಣ, ಚಂದಿಮರಸ, ಷಣ್ಮುಖಸ್ವಾಮಿ, ಮುಂತಾದವರ ವಚನಗಳನ್ನು ಬಳಸಿಕೊಂಡಿದ್ದಾರೆ. ಅದರಂತೆಯೇ ಶಿವಶರಣೆಯರಾದ ಅಕ್ಕಮಹಾದೇವಿ, ಉರಿಲಿಂಗಪೆದ್ದಿಯ ಪತ್ನಿ ಕಾಳವ್ವೆ, ಸಿದ್ಧಬುದ್ಧಯ್ಯನ ಪುಣ್ಯಸ್ತ್ರೀ ಕಾಳವ್ವೆ, ಆಯ್ದಕ್ಕಿ ಮಾರಯ್ಯ, ಸೂಳೆ ಸಂಕವ್ವೆ, ದುಗ್ಗಳೆ ಮುಂತಾದವರ ವಚನಗಳನ್ನು ಉದ್ಧರಿಸಿದ್ದಾರೆ.

            ಸಮಾಜಶಾಸ್ತ್ರಜ್ಞರಿಗೆ, ಸಮಾಜಕಾರ್ಯಕರ್ತರಿಗೆ ಸಮಾಜಕಾರ್ಯ ಶಿಕ್ಷಕ-ವಿದ್ಯಾರ್ಥಿ ವೃಂದಕ್ಕೆ ಮತ್ತು ಇನ್ನು ಮುಂತಾದವರಿಗೆ ತಿಳಿದಿರುವಂತೆ ಈಗ ನಾವು ನೋಡುತ್ತಿರುವ, ಅರ್ಥೈಸಿಕೊಂಡಿರುವ, ಅಳವಡಿಸಿಕೊಂಡಿರುವ, ಸಮಾಜಕಾರ್ಯದ ಪರಿಕಲ್ಪನೆಗಳು, ತತ್ತ್ವಾದರ್ಶಗಳು, ಮೌಲ್ಯಗಳು, ವಿಧಾನಗಳು, ಕಾರ್ಯ ವೈಖರಿ/ ಕಾರ್ಯಯೋಜನೆಗಳು, ಸಮಾಜಕಾರ್ಯಕರ್ತನಿಗೆ ಇರಬೇಕಾದ ಅರ್ಹತೆಗಳು, ಸಮಾಜಕಾರ್ಯದ ಗುರಿಗಮ್ಯಗಳು, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಹುಟ್ಟಿ ಅಮೆರಿಕಾದಲ್ಲಿ ಬೆಳೆದ ಚಿಂತನೆಗಳು ಮತ್ತು ವಿಧಾನಗಳು. ಇವು ಸಮಾಜೊ-ರಾಜಕೀಯ ಹಿನ್ನೆಲೆಯಲ್ಲಿ ರೂಪಗೊಂಡಂಥವುಗಳು. ಇಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೇ ಪ್ರಾಧಾನ್ಯತೆ. ವ್ಯಕ್ತಿಗತ ವಿಧಾನಕ್ಕೆ ಆದ್ಯತೆ. ಹಾಗಾಗೀ ಪ್ರಜಾಪ್ರಭುತ್ವ ಪದ್ಧತಿಯನ್ನು ಒಪ್ಪಿಕೊಳ್ಳಲಾಗಿದೆ. ಹಾಗೂ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

            ಇದೇ ಸಮಯದಲ್ಲಿ, ಐರೋಪ್ಯ ದೇಶಗಳಲ್ಲಿ (ರಷ್ಯಾ ಇತ್ಯಾದಿ) ಇದಕ್ಕೆ ತೀರಾ ಭಿನ್ನವಾದ, ಔದ್ಯೋಗಿಕ ಕ್ರಾಂತಿಯ ಹಿನ್ನೆಲೆಯಲ್ಲಿ, ಸಮಾಜವಾದಿ-ಸಮತಾವಾದಿ ಚಿಂತನಾಪ್ರವಾಹ ಹರಿದು ಬಂದಿದೆ. ಇಲ್ಲಿ ಬಂಡವಾಳಶಾಹಿ ಪದ್ಧತಿಗೆ ಹೆಚ್ಚಿನ ಆದ್ಯತೆಯಿಲ್ಲ. ಸಮಾಜೋ-ಆರ್ಥಿಕ ಚಿಂತನೆಗೆ ಆದ್ಯತೆಯನ್ನು ಕೊಡಲಾಗಿದೆ. ಚಿಂತನೆಯಲ್ಲಿ ವ್ಯಕ್ತಿ ನಗಣ್ಯ ಸಮುದಾಯವೇ ಗಣ್ಯ ಸಮುದಾಯಕ್ಕೇ ಪ್ರಧಾನ ಸ್ಥಾನ. ಎಲ್ಲಾ ಕ್ರಿಯೆಗಳಿಗೂ ಸಮುದಾಯವೇ ಕೇಂದ್ರ ಬಿಂದು. ಅಧಿಕಾರ ಕೇಂದ್ರೀಕರಣ ಆಡಳಿತ ಪ್ರಾಣ. ಹಿನ್ನೆಲೆಯಲ್ಲಿ ಸಮಾಜಕಾರ್ಯ ತನ್ನ ನೆಲೆಯನ್ನು ಕಂಡುಕೊಂಡಿದೆ.

            ಇವೆರಡಕ್ಕೂ ತೀರಾ ಭಿನ್ನವಾದ ಹಿನ್ನೆಲೆಯು ಪ್ರಾಚ್ಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದಲೂ ಇದೆ. ಸಂಸ್ಕೃತಿಪ್ರಧಾನ ಸಮಾಜದಲ್ಲಿ ಸಮಾಜೋ-ಧಾರ್ಮಿಕ-ಆಧ್ಯಾತ್ಮಿಕ ಚಿಂತನೆಯು ಬದುಕಿನ ಜೀವಾಳ ಆಯಿತು. ಜೀವನಶೈಲಿಯಲ್ಲಿ ವ್ಯಕ್ತಿ-ಸಮುದಾಯಗಳ ಸುವರ್ಣ ಮಾಧ್ಯಮಾವಾಗಿ, ಎರಡನ್ನೂ ಒಂದುಗೂಡಿಸುವ ಸಮೂಹಕ್ಕೆ ಪ್ರಾಧಾನ್ಯತೆ ದೊರೆಯಿತು. ಇದು ಇಲ್ಲಿನ ಸಮಾಜಕಾರ್ಯಕ್ಕೆ ಪ್ರಧಾನ ನೆಲೆಯನ್ನು ಒದಗಿಸಿತು. ಹಾಗಾಗಿ, ಕುಟುಂಬ-ಬಳಗಗಳು, ಕುಲ-ಜಾತಿಗಳು ಬದುಕಿನ ಮಾಧ್ಯಮಗಳಾದವು. ಗ್ರಾಮ ಪಂಚಾಯಿತಿಯೂ ಸಮೂಹ ರೂಪದಲ್ಲೇ ಕ್ರಿಯಾತ್ಮಕವಾಗಿರುವುದನ್ನು ಕಾಣುತ್ತೇವೆ. ಹಿನ್ನೆಲೆಯಲ್ಲಿ ಧಾರ್ಮಿಕ-ಆಧ್ಯಾತ್ಮಿಕ ಸೂತ್ರಗಳ ಬೆಳಕಿನಲ್ಲಿ ಬದುಕು ರೂಪುಗೊಂಡು ಅನುಷ್ಠಾನಗೊಂಡಿದೆ.

            ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದಲ್ಲಿ ಪಾಶ್ಚಾತ್ಯರ ಲೌಕಿಕ ಸಂಸ್ಕೃತಿಯು ಪಾರಲೌಕಿಕ ಸಂಸ್ಕೃತಿಯ ಪ್ರಾಚ್ಯರ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿತುಆನಂತರ ಪ್ರಾಚ್ಯ ಸಮಾಜವು ಪ್ರಜಾಪ್ರಭುತ್ವ ಪದ್ಧತಿಯನ್ನು ಒಪ್ಪಿಕೊಳ್ಳುವಂತಾಯಿತು. ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ತ್ವಾತ್ಮಕ ಸಮಾಜವಾದಿ ಚಿಂತನೆಯು ಇತ್ತೀಚೆಗೆ ಸ್ವಾತಂತ್ರ್ಯಗಳಿಸಿದ ಪ್ರಾಚ್ಯ ರಾಷ್ಟ್ರಗಳಲ್ಲಿ ಹಬ್ಬಿತು. ಇದೇ ಚಿಂತನೆಯು ಸಮಾಜಕಾರ್ಯ ತಾತ್ತ್ವಿಕ ಸಿದ್ಧಾಂತಕ್ಕೂ ವ್ಯಾಪಿಸಿ, ಅದೊಂದು ತಾರಕವಾಯ್ತು ಎಂದು ಪ್ರೊ|| ಮರುಳಸಿದ್ಧಯ್ಯ ಅವರು ಅಭಿಪ್ರಾಯಪಡುತ್ತಾರೆ. ಇತ್ತೀಚೆಗೆ ಜಾಗತೀಕರಣ. ಬಂಡವಾಳ ಶಾಹೀ-ಉದಾರೀಕರಣ-ಖಾಸಗೀಕರಣ ಪ್ರಕ್ರಿಯೆಗಳ ಬೆಂಬಲದಿಂದ ಸಮಾಜವಾದಿ ಚಿಂತನೆಗೆ ಹಿನ್ನಡೆಯಾಗಿ ಪ್ರಜಾಪ್ರಭುತ್ವಕ್ಕೆ ಬಲಬರತೊಡಗಿತು. ದೈತ್ಯ ಸ್ವರೂಪದ ಅಂತಾರಾಷ್ಟ್ರೀಯ ಬಂಡವಾಳ ಸಂಸ್ಥೆಗಳು ಎಲ್ಲೆಲ್ಲೂ ರಾರಾಜಿಸುವಂತಾಯಿತು. ಇದರಿಂದ ಅನೂಚೀನವಾಗಿ ಬಂದ ಅಪೂರ್ವ ಜೀವನ ಪದ್ಧತಿಗಳು ಹಾಗೂ ಮೌಲ್ಯಗಳಿಗೆ ಧಕ್ಕೆ ಬಂದಿತು. ಪರಿಣಾಮವಾಗಿ ಅನೈತಿಕತೆ, ಭ್ರಷ್ಟತನ, ಅಶಿಸ್ತು, ವಿಸಂಘಟನೆ, ಮನೋ-ಸಾಮಾಜಿಕ ಸಮಸ್ಯೆಗಳು, ಕೌಟುಂಬಿಕ ಕಲಹಗಳು, ಜಾತೀಯತೆ, ಧಾರ್ಮಿಕ ತುಮುಲ, ಮತಾಂತರ, ಇತ್ಯಾದಿ ಸಂಕಷ್ಟಗಳು ಜಾಸ್ತಿಯಾದವು. ಸಮಾಜದ ಎಲ್ಲಾ ವರ್ಗ ಮತ್ತು ವಯೋಮಾನದವರನ್ನು ಇವು ಅತಿಯಾಗಿ ಕಾಡತೊಡಗಿದವು.

            ಇಂಥ ಸಂಧಿಗ್ಧ ಪರಿಸ್ಥಿತಿಯ ಇಂದಿನ ದಿನಗಳಲ್ಲಿ, ಇಂಥ ವಿಸಂಘಟನೆಗಳನ್ನು ನಿಯಂತ್ರಿಸುವ ಬದುಕಿನ ಸಮಸ್ಯೆಗಳನ್ನು ನಿವಾರಿಸುವ ಉತ್ತಮ ಸಾಮರಸ್ಯದಿಂದ ಬಾಳುವ ಒಂದು ಪರ್ಯಾಯ ಮಾರ್ಗವನ್ನು ಹುಡುಕಬೇಕಲ್ಲವೇ? ಎಂದು ತಮ್ಮಷ್ಟಕ್ಕೆ ತಾವೇ ಒಂದು ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ತಮ್ಮದೇ ಆದ ಉತ್ತರವನ್ನು ಕೊಡುತ್ತಾರೆ. ಇಂಥ ತುಡಿತಗಳಿಗೆ, ಕ್ಲೇಶಗಳಿಗೆ, ತಲ್ಲಣಗಳಿಗೆ, ದಿಗ್ಭ್ರಮೆಗಳಿಗೆ ಒಳಗಾದ ಆಧುನಿಕ ಸಮಾಜಕ್ಕೆ ಯೋಗ-ಆಧ್ಯಾತ್ಮಿಕತೆ ಬೆಳಕಿನ ಬೆಂಬಲವು ಬೇಕಾಗಿವೆ. ಇಂಥ ಸಂದರ್ಭದಲ್ಲಿಯೇ ಕರ್ನಾಟಕ ಶರಣರ (ಹಾಗೂ ದಾಸರ) ಕಾರ್ಯಾಲೋಚನೆಯು ಅತ್ಯಂತ ಸೂಕ್ತ ಸಾತ್ತ್ವಿಕ ಚಿಂತನೆಯಾಗಿರುತ್ತದೆ. ಎಂದು ಹೇಳುತ್ತಾರೆ.

            ಹಿನ್ನೆಲೆಯಲ್ಲಿ ಭಕ್ತಿಪಂಥವನ್ನು ಪರಾಂಬರಿಸಬೇಕಾಗಿದೆ. ಶರಣರ ಚಿಂತನೆಗಳನ್ನು, ಪರಿಕಲ್ಪನೆಗಳನ್ನು, ತತ್ತ್ವಾದರ್ಶಗಳನ್ನು ಕಾರ್ಯವೈಖರಿಯನ್ನು ಪರಿಶೀಲಿಸುವ ಕೆಲಸವಾಗಬೇಕು. ಅಂದರೆ ಶರಣರ ವಿಚಾರಧಾರೆಯನ್ನು ಸಮಾಜಶಾಸ್ತ್ರೀಯ-ಸಮಾಜಕಾರ್ಯದ ದೃಷ್ಟಿಯಿಂದ ವಿಶ್ಲೇಷಿಸಬೇಕು, ಅರ್ಥೈಸಿಕೊಳ್ಳಬೇಕು, ಪ್ರಾಮಾಣಿಕವಾಗಿ ಅಳವಡಿಸಿಕೊಳ್ಳಬೇಕು.

