Wednesday, January 28, 2015

ಯುಗಾಂತ - ಒಂದು ಅವಲೋಕನಎಂ. ಬಸವಣ್ಣ

ತಿರುಳು
ಡಾ. ಎಂ. ಬಸವಣ್ಣರವರು ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕರು ಹಾಗೂ ಕನ್ನಡದಲ್ಲಿ ಪ್ರಸಿದ್ಧ ಬರಹಗಾರರು. ಯುಗಾಂತ ಲೇಖನವು ಮಹಾಭಾರತದಲ್ಲಿನ ಸಾಮಾಜಿಕ ಬದುಕನ್ನು ವಿಶ್ಲೇಷಣೆ ಮಾಡುವ ಒಂದು ಪ್ರಯತ್ನವಾಗಿದೆ. ಪಾತ್ರದಲ್ಲಿರುವ ದೈವತ್ವವನ್ನು ಉತ್ಪ್ರೇಕ್ಷಿಸಿಲ್ಲ. ಪಾತ್ರಗಳನ್ನು ಅವರ ಇಷ್ಟ ಹಾಗೂ ಕಷ್ಟ, ಪ್ರೀತಿ, ದ್ವೇಷ ಮತ್ತು ಮಹತ್ವಾಕಾಂಕ್ಷೆಗಳಿಂದ ಸಾಮಾನ್ಯ ಮಾನವರ ರೀತಿ ಚಿತ್ರಿಸಲಾಗಿದೆ.
* * * * *
ಇತ್ತೀಚೆಗೆ ಕನ್ನಡದಲ್ಲಿ ಒಂದು ಅಪೂರ್ವ ಪುಸ್ತಕ ಪ್ರಕಟಗೊಂಡಿದೆ; ಅದು ಕೆಲವರ್ಷಗಳ ಹಿಂದೆ ಪುಣೆ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಶ್ರೀಮತಿ (ದಿವಂಗತ) ಇರಾವತಿ ಕರ್ವೆಯವರು ಮರಾಠಿ ಮತ್ತು ಇಂಗ್ಲೀಷ್‍ನಲ್ಲಿ ರಚಿಸಿರುವ, ಯುಗಾಂತ ಕೃತಿಯ ಕನ್ನಡ ಅನುವಾದ (ಪ್ರಕಾಶಕರು ಬೆಂಗಳೂರಿನ ಅಭಿನವ, 2013). ಪುಸ್ತಕ ಮಹಾಭಾರತವನ್ನು ಸಂಬಂಧಿಸಿದುದು. ಮಹಾಭಾರತವನ್ನು ಕುರಿತು ವಿಶ್ವದಾದ್ಯಂತ ಹಲವಾರು ಭಾಷೆಗಳಲ್ಲಿ ಗ್ರಂಥಗಳು ಹೊರಬಿದ್ದಿವೆ; ಅಂದಮೇಲೆ, ಕರ್ವೆಯವರದೇನು ವಿಶೇಷ ಎಂದು ಕೇಳಬಹುದು. ಕರ್ವೆಯವರ ಕೃತಿಯಲ್ಲಿ ವಿಶೇಷವಿದೆ; ವೈಶಿಷ್ಠ್ಯವಿದೆ. ಸಾಮಾನ್ಯವಾಗಿ ಮಹಾಭಾರತವನ್ನು ಕುರಿತು ಬರೆದವರೆಲ್ಲರೂ ಅದೊಂದು ಮಹಾಕಾವ್ಯ, ಬೃಹದ್ಗ್ರಂಥ, ಹಿಂದು ಪರಂಪರೆಯ ಇತಿಹಾಸ (ಇತಿಹಾಸವೆನ್ನುವ ಮಾತನ್ನು ಅದು ನಡೆದದ್ದು ಹೀಗೆ ಎಂದು ಅರ್ಥೈಸುತ್ತಾರೆ), ಭಾರತದ ಸಂಸ್ಕೃತಿಯ ವಿಶ್ವಕೋಶ, ಐದನೆಯ ವೇದವೆಂದು ಪರಿಭಾವಿಸಿ, ಅದನ್ನು ನಮಗೆ ಪೂಜನೀಯ ವಸ್ತುವನ್ನಾಗಿ ಮಾಡಿದ್ದಾರೆ. ಅದೆಲ್ಲಾ ನಿಜವಿರಬಹುದು. ಆದರೆ ಕರ್ವೆಯವರು ಮಹಾಭಾರತ ನಮ್ಮ ಪಕ್ಕದ ಊರಿನಲ್ಲಿ ನಡೆದಿರಬಹುದು, ಕೌರವ-ಪಾಂಡವರು ನಮ್ಮ ನೆರೆಹೊರೆಯವರಿರಬಹುದು ಎನ್ನುವಂತೆ ಬರೆದಿದ್ದಾರೆ. ಕರ್ವೆ ಸಮಾಜಶಾಸ್ತ್ರ ಪಂಡಿತರು. ಮಾನವಶಾಸ್ತ್ರವನ್ನು ಬಲ್ಲವರು. ಮಹಾಭಾರತದ ಪಾತ್ರಗಳ ಮಾನಸಿಕ ವಿಶ್ವವನ್ನು ಅನಾವರಣಗೊಳಿಸುವುದರ ಜತೆಯಲ್ಲಿ, ಅಂದಿನ ಸಮಾಜ, ಕುಟುಂಬ, ವರ್ಣ, ಸಂಸ್ಕೃತಿ, ನೀತಿನಿಯಮಗಳು, ನ್ಯಾಯಾನ್ಯಾಯ, ಧರ್ಮಾಧರ್ಮಗಳು, ಮುಂತಾದವುಗಳನ್ನು ನಮಗೆ ಮನ ಮುಟ್ಟುವಂತೆ ವಿವರಿಸಿದ್ದಾರೆ. ಇವೆಲ್ಲ ಅವರ ಅಧ್ಯಯನ ವಸ್ತುಗಳಾದ್ದರಿಂದ, ವಿವರಣೆ ವಸ್ತುನಿಷ್ಠವಾಗಿದೆ, ವೈಜ್ಞಾನಿಕವಾಗಿದೆ. ಮಹಾಭಾರತದ ಕಾಲದಲ್ಲಿ ಪ್ರಚಲಿತವಿದ್ದ ರಾಜಕೀಯ, ಸಾಮಾಜಿಕ, ಆಥರ್ಿಕ, ದಾರ್ಶನಿಕ ಸ್ಥಿತಿಗತಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದಾರೆ.
ಮಹಾಭಾರತ ಹಿಂದುತ್ವದ ವಿಶ್ವಕೋಶ, ಒಂದು ಬೃಹತ್ಕಾವ್ಯ. ಇಡೀ ವಿಶ್ವದಲ್ಲಿ ಇಷ್ಟು ದೊಡ್ಡ ಗ್ರಂಥ ಇನ್ನೊಂದಿಲ್ಲ. ಗಾತ್ರದಲ್ಲಿ ರಾಮಾಯಣದ ನಾಲ್ಕರಷ್ಟಿದೆ. ಗ್ರೀಕರ ಮಹಾಕಾವ್ಯ ಇಲಿಯಡ್ ಮತ್ತು ಒಡೆಸ್ಸಿಗಿಂತ ಹತ್ತು ಪಟ್ಟು ದೊಡ್ಡದು. ಇಲ್ಲಿ ಕತೆಗಳು ಉಪಕತೆಗಳು ಹೇರಳವಾಗಿವೆ. ಪುರುಷಾರ್ಥಗಳನ್ನು ಕುರಿತಾದ ವಿವರಣೆ ಇಲ್ಲಿದೆ; ಶಕುಂತಲೆ-ದುಶ್ಯಂತ, ನಳ-ದಮಯಂತಿ, ಋಷ್ಯಶ್ರಂಗ ಮುಂತಾದವರ ಕತೆಗಳಿವೆ. ಹಾಗೆ ನೋಡಿದರೆ ಮೂಲ ಕತೆ ಕೇವಲ ಐದನೆಯ ಒಂದು ಭಾಗ ಮಾತ್ರ. ಇಂದು ಲಭ್ಯವಿರುವ ಅಧಿಕೃತ ಪ್ರತಿಯಲ್ಲಿ ಸುಮಾರು ಒಂದು ಲಕ್ಷ ಶ್ಲೋಕಗಳಿವೆ, ಎರಡು ಲಕ್ಷ ಸಾಲುಗಳು, 18,00,000 ಪದಗಳಿವೆ. ಇದು ಉಗ್ರ್ರಸ್ರವನೆಂಬುವವ ಹೇಳಿದ ಕತೆ. ವೈಶಂಪಾಯನ ಹೇಳಿದ್ದರಲ್ಲಿ 24,000 ಮತ್ತು ವ್ಯಾಸನಿಂದ ರಚಿತವಾದುದೆಂದು ಹೇಳಲಾದ ಕೃತಿಯಲ್ಲಿ 8,800 ಶ್ಲೋಕಗಳು ಮಾತ್ರ ಇವೆ. ಮಹಾಭಾರತ ಕತೆಯನ್ನು ಒಬ್ಬನೇ ರಚಿಸಿದನೆಂದು ಹೇಳಲಾಗುವುದಿಲ್ಲ. ವ್ಯಾಸನಿರ್ಮಿತವೆಂದು ಹೇಳಲಾಗಿದ್ದರೂ, ಅಂಥ ವ್ಯಕ್ತಿಯೊಬ್ಬ ಇದ್ದನೆಂಬುದಕ್ಕೆ ಪುರಾವೆಗಳಿಲ್ಲ. ಇಷ್ಟಾಗಿ, ವ್ಯಾಸನೆಂದರೆ ವ್ಯವಸ್ಥೆಗೊಳಿಸಿದವ (ಸಂಪಾದಕ) ಎಂಬ ಅರ್ಥವಿದೆ ಎಂದು ಹೇಳುತ್ತಾರೆ.
ಕಾಲದಲ್ಲಿ ಲಿಪಿ ಇದ್ದಂತೆ ಕಂಡು ಬರುವುದಿಲ್ಲ. ಆದುದರಿಂದ ಮಹಾಭಾರತ ಮೌಖಿಕವಾಗಿ ಹರಿದು ಬಂದ ಕಥಾಪ್ರವಾಹವೆಂದೇ ನಂಬಲಾಗಿದೆ. ನಮ್ಮ ಪುರಾಣಗಳೆಲ್ಲವೂ ಪ್ರಮುಖವಾಗಿ ಮೌಖಿಕವಾಗಿ ಸೂತರು ಎನ್ನುವ ಜನರು ಹೇಳಿದ ಕತೆಗಳೆಂದು (ಸೌತಸಾಹಿತ್ಯ) ಎಸ್.ವಿ. ಕೇತ್ಕರ್ ಹೇಳುತ್ತಾರೆ. ಸೂತರು ಕ್ಷತ್ರಿಯರ ಅನೌರಸ ಪುತ್ರರು. ಊರಿಂದೂರಿಗೆ ಹೋಗಿ ಕತೆ ಹೇಳುವುದು ಅವರ ಕಸುಬು. ಸೂತರಲ್ಲಿ ಕವಿಗಳೂ ಇದ್ದರು. ಕೆಲವರು ಸಾರಥಿಗಳಾಗಿ ದುಡಿಯುತ್ತಿದ್ದರೆ, ಉಳಿದವರು ಸೇವಕರಾಗಿ ಇದ್ದವರು. ಹಾಗಾಗಿ ರಾಮಾಯಣ ಮಹಾಭಾರತಗಳು ಸೂತವರ್ಣಿತ ಕಾವ್ಯಗಳೆಂಬ ಪ್ರತೀತಿ ಇದೆ. ಮಂತ್ರಸಾಹಿತ್ಯಗಳು (ದಾರ್ಶನಿಕ, ಧಾರ್ಮಿಕ ಗ್ರಂಥಗಳು) ಬ್ರಾಹ್ಮಣ ನಿರ್ಮಿತ. ಕಾಲಕಳೆದಂತೆ ಸೂತಸಾಹಿತ್ಯಕ್ಕೆ ಬ್ರಾಹ್ಮಣ್ಯವನ್ನು ಸೇರಿಸಲಾಗಿದೆಯೆಂದು ಹೇಳುತ್ತಾರೆ. ಧೃತರಾಷ್ಟ್ರನಿಗೆ ಕತೆ ಹೇಳುತ್ತಿದ್ದ ಸಂಜಯ ಸೂತ. ವಿದುರ ಸೂತ, ಕರ್ಣನ ಸಾಕಿದವರು ಸೂತರು. ಸೂತಪುರಾಣಿಕ, ವೈಶಂಪಾಯನ, ಉಗ್ರಶ್ರವ ಇವರೆಲ್ಲ ಸೂತರು
ಕರ್ವೆಯವರು ಮಹಾಭಾರತದ ಕತೆಯನ್ನು ವಿಶ್ಲೇಷಿಸಿರುವ ರೀತಿ ವಿಶಿಷ್ಟವಾಗಿದೆ. ಅವರು ಮನಃಶಾಸ್ತ್ರವನ್ನು ಬಲ್ಲವರು. ಆದುದರಿಂದ ಅಲ್ಲಿನ ಪಾತ್ರಗಳ ಒಳಹೊಕ್ಕು ಅವರ ಆಂತರಿಕ ವಿಶ್ವವನ್ನು ಅನಾವರಣ ಮಾಡುವುದು ಅವರಿಗೆ ಸಾಧ್ಯವಾಗಿದೆ. ಪ್ರತಿ ಪಾತ್ರದ ಗುಣಾವಗುಣಗಳನ್ನು ವಿವರಿಸುವ ರೀತಿ ಮನಮೆಚ್ಚುವಂಥದ್ದು. ಅಲ್ಲಿ ಶ್ರೀಕೃಷ್ಣನೂ ಸೇರಿದಂತೆ ಯಾರ ಮೇಲೂ ದೈವತ್ವದ ಆರೋಪವಾಗಿಲ್ಲ. ಕರ್ವೆಯವರು ಅಲ್ಲಿನ ಪ್ರಮುಖ ಪಾತ್ರಗಳಾದ ಭೀಷ್ಮ, ವಿದುರ, ಗಾಂಧಾರಿ, ಕುಂತಿ, ದ್ರೌಪದಿ, ಕೃಷ್ಣ, ಕರ್ಣ, ಮುಂತಾದವರ ವ್ಯಕ್ತಿತ್ವ, ಮನೋಧರ್ಮ, ಆಲೋಚನೆಗಳು, ಆಶೋತ್ತರಗಳನ್ನು, ವೈಜ್ಞಾನಿಕವಾಗಿ, ವಸ್ತುನಿಷ್ಠವಾಗಿ ವಿವರಿಸಿದ್ದಾರೆ. ಅಲ್ಲಿನ ಪಾತ್ರಗಳಲ್ಲ್ಲಿ ಇದ್ದಿರಬಹುದಾದ ಗುಣಾವಗುಣಗಳನ್ನು ಎತ್ತಿ ತೋರಿಸಿದ್ದಾರೆ. ಕರ್ವೆಯವರನ್ನು ಓದಿದಾಗ ಮಹಾಭಾರತ ಮಾನವಸಹಜವಾದ ದೌರ್ಬಲ್ಯಗಳಿಂದ ಕೂಡಿದ ಪಾತ್ರಗಳ ದಾಖಲೆಯಂತೆ ನಮಗೆ ಅನಿಸುತ್ತದೆ. ಅಲ್ಲಿನ ಪಾತ್ರಗಳು, ಅವುಗಳ ಗುಣದೋಷಗಳು ಕತೆಯ ಹರಿವನ್ನು ಹೇಗೆ ನಿರ್ದೇಶಿಸಿವೆ ಎಂಬುದನ್ನು ಕರ್ವೆಯವರು ವಿಶ್ಲೇಷಿಸಿರುವ ಪರಿ ಅನನ್ಯವಾದುದು. ಉದಾಹರಣೆಗೆ ಕೆಲವು ಪಾತ್ರಗಳನ್ನು ಪರಿಶೀಲಿಸೋಣ.

ಭೀಷ್ಮ
ಭೀಷ್ಮ ಮಹಾಭಾರತದ ಮಹಾನ್ ಪಾತ್ರ; ಅತ್ಯಂತ ವಿವೇಕಿ, ಗೌರವಾನ್ವಿತ ವ್ಯಕ್ತಿ; ತನ್ನ ವಂಶದ ಮಕ್ಕಳೊಳಗಿನ ದ್ವೇಷಾಸೂಯೆಗಳನ್ನು, ಆಂತರಿಕ ಕಲಹಗಳನ್ನು ಪರಿಹರಿಸಿ, ಅವರು ಕೂಡಿ ಬಾಳುವಂತೆ ಮಾಡಲು ಜೀವನ ಪೂರ್ತಿ ಹೆಣಗಾಡಿದವನು. ಗುರಿ ಸಾಧನೆ ಮಾಡುವಾಗ ಅವನೆಸಗಿದ ಪ್ರಮಾದಗಳು, ಅದರಿಂದ ಬೇರೆಯವರಿಗಾದ ಅನ್ಯಾಯಗಳು, ನೋವು ಅಪಾರ. ಕೆಲವರು ಕರ್ಣನನ್ನು ಮಹಾಭಾರತದ ದುರಂತ ನಾಯಕನೆನ್ನುತ್ತಾರೆ. ಆದರೆ, ಭಾರತದ ನಿಜವಾದ ದುರಂತ ನಾಯಕ ಭೀಷ್ಮ. ಎಲ್ಲವೂ ಇದ್ದು ಏನೂ ಇಲ್ಲದಂತೆ ಬದುಕಬೇಕಾದ ಸ್ಥಿತಿ ಅವನದು. ಕರ್ವೆಯವರು ಹೇಳುವಂತೆ ಭೀಷ್ಮನ ಸುದೀರ್ಘ ಬದುಕು ಒಂದು ವ್ಯರ್ಥವಾದ ತ್ಯಾಗ; ಅವನದು ನಿರರ್ಥಕ ಜೀವನ. ಭೀಷ್ಮನ ಇಡೀ ಬದುಕು ಹಲವಾರು ವಿರೋಧಾಭಾಸಗಳಿಂದ ಕೂಡಿದೆ. ತಂದೆಯ ಕಾಮುಕತನಕ್ಕೆ ತನ್ನ ಜೀವನವನ್ನೇ ಬಲಿಕೊಟ್ಟು ಬ್ರಹ್ಮಚಾರಿಯಾಗಿ ಉಳಿದ. ಭೀಷ್ಮ ಮಾಡಿದ ತ್ಯಾಗಕ್ಕೆ ದೊರಕಿದ ವರ ಇಚ್ಚಾಮರಣ; ಎಂಥ ವಿಪರ್ಯಾಸ! ತನ್ನ ಮಲತಮ್ಮ ವಿಚಿತ್ರವೀರ್ಯನಿಗೆ ವಿವಾಹ ಮಾಡಲು ಕಾಶಿಯಿಂದ ಮೂವರು ರಾಜಕುವರಿಯರನ್ನು ಬಲಾತ್ಕಾರವಾಗಿ ಹೊತ್ತು ತರುತ್ತಾನೆ. ಅವರಲ್ಲಿ ಅಂಬೆ ತಾನು ಸಾಲ್ವನನ್ನು ವರಿಸಲಿಚ್ಛಿಸಿದ್ದುದಾಗಿ ಹೇಳುತ್ತಾಳೆ. ಭೀಷ್ಮ ಅವಳನ್ನು ಸಾಲ್ವನೆಡೆಗೆ ಕಳಿಸುತ್ತಾನೆ. ಹಲವು ದಿನಗಳು ಪರಾಧೀನದಲ್ಲಿದ್ದ ಅವಳನ್ನು ಸಾಲ್ವ ಸ್ವೀಕರಿಸುವುದಿಲ್ಲ. ಆಗ ಅಂಬೆ ತನ್ನನ್ನು ವರಿಸುವಂತೆ ಭೀಷ್ಮನನ್ನೇ ಕೇಳುತ್ತಾಳೆ. ಬ್ರಹ್ಮಚರ್ಯದ ಪ್ರತಿಜ್ಞೆ ಮಾಡಿದ್ದ ಭೀಷ್ಮ ಒಪ್ಪುವುದಿಲ್ಲ. ಹೀಗೆ ತಿರಸ್ಕೃತಳಾಗಿ ಅವಮಾನಗೊಂಡ ಅಂಬೆ ಭೀಷ್ಮನನ್ನು ಶಪಿಸಿ, ಅವನನ್ನು ಕೊಲ್ಲಲು ಹುಟ್ಟಿಬರುವುದಾಗಿ ಹೇಳಿ ಸಾಯುತ್ತಾಳೆ. ಹುಟ್ಟಿನಿಂದಲೇ ಶಾಪಗ್ರಸ್ತನಾದ ಭೀಷ್ಮನಿಗೆ (ಭೀಷ್ಮ ವಶಿಷ್ಟನ ಹಸುವನ್ನು ಕದ್ದು ಶಾಪಗ್ರಸ್ತರಾದ ಅಷ್ಟವಸುಗಳಲ್ಲೊಬ್ಬ) ಅಂಬೆಯ ಶಾಪವೂ ಸೇರಿಕೊಳ್ಳುತ್ತದೆ.
