Tuesday, October 1, 2013

ಉತ್ತಮ ಆಡಳಿತ/ಸರ್ಕಾರ ನಡೆಸುವಲ್ಲಿ ನಾಗರೀಕರ ಪಾತ್ರ ಮತ್ತು ಜವಾಬ್ದಾರಿಗಳು


ಪೀಠಿಕೆ:
ನಮ್ಮ ಭಾರತ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದು, 'ಪ್ರಜೆಗಳೇ ಪ್ರಭುಗಳು' ಎಂಬ ವ್ಯವಸ್ಥೆ ಇರಬೇಕಾಗಿತ್ತು. ಆದರೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಬ್ರಿಟಿಷರಿಂದ ಕಲಿತ ಅಧಿಕಾರಶಾಹಿ ವರ್ಗವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಯಾಗಿ ಉಳಿಸಿ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ. 1993 ಮತ್ತು 1994ರಲ್ಲಿ ಬಂದ ಪಂಚಾಯತ್ ಕಾಯ್ದೆ ಮತ್ತು ನಗರಾಡಳಿತ ಕಾಯ್ದೆಯು ನಾಗರೀಕರಿಗೆ ಉತ್ತಮ ಆಡಳಿತ ನಡೆಸಲು ಅನುಕೂಲವಾಗಿದೆ. ಎರಡು ಕಾಯ್ದೆಗಳಲ್ಲಿ ನಾಗರೀಕರ ಸಹಭಾಗಿತ್ವ, ಪಾರದರ್ಶಕತೆ, ಹೊಣೆಗಾರಿಕೆ, ನಾಗರೀಕರ ಬಳಿಗೆ ಆಡಳಿತ ನೀಡಲು ಸಹಕಾರಿ ಅಂಶಗಳಾಗಿವೆ. ಮೇಲಿನ ಕಾಯ್ದೆಗಳನ್ನು ನಾಗರೀಕರು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿಕೊಂಡಾಗ ಮಾತ್ರ ಉತ್ತಮ ಆಡಳಿತ ಪಡೆಯಲು ಸಾಧ್ಯವಾಗುತ್ತದೆ. ಇತರೇ ರಾಷ್ಟ್ರಗಳಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಇರಲು ಮುಖ್ಯ ಕಾರಣ ಜನರ ಸಹಭಾಗಿತ್ವ, ಟೌನ್ ಸಭೆ ತೀರ್ಮಾನಗಳಲ್ಲಿ ಭಾಗವಹಿಸುವಿಕೆಯಿಂದ ಮತ್ತು ಕಾಮಗಾರಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡುವ ವಿಧಾನ ಇರುವುದರಿಂದಾಗಿ ಅಲ್ಲಿನ ನಾಗರೀಕರು ಉತ್ತಮ ಆಡಳಿತ ಪಡೆಯಲು ಸಾಧ್ಯವಾಗಿದೆ.

ನಾಗರೀಕರ ಸಂಘಗಳ ರಚನೆ ಮತ್ತು ಜವಾಬ್ದಾರಿಗಳು
ನಾಗರೀಕರು ಸ್ವತಃ ಸಂಘಟಕರಾಗಿ ಸ್ಥಳೀಯ ಎಲ್ಲಾ ವರ್ಗದ ನಾಗರೀಕರನ್ನು ಒಳಗೊಂಡ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ/ ಯುವಕರ ಸಂಘಗಳನ್ನು ಸ್ಥಾಪಿಸಿಕೊಳ್ಳಬೇಕು. ಸ್ಥಳೀಯ ಗುಂಪುಗಳಲ್ಲಿ ಇರುವಂತಹ ಸದಸ್ಯರನ್ನು ಪ್ರತೀ ಇಲಾಖೆಗೆ 2-3 ಸದಸ್ಯರನ್ನು ನೇಮಿಸಿ, ಸಂಬಂಧಪಟ್ಟ ಇಲಾಖೆಯು ಕೈಗೊಳಬೇಕಾದ/ಕೈಗೊಂಡ ಕಾಮಗಾರಿಗಳ ಉಸ್ತುವಾರಿಯ ಕುರಿತು ಗಮನ ಹರಿಸುವುದು ಮತ್ತು ಮಾಹಿತಿಯನ್ನು ಸ್ಥಳೀಯ ಗುಂಪುಗಳು ವಾರಕ್ಕೊಮ್ಮೆ ಸಭೆ ಸೇರಿ ತಮ್ಮ ಕ್ಷೇತ್ರದಲ್ಲಿ ಅನುಷ್ಟಾನಗೊಂಡ ಮತ್ತು ಅನುಷ್ಟಾನವಾಗಬೇಕಾಗಿರುವ ಕಾಮಗಾರಿಗಳು/ಪ್ರಗತಿಯ ವರದಿಯನ್ನು ಹಂಚಿಕೊಳ್ಳವುದು ಹಾಗೂ ಇಲಾಖಾ ಅಧಿಕಾರಿಗಳ ಗಮನಕ್ಕೆ ತರುವುದು.

ನಾಗರೀಕರ ಜವಾಬ್ದಾರಿ
ತೆರಿಗೆ ಪಾವತಿಸುವಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸುವುದು ಮತ್ತು ಎಲ್ಲಾ ಸ್ಥಳೀಯ ನಾಗರೀಕರು  ತೆರಿಗೆಯನ್ನು ಪಾವತಿಸುವಂತೆ ಹಾಗೂ ತೆರಿಗೆ ಪಾವತಿಯ ಕುರಿತು (ಅಂತರ್ಜಾಲ/ನೇರವಾಗಿ) ಅರಿವು ನೀಡುವುದು. ನಾಗರೀಕರು ಚುನಾವಣೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ಮತ್ತು ಇತರೇ ನಾಗರೀಕರನ್ನು ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡಿ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ನಾಗರೀಕರ ಮನಒಲಿಸುವುದು. ವ್ಯವಸ್ಥಿತವಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕಿಂತ ಸಮುದಾಯದ ಸಮಸ್ಯೆಗಳನ್ನು ತಿಳಿಸುವುದು ಮತ್ತು ಸಮಸ್ಯೆ ಬಗೆಹರಿಸುವುದಕ್ಕೆ ಸಲಹೆಗಳನ್ನು ನೀಡುವುದರಿಂದ ಸ್ಥಳೀಯ ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಆಗುತ್ತದೆ.

ನಾಗರೀಕರು ಇಲಾಖಾ ನಿಯಮ/ಸೇವೆಗಳನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಬಳಸುವಂತೆ ಪ್ರೇರೇಪಿಸುವುದು 
ನಾಗರೀಕರು ಸ್ಥಳೀಯ ಸರ್ಕಾರದ ಕಾರ್ಯ ವೈಖರಿ/ವ್ಯವಸ್ಥೆಯನ್ನು ಗಮನಿಸಿ ಮಾಹಿತಿ ಹಕ್ಕು ಕಾಯ್ದೆ, ನಾಗರೀಕರ ಸನ್ನದು ಮತ್ತು ಸಕಾಲ ಅಡಿಯಲ್ಲಿ ಬರುವ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಮತ್ತು ನಾಗರೀಕರಿಗೆ ಮಾಹಿತಿ ನೀಡುವುದು ಹಾಗೂ ಸೇವೆಗಳನ್ನು ಕಲ್ವಿಸಿಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಸ್ಥಳೀಯ ಮಟ್ಟದ ಜನಸ್ವಂದನ ಸಭೆಗಳಲ್ಲಿ ಭಾಗವಹಿಸುವುದು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು. ಸ್ಥಳೀಯ ಜನರು ಮತ್ತು ಇಲಾಖೆಯ ಮಧ್ಯೆಯಿರುವ ಅಂತರವನ್ನು ಹೋಗಲಾಡಿಸಿ, ಇಲಾಖೆ ಮಟ್ಟದ ಅಧಿಕಾರಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಬೆಳೆಸುವುದು.

ಸಹಭಾಗಿತ್ವ ಆಯವ್ಯಯ ಯೋಜನೆ ತಯಾರಿ
ಸ್ಥಳೀಯ ನಾಗರೀಕರು ಅಧಿಕಾರಿಗಳೊಂದಿಗೆ ವಾರ್ಷಿಕ ಆಯವ್ಯಯದ ಪೂರ್ವಭಾವಿ ಸಭೆ ನಡೆಸಿ ಸಹಭಾಗಿತ್ವ ಆಯವ್ಯಯ ಯೋಜನೆ ತಯರಿಸುವುದು ಮತ್ತು ಪ್ರಾತಿನಿಧ್ಯವಾರು (1ನೇ, 2ನೇ, 3ನೇ...) ಪಟ್ಟಿಯನ್ನು ತಯಾರಿಸಿ, ಸ್ಥಳೀಯ ಜನ ಪ್ರತಿನಿಧಿಗೆ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸ್ಥಳೀಯ ನಾಗರೀಕರ ನೇತೃತ್ವದಲ್ಲಿ ಹಸ್ತಾಂತರಿಸುವುದು. ಇದರಿಂದಾಗಿ ನಾಗರೀಕರ ಭಾಗವಹಿಸುವಿಕೆ, ತಳಮಟ್ಟದ ಯೋಜನೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ನಾಗರೀಕರು ಭಾಗವಹಿಸುವಂತಾಗುತ್ತದೆ ಹಾಗೂ ಜನರಿಗೆ ನಾವೂ ಸಹ ಪಾಲುದಾರರೆಂಬ ಮನೋಭಾವ ಮೂಡುತ್ತದೆ. ಸ್ಥಳೀಯ ನಾಗರೀಕರನ್ನು ಒಗ್ಗೂಡಿಸಿ ಸಾಮಾಜಿಕ ಅಭಿವೃದ್ಧಿ ಮತ್ತು ನ್ಯಾಯಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಮೂಲಭೂತ ಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ವಸತಿ, ಕಲ್ಯಾಣ ಕಾರ್ಯಕ್ರಮ, ಕುಡಿಯುವ ನೀರು, ಶೌಚಾಲಯ ಮತ್ತು ರಸ್ತೆ ಇವುಗಳನ್ನು ಪ್ರತಿಯೊಬ್ಬರಿಗೂ ದೊರಕುವಂತೆ ಆಯವ್ಯಯವನ್ನು ತಯಾರಿಸಬೇಕು. ಬಡತನ ನಿವಾರಣಾ ಅಂಶಗಳನ್ನು ಅಳವಡಿಸಿಕೊಂಡು ಸಮಪಾಲು, ಸಮಬಾಳು ತತ್ವದಡಿಯಲ್ಲಿ ಯೋಜನೆಯನ್ನು ರೂಪಿಸಬೇಕು.
ಇಲಾಖಾವಾರು ಹೊಸ ಕಾಮಗಾರಿಗಳು ಮತ್ತು ಹಳೆ ಕಾಮಗಾರಿಗಳ ನಿರ್ವಹಣೆ ಎಂಬ ಎರಡು ಭಾಗಗಳನ್ನಾಗಿ ಮಾಡಿ, ಹಳೆ ಕಾಮಗಾರಿಗಳ ನಿರ್ವಹಣೆಯ ಕುರಿತು ಜನಸ್ವಂದನ/ವಾರ್ಡ್ ಸಭೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ತರುವುದು.