            ಸಾಮಾಜಿಕ ಸಂರಚನೆಯ ಅಸ್ತಿತ್ವ ಅದರ ಕ್ರಿಯಾತ್ಮಕತೆಯಲ್ಲಿದೆ. ಸಂರಚನೆ ಶರೀರವಾದರೆ ಕ್ರಿಯಾತ್ಮಕತೆ ಪ್ರಾಣ. ಅವು ಒಂದನ್ನೊಂದು ಬಿಟ್ಟಿರುವುದಿಲ್ಲ. ಸಂರಚನೆ ಮತ್ತು ಕ್ರಿಯಾತ್ಮಕತೆ ಒಂದು ನಾಣ್ಯದ ಎರಡು ಮಗ್ಗಲುಗಳಿದ್ದಂತೆ. ಒಂದರಿಂದ ಇನ್ನೊಂದನ್ನು ಬಿಡಿಸಲಾಗುವುದಿಲ್ಲ. ಕ್ರಿಯಾತ್ಮಕತೆ ಪ್ರಭಾವ ಪೂರ್ಣವಾಗಬೇಕಾದರೆ, ಅದಕ್ಕೆ ಒಂದು ಒಳ್ಳೆಯ ಸಾಮಾಜಿಕ ಸಂರಚನೆಯ ಹಿನ್ನೆಲೆಯಿರಬೇಕಾಗುತ್ತದೆ. ಅದರಂತೆಯೇ ಸಂರಚನೆ ಅರ್ಥಪೂರ್ಣವಾಗಬೇಕಾದರೆ ಅದು ಮೌಲ್ಯಯುತ ಕ್ರಿಯಾತ್ಮಕತೆಯನ್ನು ಅವಲಂಬಿಸಬೇಕಾಗುತ್ತದೆ. ಇದು ಪಾರಸ್ಪರಿಕ ಕಾರಣ-ಪರಿಣಾಮಗಳ ಪ್ರಕ್ರಿಯೆಗೆ ಒಳಗಾಗುತ್ತವೆ. ಹಿನ್ನೆಲೆಯಲ್ಲಿ ಶರಣ ಸಾಹಿತ್ಯವನ್ನು, ದಾಸ ಸಾಹಿತ್ಯವನ್ನು, ಒಟ್ಟಾರೆ ಭಕ್ತಿಸಾಹಿತ್ಯವನ್ನು, ಅರ್ಥೈಸಿಕೊಳ್ಳಲಾಗಿದೆ.

            ಶರಣರು ಮಾನವ ಸಮಾಜದ ಓರೆಕೊರೆಗಳನ್ನು ಆಳವಾಗಿ ಅದರಲ್ಲೂ ಆನುಭವಿಕ ನೆಲೆಯಲ್ಲಿ ಅರಿತುಕೊಂಡು ಅದನ್ನು ಹೋಗಲಾಡಿಸಲು, ಇಡೀ ವಿಶ್ವದ ಲೇಸಿನ ಉದ್ದೇಶವನ್ನು ಇರಿಸಿಕೊಂಡು ನವ ಸಮಾಜ ನಿರ್ಮಾಣದ ಬೆಳಕಿನಲ್ಲಿ ಹಾದಿಯನ್ನು ತೋರಿಸಿದರು. ಪ್ರೊ|| ಮರುಳಸಿದ್ಧಯ್ಯ ಅವರು ಶರಣ ಸಾಹಿತ್ಯದ ಪರಿಕಲ್ಪನೆಗಳಾದ ಸಮಾನತೆ, ಕಾಯಕ, ದಾಸೋಹ, ಮಹಿಳಾ ಸ್ವಾತಂತ್ರ್ಯ-ಸಮಾನತೆ, ಅಂತರಂಗ-ಬಹಿರಂಗ ಸಾಮರಸ್ಯ ಮತ್ತು ಶುದ್ಧಿ, ಅಸ್ಪೃಶ್ಯತೆಯ ನಿವಾರಣೆ, ನಡೆ-ನುಡಿಗಳ ಅವಿನಾಭಾವ ಮುಂತಾದ ಮೌಲ್ಯಗಳನ್ನು ಸಮಾಜಕಾರ್ಯ ದೃಷ್ಟಿಕೋನದಿಂದ ಚರ್ಚಿಸಿದ್ದಾರೆ.

 

ಶರಣರು ಪ್ರತಿಪಾದಿಸಿದ ಸಮಾಜ

            ಶರಣರ ಚಿಂತನೆಗಳನ್ನು, ಕಾರ್ಯಕ್ಷೇತ್ರಗಳನ್ನು ಹಾಗೂ ಮಾರ್ಗೋಪಾಯಗಳನ್ನು ಗಮನಿಸಿದಾಗ, ಅವರು ಪ್ರತಿಪಾದಿಸಿದ ಸಾಮಾಜಿಕ ವ್ಯವಸ್ಥೆಯ ಅರಿವು ನಮಗಾಗುತ್ತದೆ. ಇದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ವಚನ ಸಾಹಿತ್ಯವನ್ನು ಕೇವಲ ಸಾಹಿತ್ಯದ ಮಾಪನಗಳಿಂದ ಅಳೆಯದೆ, ಅದನ್ನು ಮಾನವನಿಗೆ ಬೆಳಕಿನ ದಾರಿಯನ್ನು ಕಾಣಿಸಲು ನಿಲ್ಲಿಸಿರುವ ತೋರುಗಂಬ ಅಥವಾ ಕೈ ಹಿಡಿದು ನಡೆಸುವ ಊರುಗೋಲು, ಎಂದು ಅರ್ಥೈಸಬೇಕೆನ್ನುತ್ತಾರೆ. ಶರಣರು ಸಮಾನತೆಯ ಸಮಾಜವನ್ನು ಸಂಕಲ್ಪಸಿದರು ಮತ್ತು ಅದಕ್ಕಾಗಿ ದುಡಿದರು. ಹಿಂದಿನ ಸಂನ್ಯಾಸಿಗಳ ಮತ್ತು ಚಿಂತಕರ ಅಭಿಪ್ರಾಯಗಳಿಗೆ ವಿರುದ್ಧವಾಗಿ ಸಾಮಾಜಿಕ ಅಥವಾ ಲೌಕಿಕ ಜೀವನವನ್ನು ಪ್ರೀತಿಸಬೇಕೆಂದು ವಾದಿಸಿದರು. ಇಲ್ಲಿನ ಜೀವನಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟರು. ಸಮಾಜದಲ್ಲಿ ಎಲ್ಲರೂ ಸಮಾನರು, ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೂ ದುಡಿಯಬೇಕು ಮತ್ತು ಅದರ ಫಲ ಎಲ್ಲರಿಗೂ ಸಿಗಬೇಕು. ಧರ್ಮದಿಂದ ಶೋಷಣೆ ನಿಲ್ಲಬೇಕು ಗುರಿ ಮತ್ತು ಸಾಧನಾಮಾರ್ಗ ಎರಡೂ ಸತ್ಯವೂ ಶುದ್ಧವೂ ಆಗಿರಬೇಕು. ಇದರಿಂದ ವ್ಯಕ್ತಿತ್ವ ವಿಕಾಸವಾಗುವುದರ ಜೊತೆಗೆ ಸಕಲ ಜೀವಾತ್ಮರಿಗೆ ಲೇಸೂ ಆಗುತ್ತದೆ. ಶರಣರು ಇಲ್ಲಿನ ಜೀವನಕ್ಕೆ ಪ್ರಾಶಸ್ತ್ಯ ನೀಡುವುದರ ಜೊತೆಗೆ, ಇಲ್ಲಿ ಸಲ್ಲುವ ಹಾಗೆ ನಡೆಯಬೇಕೆಂದು ನುಡಿದರು ಮತ್ತು ನಡೆದು ತೋರಿಸಿದರು. ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುವನು ಎಂದು ಹೇಳಿದುದು ಹಿನ್ನೆಲೆಯಲ್ಲಿಯೇ ಹಿಂದಿನಿಂದ ನಡೆದುಕೊಂಡು ಬಂದ ಕೇಂದ್ರೀಕರಣ ಧರ್ಮಾಚರಣೆ ಮತ್ತು ಪೂಜಾಪದ್ಧತಿಗಳನ್ನು ಬಿಟ್ಟುಕೊಟ್ಟು, ಪ್ರತಿಯೊಬ್ಬರೂ ತಮ್ಮ ಇಷ್ಟಲಿಂಗವನ್ನು ಪೂಜಿಸಲು ಅವಕಾಶ ಮಾಡಿಕೊಡುವುದರ ಮೂಲಕ ವಿಕೇಂದ್ರೀಕರಣ ಧಾರ್ಮಿಕಾಚರಣೆಯನ್ನು ಜಾರಿಗೆ ತಂದರು. ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಿದರು. ವ್ಯಕ್ತಿಯ ಗೌರವವನ್ನು ಎತ್ತಿ ಹಿಡಿದರು. ಲಿಂಗ, ವಯಸ್ಸು, ಕಸುಬು, ಜಾತಿ, ಪ್ರದೇಶ ಇವುಗಳಲ್ಲಿ ಯಾವುದೂ ವ್ಯಕ್ತಿಯನ್ನು ಮೇಲಾಗಿಸದು ಅಥವಾ ಕೀಳಾಗಿಸದು. ವ್ಯಕ್ತಿಯು ತನ್ನ ವಿಚಾರ-ಆಚಾರಗಳಿಂದ ಭವಿ ಅಥವಾ ಭಕ್ತನಾಗುತ್ತಾನೆ. ವ್ಯಕ್ತಿಗಳು ತಮ್ಮ ನಿರ್ಮಲ ಚಿತ್ತದಿಂದ ನಡೆದುಕೊಳ್ಳುವುದಕ್ಕೆ ಶರಣರು ಆದ್ಯತೆಯನ್ನು ಕೊಟ್ಟರು. ಅಸ್ಪೃಶ್ಯತೆಯನ್ನು ತೊಡೆದುಹಾಕುವಲ್ಲಿ ಬಸವಣ್ಣನವರ ಪಾತ್ರ ತುಂಬಾ ದೊಡ್ಡದು. ಸಮಾಜದ ಕೆಳಸ್ತರದಲ್ಲಿದ್ದ ಹೊಲೆಯರನ್ನು, ಮಾದಿಗರನ್ನು ಸಮಾನವಾಗಿ ಕಂಡರು. ಅವರು ಮಾಡುವ ಕೆಲಸವೂ ತುಂಬಾ ಮೌಲ್ಯಯುತವಾದದ್ದೆಂದು ಪ್ರತಿಪಾದಿಸಿದರು. ಮಾನವತೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟರು.

