Sunday, December 1, 2013

ಗಾಂಧೀಜಿಯ ದೃಷ್ಟಿಯಲ್ಲಿ ಸಮಾಜಕಾರ್ಯ


            ಗಾಂಧೀಜಿಯ ದೃಷ್ಟಿಯಲ್ಲಿ ಸಮಾಜಕಾರ್ಯ ಎಂದರೆ ಸಮಾಜ ಪರಿವರ್ತನೆಯ ಕಾರ್ಯ. ಸಮಾಜದ ಪರಿವರ್ತನೆಯ ಕಾರ್ಯ ಎಂದರೆ ಹೊಸ ಮೌಲ್ಯಗಳ ಸ್ಥಾಪನೆ. ಹಳೆಯ ಕಂದಾಚಾರದ, ಸವಕಲು ಮೌಲ್ಯಗಳನ್ನು ಕಿತ್ತೊಗೆಯುವುದು.

            ಮಹಿಳೆಯರನ್ನು ಸಮಾಜ ನಿಕೃಷ್ಟವಾಗಿ ಕಾಣುತ್ತಿತ್ತು. ಆಕೆಯ ಸ್ಥಾನ ಮನೆಯಲ್ಲೇ ಹೊರತು ಸಮಾಜದ ಆಗು ಹೋಗುಗಳಲ್ಲಲ್ಲ ಎಂದು ಅಂದಿನ ಸಮಾಜ ಭಾವಿಸಿತ್ತು. ಮಕ್ಕಳನ್ನು ಪೋಷಿಸುವುದಕ್ಕೆ, ಮನೆಯ ಒಳಗಿನ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಮಾತ್ರ ಆಕೆಯನ್ನು ಬಳಸಲಾಗುತ್ತಿತ್ತು. ಆಕೆಗೆ ಮತ ನೀಡುವ ಹಕ್ಕಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ ಗಂಡನಿಗೆ ಹೊಯಿಕೈಯಾಗಿ ಬೆರೆಯುವುದಕ್ಕೆ ಅವಕಾಶ ಇರಲಿಲ್ಲ. ಸ್ತ್ರೀಯರಿಗೆ ವಿದ್ಯಾಭ್ಯಾಸ ಮಾಡುವ ಅವಕಾಶವಿರಲಿಲ್ಲ. ಬಾಲವಿಧವೆಯರಿಗೆ ತಮ್ಮ ಕಾಲ ಮೇಲೆ ನಿಲ್ಲುವ ಸ್ವಾತಂತ್ರ್ಯವಾಗಲಿ ಅದಕ್ಕೆ ಬೇಕಾದ ಶಿಕ್ಷಣವಾಗಲಿ ದೊರಕುತ್ತಿರಲಿಲ್ಲ. ಬಾಲ್ಯದಲ್ಲಿ ಸ್ತ್ರೀಯರು ತಾಯಿ ತಂದೆಗಳ ಆಶ್ರಯದಲ್ಲಿ, ಮದುವೆಯಾದ ಮೇಲೆ ಗಂಡನ ಆಶ್ರಯದಲ್ಲಿ, ಗಂಡ ಸತ್ತ ಮೇಲೆ ಮಕ್ಕಳ ಆಶ್ರಯದಲ್ಲಿ ಪಂಗುವಿನಂತೆ ಬದುಕಬೇಕು ಎಂಬ ಕಟ್ಟಳೆ ಇತ್ತು. ಕಟ್ಟಳೆಯನ್ನು ಇತ್ತೀಚಿನವರೆಗೂ ಉಳಿಸಿಕೊಂಡು ಬರಲಾಗುತ್ತಿತ್ತು. ಈಶ್ವರಚಂದ್ರ ವಿದ್ಯಾಸಾಗರರು ವಿಧವಾ ವಿವಾಹವನ್ನು ಜಾರಿಗೆ ತಂದರು. ರಾಜಾರಾಂ ಮೋಹನರಾಯರು ಸತೀ ಪದ್ಧತಿಯನ್ನು ಕಾನೂನಿನ ಮೂಲಕ ನಿಷೇಧಿಸಲು ನೆರವಾದರು. ಫುಲೆ ಮಹಾಶಯರು ಸ್ತ್ರೀಯರಿಗೆ ವಿದ್ಯಾಶಾಲೆಗಳನ್ನ ತೆರೆದು ಉಪಕಾರಮಾಡಿದರು. ಗಾಂಧೀಜಿ, ಮನೆಯಲ್ಲಿ ಬಂಧಿಗಳಾಗಿದ್ದ ಹೆಣ್ಣು ಮಕ್ಕಳನ್ನು ಮಕ್ಕಳ ಶಿಕ್ಷಣ ಕಾರ್ಯಕ್ಕೆ,ಅನಾರೋಗ್ಯದಿಂದ ನರಳುವ ಗ್ರಾಮೀಣ ಜನರಿಗೆ ಆರೋಗ್ಯ, ನೈರ್ಮಲ್ಯ ಇವುಗಳ ಬಗೆಗೆ ಶಿಕ್ಷಣ ನೀಡುವ ಕೆಲಸಕ್ಕೆ, ಗ್ರಾಮೀಣ ರೋಗಿಗಳಿಗೆ ಅವರವರ ಮನೆಗೇ ಹೋಗಿ ಔಷಧೋಪಚಾರ ಮಾಡುವುದಕ್ಕೆ ಬೇಕಾದ ತರಬೇತಿಯನ್ನು ನೀಡಿದರು. ಹೆಣ್ಣು ಮಕ್ಕಳನ್ನು ಪರ ಊರುಗಳಲ್ಲಿ ವೈದ್ಯಕೀಯ ಸೇವೆ  ನೀಡಲು ಕರೆತಂದರು. ಮೊದಲು ಗಾಂಧೀಜಿ ತಮ್ಮ ಹೆಂಡತಿ ಕಸ್ತೂರಿ ಬಾ ಅವರಿಗೆ ತರಬೇತಿ ನೀಡಿ ಅವರ ನೇತೃತ್ವದಲ್ಲಿ ಹೆಣ್ಣುಮಕ್ಕಳ ಪಡೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಅನುಗೊಳಿಸಿದರು.