ಪಾರದರ್ಶಕತೆ
ಇಲಾಖೆಯು ಸಿದ್ಧಪಡಿಸಿದ ಆಯವ್ಯಯ ಪಟ್ಟಿಯನ್ನು ವಾರ್ಡ್ ವಾರು ಸುಮಾರು 10 ಪ್ರದೇಶಗಳಲ್ಲಿ ಪ್ರಕಟಿಸುವುದು ಮತ್ತು ಕರ ಪತ್ರಗಳನ್ನು ತಯಾರಿಸಿ ಹಂಚುವುದು. ಇದರಿಂದಾಗಿ ಜನರಿಗೆ ಕಾಮಗಾರಿಗಳ ಕುರಿತು ಅರಿವು ಮೂಡಿ ಪಾರದರ್ಶಕತೆ ಬರುತ್ತದೆ ಇದರಿಂದ ನಾಗರೀಕರು ಕಾಮಗಾರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ಕಾಮಗಾರಿಗಳ ಅನುಷ್ಟಾನದ ಮೇಲ್ವಿಚಾರಣೆ ಮತ್ತು ಉಸ್ತುವಾರಿಯನ್ನು ಮಾಡಲು ಸಹಕಾರಿಯಾಗಿರುತ್ತದೆ. ಕಾಮಗಾರಿಗಳನ್ನು ಅನುಷ್ಟಾನಗೊಳಿಸುವ ಸಂದರ್ಭದಲ್ಲಿ ಗುಣಾತ್ಮಕ ಮತ್ತು ಯೋಜನೆಯ ಪ್ರಕಾರ/ ಅಂದಾಜು ವೆಚ್ಚ ತಯಾರಿಸಿದಂತೆ, ಕಾಮಗಾರಿ ಅನುಷ್ಟಾನವಾಗುತ್ತಿದೆಯೇ ಎಂದು ಸ್ಥಳೀಯ ಜನರು ಒಗ್ಗೂಡಿ ವೀಕ್ಷಿಸುವುದು ಹಾಗೂ ಅಭಿಪ್ರಾಯಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು.

ಜನಸ್ವಂದನ ಸಭೆ/ವಾಡರ್್ ಸಭೆ/ಪ್ರದೇಶ ಸಭೆಗಳು ಮತ್ತು ನಾಗರೀಕರ ಸನ್ನದ್ದಿನ ಬಗ್ಗೆ ತಿಳುವಳಿಕಾ ಕಾರ್ಯಕ್ರಮ
ಪ್ರತೀ ತಿಂಗಳು ಒಂದು ಇಲಾಖೆಯನ್ನು ಆಯ್ಕೆ ಮಾಡಿಕೊಂಡು ಜನಸ್ವಂದನ ಸಭೆಯನ್ನು ಏರ್ಪಡಿಸಿ, ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಆಹ್ವಾನಿಸಿ ಕಾರ್ಯಕ್ರಮ/ಯೋಜನೆಗಳ ವಿವರ, ಯೋಜನೆಯನ್ನು ಪಡೆಯುವ ವಿಧಾನವನ್ನು ತಿಳಿಸುವುದರ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಮತ್ತು ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸಹಕರಿಸುವುದು. ಇದರಿಂದಾಗಿ ಅಧಿಕಾರಿಗಳಿಗೆ ತಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ.
ಇದರಿಂದಾಗಿ ಇಲಾಖಾವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು ಅಭಿನಂಧಿಸುವುದು ಹಾಗೂ ಪ್ರೋತ್ಸಾಹಿಸಿ ಸಹಕಾರ ನೀಡುವುದು.

