Thursday, September 4, 2014

ಅಕ್ಷರಸ್ಥರ ಅನಾಗರಿಕ ಮುಖವಾಡ ಒಂದು ವಿಶ್ಲೇಷಣೆ



ಅಕ್ಷರಸ್ಥರ ಅನಾಗರಿಕ ಮುಖವಾಡ  ಒಂದು ವಿಶ್ಲೇಷಣೆ

ಗಂಗಾಧರ ರೆಡ್ಡಿ ಎನ್.*

ತೀರಾ ಇತ್ತೀಚೆಗೆ ಬೆಂಗಳೂರನ್ನೂ ಒಳಗೊಂಡಂತೆ ರಾಜ್ಯದ ಇತರ ಭಾಗಗಳಲ್ಲಿ ನಡೆದ ಸರಣಿ ಅತ್ಯಾಚಾರಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿವೆ. ಹಸುಗೂಸುಗಳ ಮೇಲೆ ನಡೆದಂತಹ ಅತ್ಯಾಚಾರಗಳಂತೂ ಸಮಾಜದ ವಿವಿಧ ಸ್ತರಗಳ ಜನರನ್ನು ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವಂತೆ ಮಾಡಿವೆ. ಶಾಂತಿ ಸಹಬಾಳ್ವೆಗೆ ಹೆಸರಾದ ಕನ್ನಡ ನಾಡಿನಲ್ಲಿ ನಡೆದ ಅತ್ಯಾಚಾರ ಸರಣಿಗಳು ನಾಗರಿಕನ (ಮನುಷ್ಯನ) ಅನಾಗರಿಕ ವರ್ತನೆಗೆ ಹಿಡಿದಗನ್ನಡಿ. ರೀತಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಸಹ ರೀತಿಯ ಘಟನೆಗಳು ನಡೆದ ನಿದರ್ಶನಗಳಿವೆ. ಪ್ರಮುಖವಾಗಿ ಮಕ್ಕಳ ಮೇಲೆ ನಡೆದಂತಹ ಅತ್ಯಾಚಾರಗಳನ್ನು ಖಂಡಿಸಿ ಮಾನವ ಹಕ್ಕು, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರರು ಹಾಗು ಸಂಘಟಣೆಗಳು ರಸ್ತೆಗಿಳಿದು ಪ್ರತಿಭಟಿಸಿದ ಉದಾಹರಣೆಗಳು ನಮ್ಮಲ್ಲಿ ಹೇರಳವಾಗಿ ದೊರಕುತ್ತವೆ. ಆದರೆ ಇದೇ ಮೊದಲು ಬೆಂಗಳೂರಿನ ಹೆಸರಾಂತ ಅಂತರಾಷ್ಟ್ರೀಯ ಶಾಲೆಯ ಆರು ವಯಸ್ಸಿನ ಬಾಲೆಯ ಮೇಲೆ ಅಲ್ಲಿನ ಸಿಬ್ಬಂದಿ (ಶಿಕ್ಷಕ / ಮಾರ್ಗದರ್ಶಕ) ನಡೆಸಿದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಪೋಷಕರು, ಸಮಾಜದ ವಿವಿಧ ಸ್ತರದ ಜನರು ಹೋರಾಟಗಾರರು, ವಿದ್ಯಾರ್ಥಿಗಳನ್ನೊಳಗೊಂಡಂತೆ ಎಲ್ಲ ರೀತಿಯ ಸಂಘಟಣೆಗಳು ಮತ್ತು ಸಂಘಸಂಸ್ಥೆಗಳು ಬೀದಿಗಿಳಿದು ಪ್ರತಿಭಟಿಸಿವೆ. ಇದು ಉತ್ತಮ ನಡೆಯಾದರೂ, ಕೆಲವೇ ದಿನಗಳಲ್ಲಿ ಪೋಷಕರ ಆಕ್ರೋಶ ತಣ್ಣಗಾಗಿ ಮತ್ತದೇ ಶಾಲೆಗೆ ತಮ್ಮ ಮಕ್ಕಳನ್ನು ಎಂದಿನಂತೆ ಕಳುಹಿಸುತ್ತಿದ್ದಾರೆ. ಸರ್ಕಾರವೂ ಸಹ ಜನರ ಕಣ್ಣೊರೆಸುವ ಪ್ರಯತ್ನ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಇದರ ಜೊತೆಗೆ ಎಲ್ಲ ಸರ್ಕಾರೇತರ ಶಾಲೆಗಳಿಗೆ (ಖಾಸಗಿ) ಕೆಲ ಮಾರ್ಗಸೂಚಿಗಳನ್ನು ನೀಡಿದ ಸರ್ಕಾರ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕೆಂದು ತಾಕೀತು ಮಾಡಿದೆ. ಇದರ ನಡುವೆ ಬೆಂಗಳೂರಿನ ಶಾಂತಿ ಸುವ್ಯವಸ್ಥೆಯ ಹೊಣೆ ಹೊತ್ತ ಅಧಿಕಾರಿಯನ್ನು ಪದಚ್ಯುತಗೊಳಿಸಿ ಅದೇ ಸ್ಥಾನದಲ್ಲಿ ಬೇರೊಬ್ಬ ಅಧಿಕಾರಿಯನ್ನು ಸರ್ಕಾರ ನೇಮಿಸಿದೆ. ಇಷ್ಟಕ್ಕೆ ಸಮಸ್ಯೆ ತಣ್ಣಗಾಗಿದೆ. ಮಕ್ಕಳು ಎಂದಿನಂತೆ ಶಾಲೆಗೆ ತೆರಳುತ್ತಿದ್ದಾರೆ. ಪೋಷಕರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಆದರೆ ಬಗ್ಗೆ ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ ಬಿಸಿಬಿಸಿ ಚರ್ಚೆಗಳು ಇನ್ನೂ ನಡೆಯುತ್ತಿವೆ. ಕೇವಲ ಕೆಲವೇ ಬೆರಳೆಣಿಕೆಯ ದಿನಪತ್ರಿಕೆಗಳು ವಿಷಯವಾಗಿ ಅನುಪಾಲನೆ ನಡೆಸಿ ವರದಿಗಳನ್ನು ಬಿತ್ತರಿಸುತ್ತಿವೆ.