ಮೊಮ್ಮಕ್ಕಳಿಗೆ ವಿವಾಹ ಮಾಡುವಾಗ ಅತ್ಯಂತ ದೂರದ ರಾಜ್ಯವೊಂದರ ರಾಜಕುಮಾರಿ ಗಾಂಧಾರಿಯನ್ನು ಕರೆತಂದು ಅವಳಿಗರಿವಿಲ್ಲದಂತೆ ಕುರುಡ ಧೃತರಾಷ್ಟ್ರನಿಗೆ ಮದುವೆ ಮಾಡಿಸುತ್ತಾನೆ. ತನ್ನ ಪತಿ ಕುರುಡನೆಂದು ತಿಳಿದಾಗ ಸುಕುಮಾರ ಯುವತಿಯ ಯಾತನೆ ಎಷ್ಟಿತ್ತೆಂಬುದನ್ನು ಊಹಿಸಲು ಸಾಧ್ಯವಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತನ್ನ ಇಡೀ ಜೀವನವನ್ನು ಕತ್ತಲೆಯಲ್ಲಿ ಕಳೆದ ಅವಳು, ತನ್ನನ್ನು ಸ್ಥಿತಿಗೆ ತಂದ ಎಲ್ಲರನ್ನೂ ಶಪಿಸಿರಲು ಸಾಕು. ಕುಂತಿ ಯೌವನಭರಿತ, ಬಲಾಢ್ಯ ಹೆಣ್ಣು (ಪೃಥೆ); ಮಾದ್ರಿ ಅತೀವ ಸುಂದರಿ; ಇವರಿಬ್ಬರನ್ನು ರೋಗಿಷ್ಟ, ನಿರ್ವೀರ್ಯ ಪಾಂಡುವಿಗೆ ಕಟ್ಟುತ್ತಾನೆ. ತನ್ನ ಎದುರಿಗೆ ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ವಿವಸ್ತ್ರಳನ್ನಾಗಿ ಮಾಡುತ್ತಿದ್ದಾಗ, ತನಗೆ ಅದನ್ನು ತಡೆಯುವ ಅಧಿಕಾರವಿದ್ದರೂ, ಅವನು ಬೆರಳೆತ್ತಲಿಲ್ಲ. ಎಲ್ಲ ಹೆಣ್ಣು ಮಕ್ಕಳ ಶಾಪ ಅವನಿಗೆ ತಟ್ಟದಿದ್ದೀತೆ? ಸ್ತ್ರೀಯರ ಬಗ್ಗೆ ಪುರುಷರು, ಭೀಷ್ಮನನ್ನೂ ಒಳಗೊಂಡಂತೆ, ಗೌರವಾಭಿಮಾನ ತೋರಿದ್ದು ಮಹಾಭಾರತದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಇದೆಲ್ಲ ಸಾಲದೆಂಬಂತೆ ತೊಂಬತ್ತಕ್ಕೆ ಮೀರಿದ ಮುದಿವಯಸ್ಸಿನಲ್ಲಿ ಕೌರವರ ಸೈನ್ಯಾಧಿಪತಿಯಾಗಿ ಪಾಂಡವರ ಮೇಲೆ ಯುದ್ಧಕ್ಕೆ ಹೊರಡುವ ಅವಶ್ಯಕತೆ ಇತ್ತೆ?
ಭೀಷ್ಮ ಕೌರವ ಪಕ್ಷಪಾತಿಯಾಗಿ ಪಾಂಡವರ ಮೇಲೆ ಯುದ್ಧಕ್ಕೆ ಹೊರಟಿದ್ದಕ್ಕೆ ಎರಡು ಕಾರಣಗಳಿರಬಹುದೆಂಬುದು ಕರ್ವೆಯವರ ಊಹೆ. ಒಂದು, ಅನ್ನದ ಋಣ (ಜೋಳದ ಪಾಳಿ). ಭೀಷ್ಮ ಅವನ ಜೀವನಪರ್ಯಂತ ಇದ್ದುದು ದುರ್ಯೋಧನನ ಆಶ್ರಯದಲ್ಲಿ ತಾನೆ? ಋಣವನ್ನು ತೀರಿಸಬೇಕಾದ್ದು ಅವನ ಕರ್ತವ್ಯ. ಇನ್ನೊಂದು, ಕೊಂಚ ಸೂಕ್ಷ್ಮವಾದುದು. ಅದು ಕುರುವಂಶೋದ್ಧಾರಕ್ಕೆ ಸಂಬಂಧಿಸಿದುದು. ಕೌರವರು ಎಲ್ಲರೂ ಕಂಡಂತೆ ಧೃತರಾಷ್ಟ್ರನ ಮಕ್ಕಳು, ಕುರುವಂಶಜರು. ಆದರೆ, ಪಾಂಡವರು ಪಾಂಡುವಿಗೆ ಹುಟ್ಟಿದ ಮಕ್ಕಳಲ್ಲ. ಅನ್ಯ ಬೀಜೋದ್ಭವರಾದ ಪಾಂಡವರಿಗೆ ರಾಜ್ಯವನ್ನು ಬಿಟ್ಟುಕೊಡುವುದು ಸರಿಯೇ? ಭೀಷ್ಮನ ಸುಪ್ತಚೇತನದಲ್ಲಿ ಇಂತಹದೊಂದು ಭಾವನೆ ಇದ್ದಿರಬಹುದೆ? ಹೇಳುವುದು ಕಷ್ಟ.    
ನಮಗೆಲ್ಲರಿಗೂ ನಮ್ಮ ವಂಶೋದ್ಧಾರದಲ್ಲಿ ಅತೀವ ಆಸಕ್ತಿ ಇದ್ದಂತೆ ಭೀಷ್ಮನಿಗೆ ಇದ್ದರೆ ಆಶ್ಚರ್ಯವಿಲ್ಲ (ಇದನ್ನು ವಿಜ್ಞಾನದಲ್ಲಿ selfish gene effect ಎನ್ನುತ್ತಾರೆ). ಇದೆಲ್ಲಕ್ಕಿಂತ ಮುಖ್ಯ ಕಾರಣ - ಅವನು ಸೇನಾಪತಿಯಾದುದು ಯುದ್ಧ ಮಾಡುವುದಕ್ಕಲ್ಲ, ಯುದ್ಧವನ್ನು ನಿಲ್ಲಿಸುವುದಕ್ಕೆ! ಅವನು ಸೇನಾಪತಿಯಾದ್ದರಿಂದ ಪಾಂಡವರ ಪರಮವೈರಿ ಕರ್ಣ ಯುದ್ಧದಿಂದ ಹೊರಗುಳಿಯುತ್ತಾನೆ. ಭೀಷ್ಮ ತಾನು ತೊಡೆಯ ಮೇಲಾಡಿಸಿದ ಪಾಂಡು ಪುತ್ರರನ್ನು ಕೊಲ್ಲುವುದಾದರೂ ಹೇಗೆ? ಹಾಗೆಯೇ ಪಾಂಡವರು ಕೂಡ ತಾತ ಭೀಷ್ಮನನ್ನು ಕೊಲ್ಲಬಲ್ಲರೆ? ಆಶ್ಚರ್ಯವೆಂದರೆ ಅವನು ಸೇನಾಪತಿಯಾಗಿದ್ದ ಒಂಬತ್ತು ದಿನ ಯುದ್ಧದಲ್ಲಿ ಯಾವ ಪ್ರಮುಖನೂ ಸಾಯಲಿಲ್ಲ; ಹೇಳಿಕೊಳ್ಳುವಂಥದ್ದೇನೂ ನಡೆಯಲೇ ಇಲ್ಲ. ಯುದ್ಧಭೂಮಿಯಿಂದ ಹಿಂದಿರುಗಿದ ಪ್ರತಿ ದಿನ ರಾತ್ರಿ ಅವನು ದುರ್ಯೋಧನನಿಗೆ ಹೇಳುತ್ತಿದ್ದುದು ಒಂದೇ ಮಾತು ಪಾಂಡವರು ಅಜೇಯರು, ಕೃಷ್ಣನಿರುವೆಡೆ ಸೋಲಿಲ್ಲ, ಅವರೊಡನೆ ಸಂಧಿ ಮಾಡಿಕೊ, ಎಂದು. ಅವನ ಉಪದೇಶವನ್ನು ಕೇಳಿಕೇಳಿ ಕೌರವರಿಗೆ ಮುದುಕ ಬೇಗ ಸಾಯಬಾರದೆ ಎಂದು ಅನಿಸತೊಡಗಿತು.
ಭೀಷ್ಮನಿಗೆ ಸ್ವಾರ್ಥವೇನಾದರೂ ಇತ್ತೆ? ಮೇಲ್ನೋಟಕ್ಕೆ ಹಾಗೇನೂ ಕಾಣುವುದಿಲ್ಲ. ಮಾನವರೆಲ್ಲರಲ್ಲೂ ಸಹಜವಾಗಿ ಕಂಡುಬರುವ ಅಹಮಿಕೆ ಅವನಲ್ಲೂ ಇದ್ದಿರಬಹುದೆ? ಇಲ್ಲವೆನ್ನಲಾಗುವುದಿಲ್ಲ. ಅವನು ತನ್ನನ್ನು ತಾನು ಒಬ್ಬ ಧೀಮಂತ ವ್ಯಕ್ತಿ (ಪ್ರಾಜ್ಞಮಾನಿನ್) ಎಂದು ತಿಳಿದುಕೊಂಡಂತೆ ಕಾಣುತ್ತದೆ; ಇತರರ ಒಳಿತಿಗಾಗಿ ಬದುಕುತ್ತಿರುವ ನಿಸ್ವಾರ್ಥಿ, ತ್ಯಾಗಿ, ವಿವೇಕಿ, ಮಾತಿಗೆ ತಪ್ಪದೆ ನಡೆಯುವವ, ಎಂದು ಭಾವಿಸಿ, ಅನಿಸಿಕೆಗೆ ತಕ್ಕಂತೆ ವರ್ತಿಸಿರುವುದು ಸುಳ್ಳಲ್ಲ. ಜನರ ಮನದಲ್ಲಿರುವ ಅವನ ವ್ಯಕ್ತಿಚಿತ್ರಕ್ಕೆ  ಚ್ಯುತಿ ಬರದಂತೆ ಬದುಕಲು ಪ್ರಯತ್ನಿಸುತ್ತಿದ್ದನೆಂದರೆ ತಪ್ಪಾಗುವುದಿಲ್ಲ. ಭೀಷ್ಮನಲ್ಲಿದ್ದಿರಬಹುದಾದ ಗುಪ್ತ ಸ್ವಾರ್ಥದ ತುಣುಕೊಂದನ್ನು ಲೇಖಕಿ ಗುರುತಿಸಿರುವುದು, ಅಂಬಿಕೆ ಮತ್ತು ಅಂಬಾಲಿಕೆಯರ ನಿಯೋಗಕ್ಕೆ ವ್ಯಾಸನನ್ನು ಆರಿಸಿದುದರಲ್ಲಿ. ಕಾರ್ಯಕ್ಕೆ ಕುರುವಂಶದ ಯೋಗ್ಯ ಯುವಕನೊಬ್ಬನನ್ನು ಆರಿಸಿಕೊಳ್ಳಬಹುದಿತ್ತು. ಹೆಣ್ಣುಮಕ್ಕಳು ಅಂಥದನ್ನೇ ನಿರೀಕ್ಷಿಸಿದ್ದರು ಕೂಡ. ಹಾಗಾಗಿದ್ದರೆ, ಕುರುಡ-ರೋಗಿಷ್ಠ ಮಕ್ಕಳು ಹುಟ್ಟುತ್ತಿರಲಿಲ್ಲ. ರಾಜ್ಯವಾಳಲು  ಆರೋಗ್ಯವಂತ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಾಗಿರುತ್ತಿತ್ತು. ಒಂದು ವೇಳೆ ಹಾಗೆ ಮಾಡಿದ್ದರೆ, ಕಾರ್ಯಕ್ಕೆ ನಿಯೋಜಿಸಲ್ಪಟ್ಟ ವ್ಯಕ್ತಿ ಆಸ್ಥಾನದಲ್ಲಿ ಗಣನೀಯ ಸ್ಥಾನ ಪಡೆದು, ತನ್ನ ಅಧಿಕಾರಕ್ಕೆ ಧಕ್ಕೆ ಬರಬಹುದೆಂದು ಭೀಷ್ಮ ಯೋಚಿಸಿರಬಹುದೆ? ವ್ಯಾಸನನ್ನು ಆರಿಸಿದ್ದರಿಂದ ಭಯ ತಪ್ಪಿತೆ? ರಾಜಕೀಯ ಚದುರಂಗದಾಟದಲ್ಲಿ ಇವೆಲ್ಲಾ ಸಾಧ್ಯ ತಾನೆ? ಆಲೋಚಿಸಬೇಕಾದ ವಿಚಾರ.
ಒಟ್ಟಿನಲ್ಲಿ ಹೇಳಬೇಕಾದರೆ, ಭೀಷ್ಮನ ಪ್ರಯತ್ನಗಳಾವುವು ಫಲಿಸಲಿಲ್ಲ, ಅವನ ವಂಶಜರು ಸಹಜೀವನ ನಡೆಸಲಿಲ್ಲ, ಯುದ್ಧ ಅನಿವಾರ್ಯವಾಯ್ತು. ಸರ್ವನಾಶವನ್ನು ತಡೆಯಲಾಗಲಿಲ್ಲ. ಇದರರ್ಥವೇನು? ನಿಯತಿಯನ್ನು ಯಾರೂ ಮೀರಲಾರರು; ಆಗುವುದೆಲ್ಲ ಆಗಲೇಬೇಕು. ಲೇಖಕಿ ಹೇಳುವಂತೆ ಎಲ್ಲ ಮನುಷ್ಯ ಪ್ರಯತ್ನಗಳು ನಿರರ್ಥಕ, ಮಾನವರ ಬದುಕು ಭಗ್ನತೆಯಲ್ಲೇ ಕೊನೆಗೊಳ್ಳುತ್ತದೆ ಎನ್ನುವ ಪಾಠವನ್ನು ಮಹಾಭಾರತ ಹೇಳಹೊರಟಿದೆಯೇನೊ?

ಕುಂತಿ
ಮಹಾಭಾರತ ನಮಗೆ ಹೇಳುತ್ತಿರುವುದಾದರು ಏನು? ಅದು ಹೀಗಿರಬಹುದೆ? ಜೀವನದಲ್ಲಿ ಯಾರೂ ತಮ್ಮಿಚ್ಛೆಯಂತೆ ನಡೆಯಲಾರರು. ಬಹಳಷ್ಟು ಜನರ ಜೀವನ ಗಾಳಿಗೆ ಸಿಕ್ಕಿದ ತರಗೆಲೆಯಂತೆ ಹಾರಾಡುತ್ತಿರುತ್ತದೆ. ಬಹಳಷ್ಟು ಜನರಿಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಇರುವುದಿಲ್ಲ; ಅದು ಅನ್ಯರ ಕೈಯ್ಯಲ್ಲಿರುತ್ತದೆ. ಎರಡನೆಯ ಮಾತು ಮಹಾಭಾರತದ ಸ್ತ್ರೀ ಪಾತ್ರಗಳಿಗೆ ಚೆನ್ನಾಗಿ ಅನ್ವಯಿಸುತ್ತದೆ. ಅಲ್ಲಿ ಬರುವ ಸ್ತ್ರೀಯರ ದಾರುಣ ಚಿತ್ರಗಳನ್ನು ಪರಿಶೀಲಿಸಿದರೆ ಮಾತು ಎಷ್ಟು ಸತ್ಯವೆಂಬುದು ಮನದಟ್ಟಾಗುತ್ತದೆ. ಸತ್ಯವತಿಯನ್ನು ಪರಾಶರ ಬಳಸಿಕೊಂಡದ್ದು, ಅನಂತರ ಅವಳು ಶಂತನುವಿನ ಪತ್ನಿಯಾದದ್ದು, ಅವಳ ಸೊಸೆಯರನ್ನು ನಿಯೋಗ ಪದ್ಧತಿಯಿಂದ ಮಕ್ಕಳನ್ನು ಪಡೆಯುವಂತೆ ಮಾಡಿದ್ದು, ಗಾಂಧಾರಿಯನ್ನು ಅವಳಿಗರಿವಿಲ್ಲದಂತೆ ಕುರುಡು ದೊರೆಗೆ ಕಟ್ಟುವುದು, ಕುಂತಿ-ಮಾದ್ರಿಯರನ್ನು ರೋಗಿಷ್ಠ ಪಾಂಡುವಿಗೆ ಮದುವೆ ಮಾಡಿದ್ದು, ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ವಿವಸ್ತ್ರಗೊಳಿಸಿದ್ದು, ಇವಾವುವು ಹೆಣ್ಣಿನ ವ್ಯಕ್ತಿತ್ವಕ್ಕೆ ಶೋಭೆ ತರುವಂತಹವಲ್ಲ.
ಮಹಾಭಾರತದ ಕುಂತಿಯ ಪಾಡು ಯಾರಿಗೂ ಬೇಡ. ಅಲ್ಲಿ ಕೆಲವು ನಾರಿಯರಾದರು ಅಷ್ಟೋ ಇಷ್ಟು ಸುಖವನ್ನನುಭವಿಸಿದ್ದಾರೆ. ಗಾಂಧಾರಿ ಕುರುಡನ ಹೆಂಡತಿಯಾದರೂ ರಾಜಮಾತೆ, ದ್ರೌಪದಿ ಶೂರ ಗಂಡಂದಿರ ಪತ್ನಿ. ಸುಭದ್ರೆ ಸುಖವಾಗಿಯೇ ಇದ್ದವಳು. ಆದರೆ ಕುಂತಿ ಮಾತ್ರ ವಿಶ್ವದಲ್ಲಿರುವ ದುಃಖವೆಲ್ಲವನ್ನೂ ಅನುಭವಿಸುವುದಕ್ಕಾಗಿಯೇ ಹುಟ್ಟಿ ಬಂದಳೇನೋ ಅನಿಸುತ್ತದೆ. ಅವಳ ತಂದೆ ಯಾದವ ದೊರೆ ಶೂರಸೇನ; ಕುಂತಿಗೆ ಬುದ್ಧಿ ಬರುವ ಮುನ್ನವೆ ಅವಳನ್ನು ತನ್ನ ಮಿತ್ರ ಕುಂತೀಭೋಜನಿಗೆ ದಾನ ಮಾಡುತ್ತಾನೆ. ಕಾರಣಕ್ಕಾಗಿ ಅವಳು ತನ್ನ ತಂದೆಯನ್ನು ಎಂದೂ ಕ್ಷಮಿಸಿದಂತೆ ಕಂಡುಬರುವುದಿಲ್ಲ. ಅಂದಿನವರೆಗೆ ಪೃಥೆಯೆಂದು ಕರೆಯಲ್ಪಟ್ಟಿದ್ದವಳು ಭೋಜನ ಮನೆಗೆ ಬಂದು ಕುಂತಿಯಾಗುತ್ತಾಳೆ; ಕುಂತೀರಾಜ್ಯದ ರಾಜಕುವರಿಯಾಗುತ್ತಾಳೆ.
ಹೀಗಿರುವಾಗ, ಒಂದು ದಿನ ದೂರ್ವಾಸಮುನಿ ಕುಂತೀಭೋಜನ ಅರಮನೆಗೆ ಬರುತ್ತಾನೆ. ಪ್ರೌಢೆ ಕುಂತಿಯನ್ನು ಅವನ ಸೇವೆಗೆ ನಿಯೋಜಿಸಲಾಗುತ್ತದೆ. ಅವಳ ಸೇವೆಯಿಂದ ಸಂತುಷ್ಟನಾದ ಋಷಿ ಅವಳಿಗೆ ಮಕ್ಕಳನ್ನು ಪಡೆಯುವ ಆರು ಮಂತ್ರಗಳನ್ನು ಉಪದೇಶಿಸಿ ಹೋಗುತ್ತಾನೆ. ಕುಂತಿ ಕುತೂಹಲದಿಂದ ಒಂದು ಮಂತ್ರವನ್ನು ಜಪಿಸಿ ಗರ್ಭವತಿಯಾದದ್ದು, ಮಗುವನ್ನು ಹಡೆದು ಅದನ್ನು ನದಿಯಲ್ಲಿ ತೇಲಿ ಬಿಟ್ಟದ್ದು, ಮಗು ಕರ್ಣನಾಗಿ ಬೆಳೆದದ್ದು, ಎಲ್ಲರಿಗೂ ತಿಳಿದ ವಿಚಾರ. ಮಂತ್ರಕ್ಕೆ ಮಾವಿನಕಾಯಿ ಬೀಳುವುದಿಲ್ಲ. ಮಗುವಿನ ತಂದೆ ದೂರ್ವಾಸಮುನಿಯೇ ಆಗಿರಬಾರದೇಕೆ ಎನ್ನುವ ಶಂಕೆ ಇಲ್ಲಿ ಸಹಜವಾಗಿಯೇ ಏಳುತ್ತದೆ. ಇಂಥ ಪ್ರಸಂಗಗಳು ನಮ್ಮ ಪುರಾಣಗಳಲ್ಲಿ ಕಂಡುಬಂದಿವೆ. ವಿವಾಹಪೂರ್ವದಲ್ಲಿ ಮಗುವನ್ನು ಹಡೆದು, ನದಿಯಲ್ಲಿ ತೇಲಿ ಬಿಟ್ಟ ದುಃಖ ಕುಂತಿಯನ್ನು ಜೀವನಪರ್ಯಂತ ಕಾಡುತ್ತಿದ್ದು, ಕೊನೆಯಲ್ಲಿ ಅವನನ್ನು ಗುರುತಿಸಿದಾಗ ಅದು ಇಮ್ಮಡಿಯಾಗುತ್ತದೆ.