            ಬಸವಣ್ಣನವರು ಪ್ರತಿಪಾದಿಸಿದ ಮತ್ತು ಆಚರಣೆಗೆ ತಂದ ಇನ್ನೊಂದು ಮೌಲ್ಯ ಸ್ತ್ರೀ ಸಮಾನತೆ. ಅವರ ಪ್ರಕಾರ ಸ್ತ್ರೀ ಮಹಾದೇವಿ. ಆಕೆ ಯಾವ ಪಾತ್ರವನ್ನಾದರೂ ನಿಭಾಯಿಸಲು ಯೋಗ್ಯಳು. ಪೂಜೆ ಮಾಡುವುದರಲ್ಲಿ ಆಕೆಗೂ ಸಮಾನ ಹಕ್ಕಿದೆ. ಆಕೆ ಇಷ್ಟಲಿಂಗವನ್ನು ಧರಿಸಲು ಅರ್ಹಳು. ಅವಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಹೆಣ್ಣು ಸಹಜ ಜೀವನಕ್ಕೆ ಅತ್ಯಗತ್ಯವಾದ ಸಹಜೀವಿಯೆಂದು ಒಪ್ಪಿಕೊಂಡರು. ಇವರ ಮನೋಭೂಮಿಕೆ ಜನ ಸಾಮಾನ್ಯರ ಮೇಲೆ ತುಂಬಾ ಪ್ರಭಾವ ಬೀರಿತು. ಸ್ತ್ರೀಯರು ತಮ್ಮ ಪಾತ್ರಗಳನ್ನು ವಹಿಸಲು, ಸ್ವತಂತ್ರವಾಗಿ ಆಲೋಚಿಸಲು, ಇಷ್ಟಲಿಂಗವನ್ನು ಧರಿಸಲು ಅವಕಾಶವಾಯಿತು. ಇದರಿಂದ ಸಮಾಜದಲ್ಲಿ ಒಂದು ಹೊಸ ವಾತಾವರಣ ಸೃಷ್ಟಿಯಾಯಿತು.

            ಶರಣ ಸಾಹಿತ್ಯದ ಇನ್ನೆರಡು ಬಹುದೊಡ್ಡ ಕೊಡುಗೆಗಳೆಂದರೆ ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳು. ಕಾಯಕ ಎಂದರೆ ಬರೀ ಕೆಲಸವಲ್ಲ; ದಾಸೋಹ ಎಂದರೆ ಕೇವಲ ಹಂಚುವಿಕೆಯಲ್ಲ. ಪರಿಕಲ್ಪನೆಗಳನ್ನು ಸಮಾಜಶಾಸ್ತ್ರ-ಸಮಾಜಕಾರ್ಯ ದೃಷ್ಟಿಯಿಂದ ಪರಿಶೀಲಿಸುವ ಅಗತ್ಯವನ್ನು ಪ್ರೊ|| ಮರುಳಸಿದ್ಧಯ್ಯ ಅವರು ಕಂಡುಕೊಂಡಿದ್ದಾರೆ. ಅದರಂತೆ ಪರಿಕಲ್ಪನೆಗಳನ್ನು ದೃಷ್ಟಿಯಿಂದ ವ್ಯಾಖ್ಯಾನಿಸಿದ್ದಾರೆ.

            ಕಾಯಕ:- ಶಬ್ದವು ಕಾಯ ಶಬ್ದದಿಂದ ಉತ್ಪನ್ನವಾಗಿದ್ದರೂ ಅದು ಮನಸ್ಸಿನ ಆಯಾಮವನ್ನೂ ಪಡೆದಿದೆ. ಅಂತರಂಗದಲ್ಲಿ ಅರಿವಾದುದೇ ಬಹಿರಂಗದಲ್ಲಿ ಕ್ರಿಯೆಯಾಗುತ್ತದೆ. ಆದುದರಿಂದ ಮಾನಸಿಕ ಕ್ರಿಯೆಯ ಮತ್ತು ಶಾರೀರಿಕ ಕ್ರಿಯೆಯ ಪ್ರಕಟರೂಪವೇ ಕಾಯಕ. ಅದು ಲಿಂಗ, ಜಾತಿ, ಮತ, ಸ್ಥಳ, ಕ್ರಿಯಾಪ್ರಕಾರ ಇತ್ಯಾದಿಗಳಿಂದ ಪ್ರೇರಿತವಾಗಿರಬಾರದು. ಆದರೆ ಅದು ಸತ್ಯ ಮತ್ತು ಶುದ್ಧವಾಗಿರಬೇಕು. ಅದು ಯಾವುದೇ ರೂಪದಲ್ಲಿರಬಹುದು. ಅಂದರೆ ಎಲ್ಲಾ ವೃತ್ತಿಗಳೂ ಸಮಾನವೇ. ಯಾವುದೂ ಹೆಚ್ಚಲ್ಲ. ಯಾವುದೂ ಕಡಿಮೆ ಅಲ್ಲ.