ವಿಬ್ಗಯಾರ್, ಅತ್ಯಂತ ಸುಪ್ರಸಿದ್ದ ಹಾಗು ದೇಶದ ಇತರ ಕಡೆ ಹಲವಾರು ಶಾಖೆಗಳನ್ನೊಂದಿರುವ ಒಂದು ಅಂತರಾಷ್ಟೀಯ ಶಾಲೆ. ಇತ್ತೀಚಿನ ವರ್ಷಗಳಲ್ಲಿ ಅಂದರೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಅನುಷ್ಠಾನಕ್ಕೆ ಬಂದ ನಂತರ ಇದೊಂದು ಅಲ್ಪಸಂಖ್ಯಾತ ಶಾಲೆಯಾಗಿದೆ (ಬಿಂಬಿಸಲಾಗಿದೆ). ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು (ಟೆಕ್ಕಿಗಳು) ಬಕ ಪಕ್ಷಿಗಳಂತೆ ಕಾಯುತ್ತಿರುವುದು ಸುಳ್ಳಲ್ಲ. ಇದೇ ವಿಬ್ಗಯಾರ್ ಶಾಲೆಯಲ್ಲಿ ತನ್ನ ವಿಶೇಷ ಅಗತ್ಯವುಳ್ಳ ಮಗುವನ್ನು ಓದಿಸಲೇಬೇಕೆಂದು ಒಬ್ಬ ಬಡಪಾಯಿ ಪೋಷಕ ಮೂರು ವರ್ಷಗಳ ಹಿಂದೆ ಮಕ್ಕಳ ಶಿಕ್ಷಣ ಹಕ್ಕಿನ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದರೂ ಪ್ರವೇಶ ದೊರಕಲಿಲ್ಲ. ಅನ್ಯಾಯವನ್ನು ಪ್ರತಿಭಟಿಸಿದ ಪೋಷಕ ನ್ಯಾಯಾಲಯದಲ್ಲಿ ದಾವೆ ಹೂಡಿದರೂ ಪ್ರಯೋಜನವಾಗಲಿಲ್ಲ. ರಾಷ್ಟ್ರೀಯ ಹಾಗು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಮಗುವಿಗೆ ಪ್ರವೇಶ ಕೊಡಿಸುವಲ್ಲಿ ವಿಫಲವಾದವು. ಶಿಕ್ಷಣ ಹಕ್ಕು ಕಾಯ್ದೆಯ ರಕ್ಷಣೆ ಹೊಣೆಹೊತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೈಚೆಲ್ಲಿ ಕುಳಿತರು. ಜೊತೆಗೆ ಸದರಿ ಶಾಲೆಯನ್ನು ಹೊರತುಪಡಿಸಿ ಬೇರೆ ಶಾಲೆಯಲ್ಲಿ ಪ್ರವೇಶ ಕೊಡಿಸುವ ಪುಕ್ಕಟೆ ಅನುಕಂಪ ಹಾಗು ಪೊಳ್ಳು ಆಶ್ವಾಸನೆ ಕೊಟ್ಟು ಕೈತೊಳೆದುಕೊಂಡರು. ಒಂದು ವೇಳೆ ಅಂದು ನಡೆದ ಅನ್ಯಾಯವನ್ನು ಪೋಷಕರು ಸಂಘಟಿತರಾಗಿ ಅಂದೇ ಪ್ರತಿಭಟಿಸಿದ್ದರೆ ಇಂದು ಅಮಾನುಷ ಕೃತ್ಯ ನಡೆಯುತ್ತಿರಲಿಲ್ಲ ಹಾಗು ಬೆಂಗಳೂರು ಅತ್ಯಾಚಾರಿ ನಗರವೆಂಬ ಕುಖ್ಯಾತಿಗೆ ಪಾತ್ರವಾಗಬೇಕಾದ ಪ್ರಮೇಯ ಬರುತ್ತಿರಲಿಲ್ಲ
ಮಕ್ಕಳಿಗೆ ತರಗತಿಯಲ್ಲಿ ಶಿಕ್ಷಣ ನೀಡುವುದನ್ನು ಹೊರತುಪಡಿಸಿದರೆ ಅವರ ರಕ್ಷಣೆ ನಮ್ಮ ಜವಾಬ್ದಾರಿಯಲ್ಲ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಶಾಲೆಯ ವೆಬ್ಸೈಟಿನಲ್ಲಿ ಶಾಲೆಯ ಆಡಳಿತ ಮಂಡಲಿ ಹಿಂದೆಯೇ ಪ್ರಕಟಿಸಿತ್ತು. ಆಗ ಯಾವೊಬ್ಬ ಪೋಷಕನೂ ಸಹ ಇದರ ವಿರುದ್ದ ಧ್ವನಿ ಎತ್ತಲಿಲ್ಲ (ಕೆಲವು ಸಂಘಟಣೆಗಳನ್ನು ಹೊರತುಪಡಿಸಿ). ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವ ಪೋಷಕರೇನೂ ಅನಕ್ಷರಸ್ಥರಲ್ಲ, ಅವರಲ್ಲಿ ಬಹುಪಾಲು ಪೋಷಕರು ಉತ್ತಮ ವಿದ್ಯಾಭ್ಯಾಸವನ್ನು ಪಡೆದಿರುವವರೂ ಮತ್ತು ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದೊಡ್ಡ ಉದ್ಯೋಗದಲ್ಲಿರುವವರೂ ಆಗಿದ್ದಾರೆ. ಅವರೆಲ್ಲರಿಗೂ ಸಹ ಅಂತರ್ಜಾಲದಲ್ಲಿ ಕಾರ್ಯನಿರ್ವಹಿಸಿ ಅನುಭವವೂ ಇದೆ. ಆದರೆ ಶಾಲೆಯ ವೆಬ್ಸೈಟಿನಲ್ಲಿ ಬಿತ್ತರಗೊಂಡಿದ್ದ ಅಂಶವನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳಲೂ ಇಲ್ಲ ಮತ್ತು ವಿರುದ್ಧ ಪ್ರತಿಭಟಿಸಲೂ ಇಲ್ಲ. ಅಕ್ಷರಸ್ಥ ಪೋಷಕರೇ ರೀತಿ ಬೇಜವಾಬ್ದಾರಿತನದಿಂದ ವರ್ತಿಸಿದರೆ ಇನ್ನು ಅನಕ್ಷರಸ್ಥ ಪೋಷಕರ ಮತ್ತು ಅವರ ಮಕ್ಕಳ ಗತಿಯೇನು? ಅಕ್ಷರಸ್ಥರನ್ನೇ ಅಜ್ಞಾನಿಗಳನ್ನಾಗಿ ಮಾಡಿ, ಅವರ ಮಕ್ಕಳಿಗೆ ಶಿಕ್ಷಣ ನೀಡುವ ನೆಪದಲ್ಲಿ, ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಲೂಟಿ ಮಾಡುತ್ತಿರುವ ತೆರನಾದ ಶಿಕ್ಷಣ ಸಂಸ್ಥೆಗಳು, ಇಂದು ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿ ಅದನ್ನು ಹೆಚ್ಚು ಬೆಲೆ ನೀಡುವವರಿಗೆ ಮಾರಾಟ ಮಾಡುತ್ತಿರುವ ವ್ಯಾಪಾರಿ ಕೇಂದ್ರಗಳಾಗಿವೆ. ಸತ್ಯವನ್ನರಿಯದ ಸಮಾಜದ ಉನ್ನತ ಹಾಗು ಮಧ್ಯಮ ಸ್ತರದ ಅಕ್ಷರಸ್ಥ ಅಜ್ಞಾನಿ ಪೋಷಕರು ಶಾಲೆಗಳ ಮೋಸದ ಜಾಲಕ್ಕೆ ಬಹಳ ಬೇಗ ಬೀಳುತ್ತಿದ್ದಾರೆ.
ಪ್ರಸ್ತುತ ಶಿಕ್ಷಣ ಜ್ಞಾನಾರ್ಜನೆಗಿರುವ ಮಾರ್ಗವಲ್ಲ. ಬದಲಿಗೆ ಇದು ಸರ್ವಸ್ವ, ಇಂದು ಶಿಕ್ಷಣ ಪಡೆಯುವುದು ಕೇವಲ ಉದ್ಯೋಗ ಪಡೆಯವುದಕ್ಕೇ ಹೊರತು ಜ್ಞಾನರ್ಜನೆಗಂತೂ ಖಂಡಿತಾ ಅಲ್ಲವೇ ಅಲ್ಲವೆಂಬ ಸತ್ಯವನ್ನರಿಯಲು ನಮಗೆ ಸಾಕಷ್ಟು ಉದಾಹರಣೆಗಳು ಕಾಣಸಿಗುತ್ತವೆ. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಪೋಷಕರು ಶಾಲೆಯಲ್ಲಿ ಬೋಧಿಸುವ ಶಿಕ್ಷಕರ ಅರ್ಹತೆಗಳಿಗಿಂತ ಹೆಚ್ಚಾಗಿ ಶಾಲೆಯ ಭೌತಿಕ ಪರಿಸರ, ಮೂಲಭೂತ ಸೌಕರ್ಯಗಳು, ಶಾಲೆಯಲ್ಲಿರುವ ವಿವಿಧ ಸೌಲಭ್ಯಗಳು, ಹಿಂದೆ ಶಾಲೆಯಲ್ಲಿ ಓದಿದ ಮಕ್ಕಳ ಸಾಧನೆ (ಕೇವಲ ಅಂಕಗಳು / ಸೆಂಟ್ ಪರ್ಸೆಂಟ್ ರಿಸಲ್ಟ್) ಇತ್ಯಾದಿಗಳ ಬಗ್ಗೆ ಹೆಚ್ಚು ಗಮನವಹಿಸುತ್ತಾರೆಯೇ ವಿನಃ ಶಾಲೆಯಲ್ಲಿ ಮಕ್ಕಳಿಗೆ ಬೋಧಿಸುವ ಶಿಕ್ಷಕರ ಅರ್ಹತೆ, ಅವರ ಮನೋಭಾವನೆ, ಮಕ್ಕಳೊಂದಿಗೆ ಶಿಕ್ಷಕರ ಒಡನಾಟ, ಸೇವಾ ಮನೋಭಾವನೆ, ಶಿಕ್ಷಕರು ಮಕ್ಕಳನ್ನು ಸ್ವೀಕರಿಸುವ ರೀತಿ ಇತ್ಯಾದಿಗಳ ಬಗ್ಗೆ ಬಹುಪಾಲು ಪೋಷಕರು ಗಮನವಹಿಸುವುದೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಮಕ್ಕಳು ಪ್ರತಿಷ್ಟಿತ ಶಾಲೆಯಲ್ಲೇ ಓದಬೇಕೆಂಬ ಪೋಷಕರ ಆಕಾಂಕ್ಷೆ. ಸಾಮಾನ್ಯವಾಗಿ ಮದ್ಯಮ ವರ್ಗದ ಅನಕ್ಷರಸ್ಥರನ್ನೂ ಒಳಗೊಂಡಂತೆ ಅಕ್ಷರಸ್ಥರೂ ಸಹ ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಓದಿಸಲು ಇಚ್ಚಿಸುವುದಿಲ್ಲ. ಕಾರಣ ಸರ್ಕಾರಿ ಶಾಲೆಗಳ ಬಗ್ಗೆಯಿರುವ ತಾತ್ಸಾರ ಮನೋಬಾವ ಮತ್ತು ಉಚಿತವಾಗಿ ದೊರೆಯುವುದೆಲ್ಲ ನಿಕೃಷ್ಟವೆಂಬ ತಪ್ಪು ಕಲ್ಪನೆ. ಸರ್ಕಾರೇತರ ಶಾಲೆಗಳ ಮಾರುಕಟ್ಟೆ ನೀತಿಗೆ ಮಾರುಹೋದ ಪೋಷಕರು, ಸರ್ಕಾರೇತರ ಶಾಲೆಗಳಲ್ಲಿ ಓದಿಸಿದರೆ ಮಾತ್ರ ಸಮಾಜದಲ್ಲಿ ತಮ್ಮ ಘನತೆ ಪ್ರತಿಷ್ಟೆ ಅಧಿಕವಾಗುತ್ತದೆಯೆಂಬ ಕುರುಡು ನಂಬಿಕೆ. ಜೊತೆಗೆ ಇಂದು ಮಕ್ಕಳ ಶಿಕ್ಷಣಕ್ಕೆ ಅತ್ಯಧಿಕ ಹಣವನ್ನು ತೊಡಗಿಸುತ್ತಿರುವುದರ ಪ್ರಮುಖ ಉದ್ದೇಶವೆಂದರೆ ಶಿಕ್ಷಣ ಮುಗಿದ ಕೂಡಲೇ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಒಳ್ಳೆಯ ಸಂಬಳ ಪಡೆಯಲಿ ಎಂಬ ದೂ(ದು)ರಾಲೋಚನೆ. ಆಂಗ್ಲ ಮಾಧ್ಯಮದ ಗುರಿಯೂ ಸಹ ಇದೇ ಎಂದರೆ ಖಂಡಿತಾ ತಪ್ಪಾಗದು. ಇಂದು ಬಹಪಾಲು ಪೋಷಕರು ಆಂಗ್ಲ ಮಾಧ್ಯಮದ ಮಾಯೆಯಲ್ಲಿ ಬಿದ್ದಿರುವುದರ ಹಿಂದಿನ (ದುರು)ದ್ದೇಶವೂ ಸಹ ಮಕ್ಕಳಿಗೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಆದಷ್ಟು ಬೇಗ ಕೆಲಸ ಸಿಗಲೆಂಬ ಆಕಾಂಕ್ಷೆ. ಆದ್ದರಿಂದಲೇ ಸಣ್ಣ ಪಟ್ಟಣ ಮತ್ತು ಬೃಹತ್ ನಗರಗಳಲ್ಲಿ ಹಿಂದೆಂದಿಗಿಂತಲೂ ಇಂದು ಅತ್ಯಧಿಕ ಸಂಖ್ಯೆ ಶಾಲಾ-ಕಾಲೇಜುಗಳು ನಾಯಿಕೊಡೆಗಳಂತೆ ರೂಪುಗೊಳ್ಳುತ್ತಿವೆ.