ಕುಂತೀಭೋಜ ದೃಢಕಾಯದವಳಾದ ಕುಂತಿ (ಪೃಥೆ)ಯನ್ನು ರೋಗಿಷ್ಠ ಪಾಂಡುವಿಗೆ ಕೊಟ್ಟು ಮದುವೆಯಾಗುತ್ತದೆ. ಹಿರಿಯನಾದ ಧೃತರಾಷ್ಟ್ರ ಕುರುಡನಾದುದರಿಂದ, ಕುಂತಿಯ ಪತಿ ಪಾಂಡು ರಾಜನಾಗುತ್ತಾನೆ. ಕೆಲಕಾಲ ಕುಂತಿ ಮಹಾರಾಣಿಯಾಗಿರುತ್ತಾಳೆ. ಪಾಂಡು ಹಲವು ರಾಜರನ್ನು ಸೋಲಿಸಿ ಅವರಿಂದ ತಂದ ಬಳುವಳಿಯನ್ನು ಅಣ್ಣನಿಗೆ ಅರ್ಪಿಸಿ, ತನ್ನ ಹೆಂಡತಿಯರೊಡನೆ ಹಿಮಾಲಯಕ್ಕೆ ಹೋಗಿ ತನ್ನ ಇಬ್ಬರು ಹೆಂಡರಿಂದ, ಕ್ಷೇತ್ರದಾನದ ಮೂಲಕ ಐವರು ಮಕ್ಕಳನ್ನು ಪಡೆದು, ಮಾದ್ರಿಯೊಡನೆ ಸಂಭೋಗ ಮಾಡಿ ಸಾಯುತ್ತಾನೆ. ಪಾಂಡು ಮತ್ತು ಮಾದ್ರಿ ಇಬ್ಬರೂ ಸತ್ತ ನಂತರ, ಕುಂತಿ ಐದು ಮಕ್ಕಳೊಡನೆ ಹಸ್ತಿನಾವತಿಗೆ ಬಂದಾಗ, ಮಕ್ಕಳೆಲ್ಲಾ ಯಾರವು? ಎನ್ನುವ ಸಂಶಯ ಹಲವರಲ್ಲಿ ಬಂದಿರಲಿಕ್ಕೆ ಸಾಕು. ಭೀಷ್ಮನು ಅವರನ್ನು ಆದರದಿಂದಲೇ ಬರಮಾಡಿಕೊಂಡದ್ದರಿಂದ ಎಲ್ಲರೂ ಅವಳನ್ನು ಅವಳ ಮಕ್ಕಳನ್ನು ಒಪ್ಪಿಕೊಂಡಂತೆ ಕಾಣುತ್ತದೆ. ಬೇರೊಬ್ಬರಿಂದ ಮಕ್ಕಳನ್ನು ಪಡೆಯುವ ಪದ್ಧತಿ ಅಂದು ಅಪರಾಧವೆನಿಸುತ್ತಿರಲಿಲ್ಲ ಎಂಬುದು ಗಮನಿಸಬೇಕಾದ ವಿಚಾರಪರಾಶರ ಮತ್ಸ್ಯಗಂಧಿ (ಸತ್ಯವತಿ)ಯಿಂದ ವ್ಯಾಸನನ್ನು ಪಡೆದದ್ದು, ಸತ್ಯವತಿಯ ಸೊಸೆಯರು ವ್ಯಾಸನಿಂದ ಮಕ್ಕಳನ್ನು ಪಡೆದದ್ದು ಎಲ್ಲರಿಗೂ ತಿಳಿದ ವಿಷಯ.
ಹಸ್ತಿನಾವತಿಯಲ್ಲಿ ಅವಳು ಅನುಭವಿಸಿದ ಕಷ್ಟಪರಂಪರೆಗಳು ಅಪಾರ. ಪಾಂಡುಪುತ್ರರನ್ನು ಕೊಲ್ಲಲು ದುರ್ಯೋಧನ ಮಾಡಿದ ಷಡ್ಯಂತ್ರಗಳಿಂದ ಪಾರಾಗಿ, ತಲೆ ಮರೆಸಿಕೊಂಡು ಬದುಕಬೇಕಾಗುತ್ತದೆ. ಆದದ್ದೆಲ್ಲ ಒಳಿತೇ ಆಯ್ತು. ಪಾಂಡವರು ದ್ರೌಪದಿಯನ್ನು ವಿವಾಹವಾಗಿ ಹಸ್ತಿನಾವತಿಗೆ ಬಂದು ಇಂದಪ್ರಸ್ಥ ನಗರದಲ್ಲಿ ನೆಲೆಗೊಳ್ಳುತ್ತಾರೆ. ಅಲ್ಲಿ ರಾಜಸೂಯ ಯಾಗ ನಡೆದು, ಮಯಸಭೆಯಲ್ಲಿ ದುರ್ಯೋಧನ ಅವಮಾನಗೊಂಡು, ಅದಕ್ಕೆ ಪ್ರತಿಯಾಗಿ ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಲು ಜ್ಯೂತವನ್ನೇರ್ಪಡಿಸುತ್ತಾನೆ. ಧರ್ಮನೊಬ್ಬ ಜೂಜುಕೋರ. ಅದರಲ್ಲಿ ದ್ರೌಪದಿಯೂ ಸೇರಿದಂತೆ ಸಕಲವನ್ನು ಸೋಲುತ್ತಾನೆ. ದ್ರೌಪದಿಯ ವಸ್ತ್ರಾಪಹರಣವಾಗುತ್ತದೆ. ಪಾಂಡವರು ದ್ರೌಪದಿಯೊಡನೆ ವನವಾಸಕ್ಕೆ ಹೋಗಬೇಕಾಗುತ್ತದೆ. ಕುಂತಿ ಮಾತ್ರ ಹಸ್ತಿನಾವತಿಯಲ್ಲೇ ಉಳಿಯುತ್ತಾಳೆ. ಕೃಷ್ಣ ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದಾಗ ಅವನ ಮೂಲಕ ತನ್ನ ಮಕ್ಕಳಿಗೆ ಕಳುಹಿಸಿದ ಸಂದೇಶ ವೀರೋಚಿತವಾಗಿದೆ. ಧರ್ಮಗೊಡ್ಡುಗಳಾಗದೆ ಶೂರರಂತೆ ಯುದ್ಧ ಮಾಡಿ ರಾಜ್ಯವನ್ನು ಗೆಲ್ಲುವಂತೆ ಮಕ್ಕಳಿಗೆ ಹೇಳಿ ಕಳಿಸುತ್ತಾಳೆ. ಕುಂತಿಯಲ್ಲಿ ಸಣ್ಣತನವೂ ಇತ್ತು; ಜತೆಗೆ ಔದಾರ್ಯವೂ ಇತ್ತು. ತನಗಿಲ್ಲದ ಸುಖವನ್ನು ಪಾಂಡುವಿನಿಂದ ಪಡೆದು ಅವನ ಸಾವಿಗೆ ಕಾರಣಳಾದ ಮಾದ್ರಿಯನ್ನು ನಿಂದಿಸುತ್ತಾಳೆ. ಆದರೆ, ಮಾದ್ರಿಯ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿ ವಾತ್ಸಲ್ಯದಿಂದ ಸಾಕುತ್ತಾಳೆ. ದ್ರೌಪದಿಯನ್ನು ತನ್ನ ಮೂರು ಮಕ್ಕಳಿಗೆ ಮಾತ್ರ ಮಡದಿಯಾಗುವಂತೆ ನೋಡಿಕೊಳ್ಳಬಹುದಿತ್ತು. ಅವಳು ಹಾಗೆ ಮಾಡಲಿಲ್ಲ; ಅದು ಅವಳ ದೊಡ್ಡ ಗುಣ. ಕುಂತಿ ಕರ್ಣನನ್ನು ಭೇಟಿಯಾಗಿ, ಅವನ ಜೀವನ ವೃತ್ತಾಂತವನ್ನು ತಿಳಿಸಿ, ಅವನನ್ನು ಪಾಂಡವರ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡದ್ದು ಮಾತ್ರ ಸ್ವಾರ್ಥದ ಪರಮಾವಧಿಯಾಗಿತ್ತು. ಕರ್ಣ ಮಡಿದಾಗ ಅವನು ತನ್ನ ಪುತ್ರನೆಂಬುದನ್ನು ಬಹಿರಂಗ ಪಡಿಸಿ, ಕುರುಕ್ಷೇತ್ರ ಯುದ್ಧಕ್ಕೆ, ಅದರಿಂದಾದ ಸರ್ವ ನಾಶಕ್ಕೆ ನೀನೆ ಕಾರಣ ಎಂದು ಧರ್ಮ ಅವಳನ್ನು ಮೂದಲಿಸುವಂತೆ ಮಾಡಿಕೊಳ್ಳುತ್ತಾಳೆ. ಆಗಲೇ ಧರ್ಮ ಇನ್ನು ಮುಂದೆ ಹೆಂಗಸರು ಗುಟ್ಟನ್ನು ಕಾಪಾಡಿಕೊಳ್ಳಲು ಅಸಮರ್ಥರಾಗಲಿ ಎಂದು ಶಪಿಸಿದ್ದು.
ಕುಂತಿಯ ಬಗ್ಗೆ ಕರ್ವೆಯವರು ಹಲವು ಕುತೂಹಲಕಾರಿ ವಿವರಗಳನ್ನು ನಮ್ಮ ಮುಂದಿಡುತ್ತಾರೆ. ಕೆಲವನ್ನು ನೋಡೋಣ. ಮೂರು ಮಕ್ಕಳನ್ನು ಪಡೆದ ಕುಂತಿ, ಮಾದ್ರಿಗೇಕೆ ಎರಡು ಮಕ್ಕಳನ್ನು ಮಾತ್ರ ಪಡೆಯುವಂತೆ ಆಜ್ಞಾಪಿಸಿದಳು? ಆಗಿನ ಕಾಲದಲ್ಲಿ ಹೆಚ್ಚಿಗೆ ಮಕ್ಕಳಿರುವ ತಾಯಂದಿರಿಗೆ ಗೌರವ ಹೆಚ್ಚಿತ್ತು. ಮಾದ್ರಿಗೂ ಮೂರು ಮಕ್ಕಳಾದರೆ ಅವಳು ತನಗೆ ಸರಿಸಮಾನವಾಗುತ್ತಾಳೆ ಎನ್ನುವ ಸವತಿ ಮತ್ಸರದಿಂದಿರಬುಹುದೆ? ನಮ್ಮ ಪುರಾಣಗಳಲ್ಲಿ ಸವತಿ ಮತ್ಸರಕ್ಕೇನು ಕೊರತೆಯಿಲ್ಲ. ಕೈಕೆ ಕೌಸಲ್ಯ ನಡುವೆ ಅದಿತ್ತು. ಮಹಾಭಾರತದಲ್ಲಿ ಕೂಡ ದ್ರೌಪದಿ ಸುಭದ್ರೆಯನ್ನು ಕ್ಷಮಿಸಿದಂತೆ ಕಂಡುಬರುವುದಿಲ್ಲ. ಕುಂತಿ ವಿಧವೆಯಾದಾಗ ತೌರಿಗೇಕೆ ಹಿಂದಿರುಗಲಿಲ್ಲ? ಅವಳ ಹೆತ್ತ ತಂದೆಯ ಮೇಲೆ ಕೋಪ; ರೋಗಿಷ್ಟನಿಗೆ ಕೊಟ್ಟು ವಿವಾಹ ಮಾಡಿದ ಸಾಕುತಂದೆಯ ಮೇಲೆ ಪ್ರೀತಿಯಿಲ್ಲ. ಅವಳೆಲ್ಲಿಗೆ ಹೋಗಬೇಕು? ಮತ್ತೆ ತೌರಿಗೆ ಹೋದರೆ ಮಕ್ಕಳಿಗೆ ರಾಜ್ಯದ ಮೇಲಿನ ಹಕ್ಕು ಹೋಗಬಹುದೆಂಬ ಆತಂಕ. ಮಕ್ಕಳು ಅವಿವೇಕದಿಂದ ದ್ಯೂತದಲ್ಲಿ ಸೋತು, ದ್ರೌಪದಿಯೊಡನೆ ಕಾಡಿಗೆ ಹೋದಾಗ ಕೂಡ ಕುಂತಿ ಹಸ್ತಿನಾವತಿಯಲ್ಲೇ ಉಳಿಯುತ್ತಾಳೆ. ಅಲ್ಲಿ ಅವಳು ಉಳಿಯುವುದು ವಿದುರನ ಸಮೀಪದಲ್ಲಿ. ವಿದುರ ಕುಂತಿಯ ಮೈದುನ. ಹಾಗೆ ನೋಡಿದರೆ, ನಿಯೋಗ ಪದ್ಧತಿಯಿಂದ ಮಕ್ಕಳನ್ನು ಪಡೆಯಲು ಅವನೇ ಯೋಗ್ಯ ವ್ಯಕ್ತಿ. ಅವನಿಂದಲೇ ಮಕ್ಕಳನ್ನು ಪಡೆದಿರಬಾರದೇಕೆ? ಅಣ್ಣನ ಹೆಂಡತಿಯೊಡನೆ ಕೂಡಿ, ಅವನಿಗಾಗಿ ಪುತ್ರ ಸಂತಾನ ಪಡೆಯುವುದು ಅಂದು ಶಾಸ್ತ್ರಸಮ್ಮತವಾಗಿತ್ತು. ಆದರೆ, ಅದು ಕೇವಲ ಒಂದು ಮಗುವಿಗಾಗಿ ಸೀಮಿತವಾಗಿರಬೇಕು. ಕರ್ವೆಯವರು ತರ್ಕವನ್ನು ಮುಂದುವರೆಸಿ, ಎಲ್ಲರನ್ನಲ್ಲದಿದ್ದರೂ ಯುಧಿಷ್ಠಿರನೊಬ್ಬನನ್ನಾದರೂ ವಿದುರನಿಂದ ಪಡೆದಿರಬಹುದೆ? ಎನ್ನುವ ಶಂಕೆಯನ್ನು ನಮ್ಮ ಮುಂದಿಡುತ್ತಾರೆ. ಯಾಕಿರಬಾರದು? ವಿದುರ ಯಮನ ಅವತಾರ; ಧರ್ಮನನ್ನು ಯಮಸೂನುವೆಂದು ಪರಿಗಣಿಸಲಾಗಿದೆ. ವಿದುರನ ಅವಸಾನ ಸಮಯದಲ್ಲಿ ಧರ್ಮ ಅವನನ್ನು ಭೇಟಿಯಾದಾಗ, ಅವರಿಬ್ಬರ ನಡವಳಿಕೆ ತಂದೆ ಮಕ್ಕಳ ನಡುವಿನ ವರ್ತನೆಯಂತಿತ್ತು.
ಯುದ್ಧ ಮುಗಿದು ಪಾಂಡವರಿಗೆ ರಾಜ್ಯ ದೊರಕಿದಾಗ ಕುಂತಿ ತನ್ನ ಮಕ್ಕಳೊಡನೆ ಸುಖವಾಗಿರಬಹುದಿತ್ತು; ಅವಳು ಹಾಗೆ ಮಾಡಲಿಲ್ಲ. ಧೃತರಾಷ್ಟ್ರ, ಗಾಂಧಾರಿ ಮತ್ತು ವಿದುರರೊಡನೆ ಕಾಡಿಗೆ ಹೊರಡುತ್ತಾಳೆ. ಮಕ್ಕಳು ಎಷ್ಟೇ ಬೇಡಿಕೊಂಡರೂ ತನ್ನ ನಿರ್ಧಾರವನ್ನು ಬದಲಿಸುವುದಿಲ್ಲ. ಕಾಡಿನಲ್ಲಿ ಹಿರಿಯರ ಸೇವೆ ಮಾಡುತ್ತಾ ಕಾಲ ಕಳೆಯುತ್ತಾಳೆ. ಅವರೊಡನೆ ತಾನೂ ಅಗ್ನಿಗಾಹುತಿಯಾಗುತ್ತಾಳೆ.

ದ್ರೌಪದಿ
ದ್ರೌಪದಿ ಮಹಾಭಾರತದ ಕಥಾನಾಯಕಿ, ರಾಮಾಯಣದ ಸೀತೆಯಂತೆ. ಅವರಿಬ್ಬರ ನಡುವೆ ಬಹಳಷ್ಟು ಹೋಲಿಕೆ-ವ್ಯತ್ಯಾಸಗಳಿವೆ. ಅವರಿಬ್ಬರೂ ಅವರ ತಂದೆತಾಯಿಯರ ಸ್ವಂತ ಮಕ್ಕಳಲ್ಲ. ಸೀತೆ ಯಜ್ಞಕ್ಕಾಗಿ ಭೂಮಿಯನ್ನು ಉಳುವಾಗ ನೇಗಿಲಿಗೆ ಸಿಕ್ಕಿದವಳು; ದ್ರೌಪದಿ ಯಜ್ಞಕುಂಡದಿಂದಲೇ ಹುಟ್ಟಿಬಂದವಳು. ಇಬ್ಬರೂ ಹೆಸರಾಂತ ರಾಜರ ಪುತ್ರಿಯರು. ದ್ರೌಪದಿ ದ್ರುಪದರಾಜನ ಮಗಳು. ಜಾನಕಿ ಜನಕರಾಜನ ಪುತ್ರಿ. ಇಬ್ಬರೂ ಸ್ವಯಂವರದ ಮೂಲಕ ಪತಿಯರನ್ನು ಆರಿಸಿಕೊಂಡವರು. ಇವರ ಗಂಡಂದಿರು ಅಪ್ರತಿಮ ಶೂರರು, ಧನುರ್ವಿದ್ಯಾ ಪಾರಂಗತರು. ಇಬ್ಬರೂ ಹಲವಾರು ವರ್ಷಗಳ ಕಾಲ ವನವಾಸ ಮಾಡಿದವರು. ಒಂದು ವ್ಯತ್ಯಾಸ ಎದ್ದು ಕಾಣುತ್ತದೆ: ವಿವಾಹಾನಂತರ ಸೀತೆಯ ತವರಿನವರ ವಿಚಾರ ರಾಮಾಯಣದಲ್ಲಿ ಅಷ್ಟಾಗಿ ಕೇಳಿಬರುವುದಿಲ್ಲ. ಆದರೆ ದ್ರೌಪದಿಯ ತವರಿನವರು ಪಾಂಡವರಿಗೆ ಹಲವು ಬಗೆಯಲ್ಲಿ ಸಹಾಯ ಮಾಡಿದ್ದಿದೆ. ಅವಳ ಸೋದರ ಧೃಷ್ಟದ್ಯುಮ್ನ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಸೇನಾಪತಿಯಾಗಿದ್ದವನು.
ಅರ್ಜುನ ದ್ರೌಪದಿಯನ್ನು ಗೆದ್ದು ಮನೆಗೆ ಕರೆತಂದಾಗ ನಡೆದ ಗೊಂದಲ ಎಲ್ಲರಿಗೂ ತಿಳಿದ ವಿಷಯಐವರು ಅಣ್ಣತಮ್ಮಂದಿರು ಐಕಮತ್ಯದಿಂದ ಬಾಳಬೇಕೆಂದು ಕುಂತಿ ಮಾಡಿದ ಸಂಚಿನಿಂದ ದ್ರೌಪದಿ ಪಂಚಪಾಂಡವರ ಪತ್ನಿಯಾಗುತ್ತಾಳೆ. ಅಂದಿನವರೆಗೆ ಕುಂತಿಯ ಅಧೀನದಲ್ಲಿದ್ದ ಪಾಂಡವರು ಅಲ್ಲಿಂದ ಮುಂದೆ ದ್ರೌಪದಿಯ ಅಧೀನಕ್ಕೆ ಬರುತ್ತಾರೆ. ಪಾಂಡವರು ಶೂರರೇನೋ ನಿಜ. ಆದರೆ ಅವರಿಗೆ ವಿವೇಕ ಕಡಿಮೆ. ಧರ್ಮ ನೀತಿವಂತ, ಆದರೆ ಅವನಿಗೆ ಜೂಜಿನ ಚಟ; ಭೀಮ ಬಲಿಷ್ಠ, ಆದರೆ ಅವನದು ದುಡುಕು ಸ್ವಭಾವ; ಅರ್ಜುನ ಪರಾಕ್ರಮಿ, ಆದರೆ ಅವನಿಗೆ ಪ್ರಾಪಂಚಿಕ ಪರಿಜ್ಞಾನ ಸಾಲದು; ನಕುಲ-ಸಹದೇವರು ಅಣ್ಣಂದಿರ ಅನುಚರರು, ಅವರು ಹೇಳಿದಂತೆ ನಡೆಯುವವರು. ಕಾರಣಗಳಿಂದಾಗಿ ಮಹಾಭಾರತದುದ್ದಕ್ಕೂ ಕೃಷ್ಣೆ ಅಥವಾ ಕೃಷ್ಣ ಪಾಂಡವರ ಮೇಲ್ವಿಚಾರಣೆಗೆ ಇರಬೇಕಾಯ್ತು. ಕರ್ವೆಯವರ ಪ್ರಕಾರ, ಪಾಂಡವರಿಗೆ ರಾಜ್ಯವಾಳುವಷ್ಟು ಸ್ವಂತ ಬುದ್ಧಿಯಿಲ್ಲ; ಅದನ್ನು ನಡೆಸುತ್ತಿದ್ದವನು ಅವರ ಸೋದರ ಮಾವನ ಮಗ ಕೃಷ್ಣ.
ದ್ರೌಪದಿ ಎಂಥ ಎದೆಗಾರ್ತಿ ಎಂಬುದನ್ನು ವಸ್ತ್ರಾಪಹರಣದ ನಂತರದ ಅವಳ ವರ್ತನೆಯಲ್ಲಿ ನಾವು ಕಾಣಬಹುದು. ಧರ್ಮ ದ್ಯೂತದಲ್ಲಿ ಹೆಂಡತಿಯೊಡನೆ ಸಕಲವನ್ನು ಸೋತು, ದ್ರೌಪದಿ ದಾರುಣವಾಗಿ ಅವಮಾನಗೊಳ್ಳುವುದನ್ನು ಕಂಡು ಹೆದರಿದ ಧೃತರಾಷ್ಟ್ರ ಆಗಬಹುದಾದ ಅನಾಹುತವನ್ನು ತಪ್ಪಿಸಲು ಅವಳಿಗೆ ಮೂರು ವರವನ್ನು ಕೊಟ್ಟಾಗ, ಅವಳು ಕೇಳಿದ್ದು: ನನ್ನ ಗಂಡಂದಿರು ಮುಕ್ತರಾಗಿ ಸಶಸ್ತ್ರರಾದರೆ ನನಗದೇ ಸಾಕು ಎಂದಷ್ಟೆ. ಹೀಗೆ ತನ್ನ ಗಂಡಂದಿರನ್ನು ಮಹಾ ದುರಂತದಿಂದ ಪಾರು ಮಾಡುತ್ತಾಳೆ ದ್ರೌಪದಿ.
ಸೀತೆಯ ವನವಾಸ ಅವಳ ಪತಿಯ ಆದರ್ಶದ ಫಲ. ದ್ರೌಪದಿಯದು ಅವಳ ಗಂಡಂದಿರ ಅವಿವೇಕದಿಂದಾದದ್ದು. ಸೀತೆಯ ವನವಾಸ ಮುಕ್ಕಾಲು ಭಾಗ ಅವಳ ಹನಿಮೂನ್ ಆಗಿತ್ತು. ರಾವಣ ಅವಳನ್ನು ಲಂಕೆಗೆ ಕೊಂಡೊಯ್ದಾಗಲು ಅವಳಿಗೆ ಅಪಮಾನವೇನೂ ಆಗಲಿಲ್ಲ. ದ್ರ್ರೌಪದಿ ವನವಾಸ ಮಾತ್ರ ಒಂದಲ್ಲ ಒಂದು ತೊಂದರೆಯಿಂದಾವೃತವಾಗಿತ್ತು. ಅವಳು ನಾಥವತೀ ಅನಾಥವತ್ (ಗಂಡಂದಿರಿದ್ದೂ ವಿಧವೆ) ಎಂದು ವರ್ಣಿಸಲ್ಪಟ್ಟಿದ್ದಾಳೆ. ಒಂದೆಡೆ ರೊಚ್ಚಿಗೆದ್ದು ನನಗೆ ಗಂಡಂದಿರೂ ಇಲ್ಲ, ಸೋದರರೂ ಇಲ್ಲ, ತಂದೆಯೂ ಇಲ್ಲ. ಅವರಿದ್ದಿದ್ದರೆ ನನಗೆ ರೀತಿ ಅಪಮಾನವಾಗುವುದನ್ನು ಸಹಿಸಿಕೊಂಡು ಸುಮ್ಮನಿರುತ್ತಿದ್ದರೇ ಎಂದು ಕೂಗಾಡಿದ್ದಿದೆ.
ಮಹಾಭಾರತ ಯುದ್ಧಕ್ಕೆ ದ್ರೌಪದಿಯೇ ಕಾರಣಳೆನ್ನುವ ಮಾತೊಂದಿದೆ. ಒಂದು ಪುರಾಣದಲ್ಲಿ ಕೃತಯುಗದಲ್ಲಿ ರೇಣುಕೆಯು ಕೃತ್ಯ, ಸತ್ಯಯುಗದಲ್ಲಿ ಸೀತೆಯು ಕೃತ್ಯ, ದ್ವಾಪರಯುಗದಲ್ಲಿ ದ್ರೌಪದಿ, ಆದರೆ ಕಲಿಯುಗದಲ್ಲಿ ಮನೆಮನೆಗಳಲ್ಲಿ ಕೃತ್ಯ ಎಂಬ ಅರ್ಥ ಬರುವ ಶ್ಲೋಕವಿದೆ. ಇಲ್ಲಿ ಕೃತ್ಯ ಎನ್ನುವ ಮಾತು ದುಷ್ಟದೇವತೆ (ರಕ್ಕಸಿ) ಎಂಬರ್ಥದಲ್ಲಿ ಉಪಯೋಗವಾಗಿದೆ. ಇದು ಯಾರೋ ಸ್ತ್ರೀದ್ವೇಷಿ ಪುರುಷ ಹೇಳಿದ್ದಿರಬಹುದು. ದ್ರೌಪದಿ ಯುದ್ಧವನ್ನು ಬಯಸಿದ್ದಳು, ನಿಜ. ಆದರೆ ಅವಳೇ ಯುದ್ಧಕ್ಕೆ ಪ್ರಮುಖ ಕಾರಣಳಲ್ಲ. ಕುರುಡನೆಂದು ಧೃತರಾಷ್ಟ್ರನಿಗೆ ಪಟ್ಟ ಕಟ್ಟದೆ, ಪಾಂಡುವನ್ನು ರಾಜನನ್ನಾಗಿ ನೇಮಿಸಿದ ದಿನವೇ ಯುದ್ಧಕ್ಕೆ ಬೀಜಾಂಕುರವಾಗಿತ್ತು. ಕೌರವ-ಪಾಂಡವರ ನಡುವಿನ ದ್ವೇಷ ದ್ರೌಪದಿಯ ವಿವಾಹಪೂರ್ವದಿಂದಲೂ ಇತ್ತು. ಆದುದರಿಂದ ಯುದ್ಧಕ್ಕೆ ಕಾರಣ ದ್ರೌಪದಿಯಲ್ಲ, ಅದಕ್ಕೆ ಮುಖ್ಯ ಕಾರಣ ಭಾರತೀಯರಲ್ಲಿ ರಕ್ತಗತವಾಗಿ ಬಂದಿರುವ ಕೌಟುಂಬಿಕ ಆಸ್ತಿಪಾಸ್ತಿಯ ಮೇಲಣ ಹಕ್ಕುದಾರಿಕೆ.
ಮಹಾಭಾರತದಲ್ಲಿ ದ್ರೌಪದಿಯೂ ಸೇರಿದಂತೆ, ಹೆಣ್ಣು ಎಷ್ಟು ನಿರ್ಲಕ್ಷಿತಳಾಗಿದ್ದಳು ಎಂಬುದನ್ನು ತೋರಿಸುವ ಒಂದು ಸಂದರ್ಭವನ್ನು ಇಲ್ಲಿ ಗಮನಿಸಬೇಕು. ರಾಯಭಾರಕ್ಕೆ ಬಂದ ಕೃಷ್ಣ, ಕರ್ಣನು ಪಾಂಡವರ ಪಕ್ಷಕ್ಕೆ ಬಂದರೆ, ಅವನಿಗೆ ರಾಜ್ಯದ ಒಂದು ಭಾಗದ ಜತೆಗೆ ದ್ರೌಪದಿಯನ್ನೂ ಕೊಡಿಸುತ್ತೇನೆ ಎಂದು ಹೇಳುತ್ತಾನೆ. ಎಂಥ ಹೇಯವಾದ ವ್ಯವಹಾರ? ದ್ರೌಪದಿಗೆ ಕರ್ಣನ ಮೇಲೆ ಮನಸ್ಸಿತ್ತು ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತದೆ. ಅದೆಲ್ಲ ಶುದ್ಧ ಸುಳ್ಳು; ನಿರಾಧಾರವಾದುದು. ಇಡೀ ಮಹಾಭಾರತದಲ್ಲಿ ದ್ರ್ರೌಪದಿ ಮತ್ತು ಕರ್ಣನ ನಡುವೆ ಹಾಗೆ ಅನುಮಾನ ಬರುವಂಥ ಯಾವುದೇ ವ್ಯವಹಾರ ನಡೆದಿರುವುದು ಕಂಡುಬರುವುದಿಲ್ಲ. ಅವೆಲ್ಲ ಕಟ್ಟುಕತೆಗಳು. ದ್ರೌಪದಿ ರೋಷದ ಮೂರ್ತಿಯಾಗಿರಬಹುದು. ಆದರೆ ಅವಳು ವಿಧೇಯ ಪತ್ನಿ. ಅವಳ ಚಾರಿತ್ರ್ಯದಲ್ಲಿ ಕಿಂಚಿತ್ತಾದರೂ ಸಂದೇಹ ಬರುವ ಪ್ರಸಂಗ ಭಾರತದಲ್ಲಿ ಕಂಡುಬರುವುದಿಲ್ಲವೆನ್ನುತ್ತಾರೆ ಕರ್ವೆ.
ಲೇಖಕಿಯ ಪ್ರಕಾರ, ಸೀತೆ ದ್ರೌಪದಿ ಇಬ್ಬರೂ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ರಾಮ ಮಾಯಾಜಿಂಕೆಯನ್ನಟ್ಟಿಸಿಕೋಡು ಹೋದ ಸಂದರ್ಭದಲ್ಲಿ ಸೀತೆ ಲಕ್ಷ್ಮಣನ ಚಾರಿತ್ರ್ಯವನ್ನು ಶಂಕಿಸಿ ಜರೆದದ್ದು ತಪ್ಪು. ಮಯಸಭೆಯಲ್ಲಿ ಗೊಂದಲದಲ್ಲಿದ್ದ ದುರ್ಯೋಧನನನ್ನು ನೋಡಿ ನಕ್ಕಿದ್ದು ದ್ರೌಪದಿಯ ತಪ್ಪು. ಮನೆಗೆ ಬಂದ ಅತಿಥಿಯನ್ನು ಅವಮಾನಿಸಿದ್ದು ಎಳ್ಳಷ್ಟೂ ಸರಿಯಲ್ಲ. ಕೀಚಕನು ಸತ್ತು ಅವನ ಶವವನ್ನು ಕೊಂಡೊಯ್ಯುವಾಗ ಎಲ್ಲರೆದುರಿನಲ್ಲಿ ಸಂತೋಷವನ್ನು ವ್ಯಕ್ತ ಪಡಿಸಿದಾಗ ಅವಳು ಸಾಮಾನ್ಯ ಹೆಣ್ಣಿನಂತೆ ಕಂಡುಬರುತ್ತಾಳೆ. ದ್ಯೂತಾನಂತರ, ದುಶ್ಯಾಸನನು ದ್ರೌಪದಿಯನ್ನು ಸಭೆಗೆ ಎಳೆದು ತಂದಾಗ, ಅವಳು ಕೇಳಿದ ಪ್ರಶ್ನೆ ಅಲ್ಲಿದ್ದವರೆಲ್ಲರನ್ನೂ ಪೇಚಿಗೆ ಸಿಲುಕಿಸುತ್ತದೆ. ಧರ್ಮನು ನನ್ನನ್ನು ಪಣವಾಗಿಡುವ ಮೊದಲೇ ತನ್ನನ್ನು ಪಣವಾಗಿಟ್ಟು ಸೋತಿರುವುದರಿಂದ ನನ್ನನ್ನು ಪಣವಾಗಿಡುವ ಹಕ್ಕು ಅವನಿಗಿತ್ತೆ? ಎಂಬುದು ಕ್ಲಿಷ್ಟ ಸಮಸ್ಯೆ, ಉತ್ತರಿಸಲಾಗದ್ದು. ಹೇಗೆ ಉತ್ತರಿಸಿದರೂ ಅದರಿಂದ ದ್ರೌಪದಿಗೆ ಅಪಾಯವಾಗುತ್ತಿತ್ತು ಎಂಬುದನ್ನು ಕರ್ವೆ ಬಹಳ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ತಮ್ಮ ಮನೆಯ ಸೊಸೆಯನ್ನು ಗಂಡಸರಿರುವ ಸಭೆಯಲ್ಲಿ ಅವಮಾನಗೊಳಿಸುವುದು ಅಮಾನವೀಯ ವರ್ತನೆ ಎಂಬುದನ್ನು ಅವರ ಗಮನಕ್ಕೆ ತರುವುದರ ಬದಲು, ಧರ್ಮಸೂಕ್ಷ್ಮಕ್ಕೆ ಸಂಬಂಧಿಸಿದ ಪಾಂಡಿತ್ಯ ಪ್ರದರ್ಶನಕ್ಕೆ ಹೊರಟಿದ್ದು ಉದ್ಧಟತನದಂತೆ ಕಾಣುತ್ತದೆ. ವಿದುರನ ಸಲಹೆಯಂತೆ ಧೃತರಾಷ್ಟ್ರ ಮಧ್ಯ ಪ್ರವೇಶಿಸಿ ಆಗುತ್ತಿದ್ದ ಅನಾಹುತಗಳನ್ನು ತಪ್ಪಿಸಿದನೆನ್ನಬೇಕು.
ಯುದ್ಧ ಮುಗಿದು ಕೃಷ್ಣನ ಅವಸಾನಾನಂತರ, ಪಾಂಡವರಿಗೆ ಪೃಥ್ವಿಯ ಮೇಲಿನ ಬಾಳು ಅಸಹನೀಯವಾಯ್ತು. ಅಭಿಮನ್ಯುವಿನ ಮಗ ಪರೀಕ್ಷಿತನಿಗೆ ಪಟ್ಟಕಟ್ಟಿ ತಾವು ಕೊನೆಯ ಪ್ರಯಾಣಕ್ಕೆ ಹೊರಡುತ್ತಾರೆ. ದ್ರೌಪದಿಯೂ ಅವರನ್ನು ಹಿಂಬಾಲಿಸುತ್ತಾಳೆ. ಹಾದಿಯಲ್ಲಿ ಒಂದೆಡೆ  ದ್ರೌಪದಿ ಬಿದ್ದು ಕೆಳಗುರುಳುತ್ತಾಳೆ. ಆಗ ಭೀಮ ಅವಳೇಕೆ ಬಿದ್ದಳು ಎಂದು ಧರ್ಮನನ್ನು ಕೇಳುತ್ತಾನೆ. ಆಗ ಧರ್ಮ ಹಿಂದಕ್ಕೆ ತಿರುಗಿ ನೋಡದೆ, ಭೀಮ ಮುಂದೆ ನಡೆ, ಬಿದ್ದುದಕ್ಕೆ ಕಾರಣ, ಅವಳು ಎಲ್ಲರಿಗಿಂತ ಹೆಚ್ಚಾಗಿ ಅರ್ಜುನನನ್ನು ಪ್ರೀತಿಸಿದ್ದು ಎಂದು ಹೇಳುತ್ತಾನೆ. ಮಾತಿನ ಮೂಲಕ ಬಾಳಿನುದ್ದಕ್ಕೂ ನುಂಗಿಕೊಂಡಿದ್ದ ನೋವನ್ನು ಧರ್ಮ ಹೊರಹಾಕಿದನೇನೊ ಅನಿಸುತ್ತದೆ. ಅನಂತರ ದಾರಿಯಲ್ಲಿ ಒಬ್ಬೊಬ್ಬರಾಗಿ ಎಲ್ಲರೂ ಉರುಳುತ್ತಾರೆ; ಧರ್ಮನೊಬ್ಬ ತನ್ನ ನಾಯಿಯೊಡನೆ ಮುಂದಕ್ಕೆ ನಡೆಯುತ್ತಾನೆ.