            ಕಾಯಕ ಪರಿಕಲ್ಪನೆಯ ಉಪಯೋಗ ಹಲವಾರು. ಕಾಯಕದಿಂದ ದೇಹಕ್ಕೆ ಶಕ್ತಿ. ಮನಸ್ಸಿಗೆ ಆನಂದ, ಆತ್ಮಕ್ಕೆ ತೃಪ್ತಿ, ಸಮಾಜಕ್ಕೆ ಸಂಪತ್ತು ದೊರೆಯುತ್ತದೆ. ಕಾಯಕವು ದೇಹ ಮತ್ತು ಮನಸ್ಸುಗಳ ಮಾಲಿನ್ಯವನ್ನು ತೊಳೆಯುತ್ತದೆ. ಕಾಯಕ ವ್ಯಕ್ತಿಯ ಏಕಾಗ್ರತೆ ಮತ್ತು ಶ್ರದ್ಧೆಯನ್ನು ಹೆಚ್ಚಿಸುತ್ತದೆ. ಕಾಯಕದಲ್ಲಿ ತೊಡಗುವವನು ಆಸ್ತೇಯನಾಗಿರಬೇಕು, ಆಶಾರಹಿತನಾಗಿರಬೇಕು. ಇದು ಪ್ರತಿಯೊಬ್ಬ ಶರಣನ ನಂಬಿಕೆ. ಇದು ಒಬ್ಬ ಶರಣನಿಗೆ ಹೇಗೆ ಮೌಲ್ಯವೋ ಹಾಗೆ ಇತರರಿಗೂ. ಸಮಾಜಕಾರ್ಯಕರ್ತನು ಹಿನ್ನೆಲೆಯಲ್ಲಿ ಕಾಯಕವನ್ನು ಅರ್ಥೈಸಿಕೊಳ್ಳಬೇಕು.

            ದಾಸೋಹ:- ಕಾಯಕ ಒಂದು ಗುರಿಯೂ ಹೌದು ಹಾಗೆಯೇ ಅದು ಒಂದು ಸಾಧನ ಮಾರ್ಗವೂ ಹೌದು. ಸಾಧನೆಯಿಂದ ಬಂದ ಫಲವನ್ನು ಎಲ್ಲರೊಡನೆ ಹಂಚಿಕೊಂಡು ಬದುಕುವುದು ವ್ಯಕ್ತಿಯ ದೃಷ್ಟಿಯಿಂದಲೂ, ವೃಂದದ ದೃಷ್ಟಿಯಿಂದಲೂ ಹಾಗೆಯೇ ಸಮಾಜದ ದೃಷ್ಟಿಯಿಂದಲೂ ಹಿತವಾದದ್ದು ಮತ್ತು ಆವಶ್ಯಕವಾದದ್ದು. ಒಟ್ಟಾಗಿ ದುಡಿದು ಎಲ್ಲರೂ ಹಂಚಿಕೊಂಡು ಬಾಳುವ, ವೇದಕಾಲದ ಸಂಸ್ಕೃತಿಯ ಪರಿಕಲ್ಪನೆಯ ಇನ್ನೊಂದು ರೂಪವೇ ದಾಸೋಹ. ಇಲ್ಲಿ ತಾನು ದುಡಿದೆನೆಂಬ ಹೆಮ್ಮೆಯಿಲ್ಲ; ತಾನು ಹಂಚಿದೆನೆಂಬ ಅಹಂಭಾವವೂ ಇಲ್ಲ; ತಾನು ದುಡಿದು ಇತರರಿಗೆ ಹಂಚಿ ಸಂತೋಷಪಡುವುದು ಧನ್ಯತಾ ಭಾವವನ್ನು ತಂದುಕೊಡುತ್ತದೆ. ಕಾಯಕ ಮಾಡುವಾಗ ಅದು ಸತ್ಯ ಮತ್ತು ಶುದ್ಧವಾಗಿರಬೇಕು ಎಂಬುದರ ಕಡೆ ಗಮನವಿರಬೇಕು. ಅದರಂತೆಯೇ ಅದನ್ನು ನೀಡುವಾಗ, ಅಂದರೆ ದಾಸೋಹದ ಪ್ರಕ್ರಿಯೆಯಲ್ಲಿ ತೊಡಗಿಕೊಂಡಾಗ ಅದು ನಿಜವಾಗಿರಬೇಕು, ಪ್ರಾಮಾಣಿಕವಾಗಿರಬೇಕು. ಹಾಗಾಗದಿದ್ದರೆ, ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ ಎಂಬಂತಾಗುತ್ತದೆ. ಕಾಯಕ ಮತ್ತು ದಾಸೋಹಗಳಲ್ಲಿ ತೊಡಗಿಕೊಂಡಾಗ ತಮ್ಮ ಕೃತಿಯಲ್ಲಿ ಮತ್ತು ಮಾತಿನಲ್ಲಿ ತಲ್ಲೀನತೆ ಮತ್ತು ಸಹಜತೆಗಳು ಮೇಳೈಸಿಕೊಂಡಿರಬೇಕು.

            ಕಾಯಕ ಮತ್ತು ದಾಸೋಹ ಪರಿಕಲ್ಪನೆಗಳಿಂದ ವ್ಯಕ್ತಿಯ ಮನಸ್ಸು ಪಕ್ವವಾಗುತ್ತದೆ. ಅವನು ನಿಃಸ್ವಾರ್ಥಿಯಾಗುತ್ತಾನೆ. ಇಂಥ ವ್ಯಕ್ತಿಗಳಿಂದ ಕುಟುಂಬ ಮತ್ತು ಸಮುದಾಯಗಳು ನಿಃಸ್ವಾರ್ಥಿ ಕುಟುಂಬ ಮತ್ತು ಸಮುದಾಯಗಳಾಗುವುದರ ಜೊತೆಗೆ, ಇಂಥ ವಾತಾವರಣವು ಒಂದು ಸಮಸ್ಯಾರಹಿತ ಸಮಾಜವನ್ನು ಕಟ್ಟಲು ಸಾಧ್ಯವಾದೀತು. ಸಮಸ್ಯಾರಹಿತ ಸಮಾಜವು ಸಮಾಜಕಾರ್ಯಕರ್ತನ ಗುರಿಗಳಲ್ಲಿ ಒಂದು ಎಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳುವುದು ಅವಶ್ಯ.           