ಸಾಮಾಜಿಕ ಲೆಕ್ಕ ಪರಿಶೋಧನೆ
ಪ್ರತೀ ಹಣಕಾಸು ವರ್ಷ ಮುಗಿದ ನಂತರ ಕನಿಷ್ಠ ಮೂರು ವಿಷಯಗಳ ಬಗ್ಗೆ ಸಂಪೂರ್ಣ ಕಾಮಗಾರಿ/ಫಲಾನುಭವಿಗಳ ಅನುಷ್ಟಾನಗೊಂಡಿರುವ ಕಾಮಗಾರಿಗಳ ವಿವರಗಳನ್ನು ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದು ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡುವುದು. ನಂತರ ವರದಿಯಲ್ಲಿ ಬಂದ ವಾಸ್ತವಿಕ ಅಂಶಗಳನ್ನು ಅಧಿಕಾರಿ/ಇಲಾಖೆಗೆ ಬರವಣಿಗೆಯ ಮೂಲಕ ವರದಿಯ ರೂಪದಲ್ಲಿ ಅನಿಸಿಕೆ/ಸಲಹೆಗಳನ್ನು ಹಂಚಿಕೊಳ್ಳುವುದು. ಹಣಕಾಸು ದುರುಪಯೋಗ/ದುಂದು ವೆಚ್ಚ/ಲೋಪವಾಗುವುದರ ಬಗ್ಗೆ, ಕಾಮಗಾರಿ ಗುಣಮಟ್ಟದ ಬಗ್ಗೆ ಮತ್ತು ಸಮಯಕ್ಕೆ ಸರಿಯಾಗಿ ಅನುಷ್ಟಾನವಾಗಿರುವ ಬಗ್ಗೆ ಮನವರಿಕೆ ಮಾಡಿಕೊಡುವುದು ಮತ್ತು ಹೆಚ್ಚು ಅವಶ್ಯಕತೆ ಇರುವ ಕಾಮಗಾರಿಗಳನ್ನು ತಿಳಿಸುವುದು.

ಇಲಾಖೆ ಮತ್ತು ನಾಗರೀಕರ ಜವಾಬ್ದಾರಿಗಳು
ಇಲಾಖಾ ಮಟ್ಟದಲ್ಲಿರುವ ಯೋಜನೆಗಳು/ಕಾರ್ಯಕ್ರಮಗಳು ಬಹಳಷ್ಟು ನಾಗರೀಕರಿಗೆ ಮಾಹಿತಿ ತಲುಪುತ್ತಿಲ್ಲ ಮತ್ತು ಯೋಜನೆಗಳು/ಕಾರ್ಯಕ್ರಮಗಳು ಸದ್ಬಳಕೆ ಆಗುತ್ತಿಲ್ಲ. ಪ್ರತೀ ವರ್ಷ ಇಲಾಖೆಯು ಹಣವನ್ನು ಸರ್ಕಾರಕ್ಕೆ ವಾಪಸ್ಸು ಕಳುಹಿಸುತಿದ್ದು ಮತ್ತು ಕೆಲವು ಯೋಜನೆಗಳು/ಕಾರ್ಯಕ್ರಮಗಳು ಗೊತ್ತಿದ್ದರೂ ಸಹ ನಾಗರೀಕರು ಮುಂದೆ ಬಂದು ಪರಿಹಾರ ಕಂಡುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಇಲಾಖೆಯ ಗುರಿ/ಉದ್ದೇಶ ಸಫಲವಾಗುವುದಿಲ್ಲ್ಲ. ಇಂತಹ ಸಮಸ್ಯೆಗಳನ್ನು ಅರಿತು ನಾಗರೀಕರು ಆಡಳಿತದಲ್ಲಿ ಸ್ವಂಧಿಸಿ, ಯೋಜನೆಗಳು/ಕಾರ್ಯಕ್ರಮಗಳು ಅನುಷ್ಟಾನಗೊಳಿಸಬೇಕಾಗುತ್ತದೆ. ಇತರೇ ರಾಷ್ಟ್ರಗಳು/ರಾಜ್ಯಗಳು ಹೊಂದಿರುವ ಉತ್ತಮ ಆಡಳಿತ ವ್ಯವಸ್ಥೆಯನ್ನು ತಿಳಿದುಕೊಂಡು ತಮ್ಮ ಪ್ರದೇಶಗಳಲ್ಲೂ ಸಹ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.
ಉದಾ: ಸಹಭಾಗಿತ್ವ ಆಯವ್ಯಯ ತಯಾರಿ ಹಾಗೂ ಮಂಡನೆ, ಸಾಮಾಜಿಕ ಲೆಕ್ಕ ಪರಿಶೋಧನೆ, ಮಳೆ ನೀರು ಕೊಯ್ಲು ವ್ಯವಸ್ಥೆ, ಮಕ್ಕಳ ವಾರ್ಡ್ ಸಭೆ, ವಾರ್ಡ್ ಸಮಿತಿ, ಘನ ತ್ಯಾಜ್ಯ ನಿರ್ವಹಣೆ ಮತ್ತು ಮಾಹಿತಿ ಹಕ್ಕು ಕಾಯ್ದೆ ಬಳಸುವ ವಿಧಾನವನ್ನು ನಾಗರೀಕರು ಕಲಿತು, ಇಲಾಖೆಗಳಿಗೆ ಸಲಹೆ ನೀಡುವ ಮೂಲಕ ಮತ್ತು ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ಉತ್ತಮ ಆಡಳಿತ ತರಲು ಪ್ರಯತ್ನಿಸಬಹುದಾಗಿದೆ. ಇಲಾಖೆಯ ಉದ್ದೇಶಗಳನ್ನು ನಾಗರೀಕರು ಸಮರ್ಥವಾಗಿ ಬಳಸಿಕೊಳ್ಳುವುದು ಮತ್ತು ಸೇವೆಗಳನ್ನು ಸೂಕ್ತ ಫಲಾನುಭವಿಗಳಿಗೆ ತಲುಪಿಸುವಂತೆ ಮಾಡುವುದರಿಂದ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ.

