Saturday, December 6, 2014

ಲೂಸಿಫರ್ ಎಫೆಕ್ಟ್ (Lucifer Effect)



ಎಂ. ಬಸವಣ್ಣ*

ಮನುಷ್ಯರ ವರ್ತನೆ ವಿಚಿತ್ರ, ವೈವಿಧ್ಯಮಯ. ಹಾಗಾಗಲು ಕಾರಣಗಳು ಹಲವಾರು. ಸಮಾಜವಿಜ್ಞಾನಿಗಳು, ಮನೋವಿಜ್ಞಾನಿಗಳು, ವೈವಿಧ್ಯಮಯ ವರ್ತನೆಗಳಿಗೆ ಕಾರಣಗಳನ್ನು ಕಂಡುಹಿಡಿಯಲು ಎಂದಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಕೆಲವರು ದೈಹಿಕ ಕಾರಣಗಳನ್ನು ಎತ್ತಿ ತೋರಿಸಿದರೆ, ಬೇರೆಯವರು  ಸಾಮಾಜಿಕ ಕಾರಣಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ. ಇನ್ನು ಕೆಲವರು ವೈಯಕ್ತಿಕ (ಮಾನಸಿಕ) ಕಾರಣಗಳನ್ನು ಉದಹರಿಸುತ್ತಾರೆ. ವಾಸ್ತವವಾಗಿ ನೋಡಿದರೆ ವರ್ತನೆಯನ್ನು ನಿರ್ಧರಿಸುವಲ್ಲಿ ಇವೆಲ್ಲದರ ಪಾತ್ರವೂ ಇದೆ. ಸಾಮಾಜಿಕ ಪರಿಸರ, ಸಂದರ್ಭ, ಸನ್ನಿವೇಶ, ಸುತ್ತಣ ಜನರ ಒತ್ತಾಯ, ವರ್ತನೆಯಲ್ಲಿ ಹೇಗೆ ಮಾರ್ಪಾಡು ತರುತ್ತದೆ ಎನ್ನುವುದು ಲೇಖನದ ವಿಷಯ. ಇಲ್ಲಿ ಮನುಷ್ಯರು ಕೆಟ್ಟದಾಗಿ ವರ್ತಿಸಲು ಸಾಮಾಜಿಕ ಪರಿಸರ ಎಷ್ಟರಮಟ್ಟಿಗೆ ಕಾರಣ ಎಂಬುದನ್ನು ಹೇಳಲು ಪ್ರಯತ್ನಿಸಿದೆ. ಮೂಲತಃ ಎಲ್ಲರೂ ಒಳ್ಳೆಯವರೆ, ಆದರೆ ಸಂದರ್ಭ, ಸನ್ನಿವೇಶಗಳು ಜನರನ್ನು ಕೆಟ್ಟವರನ್ನಾಗಿ ಮಾಡುತ್ತದೆ ಎನ್ನುವುದು ಹಳೆಯ ಮಾತು. ಅದನ್ನು ಪ್ರಯೋಗದ ಮೂಲಕ ತೋರಿಸಲು ಜಿ಼ಂಬಾರ್ಡೊ ಎಂಬ ಸಮಾಜಮನೋವಿಜ್ಞಾನಿ ಯತ್ನಿಸಿದ್ದಾರೆ. ಅದರ ವಿವರಣೆ ಇಲ್ಲಿದೆ. ಅವರು ನಡೆಸಿದ ಪ್ರಯೋಗಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು, ಚಿತ್ರಗಳನ್ನು, ವಿಡಿಯೊಗಳನ್ನು ನೀವು ಇಂಟರ್ನೆಟ್ ನಲ್ಲಿ ನೋಡಬಹುದು. ಮನುಷ್ಯ ಹಾಳಾಗಲು ಪರಿಸರದ ಒತ್ತಡ ಒಂದೇ ಕಾರಣವಲ್ಲ. ಬೇರೆಯವು ಇರುತ್ತವೆ. ಏನೇ ಒತ್ತಡವಿದ್ದರೂ ಕೆಲವರು ಬದಲಾಗುವುದಿಲ್ಲ ಎಂಬುದನ್ನು ನಾವು ಮರೆಯಬಾರದು. ಹಾಗೆಂದ ಮಾತ್ರಕ್ಕೆ ಪರಿಸರದ ಪ್ರಭಾವವನ್ನು ಕಡೆಗಣಿಸುವಂತಿಲ್ಲ. ವಿಷಯವನ್ನು ಮನದಟ್ಟು ಮಾಡುವಲ್ಲಿ ಜಿ಼ಂಬಾರ್ಡೊ ಮಾಡಿದ ಪ್ರಯೋಗ ಮನೋವಿಜ್ಞಾನದಲ್ಲಿ ಒಂದು ಮೈಲಿಗಲ್ಲಾಗಿದೆ; ಅಷ್ಟೆ ವಿವಾದಾತ್ಮಕವಾಗಿದೆ ಕೂಡ

ಏನದು, ಲೂಸಿಫರ್ ಎಫೆಕ್ಟ್?
ಇದು 2007ರಲ್ಲಿ ಪ್ರಕಟವಾದ ಒಂದು ಗ್ರಂಥದ ಹೆಸರು; ಬರೆದವರು ಸ್ತ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಮನೋವಿಜ್ಞಾನದ ಪ್ರಾಧ್ಯಾಪಕ ಫಿಲಿಪ್ ಜಿ಼ಂಬಾರ್ಡೊ (Philip Zimbardo). ಪುಸ್ತಕದ ವಿಷಯ ಕುತೂಹಲಕಾರಿ; ಒಬ್ಬ ಸಜ್ಜನ ದುರ್ಜನನಾಗುವುದು ಹೇಗೆ ಎನ್ನುವುದು. ನಮ್ಮ ನಡುವಿನ ಒಬ್ಬ ಒಳ್ಳೆಯ ವ್ಯಕ್ತಿ ಅದೇಕೆ ಕೆಟ್ಟವನಾಗುತ್ತಾನೆ? ಸುಳ್ಳು ಹೇಳುವ, ಮೋಸ ಮಾಡುವ, ಇತರರಿಗೆ ಅನ್ಯಾಯವೆಸಗುವ ಮಟ್ಟಕ್ಕೆ ಏಕೆ ಇಳಿಯುತ್ತಾನೆ? ಒಬ್ಬ ಮನುಷ್ಯ ಆತಂಕಕಾರಿಯಾಗಿ, ಕೊಲೆಗಾರನಾಗಲು ಕಾರಣವೇನು? ಒಬ್ಬ ದೇವತಾಪುರುಷ ಪೈಶಾಚಿಕ ಕೃತ್ಯಗಳಲ್ಲಿ ತೊಡಗುವಂತಾಗುವುದು ಹೇಗೆ? ಪುಸ್ತಕ ಬರೆಯಲು ಪ್ರೇರಣೆ ಜಿ಼ಂಬಾರ್ಡೊ ಕೈಗೊಂಡ ಒಂದು ಪ್ರಸಿದ್ಧ ಹಾಗೂ ಅಷ್ಟೇ ವಿವಾದಾತ್ಮಕ ಮನೋವೈಜ್ಞಾನಿಕ ಪ್ರಯೋಗ. ಅದರ ಹೆಸರು ಸ್ಟ್ಯಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್ (Stanford prison experiment); ಅಮೆರಿಕ ಸಂಯುಕ್ತ ಸಂಸ್ಥಾನಗಳ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದಲ್ಲಿ ನಡೆದದ್ದು. ಪ್ರಯೋಗವನ್ನು ವಿವರಿಸುವ ಮೊದಲು ಪುಸ್ತಕಕ್ಕೆ ಹೆಸರು ಕೊಡಲು ಕಾರಣವೇನು ಎಂಬುದನ್ನು ನೋಡೋಣ.

ಯಾರಿದು ಲೂಸಿಫರ್?
ಲೂಸಿಫರ್ ಎಂಬುದು ಹೀಬ್ರೂ ಮತ್ತು ಕ್ರೈಸ್ತ ಧರ್ಮಶಾಸ್ತ್ರಗಳಲ್ಲಿ ಬರುವ ಮುಗ್ಧ ದೇವದೂತನೊಬ್ಬನ ಹೆಸರು. ಮೊದಲಿಗೆ ದೇವರಿಗೆ ಅತ್ಯಂತ ಪ್ರಿಯನಾಗಿದ್ದ ಲೂಸಿಫರ್ ದೇವರನ್ನು ಧಿಕ್ಕರಿಸಿ, ಅವನ ಆಜ್ಞೆಯನ್ನು ಮೀರಿ ನಡೆಯುತ್ತಾನೆ. ಅದರಿಂದ ಕೋಪಗೊಂಡ ದೇವರು ಅವನಿಗೆ ನರಕವಾಸವನ್ನು ವಿಧಿಸುತ್ತಾನೆ. ನರಕದಲ್ಲಿ ಲೂಸಿಫರ್ ಸಟಾನ್ (Satan) ಅಥವಾ ಸೈತಾನ್ ಆಗಿ ಪರಿವರ್ತನೆಗೊಳ್ಳುತ್ತಾನೆ. ಸಟಾನ್ ಎಂದರೆ ದೆವ್ವ, ಭೂತ, ಪಿಶಾಚಿ, ರಾಕ್ಷಸ, ಸೈತಾನ (ಇಲ್ಲಿ ಇದೇ ಪದವನ್ನು ಬಳಸಿಕೊಳ್ಳಲಾಗಿದೆ) ಎಂಬೆಲ್ಲಾ ಅರ್ಥವಿದೆ. ಒಟ್ಟಾರೆ ಸೈತಾನ್ ಕೆಡುಕಿನ ಮೂರ್ತರೂಪ; ಕೆಟ್ಟದೆಲ್ಲದರ ಕೇಂದ್ರ; ಪ್ರಲೋಭನೆಗೆ ಇನ್ನೊಂದು ಹೆಸರು. ಸೈತಾನ್ ಜನರನ್ನು ದಾರಿತಪ್ಪಿಸುವ ದೂರ್ತ. ಸೈತಾನನ ಕತೆ ಬೈಬಲ್ ನಲ್ಲಿ ಹತ್ತಾರು ಕಡೆ ಬಂದಿದೆ. ಇಂಥ ಕತೆಗಳು ವಿಶ್ವದ ಎಲ್ಲ ಧರ್ಮಗ್ರಂಥಗಳಲ್ಲೂ ಪ್ರಚಲಿತವಿವೆ. ಮಿಲ್ಟನ್ ನ ಪ್ಯಾರಡೈಸ್ ಲಾಸ್ಟ್ (Paradise Lost), ಡಾಂಟೆಯ ಇನ್ಫರ್ನೊ (Inferno) ಮುಂತಾದ ಗ್ರಂಥಗಳಲ್ಲಿ ಇಂಥ ಕಥನಗಳಿವೆ. ಇಸ್ಲಾಮ್ ಧರ್ಮದ ಶೈತಾನನ (ಅಥವಾ ಸೈತಾನ್) ಕತೆಯೂ ಇಂಥದೆ. ಭಾರತದ ಹಲವಾರು ಪುರಾಣಗಳಲ್ಲಿ ಒಳ್ಳೆಯ ದೇವಸಂಭೂತರು ಶಾಪಗ್ರಸ್ತರಾಗಿ, ಕೆಟ್ಟವರಾಗಿ ಹುಟ್ಟುವ ಕತೆಗಳಿವೆ. ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಗ್ರಸ್ತರಾಗಿ ರಾವಣ-ಕುಂಭಕರ್ಣರಾದ ಹಾಗೆ, ಹಿರಣ್ಯಾಕ್ಷ-ಹಿರಣ್ಯಕಶಿಪುಗಳಾದ ಹಾಗೆ.