            ಶರಣಸಾಹಿತ್ಯವು ಅಂತರಂಗ ಹಾಗೂ ಬಹಿರಂಗಗಳ ಶುದ್ಧಿಯನ್ನು ಅಪೇಕ್ಷಿಸುತ್ತದೆ. ಅಂತರಂಗವು ಭಾವನೆಯ, ಕಲ್ಪನೆಯ, ಮಾನಸಿಕ ವಸ್ತು, ಕಾಣದೆ ಇರುವಂತಹುದು. ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದ್ದು ಬಹಿರಂಗವೆಂಬುದು ಮೂರ್ತ ಸ್ವರೂಪದ್ದು. ಕರ್ಮೇಂದ್ರಿಯಗಳಿಗೆ ಸಂಬಂಧಿಸಿದ್ದು. ಮೊದಲನೆಯದನ್ನು ಎರಡನೆಯದರ ಮುಖಾಂತರ ನೋಡಬಹುದಾಗಿದೆ. ಇವೆರಡೂ ಒಂದೇ ಪ್ರಕ್ರಿಯೆಯ ಬೇರೆ ಬೇರೆ ಅಂಶಗಳು, ಬೇರೆ ಬೇರೆ ಹಂತಗಳು. ಅಂತರಂಗ-ಬಹಿರಂಗ ಶುದ್ಧಿ ಒಬ್ಬ ಶರಣನಿಗೆ ಹೇಗೆ ಆವಶ್ಯಕವೊ ಹಾಗೆಯೇ ಒಬ್ಬ ಸಮಾಜಕಾರ್ಯಕರ್ತನಿಗೂ ಆವಶ್ಯಕವಾಗುತ್ತದೆ. ಹೀಗೆ ಅಂತರಂಗ-ಬಹಿರಂಗ ಶುದ್ಧಿಯುಳ್ಳ ವ್ಯಕ್ತಿಗಳು ಆಯಾ ಸಮುದಾಯದ-ಸಮಾಜದ ಆಸ್ತಿಯಾಗಿರುತ್ತಾರೆ. ಇಂಥವರಿಂದ ಕೂಡಿದ ಸಮಾಜವು ಒಂದು ಮಧುರ ಬಾಂಧವ್ಯವುಳ್ಳ ಮತ್ತು ಸಮಸ್ಯಾರಹಿತ ಸಮಾಜವನ್ನು ರೂಪಿಸಲು ಸಹಕಾರಿಯಾಗುತ್ತದೆ.

            ಬಸವಣ್ಣನವರು ಪ್ರತಿಪಾದಿಸಿದ ಸಾಮಾಜಿಕ ಮೌಲ್ಯಗಳಾದ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಇತ್ಯಾದಿಗಳನ್ನು ಪ್ರೊ|| ಮರುಳಸಿದ್ಧಯ್ಯ ಅವರು ಸಮಾಜಶಾಸ್ತ್ರ-ಸಮಾಜಕಾರ್ಯ ಮಾನದಂಡಗಳಿಂದ ಹೊಸದಾಗಿ ಅರ್ಥೈಸಿದ್ದಾರೆ. ಪ್ರತಿಯೊಂದು ಪರಿಕಲ್ಪನೆ ಅಥವಾ ಮೌಲ್ಯಗಳನ್ನು ಪುನರ್ವಿಮರ್ಶೆಗೆ ಒಳಪಡಿಸಿ ಸಮಾಜಕಾರ್ಯದ ದೃಷ್ಟಿಯಿಂದ ಅವುಗಳಿಗೆ ಹೊಸ ಅರ್ಥವನ್ನು ಹಾಗೂ ಹೊಸ ಆಯಾಮವನ್ನು ತಂದು ಕೊಟ್ಟಿದ್ದಾರೆ. ಅಂತರಂಗವನ್ನು ಕಲುಷಿತಗೊಳಿಸಲು ಪ್ರೇರಕಗಳಾದ ಅರಿಷಡ್ವರ್ಗಗಳು, ಅಷ್ಟ ಮದಗಳು, ಅಷ್ಟ ಮಲಗಳು, ಮಲತ್ರಯಗಳು, ಈಷಣ ತ್ರಯಗಳು, ಇತ್ಯಾದಿಗಳನ್ನು ಪ್ರಯತ್ನಪೂರ್ವಕವಾಗಿ ಜಯಿಸಿ, ಅಂತರಂಗವನ್ನು ಶುದ್ಧೀಕರಿಸಿಕೊಂಡು, ಅಷ್ಟಾವರಣ-ಷಟ್ಸ್ಥಳ-ಪಂಚಾಚಾರ ಮುಂತಾದ ಸಂಪ್ರದಾಯ/ಆಚಾರಗಳ ಜೊತೆಗೆ ಕಾಯಕ-ದಾಸೋಹ ತತ್ತ್ವಗಳನ್ನು ಅಳವಡಿಸಿಕೊಂಡ ಮೇಲೆ ಏರುತ್ತಾ ಹೋಗಬೇಕು. ಸಾಧನಾ ಮಾರ್ಗದ ಉದ್ದೇಶ ಕೊನೆಗೆ ಶೂನ್ಯವನ್ನು ಗಳಿಸುವುದು. ಅಂದಾಗ ಮಾತ್ರ ಸಮಾಜವಾದ-ಸಮತಾವಾದದ ಹಿನ್ನೆಲೆಯಲ್ಲಿ ಶರಣರ ಆದರ್ಶ ವರ್ತನೆ, ಅನುಭವ, ಶೂನ್ಯ ಸಂಪಾದನೆಯ ಜೊತೆಗೆ ಸಮಾಜದಲ್ಲಿ ಒಂದು ಸಾಮರಸ್ಯ ತರುವಲ್ಲಿ ಸಹಕಾರಿಯಾಗುತ್ತದೆ. ಸಾಮರಸ್ಯ ಸಮಾಜಕಾರ್ಯಕರ್ತನು ಅಪೇಕ್ಷಿಸುವ ಆದರ್ಶಗಳಲ್ಲಿ ಒಂದು. ಇದರಂತೆ ಭಕ್ತನಾದವನು ಇರಬೇಕಾದ ಪರಿಯನ್ನು ಶರಣರು ಪ್ರತಿಪಾದಿಸಿದ್ದಾರೆ. ಭಕ್ತನು ಶಾಂತನಾಗಿರಬೇಕು, ಸತ್ಯನಾಗಿರಬೇಕು, ಹಿತವಚನವನುಡಿಯಬೇಕು, ನಿಂದನಾರಹಿತನಾಗಿರಬೇಕು, ಸಕಲ ಪ್ರಾಣಿಗಳನ್ನು ತನ್ನಂತೆ ಭಾವಿಸಬೇಕು, ಸಕಲರ ಲೇಸಿಗೆ ತನುಮನ ಧನವ ಸವೆಸಬೇಕು, ಅಪಾತ್ರ ದಾನ ಮಾಡಬಾರದು, ಇಂದ್ರಿಯಗಳನ್ನು ವಶಮಾಡಿಕೊಳ್ಳಬೇಕು, ಇತ್ಯಾದಿ., ಗುಣಗಳು ಭಕ್ತನಿಗಷ್ಟೇ ಅಲ್ಲ, ಎಲ್ಲರಿಗೂ, ಅದರಷ್ಟೇ ಮುಖ್ಯವಾಗಿ ಸಮಾಜಕಾರ್ಯಕರ್ತನಿಗೂ ಅನ್ವಯವಾಗುವಂಥವುಗಳೇ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