ಭಾಗವನ್ನು ಮುಗಿಸುವ ಮೊದಲು ಒಂದು ವಿಷಯವನ್ನು ಹೇಳಬೇಕು. ಕೆಳಗುರುಳಿದ್ದ ದ್ರೌಪದಿ ಇನ್ನೂ ಸತ್ತಿರಲಿಲ್ಲ. ಭೀಮ-ಧರ್ಮರ ನಡುವೆ ನಡೆದ ಮಾತು ಅವಳಿಗೆ ಕೇಳಿಸಿತ್ತು. ಧರ್ಮನ ಮಾತುಗಳು ಅವಳ ಹಳೆಯ ನೆನಪುಗಳನ್ನು ಕೆದಕಿದವು. ತನ್ನ ಬಗ್ಗೆ ಧರ್ಮನಿಗಿದ್ದ ತಿರಸ್ಕಾರವನ್ನು ಅವಳು ಗುರುತಿಸಿದಳು. ಅವಳ ಬಾಳಿನಲ್ಲಿ ಧರ್ಮನ ಅವಸ್ಥೆಯನ್ನು ಕಂಡು ಹಲವು ಬಾರಿ ಕನಿಕರಿಸಿದ್ದಳು. ದ್ರೌಪದಿ ತೋರುತ್ತಿದ್ದ ಕರುಣೆ ಅವನಿಗೆ ಅಂಕುಶದಿಂದ ಇರಿದಂತೆನಿಸುತ್ತಿತ್ತು. ಅವನೆಂದೂ ತನ್ನ ಭಾವನೆಗಳನ್ನು ಅವಳೆದುರಿಗೆ ತೋರಿಸಿಕೊಂಡಿರಲಿಲ್ಲ. ಇಂದು ಒಂದೇ ಮಾತಿನಲ್ಲಿ ಅವಳ ತಪ್ಪನ್ನು ಉದ್ಗರಿಸಿದ್ದ. ಧರ್ಮನ ಬಗ್ಗೆ ಅವಳಿಗೆ ಅಯ್ಯೋ ಪಾಪ ಅನಿಸಿರಬೇಕು. ಅದು ಒಂದು ಕ್ಷಣ ಮಾತ್ರ. ತನ್ನ ಸ್ವಯಂವರವನ್ನು ನೆನೆಸಿಕೊಂಡಳು; ಅರ್ಜುನ ತನ್ನನ್ನು ಗೆದ್ದ ಬಳಿಕ, ತಾನು ಐವರಿಗೆ ಹೆಂಡತಿಯಾಗಬೇಕಾದಾಗ, ತನ್ನ ಮನಸ್ಸನ್ನು ಐದು ಭಾಗಗಳಾಗಿ ಕತ್ತರಿಸಿ ಹಂಚಬೇಕಾದಾಗ, ತನಗಾದ ನೋವನ್ನು ಧರ್ಮನೇಕೆ ಅರಿಯಲಿಲ್ಲ? ಎಂದು ಯೋಚಿಸಿದಳು. ಅವಳು ಪಾಂಡವರೈವರನ್ನೂ ಬಹಿರಂಗದಲ್ಲಿ ಸಮನಾಗಿ ನೋಡಿಕೊಂಡಳು. ಆದರೆ ಅಂತರಂಗದ ಪ್ರೇಮವನ್ನು ಐವರಿಗೆ ಸಮನಾಗಿ ಹಂಚಲು ಸಾಧ್ಯವೇ? ಅವಳು ಅರ್ಜುನನನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸಿದ್ದರೆ, ಅದರಲ್ಲೇನಾದರು ವಿಶೇಷವಿದೆಯೆ? ಹಾಗೆ ನೋಡಿದರೆ, ಅವಳು ನಿಜವಾಗಿಯೂ ಅರ್ಜುನನನ್ನು ಪ್ರೀತಿಸಿದ್ದಳೆ? ಪ್ರೀತಿಯೆಂದರೇನು? ನಾವು ಪ್ರೀತಿಸಿದವರು ನಮ್ಮನ್ನು ಪ್ರೀತಿಸುವುದಿಲ್ಲ; ನಮಗಾಗಿ ಇನ್ನಾರೊ ಹಂಬಲಿಸುತ್ತಾರೆ. ಪ್ರೀತಿ ಯಾವಾಗಲೂ ಏಕಮುಖವಾಗಿ ಹರಿಯುವುದೆ? ಹೀಗೆ ಯೋಚಿಸುತ್ತಿರುವಾಗ ತಕ್ಷಣ ಅವಳಿಗೆ ಒಂದು ವಿಷಯ ನೆನಪಾಗುತ್ತದೆ. ಅವಳಿಗಾಗಿ ತನ್ನದೆಲ್ಲವನ್ನೂ ಅರ್ಪಿಸಿದವನೊಬ್ಬನಿದ್ದಾನೆ; ಅವನು ಭೀಮ. ಅರ್ಜುನನ ಜೊತೆ ಸ್ವಯಂವರ ಮಂಟಪದ ಹೊರಗಡೆ ಹೋರಾಡಿದವನು, ದ್ಯೂತವಾಡಿದ ಧರ್ಮನ ಕೈ ಕತ್ತರಿಸಲು ಮುಂದಾದವನು, ತನಗಾಗಿ ಸೌಗಂಧಿಕಾ ಪುಷ್ಪವನ್ನು ತಂದಿತ್ತವನು, ಕೀಚಕನನ್ನು ಕೊಂದವನು, ದುಶ್ಯಾಸನನ ಎದೆ ಸೀಳಿ ಅವನ ರಕ್ತದಿಂದ ತನ್ನ ಕೂದಲನ್ನು ಕಟ್ಟಿದವನು, ತನ್ನನ್ನು ತೊಡೆ ಮೇಲೆ ಕೂಡಲು ಕರೆದ ದುರ್ಯೋಧನನ ತೊಡೆ ಮುರಿದವನು, ಒರಟ ಹೊಟ್ಟೆಬಾಕ, ನೆಲದ ಮಗ, ಭೀಮ. ಚಿತ್ರಗಳು ಅವಳ ಮನಃಪಟಲದಲ್ಲಿ ಹಾಯ್ದುಹೋಗುವಾಗ ಯಾರೋ ದ್ರೌಪದಿ ಎಂದಂತಾಯಿತು. ನೋಡಿದರೆ ಅದು ಭೀಮನ ಸ್ವರ. ಸತ್ತು ಬಿದ್ದಿರುವ ಅನುಜರನ್ನು ದಾಟಿ ಇವಳೆಡೆಗೆ ಬಂದು ಅತ್ಯಂತ ಪ್ರಯಾಸದಿಂದ ನಿನಗಾಗಿ ನಾನೇನು ಮಾಡಲಿ? ಎಂದು ಕೇಳಿದ. ಅವನ ಜೀವನಪರ್ಯಂತ ಅವಳಿಗೆ ಕೇಳುತ್ತಿದ್ದ ಪ್ರಶ್ನೆ ಅದು. ದ್ರೌಪದಿ ನಕ್ಕು ಅವನನ್ನು ಬರಸೆಳೆದು ಅಪ್ಪಿಕೊಂಡು, ಮುಂದಿನ ಜನ್ಮದಲ್ಲಿ ನೀನು ಎಲ್ಲರಿಗಿಂತ ಹಿರಿಯನಾಗಿ ಹುಟ್ಟಿ ಬಾ: ನಿನ್ನ ಆಶ್ರಯದಲ್ಲಿ ನಾವೆಲ್ಲಾ ಆಗ ಸುಖವಾಗಿ ಬದುಕುತ್ತೇವೆ ಎಂದಳು.

ಕೃಷ್ಣ
ಕೃಷ್ಣ ಮಹಾಭಾರತದ ಸೂತ್ರಧಾರಿ. ಆಯುಧವನ್ನಿಡಿಯದೆ ಕುರುಕ್ಷೇತ್ರ ಯುದ್ಧವನ್ನು ಜಯಿಸಿದ ಚಾಣಾಕ್ಷ. ನಿಜವಾಗಿ ಅವನೇ ಮಹಾಭಾರತದ ನಾಯಕ. ಅವನು ಪಾಂಡವರ ಸೋದರಮಾವನ ಮಗ, ಕೃಷ್ಣನ ತಂದೆ ವಸುದೇವ ಕುಂತಿಯ ಸೋದರ. ಅವನಿಲ್ಲದಿದ್ದರೆ ಪಾಂಡವರ ಬದುಕು ಸೂತ್ರವಿಲ್ಲದ ಗಾಳಿಪಟವಾಗುತ್ತಿತ್ತು. ದ್ರೌಪದಿಯ ಸ್ವಯಂವರಕ್ಕೆ ಮೊದಲು ಕೃಷ್ಣನಿಗೆ ಪಾಂಡವ-ಕೌರವರ ಸಂಪರ್ಕವಿದ್ದಂತೆ ಕಂಡುಬರುವುದಿಲ್ಲ. ಅಂದಿನವರೆಗೆ ಪಾಂಡವರನ್ನು ನೋಡಿಕೊಳ್ಳುತ್ತಿದ್ದವರು ಕುಂತಿ ಮತ್ತು ವಿದುರ. ಕೃಷ್ಣ ಬರುವವರೆಗೆ, ಕುಂತಿಯ ತವರಿನವರು ಅವಳಿಗಾಗಲೀ, ಅವಳ ಮಕ್ಕಳಿಗಾಗಲೀ ಏನೂ ಸಹಾಯ ಮಾಡಿದಂತೆ ಕಂಡುಬರುವುದಿಲ್ಲ. ಕೃಷ್ಣನ ಪ್ರವೇಶವಾದ ಮೇಲೆ, ಕತೆಯಲ್ಲಿ ಕೃಷ್ಣನಿಲ್ಲದ ಪರ್ವವಿಲ್ಲ. ಅವನ ಸಹಾಯ ಹಸ್ತ ಪಾಂಡವರೆಡೆಗೆ ಚಾಚಿ ನಿಂತಿತ್ತು. ಹಾಗೆ ನೋಡಿದರೆ, ಪಾಂಡವರಿಗೆ ಕೃಷ್ಣನ ಸಹಾಯ ಬೇಕಿದ್ದ ಹಾಗೆ, ಕೃಷ್ಣನಿಗೂ ಬಲಾಢ್ಯರಾದ ಭೀಮಾರ್ಜುನರ ಸಹಾಯದ ಅವಶ್ಯಕತೆ ಇತ್ತು. ಕೃಷ್ಣ ಕಂಸನನ್ನು ಕೊಂದಿದ್ದ. ಅದರಿಂದ ಕಂಸನ ಮಾವ, ಮಗಧದ ರಾಜ ಜರಾಸಂಧ, ಕುಪಿತನಾಗಿ ಯಾದವರನ್ನು ಯಮುನೆಯ ದಡದಲ್ಲಿದ್ದ ಮಧುರೆಯಿಂದ ಹೊಡೆದೋಡಿಸಿದ್ದ. ಯಾದವರು ಗುಜರಾತಿನ ಕಡೆಗೆ ಬಂದು ದ್ವಾರಕೆಯನ್ನು ನಿರ್ಮಿಸಿ ಅಲ್ಲಿ ನೆಲೆಸಿದ್ದರು. ಕೃಷ್ಣನಿಗೆ ಜರಾಸಂಧನನ್ನು ಮಣಿಸುವುದು ಬೇಕಿತ್ತು. ರಾಜಸೂಯ ಯಾಗದ ನೆಪದಲ್ಲಿ ಭೀಮನ ಸಹಾಯದಿಂದ ಜರಾಸಂಧನನ್ನು ಕೊಲ್ಲಿಸಿದ. ಅನಂತರ ಯಾಗ ಮಂಟಪದಲ್ಲಿ ದುರಹಂಕಾರಿ ಶಿಶುಪಾಲರನ್ನು ಕೊಲ್ಲುತ್ತಾನೆ. ಮಹಾಭಾರತದಲ್ಲಿ ನಿರೂಪಿತವಾಗಿರುವ ರಾಜನೀತಿಗಳನ್ನು ಕರ್ವೆ ಸ್ಪಷ್ಟವಾಗಿ ವಿವರಿಸಿರುವುದನ್ನು ನಾವು ಇಲ್ಲಿ ಗಮನಿಸಬೇಕು. ಯುದ್ಧದಲ್ಲಿ ಸೋತ ದೊರೆಯ ರಾಜ್ಯವನ್ನು ಗೆದ್ದವರು ಎಲ್ಲೂ ಆಕ್ರಮಿಸಿಕೊಂಡಂತೆ ಕಂಡುಬರುವುದಿಲ್ಲ. ಜರಾಸಂಧನನ್ನು ಕೊಂದ ಬಳಿಕ ಅವನ ಮಗನಿಗೆ ಪಟ್ಟ ಕಟ್ಟಲಾಗುತ್ತದೆ. ಅವನು ಸೆರೆಯಲ್ಲಿಟ್ಟಿದ್ದ ರಾಜರುಗಳಿಗೆ ಅವರವರ ರಾಜ್ಯಗಳನ್ನು ಹಿಂದಿರುಗಿಸಲಾಯ್ತು. ಹಾಗೆಯೇ ಶಿಶುಪಾಲನ ಮಗನಿಗೂ ಅವನ ತಂದೆಯ ರಾಜ್ಯವನ್ನು ಕೊಡಲಾಗಿದೆ. ಯುದ್ಧದಲ್ಲಿ ಸೋತವರ ಹೆಂಡಿರನ್ನು ಯೋಗ್ಯರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿತ್ತು. ಧರ್ಮನು ಹಸ್ತಿನಾಪುರದ ಸಿಂಹಾಸನವನ್ನೇರಿದಾಗ ವ್ಯಾಸನು ಅವನಿಗೆ ಹೇಳಿದ ಮಾತುಗಳಲ್ಲಿ ಅಂದಿನ ರಾಜನೀತಿ ಸ್ಪಷ್ಟವಾಗಿ ಕಂಡುಬರುತ್ತವೆ.
ದ್ವಾರಕೆಯಲ್ಲಿ ಕೃಷ್ಣ ತನ್ನಣ್ಣ ಬಲರಾಮನನ್ನೇ ಯಾದವರ ಅರಸನನ್ನಾಗಿ ಮಾಡಿ ಅವನ ಒಲವನ್ನು ಸಂಪಾದನೆ ಮಾಡಿ, ಅವನು ತನ್ನನ್ನು ಗೌರವಿಸುವಂತೆ ನೋಡಿಕೊಳ್ಳುತ್ತಾನೆ. ಬಲರಾಮ ಕೃಷ್ಣನಂತೆ ಪೂರ್ಣವಾಗಿ ಪಾಂಡವಪಕ್ಷಪಾತಿಯಲ್ಲ. ಅವನು ಕೌರವ-ಪಾಂಡವರನ್ನು ಸಮನಾಗಿಯೇ ನೋಡುತ್ತಿದ್ದ. ಸುಭದ್ರೆಯನ್ನು ಅರ್ಜುನ ಎತ್ತಿಕೊಂಡು ಹೋಗುವಾಗ ಬಲರಾಮ ಅರ್ಜುನನ ಮೇಲೆ ಯುದ್ಧಕ್ಕೆ ಹೋಗದಂತೆ ಕೃಷ್ಣ ಅವನನ್ನು ತಡೆಯುತ್ತಾನೆ. ಗದಾಯುದ್ಧ ನಡೆಯುವಾಗ, ಭೀಮ ದುರ್ಯೋಧನನ ತೊಡೆಗೆ ಹೊಡೆದದ್ದು ಯುದ್ಧ ನಿಯಮದ ಉಲ್ಲಂಘನೆ ಎಂದು ಅವನನ್ನು ಕೊಲ್ಲಲು ಹೊರಟಿದ್ದ ಬಲರಾಮನನ್ನು ಕೃಷ್ಣ ತಡೆಯುತ್ತಾನೆ. ಏನೇನೊ ಷಡ್ಯಂತರಗಳ ಮೂಲಕ ಬಲರಾಮ ಕೌರವರ ನೆರವಿಗೆ ಬರದಂತೆ ನೋಡಿಕೊಳ್ಳುತ್ತಾನೆ. ಯಾದವರ ಸಹಾಯ ಕೋರಿ ದುರ್ಯೋಧನ ಮತ್ತು ಅರ್ಜುನ ಇಬ್ಬರೂ ಒಂದೇ ದಿನ ಕೃಷ್ಣನಲ್ಲಿಗೆ ಬರುತ್ತಾರೆ. ಕೃಷ್ಣ ನಿರಾಯುಧನಾದ ತಾನೊಬ್ಬ ಒಂದು ಕಡೆ, ಯಾದವ ಸೈನ್ಯವೆಲ್ಲ ಒಂದು ಕಡೆ, ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳುವಂತೆ ಅವರಿಬ್ಬರಿಗೂ ಹೇಳುತ್ತಾನೆ. ದುರ್ಯೋಧನ ಸೈನ್ಯವನ್ನು ಆರಿಸಿಕೊಂಡರೆ ಅರ್ಜುನ ಕೃಷ್ಣನನ್ನು ಆರಿಸಿಕೊಳ್ಳುತ್ತಾನೆ. ಅರ್ಜುನ ತನ್ನ ಮೇಲಿಟ್ಟಿರುವ ವಿಶ್ವಾಸವನ್ನು ಕಂಡು ಸಂತುಷ್ಟನಾದ ಕೃಷ್ಣ ಅವನಿಗೆ ಸಾರಥಿಯಾಗಲು ಒಪ್ಪುತ್ತಾನೆ. ಯುದ್ಧದ ಮೊದಲ ದಿನ ಅರ್ಜುನ ತನ್ನ ಬಂಧುಗಳೊಡನೆ ಕಾದಲು ಹಿಂಜರಿದಾಗ ಕೃಷ್ಣ ಅವನ ಮನವೊಲಿಸಲು ಮಾಡಿದ ಪ್ರಯತ್ನ ಅದ್ಭುತ. ಅರ್ಜುನ ಕೃಷ್ಣನ ಸಮವಯಸ್ಸಿನವನು. ಅವರಿಬ್ಬರು ಆತ್ಮೀಯರು, ಪ್ರಾಣಸ್ನೇಹಿತರು. ಕೃಷ್ಣನನ್ನು ನಾವು ನೆನೆಯುವುದೇ ಪಾರ್ಥಸಾರಥಿ ಎಂದು ತಾನೆ? ಅಭಿಮನ್ಯು ಕೊಲೆಯಾದ ಸಂದರ್ಭದಲ್ಲಿ ಅರ್ಜುನ ಜಯದ್ರಥನನ್ನು ಸೂರ್ಯ ಮುಳುಗುವುದರೊಳಗೆ ಕೊಲ್ಲುವೆನೆಂದು ಇಲ್ಲದಿದ್ದರೆ ಅಗ್ನಿಪ್ರವೇಶ ಮಾಡುವೆನೆಂದು ದುಡುಕಿ ಪ್ರತಿಜ್ಞೆ ಮಾಡುತ್ತಾನೆ. ಅರ್ಜುನನ ಪ್ರತಿಜ್ಞೆಯನ್ನು ಪೂರೈಸಲು ಕೃಷ್ಣ ಮಾಡಿದ ತಂತ್ರ ಅಸಾಧಾರಣ.
ಕೃಷ್ಣನ ಬಾಲಲೀಲೆಯ ಪ್ರಸಂಗಗಳು ಮಹಾಭಾರತದಲ್ಲಿಲ್ಲ. ಅದೆಲ್ಲಾ ಬರುವುದು ಭಾಗವತದಲ್ಲಿ. ಎಲ್ಲ ಕ್ಷತ್ರಿಯರಂತೆ ಅವನಿಗೂ ಹಲವು ಹೆಂಡತಿಯರಿದ್ದರು. ಅದರಲ್ಲಿ ವಿಶೇಷವೇನೂ ಇಲ್ಲ. ಅದು ಅಂದು ಕ್ಷಾತ್ರಧರ್ಮವೆನಿಸಿಕೊಳ್ಳುತ್ತಿತ್ತು. ಅವನನ್ನು ಪವಾಡಪುರುಷನೆಂಬುದನ್ನು ಕರ್ವೆ ಒಪ್ಪುವುದಿಲ್ಲ. ಮಹಾಭಾರತದಲ್ಲಿ ಕೃಷ್ಣನು ಅತ್ಯಂತ ಮಾನವೀಯ ವ್ಯಕ್ತಿಯಾಗಿ ಚಿತ್ರಿತನಾಗಿದ್ದಾನೆ. ಅವನ ರಾಜಕಾರಣ ನೈಪುಣ್ಯತೆ ಮಾತ್ರ ಮೇಲ್ಮಟ್ಟದ್ದು. ಯುದ್ಧದ ಮೊದಲ ದಿನದಿಂದ ಕೊನೆಯವರೆಗೆ ರಾತ್ರಿ ಹಗಲು ಪಾಂಡವರನ್ನು ಕೃಷ್ಣ ರಕ್ಷಿಸುತ್ತಿದ್ದ. ಯುದ್ಧಾನಂತರ ಅವರಿಗೆ ರಾಜ್ಯಾಡಳಿತ ವಹಿಸಿ ತಾನು ದ್ವಾರಕೆಗೆ ಮರಳುತ್ತಾನೆ. ತನ್ನೆಲ್ಲ ಬಯಕೆಗಳನ್ನು - ಯಾದವರ ಶತ್ರು ಭಯ ನಿವಾರಣೆ, ಕ್ಷತ್ರಿಯವರ್ಗದ ಸುಭದ್ರತೆ, ಪಾಂಡವರಿಗೆ ಹಸ್ತಿನಾಪುರದ ಸಿಂಹಾಸನ, ರಾಜ್ಯದಲ್ಲಿ ಸುಭಿಕ್ಷತೆ - ಪೂರೈಸಿಕೊಂಡು 35 ವರ್ಷ ಸುಖಬಾಳ್ವೆ ನಡೆಸಿದಂತೆ ಕಂಡುಬರುತ್ತದೆ.
ಕೃಷ್ಣನ ಅಂತ್ಯ ಮಾತ್ರ ಆಕಸ್ಮಿಕ. ಅವನ ಮತ್ತು ಯಾದವರ ಅಂತ್ಯದ ಕತೆಯಲ್ಲಿ ಸ್ಪಷ್ಟತೆ ಇಲ್ಲ. ಇಂದು ಆಡುಭಾಷೆಯಲ್ಲಿ ಜನಜನಿತವಾಗಿರುವ ಮಾತು ಯಾದವೀಕಲಹ. ಅದಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಹುಟ್ಟಿಕೊಂಡಿವೆ. ಅವೆಲ್ಲ ಕಟ್ಟುಕತೆಗಳು, ಅನಂತರ ಸೇರಿಸಲಾಗಿದೆ ಎಂಬುದು ವಿಮರ್ಶಕರ ಅಭಿಪ್ರಾಯ. ಮದ್ಯಪಾನದ ಮತ್ತಿನಲ್ಲಿ ಯಾದವ ಬಾಲಕರು ಬ್ರಾಹ್ಮಣರನ್ನು ಚೇಷ್ಟೆ ಮಾಡಿದ್ದು, ಅವರು ಇವರಿಗೆ ಶಾಪ ಕೊಟ್ಟದ್ದು, ಒನಕೆ ಹೆತ್ತದ್ದು, ಅದರಿಂದ ಹೊಡೆದಾಡಿಕೊಂಡು ಅವರೆಲ್ಲ ಸತ್ತದ್ದು, ಉಳಿದವರನ್ನು ಕೃಷ್ಣನೆ ಕೊಂದದ್ದು, ಇವೆಲ್ಲ ಆಧಾರ ರಹಿತವಾದವು. ಹಾಗೆಯೇ ಯುದ್ಧದ ಕೊನೆಯಲ್ಲಿ, ಗಾಂಧಾರಿ ಕೃಷ್ಣನನ್ನು 35 ವರ್ಷದಲ್ಲಿ ಯಾದವ ವಂಶ ನಾಶವಾಗಲಿ ಎಂದು ಶಪಿಸಿದಳೆನ್ನುವುದು ಕೂಡ ಅನಂತರದ ಸೇರ್ಪಡೆ ಎನ್ನುತ್ತಾರೆ ಕರ್ವೆ. ಅದೇನೇ ಇದ್ದರೂ, ಕೃಷ್ಣನೂ ಒಂದು ದಿನ ಸಾಯುತ್ತಾನೆ. ಪಾಂಡವರು ಕೃಷ್ಣನ ಮೊಮ್ಮಗ, ಅನಿರುದ್ಧನ ಮಗ ವಜ್ರನನ್ನು ಇಂದ್ರಪ್ರಸ್ಥದ ರಾಜನಾಗಿ ಮಾಡಿ, ಹಸ್ತಿನಾಪುರಕ್ಕೆ ಅರ್ಜುನನ ಮೊಮ್ಮಗ ಪರೀಕ್ಷಿತನನ್ನು ರಾಜನನ್ನಾಗಿ ಮಾಡಿ, ಕೃಷ್ಣನಿಲ್ಲದ ಜಗತ್ತಿನಲ್ಲಿ ತಾವೂ ಬದುಕಲಾರದೆ ಕಾಡಿಗೆ ಹೊರಡುತ್ತಾರೆ. ಹೀಗೆ ಕೃಷ್ಣ ಒಬ್ಬ ಉತ್ತಮ ಮಾನವ, ಒಳ್ಳೆಯ ಸಖ, ಪರೋಪಕಾರಿ. ಎಂಥ ಸಂದರ್ಭದಲ್ಲೂ ಸ್ತಿಮಿತ ಕಳೆದುಕೊಳ್ಳದ, ಶಾಂತ, ನಿರ್ಲಿಪ್ತ ವ್ಯಕ್ತಿ. ಕಾರಣಕ್ಕಾಗಿಯೇ ಅವನಿಗೆ ನಮ್ಮವರು ದೈವತ್ವವನ್ನು ಆರೋಪಿಸಿರುವುದು.