ಮೂಲತಃ ಲೂಸಿಫರ್ ಬೆಳಕನ್ನು ನೀಡುವ ಪ್ರಾತಃಕಾಲದ ನಕ್ಷತ್ರ (morning star); ಪ್ರಭಾತ ಪುತ್ರ (son of dawn) ಎನ್ನುವ ಉಲ್ಲೇಖವೂ ಇದೆ. ಒಟ್ಟಿನಲ್ಲಿ ಲೂಸಿಫರ್ ಉತ್ತಮ, ಸಭ್ಯ, ಸುಂದರ ದೇವತೆ; ಬುದ್ಧಿವಂತ ಹಾಗೂ ವಿವೇಕಿ. ಮಿಗಿಲಾಗಿ ದೇವರಿಗೆ ಪ್ರಿಯನಾದವನು. ಅಂಥವನಿಗೂ ಒಂದು ದಿನ ಮನಸ್ಸಿನಲ್ಲಿ ದುರಾಸೆ ಹುಟ್ಟುತ್ತದೆ. ದೇವರ ಸಿಂಹಾಸನದ ಮೇಲೆ ಕಣ್ಣು ಬೀಳುತ್ತದೆ. ತಾನೇಕೆ ಅದರ ಮೇಲೆ ಕೂರಬಾರದು; ದೇವರಿಗಿಂತ ತಾನೇನು ಕಡಮೆ, ಎನ್ನುವ ಭಾವನೆ ಮುಗುಳೊಡೆಯುತ್ತದೆ. ಇದನ್ನು ಕಂಡುಕೊಂಡ ದೇವರು ಲೂಸಿಫರ್ ನನ್ನು ನರಕಕ್ಕೆ ದೂಡುತ್ತಾನೆ. ಅಲ್ಲಿ ಅವನು ಸೈತಾನ್ ಆಗಿ ಪರಿವರ್ತನೆಗೊಳ್ಳುತ್ತಾನೆ. ಆಗ ಅವನಂದುಕೊಂಡದ್ದು ಹೀಗೆ: ಸ್ವರ್ಗದಲ್ಲಿ ಆಳಾಗಿರುವುದಕ್ಕಿಂತ ನರಕದಲ್ಲಿ ಅರಸಾಗಿರುವುದು ಮೇಲು. ಅಲ್ಲಲ್ಲಿ ಕೊಂಚ ವ್ಯತ್ಯಾಸಗಳಿದ್ದರೂ ಲೂಸಿಫರ್‍ನ ಸ್ಥೂಲವಾದ ಕತೆ ಇದು.
ಬೈಬಲ್ ಪ್ರಕಾರ, ಲೂಸಿಫರ್ ಮಾಡಿದ ಪಾಪಕೃತ್ಯ ಏಸುವನ್ನು ದೇವಪುತ್ರನೆಂದು ಪರಿಗಣಿಸದೇ ಹೋದದ್ದು. ಇಸ್ಲಾಮ್ ಗ್ರಂಥಗಳಲ್ಲಿ ಹೇಳಿರುವ ಪ್ರಕಾರ, ದೇವದೂತನೊಬ್ಬ (ಇಬ್ಲೀಸ್) ಆದಮನನ್ನು ಗೌರವಿಸದಿದ್ದುದರಿಂದ ಶೈತಾನ್ ಆಗಿ ಪರಿವರ್ತಿತನಾಗುತ್ತಾನೆ. ಲೂಸಿಫರ್ ಸೈತಾನ್ ಆಗಿ ಪರಿವರ್ತನೆಗೊಂಡ ಮೇಲೆ ಅವನು ಮಾಡಿದ ಅನಾಚಾರಗಳು ಅಪಾರ. ಬೈಬಲ್‍ನಲ್ಲಿ ಹೇಳಿರುವಂತೆ, ದೇವರ ಮಕ್ಕಳಾದ ಆಡಮ್ ಮತ್ತು ಈವ್‍ರಿಗೆ ನಿಷಿದ್ಧ ಫಲವನ್ನು (forbidden fruit) ಸೇವಿಸುವಂತೆ ಪ್ರೇರಿಸಿ, ಅವರನ್ನು ಪಾಪಕೂಪದಲ್ಲಿ ಬೀಳುವಂತೆ ಮಾಡುತ್ತಾನೆ. ಅಂದಿನಿಂದ ವಿಶ್ವದ ಜನರ ಮನಸ್ಸಿನಲ್ಲಿ ಲೋಭ, ಮೋಹ, ಅಹಂಕಾರ, ಅಸೂಯೆ, ಲಜ್ಜಾಹೀನತೆಗಳನ್ನು ತುಂಬಿ, ಅವರು ಕಳುವುದು, ಕೊಲ್ಲುವುದು, ಸುಳ್ಳು ಹೇಳುವುದು, ಮೋಸ ಮಾಡುವುದೇ ಮುಂತಾದ ದುಷ್ಕೃತ್ಯಗಳಲ್ಲಿ ತೊಡಗುವಂತೆ ಪ್ರೇರಿಸುವುದು ಸೈತಾನನ ಪ್ರಿಯವಾದ ವೃತ್ತಿಗಳು. ಏಸುವಿಗೆ ದ್ರೋಹ ಬಗೆದು, ಅವನನ್ನು ಶಿಲುಬೆಗೆ ಏರುವಂತೆ ಮಾಡಿದ ಜುದಾಸ್, ಸೈತಾನನ ಅವತಾರವೆಂಬುದು ಕ್ರೈಸ್ತರ ನಂಬಿಕೆ. ಜುದಾಸ್ ಏಸುವಿನ 12 ಮಂದಿ ಪ್ರಿಯ ಶಿಷ್ಯರಲ್ಲೊಬ್ಬ. ಅವನು ಏಸುವನ್ನು ಚುಂಬಿಸುವುದರ ಮೂಲಕ, ಪಿಲೇಟನ ಕಡೆಯವರು ಏಸುವನ್ನು ಗುರುತಿಸಿ ಬಂದಿಸುವುದಕ್ಕೆ ಸಹಾಯ ಮಾಡುತ್ತಾನೆ. ಇಂದು ಕೂಡ ವಿಶ್ವಾಸಘಾತುಕ ಕ್ರಿಯೆಗೆ ಜುದಾಸ್ ಚುಂಬನ (kiss of Judas) ಎಂದೇ ಕರೆಯುತ್ತಾರೆ. ಇಷ್ಟೆಲ್ಲಾ ಜುದಾಸ್ ಮಾಡಿದ್ದು ಕೇವಲ 30 ಬೆಳ್ಳಿ ನಾಣ್ಯಗಳ ಆಸೆಗಾಗಿ ಎಂದು ಹೇಳಲಾಗಿದೆ. ಕ್ರೈಸ್ತರ ಪ್ರಕಾರ, ಮರ್ತ್ಯರೆಲ್ಲಾ ಪಾಪ ಮಾಡಿ ಸ್ವರ್ಗದಿಂದ ಕೆಳಗೆ ಬಿದ್ದ (ಪತನಗೊಂಡ) ದೇವದೂತರೆ (fallen angels)!