            ಇದಾದ ಮೇಲೆ ಗಾಂಧೀಜಿ ತಾವು ಹೂಡಿದ ಸತ್ಯಾಗ್ರಹಗಳಲ್ಲಿ ಹೆಣ್ಣು ಮಕ್ಕಳು ತೊಡಗಿಕೊಳ್ಳಲು ಪ್ರೇರಣೆ ನೀಡಿದರು. ಎಲ್ಲ ಪ್ರಾಂತಗಳಲ್ಲೂ ಸುಶಿಕ್ಷಿತ ಹೆಣ್ಣು ಮಕ್ಕಳೇ ಅಲ್ಲದೆ ಸಾಮಾನ್ಯ ರೈತಾಪಿ ಹೆಣ್ಣು ಮಕ್ಕಳೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡಿದರು. ಸಹಸ್ರಾರು ಹೆಣ್ಣುಮಕ್ಕಳು ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡು ಸೆರೆಮನೆ ಸೇರಿದರು. ಆಗ ಹರಿಜನರು ಹಿಂದೂ ದೇವಾಲಯಗಳಿಗೆ ಪ್ರವೇಶ ಮಾಡುವಂತಿರಲಿಲ್ಲ. ಹಿಂದೂಗಳು ಸೇದುತ್ತಿದ್ದ ಬಾವಿಯಿಂದ ನೀರನ್ನು ಸೇದುವಂತಿರಲಿಲ್ಲ. ಕ್ಷೌರಿಕರು ಹರಿಜನಿಗೆ ಕ್ಷೌರ ಮಾಡುತ್ತಿರಲಿಲ್ಲ. ಹಿಂದೂಗಳ ಹೊಟೇಲ್ಗಳಿಗೆ ಹರಿಜನರಿಗೆ ಪ್ರವೇಶವಿರಲಿಲ್ಲ.

            ಎಲ್ಲ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಗಾಂಧೀಜಿ ಸಾಮಾಜಿಕಕಾರ್ಯದ ಮೂಲಕ ಚಳವಳಿಗಳ ಮೂಲಕ ಸಮಾಜದಲ್ಲಿ ಮೌಲ್ಯಗಳ ಪರಿವರ್ತನೆಗೆ ಪ್ರಯತ್ನ ಮಾಡಿದರು.