ಕರ್ಣ
ಮಹಾಭಾರತವನ್ನು ಓದಿದವರು ಕರ್ಣನನ್ನು ನೆನೆಯದಿರುವುದು ಸುಲಭವಲ್ಲಕನ್ನಡದ ಕವಿ ಪಂಪ ಕರ್ಣನ ಕುರಿತು ಹೇಳಿರುವ ಮಾತು ಸತ್ಯ; ಭಾರತ ಕರ್ಣರಸಾಯನ. ಕರ್ವೆಯವರು ಕರ್ಣನ ವ್ಯಕ್ತಿತ್ವವನ್ನು ವಿಶ್ಲೇಷಿಸಿರುವ ರೀತಿ ಬಹಳ ವಸ್ತುನಿಷ್ಠವಾಗಿದೆ; ಪ್ರಕ್ಷಿಪ್ತವಾಗಿರಬಹುದಾದ ಅತಿರೇಕಗಳನ್ನು ಕೈಬಿಟ್ಟು, ಅವನು ಜೀವನದಲ್ಲಿ ಎದುರಿಸಿದ ಸಂದಿಗ್ಧ ಸನ್ನಿವೇಶಗಳನ್ನು, ಅನುಭವಿಸಿದ  ತುಮುಲಗಳನ್ನು, ನೋವುಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಕ್ಷತ್ರಿಯನಾಗಿ ಹುಟ್ಟಿ, ಸೂತನಾಗಿ ಬೆಳೆದು, ಹಲವು ಅಪಮಾನಗಳಿಗೆ ಗುರಿಯಾಗಿ, ದುರ್ಯೋಧನನ ಕೃಪೆಯಿಂದ ಒಂದು ರಾಜ್ಯಕ್ಕೆ ದೊರೆಯಾಗಿ ಬದುಕಿದ ಕರ್ಣನ ಜೀವನ ಮನೋವೈಜ್ಞಾನಿಕ ವಿಶ್ಲೇಷಣೆಗೆ ಯೋಗ್ಯ ವಸ್ತು. ಮಹಾಭಾರತದಲ್ಲಿ ಚಿತ್ರಿತವಾಗಿರುವ ಎಲ್ಲಾ ಪ್ರಮುಖ ವ್ಯಕ್ತಿಗಳೂ ಬಹುತೇಕ ಬದುಕಿನಲ್ಲಿ ಸೋತವರೆ. ಆದರೆ ಕರ್ಣನಷ್ಟು ಸೋತವರು ಯಾರೂ ಇಲ್ಲ. ಪ್ರತಿ ಹಂತದಲ್ಲೂ ಕರ್ಣ ಸೋತಿದ್ದಾನೆ. ಹುಟ್ಟಿದಾಗ, ವಿದ್ಯೆ ಕಲಿಯುವಾಗ, ಜೀವನದಲ್ಲಿ, ಕೊನೆಗೆ ಯುದ್ಧದಲ್ಲಿ ಕೂಡ ದಾರುಣವಾಗಿ ಸೋತಿದ್ದಾನೆ. ಇದಕ್ಕೆಲ್ಲಾ ಕಾರಣ ಅವನ ಆಂತರಿಕ ಸಂಘರ್ಷ, ಅವಿವೇಕ ವರ್ತನೆ, ದುಡುಕು ಸ್ವಭಾವ ಮತ್ತು ಸಿಟ್ಟಿನಲ್ಲಿ ಮಾಡಬಾರದ್ದನ್ನು ತಪ್ಪದೆ ಮಾಡುವ ಮಾನಸಿಕ ದೌರ್ಬಲ್ಯವೆಂಬುದು ಲೇಖಕಿಯ ಅಭಿಪ್ರಾಯ.
ಕರ್ಣನ ಸಾಕು ತಂದೆ ಅಧಿರಥ, ತಾಯಿ ರಾಧೆ. ಅವರು ಸೂತರು. ಕರ್ಣ ತಮ್ಮ ಸ್ವಂತ ಪುತ್ರನಲ್ಲ, ಅವನು ತಮಗೆ ಒಂದು ಪೆಟ್ಟಿಗೆಯಲ್ಲಿ, ಕ್ಷತ್ರಿಯೋಚಿತವಾದ ಚಿನ್ನದ ಕವಚ ಕುಂಡಲಗಳೊಡನೆ ದೊರಕಿದ ಮಗುವೆಂಬ ವಿಷಯವನ್ನು ಅವರು ಅವನಿಂದ ಮುಚ್ಚಿಟ್ಟಿರಲಿಲ್ಲ. ಕರ್ಣನ ಅಂದಿನ ಹೆಸರು ವಸುಸೇನ. ಹೆಸರು ಕೂಡ ಕ್ಷತ್ರಿಯರು ಇಟ್ಟುಕೊಳ್ಳುವಂಥದು. ಕರ್ಣನಿಗೆ ತಾನು ಕ್ಷತ್ರಿಯನೇ ಆಗಿರಬೇಕು ಎಂಬ ಭಾವನೆ ಒಳಮನಸ್ಸಿನಲ್ಲಿ ಸದಾ ಇದ್ದು, ಅದನ್ನು ತೋರ್ಪಡಿಸುವ ಬಯಕೆಯೂ ಇದ್ದು, ಅದಕ್ಕೆ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಂತೆ ಕಾಣುತ್ತದೆ. ಕತೆಯಲ್ಲಿ ನಾವು ಕರ್ಣನನ್ನು ಮೊದಲಬಾರಿಗೆ ಕಾಣುವ ಸಂದರ್ಭ ಊಹೆಗೆ ಪುಷ್ಟಿ ಕೊಡುತ್ತದೆ. ಒಂದು ದಿನ ಹಸ್ತಿನಾವತಿಯ ರಾಜಪುತ್ರರು ತಾವು ದ್ರೋಣನಿಂದ ಕಲಿತ ವಿದ್ಯೆಯನ್ನು ಹಿರಿಯರ ಮುಂದೆ ಪ್ರದರ್ಶಿಸಲು ಸಮಾವೇಶ ಒಂದನ್ನು ಏರ್ಪಡಿಸಲಾಗಿತ್ತು. ಅಲ್ಲಿ ಅರ್ಜುನ ತನ್ನ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸಿ ತನಗೆ ಸರಿಸಮಾನರು ಯಾರೂ ಇಲ್ಲವೆಂಬಂತೆ ತೋರಿಸುತ್ತಾನೆ. ಆಗ ಕರ್ಣ ಮಧ್ಯ ಪ್ರವೇಶಿಸಿ, ಅರ್ಜುನ ಮಾಡಿದ್ದೆಲ್ಲವನ್ನೂ ತಾನೂ ಮಾಡಬಲ್ಲನೆಂದು ಪ್ರದರ್ಶಿಸಿ, ಅವನನ್ನು ದ್ವಂದ್ವ ಸ್ಪರ್ಧೆಗೆ ಆಹ್ವಾನಿಸುತ್ತಾನೆ. ಇದು ಮಹಾಭಾರತದಲ್ಲಿ ನಡೆದ ಒಂದು ಅತ್ಯಂತ ಮಹತ್ವಪೂರ್ಣ ಘಟನೆ. ಮುಂದಿನ ಸಂಘರ್ಷಗಳಿಗೆಲ್ಲಾ ಅದೇ ಅಂಕುರಾರ್ಪಣವಾದಂತೆ ತೋರುತ್ತದೆ.
ಕರ್ವೆಯವರ ಪ್ರಕಾರ. ಅದು ಕರ್ಣನ ಅನುಚಿತ ವರ್ತನೆ. ಕರ್ಣ ವಯಸ್ಕ; ಬಾಲಕ ಅರ್ಜುನನನ್ನು ಪೋಟಿಗೆ ಕರೆದದ್ದು ಸಮಂಜಸವಲ್ಲ. ಮಿಗಿಲಾಗಿ ಅಲ್ಲಿ ನಡೆಯುತ್ತಿದ್ದುದು ರಾಜಪುತ್ರರ ವಿದ್ಯೆಯ ಪ್ರದರ್ಶನ. ಕರ್ಣನಿಗೆ ಅಲ್ಲಿ ಪ್ರವೇಶವಿರಲಿಲ್ಲ. ಯಾರೂ ಅವನನ್ನು ಅಲ್ಲಿಗೆ ಆಹ್ವಾನಿಸಿರಲಿಲ್ಲ. ಆದರೂ ಆಸ್ಥಾನ ಗುರು ಕೃಪ ದ್ವಂದ್ವದ ನೀತಿಯನ್ನು ಉಲ್ಲೇಖಿಸಿ, ಪಾಂಡುಪುತ್ರ ಅರ್ಜುನ ನಿನ್ನ ಆಹ್ವಾನವನ್ನು ಸ್ವೀಕರಿಸಿದ್ದಾನೆ. ನೀನು ಕೂಡ ನಿನ್ನ ಹೆಸರು, ಕುಲ, ಗೋತ್ರಗಳನ್ನು ಘೋಷಿಸು ಎಂದು ಆದೇಶಿಸುತ್ತಾನೆ. ಆಗ ಕರ್ಣ ಮೂಕನಂತೆ ನಿಲ್ಲುತ್ತಾನೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಅಧಿರಥ ಕರ್ಣನನ್ನು ಆಲಂಗಿಸಿಕೊಳ್ಳುತ್ತಾನೆ. ಕರ್ಣ ಸೂತನೆಂಬುದು ಬಹಿರಂಗವಾಗುತ್ತದೆ. ಭೀಮ ಅವನನ್ನು ನೀನು ಹಿಡಿಯಬೇಕಾದ್ದು ಚಾಟಿ, ಖಡ್ಗವನ್ನಲ್ಲ ಎಂದು ಹಿಯ್ಯಾಳಿಸುತ್ತಾನೆ. ಇಂಥ ಸಂದರ್ಭಕ್ಕಾಗಿಯೇ ಕಾಯುತ್ತಿದ್ದ ದುರ್ಯೋಧನ ಕರ್ಣನನ್ನು ಅಪ್ಪಿಕೊಂಡು ತನ್ನ ಸ್ನೇಹ ಹಸ್ತವನ್ನು ಚಾಚುತ್ತಾನೆ. ಅಷ್ಟರಲ್ಲಿ ಸಂಜೆಯಾಗಿ, ಜಗಳ, ಪ್ರದರ್ಶನ ಎರಡೂ ಮುಗಿಯುತ್ತವೆ.
ಅನಂತರ ದುರ್ಯೋಧನ ಕರ್ಣನನ್ನು ಅಂಗರಾಜ್ಯದ ದೊರೆಯನ್ನಾಗಿ ಮಾಡುತ್ತಾನೆ. ಅಂದ ಮಾತ್ರಕ್ಕೆ ಅವನು ಕ್ಷತ್ರಿಯನಾಗಲಿಲ್ಲ. ದುರ್ಯೋಧನ ಅವನಿಗೆ ರಾಜ್ಯವನ್ನು ಕೊಟ್ಟನೇ ಹೊರತು ಅವನಿಗೆ ಕುರುಕುಲದ ಕನ್ಯೆಯೊಬ್ಬಳನ್ನು ವಧುವಾಗಿ ನೀಡಲಿಲ್ಲ. ಮುಂದೆ ಒಂದೆಡೆ ಕರ್ಣನೇ ಹೇಳಿರುವಂತೆ, ಅವನೂ ಅವನ ಮಕ್ಕಳೂ ವಿವಾಹವಾದದ್ದು ಸೂತಕನ್ಯೆಯರನ್ನೆ. ಕರ್ಣ ದುರ್ಯೋಧನರ ನಡುವೆ ಸ್ನೇಹವಿತ್ತೇ ಹೊರತು ಸಮಾನತೆ ಇರಲಿಲ್ಲ. ಪಾಂಡವರ ಮೇಲಣ ಅವನ ದ್ವೇಷಕ್ಕೆ ಕಾರಣ ಮೂರು: ಮೇಲೆ ಕಂಡಂತೆ ಭೀಮ ಅವನನ್ನು ಹಿಯ್ಯಾಳಿಸಿದುದು; ಅರ್ಜುನನ ಕೀರ್ತಿಯ ಬಗ್ಗೆ ಅಸೂಯೆ; ಮೂರನೆಯದು ಪಾಂಡವರ ಕಡುವೈರಿ ದುರ್ಯೋಧನನ ಸ್ನೇಹ. ಇದೆಲ್ಲಕ್ಕಿಂತ ದೊಡ್ಡದು, ತಾನು ಹೀನಕುಲದವನೆಂಬ ಕೀಳರಿಮೆ. ಕರ್ಣನನ್ನು ಅವನ ಜೀವನ ಪರ್ಯಂತ ಕಾಡಿದ ಪ್ರಶ್ನೆ ನಾನಾರು? ಎಂಬುದು. ಅದಕ್ಕೆ ಉತ್ತರ ದೊರಕಿದಾಗ ಕಾಲ ಮಿಂಚಿತ್ತು.
ಕರ್ಣ ಶೂರನೇನೋ ಹೌದು; ಅವನಲ್ಲಿ ಸಹಜ ಸಾಮರ್ಥ್ಯವಿತ್ತು; ಆದರೆ ಅದು ಹೊರಹೊಮ್ಮಲು ಸೂಕ್ತ ಪರಿಸರವಿರಲಿಲ್ಲ. ಅವನ ಶಕ್ತಿ ಸಂಸ್ಕರಣಕ್ಕೊಳಗಾಗಿಲ್ಲ; ಪರಿಷ್ಕಾರಗೊಂಡಿರಲಿಲ್ಲ; ಅವನಿಗೆ ಉತ್ತಮ ತರಬೇತಿ ದೊರೆತಿರಲಿಲ್ಲ. ಕರ್ಣ ದುಡುಕುತ್ತಿದ್ದ. ದುಡುಕುವುದು ಕ್ಷತ್ರಿಯರ ಸ್ವಭಾವ. ಆದರೆ ಕ್ಷತ್ರಿಯನಾದವನು ಸಣ್ಣತನದಿಂದ ದೂರವಿರಬೇಕು ಎಂಬುದನ್ನು ಅವನು ಕಲಿತಿರಲಿಲ್ಲ. ಇದರಿಂದಾಗಿ ಅವನು ಹಲವಾರು ಸಾರಿ ತಪ್ಪು ಮಾಡುತ್ತಾನೆ. ದ್ರೌಪದಿಯನ್ನು ಜೂಜಿನಂಗಳಕ್ಕೆ ಎಳೆತಂದು, ಅವಮಾನಿಸಲು ಪ್ರಯತ್ನಿಸಿದಾಗ ದುರ್ಯೋಧನನ ತಮ್ಮ ವಿಕರ್ಣ ಅದನ್ನು ವಿರೋಧಿಸಿ ಅವಳ ಪರವಾಗಿ ವಾದಿಸುತ್ತಾನೆಆಗ ಕರ್ಣ ವಿಕರ್ಣನನ್ನು ಖಂಡಿಸಿ ಆಡಿದ ಮಾತುಗಳು ವೀರೋಚಿತವಾದುವಲ್ಲ. ಅವನು ಹೇಳುತ್ತಾನೆ ಐದು ಗಂಡಸರ ಪತ್ನಿಯಾದವಳು ಒಬ್ಬ ಜಾರೆ. ಆಕೆ ಮತ್ತವಳ ಗಂಡಂದಿರು ಗುಲಾಮರು. ಅವರು ತೊಟ್ಟಿರುವ ಬಟ್ಟೆಯ ಮೇಲೂ ಅವರಿಗೆ ಅಧಿಕಾರವಿಲ್ಲ; ಅದನ್ನು ಬಿಚ್ಚಿ ಹಾಕಿ. ಹೀಗೆ, ಕರ್ಣನಿಂದ ಪ್ರಚೋದಿಸಲ್ಪಟ್ಟ ದುಶ್ಶಾಸನ ದ್ರೌಪದಿಯನ್ನು ವಿವಸ್ತ್ರಗೊಳಿಸಲು ತೊಡಗುತ್ತಾನೆ. ಇದು ಕುಟುಂಬದ ಜಗಳ, ತಾನು ಹೊರಗಿನವನು ಎಂದು ಕರ್ಣ ಸುಮ್ಮನಿರಬಹುದಿತ್ತು. ಒಬ್ಬಳು ಮರ್ಯಾದಸ್ಥ ಹೆಣ್ಣನ್ನು ರೀತಿ ಅವಮಾನಿಸುವುದು ಅಮಾನವೀಯವೆಂದು ಅವನಿಗನಿಸಲಿಲ್ಲ. ಅಂದು ಕರ್ಣ ತಾನು ಉಳಿದೆಲ್ಲರಿಗಿಂತಲೂ ಕೀಳೆಂಬುದನ್ನು ಪ್ರದರ್ಶಿಸಿದ. ಅದರಿಂದಲೇ ಇರಬೇಕು ಅವನನ್ನು ಮಹಾಭಾರತದ ದುಷ್ಟಚತುಷ್ಟಯರಲ್ಲಿ ಒಬ್ಬನಾಗಿ ಪರಿಗಣಿಸಲ್ಪಟ್ಟಿರುವುದು. ಯುದ್ಧರಂಗದಲ್ಲಿ ಅವನ ಸಾರಥಿ ಶಲ್ಯನನ್ನು ಕುರಿತು ಆಡಿದ ಮಾತುಗಳು ಕೂಡ ಅವನ ಘನತೆಗೆ ತಕ್ಕವಲ್ಲ. ಮದ್ರದೇಶದ ಹೆಂಗಸರು ನೀತಿಗೆಟ್ಟವರು, ಕುಡುಕರು, ದನದ ಮಾಂಸ ತಿನ್ನುವವರು ಎಂದು ಹೀನಾಯಿಸಿದ್ದಾನೆ.
