Wednesday, November 27, 2013

ಆತ್ಮೀಯರೊಡನೆ 'ಅಮತ್ಸರತ್ವ'ದೊಡನೆ ಅಮರತ್ವಕ್ಕೆ.-Vasudeva Sharma




ಎಲ್ಲರ ಬದುಕಿನಲ್ಲೂ ನೂರಾರು ಸಾವಿರಾರು ಜನ ಹಾದು ಹೋಗಿರುತ್ತಾರೆ. ಬದುಕನ್ನು ನದಿಯಂತೆ ಕಲ್ಪಿಸಿಕೊಂಡರೆ, ಆಕಾಶದಿಂದ ಬಿದ್ದ ಹನಿಯೋ ನೆಲದಿಂದ ಜಿನುಗಿದ ಪಸೆಯೋ ಮುಂದೆ ಸಾಗಿದಂತೆ ಅದರೊಡನೆ ಬೆರೆಯುವ ಇತರ ಹನಿಗಳು ಅಸಂಖ್ಯಾತ. ಹನಿಗಳೆಲ್ಲವೂ ಜೊತೆಯಾಗಿ ಹರಿದು ಮಡುವಾಗಿ, ಕೆರೆಯಾಗಿ, ಧಾರೆಯಾಗಿ, ಮುಂದೆ ಸಾಗಿ ಕಡಲನ್ನು ಸೇರುವ ತನಕ ಅದೆಷ್ಟು ಸಂಭ್ರಮ, ವಿರಾಮ, ವೇಗ, ಸರಾಗ, ಹೀಗೆ ಏನೇನೋ. ಎಲ್ಲ ಹನಿಗಳೂ ಕಡಲು ಸೇರದಿರಬಹುದು, ಅಥವಾ ಮತ್ತಲ್ಲೋ ಹೋಗಿ ಮತ್ತೆ ನದಿಯ ಸೇರಬಹುದು. ಜೊತೆಯಾಗಬಹುದು. ಹಿರಿಯರಾದ ಸಮಾಜಕಾರ್ಯ ವಿಜ್ಞಾನಿ ನಮ್ಮ ಗುರುಗಳಾದ ಪ್ರೊ. ಎಚ್.ಎಂ.ಮರುಳಸಿದ್ಧಯ್ಯನವರ ಹೊಸ ಕೃತಿ, “ಆತ್ಮೀಯರು”ವಿನಲ್ಲಿ ಇಂತಹದೊಂದು ಸಂಚಾರಿ ಭಾವ ವ್ಯಕ್ತವಾಗುತ್ತದೆ. ಏಲ್ಲೋ ಆರಂಭವಾಗಿ, ಎಲ್ಲೋ ಸೇರಿ, ಎಲ್ಲೋ ಮುಗಿದಿರುವ ಕೆಲವು ಪಯಣಗಳನ್ನು ನೆನಪಿನ ಮೂಸೆಯಿಂದ ಹೊರತೆಗೆದು ಅನುಸರಣೆಯ ಮರುಪಯಣದ ಅನುಭವವನ್ನು ಎಚ್.ಎಂ.ಎಂ. ನಮ್ಮೆದುರು ಇಟ್ಟಿದ್ದಾರೆ.