            ಪರದೇಶಿ ವಸ್ತುಗಳನ್ನು ಬ್ರಿಟಿಷರು ತಂದು ಭಾರತದಲ್ಲಿ ಮಾರುತ್ತಿದ್ದರು. ಸಿಗರೇಟು, ಬೀರು, ಬೀಟ್ರೂಟ್, ಸಕ್ಕರೆ, ಪರದೇಶಿ ಮಿಲ್ಬಟ್ಟೆ, ಡೈಮಂಡ್ ಸಕ್ಕರೆ ಇವುಗಳು ಯಥೇಚ್ಛವಾಗಿ ಭಾರತದ ಅಂಗಡಿಗಳಲ್ಲಿ ಮಾರಾಟವಾಗುತ್ತಿತ್ತು. ಸ್ವದೇಶಿ ಚಳವಳಿ ಆರಂಭಮಾಡಿ, ಪರದೇಶದಿಂದ ಬರುವ ಪದಾರ್ಥಗಳನ್ನು ಕೊಳ್ಳಬಾರದೆಂದು ಭಾರತೀಯರಲ್ಲಿ ವಿನಂತಿ ಮಾಡಿಕೊಂಡರು. ಅವುಗಳನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದರು. ಉದಾಹರಣೆಗೆ, ಸ್ವದೇಶಿ ಚಳವಳಿಯ ಫಲವಾಗಿ 1939ರಲ್ಲಿ ಮುಂಬೈಯಲ್ಲಿ ಪರದೇಶಿ ಬಟ್ಟೆಯನ್ನು ಗಾಡಿಗೆ ಹೇರಲು ಹೋದಾಗ ಐವರು ಹೆಣ್ಣು ಮಕ್ಕಳು ಗಾಡಿಯನ್ನು ತಡೆದರು. ಎತ್ತುಗಳು ಮುನ್ನುಗ್ಗಿದ್ದರಿಂದ ಹೆಣ್ಣುಮಕ್ಕಳು ನೆಲಕ್ಕೆ ಬಿದ್ದರು. ಗಾಯಗಳಾದವು. ಬಹಿಷ್ಕಾರ ಚಳವಳಿಯ ಪರಿಣಾಮವಾಗಿ ಇಂಗ್ಲೆಂಡಿನಲ್ಲಿ 50 ಸಾವಿರ ಗಿರಣಿ ಕಾಮರ್ಿಕರು ಕೆಲಸ ಕಳೆದುಕೊಂಡರು. ಭಾರತಕ್ಕೆ ರಫ್ತಾಗುತ್ತಿದ್ದ ಗಿರಣಿ ಬಟ್ಟೆ ಖರೀದಿಸುವವರಿಲ್ಲದ ಕಾರಣದಿಂದ ಬ್ರಿಟನ್ನಿನ 50 ಸಾವಿರ ಹತ್ತಿ ಗಿರಣಿ ಕಾರ್ಮಿಕರಿಗೆ ರಿಟ್ರೆಂಚ್ ಆಯಿತು.