ಜಿ಼ಂಬಾರ್ಡೊ ಸಂಶೋಧನೆಯ ಹಿನ್ನೆಲೆ
ಇವೆಲ್ಲಾ ಪುರಾಣದ ಕತೆಗಳಿಗೆ ಸಂಬಂಧಿಸಿದ ವಿಷಯ. ಜಿ಼ಂಬಾರ್ಡೊ ಆಸಕ್ತಿ ಪುರಾಣದಲ್ಲಲ್ಲ. ಲೂಸಿಫರ್ ಅವನಿಗೆ ಒಂದು ರೂಪಕ, ಸಂಕೇತ ಮಾತ್ರ. ಅವನ ಆಸಕ್ತಿ ಇದ್ದುದು ಆಧುನಿಕ ಸಮಾಜದಲ್ಲಿ ಸಾಮಾನ್ಯ ಮಾನವರೇಕೆ ಕಟುಕರಾಗುತ್ತಾರೆ ಎಂಬುದು; ನಮ್ಮ ನಡುವಿರುವ ಒಳ್ಳೆಯವರು ಕೆಟ್ಟವರಾಗುವುದು ಹೇಗೆ ಎಂಬಲ್ಲಿ. ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಮಾನವ ದಾನವನಾದ ಪ್ರಸಂಗಗಳು ಹಲವಾರು ದೊರಕುತ್ತವೆ. ಎರಡನೇ ವಿಶ್ವಸಮರಕ್ಕೆ ಮೊದಲು ಜರ್ಮನಿಯ ನಾಜಿ಼ಗಳು ಲಕ್ಷಲಕ್ಷಾಂತರ ಅಮಾಯಕ ಯೆಹೂದಿಗಳನ್ನು ಗುಂಡಿಟ್ಟು ಕೊಂದರು; ಕಾನ್ಸೆಂಟ್ರೇಶನ್ ಕ್ಯಾಂಪ್ ಗಳಲ್ಲಿ (Concentration camps) ಅನ್ನ ನೀರಿಲ್ಲದೆ ಸಾಯುವಂತೆ ಮಾಡಿದರು. ಹಾಲೊಕಾಸ್ಟ್ (Holocaust) ಎಂದು ಕರೆಯಲಾಗಿರುವ ನರಮೇಧವನ್ನು ಮಾಡಿದವರು ಮನುಷ್ಯರೇ. ಒಂದು ಅಂದಾಜಿನ ಪ್ರಕಾರ, ಅಲ್ಲಿ 30 ಲಕ್ಷ ಗಂಡಸರು, 20 ಲಕ್ಷ ಹೆಂಗಸರು ಮತ್ತು 10 ಲಕ್ಷ ಮಕ್ಕಳನ್ನು ಕೊಲ್ಲಲಾಯಿತು. ಅವರೆಲ್ಲಾ ಯೆಹೂದಿಗಳು. ಅವರೊಡನೆ ರೊಮಾನಿ (Romani) ಗಳೆಂದು ಕರೆಯಲಾಗಿರುವ ಅಲೆಮಾರಿಗಳನ್ನು (ಜಿಪ್ಸಿ) ಸೇರಿಸಿದರೆ ಸಂಖ್ಯೆ ಇನ್ನು ದೊಡ್ಡದಾಗುತ್ತದೆ. ಇಂಥ ಕ್ರೂರ ಕಾರ್ಯದಲ್ಲಿ ತೊಡಗಲು ಅವರಿಗೆ ಮನಸ್ಸಾದರು ಹೇಗೆ ಬಂತು? 1968 ಮಾರ್ಚ್ 16 ರಂದು, ವಿಯಟ್ನಾಂನ ಮೈ ಲಾಯ್ (My Lai) ಎಂಬ ಹಳ್ಳಿಯಲ್ಲಿ ನಡೆದ ಘೋರ ನರಹತ್ಯೆಯನ್ನು ನೆನಪಿಸಿಕೊಳ್ಳಿ. ಅಂದು ಅಮೇರಿಕದ ಸೈನಿಕರು ನಿರಾಯುಧರಾದ ಸಭ್ಯ ನಾಗರಿಕರನ್ನು ಶತ್ರುಗಳೆಂದು (ವಿಯಟ್‍ಕಾಂಗ್) ತಪ್ಪಾಗಿ ತಿಳಿದು ಅಮಾನುಷವಾಗಿ ಕೊಂದರು. ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಸಾಮೂಹಿಕವಾಗಿ ಕೊಲೆ ಮಾಡಿದರು. ಹೆಂಗಸರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಇದು ಯುದ್ಧದ ಹೆಸರಿನಲ್ಲಿ ಮಾಡಿದ ಸಾಮೂಹಿಕ ಕೊಲೆ; ಘನಘೋರ ಪಾಪಕೃತ್ಯ. ಇದನ್ನು ತಡೆಯಲು ಮುಂದಾದ ಒಂದಿಬ್ಬರು ಅಮೇರಿಕನ್ ಸೈನಿಕರನ್ನು ದೇಶದ್ರೋಹಿಗಳೆಂದು ಹೀಗಳೆಯಲಾಯ್ತು (30 ವರ್ಷಗಳ ನಂತರ ವಿಚಾರಣೆ ನಡೆದು, ಅವರನ್ನು ಸಾರ್ವಜನಿಕವಾಗಿ ಗೌರವಿಸಲಾಯ್ತು! ಅದು ಬೇರೆ ವಿಚಾರ). ಮನುಷ್ಯರು ಹೀಗೆ ಮೃಗಗಳಂತೆ ವರ್ತಿಸಲು ಕಾರಣವೇನು? 9-11 ಎಂದು ಪ್ರಸಿದ್ಧಿಯಾಗಿರುವ ನ್ಯೂಯಾರ್ಕ್‍ನ ವಿಶ್ವ ವ್ಯಾಪಾರ ಕೇದ್ರದ ಎರಡು ಬಹುಮಹಡಿ ಕಟ್ಟಡಗಳ ಮೇಲೆ ವಿಮಾನಗಳನ್ನು ನುಗ್ಗಿಸಿ ಹಲವು ಸಾವಿರ ಜನರನ್ನು ಹಾಡುಹಗಲೇ ಕೊಂದದ್ದನ್ನು ಮರೆಯುವುದಾದರೂ ಹೇಗೆ? ಕೆಲವು ವರ್ಷಗಳ ಹಿಂದೆ (2003-2004) ಇರಾಕ್‍ನ ಅಬು ಘ್ರಾಯಬ್ (Abu Ghraib) ಎಂಬ ಊರಿನ ಜೈಲಿನಲ್ಲಿದ್ದ ಖೈದಿಗಳ ಮೇಲೆ ಅಮೇರಿಕದ ಸೈನಿಕರು ನಡೆಸಿದ ಪಾಪಕೃತ್ಯಗಳ ಕುರಿತು ಬರೆಯಲು ಹೇಸಿಗೆಯಾಗುತ್ತದೆ. ಬೇಕಾದವರು ಅಲ್ಲಿ ನಡೆದ ಕೃತ್ಯಗಳ ಚಿತ್ರಗಳನ್ನು ಇಂದು ಕೂಡ ಇಂಟರ್ನೆಟ್‍ನಲ್ಲಿ ನೋಡಬಹುದು. ಅಲ್ಲಿ ನೆಡೆದದ್ದೆಲ್ಲ ಅಸಭ್ಯ, ಅನಾಗರಿಕ, ಅಮಾನುಷ ಕೃತ್ಯಗಳು. ನಡೆದ ಕೃತ್ಯಗಳು ಬೆಳಕಿಗೆ ಬಂದಾಗ, ಅಮೇರಿಕದ ಪ್ರಜೆಗಳೇ ಬೆಚ್ಚಿಬಿದ್ದು ಹುಯಿಲೆಬ್ಬಿಸಿದರು. ಸರ್ಕಾರ ವಿಚಾರಣೆ ನಡೆಸಬೇಕಾಯ್ತು. ಅಲ್ಲಿ ನಡೆದದ್ದು ಮಾನವಹಕ್ಕುಗಳ ಉಲ್ಲಂಘನೆ. ಅದಕ್ಕಾಗಿ ಇಡೀ ವಿಶ್ವ ಅಮೇರಿಕಾ ಸರ್ಕಾರವನ್ನು ಖಂಡಿಸಿತು. ಇಂಥ ಕೃತ್ಯ ನಡೆಸಿದವರು ಪ್ರಜಾಪ್ರಭುತ್ವವಿರುವ ದೇಶವೊಂದರ ನಾಗರಿಕ ಜನ. ಅವರೇಕೆ ಹಾಗೆ ಮಾಡಿದರು? ನಮ್ಮಲ್ಲೇ ನಡೆದ ಜಲಿಯನ್ ವಾಲ ಭಾಗ್‍ನಲ್ಲಿ ಆಂಗ್ಲ ಸೈನಿಕರು ನಡೆಸಿದ ನರಮೇಧವನ್ನು  ಅರಿಯದವರಾರು? ಸ್ವತಂತ್ರಾನಂತರ ಭಾರತ ಇಬ್ಭಾಗವಾದಾಗ ನಡೆದ ಹಿಂಸಾಚಾರಗಳೇನು ಸಾಮಾನ್ಯವೇ?
ಹಾಲೊಕಾಸ್ಟ್‍ನಲ್ಲಿ ತೊಡಗಿದ್ದ ಜನರನ್ನು ನ್ಯೂರೆಂಬರ್ಗ್ ಎಂಬಲ್ಲಿ ವಿಚಾರಣೆಗೊಳಪಡಿಸಲಾಯ್ತು, ಅಡಾಲ್ಫ್ ಐಕ್ಮನ್ ಮುಂತಾದವರಿಗೆ ಶಿಕ್ಷೆ ವಿಧಿಸಲಾಯ್ತು. ಅಮೇರಿಕನ್ ಸೈನಿಕರು ಮೈ ಲಾಯ್ ಮತ್ತು ಅಬು ಘ್ರಾಯಬ್‍ನಲ್ಲಿ ಮಾಡಿದ ಕೃತ್ಯಗಳನ್ನು ಮುಚ್ಚಿಡಲು ಅಂದಂದಿನ ಸರ್ಕಾರಗಳು ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಜನಾಭಿಪ್ರಾಯಕ್ಕೆ ತಲೆ ಬಾಗಿಸಿ ವಿಚಾರಣೆ ಮಾಡಲೇಬೇಕಾಯ್ತು. ವಿಚಾರಣೆ ಮಾಡಿದಾಗ ಕೃತ್ಯವೆಸಗಿದವರಾರು ತಾವು ಮಾಡಿದ್ದು ತಪ್ಪೆಂದು ಒಪ್ಪಿಕೊಳ್ಳಲಿಲ್ಲ. ತಾವು ತಮ್ಮ ಕರ್ತವ್ಯವನ್ನಷ್ಟೇ ಮಾಡಿದೆವೆಂದು ವಾದಿಸಿದರು; ಮೇಲಿನವರ ಆದೇಶವನ್ನು ಪಾಲಿಸಿದೆವೆಂದು ಹೇಳಿದರು. ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಸರ್ಕಾರ ಅವರಲ್ಲಿ ಕೆಲವರನ್ನು ಕೆಲಸದಿಂದ ತೆಗೆದುಹಾಕಿತು; ಮತ್ತೆ ಕೆಲವರನ್ನು ಜೈಲಿಗೆ ಕಳಿಸಲಾಯ್ತು.