            ಪುಸ್ತಕದಲ್ಲಿ ಶರಣ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಸಿದ್ಧರಾಮನ ಬಗ್ಗೆ ಒಂದು ಪ್ರಬಂಧವಿದೆ. ವಚನ ಸಾಹಿತ್ಯದಲ್ಲಿ ಸಿದ್ಧರಾಮನನ್ನು ಒಬ್ಬ ಕರ್ಮಯೋಗಿಯೆಂದೇ ಪರಿಗಣಿಸಲಾಗಿದೆ. ಇವನು ಶರಣರ ತತ್ತ್ವಾದರ್ಶಗಳನ್ನು ಪ್ರತಿಪಾದಿಸಿರುವುದರ ಜೊತೆಗೆ, ವಚನಗಳನ್ನು ಬರೆಯುವುದರ ಜೊತೆಗೆ, ಕೆರೆ-ಗುಡಿಗಳನ್ನು ಕಟ್ಟಿಸುವ, ಸಾಮೂಹಿಕ ವಿವಾಹಗಳನ್ನು ಮಾಡಿಸುವ, ಇನ್ನೂ ಮುಂತಾದ ಜನಹಿತ ಕಾರ್ಯಗಳನ್ನು ಮಾಡಿದ್ದಾನೆಂದು ಪ್ರತೀತಿಯಿದೆ. ಹೀಗಾಗಿ ಅವನ ಸಾಹಿತ್ಯದಲ್ಲಿಯೂ ಅವನ ಅನುಭವಗಳನ್ನು ಕಾಣಬಹುದಾಗಿದೆ. ಸಮಾಜದ ಅಭ್ಯುದಯಕ್ಕೆ ಉಪಯೋಗವಾಗುವ ಕೆಲಸಗಳನ್ನು ಮಾಡಿದ್ದನ್ನು ನೋಡಬಹುದಾಗಿದೆ. ಇವು ಒಬ್ಬ ಸಮಾಜಕಾರ್ಯಕರ್ತನಿಗೆ ಒಂದು ಆದರ್ಶವನ್ನು ಒದಗಿಸುವುದರ ಜೊತೆಗೆ ಒಂದು ಮೌಲ್ಯಯುತ ಹಿನ್ನೆಲೆಯನ್ನು ಒದಗಿಸಿದಂತಾಗಿದೆ.

            ಅದರಂತೆಯೇ, ಉರಿಲಿಂಗಪೆದ್ದಿಯ ಹೆಂಡತಿ ಶಿವಶರಣೆ ಕಾಳವ್ವೆಯ ಬಗ್ಗೆಯೂ ಒಂದು ಲೇಖನವಿದೆ. ಕಾಳವ್ವೆ ಇವರು ಮೂಲತಃ ಶೂದ್ರ ಹಿಂದುಳಿದ ಜಾತಿಗೆ ಸೇರಿದವರು. ಹಾಗಾಗಿ ಇತರ ಹಿಂದುಳಿದ ಜಾತಿಯವರಂತೆ ಇವರೂ ತುಳಿತಕ್ಕೆ ಒಳಗಾಗಿರುತ್ತಾರೆ. ಕಾರಣದಿಂದ ಭಾರತೀಯ ವೈದಿಕ ಸ್ತರವಿನ್ಯಸ್ಥ ಸಮಾಜವನ್ನು ತನ್ನ ಕಟು ನುಡಿಗಳಿಂದ ಟೀಕಿಸಿದ್ದಾಳೆ. ವರ್ಣ-ಜಾತಿಗಳು, ಆಶ್ರಮ ವಯೋ ಅವಸ್ಥೆಗಳು, ಲಿಂಗ ಸ್ಥಾನ-ಮಾನಗಳು, ಗುಣಾವಗುಣಗಳು, ಪುರುಷಾರ್ಥಗಳು, ಇತ್ಯಾದಿಗಳನ್ನು ತಮ್ಮ ಸಾಹಿತ್ಯ ವಸ್ತುವನ್ನಾಗಿಸಿಕೊಂಡು ಶರಣರು ವಚನಗಳನ್ನು ರಚಿಸಿದ್ದಾರೆ. ವರ್ಣ ವ್ಯವಸ್ಥೆಯನ್ನು ಮುಂದಿಡುತ್ತಾರೆ. ಅವರ ನಿಲುವುಗಳನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ಎಲ್ಲರೂ ಸಮಾನರು, ಸರಿಯಾದ ಕ್ರಮದಲ್ಲಿ ನಡೆಯುವವನೇ ಭಕ್ತ, ಶಿವನೇ ಏಕೈಕ ದೈವ, ವ್ರತವೇ ಜೀವನಾಡಿ, ಕರ್ಮಠ ಬ್ರಾಹ್ಮಣನ ನಡತೆಯು ತ್ಯಾಜ್ಯ, ಶರಣಪಥಕ್ಕೆ ವಿರುದ್ಧವಾದ ಕ್ರಮ ಖಂಡನಾರ್ಹ, ವರ್ಣ-ಜಾತಿ ಹುಟ್ಟುವಿಕೆಗೆ ಮತ್ತು ಸಂಪೋಷಣೆಗೆ ವೈದಿಕ ಧರ್ಮವೇ ಕಾರಣ, ಇತ್ಯಾದಿ., ಕಾಳವ್ವೆಯ ವಚನಗಳಲ್ಲಿ ಪರಿಶುದ್ಧ ನಡತೆಗೆ ಮಾನ್ಯತೆಯಿದೆ. ಅವರ ಭಾಷೆ ಒರಟು, ಅಸಹ್ಯ, ಆದರೆ ಅವರ ವಚನಗಳಲ್ಲಿಯ ಆಶಯವನ್ನು ಗಮನಿಸಬೇಕೇ ಹೊರತು ಅವರ ಕಠೋಕ್ತಿಯನ್ನಲ್ಲ, ಎಂದು ಪ್ರೊ|| ಮರುಳಸಿದ್ಧಯ್ಯ ಅವರು ಹೇಳುತ್ತಾರೆ.

            ಪ್ರೊ|| ಮರುಳಸಿದ್ಧಯ್ಯ ಅವರು ಪುಸ್ತಕದಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಸಿಯಲ್ ಸೈನ್ಸಸ್ ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಪ್ರೊ|| ನಿರಂಜನ . ಗೋಕರ್ಣ ಅವರ ಭಕ್ತಿಯಾಂದೋಲನ ಮತ್ತು ಸಾಮಾಜಿಕ ಅಭ್ಯುದಯ ಎನ್ನುವ ಆಂಗ್ಲ ಲೇಖನವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಲೇಖನದಲ್ಲಿ ಯೋಗ, ಯೋಗಗಳ ಪ್ರಕಾರಗಳು, ಭಕ್ತಿಯೋಗದ ಉಗಮ, ಪ್ರಚಾರ, ಭಕ್ತಿಯೋಗದ ಪ್ರವರ್ತಕರು, ಭಕ್ತಿಯಾಂದೋಲನ, ಭಕ್ತಿಯ ವೈಲಕ್ಷಣ್ಯಗಳು, ಭಕ್ತಿಯಾಂದೋಲನದ ವೈಶಿಷ್ಟ್ಯ, ಮೌಲ್ಯಗಳು, ತತ್ತ್ವಾದರ್ಶಗಳು, ಭಕ್ತರ ಜೀವನಶೈಲಿ, ಅವರ ಸಾಧನಾ ಮಾರ್ಗ, ಜ್ಞಾನ-ಭಕ್ತಿ-ವೈರಾಗ್ಯಗಳ ಸಂಯೋಗ, ಮುಂತಾದ ಅಂಶಗಳು ಬಹಳ ವಿವರವಾಗಿ ಚರ್ಚೆಗೊಂಡಿದೆ. ಸಾಧನಾ ಪದ್ಧತಿಗಳ ಮೂಲಕ ಸಾಮಾಜಿಕ ಸಾಮರಸ್ಯವನ್ನು ಸಾಧಿಸಿದ ಪರಿಯನ್ನು ಯಾವ ಅನುಮಾನಗಳಿಗೂ ಎಡೆಕೊಡದಂತೆ ವಿವರಿಸಿದ್ದಾರೆ.