ಹುಟ್ಟಿದ ಊರು ಹಿರೇಕುಂಬಳಗುಂಟೆಯಿಂದ, ಬಳ್ಳಾರಿ, ಮೈಸೂರು, ದೆಹಲಿ, ತಮಿಳುನಾಡು, ಗುಲ್ಬರ್ಗಾ, ಧಾರವಾಡ, ಬೆಂಗಳೂರು, ಸ್ವೀಡನ್, ಇಸ್ರೇಲ್, ಅಮೇರಿಕಾ, ಕೆನಡಾ ಹೀಗೆ ಹತ್ತಾರು ಕಡೆ ಓಡಾಡಿರುವ ಎಚ್.ಎಂ.ಎಂ. ಬದಕಿನಲ್ಲಿ ತಮಗೆ ಅನ್ನ ಕೊಟ್ಟವರು, ಶಿಕ್ಷಣ ನೀಡಿದವರು, ಕಲ್ಪನೆಗಳನ್ನು ಹಚ್ಚಿದವರು, ಬೆನ್ನು ತಡವಿದವರು, ತಮ್ಮೊಡನೆ ಹೆಜ್ಜೆ ಹಾಕಿದವರು, ತೊಡರಾದವರು, ಎಲ್ಲರನ್ನೂ ಮುಟ್ಟುವ ಯತ್ನ ಮಾಡಿದ್ದಾರೆ. ಕಾಲದಲ್ಲ ಸಾಕಷ್ಟು ದೂರ ಬಂದ ಮೇಲೂ ಹಿಂದಿನ ಅನುಭವಗಳ ವಿವರಗಳನ್ನು ಹಿಡಿದಿಟ್ಟಿರುವುದು, ವ್ಯಕ್ತಿ ಚಿತ್ರಣದೊಂದಿಗೆ ಚಾರಿತ್ರಿಕ ಸತ್ಯಗಳ ದಾಖಲೆಯಾಗಿದೆ. ಸ್ವಾನುಭವದೊಡನೆ ಸಂಶೋಧನೆಯ ರಸಪಾಕವನ್ನು ನಮ್ಮೆದುರು ಉಣಬಡಿಸಿದ್ದಾರೆ. ಉದಾಹರಣೆಗೆ: ಬೆಂಗಳೂರಿನಲ್ಲಿ ಸಮಾಜಕಾರ್ಯ ಶಿಕ್ಷಣವನ್ನು ಅಧಿಕೃತವಾಗಿ ಆರಂಭಿಸಿದ್ದ ಶ್ರೀಧರನ್ ಮತ್ತು ಅವರ ಪತ್ನಿ ಉಮಾ ಅವರ ಪರಿಚಯ (ಪುಟ 103-107) ಮತ್ತು ಬಳ್ಳಾರಿಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ ಡಾ. ಟಿ. ತಿಪ್ಪೇಸ್ವಾಮಿ ಅವರ ಚಿತ್ರಣ ಮರೆಯಬಾರದ ಚರಿತ್ರೆಯ ನಿರೂಪಣೆ.
'ಆತ್ಮೀಯರು'ವಿನಲ್ಲಿರುವುದು ಒಟ್ಟು 31 ನುಡಿಚಿತ್ರಗಳು. ಆದರೆ, ಪ್ರತಿಯೊಬ್ಬರನ್ನು ಕುರಿತು ನಿರೂಪಣೆ ಮಾಡುವಾಗ ಅವುಗಳಲ್ಲಿ ಬಂದು ಹೋಗುವವರ ಸಂಖ್ಯೆ ಬಹು ದೊಡ್ಡದು. (ನಾನು ಲೆಕ್ಕ ಇಡುವ ಪ್ರಯತ್ನ ಮಾಡಿದೆ, ಸುಮಾರು 200 ಹೆಸರುಗಳನ್ನು ದಾಟುವಾಗ ಲೆಕ್ಕ ತಪ್ಪಿತು. ಕೈಬಿಟ್ಟೆ). ಜೊತೆಗೆ ಆಯಾ ಕಾಲದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಲೋಕವೂ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಉದಾಹರಣೆಗೆ, ಧಾರವಾಡದಲ್ಲಿ ಎಚ್.ಎಂ.ಎಂ. ಸಮಾಜಕಾರ್ಯ ವಿಭಾಗದಲ್ಲಿದ್ದಾಗ, ಅಲ್ಲಿಗೆ ಉಪಕುಲಪತಿಗಳಾಗುವ ಪ್ರೊ.ಜಯಲಕ್ಷಮ್ಮಣ್ಣಿಯವರನ್ನು ಕುರಿತು ಬರೆಯುವಾಗ, ಉಪಕುಲಪತಿಗಳ ನೇಮಕದಲ್ಲಾದ ಬದಲಾವಣೆ, ಮಹಿಳೆಯೊಬ್ಬರು ಉಪಕುಲಪತಿಯಾದದ್ದು, ಅವರ ಮೇಲಿದ್ದ ಒತ್ತಡ, ಡಾ.ಚೆನ್ನವೀರ ಕಣವಿಯರಿಂದ ಸಿಕ್ಕ ಪ್ರೋತ್ಸಾಹ, ರಾಜಕಾರಣಿಗಳ ಪೊಳ್ಳು ಭರವಸೆಗಳು, ಅಂದಿನ ಬರಹಗಾರರು, ಚಿಂತಕರು, ಇದೆಲ್ಲದರ ನಡುವೆ ವಿವಿಗಳ ರಾಜಕೀಯ, ಜಾತಿಗಳ ಮೇಲಾಟ, ಕೀಳಾಟ, ಇದರಿಂದ ಸಾಮಾನ್ಯರ ಮನದ ತೊಳಲಾಟ, ಹೀಗೆ ವಿವಿಧ ರೀತಿಯ ಅನುಭವಗಳನ್ನು ನುಡಿಚಿತ್ರಗಳು ಕಟ್ಟಿಕೊಡುತ್ತವೆ.  