ಇವು ಬೆಳಕಿಗೆ ಬಂದ ಕೃತ್ಯಗಳು. ರಣರಂಗಗಳಲ್ಲಿ, ಸೆರೆಮನೆಗಳಲ್ಲಿ, ಪೋಲೀಸ್ ಸ್ಟೇಷನ್‍ಗಳಲ್ಲಿ, ತೆರೆಯ ಮರೆಯಲ್ಲಿ ಇನ್ನೆಷ್ಟು ಅಮಾನವೀಯ ಕೃತ್ಯಗಳು ನಡೆದಿವೆಯೋ ಹೇಳಬರುವುದಿಲ್ಲ. ಇಂಥ ಕೃತ್ಯಗಳು ಹಿಂದೆ ನಡೆದಿವೆ, ಈಗಲೂ ನಡೆಯುತ್ತಿವೆ, ಮುಂದೆಯೂ ನಡೆಯುತ್ತವೆ. ಇದನ್ನು ನಡೆಸುವವರು ನಾಗರಿಕರೆ. ಅವರಿಗೂ ಎಲ್ಲರಂತೆ ಮನೆಯಲ್ಲಿ ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಹೆಂಡತಿ-ಮಕ್ಕಳಿದ್ದಾರೆ; ಬಂದು ಬಳಗದವರಿದ್ದಾರೆ. ಸಮಾಜದಲ್ಲಿ ಅವರು ಮರ್ಯಾದೆಯಾಗಿ ಬದುಕುತ್ತಿರುವ ಜನ. ಅಂಥವರು ಯಾಕೆ ಕ್ರೂರಿಗಳಾಗುತ್ತಾರೆ; ಮಾನವೀಯತೆಯ ಅಧಃಪತನವೇಕೆ ಜರಗುತ್ತದೆ? ಇದು ಮನೋವಿಜ್ಞಾನಿಗಳನ್ನು ಕಾಡುವ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಹಲವು ಪ್ರಯತ್ನಗಳು ಸಮಾಜ ಮನೋವಿಜ್ಞಾನದಲ್ಲಿ (Social psychology) ನಡೆದಿವೆ. ಅವುಗಳಲ್ಲೊಂದು ಜಿ಼ಂಬಾರ್ಡೊ ನಡೆಸಿದ ಸ್ಟಾನ್ ಫೋರ್ಡ್ ಪ್ರಿಸನ್ ಪ್ರಯೋಗ
ಕೆಲವು ವರ್ಷಗಳ ಹಿಂದೆ, ಕನ್ನಡದಲ್ಲಿ ಕೆ.ವಿ. ಅಯ್ಯರ್ ಬರೆದ ರೂಪದರ್ಶಿ ಎಂಬ ಕಾದಂಬರಿಯ ವಸ್ತು ಕೂಡ ಇಂಥದೆ - ಒಬ್ಬ ಸದ್ಗೃಹಸ್ತ ದುಷ್ಟನಾದುದು ಹೇಗೆ ಎಂಬುದು. ಇದು ಬಹಳ ಒಳ್ಳೆಯ ಕಾದಂಬರಿ. ಇಂದಿನವರು ಓದಬೇಕಾದ್ದು. ಗ್ರೀಕ್ ಕಲಾವಿದ ಲಿಯೊನಾರ್ಡೊ ವಿನ್ಸಿ ಏಸುವಿನ ಜೀವನವನ್ನು ಚಿತ್ರಗಳ ಮೂಲಕ ಬಿಡಿಸಲು, ಬಾಲ ಏಸುವಿನ ಚಿತ್ರಕ್ಕೆ ರೂಪದರ್ಶಿಯಾಗಿ ಒಬ್ಬ ಸುಂದರ ಹುಡುಗನನ್ನು ಹುಡುಕಿ ತರುತ್ತಾನೆ. ಚಿತ್ರ ಮುಗಿದ ಮೇಲೆ ಅವನನ್ನು ಮನೆಗೆ ಕಳಿಸಲಾಗುತ್ತದೆ. ಚಿತ್ರರಚನೆ ಬಹಳ ವರ್ಷಗಳ ಕಾಲ ನಡೆಯುತ್ತದೆ. ಒಂದು ಹಂತದಲ್ಲಿ ಅದು ಸ್ಥಗಿತಗೊಳುತ್ತದೆ. ಮತ್ತೆ ಆರಂಭಗೊಂಡು, ವಿನ್ಸಿಗೆ, ಏಸುವಿಗೆ ಮೋಸ ಮಾಡಿ ಅವನನ್ನು ಶಿಲುಬೆಗೆ ಏರಿಸಲು ಕಾರಣನಾದ ವ್ಯಕ್ತಿಯ (ಜುದಾಸ್) ಚಿತ್ರ ಬಿಡಿಸಲು ರೂಪದರ್ಶಿಯೊಬ್ಬ ಬೇಕಾಗುತ್ತದೆ. ಅದಕ್ಕಾಗಿ ದುಷ್ಟ ವ್ಯಕ್ತಿಯೊಬ್ಬನನ್ನು ಹುಡುಕಿ ಕರೆತರಲಾಗುತ್ತದೆ. ಹೀಗೆ ಬಂದ ವ್ಯಕ್ತಿ ಅಲ್ಲಿ ಬಿಡಿಸಿದ್ದ ಚಿತ್ರಗಳನ್ನು ನೋಡಿ ಅತೀವ ದುಃಖದಿಂದ ಮೂರ್ಛೆ ಹೋಗುತ್ತಾನೆ. ಕಾರಣವಿಷ್ಟೆ. ಬಾಲ ಏಸುವಿಗೆ ರೂಪದರ್ಶಿಯಾಗಿದ್ದವನು ತಾನೆ ಎಂಬುದು ಅವನಿಗೆ ಅರಿವಾಗುತ್ತದೆ. ಕಾದಂಬರಿ ಹೇಳುವುದು ಅದೇ ವಿಷಯ: ಒಬ್ಬ ಒಳ್ಳೆಯ ವ್ಯಕ್ತಿ ಕೆಟ್ಟವನಾದದ್ದು ಹೇಗೆ? ಅದಕ್ಕೆ ಕಾರಣಗಳೇನು? ಎಂಬುದು

ಸ್ಟಾನ್ ಫೋರ್ಡ್ ಜೈಲಿನ ಪ್ರಯೋಗ
ಎಲ್ಲೆಡೆ ನಡೆಯುವಂತೆ ಅಮೇರಿಕದ ಸೆರೆಮನೆಗಳಲ್ಲೂ ಗಾರ್ಡ್‍ಗಳು ಮತ್ತು ಖೈದಿಗಳ ನಡುವೆ ಘರ್ಷಣೆ ಆಗಾಗ್ಗೆ ನಡೆಯುತ್ತಿತ್ತು. ಇದಕ್ಕೆ ಕಾರಣವೇನು ಎಂಬುದನ್ನು ಕಂಡುಕೊಳ್ಳುವುದು ಸರ್ಕಾರಕ್ಕೂ ಬೇಕಿತ್ತು; ಮನೋವಿಜ್ಞಾನಿಗಳಿಗೂ ಬೇಕಿತ್ತು. ಇದನ್ನು ಕುರಿತು ಸಂಶೋಧನೆ ನಡೆಸುವ ಸಲಹೆಯನ್ನು ಜಿ಼ಂಬಾರ್ಡೊ ಮುಂದಿಟ್ಟಾಗ, ನೌಕಾಪಡೆಯ ಸಂಶೋಧನಾ ಶಾಖೆ ಆರ್ಥಿಕ ಸಹಾಯ ಮಾಡಲು ಮುಂದೆ ಬಂತು. ಹೀಗೆ, 1971ರಲ್ಲಿ ಆರಂಭವಾಯ್ತು ಒಂದು ಅಣಕು ಜೈಲಿನ ಪ್ರಯೋಗ (Mock-jail experiment).
ಪ್ರಯೋಗದಲ್ಲಿ ಭಾಗವಹಿಸಲು ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಆಹ್ವಾನಿಸಿದಾಗ, 75 ಮಂದಿ ಮುಂದೆ ಬಂದರು. ಅವರಲ್ಲಿ 24 ಮಂದಿಯನ್ನು ಆರಿಸಿಕೊಳ್ಳಲಾಯ್ತು. ಅವರೆಲ್ಲರೂ 15 ದಿನಗಳು ಪ್ರಯೋಗದಲ್ಲಿ ಭಾಗವಹಿಸಬೇಕೆಂದೂ, ಪ್ರತಿಯೊಬ್ಬರಿಗೆ ದಿನಕ್ಕೆ 15 ಡಾಲರ್ ಸಂಭಾವನೆ ಕೊಡುವುದಾಗಿ ತಿಳಿಸಲಾಯಿತು (ಅಂದು ಅದು ದೊಡ್ಡ ಮೊತ್ತವೆ. ಇಂದಿನ 85-90 ಡಾಲರಿಗೆ ಸಮ). ಭಾಗವಹಿಸಲು ಬಂದ ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದು, ಅವರಾರಿಗೂ ಕ್ರಿಮಿನಲ್ ಹಿನ್ನೆಲೆ ಇಲ್ಲದುದನ್ನು ದೃಢಪಡಿಸಿಕೊಳ್ಳಲಾಯಿತು. ಆರಿಸಿದ ವಿದ್ಯಾರ್ಥಿಗಳಲ್ಲಿ 12 ಮಂದಿಯನ್ನು ಖೈದಿಗಳಾಗಿಯೂ ಇನ್ನುಳಿದ 12 ಮಂದಿಯನ್ನು ಗಾರ್ಡ್‍ಗಳಾಗಿಯೂ ಅಭಿನಯಿಸಬೇಕೆಂದು ಹೇಳಲಾಯಿತು.