ಘೋಷಯಾತ್ರೆಯ ಸಂದರ್ಭದಲ್ಲಿ ಕರ್ಣನ ಶೌರ್ಯ ಪರೀಕ್ಷೆಗೊಳಗಾಗುತ್ತದೆ. ನೆಪದಲ್ಲಿ ಕೌರವರು ತಮ್ಮ ಸಂಪತ್ತಿನ ಪ್ರದರ್ಶನಕ್ಕೆ  ಪಾಂಡವರಿರುವ ವನಕ್ಕೆ ಬರುತ್ತಾರೆ. ಅಲ್ಲಿ ಕೆಲವು ಗಂಧರ್ವರು ಅವರನ್ನೆಲ್ಲ ಥಳಿಸಿ ದುರ್ಯೋಧನನನ್ನು ಸೆರೆ ಹಿಡಿಯುತ್ತಾರೆ. ಕರ್ಣ ಅಲ್ಲಿಂದ ಓಡಿಹೋಗಿ ತಲೆಮರೆಸಿಕೊಳ್ಳುತ್ತಾನೆ. ಪಾಂಡವರೇ ದುರ್ಯೋಧನನನ್ನು ಬಿಡಿಸಬೇಕಾಗುತ್ತದೆ. ಕೌರವರನ್ನು ಬಿಡಿಸಿಕೊಂಡು ಹೋಗಲು ಬರುತ್ತಿದ್ದ ಭೀಷ್ಮನಿಗೆ ಕರ್ಣ ಎದುರಾಗುತ್ತಾನೆ. ಭೀಷ್ಮ ಅವನನ್ನು ತನ್ನ ದೊರೆ ಸೆರೆಯಲ್ಲಿರುವಾಗ ಓಡಿ ಹೋದ ಹೇಡಿ, ಮಿತ್ರದ್ರೋಹಿ ಎಂದು ಹಂಗಿಸುತ್ತಾನೆ. ಇಂಥದೆ ಪ್ರಸಂಗ ವಿರಾಟ ಪರ್ವದಲ್ಲೂ ಸಿಗುತ್ತದೆ. ಅಲ್ಲಿ ಅರ್ಜುನ ಏಕಾಂಗಿಯಾಗಿ (ಒಬ್ಬ ಹೇಡಿ ಸಾರಥಿಯ ಜತೆ) ಕರ್ಣನಾದಿಯಾಗಿ ಕೌರವರೆಲ್ಲರನ್ನು ಸೋಲಿಸಿ, ಅವರ ವಸ್ತ್ರಗಳನ್ನು ಕಳಚಿ ತಂದು ಉತ್ತರೆಗೆ ಗೊಂಬೆಗಳನ್ನು ಅಲಂಕರಿಸಲು ಕೊಟ್ಟನಂತೆ. ದ್ರೌಪದಿಯ ವಿವಾಹ ಸಮಯದಲ್ಲೂ ಇಂಥದೇ ಘಟನೆ ನಡೆದಿದೆ. ಒಬ್ಬ ಬ್ರಾಹ್ಮಣ (ಅರ್ಜುನ ಬ್ರಾಹ್ಮಣ ವೇಷದಲ್ಲಿದ್ದ) ದ್ರೌಪದಿಯನ್ನು ವಿವಾಹವಾಗುವುದನ್ನು ಸಹಿಸದ ಕ್ಷತ್ರಿಯರು ಅವನ ಮೇಲೆ ಯುದ್ಧಕ್ಕೆ ಬರುತ್ತಾರೆ. ಭೀಮಾರ್ಜುನರಿಬ್ಬರೇ ಅವರೆಲ್ಲರನ್ನೂ ಒಡೆದೋಡಿಸುತ್ತಾರೆ. ಆಗ ಕರ್ಣ ಬ್ರಾಹ್ಮಣರೊಡನೆ ಯುದ್ಧ ಮಾಡುವುದಿಲ್ಲವೆಂದು ಹೇಳಿ ಹೊರಹೋಗುತ್ತಾನೆ. ಹಾಗೆ ನೋಡಿದರೆ, ಕರ್ಣ ತಾನು ಅರ್ಜುನನಿಗಿಂತ ಹೆಚ್ಚು ಸಮರ್ಥನೆಂದು ತೋರಿಸಿದ್ದು ಎಲ್ಲೂ ಕಂಡು ಬರುವುದಿಲ್ಲ.
ಎರಡು ಸಂದರ್ಭಗಳಲ್ಲಿ ಮಾತ್ರ ಅವನು ದೊಡ್ಡತನವನ್ನು ತೋರಿಸಿದ್ದಿದೆ. ಒಂದು, ಕೃಷ್ಣ ಆತನನ್ನು ಪಾಂಡವರ ಪಕ್ಷಕ್ಕೆ ಆಹ್ವಾನಿಸಿದಾಗ ಅದನ್ನು ನಿರಾಕರಿಸುವ ಮೂಲಕ; ಎರಡು, ಕುಂತಿ ಅವನ ಜನ್ಮ ವೃತ್ತಾಂತವನ್ನು ತಿಳಿಸಿದಾಗ. ತಾನು ಅರ್ಜುನನನ್ನು ಬಿಟ್ಟು ಉಳಿದ ಪಾಂಡವರನ್ನು ಕೊಲ್ಲುವುದಿಲ್ಲವೆಂದು ಮಾತು ಕೊಡುವುದು ಸ್ವಪ್ರತಿಷ್ಟೆ ಅಥವಾ ತನ್ನ ದೊಡ್ಡತನದ ಪ್ರದರ್ಶನದಂತೆ ಕಾಣುತ್ತದೆ. ಅವನು ದೇವೇಂದ್ರನಿಗೆ ಕವಚ ಮತ್ತು ಕರ್ಣಕುಂಡಲ ಕೊಡುವ ಅವಶ್ಯಕತೆ ಇರಲಿಲ್ಲವೆನ್ನುತ್ತಾರೆ ಕರ್ವೆ. ಅವನಿಗೆ ಆರೋಪಿಸಿರುವ ದಾನಶೂರತ್ವ ಪ್ರಕ್ಷಿಪ್ತವೆಂದು ತೋರುತ್ತದೆ.
ಯುದ್ಧದ ಸಮಯದಲ್ಲಿ ಭೀಷ್ಮ ಕರ್ಣನನ್ನು ಕೇವಲ ಅರ್ಧರಥಿ, ಮಹಾರಥಿಯಲ್ಲ ಎಂದು ಹೇಳುತ್ತಾನೆ. ಭೀಷ್ಮನ ತೀರ್ಮಾನವನ್ನು ಒಪ್ಪಿದ ದ್ರೋಣ ಕರ್ಣನ ಕುರಿತು ಹೀಗೆ ಹೇಳಿದ್ದಾನೆ: ಕರ್ಣ ಮಹಾಗರ್ವಿ, ಅಪಾತ್ರರಿಗೆ ಕರುಣೆ ತೋರಿಸುವವನು, ಯುದ್ಧರಂಗದಿಂದ ಪಲಾಯನ ಮಾಡುವವನು ಮತ್ತು ತಪ್ಪು ತೀರ್ಮಾನಗಳನ್ನು ತೆಗೆದುಕೊಳ್ಳುವವನು, ಹೀಗಾಗಿ ಅವನು ಮಹಾರಥಿಯಲ್ಲ. ಅವನಲ್ಲಿ ಸಾಮರ್ಥ್ಯವಿದ್ದರೂ ಸೂಕ್ತ ತರಬೇತಿ ಅವನಿಗೆ ದೊರಕಿಲ್ಲ. ಹೀಗೆ, ಕರ್ಣನಿಗೆ ತನ್ನ ಮಿತಿಯ ಅರಿವಿರಲಿಲ್ಲ; ಆತ್ಮ ವಿಮರ್ಶೆ ಮಾಡುವುದು ಅವನ ಜಾಯಮಾನದಲ್ಲಿರಲಿಲ್ಲ. ಭೀಷ್ಮನ ಮಾತಿನಿಂದ ಕುಪಿತನಾದ ಕರ್ಣ ಅವನು ಸೇನಾಪತಿಯಾಗಿರುವವರೆಗೆ ತಾನು ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಿ ಹೊರಗುಳಿಯುತ್ತಾನೆ. ಅವನಿಗೆ ತನ್ನ ಸ್ವಾಭಿಮಾನ ಮುಖ್ಯವಾದಷ್ಟು ಅವನ ಮಿತ್ರ ದುರ್ಯೋಧನನನ್ನು ಯುದ್ಧದಲ್ಲಿ ಗೆಲಿಸುವುದು ಮುಖ್ಯವಾಗಲಿಲ್ಲ.
ಯುದ್ಧ ಮಾಡುವಾಗಲೂ ಅವನ ಸ್ವಪ್ರತಿಷ್ಠೆ ಅಡ್ಡಬರುತ್ತದೆ. ಅರ್ಜುನನ ಮೇಲೆ ಬಾಣ ಪ್ರಯೋಗ ಮಾಡುವಾಗ ಶಲ್ಯನ ಮಾತನ್ನು ಕೇಳುವುದಿಲ್ಲ. ಅವನಿಗೆ ತಾನಿಡುವ ಗುರಿಯ ಮೇಲೆ ಅಪಾರವಾದ ವಿಶ್ವಾಸವಿತ್ತು. ಅದು ನಿಜವಿದ್ದರೂ ಇರಬಹುದು. ಅವನು ಬಿಟ್ಟ ಬಾಣ ಅರ್ಜುನನ ಕಿರೀಟವನ್ನು ಬೀಳಿಸುತ್ತದೆ. ಕೃಷ್ಣ ರಥವನ್ನು ತಗ್ಗಿಸಿದನೆನ್ನುವುದು ಪ್ರಕ್ಷಿಪ್ತ. ಹಾಗಾಗಿದ್ದರೆ ಬಾಣ ರಥದ ಮೇಲೆ ಹೋಗಬೇಕಿತ್ತು. ಕರ್ಣನ ಗುರಿ ತಪ್ಪಲು ಕಾರಣಗಳು ಬೇರೆ ಇವೆ. ಆಗ ತಾನೆ ತನ್ನ ಮಗ ವೃಷಸೇನ ಯುದ್ಧದಲ್ಲಿ ಅರ್ಜುನನಿಂದ ಹತನಾದುದನ್ನು ನೋಡಿ ಅವನ ಮನಸ್ಥೈರ್ಯ ಕುಸಿದಿತ್ತು; ಅಥವಾ ಅವನ ರಥದ ಗಾಲಿಗಳು ಕೆಸರಿನಲ್ಲಿ ಕುಸಿದಿದ್ದರಿಂದ ಅವನ ಗುರಿ ತಪ್ಪಿರಬಹುದು. ಕರ್ಣ ರಥದಿಂದಿಳಿದು ಗಾಲಿಗಳನ್ನು ಎತ್ತಲು ಪ್ರಯತ್ನಿಸುತ್ತಾನೆ. ಆಗ ಕೃಷ್ಣ ನಿರಾಯುಧನಾದ ಕರ್ಣನ ಮೇಲೆ ಬಾಣ ಪ್ರಯೋಗ ಮಾಡುವಂತೆ ಹೇಳುತ್ತಾನೆ. ಆಗ ಕರ್ಣ ಅದು ಯುದ್ಧ ಧರ್ಮವಲ್ಲ, ಕೆಳಗಿರುವವನ ಜತೆ ರಥದ ಮೇಲಿರುವವನು ಹೋರಾಡಬಾರದು ಎಂದು ಧರ್ಮಸೂತ್ರವನ್ನು ನೆನಪಿಗೆ ತರುತ್ತಾನೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದಂತೆ ಕೃಷ್ಣ ದ್ರೌಪದಿಯನ್ನು ವಿವಸ್ತ್ರಗೊಳಿಸಲು ಪ್ರಚೋದಿಸುವಾಗ, ಅಭಿಮನ್ಯು ನೆಲದ ಮೇಲೆ ಒಬ್ಬಂಟಿಯಾಗಿ ನಿಂತು ಕಾದುತ್ತಿದ್ದಾಗ ಆರು ಮಂದಿಯೊಡಗೂಡಿ ರಥದ ಮೇಲೆ ನಿಂತು ಅವನನ್ನು ಕೊಲ್ಲುವಾಗ ನಿನ್ನ ಧರ್ಮ ಪ್ರಜ್ಞೆ ಎಲ್ಲಿತ್ತು ಎಂದು ಮೂದಲಿಸುತ್ತಾನೆ. ಯುದ್ಧ ಮಾಡಲು ಹಿಂಜರಿಯುತ್ತಿದ್ದ ಅರ್ಜುನನನ್ನು ಪ್ರಚೋದಿಸಿ, ಇದು ನಿಜವಾದ ಯುದ್ಧ, ಇಲ್ಲಿ ಯಾವುದೇ ನಿಯಮಗಳು ಅಡ್ಡಬರುವುದಿಲ್ಲ ಎಂದು ಹೇಳಿ ಕರ್ಣನನ್ನು ಕೊಲ್ಲಿಸುತ್ತಾನೆ.
ಅರ್ಜುನ ಕರ್ಣನ ಕಡುವೈರಿ; ಜೀವನ ಪೂರ್ತಿ ಅವನನ್ನು ದ್ವೇಷಿಸುತ್ತಿದ್ದ. ಅಂಥವನಿಂದ ಯಾವುದೇ ರಿಯಾಯಿತಿಯನ್ನು ಕೇಳಬಾರದಿತ್ತು. ಇಲ್ಲಿ ಕೂಡ ಕರ್ಣ ತಾನು ಏನು ಮಾಡಬಾರದಿತ್ತೋ ಅಂಥ ತಪ್ಪು ಮಾಡಿ ಸಾಯುತ್ತಾನೆ.
ಮೇಲೆ ಹೇಳಿದ ಪಾತ್ರಗಳನ್ನು ಬಿಟ್ಟರೆ ಉಳಿದವನ್ನು ಲೇಖಕಿ ಅಷ್ಟು ವಿವರವಾಗಿ ವಿಶ್ಲೇಷಿಸಿಲ್ಲ. ಧರ್ಮ, ಭೀಮ, ಅರ್ಜುನ, ವಿದುರ, ಗಾಂಧಾರಿ ಇವರ ಕುರಿತು ಆನುಷಂಗಿಕವಾಗಿ ಅಲ್ಲಲ್ಲಿ ಹೇಳಲಾಗಿದೆ. ವಿದುರ ಮತ್ತು ಗಾಂಧಾರಿಯರಿಗೆ ಒಂದೊಂದು ಅಧ್ಯಾಯ ಮೀಸಲಾಗಿದ್ದರೂ, ವಿಷಯಗಳು ಗಾಢವಾಗಿಲ್ಲ. ಗಾಂಧಾರಿಯನ್ನು ಅವಳ ತವರಿನಿಂದ ಕರೆತಂದಾಗ ಅವಳು ವಿವಾಹವಾಗಲಿರುವವನು ಕುರುಡನೆಂದು ತಿಳಿದಿರುವುದಿಲ್ಲ. ಅದು ತಿಳಿದಾಗ ಅವಳು ಮೂರ್ಛೆ ಹೋಗುತ್ತಾಳೆ. ಅಂದಿನಿಂದ ಅವಳು ಎಂದೂ ಸುಖವಾಗಿದ್ದುದಿಲ್ಲ. ತನ್ನ ಮಕ್ಕಳು ಪಾಂಡು ಪುತ್ರರಷ್ಟು ಶೂರರಲ್ಲದ್ದನ್ನು ಕಂಡು ಅಸೂಯೆ ಪಡುತ್ತಾಳೆ. ಯುದ್ಧದಲ್ಲಿ ತನ್ನ ಮಕ್ಕಳು ಒಬ್ಬೊಬ್ಬರಾಗಿ ಸಾಯುವುದನ್ನು ನೋಡಿ ನೋಡಿ ದುಃಖಿಸಿದ್ದಾಳೆ. ಅವಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡದ್ದು ತನ್ನ ಪಾತಿವ್ರತ್ಯವನ್ನು ಮೆರೆಯುವುದಕ್ಕಲ್ಲ; ಅವಳನ್ನು ಸ್ಥಿತಿಗೆ ತಂದವರನ್ನು ಧಿಕ್ಕರಿಸಲು ಎಂದು ಹೇಳಲಾಗಿದೆ. ಕೊನೆಗೆ ಒಂದು ದಿನ ಧೃತರಾಷ್ಟ್ರನ ಬಲವಂತಕ್ಕೆ ಕಣ್ಣಿನ ಬಟ್ಟೆ ಬಿಚ್ಚುತ್ತಾಳೆ; ಅವಳಿಗೆ ಏನೂ ಕಾಣುವುದಿಲ್ಲ. ವಿದುರ ಹಸ್ತಿನಾವತಿಗೆ ರಾಜನಾಗಲು ಪಾಂಡು ಮತ್ತು ಧೃತರಾಷ್ಟ್ರರಿಗಿಂತ, ಶಾರೀರಿಕವಾಗಿ, ಮಾನಸಿಕವಾಗಿ ಹೆಚ್ಚು ಯೋಗ್ಯನಿದ್ದ. ಧೃತರಾಷ್ಟ್ರ, ಪಾಂಡು ಮತ್ತು ವಿದುರ ಮೂವರ ತಂದೆ ಒಬ್ಬನೆ. ವಿದುರನ ತಾಯಿ ಮಾತ್ರ ರಾಜವಂಶದವಳಲ್ಲ; ಅವಳೊಬ್ಬ ದಾಸಿ. ಆದುದರಿಂದ ಅವನು ಸೂತನಾದ; ದೊರೆಯಾಗಲು ಅನರ್ಹನಾದ. ಕೊನೆಯಲ್ಲಿ, ಕುಂತಿ, ವಿದುರ, ಗಾಂಧಾರಿ ಮತ್ತು ಧೃತರಾಷ್ಟ್ರ, ನಾಲ್ವರು ಕಾಡಿಗೆ ಹೋಗಿ ಕಾಡ್ಗಿಚ್ಚಿಗೆ ಸಿಕ್ಕಿ ಬೆಂದು ಬೂದಿಯಾಗುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಮಹಾಭಾರತದಲ್ಲಿ ಯಾರೂ ಸುಖವಾಗಿ ಬಾಳಿದಂತೆ ಕಂಡುಬರುವುದಿಲ್ಲ.

ಮಹಾಭಾರತದಲ್ಲಿ ಜನಜೀವನ
ಕರ್ವೆ ಸಮಾಜ ಶಾಸ್ತ್ರ ಮತ್ತು ಮಾನವ ಶಾಸ್ತ್ರವನ್ನು ಚೆನ್ನಾಗಿ ಬಲ್ಲವರು. ಅವರಿಗೆ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ದಾರ್ಶನಿಕ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ಆಸಕ್ತಿ ಸಹಜ. ವಿಷಯಗಳನ್ನು ಕುರಿತು ಯುಗಾಂತದ ಕೊನೆಯ ಅಧ್ಯಾಯದಲ್ಲಿ ತಮಗನಿಸಿದ್ದನ್ನು ಹೇಳಿದ್ದಾರೆ. ಅದನ್ನೆಲ್ಲಾ ಇಲ್ಲಿ ಹೇಳುವುದು ಸಾಧ್ಯವಿಲ್ಲ. ಕೆಲವು ವಿಷಯಗಳನ್ನು ಕುರಿತು ಹೇಳಲಾಗುತ್ತದೆ. ತಮಗನಿಸಿದ್ದನ್ನು ಹೇಳಿದ ಬಳಿಕ ತಮ್ಮ ಗ್ರಹಿಕೆ ತಪ್ಪಿರಬಹುದು; ಅದು ತಪ್ಪೆಂದು ತೋರಿಸುವುದಕ್ಕಾದರೂ ಜನರು ಮಹಾಭಾರತವನ್ನು ಓದಲಿ ಎಂದು ಹೇಳಿರುವ ಕರ್ವೆಯವರ ಮಾತು ಅವರ ವೈಜ್ಞಾನಿಕ ಮನೋಭಾವವನ್ನು ತೋರಿಸುತ್ತದೆ.
ಮಹಾಭಾರತವು ಆಸ್ತಿಗಾಗಿ ದಾಯಾದಿಗಳ ನಡುವೆ ನಡೆದ ಕಲಹದ ಕತೆ. ಇಂಥ ಕಲಹಗಳು ಇಂದು ಕೂಡ ಭಾರತದ ಎಲ್ಲ ಕುಟುಂಬಗಳಲ್ಲಿ ನಡೆಯುತ್ತಲೇ ಇವೆ. ಮಹಾಭಾರತವು ನಮ್ಮ ಬದುಕಿಗೆ ಹತ್ತಿರವಾಗಿದೆ ಎಂದು ಹೇಳುವುದಕ್ಕೆ ಇದು ಒಂದು ಕಾರಣ. ಕಲಹ ನಡೆದದ್ದು ಕ್ಷತ್ರಿಯ ಕುಟುಂಬಗಳ ನಡುವೆ. ಇವರ ಜತೆಗೆ ಕೆಲವು ಬ್ರಾಹ್ಮಣ ಕುಟುಂಬಗಳೂ ಸೇರಿಕೊಂಡಿವೆ. ಇನ್ನೆರಡು ವರ್ಗಗಳು  ವೈಶ್ಯ ಮತ್ತು ಶೂದ್ರ  ಇಲ್ಲಿ ಅಷ್ಟಾಗಿ ಸೇರಿಲ್ಲ. ಬಹಳ ಮುಂದೆ, ವರ್ಗಗಳಲ್ಲಿ ಬದಲಾವಣೆಯಾಗಿ, ಬೌದ್ಧ ಮತ್ತು ಜೈನ ಸಾಹಿತ್ಯದಲ್ಲಿ ವೈಶ್ಯರು ಕಥಾನಾಯಕ-ನಾಯಕಿಯರಾಗಿ ಬಂದದ್ದಿದೆ. ಶೂದ್ರರು ಮೇಲಿನ ಮೂರು ವರ್ಗಗಳ ಸೇವಕರಾಗಿಯೋ, ಸೈನಿಕರಾಗಿಯೋ, ದುಡಿಯುತ್ತಿದ್ದರು. (ಶೂದ್ರನಾದ ಚಂದ್ರಗುಪ್ತ ಮೌರ್ಯ ದೊರೆಯಾದದ್ದು ಬಹಳ ಕಾಲದ ನಂತರ ಕ್ರಿಸ್ತಪೂರ್ವ 300ರಲ್ಲಿ. ಕ್ರಿಸ್ತಶಕ 600 ರಲ್ಲಿ ದೊರೆಯಾದ ಹರ್ಷ ವೈಶ್ಯ). ಅಂದು ವರ್ಣಗಳಿದ್ದಂತೆ, ಜಾತಿಯ ಉಲ್ಲೇಖ ಕಂಡುಬರುವುದಿಲ್ಲ. ಕ್ಷತ್ರಿಯರ ಅನೌರಸ ಪುತ್ರರಾದ ಸೂತರನ್ನು ಒಂದು ಜಾತಿಯಾಗಿ ಪರಿಗಣಿಸಬಹುದು.