ಒಂದೆಡೆ, ಸಾಹಿತ್ಯದ ವಿವಿಧ ಶೈಲಿಗಳ ನೇರ ನಿರೂಪಣೆಯ ಭಾವವಿದ್ದರೆ, ಗುಪ್ತಗಾಮಿನಿಯಂತೆ ಎಲ್ಲ ನುಡಿಚಿತ್ರಗಳಲ್ಲಿ ಕಂಡುಬರುವುದು ಅವರ ಸಮಾಜಕಾರ್ಯದ ಸಿದ್ಧಾಂತಗಳ ಸರಳ ಪಾಠಗಳು. ಒಬ್ಬ ವ್ಯಕ್ತಿಯ ಕತೆಯೇನೋ ಎಂದು ಕಾಣುವ ಸೇಂಟ್ ಫಿಲೋಮಿನಾ ಕಾಲೇಜಿನ ಗೆಳೆಯ 'ರಾಮಚಂದ್ರನ ಚಿತ್ರ' (ಪುಟ 11-32) ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಪರಿಚಯಿಸುವುದು ಅವನ ಜೀವನ ದರ್ಶನವಾಗಿದೆ. ರಾಮಚಂದ್ರನಂತಹ ಶಕ್ತಿಶಾಲಿ ಕವಿಯನ್ನು ನಮ್ಮಿಂದ ಉಳಿಸಿಕೊಳ್ಳಲಾಗಲಿಲ್ಲವಲ್ಲ, ಅವನ ಸಾವು (1955) ಎಚ್.ಎಂ.ಎಂ ಬದುಕಿನಲ್ಲಿ ಇದ್ದಕ್ಕಿದ್ದ ಹಾಗೆ ಶೂನ್ಯವನ್ನು ಸೃಷ್ಟಿಸಿತಲ್ಲಾ ಎಂದು ಓದುಗರಾದ ನಾವು ಕೊರಗುವಂತಾಗುತ್ತದೆ. ಅದೊಂದು ರೀತಿಯ 'ಕೇಸ್ ವರ್ಕ್' (ಪ್ರಕರಣಾಧ್ಯಯನ) ಜೊತೆಗೆ ಹಲವು ಗೆಳೆಯರ ಸಾಮೂಹಿಕ ಕೆಲಸ ಮತ್ತು ಹೊಸ ಸಮುದಾಯದ ಸೃಷ್ಟಿಯ ಯತ್ನ. 1955ರಲ್ಲೇ ಮುಗಿಯಿತೇನೋ ಎಂದುಕೊಂಡರೆ, ತೀರಾ ಇತ್ತೀಚೆಗೆ 2003ರಲ್ಲಿ ದಿ.ರಾಮಚಂದ್ರರನ್ನು ಕುರಿತು, ಆತ ಬರೆದ ಕವನವೊಂದರ ಸಾಲನ್ನೇ ಹಿಡಿದು, 'ಬಿದ್ದದ್ದು ಗರಿಯಲ್ಲ, ಹಕ್ಕಿಯೇ!' ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ
ಬಂಧುಗಳು, ಗೆಳೆಯರು, ಸಹಪಾಟಿಗಳು, ಪ್ರಾಥಮಿಕ ಶಾಲೆಯಿಂದ ವಿವಿವರೆಗಿನ ಗುರುಗಳು, ಸಹವರ್ತಿಗಳು, ಸಹಚಿಂತಕರು, ರಾಜಕೀಯ ಮುತ್ಸದಿಗಳು, ಸ್ವಾತಂತ್ರ್ಯ ಯೋಧರು, ತಮ್ಮ ವಿದ್ಯಾರ್ಥಿಗಳು, ಎಲ್ಲರನ್ನೂ ಉಲ್ಲೇಖಿಸುತ್ತಾ ಸಾಗುವ ಲೇಖನಗಳ ಸರಮಾಲೆ, ಆತ್ಮ ಚರಿತ್ರೆಯ ನೆರಳನ್ನು ಹಿಡಿದಿದ್ದರೂ, ಎಲ್ಲೂ ತನ್ನನ್ನು ವೈಭವೀಕರಿಸಿಕೊಳ್ಳುವ ಅಥವಾ ತನ್ನನ್ನು ಸಮರ್ಥಿಸಿಕೊಳ್ಳುವ ದನಿ ಕಾಣುವುದಿಲ್ಲ. ಅಲ್ಲಲ್ಲಿ ನಾನು ಅಂದುಕೊಂಡದ್ದು ಸರಿಯಲ್ಲವೇನೋ, ಇಂತಹದನ್ನು ಇಲ್ಲಿ ಕಲಿತೆ, ತಿಳಿದೆ, ಅದು ಸಮಾಜಶಾಸ್ತ್ರದ ಅಂಶ ಎನ್ನುವುದು ಕಂಡುಬರುತ್ತದೆ. ಉದಾಹರಣೆಗೆ, ಗುರು ಡೇವಿಡ್ ಹಾರ್ಸ್ ಬ್ರೋ ಅವರೊಡನೆಯ, ಅಂದಿನ ಕಾಲಕ್ಕೆ ಹೊಸತೂ, ವಿಚಿತ್ರವೂ ಆದ ಸಂಭಾಷನೆ. ಡೇವಿಡ್ ಹಾರ್ಸ್ ಬ್ರೋ ತಮ್ಮ ಪತ್ನಿಯನ್ನು ಪರಿಚಯಿಸಿ, “ಇವರು ನನಗೆ ಎರಡನೇ ಸಂಬಂಧ, ಅವರಿಗೆ ನನ್ನದು ಎರಡನೇ ವಿವಾಹ!” ಎನ್ನುವುದು. ಆಗ ಇನ್ನೂ ಕಾಲೇಜಿಗೆ ಕಾಲಿರಿಸಿದ್ದ ಹುಡುಗ ಎಚ್.ಎಂ.ಎಂ. “ಇದು ಅನೈತಿಕ” ಎಂದು ಪ್ರತಿಕ್ರಿಯಿಸಿದ್ದೂ, ಹಾರ್ಸ್ ಬ್ರೋ, ಕುರಿತು ವಿವರಿಸಿದ್ದು, ಈಗ ಕುರಿತು ಓದುವ ನಮಗೆ ನಮ್ಮ ಮುಂದಿನ ಪೀಳಿಗೆಗೂ ರೋಚಕವಾಗದಿರದು. (ಪುಟ 134-141). ಇನ್ನೊಂದು ಮಗ್ಗುಲಿನಲ್ಲಿ ಸಮಾಜಶಾಸ್ತ್ರ ಮತ್ತು ಸಂಶೋಧನೆಯ ಭಾಷೆ, ಅದಕ್ಕೆ ಬೇಕಾದ ಶೋಧ ಬಿಚ್ಚಿಕೊಳ್ಳುವುದು ಬಸವರಾಜ ಕಟ್ಟೀಮನಿ (ಪುಟ 33-47); ಶಬ್ದಗಳೊಡನೆಯ ಸರಸ/ಆಟ, ಅವರ ಆಳವಾದ ಸಾಹಿತ್ಯಾಧ್ಯಯನ ಕಾಣುವುದು ಡಾ. ಚೆನ್ನವೀರ ಕಣವಿ (ಪುಟ 50-60); ಸಾಧಕರನ್ನು ತುಂಬುಹೃದಯದಿಂದ ಗುರುತಿಸುವ ಭಾವ ಡಾ. ಚಿದಾನಂದ ಮೂರ್ತಿ (ಪುಟ 61-65) ಮತ್ತು ಎಚ್.ಎಸ್. ದೊರೆಸ್ವಾಮಿ (ಪುಟ 90-94) ಅವರನ್ನು ಕುರಿತ ವಿವರಣೆ.
ಸಮಾಜಕಾರ್ಯ ಶಿಕ್ಷಣದ ಪ್ರಯಕ್ತ ಒಂದು ತಿಂಗಳು ನಿರ್ದಿಷ್ಟ ಸಂಸ್ಥೆ, ಕ್ಷೇತ್ರದಲ್ಲಿ ದುಡಿದು ಅನುಭವ ಗಳಿಸುವುದು ಕಡ್ಡಾಯ. ಎಚ್.ಎಂ.ಎಂ. ಅವರ ವಿದ್ಯಾರ್ಥಿಯಾದ ನನಗೆ ಅವರು ಹೇಳಿದ್ದು ಹಳ್ಳಿಯೊಂದರಲ್ಲಿ ಕ್ಷೇತ್ರಾನುಭವ ಪಡಿ ಎಂದು (1989). ನಿಜ ಹೇಳುತ್ತೇನೆ, ಗೊಣಗಿಕೊಂಡೇ ಹೋದೆ. ಆದರೆ, ಸಾಕಷ್ಟು ಧನಾತ್ಮಕ ಅನುಭವಗಳನ್ನು ಹೊಂದಿದೆ. ಒಂದು ತಿಂಗಳು ಅತ್ತತ್ತ ಹೋಗೆಂದರೆ, ಹೆಣಗಾಡಿದವನು ನಾನು. ಆದರೆ, ಎಚ್.ಎಂ.ಎಂ. ಕನ್ನಡ ಅಧ್ಯಯನ ಮಾಡುವ ಉತ್ಸಾಹದಲ್ಲಿದ್ದಾಗ, “ಬೇಡ, ಸಮಾಜಶಾಸ್ತ್ರ/ಸೋಷಿಯಾಲಜಿ ಓದು, ಅದಾದ ನಂತರ, ಸಮಾಜಕಾರ್ಯ ಓದಲು ದೆಹಲಿಗೆ ಹೋಗು” ಎಂದು ಆದೇಶಿಸಿದವರು ಡಾ.ಬಿ.ಎಲ್. ಮಂಜುನಾಥ. ಹೀಗೊಂದು ಬದುಕಿನ ತಿರುವು ನೀಡಿದವರನ್ನು ಕುರಿತು ಎಚ್.ಎಂ.ಎಂ. ದಾಖಲಿಸುವುದು ನಿಜಕ್ಕೂ ರೋಚಕ. ಹೀಗೆ ಎಚ್.ಎಂ.ಎಂ. ಎಂಬ ನದಿಗೆ ತಿರುವು ನೀಡಿದ ಡಾ. ಮಂಜುನಾಥ್ ರವರಿಗೆ ನಾವು ಕೃತಜ್ಞತೆ ಸಲ್ಲಿಸಬೇಕು. (ಪುಟ 184-190).
ಹಿಂದಿನ ಎಷ್ಟೋ ಸಂಗತಿಗಳಿಗೆ ಇಂದಿನ ಕೊಂಡಿ ಹಾಕುವ ಹೊಸ ಬರಹದ ಶೈಲಿ 'ಆತ್ಮೀಯರು'ವಿನಲ್ಲಿ ಕಾಣುತ್ತದೆ. ಭೂತಕಾಲದ ವಿಚಾರಲಹರಿಯಲ್ಲಿ ವರ್ತಮಾನದ ಮಾತು, ಭವಿಷ್ಯದಲ್ಲಿ ಹೀಗಾದೀತು ಎನ್ನುವ ಪ್ರವಾದಿಯ ಮಾತು ಸಮಾಜಕಾರ್ಯದ ಹಿನ್ನೆಲೆಯಲ್ಲಿ ಬಹಳ ಪ್ರಮುಖವಾಗುತ್ತದೆ. ಎಲ್ಲ ನೇರ ನಿರೂಪಣೆಯಲ್ಲಿ ಎಲ್ಲದರಲ್ಲೂ, ಎಲ್ಲರಲ್ಲೂ ಧನಾತ್ಮಕ ಭಾವನೆ ತೋರುವ ಎಚ್.ಎಂ.ಎಂ. ಬಗ್ಗೆ ಅಚ್ಚರಿಯೆನಿಸುತ್ತದೆ. ಆದರೂ, ಹೆಕ್ಕಿ ಹೆಕ್ಕಿ ಹುಡುಕಿದರೆ, ಒಂದೆರೆಡು ವಿಷಾದವೂ ಎಡತಾಕುತ್ತದೆ. ತಮ್ಮ ಸ್ವಸ್ತಿಯೊಂದಿಗೆ ನಡೆಸಿದೆ ಸಾಧನೆಯ, 'ನಿರ್ಮಲ ಕರ್ನಾಟಕ' ಕಲ್ಪನೆಯನ್ನು ಸರ್ಕಾರದಲ್ಲಿದ್ದ, ಎಂ.ಪಿ. ಪ್ರಕಾಶ್ ರವರು ತಮ್ಮ ಕಿರೀಟಕ್ಕೆ ಗರಿ ಸಿಕ್ಕಿಸಿಕೊಂಡಾಗ, ಆಗಲಿ ಬಿಡು, ಕರ್ನಾಟಕಕ್ಕೆ ಸಿಕ್ಕ ಉಡುಗೊರೆ ಇದು ಎಂದು ಸಮಾಧಾನ ಮಾಡಿಕೊಂಡಿದ್ದಾರೆ ಎಚ್.ಎಂ.ಎಂ. (ಪುಟ ) ಸಹಪ್ರಾಧ್ಯಾಪಕರು ಕುಹಕವಾಡಿದಾಗ, ನಿಮಗೆ ಡಾಕ್ಟರೇಟ್ ಇಲ್ಲದೆ ವಿಭಾಗ ಮುಖ್ಯಸ್ಥರು ಎಂದು ಹೇಳುತ್ತಾರೆ ಎಂದಾಗ, ಹೌದು. ಅವರು ಹೇಳಿದ್ದು ನಿಜ ಎಂದು ಯಾರ ಮುಖ ಮುರಿಯದೆ ಒಪ್ಪಿಕೊಂಡಿದ್ದಾರೆ. (ಪುಟ  ). ಸಮಾಜವನ್ನು ಕುರಿತು ಅವರ ಕಾಳಜಿ ವ್ಯಕ್ತವಾಗುವುದು,  “ಬಂಧುಗಳಲ್ಲೂ ಹಳೆಯ ಬಾಂಧವ್ಯದ ಬೆಸುಗೆ ಸಡಿಲುತ್ತಾ ಇದ್ದು, ಏನೋ ನಾಟಕೀಯತೆಯು ಪ್ರವೇಶಿಸಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸುತ್ತಲಿದೆ ಎನ್ನಿಸುತ್ತಿದೆ” ಎನ್ನುವ ಮಾತುಗಳು (ಪುಟ 83).
ಬರವಣಿಗೆ ಮತ್ತು ನಿರೂಪಣೆಯ ವಿವಿಧ ತಂತ್ರಗಳನ್ನು (ಪ್ರಾಯಶಃ ಅವರಿಗರಿವಿಲ್ಲದೆ) ಇಲ್ಲಿನ ವಿವಿಧ ನುಡಿಚಿತ್ರಗಳ ಕತೆಗಳಲ್ಲಿ ಎಚ್.ಎಂ.ಎಂ. ಬಹಳ ಸಮರ್ಥವಾಗಿ ಬಳಸಿದ್ದಾರೆ. ಒಂದೆಡೆ ನೇರ ನಿರೂಪಣೆ, ಪ್ರಶ್ನೋತ್ತರ, ವಿಶ್ಲೇಷಣೆ, ಸಂಭಾಷಣೆ ಇತ್ಯಾದಿ. ಬಹಳ ಸೊಗಸಾಗಿ ಎದ್ದು ಕಾಣುವುದು ಫ್ಲಾಷ್ ಬ್ಯಾಕ್ ತಂತ್ರ (ರಾಮಚಂದ್ರನ ಚಿತ್ರ, ಡಾ. ಸಿದ್ಧರಾಮಣ್ಣ, ಪ್ರೊ.ಜಯಲಕ್ಷಮ್ಮಣ್ಣಿ, ಬಸಕ್ಕ, ಇತ್ಯಾದಿ). ಅಲ್ಲಲ್ಲಿ ಚೇತೋಹಾರಿಯಾಗಿ ಬರುವ ಹಾಸ್ಯ, 'ದ್ರೋಣಾಚಾರ್ಯ ಪದವಿ ಒಪ್ಪಿಕೊಳ್ಳುತ್ತೇನೆ ಆದರೆ, ಯಾರ ಬೆರಳನ್ನೂ ಕೇಳುವುದಿಲ್ಲ’ ಎಂದ ಪ್ರೊ. ವಾಸುದೇವ ಮೂರ್ತಿಗಳ ಮಾತು.