ಜಿ಼ಂಬಾರ್ಡೊ ಜೈಲ್ ಸೂಪರಿಂಟೆಂಡೆಂಟ್ ಪಾತ್ರ ವಹಿಸಿಕೊಂಡರು. ಅವರ ವಿದ್ಯಾರ್ಥಿಯೊಬ್ಬನನ್ನು ಜೈಲ್ ವಾರ್ಡನ್ ಮಾಡಲಾಯ್ತು. ಪ್ರಯೋಗಕ್ಕೆ ಮುಂಚೆ, ಗಾರ್ಡ್ ಪಾತ್ರಧಾರಿಗಳಿಗೆ ಅವರೇನು ಮಾಡಬೇಕು, ಹೇಗೆ ವರ್ತಿಸಬೇಕೆಂಬುದನ್ನು ಕುರಿತು ಜಿ಼ಂಬಾರ್ಡೊ ತರಬೇತಿ ಕೊಟ್ಟರು. ಖೈದಿಗಳನ್ನು ಸಂಪೂರ್ಣವಾಗಿ ಹದ್ದುಬಸ್ತಿನಲ್ಲಿಡಬೇಕು; ಅವರ ಮನಸ್ಸಿನಲ್ಲಿ ಭಯ ಹುಟ್ಟುವಂತೆ ಮಾಡಬೇಕು; ಅವರಿಗೆ ಬೇಸರ ಬರಿಸಬೇಕು; ಅವರ ಮನಸ್ಸಿನಲ್ಲಿ ಗೊಂದಲ ಹುಟ್ಟಬೇಕು; ಅವರ ವೈಯಕ್ತಿಕತೆ ನಾಶವಾಗಬೇಕು; ಅವರಲ್ಲಿ ಶಕ್ತಿಹೀನತೆಯ ಭಾವನೆಯನ್ನುಂಟು ಮಾಡಬೇಕು; ಅಧಿಕಾರವಿರುವುದು ಗಾರ್ಡ್‍ಗಳಲ್ಲಿ, ಖೈದಿಗಳಲ್ಲಲ್ಲ, ಎಂಬುದು ಖೈದಿಗಳಿಗೆ ಚೆನ್ನಾಗಿ ಮನದಟ್ಟಾಗುವಂತೆ ಮಾಡಬೇಕು; ತಾವು ನಿರ್ವೀರ್ಯರು ಎಂಬುದನ್ನು ಖೈದಿಗಳು ಅರಿಯುವಂತೆ ಮಾಡಬೇಕು; ಆದರೆ, ಖೈದಿಗಳಿಗೆ ಯಾವುದೇ ವಿಧವಾದ ಶಾರೀರಿಕ ನೋವನ್ನು ಉಂಟುಮಾಡಬಾರದು ಎಂದು ಗಾರ್ಡ್‍ಗಳೆಲ್ಲರಿಗೂ ತಿಳಿಸಲಾಯಿತು. ಗಾರ್ಡ್‍ಗಳಿಗೆ ಖಾಕಿ ಸಮವಸ್ತ್ರ, ದೊಣ್ಣೆ (baton), ಕಪ್ಪುಕನ್ನಡಕ, ಮತ್ತು ವಿಸ಼ಲ್ (whistle) ಗಳನ್ನು ಒದಗಿಸಲಾಯಿತು. ಒಟ್ಟಿನಲ್ಲಿ ಅವರನ್ನು ನಿಜವಾಗಿಯೂ ಜೈಲ್ ಗಾರ್ಡ್‍ಗಳಾಗಿ ವರ್ತಿಸುವಂತೆ ತಯಾರು ಮಾಡಲಾಯಿತು.
ಖೈದಿಗಳಾಗಿ ಅಭಿನಯಿಸಲು ನಿಯೋಜಿಸಲಾಗಿದ್ದವರನ್ನು, ಒಂದು ದಿನ ಯಾವ ಮುನ್ಸೂಚನೆಯು ಇಲ್ಲದೆ, ಅವರವರ ಮನೆಯಲ್ಲಿ ಅರೆಸ್ಟ್ ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿ, ಪೊಲೀಸ್ ಸ್ಟೇಷನ್‍ಗೆ ಕರೆತಂದು, ಅವರ ಮೇಲೆ ದೋಷಾರೋಪಣೆಯ ಪಟ್ಟಿ  ತಯಾರುಮಾಡಿ (charge-sheet), ಅವರ ಫೋಟೊ ಹಿಡಿದು, ಬೆರಳಚ್ಚು ತೆಗೆದು, ನಿಜವಾದ ಅಪರಾಧಿಗಳಿಗೆ ಏನೇನು ಮಾಡುತ್ತಾರೊ ಅದೆಲ್ಲವನ್ನೂ ಮಾಡಲಾಯಿತು. ಕಾರ್ಯಕ್ಕೆ ನಗರದ (Palo Alto) ಪೊಲೀಸರನ್ನೇ ಬಳಸಿಕೊಳ್ಳಲಾಗಿತ್ತು. ಅನಂತರ ಖೈದಿಗಳನ್ನು ವಿಶ್ವವಿದ್ಯಾಲಯದ ಸೈಕಾಲಜಿ ಬಿಲ್ಡಿಂಗಿನ ನೆಲಮಾಳಿಗೆಯಲ್ಲಿ (basement) ನಿರ್ಮಿಸಲಾಗಿದ್ದ ಅಣಕು ಸೆರೆಮನೆಗೆ ಕರೆತರಲಾಯಿತು. ಅಲ್ಲಿಗೆ ಬಂದಾಗ, ಅವರೆಲ್ಲರನ್ನು ಬಟ್ಟೆ ಬಿಚ್ಚಿಸಿ, ಕ್ರಿಮಿನಾಶಕಗಳಿಂದ ಶುದ್ಧಿಗೊಳಿಸಿ, ಅವರಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡು, ಒಂದು ಕಾಲಿಗೆ ಬೇಡಿ, ತಲೆಗೊಂದು ನೈಲಾನ್ ಟೋಪಿ ಹಾಕಿ, ಖೈದಿಗಳು ಧರಿಸುವ (ಒಳಉಡುಪುಗಳಿಲ್ಲದ) ಬಟ್ಟೆಗಳನ್ನು ತೊಡಿಸಲಾಯಿತು. ಒಂದೊಂದು ಚಿಕ್ಕ ಕೋಣೆ (cell) ಯಲ್ಲಿ ಮೂವರು ಖೈದಿಗಳು ಇರುವಂತೆ ಏರ್ಪಾಡು ಮಾಡಲಾಯಿತು. ಮಲಗಲು ಹಾಸಿಗೆಯನ್ನು ಒದಗಿಸಲಾಗಿತ್ತು. ಅವರೆಲ್ಲರಿಗೂ, ಖೈದಿಗಳಿಗೆ ಕೊಡುವಂತೆ ಒಂದೊಂದು ನಂಬರ್ ಕೊಟ್ಟು, ಅದನ್ನು ಅವರ ಬಟ್ಟೆಗೆ ಅಂಟಿಸಿ, ಅವರನ್ನು ನಂಬರ್‍ನಿಂದಲೇ ಗುರುತಿಸಲಾಗುವುದೆಂದು ತಿಳಿಸಲಾಯಿತು. ಖೈದಿಗಳ ಸೆಲ್‍ಗಳಿಂದ ಕೊಂಚ ದೂರದಲ್ಲಿ ಗಾರ್ಡ್ ಮತ್ತು ವಾರ್ಡನ್‍ಗಳಿಗೆ  ದೊಡ್ಡದಾದ ಕೋಣೆಗಳನ್ನು ಕೊಡಲಾಗಿತ್ತು. 9 ಮಂದಿ ಖೈದಿಗಳಿಗೆ 3 ಗಾರ್ಡ್‍ಗಳನ್ನು ನೇಮಿಸಲಾಯ್ತು. ಗಾರ್ಡ್‍ಗಳು ದಿನಕ್ಕೆ 8 ಗಂಟೆ ಸರಧಿಯ ಮೇಲೆ ಕೆಲಸಮಾಡಬೇಕೆಂದು ಹೇಳಲಾಗಿತ್ತು. ಖೈದಿಗಳು ದಿನರಾತ್ರಿ ತಮ್ಮ ಕೋಣೆಯಲ್ಲೇ ಇರಬೇಕೆಂದು ಆದೇಶಿಸಲಾಗಿತ್ತು.
ಅಣುಕು ಸೆರೆಮನೆಯ ಪ್ರಯೋಗದ ಮೊದಲ ದಿನ ಹೇಳಿಕೊಳ್ಳುವಂಥದು ಏನೂ ನಡೆಯಲಿಲ್ಲ. ಎರಡನೇ ದಿನ ಗಾರ್ಡ್‍ಗಳು ಖೈದಿಗಳಿಗೆ ಕಿರುಕುಳ ಕೊಡಲು ಮೊದಲು ಮಾಡಿದರು. ಒಂದಲ್ಲ ಒಂದು ರೀತಿಯಲ್ಲಿ ಖೈದಿಗಳನ್ನು ಪೀಡಿಸುವುದಕ್ಕೆ ಆರಂಭವಾಯಿತು. ಅಷ್ಟೇ ಅಲ್ಲ, ಹಾಗೆ ಮಾಡುವುದನ್ನು ಅವರು ಎಂಜಾಯ್ ಮಾಡುತ್ತಿರುವಂತೆ ಕಂಡುಬಂತು. ಬರುಬರುತ್ತ ಖೈದಿಗಳನ್ನು ಹೀನಾಯವಾಗಿ ನಡೆಸಿಕೊಂಡು ಅವಮಾನ ಮಾಡಿದರು, ಹಿಯಾಳಿಸಿದರು, ತಿರಸ್ಕರಿಸಿದರು. ಖೈದಿಗಳೆಲ್ಲಾ ತಮಗೆ ಸಂಪೂರ್ಣವಾಗಿ ವಿಧೇಯರಾಗಿರಬೇಕು, ತಾವು ಹೇಳಿದಂತೆ ಕೇಳಬೇಕೆಂದು ಆರ್ಡರ್ ಮಾಡಿದರು. ಅವರನ್ನು ಅವರ ನಂಬರ್ ಮೂಲಕ ಕರೆದು ಅವರ ಮನಸ್ಸಿನಲ್ಲಿ ಗೊಂದಲವನ್ನುಂಟು ಮಾಡಿ, ಅವರ ವ್ಯಕ್ತಿತ್ವನಾಶಕ್ಕೆ ಪ್ರಯತ್ನ ಮಾಡಲಾಯಿತು. ಖೈದಿಗಳು ತಮ್ಮ ಎಲ್ಲ ದೈನಂದಿನ ಅವಶ್ಯಕತೆಗಳಿಗೆ ಗಾರ್ಡ್‍ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಯಿತು.