ಮಹಾಭಾರತದ ಕಾಲದಲ್ಲಿನ ಸ್ತ್ರೀ ಪಾತಿವ್ರತ್ಯದ ಆದರ್ಶ ಆಧುನಿಕ ಕಾಲದಕ್ಕಿಂತ ಭಿನ್ನವಾಗಿತ್ತು. ಅಂದು ಗಂಡನು ಸಂತಾನ ಪಡೆಯಲು ಅಸಮರ್ಥನಾಗಿದ್ದರೆ, ಅವನ ಹೆಂಡತಿ ಬೇರೊಬ್ಬನಿಂದ ಸಂತಾನ ಪಡೆಯುವ ಸಂಪ್ರ್ರದಾಯ (ನಿಯೋಗ ಪದ್ಧತಿ) ಆಚರಣೆಯಲ್ಲಿತ್ತು. ಅಂದು ಸ್ತ್ರೀಯನ್ನು ಒಂದು ಕ್ಷೇತ್ರವೆಂದು ಪರಿಗಣಿಸಲಾಗುತ್ತಿತ್ತು; ಗಂಡನ ಇಷ್ಟದಂತೆ ಯಾರಿಂದಲಾದರೂ ಮಕ್ಕಳನ್ನು ಪಡೆಯುವುದು ಅವಳ ಧರ್ಮ. ಮುಂದೆ ಬಂದ ದತ್ತಕಪದ್ಧತಿ ನಿಯೋಗ ಪದ್ಧತಿಯನ್ನು ಅಳಿಸಿ ಹಾಕಿ, ಸ್ತ್ರೀಯರು ಪರಪುರುಷರೊಡನೆ ಸಂಭೋಗಿಸುವುದು ಅನೈತಿಕವಷ್ಟೇ ಅಲ್ಲ, ಪಾಪಕೃತ್ಯವೆನ್ನುವ ಧೋರಣೆ ಬಲವಾಗಿ ಬೆಳೆದು ಬಂತು. ಆಗಿನ ಕಾಲದಲ್ಲಿ ಶತ್ರುಗಳು ಅಪಹರಿಸಿದ್ದ, ಬಳಸಲ್ಪಟ್ಟಿದ್ದ ಸ್ತ್ರೀಯರನ್ನು ತ್ಯಜಿಸುತ್ತಿರಲಿಲ್ಲ. ಅವಳನ್ನು ಮನೆಗೆ ಸೇರಿಸಿಕೊಳ್ಳುತ್ತಿದ್ದರು. ಇಂದಿನ ಜನರ ಮನೋಭಾವಕ್ಕೆ ಇದು ತೀರ ವಿರೋಧವಾಗಿರುವುದು ಗಮನಾರ್ಹ. ಕುಟುಂಬ ಪಿತೃಪ್ರಧಾನವಾಗಿತ್ತು. ಪಿತೃಭಕ್ತಿ ಮತ್ತು ಭ್ರಾತೃಪ್ರೇಮ ಆದರ್ಶಗುಣಗಳು. ಹೆಂಡತಿ ಹೊರಗಿನಿಂದ ಬಂದವಳು. ವಿವಾಹಾನಂತರ ಅವಳು ತವರನ್ನು ಮರೆತು ತನ್ನ ಪತಿಯಲ್ಲಿ ಭಕ್ತಿ, ಮಕ್ಕಳಲ್ಲಿ ಮಮತೆ, ಕುಟುಂಬದ ಬಗ್ಗೆ ಅಭಿಮಾನ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಬೇಕಿತ್ತು.
ಮಹಾಭಾರತದಂತೆಯೇ ಗ್ರೀಕರಲ್ಲಿ ಇಲಿಯಡ್ ಎಂಬ ಜಗತ್ಪ್ರಸಿದ್ಧವಾದ ಪುರಾಣವಿದೆ. ಅಲ್ಲಿನ ಸ್ತ್ರೀ ಚಿತ್ರಣಕ್ಕೂ ಇಲ್ಲಿನದಕ್ಕೂ ಇರುವ ಹೋಲಿಕೆ-ವ್ಯತ್ಯಾಸಗಳನ್ನು ಕರ್ವೆ ಚರ್ಚಿಸಿದ್ದಾರೆ. ಗ್ರೀಕರ ದೇವಿಯರು ಪುರುಷ ದೇವತೆಗಳಷ್ಟೇ ಪ್ರಾಮುಖ್ಯರು, ಅವರಿಗೆ ಸಮಾನರು. ಮಹಾಭಾರತದಲ್ಲಿ ದೇವಿಯರಿಗೆ ವಿಶೇಷ ಸ್ಥಾನವಿರಲಿಲ್ಲ. ಗ್ರೀಕರ ಪುರಾಣಗಳಲ್ಲಿ ಸ್ತ್ರೀ ಪಾತ್ರಗಳು ವೈಶಿಷ್ಟ್ಯಪೂರ್ಣ ಹಾಗೂ ವೈವಿಧ್ಯಮಯವಾಗಿವೆ. ಭಾರತದಲ್ಲಿ ಹೆಣ್ಣನ್ನು ಹೆಚ್ಚಾಗಿ ನೋಡುವುದು ತಾಯಿಯಾಗಿ ಅಥವಾ ಸತಿಯಾಗಿ. ಗ್ರೀಕ್ ಕತೆಗಳಲ್ಲಿ ಸ್ತ್ರೀ ಮಾತೆಯಾಗಿ, ಪ್ರಣಯಿನಿಯಾಗಿ, ಪತ್ನಿಯಾಗಿ, ಸೋದರಿಯಾಗಿ, ಪುತ್ರಿಯಾಗಿ ಮೆರೆದಿದ್ದಾಳೆ. ಗಂಡನನ್ನು ಕೊಲುವ ಕ್ಲೈಟಮ್ನೆಸ್ಟ್ರ, ತಾಯಿಯ ಕೊಲೆಗೆ ಸಹಾಯ ಮಾಡುವ ಎಲೆಕ್ಟ್ರ, ಮುದಿ ತಂದೆಯ ಸೇವೆಯಲ್ಲಿ ಜೀವವನ್ನು ತೆಯ್ದ ಅಂತಿಗೊನೆಯಂಥವರು ಇಲ್ಲಿ ವಿರಳ. ಸೋದರಿ-ಸೋದರಿಯರ ನಡುವೆ ಗಮನೀಯ ಸಂಬಂಧ, ಸಮಾಲೋಚನೆ ಇಲ್ಲಿ ಕಂಡುಬರುವುದಿಲ್ಲ. ಉದಾಹರಣೆಗೆ ಶಕುನಿ-ಗಾಂಧಾರಿ, ದ್ರೌಪದಿ-ಧೃಷ್ಟದ್ಯುಮ್ನ, ಶಲ್ಯ-ಮಾದ್ರಿ ಇವರ ನಡುವೆ ಹೇಳಿಕೊಳ್ಳುವಂಥ ಸಂವಹನ ನಡೆದಿಲ್ಲ. ಇಲ್ಲಿ ಸೋದರ ಮಾಡುವ ಮುಖ್ಯ ಕೆಲಸವೆಂದರೆ, ಸೋದರಿಯನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿ, ತನ್ಮೂಲಕ ಬಲಿಷ್ಠ ಮಿತ್ರನೊಬ್ಬನನ್ನು ಗಳಿಸುವುದು.
ಮಹಾಭಾರತದಲ್ಲಿ ಧರ್ಮಾಧರ್ಮಗಳ ಚಿಂತನೆ ಹಲವು ಸಂದರ್ಭಗಳಲ್ಲಿ ಬರುತ್ತದೆ. ಬೇರಾವ ಗ್ರಂಥಗಳಲ್ಲೂ ಇಂಥ ಧಾರ್ಮಿಕ ಜಿಜ್ಞಾಸೆ ಕಂಡುಬರುವುದಿಲ್ಲ. ಕುರಾನ್ ಅಥವಾ ಬೈಬಲ್‍ನಲ್ಲಿ ಧರ್ಮವೆಂದರೇನು ಎಂಬುದನ್ನು, ಸಂದೇಹಕ್ಕೆಡೆಯಿಲ್ಲದಂತೆ, ಖಚಿತವಾಗಿ ನಿರೂಪಿಸಲಾಗಿದೆ. ಇಂಥ ನಿರೂಪಣೆ ಮಹಾಭಾರತದಲ್ಲಿ ಎಲ್ಲೂ ನಮಗೆ ಸಿಗುವುದಿಲ್ಲ. ಇಲ್ಲಿರುವುದೆಲ್ಲ ಮೇಲಿಂದ ಮೇಲೆ ಪ್ರಶ್ನೆ, ಉತ್ತರ, ಸಂದೇಹ, ಚರ್ಚೆ  ಯಾವುದು ಸರಿ, ಯಾವುದು ತಪ್ಪು, ಇವುಗಳ ಕುರಿತಾದ ನಿರಂತರ ವಿಮರ್ಶೆ. ಇಲ್ಲಿ ಬರುವ ವಿಷಯಗಳು ಇಂದು ಅಸ್ತಿತ್ವವಾದದಲ್ಲಿ ಚರ್ಚಿತವಾಗುತ್ತಿರುವ ಪ್ರಮುಖ ವಿಚಾರಗಳು. ದೃಷ್ಟಿಯಿಂದ ನೋಡಿದರೆ ಮಹಾಭಾರತವು ಮೂರು ಸಾವಿರ ವರ್ಷಗಳ ಹಿಂದೆಯೇ ಭಾರತೀಯರು ಆಧುನಿಕ ಅಸ್ತಿತ್ವವಾದಕ್ಕೆ ಬರೆದ ಮುನ್ನುಡಿಯಂತಿದೆ. ಇಲ್ಲಿ ಅಭಿವ್ಯಕ್ತಿಗೊಂಡಿರುವ ವಿಷಯಗಳು ಎಂಥವು? ಮಾನವನ ಜೀವನ ಕ್ಷಣಿಕ; ನಿಸ್ಸಾರವಾದುದು; ಇದಕ್ಕೆ ಯಾವ ಅರ್ಥವೂ ಇಲ್ಲ. ಇಲ್ಲಿ ಏಳುವ ಪ್ರಶ್ನೆಗಳು ಸ್ಪಷ್ಟವಾಗಿ ಉತ್ತರಿಸಲಾಗದವು: ನಾನಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೇನೆ, ಇಲ್ಲಿ ಏನು ಮಾಡುತ್ತಿದ್ದೇನೆ? ಇಂಥವು. ಮಾನವ ಜೀವನದಲ್ಲಿನ ತುಮುಲಗಳನ್ನು, ವೈಫಲ್ಯತೆಯನ್ನು ಮಹಾಭಾರತ ಎತ್ತಿಹಿಡಿಯುತ್ತದೆ. ಯುದ್ಧದಲ್ಲಿ ಜಯಗಳಿಸಿದ ನಂತರ ಧರ್ಮನು ಹೇಳುವ ಜಯವು ನನಗೆ ಅಪಜಯವೆನಿಸುತ್ತದೆ ಎನ್ನುವ ಮಾತಿನಲ್ಲಿ, ಅರ್ಜುನ ಹೇಳುವ ಕೊಲ್ಲುವುದರಿಂದ ಸುರಲೋಕದ ಅಧಿಪತ್ಯವೇ ಸಿಗುವಂತಿದ್ದರೂ ನಾನು ಕೊಲ್ಲಲಾರೆ ಎನ್ನುವ ಮಾತುಗಳಲ್ಲಿ ಭಾರತೀಯ ದಾರ್ಶನಿಕ ನಿಲವುಗಳು, ಜೀವನ ಮೌಲ್ಯಗಳು ಅಭಿವ್ಯಕ್ತಗೊಂಡಿವೆ; ಭಾರತೀಯತೆ ಅವುಗಳಲ್ಲಿ ಪ್ರತಿಬಿಂಬಿತವಾಗಿದೆ. ಕಾರಣಗಳಿಂದಲೇ ಮಹಾಭಾರತ ನಮಗೆಲ್ಲರಿಗೂ ಪ್ರಿಯವಾಗಿ ಉಳಿದು ಬಂದಿರುವುದು. ಇಂಥದೊಂದು ಕಾವ್ಯಕ್ಕೆ ವಾರಸುದಾರರಾಗಿರುವುದು ನಮ್ಮ ಪುಣ್ಯ.

ಯುಗಾಂತ (ಸಂಕ್ಷಿಪ್ತ)
ಈಗ ನಾನು ಓದುತ್ತಿರುವ ಕೃತಿ ಹಿಂದೆ ಪುಣೆ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ (ದಿವಂಗತ) ಶ್ರೀಮತಿ ಇರಾವತಿ ಕರ್ವೆಯವರು ಬರೆದಿರುವ ಯುಗಾಂತ ಕೃತಿಯ ಕನ್ನಡ ಅನುವಾದ (ಅಭಿನವ, 2013). ಇದು ಮಹಾಭಾರತವನ್ನು ಕುರಿತದ್ದು. ನಮ್ಮಲ್ಲಿ ವಸ್ತುವನ್ನು ಕುರಿತಾದ ಪುಸ್ತಕಗಳು ಹಲವಾರಿವೆ, ಇದರದೇನು ವಿಶೇಷವೆನ್ನಬಹುದು. ವಿಶೇಷ ಬಹಳವಿದೆ. ಮಹಾಭಾರತವನ್ನು ಕುರಿತು ಬರೆದ ಹೆಚ್ಚಿನವರು ಅಲ್ಲಿನ ಪಾತ್ರಗಳಿಗೆ ದೈವತ್ವವನ್ನು ಆರೋಪಿಸಿ, ಐದನೆಯ ವೇದವೆಂದು ಕರೆದು, ನಮಗೆ ಅದನ್ನು ಪೂಜನೀಯವಾಗಿ ಮಾಡಿಟ್ಟಿದ್ದಾರೆ. ಯುಗಾಂತ ಅಂಥ ಗ್ರಂಥವಲ್ಲ. ಕರ್ವೆಯವರು ಅಲ್ಲಿನ ಪಾತ್ರಗಳನ್ನು ನಮ್ಮ ನಡುವೆ ಜೀವಿಸಿರಬಹುದಾದ ಮಾನವರೆಂದು ಪರಿಗಣಿಸಿ, ಪ್ರತಿಪಾತ್ರದ ಒಳಹೊಕ್ಕು ಅವರ ಗುಣಾವಗುಣಗಳನ್ನು ವಿಶ್ಲೇಷಣೆ ಮಾಡಿರುವುದು ಇಲ್ಲಿನ ವಿಶೇಷ. ಕಾಲದ ಸಮಾಜದಲ್ಲಿದ್ದ ವರ್ಣ, ಜಾತಿ ಮತ್ತು ಕುಟುಂಬ ವ್ಯವಸ್ಥೆ, ಅಲ್ಲಿನ ನ್ಯಾಯನೀತಿ, ಧರ್ಮಾಧರ್ಮಗಳ ನೈಜ ಚಿತ್ರಣವನ್ನು ಲೇಖಕರು ನಮ್ಮ ಮುಂದಿಟ್ಟಿದ್ದಾರೆಭಾರತವನ್ನು ಇತಿಹಾಸವೆಂದು ಪರಿಗಣಿಸುವವರಿದ್ದಾರೆ. ಅದು ಸರಿ. ಇತಿಹಾಸವೆಂದರೆ ಅದು ಹಾಗಿತ್ತು ಎಂದು ಅರ್ಥ. ಅಂದ ಮೇಲೆ ಅದು ಹಿಂದೂ ಪರಂಪರೆಯ ಇತಿಹಾಸ ತಾನೆ? ಅಲ್ಲಿದ್ದ ಸಾಮಾಜಿಕ ವ್ಯವಸ್ಥೆ, ಜೀವನ ವಿಧಾನ, ಇಂದಿಗೂ ಪ್ರಸ್ತುತ. ಅಲ್ಲಿ ವಿವರಿಸಿರುವ ಪರಾಕ್ರಮ, ಸ್ವಪ್ರತಿಷ್ಠೆ, ಸ್ವಾಮಿ ನಿಷ್ಠೆ, ಪ್ರೇಮ, ಹಾಗೆ ಹೇಡಿತನ, ದ್ವೇಷ, ಅಸೂಯೆ, ಅಹಂಕಾರ, ಮೋಸ, ವಂಚನೆ, ಕ್ರೌರ್ಯ, ಇವುಗಳ ಅಭಿವ್ಯಕ್ತಿ ಇಂದು ನಮ್ಮಲ್ಲಿ ಮುಂದುವರಿದಿದೆ. ಆದುದರಿಂದ ಮಹಾಭಾರತವನ್ನು  ಭಾರತದ ಸಂಸ್ಕೃತಿಯ ವಿಶ್ವಕೋಶ ಎಂದಿರುವುದು ಸರಿ. ಆಧುನಿಕ ಭಾರತೀಯರ ವ್ಯಕ್ತಿತ್ವ ಹಾಗೂ ಜೀವನಕ್ರಮವನ್ನು ಮಹಾಭಾರತ ಹೇಗೆ ನಿರ್ದೇಶಿಸಿದೆ ಎಂಬುದನ್ನು ತಿಳಿಯಲು ಯುಗಾಂತವನ್ನು ಓದಬೇಕು.

ಕರ್ವೆಯವರು ಅಲ್ಲಿನ ಮಹಾನ್ ವ್ಯಕ್ತಿಗಳ ಒಳಿತು-ಕೆಡುಕುಗಳನ್ನು ವಿಶ್ಲೇಷಿಸಿರುವ ರೀತಿ ಅನನ್ಯ. ಭೀಷ್ಮ ಮಹಾಭಾರತದ ಮಹೋನ್ನತ ಪಾತ್ರ; ಅತ್ಯಂತ ವಿವೇಕಿ, ಕೌರವ-ಪಾಂಡವರ ಪಿತಾಮಹ, ಅಂಥವನು ದ್ರೌಪದಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆಯಲಿಲ್ಲವೇಕೆ? ಅವನು ಕೌರವರ ಸೇನಾಪತಿಯಾಗಿ, ಪಾಂಡವರ ವಿರುದ್ಧ ಯುದ್ಧಕ್ಕೆ ಹೊರಟದ್ದು ಸರಿಯೆ? ಅವನಿಗೇನಾದರೂ ಸ್ವಾರ್ಥವಿತ್ತೆ? ವಿಧವೆ ಕುಂತಿ ತವರಿಗೆ ಹೋಗದೆ ಕೌರವರ ಆಶ್ರಯದಲ್ಲೇಕೆ ಉಳಿದಳು? ಶಕುನಿ ಗಾಂಧಾರಿಯ ಸಹಾಯಕ್ಕೆ ನಿಂತಂತೆ ಕುಂತಿಯ ಬಂಧುಗಳೇಕೆ ಅವಳ ನೆರವಿಗೆ ಬರಲಿಲ್ಲ? ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡದರ ನಿಜವಾದ ಉದ್ದೇಶವೇನು? ಕೃಷ್ಣನ ನಿಜವಾದ ವ್ಯಕ್ತಿತ್ವವೆಂಥದು? ಅವನ ಉದ್ದೇಶವೇನಿತ್ತು? ಹಿಂಸಾತ್ಮಕವಾದ ಯುದ್ಧಕ್ಕೆ ಹಿಂಜರಿದ ಅರ್ಜುನನಿಗೆ ನಾಗ ಜನಾಂಗವನ್ನು ನಾಶ ಮಾಡುವಾಗ (ಖಾಂಡವವನ ದಹನ) ಅಹಿಂಸೆಯ ಪ್ರಶ್ನೆ ಯಾಕೆ ಬರಲಿಲ್ಲ? ನಕುಲ ಸಹದೇವರ ಸೋದರಮಾವ ಶಲ್ಯನೇಕೆ ಕೌರವರ ಪಕ್ಷ ವಹಿಸಿದ? ಆಗ ನಿಯೋಗ ಪದ್ಧತಿ ಯಾಕೆ ಇತ್ತು? ದತ್ತು ಪದ್ಧತಿ ಯಾಕಿರಲಿಲ್ಲ? ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಕೃತಿಯಲ್ಲಿ ತಾರ್ಕಿಕವಾಗಿ ನಡೆದಿದೆ. ಎಲ್ಲರೂ ಓದಬೇಕಾದ ಕೃತಿ ಇದು

No comments:

Post a Comment