ಕೆಲವು ವರ್ಷಗಳ ಹಿಂದೆ ಪ್ರೊ. ಎಚ್.ಎಂ.ಎಂ. ಅವರ ಬದುಕನ್ನು ಕುರಿತು ಪುಸ್ತಕ ಮಾಡುವ ಉತ್ಸಾಹದಿಂದ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದೆ. ಅವರಿಂದ, ಇತರರಿಂದ ಎಚ್.ಎಂ.ಎಂ. ಅವರ ಬದುಕನ್ನು ಕುರಿತು ಅದೆಷ್ಟೊ ಸಂಗತಿಗಳು, ವಿಚಾರಗಳನ್ನು ಕೇಳಿದ್ದೆ. ಅಲ್ಲಿ ದಾಖಲಿಸಲಾಗದಿದ್ದದ್ದು, ಅಥವಾ ಬಹಳ ಚುಟುಕಾಗಿ ಹೇಳಿದ್ದು ಇಲ್ಲಿ ವಿವರವಾಗಿದೆ. ಎಚ್.ಎಂ.ಎಂ. ಅವರಿಗಿರುವ ಜನರನ್ನು ಕುರಿತು ಪ್ರೀತಿ, ಅಭಿಮಾನ, ಕೃತಜ್ಞತೆ, ಅವರಿಂದ ಕಂಡುಕೊಂಡದ್ದು, ತೆರೆದುಕೊಂಡದ್ದು ಎಲ್ಲವೂ ಇಲ್ಲಿ ಹರಿದು ಬಂದಿದೆ. ಇಂತಹದೊಂದು ಅಪೂರ್ವ ಕೃತಿಯನ್ನು ನಮಗೆ ಕೊಟ್ಟಿರುವ ಎಚ್.ಎಂ.ಎಂ. ಅವರಿಗೆ ಮತ್ತು ಪುಸ್ತಕ ಪ್ರಕಟನೆಗೆ ನೆರವಾಗಿರುವ ಎಲ್ಲರೂ, ಮತ್ತು ಬಹಳ ಮುಖ್ಯವಾಗಿ ಗೆಳೆಯ ರಮೇಶ್ ಮತ್ತವರ ಸಂಗಡಿಗರ 'ನಿರುತ ಪ್ರಕಾಶನ'ಕ್ಕೆ ಕೃತಜ್ಞತೆ ಹೇಳಬೇಕೆಂದರೆ ನಾವೆಲ್ಲಾ ಪುಸ್ತಕ ಕೊಂಡು ಓದಬೇಕು.

ಮುಗಿಸುವ ಮುನ್ನ


ಎಚ್.ಎಂ.ಎಂ. ಅವರ ಅನುಭವ, ನೆನಪಿನ ಮೂಸೆಯಲ್ಲಿ ಇನ್ನೂ ಎಷ್ಟು ಜನ ಹೊರಗಿಣಕಲು ಕಾದಿದ್ದಾರೋ ಗೊತ್ತಿಲ್ಲ. ಮೇಷ್ಟ್ರು ಇನ್ನೂ ಬರೆಯಬೇಕು, ಬರೆಸಬೇಕು.  ಮೇಷ್ಟ್ರು ಮಾಡಿರುವ ಕನ್ನಡ ಪೂಜೆಯಲ್ಲಿ ಬಂದಿರುವ ವ್ಯಕ್ತಿಗಳನ್ನು, ಅವರ ವಿವರಣೆಗಳನ್ನು ಓದಿದಾಗ ಸ್ವಲ್ಪ ಹೊಟ್ಟೆ ಕಿಚ್ಚಾದರೆ ಆಶ್ಚರ್ಯವಿಲ್ಲ. ನಾವೂ ಸೇರಿದ್ದರೆ ಅಂದುಕೊಂಡರೆ ತಪ್ಪೇನಿಲ್ಲ!

Vasudeva Sharma 
Executive Director, CRT-Child Rights Trust,
4606, 6th floor, High Point IV, Palace Road, Bangalore 560 001

Off. 080- 41138285 Res. 080 26322513 Mob. 09448472513

3 comments:

  1. ಲೇಖನ ಬರೆದವರ ಹೆಸರೂ ಪ್ರಕಟಿಸಿ ಗುರುಗಳೇ!

    ReplyDelete
  2. ಕ್ಷಮಿಸಿ, ಪ್ರಕಟಿಸಿದ್ದೇವೆ.

    ReplyDelete
  3. ಸಂತೋಷ, ಹೆಸರೂ ಕನ್ನಡದಲ್ಲಿರಬಹುದಿತ್ತಲ್ಲವೆ?

    ReplyDelete