            ಗಾಂಧೀಜಿಯ ಶಿಷ್ಯರಾದ ವಿನೋವಾ ಭಾವೆಯವರು ಬಡತನ ನಿವಾರಣೆಗಾಗಿ ಭೂದಾನ ಕಾರ್ಯವನ್ನು ದೇಶವ್ಯಾಪ್ತಿ ಹಮ್ಮಿಕೊಂಡರು. ನನ್ನಂತಹ ಸಹಸ್ರಾರು ಸಮಾಜಸೇವಕರು ಸಮಾಜಕಾರ್ಯದಲ್ಲಿ ತೊಡಗಿಕೊಂಡರು. ನಾವು ಜಮೀನುದಾರರನ್ನು ಒಡೆಯದೆ ಬಡಿಯದೆ, ಕಾನೂನಿನ ಕತ್ತೆಯಿಂದ ಒದೆಸದೆ, ಪ್ರೀತಿಯಿಂದ ಭೂಮಿ ಉಳ್ಳವರನ್ನು ಸಂಧಿಸಿ ಬಡವರಿಗಾಗಿ ಭೂಮಿ ನೀಡಲು ಕೇಳಿದೆವು. ಇದಕ್ಕಾಗಿ ಭಾರತದ ಎಲ್ಲ ಗ್ರಾಮಗಳಿಗೂ ಪಾದಯಾತ್ರೆ ಮಾಡಿದೆವು. 42ಲಕ್ಷ ಎಕರೆ ಜಮೀನನ್ನು ಬಡವ ಬದುಕಲಿ ಎಂದು ಉಳ್ಳವರು ನೀಡಿದರು. ಬಡವರಿಗಾಗಿ ಭೂದಾನಯಜ್ಞ ಆಕ್ಟ್ ಎಂಬ ಒಂದು ಶಾಸನ ಮಾಡಿಸಿದ್ದೇವೆ. ಶಾಸನರೀತ್ಯಾ ಭೂದಾನದಲ್ಲಿ ಭೂಮಿ ಪಡೆದವರು ಹೀಗೆ ನೀಡಲಾದ ಭೂಮಿಯಲ್ಲಿ ಬೆಳೆದು ತಿನ್ನಬಹುದೇ ವಿನಾ, ಭೂಮಿಯನ್ನು ಮಾರಾಟ ಮಾಡುವುದಕ್ಕಾಗಲಿ ಪರಭಾರೆ ಮಾಡುವುದಕ್ಕಾಗಲಿ, ಗೇಣೀ ನೀಡುವುದಕ್ಕಾಗಲಿ ಅವಕಾಶವಿಲ್ಲ. ಎರಡು ವರ್ಷಕಾಲ ಹೀಗೆ ನೀಡಲಾದ ಭೂಮಿಯಲ್ಲಿ ಬೆಳೆತೆಗೆಯಲಿಲ್ಲವಾದರೆ, ಭೂಮಿಯನ್ನು ಭೂದಾನ ಬೋಡರ್್ ಹಿಂದಕ್ಕೆ ಪಡೆದುಕೊಂಡು ಬೇರೊಬ್ಬ ಭೂಹೀನನಿಗೆ ಇದೇ ಶಾಸನದನ್ವಯ ನೀಡುತ್ತದೆ.

            ಇದು ಸಮಾಜಕಾರ್ಯವೂ ಹೌದು, ಸಮಾಜ ಪರಿವರ್ತನೆಯ ಕಾರ್ಯವೂ ಹೌದು. ಸಮಾಜಕಾರ್ಯದಲ್ಲಿ ಪದವಿ ಪಡೆದವರು ಸಮಾಜಪರಿವರ್ತನೆಯ ಕೆಲಸವನ್ನು ಸಮಾಜಕಾರ್ಯದ ಜೊತೆ ಜೊತೆಗೆ ಕೈಗೊಂಡರೆ ಸಮಾಜದಲ್ಲಿ ಒಂದು ಕ್ರಾಂತಿಯನ್ನೇ ಮಾಡಬಹುದು. ಬಸವಣ್ಣನವರು ಮಾಡಿದ್ದೂ ಇದೇ. ವಿಚಾರಕ್ರಾಂತಿಯ ಮೂಲಕ ಸಮಾಜಕ್ರಾಂತಿಯನ್ನು ಅವರು ಸಾಧಿಸಿದರು. ಹೊಸ ಮೌಲ್ಯಗಳನ್ನು ಹೊತ್ತ ಹೊಸ ಸಮಾಜ ಒಂದನ್ನು ನಿರ್ಮಾಣ ಮಾಡಿದರು. ನಾವೂ ಕ್ರಾಂತಿಯ ಕೆಲಸವನ್ನು ಮಾಡೋಣ.

 

ಎಚ್.ಎಸ್. ದೊರೆಸ್ವಾಮಿ

ನಂ.868, 38ನೇ ಅಡ್ಡರಸ್ತೆ, 20ನೇ ಮುಖ್ಯರಸ್ತೆ,

ಜಯನಗರ 4ನೇ ಟಿ ಬ್ಲಾಕ್, ಬೆಂಗಳೂರು-41

080-26638392

 

 

No comments:

Post a Comment