ಮೊದಲ ದಿನ, ಖೈದಿಗಳು ಗಾರ್ಡ್‍ಗಳ ವರ್ತನೆಯನ್ನು ಕೇವಲ ನಟನೆಯೆಂದು ಭಾವಿಸಿ ನಕ್ಕರು. ಆದರೆ, ಬಹು ಬೇಗ ಅವರಿಗೆ ಗಾರ್ಡ್‍ಗಳು ತಮ್ಮ ಪಾತ್ರವನ್ನು ಸೀರಿಯಸ್ ಆಗಿ ನಿರ್ವಹಿಸುತ್ತಿರುವುದರ ಅರಿವಾಯ್ತು. ಗಾರ್ಡ್‍ಗಳು ಖೈದಿಗಳಿಂದ ಸಂಪೂರ್ಣ ವಿಧೇಯತೆಯನ್ನು ನಿರೀಕ್ಷಿಸಿದರು. ಅದಕ್ಕಾಗಿ ಅಧಿಕಾರ ಚಲಾಯಿಸಿದರು. ಖೈದಿಗಳಿಗೆ ಇದು ಅತಿ ಎನಿಸಿತು. ಹೀಗಾಗಿ, ಎರಡನೇ ದಿನ ಕೆಲವು ಖೈದಿಗಳು ಗಾರ್ಡ್‍ಗಳ ನಡವಳಿಕೆಯನ್ನು ವಿರೋಧಿಸಿದರು; ತಿರುಗಿಬಿದ್ದರು; ತಮ್ಮ ಸಮವಸ್ತ್ರಗಳನ್ನು ಹರಿದು ಬಿಸಾಡಿ, ತಮ್ಮ ನಂಬರ್ ಪ್ಲೇಟ್ ಮತ್ತು ಟೊಪ್ಪಿಯನ್ನು ಕಿತ್ತೆಸೆದು, ತಮ್ಮ ಸೆಲ್‍ಗಳ ಬಾಗಿಲನ್ನು ಮುಚ್ಚಿ, ಪ್ರತಿಭಟಿಸಿದರು. ಹೀಗೆ ಬಂಡಾಯವೆದ್ದ ಖೈದಿಗಳನ್ನು ನಿಯಂತ್ರಿಸುವುದು ಕೊಂಚ ಕಷ್ಟವಾಯ್ತು. ಆಗ ರಿಸರ್ವ್‍ನಲ್ಲಿದ್ದ ಗಾರ್ಡ್‍ಗಳು ಸ್ವೇಚ್ಛೆಯಿಂದಲೇ ಸಹಾಯಕ್ಕೆ ಬಂದರು. ಈಗ ಗಾರ್ಡ್‍ಗಳು ಒಡೆದು ಆಳುವ (divide and rule) ನಿಯಮವನ್ನು ಉಪಯೋಗಿಸಿದರು. ಧಂಗೆಯಲ್ಲಿ ಭಾಗವಹಿಸದಿದ್ದ ಖೈದಿಗಳಿಗೆ ವಿಶೇಷ (ಸ್ಪೆಷಲ್) ಸವಲತ್ತುಗಳನ್ನು ನೀಡಲಾಯಿತು. ಅವರಿಗೆ ಒಳ್ಳೆ ಊಟ ಕೊಡುವ ಏರ್ಪಾಡಾಯಿತು. ಕೆಲವು ಖೈದಿಗಳು ವಿಶೇಷ ಸವಲತ್ತುಗಳನ್ನು ನಿರಾಕರಿಸಿದರು. ಒಟ್ಟಿನಲ್ಲಿ ಗಾರ್ಡ್‍ಗಳು ನಿಜವಾದ ಗಾರ್ಡ್‍ಗಳಂತೆ, ಖೈದಿಗಳು ನಿಜವಾದ ಖೈದಿಗಳಂತೆ ವರ್ತಿಸಲು ಮೊದಲು ಮಾಡಿದರು. ಕಾಲ ಕಳೆದಂತೆ ಖೈದಿಗಳು ಮೆತ್ತಗಾದರು; ಗಾರ್ಡ್‍ಗಳು ಜೋರಾದರು. ಅಣಕು ಜೈಲು ನಿಜವಾದ ಜೈಲಾಯಿತು. ಸುಮಾರು 36 ಗಂಟೆಗಳು ಕಳೆಯುತ್ತಿದ್ದಂತೆ ಒಬ್ಬ ಖೈದಿ ಕೂಗಿ, ಕಿರುಚಾಡಿ, ಹುಚ್ಚುಚ್ಚಾಗಿ ವರ್ತಿಸಲು ಮೊದಲುಮಾಡಿದನು. ನಿಯಂತ್ರಿಸುವುದು ಕಷ್ಟವಾಗಿ, ಅವನನ್ನು ಬಿಡುಗಡೆ ಮಾಡಬೇಕಾಯ್ತು. ಅನಂತರ, ಇನ್ನು ಮೂವರನ್ನು ಬಿಡುಗಡೆ ಮಾಡಬೇಕಾಯ್ತು.
ದಿನದಿನಕ್ಕೆ ಪರಿಸ್ಥಿತಿ ಹದಗೆಡಲು ಆರಂಭವಾಯ್ತು. ಗಾರ್ಡ್‍ಗಳು ಕ್ರೂರಿಗಳಾದರು. ಖೈದಿಗಳನ್ನು ಪೀಡಿಸುವುದು ಅತಿಯಾಯ್ತು. ಖೈದಿಗಳನ್ನು ಹೊರಗೆ ಬಿಡದೆ, ಅವರ ಮಲಮೂತ್ರ ವಿಸರ್ಜನೆಗೆ ಬಕೆಟ್‍ಗಳನ್ನು ಕೊಡಲಾಯ್ತು. ಬಕೆಟ್ಟನ್ನು ಕ್ಲೀನ್ ಮಾಡಲು ಸಹ ಬಿಡುತ್ತಿರಲಿಲ್ಲ. ಕೆಲವರ ಹಾಸಿಗೆಯನ್ನು ಹಿಂದಕ್ಕೆ ಪಡೆಯಲಾಯಿತು. ಮತ್ತೆ ಕೆಲವರ ಬಟ್ಟೆಗಳನ್ನು ವಾಪಸ್ ಪಡೆದು, ಅವರು ಬರಿ ಮೈಯಲ್ಲಿ ನೆಲದ ಮೇಲೆ ಮಲಗುವಂತೆ ಮಾಡಲಾಯಿತು. ಕೆಲವರನ್ನು ಒಂಟಿಯಾಗಿರುವಂತೆ (solitary confinement) ನೋಡಿಕೊಳ್ಳಲಾಯ್ತು. ಪರಿಸ್ಥಿತಿ ಕೈಮೀರುತ್ತಿರುವುದು ಸ್ಪಷ್ಟವಾಯಿತು. ಬಿಡುಗಡೆಯಾಗಿ ಹೊರಗೆ ಹೋಗಿದ್ದವರಲ್ಲೊಬ್ಬ ಜೈಲಿನ ಮೇಲೆ ಆಕ್ರಮಣ ಮಾಡಿ ಖೈದಿಗಳನ್ನು ಬಿಡಿಸಲು ಬರುತ್ತಿರುವುದಾಗಿ ಸುದ್ದಿ ಬಂತು. ಜೈಲನ್ನು ಬೇರೆಡೆಗೆ ವರ್ಗಾಯಿಸಲು ಏರ್ಪಾಡಾಗಿತ್ತು. ಆದರೆ, ಬೆದರಿಕೆ ಕಾರ್ಯರೂಪಕ್ಕೆ ಬರಲಿಲ್ಲ. ಪರಿಸ್ಥಿತಿ ಕೈಮೀರುತ್ತಿರುವಂತೆ ಕಂಡುಬಂತು. ಇದನ್ನೆಲ್ಲಾ ಕಂಡ ಓರ್ವ ವಿದ್ಯಾರ್ಥಿನಿ ಪ್ರಯೋಗವನ್ನು ನಿಲ್ಲಿಸಬೇಕೆಂದು ಒತ್ತಾಯ ಮಾಡಿದಳು (ಜಿ಼ಂಬಾರ್ಡೊ ಅವಳನ್ನು ವಿವಾಹವಾದದ್ದು ಬೇರೆ ವಿಚಾರ). ಪರಿಸ್ಥಿತಿ ತೀರ ಹದಗೆಟ್ಟು, ಏನಾದರು ಕೆಟ್ಟದ್ದು ಸಂಭವಿಸಬಹುದೆಂದು ತಿಳಿದು, ಜಿ಼ಂಬಾರ್ಡೊ 15 ದಿನಗಳು ನಡೆಯಬೇಕಿದ್ದ ಪ್ರಯೋಗವನ್ನು 6 ದಿನಗಳ ನಂತರವೇ ನಿಲ್ಲಿಸಬೇಕಾಯಿತು.
ಪ್ರಯೋಗ ಮುಗಿದ ಮೇಲೆ ಕೆಲವು ಗಾರ್ಡ್‍ಗಳಾಗಿ ವರ್ತಿಸಿದ್ದವರನ್ನು ಸಂದರ್ಶಿಸಿ ಅವರ ಅನಿಸಿಕೆ, ಅನುಭವಗಳನ್ನು ತಿಳಿದುಕೊಳ್ಳಲಾಯಿತು. ಕೆಲವರು ತಾವು ಅಷ್ಟು ಕ್ರೂರವಾಗಿ ನಡೆದುಕೊಂಡುದಕ್ಕೆ ಆಶ್ಚರ್ಯಪಟ್ಟರು ಮತ್ತೆ ಕೆಲವರು ಹಾಗೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟರು. ಆಶ್ಚರ್ಯವೆಂದರೆ ಜಿ಼ಂಬಾರ್ಡೊ ಕೂಡ ಪ್ರಯೋಗದಲ್ಲಿ ತಲ್ಲೀನನಾಗಿ, ತಾನು ನಿಜವಾದ ಸೂಪರಿಂಟೆಂಡೆಂಟ್ನ ಹಾಗೆ ವರ್ತಿಸಿದನೆಂದು ಹೇಳಿಕೊಂಡಿರುವುದು.