ನಾಗರೀಕರು ಚರ್ಚೆ, ಕಾರ್ಯಗಾರ ಮತ್ತು ಸಂವಾದಗಳನ್ನು ಏರ್ಪಡಿಸುವಿಕೆ 
ವಿಕೇಂದ್ರೀಕರಣದ ಬಗ್ಗೆ ಸಂವಿಧಾನ ಬದ್ಧ 73ನೇ ಮತ್ತು 74ನೇ ಕಾಯ್ದೆಯ ಕುರಿತು ಸಮಗ್ರವಾಗಿ ನಾಗರೀಕರಿಗೆ ಮಾಹಿತಿ ನೀಡಿ ಉತ್ತಮ ಆಡಳಿತ ಪಡೆಯುವಂತೆ ಚರ್ಚೆ, ಕಾರ್ಯಗಾರ ಮತ್ತು ಸಂವಾದಗಳ ಮೂಲಕ ಒತ್ತಾಯಿಸುವುದು. ಸರ್ಕಾರವು ಸ್ಥಳೀಯ ಆಡಳಿತವನ್ನು ಆಡಳಿತಾತ್ಮಕವಾಗಿ ಮತ್ತು ಆರ್ಥಿಕವಾಗಿ ಸುಧಾರಣೆಗಳನ್ನು ತಂದು ಜವಾಬ್ದಾರಿಗಳನ್ನು ನೀಡಿ ಹೆಚ್ಚು ಶಕ್ತಿಯುತವಾಗಿ ಮಾಡುವುದು ಹಾಗೂ ಉತ್ತಮ ಆಡಳಿತ ನಡೆಸಲು ನಾಗರೀಕರ ಸಾಮಿಪ್ಯದ ಕಡೆ ಅಧಿಕಾರವನ್ನು ಕೊಂಡೊಯ್ಯುವುದು ಅವಶ್ಯಕವಾಗಿರುವುದರಿಂದ, ನಾಗರೀಕರು ತಮ್ಮ ಜನ ಪ್ರತಿನಿಧಿಗಳಿಗೆ ಇದರ ಮಹತ್ವವನ್ನು ಚರ್ಚೆ/ಸಂವಾದ/ ಕಾರ್ಯಗಾರ ಮತ್ತು ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ತಿಳಿಸುವುದು.