ಮಕ್ಕಳಿಗೆ ಉತ್ತಮ ಮತ್ತು ಆಂಗ್ಲ ಮಾಧ್ಯಮದ (ಬರೀ ಕನಸು ಮಾತ್ರ) ಶಿಕ್ಷಣವನ್ನು ಕೊಡಿಸುವ ಸಲುವಾಗಿ, ಮಧ್ಯಮ ವರ್ಗದ ಮುಗ್ಧ ಜನ ಅಂತರರಾಷ್ಟ್ರೀಯ ಶಾಲೆಗಳೆಂದು ಬೋರ್ಡ ಹಾಕಿಕೊಂಡು ಶಿಕ್ಷಣವನ್ನೆ ವ್ಯಾಪಾರ ಮಾಡಲು ಅಸ್ತಿತ್ವಕ್ಕೆ ಬಂದಂತಹ ಅನುದಾನ ರಹಿತ ಶಾಲೆಗಳಿಗೆ ಲಕ್ಷಗಟ್ಟಲೆ ಡೊನೇಷನ್ ಸುರಿದು ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ. ಮುಗ್ಧತೆಯನ್ನೇ ಬಂಡವಾಳವನ್ನಾಗಿಸಿಕೊಂಡ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳು ಪೋಷಕರನ್ನು ಸುಲಿಗೆ ಮಾಡುತ್ತಿವೆ. ಜೊತೆಗೆ ಸಾಧ್ಯವಾದ ಮಟ್ಟಿಗೆ ಮಕ್ಕಳನ್ನೂ ಒಳಗೊಂಡಂತೆ ಪೋಷಕರನ್ನು ಶೋಷಿಸುತ್ತಾರೆ. ಸಕರ್ಾರೇತರ ಶಾಲೆಗಳಲ್ಲಿ ಜರುಗುವ ಹಲವು ರೀತಿಯ ಶೋಷಣೆಗಳಲ್ಲಿ ಇತ್ತೀಚೆಗೆ ವಿಬ್ಗಯಾರ್ ಶಾಲೆಯಲ್ಲಿ ಮುಗ್ಧ ಕಂದಮ್ಮನ ಮೇಲೆ ನಡೆದ ಅತ್ಯಾಚಾರವೂ ಸಹ ಒಂದು. ಅಂದು ನಡೆದ ಅತ್ಯಾಚಾರ ಆಡಳಿತ ಮಂಡಳಿಯ ಸದಸ್ಯರಿಂದ ಗತಿಸದಿರಬಹುದು ಆದರೆ ವಿಷಯ ಬೆಳಕಿಗೆ ಬಂದ ನಂತರ ಆಡಳಿತ ಮಂಡಳಿ ತೋರಿದ ಧೋರಣೆ ಹಾಗು ಮಗುವನ್ನು ಮಾನಸಿಕ ಅಸ್ವಸ್ಥೆಯೆಂದು ಮೂದಲಿಸಿದ ಪರಿ ಶಿಕ್ಷಣ ವ್ಯಾಪಾರಿಗಳ ಮತ್ತು ಆಡಳಿತ ಮಂಡಳಿಗಳ ರಾಕ್ಷಸೀ ಮುಖವಾಡದ ಉಗ್ರ ರೂಪದ ದರ್ಶನವಾಗುತ್ತದೆ. ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷಿಸದ ಆಡಳಿತ ಮಂಡಲಿ ಶಾಲೆಗೆ ಬೀಗ ಜಡಿಯಿತು. ರೊಚ್ಚಿಗೆದ್ದ ಪೋಷಕರು ಶಾಲೆಯ ಭೌತಿಕ ಸ್ವರೂಪನ್ನು ವಿರೂಪಗೊಳಿಸಿದರು. ಆದರೂ ಆಡಳಿತ ಮಂಡಳಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ. ಪ್ರತಿಭಟನೆಗಳು ಹಾಗು ಹೋರಾಟಗಳು ಹೆಚ್ಚಾದವು. ವಿಬ್ಗಯಾರ್ ಶಾಲೆಯಲ್ಲಿ ನಡೆದ ಕೃತ್ಯ ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಪಡೆಯಿತು. ನಾಗರಿಕ ಸಮಾಜ ಶಾಲೆಯ ಆಡಳಿತ ಮಂಡಳಿಗೆ ಛೀಮಾರಿ ಹಾಕಿತು. ಹತ್ತಕ್ಕೂ ಅಧಿಕ ದಿನಗಳ ಕಾಲ ಶಾಲೆಯೂ ಮುಚ್ಚಿತ್ತು. ಮಧ್ಯೆ ಸರ್ಕಾರ ಎಲ್ಲ ಸರ್ಕಾರೇತರ ಶಾಲೆಗಳಿಗೆ ಅನ್ವಯವಾಗುವ ಕೆಲ ಮಕ್ಕಳ ರಕ್ಷಣಾ ಮಾರ್ಗಸೂಚಿಗಳನ್ನು ಸೂಚಿಸಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕೆಂದು ತಾಕೀತು ಮಾಡಿತು. ಸರ್ಕಾರದ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ದಿಕ್ಕರಿಸಿದ ಕರ್ನಾಟಕ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಇವುಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲವೆಂದು ಬಹಳ ಸ್ಪಷ್ಟವಾಗಿ ತಿಳಿಸಿತು. ಯಾವುದೇ ಸರ್ಕಾರೇತರ ಶಾಲೆ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಗೋಜಿಗೂ ಸಹ ಹೋಗಿಲ್ಲ. ಶಿಕ್ಷಣ ಇಲಾಖೆ ಮತ್ತು ಗೃಹ ಇಲಾಖೆಯೂ ಸಹ ಬಗ್ಗೆ ಹೆಚ್ಚು ಗಮನವಹಿಸುತ್ತಿಲ್ಲ. ಕಡೇ ಪಕ್ಷ ಪೋಷಕರಾದರೂ ಬಗ್ಗೆ ಗಮನಹರಿಸಬೇಕಿತ್ತು. ಆದರೆ ಅವರೂ ಸಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಎಂದಿನಂತೆ ಕೆಲವೇ ಸಂಘಟಣೆಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಬದಲಾವಣೆಗಳಿಗಾಗಿ ಕಾರ್ಯನಿರ್ವಹಿಸುತ್ತಿವೆ. ಈಗ ಮತ್ತೆ ಶಾಲೆ ಆರಂಭವಾಗಿದೆ. ಮಕ್ಕಳೂ ಶಾಲೆಗೆ ಹೋಗುತ್ತಿದ್ದಾರೆ. ಅದೇ ಶಾಲೆ, ಅದೇ ಶಿಕ್ಷಕರೂ ಮತ್ತದೇ ಪೋಷಕರೂ ಲಕ್ಷಗಟ್ಟಲೆ ಡೊನೇಷನ್ ತೆತ್ತು ತಮ್ಮ ಮಕ್ಕಳನ್ನು ಅಲ್ಲಿಯೇ ಓದಿಸುತ್ತಿದ್ದಾರೆ. ನಡುವೆ ಮಕ್ಕಳ ರಕ್ಷಣೆ ವಿಷಯ ನಗಣ್ಯವಾಗುತ್ತಿದೆಯೇನೋ ಎಂಬ ಆತಂಕ ಕಾಡುತ್ತಿದೆ.
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ವ್ಯಾಪಾರಿ ನೀತಿಗಿಂತ ಪೋಷಕರಲ್ಲಿರುವ ವ್ಯಾಪಾರಿ ಮನೋಭಾವನೆ ವಿಪರೀತವಾಗುತ್ತಿದೆ. ಪೋಷಕರ ಮನೋಭಾವನೆ / ಧೋರಣೆ ಮಕ್ಕಳ ರಕ್ಷಣೆಗೆ ಮಾರಕವಾಗಿ ಪರಿಣಮಿಸುತ್ತಿದೆತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರಿಗೆ ಹಲವಾರು ಪರ್ಯಾಯ ವ್ಯವಸ್ಥೆಗಳಿವೆ. ಮಕ್ಕಳಿಲ್ಲದೆ ಯಾವುದೇ ಖಾಸಗಿ ಶಾಲೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದ ಸರ್ಕಾರೇತರ ಶಾಲೆಗಳ ಟೊಂಕ ಮುರಿಯುವ ಅವಕಾಶಗಳು ವಿಫುಲವಾಗಿವೆ. ಮಕ್ಕಳ ರಕ್ಷಣೆಯನ್ನು ಕಡೆಗಣಿಸಿರುವ ಸರ್ಕಾರೇತರ ಶಾಲೆಗಳಿಗೆ ತಕ್ಕ ಪಾಠ ಕಲಿಸುವ ಜವಾಬ್ದಾರಿ ಮತ್ತು ಅಗತ್ಯತೆ ಪೋಷಕರ ಮೇಲಿದೆ. ನಿಟ್ಟಿನಲ್ಲಿ ಪೋಷಕರು ಆಲೋಚಿಸಿ ಜಾಗೃತರಾಗಬೇಕಿದೆ.
ಹಿಂದೆಯೂ ಸಹ ಇದೇ ತೆರನಾದ ಹಲವಾರು ಪ್ರಕರಣಗಳು ನಡೆದರೂ ಸಹ (ಫಾಸ್ಕಲ್ ಪ್ರಕರಣ, ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿದೆ) ಪೋಷಕರೇಕೆ ಪ್ರತಿಕ್ರಿಯಿಸಲಿಲ್ಲ? ಅದು ಅತ್ಯಾಚಾರವಲ್ಲವೇ? ಅಲ್ಲಿನ ಕೃತ್ಯದ ಬಲಿಪಶು ಮಗುವಲ್ಲವೇ? ಹಾಡಿ ಮತ್ತು ಹಳ್ಳಿಗಳಲ್ಲಿ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳೇಕೆ ಸುದ್ದಿ ಮಾಡುವುದಿಲ್ಲ? ಮೇಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವ ಉತ್ತರ ಅದೇ ಅನಕ್ಷರತೆ, ಅಜ್ಞಾನ, ಅರಿವಿನ ಕೊರತೆ, ಪುರುಷ ಪ್ರಧಾನ ಸಮಾಜ, ಕುಟುಂಬ ವಿಘಟಣೆ, ಪಾಶ್ಚ್ಯಾತ ಸಂಸ್ಕೃತಿಗಳ ಅನುಕರಣೆ ಇತ್ಯಾದಿ. ಆದರೆ ನಿಜವಾಗಿಯೂ ಮೇಲಿನ ಅಂಶಗಳು ಪ್ರಸ್ತುತ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳಿಗೆ ಕಾರಣವಾಗುತ್ತಿವೆಯೇ ಎಂಬುದು ಮಾತ್ರ ಇಂದಿಗೂ ನಿಗೂಢ ಮತ್ತು ಬಿಡಿಸಲಾಗದ ಯಕ್ಷಪ್ರಶ್ನೆ. ಪ್ರಸ್ತುತ ಕಾಲಮಾನದ ನೆಲೆಗಟ್ಟಿನಲ್ಲಿ ನಿಂತು ಅವಲೋಕಿಸಿದರೆ, ಹಿಂದೆ ಯಾವುದೇ ಔಪಚಾರಿಕ ಸಾಮಾಜಿಕ ನಿಯಂತ್ರಣವಿಲ್ಲದಿದ್ದರೂ ಸಹ ಮಕ್ಕಳನ್ನೊಳಗೊಂಡಂತೆ ವಿಧವೆ, ಹಿರಿಯರಿಗೆ ಮತ್ತು ಅಂಗವಿಕಲರಿಗೆ ಕುಟುಂಬದಲ್ಲಿ ರಕ್ಷಣೆ ಸಿಗುತ್ತಿತ್ತು. ಇವರ ರಕ್ಷಣೆ ಅಂದು ಕುಟುಂಬದ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿತ್ತು. ಆದರೆ ಇಂದು ನಾಗರಿಕತೆ ಬೆಳೆದಂತೆ ಅನೌಪಚಾರಿಕ (ನೀತಿ, ನಿಯಮ, ಸಂಪ್ರದಾಯ) ಸಾಮಾಜಿಕ ನಿಯಂತ್ರಣ ವ್ಯವಸ್ಥೆ ಕಾಣೆಯಾಗಿದೆ ಮತ್ತು ಅದರ ಸ್ಥಾನದಲ್ಲಿ ಔಪಚಾರಿಕ ನಿಯಂತ್ರಣ ವ್ಯವಸ್ಥೆ, ಅದನ್ನು ನಿಗಾವಹಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಜನರಿಗೆ ರಕ್ಷಣೆ ಒದಗಿಸುವ ಸಲುವಾಗಿ ಪೋಲಿಸ್ ಇಲಾಖೆ ಮತ್ತು ನ್ಯಾಯಾಲಯಗಳು ಅಸ್ತಿತ್ವದಲ್ಲಿವೆ. ಹೀಗಿದ್ದರೂ ಸಹ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ.
ಪ್ರಸ್ತುತ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಆರೋಪಿಸಲ್ಪಟ್ಟವರೇನು ಅನಕ್ಷರಸ್ಥರಲ್ಲ. ಅವರು ವಿದ್ಯಾವಂತರೂ ಹಾಗು ಮಕ್ಕಳಿಗೆ ಬೋಧನೆ ಮಾಡುವಂತಹ ಜವಾಬ್ದಾರಿಯುತ ಸೇವೆಯಲ್ಲಿರುವ ಮಾರ್ಗದರ್ಶಕರು / ಶಿಕ್ಷಕರು. ಇಂತಹ ಗೌರವಯುತ ವೃತ್ತಿಯಲ್ಲಿರುವಂತಹವರೇ ತಮ್ಮ ಕಾಮ ತೃಷೆ ತೀರಿಸಿಕೊಳ್ಳಲು ತಮ್ಮದೇ ವಿದ್ಯಾರ್ಥಿಗಳನ್ನು (ಮಕ್ಕಳನ್ನು) ಬಲಿಪಶುಗಳನ್ನಾಗಿ ಮಾಡಿಕೊಳ್ಳುತ್ತಿರುವುದು ಪೈಚಾಚಿಕ ಕೃತ್ಯ. ಇದನ್ನು ನಾಗರೀಕ ಸಮಾಜ ಎಂದೂ ಸಹಿಸದು. ಮಾನವ ಹಕ್ಕು, ಮಹಿಳಾ ಹಕ್ಕು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಶ್ರೀಸಾಮಾನ್ಯರಲ್ಲಿ ಜಾಗೃತಿ ಮೂಡುತ್ತಿರುವ ಪ್ರಸ್ತುತ ಸಂದಂರ್ಭದಲ್ಲಿ ತೆರನಾದ ಕೃತ್ಯಗಳು ಬಹಳ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸುತ್ತಿವೆ. ಕೃತ್ಯಗಳು ಮಹಿಳಾ ಮತ್ತು ಮಕ್ಕಳ ರಕ್ಷಣಾ ಆಂದೋಲನಗಳಿಗೆ ಸವಾಲೊಡ್ಡುತ್ತಿವೆ. ಮಕ್ಕಳ ಹಕ್ಕುಗಳ ರಕ್ಷಣೆಗಿರುವ ಕಾನೂನುಗಳ ಸಂಖ್ಯೆ ಅಧಿಕವಾದಷ್ಟು ಹಾಗು ಇವುಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿದಷ್ಟು ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತಿದೆ. ಇಲ್ಲಿ ನಾವು ಯಾರೊಬ್ಬರನ್ನೂ ದೂಷಿಸುವುದರಲ್ಲಿ ಅರ್ಥವಿಲ್ಲ. ಅಂದರೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬಾರದೆಂದೂ ಅರ್ಥವಲ್ಲ. ಇಂತಹ ಕೃತ್ಯಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಗುರುತರವಾದ ಕಾರ್ಯ ಸಾಧಿಸಲು ಸಮಾಜದ ಪ್ರತಿಯೊಬ್ಬ ಸದಸ್ಯನ ಒಪ್ಪಿಗೆ ಮತ್ತು ಸಹಮತದ ಅಗತ್ಯತೆಯಿದೆ. ಜನರಲ್ಲಿ ಮಾಯವಾಗುತ್ತಿರುವ ನೈತಿಕತೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ಆಂದೋಲನೋಪಾದಿಯಲ್ಲಿ ಜರುಗಬೇಕಿವೆ. ಆಂದೋಲನಗಳು ಕೇವಲ ಕೆಲವರ ಸ್ವತ್ತಾಗಬಾರದು. ಇವುಗಳು ಪೋಷಕರನ್ನೊಳಗೊಂಡಂತೆ ಮಕ್ಕಳ ಸ್ವತ್ತಾಗಬೇಕಿದೆ. ಪ್ರಸ್ತುತ ಮಕ್ಕಳನ್ನು ಸಮಾಜಕ್ಕೆ ಉಪಯೋಗವಾಗುವ ಒಬ್ಬ ಜವಾಬ್ದಾರಿಯುತ ಪ್ರಜೆಯನ್ನಾಗಿ ಬೆಳೆಸುವ ಬದಲು ಕೇವಲ ವಿದ್ಯಾವಂತ ನಿಷ್ಪ್ರಯೋಜಕ ವ್ಯಕ್ತಿಗಳನ್ನಾಗಿ ರೂಪಿಸುತ್ತಿರುವುದು ತೀರಾ ಸಾಮಾನ್ಯ. ಹಣ ಗಳಿಸುವುದೊಂದೆ ಶಿಕ್ಷಣದ ಪರಮಗುರಿಯೆಂಬಂತೆ ಬಹುಪಾಲು ಪೋಷಕರು ಮಕ್ಕಳ ಮನಸ್ಸನ್ನು ಕದಡುತ್ತಿದ್ದಾರೆ. ಪೋಷಕರ ಅಪಾಯಕಾರಿ ಮನೋಭಾವನೆಯನ್ನು ಅನುದಾನರಹಿತ ಖಾಸಗಿ ಶಾಲೆಗಳು ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ. ಲಾಭವನ್ನೇ ಪ್ರಮುಖ ಧ್ಯೇಯವನ್ನಾಗಿ ಹೊಂದಿರುವ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಅವುಗಳು ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅಕ್ಷರಸ್ಥ ಬುದ್ಧಿವಂತ ಪೋಷಕರು ಭಾರತೀಯ ಸಮಾಜದ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವಲ್ಲಿ ವಿಫಲವಾಗುತ್ತಿವೆ. ವಿಫಲತೆಯೇ ಇಂದು ನಡೆಯುವಂತಹ ಬಹುಪಾಲು ದೌರ್ಜನ್ಯಗಳಿಗೆ ಮೂಲ ಕಾರಣವಾಗುತ್ತಿದೆ. ಇದು ಸಾಧ್ಯವಾಗಿಸಬೇಕಾದರೆ ಪೋಷಕರು ಜಾಗೃತರಾಗಿ ತಮ್ಮ ಮಕ್ಕಳ ಕಲಿಕೆಗೆ ಸೂಕ್ತವಾದ ಹಾಗು ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಶಿಕ್ಷಣ ಸಂಸ್ಥೆಗಳನ್ನು ಆಯ್ದುಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಇದು ಕ್ಷಣಕ್ಕೆ ಅಪ್ರಸ್ತುತವೆನಿಸಬಹುದು ಆದರೆ ಮುಂದಿನ ಪೀಳಿಗೆಗೆ ಇದೇ ಪ್ರಸ್ತುತ ಮತ್ತು ಸೂಕ್ತ. ಮನುಷ್ಯರಾದ ನಾವು ನಮ್ಮ ಮುಂದಿನ ಪೀಳಿಗೆಗಾಗಿ ಏನನ್ನಾದರೂ ನೀಡಬೇಕೆಂದಿದ್ದರೆ ಅದು ನೈತಿಕ ಮೌಲ್ಯಗಳು ಮಾತ್ರ. ಏಕೆಂದರೆ ಅವುಗಳು ಇಂದು ನಶಿಸಿಹೋಗುವ ಹಂತದಲ್ಲಿವೆ. ಅವುಗಳನ್ನು ರಕ್ಷಿಸಬೇಕಾದರೆ ಹಣ, ಅಂತಸ್ತು, ಅಧಿಕಾರ, ಆಸ್ತಿ, ಪಾಸ್ತಿ, ಇವ್ಯಾವುಗಳು ಬೇಕಾಗಿಲ್ಲ ಬದಲಿಗೆ ನಿಮ್ಮ ಮಕ್ಕಳಲ್ಲಿ ಉತ್ತಮ ಮಾನವೀಯ ಹಾಗು ನೈತಿಕ ಮೌಲ್ಯಗಳನ್ನು ಬೆಳೆಸಿ ಹಾಗು ಇದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿರಿ.


* ಮಕ್ಕಳ ಹಕ್ಕು ಹಾಗು ಆರ್.ಟಿ. ಕಾರ್ಯಕರ್ತರು ಹಾಗು ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

No comments:

Post a Comment