ಪ್ರಯೋಗದಿಂದ ತಿಳಿದು ಬಂದದ್ದೇನು?
ಮನೋವಿಜ್ಞಾನಿಗಳು ಮಾನವರ ವರ್ತನೆಗೆ ಸಾಮಾನ್ಯವಾಗಿ ಎರಡು ಬಗೆಯ ಕಾರಣಗಳನ್ನು ನೀಡುತ್ತಾರೆ. ಒಂದು, ವ್ಯಕ್ತಿಗಳ ಆಂತರಿಕ (ವೈಯಕ್ತಿಕ) ಒಲವು; ಎರಡನೆಯದು, ಅವರ ಸಾಮಾಜಿಕ ಪರಿಸರ. ಇವೆರಡರಲ್ಲಿ ಯಾವುದು ಮುಖ್ಯ ಎನ್ನುವುದರಲ್ಲಿ ಇಂದು ಕೂಡ ಒಮ್ಮತವಿಲ್ಲ. ಜಿ಼ಂಬಾರ್ಡೊ ಒಬ್ಬ ಕಟ್ಟಾ ಸಮಾಜ ಮನೋವಿಜ್ಞಾನಿ. ಅವನಿಗೆ ಸಾಮಾಜಿಕ ಕಾರಣಗಳೆಡೆಗೆ ಒಲವು ಹೆಚ್ಚು. ಜನರ ನಡವಳಿಕೆ ಎಷ್ಟರಮಟ್ಟಿಗೆ ಅವರ ಸುತ್ತಣ ಸಾಂಘಿಕ ಪರಿಸರದಿಂದ ಪ್ರಭಾವಿತವಾಗುತ್ತದೆ ಎಂಬುದನ್ನು ರುಜುವಾತು ಮಾಡುವುದು ಅವನ ಪ್ರಯೋಗದ ಉದ್ದೇಶವಾಗಿತ್ತು. ಅವನ ಪ್ರಕಾರ, ಜನರು ಸಾಮಾನ್ಯವಾಗಿ ಅಧಿಕಾರಸ್ಥರ, ಬುದ್ಧಿವಂತರ, ವಯಸ್ಸಿನಲ್ಲಿ ಹಿರಿಯರ, ಪರಿಣಿತರ, ಸಮಾನಸ್ಕಂದರ (peers) ಅಭಿಪ್ರಾಯಗಳಿಂದ, ಆದೇಶಗಳಿಂದ ಬಹಳ ಬೇಗ ಪ್ರಭಾವಿತರಾಗುತ್ತಾರೆ; ಅವರಿಗೆ ವಿಧೇಯರಾಗಿರುತ್ತಾರೆ; ಅವರ ಆದೇಶಗಳನ್ನು ಪಾಲಿಸುತ್ತಾರೆ; ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾರೆ; ತಮಗೆ ವಹಿಸಿಕೊಟ್ಟ ಪಾತ್ರವನ್ನು ಚಾಚೂತಪ್ಪದೆ ನಿರ್ವಹಿಸುತ್ತಾರೆ. ಅಂದರೆ, ನಮ್ಮ ವರ್ತನೆಯಲ್ಲಾಗುವ ಬದಲಾವಣೆಗಳು ನಾವೆಂಥವರು ಎನ್ನುವುದಕ್ಕಿಂತ ಮಿಗಿಲಾಗಿ, ನಾವು ಎಂಥ ಪರಿಸರದಲ್ಲಿದ್ದೇವೆ, ನಮ್ಮ ಮೇಲೆ ಪ್ರಭಾವ ಬೀರುತ್ತಿರುವವರು ಯಾರು, ಅವರೆಂಥವರು, ಅವರಿಗಿರುವ ಪರಿಣಿತಿ ಎಷ್ಟು, ಅಧಿಕಾರವೆಷ್ಟು, ಎನ್ನುವುದರಿಂದ ನಿರ್ಧರಿಸಲ್ಪಡುತ್ತದೆ. ಸಾಂಘಿಕ ಒತ್ತಡದಿಂದ ಯಾರನ್ನೇ ಆದರೂ ಏನುಬೇಕಾದರೂ ಮಾಡುವಂತೆ ಮನವೊಲಿಸಬಹುದು; ಒಳ್ಳೆಯವರನ್ನು ದುರ್ಮಾರ್ಗಕ್ಕೆಳೆಯಬಹುದು; ಅವರು ದುಷ್ಕೃತ್ಯಗಳಲ್ಲಿ ತೊಡಗುವಂತೆ ಪ್ರೇರಿಸಬಹುದು; ಅವರು ಬುದ್ಧಿಗೇಡಿಗಳಂತೆ, ಅವಿವೇಕದ, ಅವೈಚಾರಿಕ, ವಿನಾಶಕಾರಿ ಕಾರ್ಯಗಳಲ್ಲಿ ಭಾಗವಹಿಸುವಂತೆ ಮಾಡಬಹುದು. ಅವರಿಗೆ ವಹಿಸಿದ ಕಾರ್ಯದ ಪೂರ್ಣ ಅರಿವು ಅವರಿಗಿದ್ದರೆ, ಅದರಲ್ಲಿ ಸಂಪೂರ್ಣ ಮುಳುಗಿ, ಯಾರೂ ಊಹಿಸಲಾರದ ರೀತಿಯಲ್ಲಿ ಅವರು ನಡೆದುಕೊಳ್ಳಬಹುದು ಎಂಬುದಕ್ಕೆ ಜಿ಼ಂಬಾರ್ಡೊ ಪ್ರಯೋಗ ಪುರಾವೆಗಳನ್ನು ಒದಗಿಸುವಂತೆ ಕಾಣುತ್ತದೆ. ಬೇರೆಯವರ ಒತ್ತಡದಿಂದ ಮೂಲ ವ್ಯಕ್ತಿತ್ವ ನಾಶವಾಗಿ, ನೈತಿಕ ಪ್ರಜ್ಞೆ ನಶಿಸಿ, ವೈಯಕ್ತಿಕ ಸ್ಥಿರತೆ ಹಾಳಾಗಬಹುದು. ಒಟ್ಟಾರೆಯಾಗಿ, ವೈಯಕ್ತಿಕ ಬದಲಾವಣೆಗೆ ಜಿ಼ಂಬಾರ್ಡೊ ಕಂಡುಕೊಂಡ ಪ್ರಮುಖ ಕಾರಣಗಳು: ಸ್ನೇಹಿತರ ಮತ್ತು ಸಮಾನಸ್ಕಂದರ ಒತ್ತಡ, ಎಲ್ಲರಂತೆ ಇರಬೇಕೆಂಬ ವ್ಯಕ್ತಿಯ ಇಚ್ಚೆ, ಬೇರೆಯವರು ತಮ್ಮನ್ನು ತಿರಸ್ಕರಿಸಬಹುದೆಂಬ ಆತಂಕ ಮತ್ತು ತಾನಿರುವ ಗುಂಪಿನ ಅವಿಭಾಜ್ಯ ಭಾಗವಾಗಿರಬೇಕೆಂಬ ಬಯಕೆ.
