Friday, October 10, 2014

ನಮ್ಮ ಸಮಯಕ್ಕೆ ಬೆಲೆ ಇಲ್ಲವೇ ?



ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಸರ್ಕಾರಿ ಕಚೇರಿಗಳಲ್ಲಿ ತಾಂಡವವಾಡುತ್ತಿದೆ. ಇತ್ತೀಚೆಗೆ ನನಗಾದ ಎರಡು ಅನುಭವಗಳು ಇದಕ್ಕೆ ನಿದರ್ಶನವಾಗಿವೆ. ಪ್ರತಿ ಕೆಲಸಕ್ಕೆ ನಿಗದಿತ ಮೊತ್ತ ನಿಗದಿ ಮಾಡಲಾಗಿದೆ. ಉದಾಹರಣೆಗೆ ಉದ್ದೇಶಿತ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ. ಪ್ರಾರಂಭಿಸಲು ಒಂದು ಲಕ್ಷ ಪಹಣಿ ತಿದ್ದುಪಡಿ ಮಾಡಲು ಒಂದೂವರೆ ಲಕ್ಷ, ಮ್ಯಾರೇಜ್ ಸರ್ಟಿಫಿಕೇಟ್‍ಗೆ ಎರಡೂವರೆ ಸಾವಿರ ಮತ್ತು ಬಿಬಿಎಂಪಿ ಪ್ಲಾನ್ ಅಪ್ರೂವಲ್‍ಗೆ ಹನ್ನೆರಡು ಸಾವಿರ ಹೀಗೆ ಎಲ್ಲ ಕಡೆಗಳಲ್ಲಿ ಲಂಚ ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ.
ಇಂದು ಬೆಂಗಳೂರಿನ ಕಂದಾಯ ಭವನಕ್ಕೆ ವಿಶೇಷ ತಹಶೀಲ್ದಾರ್‍ರವರನ್ನು ನೋಡಲು ಹೊರಟೆ. ಹೊರಡುವ ಮುನ್ನ ಅಲ್ಲಿನ ಪ್ರಥಮ ದರ್ಜೆ ಸಹಾಯಕರಲ್ಲಿ ಸಾಹೇಬರು ಕಚೇರಿಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಂಡೆ ಹಾಗೂ ಅವರನ್ನು ಭೇಟಿ ಮಾಡಲು ಅಪಾಯಿಂಟ್‍ಮೆಂಟ್ ನೀಡುವಂತೆ ವಿನಂತಿಸಿದೆ. ಅಪಾಯಿಂಟ್‍ಮೆಂಟ್‍ ನೀಡಲು ನಿರಾಕರಿಸಿದರು. ನಾನು ಹೋಗುವಷ್ಟರಲ್ಲಿ ಬೆಳಗ್ಗೆ ಹನ್ನೊಂದು ಘಂಟೆ. ಸಾಹೇಬರು ಹೊರಗಡೆ ಹೋಗಿದ್ದರು. ಸಂಜೆ 5.30 ರ ತನಕ ಬರಬಹುದು ಎಂದು ಕಾದು ಕುಳಿತೆ. ಆದರೆ ಬರಲಿಲ್ಲ. ಹೀಗೆ ಸುಮಾರು ಹತ್ತು ಬಾರಿ ಈ ತಿಂಗಳಿನಲ್ಲಿ ಕಚೇರಿಗೆ ಅಲೆದಾಟವಾಗಿದೆ. ಒಂದೂವರೆ ತಿಂಗಳಿಂದ ನಮ್ಮ ಕೆಲಸ ಸಂಪೂರ್ಣವಾಗಿ ಪೂರ್ಣಗೊಂಡು ಸಾಹೇಬರ ಸಹಿಗಾಗಿ ಕಾದು ಕುಳಿತಿದೆ. ಇದು ಬಹುಪಾಲು ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಅನುಭವಿಸುವ ತಾಪತ್ರಯ. ಅಲ್ಲಿದ್ದ ಏಜೆಂಟರೊಬ್ಬರು ಸರ್ ಕೊಡುವುದನ್ನು ಕೊಟ್ಟುಬಿಡಿ ನಿಮ್ಮ ಕೆಲಸ ಒಂದು ದಿನದಲ್ಲಿ ಮಾಡಿಸಿಕೊಡುತ್ತೇನೆ ಎನ್ನುತ್ತಾರೆ. ಇದು ವಾಸ್ತವದ ಸಂಗತಿ.
ಲಂಚ ಕೊಡದಿದ್ದಲ್ಲಿ ಆಗಬೇಕಾದ ಕೆಲಸ ಒಂದು ವರ್ಷವಾದರೂ ಆಗುವುದಿಲ್ಲ. ಅದರ ಬದಲು ಲಂಚ ಕೊಟ್ಟು ಬೇಗ ಕೆಲಸ ಮಾಡಿಸಿಕೊಂಡರೆ ಸಮಯ ಉಳಿಸಬಹುದು ಎಂಬುದು ಅಲ್ಲಿದ್ದ ಏಜೆಂಟನ ಸಲಹೆ.
ಬೇರೆ ಕಡೆ ಇದ್ದ ಹಾಗೆ ಅಪಾಯಿಂಟ್‍ಮೆಂಟ್ ತೆಗೆದುಕೊಂಡು ಭೇಟಿ ಮಾಡಲು ಸರ್ಕಾರಿ ಕಚೇರಿಗಳಲ್ಲಿ ಏಕೆ ಸಾಧ್ಯವಿಲ್ಲ. ಬಹುಶಃ ಲಂಚ ಕೊಡುವವರಿಗೆ ಸಂಜೆ ಬೇರೆ ಬೇರೆ ಹೋಟೆಲ್‍ಗಳಲ್ಲಿ ಅಪಾಯಿಂಟ್‍ಮೆಂಟ್‍ ಸಿಗುತ್ತದೆಯಂತೆ.
ನನ್ನಂತೆಯೇ ಸುಮಾರು ಇಪ್ಪತ್ತು ಜನ ಸಾಹೇಬರ ಬರುವಿಕೆಗಾಗಿ ಬೆಳಗ್ಗೆಯಿಂದ ಸಂಜೆ 5.30 ರ ತನಕ ಕಾದು ಕುಳಿತಿದ್ದರು. ನಮ್ಮ ಸಮಯಕ್ಕೆ ಬೆಲೆ ಇಲ್ಲವೇ ?
ಲಂಚ ಕೊಡದೆ ಕೆಲಸ ಮಾಡಿಸಿಕೊಳ್ಳಲು ಯಾವುದಾದರೂ ಸಲಹೆಗಳಿದ್ದರೆ ನಮಗೆ ತಿಳಿಸಿ.

ರಮೇಶ್ ಎಂ.ಎಚ್.

ನಿರಾತಂಕ

No comments:

Post a Comment