            ಭಕ್ತಿ ಆಂದೋಲನದ ಪೂರ್ವದಲ್ಲಿ ಇದ್ದ ಸಾಮಾಜಿಕ ರಚನೆ, ಸಾಮಾಜಿಕ ಸಂಬಂಧಗಳು, ಸಾಮಾಜಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಧಾರ್ಮಿಕ ಹಿನ್ನೆಲೆಯಲ್ಲಿ ಗುರುತಿಸಿದರು. ಇದಕ್ಕೆ ಪ್ರತಿಯಾಗಿ ಒಂದು ಆದರ್ಶ ಸಮುದಾಯದ ಪರ್ಯಾಯ ವ್ಯವಸ್ಥೆಯ ಪ್ರತಿಪಾದನೆಯನ್ನು ಆಂದೋಲನದ ರೂಪದಲ್ಲಿ ಮಾಡಿದರು. ಪ್ರತಿಪಾದಿತ ಸಮಾಜದಲ್ಲಿ ಎಲ್ಲರೂ ಅಖಂಡಭಾವದಿಂದ ಜೀವಿಸುತ್ತಾರೆ. ಸಕಲ ಜೀವಾತ್ಮರಿಗೂ ಗೌರವಯುತ ಸ್ಥಾನವಿದೆ. ಇಲ್ಲಿ ಪ್ರೇಮಮಯ ಜೀವನ, ತ್ಯಾಗ, ಅನುರಕ್ತಿಗಳಿಗೆ ಅವಕಾಶವಿದೆ. ವ್ಯಕ್ತಿಯ ನೆಲೆಯಲ್ಲಿ ಆಂದೋಲನದಿಂದ ಅಧ್ಯಾತ್ಮ ವಿಕಾಸವಾಯಿತು ವೃಂದದ ನೆಲೆಯಲ್ಲಿ ನಮ್ಮವರು ಎಂಬ ಭಾವ, ಬೆಂಬಲದ ಭರವಸೆ ಹಾಗೂ ಅಧ್ಯಾತ್ಮ ಮಾರ್ಗವು ಲಭ್ಯವಾಯಿತು. ಜನರಿಗೆ ಆತ್ಮಸ್ಥೈರ್ಯ ಬಂದು ಉನ್ನತ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಸಮುದಾಯದ ನೆಲೆಯಲ್ಲಿ ಸ್ಥಾನ, ಜಾತಿ, ಮತ, ಲಿಂಗ, ಇತ್ಯಾದಿ ಭೇದಗಳನ್ನು ಪರಿಗಣಿಸದ ಬೆಂಬಲವು ಭಕ್ತರಿಂದ ದೊರೆಯಿತು. ಇದರಿಂದ ಅವರ ಸಾಧನಾಮಾರ್ಗ ಸುಲಭವಾಯಿತು. ಭಕ್ತಿಪಂಥದ ಪ್ರವರ್ತಕರು ತಮ್ಮದೇ ಆದ ಆರಾಧನಾ ಮಾರ್ಗವನ್ನು ಕಂಡುಕೊಂಡರು. ಭಜನೆ ಮಾಡುವುದು, ಕಾವ್ಯವನ್ನು ರಚಿಸುವುದು, ಭಕ್ತಿಪಥವನ್ನು ಬಣ್ಣಿಸುವುದು, ಶಾಸ್ತ್ರ-ಪುರಾಣ ಗ್ರಂಥಗಳನ್ನು ಪಠಿಸುವುದು, ಚಿಂತನ-ಮಂಥನ ಮಾಡುವುದು, ಪ್ರವಚನ ಮಾಡುವುದು, ಇದರ ಮೂಲಕ ಜೀವನದ ಕೊನೆಯ ಗುರಿಯೇನು ಎಂಬ ಸಂದೇಶ ಸಾರುವುದು, ಪ್ರಕ್ರಿಯೆಯಲ್ಲಿ ಜೀವನವನ್ನು ಸಮೃದ್ಧವಾಗಿ ಬಾಳಬೇಕು ಎಂಬ ಮೌಲ್ಯವನ್ನು ಪ್ರತಿಪಾದಿಸಿದರು. ಹೀಗೆ ಸಾಗಿದೆ ಅವರ ಚಿಂತನಾಲಹರಿ.

            ಪುಸ್ತಕದಲ್ಲಿ ಪ್ರೊ|| ಎಚ್.ಎಂ. ಮರುಳಸಿದ್ಧಯ್ಯ ಅವರು, ಭಾರತದ ಅದರಲ್ಲೂ ಕರ್ನಾಟಕದ ಭಕ್ತಿಪಂಥದಲ್ಲಿ ಇರುವ ಸಮಾಜಕಾರ್ಯದ ಬೇರುಗಳನ್ನು ಬಹಳ ಸ್ಪಷ್ಟವಾಗಿ ಗುರುತಿಸಿದ್ದಾರೆ. ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಆವಶ್ಯಕತೆಯನ್ನು ಅವರು ಪುನರುಚ್ಚರಿಸುತ್ತಾರೆ. ಭಾರತೀಯ ಸನಾತನ ಧರ್ಮ-ಸಂಸ್ಕೃತಿಯಲ್ಲಿ ಸಮಾಜಕಾರ್ಯದ ತತ್ತ್ವಾದರ್ಶಗಳನ್ನು, ಮೌಲ್ಯಗಳನ್ನು ಕೆದಕಿ ತೆರೆದಿಟ್ಟಿದ್ದಾರೆ. ಸಮಾಜಕಾರ್ಯ ಕ್ಷೇತ್ರಗಳಲ್ಲಿ ಬೋಧನೆಮಾಡುವ ಹಾಗೂ ಕೆಲಸಮಾಡುವ ಯಾವುದೇ ವ್ಯಕ್ತಿಯು ಅವಶ್ಯವಾಗಿ ಓದುವ ಪುಸ್ತಕ ಇದಾಗಿದೆ. ಸಮಾಜಕಾರ್ಯ ಶಾಲೆಗಳ ಗ್ರಂಥಾಲಯಗಳಲ್ಲಿ ಆವಶ್ಯಕವಾಗಿ ಇರಬೇಕಾದ ಪುಸ್ತಕ ಇದಾಗಿದೆ.

            ಪುಸ್ತಕಕ್ಕೆ ಬಳಸಿರುವ ಕಾಗದ, ಪುಟ ಸಂಯೋಜನೆ, ಮುದ್ರಣ, ಮುಂತಾದವುಗಳೂ ಚೆನ್ನಾಗಿವೆ. ಪುಸ್ತಕಕ್ಕೆ ಇರಿಸಿರುವ ಬೆಲೆಯು ಮಾತ್ರ ಕಡಿಮೆ ಕೇವಲ ರೂ. 120.00.

 

ಡಾ.ಸಿ.ಆರ್. ಗೋಪಾಲ

ನಂ. 269, 6ನೆಯ ಮುಖ್ಯರಸ್ತೆ

1ನೆಯ ಅಡ್ಡರಸ್ತೆ, ವೈಯಾಲಿ ಕಾವಲ್

ಬೆಂಗಳೂರು  560 003

ಮೊ : 9448497926

 

 

No comments:

Post a Comment