ನಾಗರೀಕರು ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದು
ನಾಗರೀಕರು ಸರ್ಕಾರ/ಆಡಳಿತವು ತರುವ ನವೀನ ತಾಂತ್ರಿಕತೆಗಳಿಗೆ ಹೊಂದಿಕೊಂಡು (ಅಂತರ್ಜಾಲದ ಮೂಲಕ ತೆರಿಗೆ ವಿಧಾನ, ಅರ್ಜಿ ಸಲ್ಲಿಕೆ, ದೂರು ಸಲ್ಲಿಕೆ ಮತ್ತು ಸಲಹೆ ನೀಡುವುದು) ಮುಂತಾದ ಅಂಶಗಳನ್ನು ಅಳವಡಿಸಿಕೊಂಡು ಉತ್ತಮ ಆಡಳಿತ ವ್ಯವಸ್ಥೆ ತರಲು ನಾಗರೀಕರು ಸ್ವಂಧಿಸಬಹುದಾಗಿದೆ. ನಾಗರೀಕರು ನಗರಾಡಳಿತದಲ್ಲಿ ಅನುಭವ ಇರುವ ಸ್ವಯಂ ಸೇವಾ ಸಂಸ್ಥೆಗಳ ಮುಖೇನ ಹೆಚ್ಚು ಪರಿಣಿತರಾಗಿ ಉತ್ತಮ ಆಡಳಿತ ನಡೆಸಲು ಮಾರ್ಗದರ್ಶನ/ಸಲಹೆ ಪಡೆಯಬಹುದಾಗಿದೆ.

ಉಪಸಂಹಾರ:
ನಾಗರೀಕರು ಸಂಘಟಿತರಾಗಿ ಆಡಳಿತದ ವಿವಿಧ ಹಂತಗಳಲ್ಲಿ ಭಾಗವಹಿಸಿದಾಗ ಮಾತ್ರ ಉತ್ತಮ ಆಡಳಿತ ಪಡೆಯಲು ಸಾಧ್ಯವಿದೆ ಮತ್ತು ಜನ ಪ್ರತಿನಿಧಿಗಳು ಹಾಗೂ ಇಲಾಖಾ ಮಟ್ಟದ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಸ್ವ ಉದ್ದೇಶ, ಸ್ವಾರ್ಥ ಮನೋಭಾವ ಬಿಟ್ಟು, ನಿಜವಾಗಿಯೂ ನಾವು ಉತ್ತಮ ಸರ್ಕಾರ ನಡೆಸಲು ಸಹಕಾರಿಯಾಗುತ್ತೇವೆ ಎಂಬ ಮನೋಭಾವ ಬಂದಾಗ ಮಾತ್ರ ನಾಗರೀಕರು ಉತ್ತಮ ಆಡಳಿತ ಪಡೆಯಲು ಸಾಧ್ಯವಿದೆ ಹಾಗೂ ಅಧಿಕಾರಿ ವರ್ಗವು ಸಹ ನಾಗರೀಕರಿಗೆ ಮೌಲ್ಯ/ಗೌರವ ನೀಡಿ ನಾಗರೀಕರ ಪರ ಆಡಳಿತ ನಡೆಸಿದಾಗ ಮಾತ್ರ ಉತ್ತಮ ಆಡಳಿತ/ಸರ್ಕಾರ ದೊರಕಲು ಸಹಕಾರಿಯಾಗುತ್ತದೆ.

           
 ವೀರೇಶ್  ಎ.ಎಂ.
ದಿವ್ಯ  ಎಂ.
ಸಿವಿಕ್, ಸ್ವಯಂ ಸೇವಾ ಸಂಸ್ಥೆ
9901120761




No comments:

Post a Comment