ಪ್ರಯೋಗದಲ್ಲಿ ಭಾಗವಹಿಸಿರುವವರಿಗೆ ಜೈಲೆಂದರೇನು, ಅಲ್ಲಿ ಗಾರ್ಡ್‍ಗಳು ಹೇಗೆ ವರ್ತಿಸುತ್ತಾರೆ, ಖೈದಿಗಳು ಹೇಗಿರುತ್ತಾರೆ, ಗಾರ್ಡ್‍ಗಳು ಖೈದಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಎನ್ನುವುದರ ಪರಿಚಯವಿದ್ದಿರಬೇಕು. ಇದಕ್ಕಾಗಿ ಅವರು ಜೈಲುವಾಸ ಅನುಭವಿಸಿರಬೇಕಿಂದೇನೂ ಇಲ್ಲ. ಜೈಲುಗಳನ್ನು ಕುರಿತಾದ ವಿವರಗಳನ್ನು ಸಮೂಹ ಮಾಧ್ಯಮಗಳು, ಕಥೆ-ಕಾದಂಬರಿಗಳು, ಸಿನಿಮಾ ಮುಂತಾದವುಗಳಿಂದ ಸಾಕಷ್ಟು ತಿಳಿದುಕೊಳ್ಳಬಹುದಾದ ಸಾಧ್ಯತೆಗಳಿವೆ. ಪ್ರಯೋಗದಲ್ಲಿ ಗಾರ್ಡ್‍ಗಳು ಹೇಗೆ ವರ್ತಿಸಬೇಕೆಂಬುದನ್ನು ಒಬ್ಬ ಪರಿಣಿತರಾದ ಯೂನಿವರ್ಸಿಟಿ ಪ್ರೊಫೆಸರ್ ಮನದಟ್ಟಾಗುವಂತೆ ಹೇಳಿದ್ದಾರೆ. ಅವರು ಆದೇಶಿಸಿರುವಂತೆ ನಡೆದುಕೊಂಡರೆ ತಪ್ಪೇನಿಲ್ಲ ಎಂದು ಪ್ರಯೋಗದಲ್ಲಿ ಭಾಗವಹಿಸಿದವರಿಗೆ ಅನಿಸಿದೆ. ಮಿಗಿಲಾಗಿ ಪ್ರಯೋಗಕ್ಕಾಗಿ ನಿರ್ಮಿಸಿರುವ ಪರಿಸರ ನಿಜವಾಗಿಯೂ ಜೈಲಿನಂತೇ ಇದೆ. ಇಂಥ ಸನ್ನಿವೇಶದಲ್ಲಿ (ಪರಿಸರದ ಪ್ರಭಾವದಲ್ಲಿ) ಪ್ರಯೋಗದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ನಿಜವಾದ ಗಾರ್ಡ್‍ಗಳಂತೆ ವರ್ತಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಅವರು ತಮಗೆ ವಹಿಸಿದ ಪಾತ್ರಗಳಲ್ಲಿ ಸಂಪೂರ್ಣವಾಗಿ ತಲ್ಲೀನರಾದರು. ಗಾರ್ಡ್‍ಗಳು ನಿಜವಾಗಿಯೂ ಗಾರ್ಡ್‍ಗಳಾದರು ಖೈದಿಗಳು ಅಪ್ಪಟ ಖೈದಿಗಳಂತೆ ವರ್ತಿಸಿದರು. ಪ್ರಯೋಗಕ್ಕೆ ಪೂರಕವಾಗಬಹುದಾದ ಒಂದು ಉದಾಹರಣೆಯನ್ನು ಗಮನಿಸಿ: ಒಬ್ಬ ಮರ್ಯಾದಸ್ಥ ಮನೆತನದಿಂದ ಬಂದ ಯೋಗ್ಯ ವಿದ್ಯಾರ್ಥಿ ಯಾವುದೋ ಒಂದು ಪ್ರತಿಭಟನೆಗೆ ಸಂಬಂಧಿಸಿದ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾನೆ ಎಂದುಕೊಳ್ಳಿ. ಮೊದಮೊದಲು ಎಲ್ಲರಂತೆ ಅವನೂ ಸ್ಲೋಗನ್‍ಗಳನ್ನು ಕೂಗುತ್ತಾ ಹೋಗುತ್ತಿರುತ್ತಾನೆ. ಆದರೆ ಎಲ್ಲೆಡೆ ನಡೆಯುವಂತೆ, ಇಲ್ಲಿ ಕೂಡ ಪ್ರತಿಭಟನೆ ತೀವ್ರವಾಗಿ, ಕಲ್ಲು ತೂರಾಟ ಮೊದಲಾಗುತ್ತದೆ. ಆಗ ನಮ್ಮ ಯೋಗ್ಯ ವಿದ್ಯಾರ್ಥಿಯೂ ಎಲ್ಲರಂತೆ ಕಲ್ಲು ತೂರಿ, ಯಾರದೋ ಕಾರಿನ ಗಾಜು, ಕಂಬದ ಮೇಲಿನ ವಿದ್ಯುತ್ ದೀಪಗಳನ್ನು ಒಡೆದು, ಇನ್ನೂ ಅನೇಕ ವಿನಾಶಕಾರಿ  ಕೃತ್ಯಗಳಲ್ಲಿ ಪಾಲ್ಗೊಳ್ಳುವುದನ್ನು ನೀವು ನೋಡಿದ್ದೀರಿ. ಹಿಂದೆ ಅವನೆಂದೂ ಇಂಥ ಕೆಲಸ ಮಾಡಿದವನಲ್ಲ. ಈಗ ಮಾಡಿದ್ದಾನೆ. ಕಾರಣ ಏನೆಂದು ತಿಳಿಯಿತು ತಾನೆ? ಇಂಥ ಉದಾಹರಣೆಗಳು ನಿಜ ಜೀವನದಲ್ಲಿ ಹೇರಳವಾಗಿ ದೊರಕುತ್ತವೆ. ಸಂದರ್ಭಗಳು ಏನು ಬೇಕಾದರು ಮಾಡಿಸುತ್ತವೆ. ಜೂಲಿಯಸ್ ಸೀಜ಼ರ್ ನಾಟಕದಲ್ಲಿ ಮಾರ್ಕೊ ಆಂಟೊನಿಯ ಭಾಷಣ ಹೇಗೆ ಜನರನ್ನು ಹುಚ್ಚೆಬ್ಬಿಸಿ, ಕೆರಳಿಸಿ ಧಂಗೆ ಏಳುವಂತೆ ಮಾಡಿದ್ದನ್ನು ನೆನಪಿಸಿಕೊಳ್ಳಿ. ಅಂದಮೇಲೆ, ಮನುಷ್ಯನ ವರ್ತನೆಯ ಮೇಲೆ ಸಾಂಘಿಕ ಪ್ರಭಾವ ಎಷ್ಟೆಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗುವುದಿಲ್ಲ.

ಪ್ರಯೋಗ ಹುಟ್ಟಿಸಿದ ವಿವಾದಗಳು
ಮೇಲೆ ವಿವರಿಸಿದ ಜಿ಼ಂಬಾರ್ಡೊ ಪ್ರಯೋಗ ನೂರಕ್ಕೆ ನೂರು ಸತ್ಯವೆಂದು ಯಾರೂ ಒಪ್ಪುವುದಿಲ್ಲ. ಕೇವಲ ಸಾಂಧರ್ಭಿಕ ಕಾರಣಗಳೇ ಒಬ್ಬ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆ ತರಬಲ್ಲವೆಂಬುದನ್ನು ಯಾವ ಮನೋವಿಜ್ಞಾನಿಯೂ ಒಪ್ಪುವುದಿಲ್ಲ. ಕೆಲವು ವ್ಯಕ್ತಿಗಳು ಎಂಥ ಸಂದರ್ಭದಲ್ಲೂ ತಮ್ಮತನವನ್ನು ಕಳೆದುಕೊಂಡು ನೀಚ ಕೆಲಸಕ್ಕಿಳಿಯುವುದಿಲ್ಲ ಎನ್ನುವುದಕ್ಕೂ  ಸಾಕಷ್ಟು ಪುರಾವೆಗಳಿವೆ. ಜಿ಼ಂಬಾರ್ಡೊ ವ್ಯಕ್ತಿಯಲ್ಲಿನ ಆಂತರಿಕ ಕಾರಣಗಳನ್ನು ಕಡೆಗಣಿಸಿರುವನೆಂದು ಪ್ರಸಿದ್ಧ ಮನೋವಿಜ್ಞಾನಿ ಎರಿಕ್ ಫ್ರಾಮ್ ವಾದಿಸಿದ್ದಾನೆ. ಕೆಲವರು ಪ್ರಯೋಗ ನಿಜವಾದ ವೈಜ್ಞಾನಿಕ ಪ್ರಯೋಗವೇ ಅಲ್ಲವೆಂದು ವಾದಿಸಿದ್ದಾರೆ. ಯಾವುದೇ ಪ್ರಯೋಗದಲ್ಲಿ ಅಗತ್ಯವಾಗಿ ಪರಿಗಣಿಸಬೇಕಾದ ವಿಷಯಿಗಳ (participants) ಆಯ್ಕೆ ವೈಜ್ಞಾನಿಕವಾಗಿ ನಡೆದಿಲ್ಲವೆಂಬ ಆಪಾದನೆಯೂ ಇದೆ. ಪ್ರಾಯೋಗದ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದಾದ ಎಲ್ಲ ಘಟಕಗಳನ್ನು ಜಿ಼ಂಬಾರ್ಡೊ ನಿಯಂತ್ರಣಕ್ಕೊಳಪಡಿಸಿಲ್ಲ ಎಂಬ ಮಾತೂ ಇದೆ. ಇದೊಂದು ಆಕಸ್ಮಿಕ ಘಟನೆ, ಪ್ರಯೋಗವಲ್ಲ, ಎನ್ನುವವರೂ ಇದ್ದಾರೆ. ಬೇರೆಯವರು ಇಂಥದೆ ಪ್ರಯೋಗ ಮಾಡಿದಾಗ ಫಲಿತಾಂಶಗಳು ಇದಕ್ಕಿಂತ ಭಿನ್ನವಾಗಿದ್ದುದು ಕಂಡುಬಂದಿದೆ. ಆದರೆ, ಜಿ಼ಂಬಾರ್ಡೊ ಪ್ರಯೋಗಕ್ಕೆ ಹೋಲಿಸಬಹುದಾದ ಅನೇಕ ಪ್ರಯೋಗಗಳು ಬೇರೆಡೆ ನಡೆದು, ಅವನ ತೀರ್ಮಾನಗಳಲ್ಲಿ ಹೇಳಿಕೊಳ್ಳುವಂಥ ತಪ್ಪೇನು ಇಲ್ಲವೆಂಬುದು ಕೂಡ ಸಾಬೀತಾಗಿದೆ. ಇದೆಲ್ಲದರ ಒಟ್ಟಾರೆ ಸಾರಾಂಶ ಒಂದೆ: ಮನುಷ್ಯರ ವರ್ತನೆಗೆ, ಅವರಲ್ಲಾಗುವ ಪರಿವರ್ತನೆಗಳಿಗೆ ಇಂಥದೇ ಕಾರಣವೆಂದು ನಿರ್ದಿಷ್ಟವಾಗಿ ಹೇಳಬರುವುದಿಲ್ಲ. ಮನುಷ್ಯನ ವರ್ತನೆಗೆ ಕಾರಣಗಳು ಹಲವಾರಿರುತ್ತವೆ; ಅವು ವ್ಯಕ್ತಿಗತವಾದವಿರಬಹುದು, ಹೊರಗಿನವಾಗಿರಬಹುದು, ಅಥವಾ ಎರಡೂ ಇರಬಹುದು. ಭೌತವಿಜ್ಞಾನ ಹೇಳುವ ಹಾಗೆ ಒಂದು ಕಾರ್ಯಕ್ಕೆ ಒಂದೇ ಕಾರಣ ಎಂಬ ನಿಯಮವನ್ನು ಮಾನವಿಕ ವಿಜ್ಞಾನಗಳಿಗೆ ಅನ್ವಯ ಮಾಡುವುದು ಕಷ್ಟ.

ಲೂಸಿಫರ್ ಎಫೆಕ್ಟ್ ಗ್ರಂಥದ ಪ್ರಭಾವ
ಜಿ಼ಂಬಾರ್ಡೊ ತಮ್ಮ ಪುಸ್ತಕದಲ್ಲಿ ಹೇಳಿರುವಂತೆ, ಮೂಲತಃ ನಾವಾರೂ ಒಳ್ಳೆಯವರೂ ಅಲ್ಲ ಅಥವಾ ಕೆಟ್ಟವರೂ ಅಲ್ಲ; ನಮ್ಮ ಭೌತಿಕ ಮತ್ತು ಸಾಮಾಜಿಕ ಪರಿಸರಗಳು ನಮ್ಮನ್ನು ಹಾಗೆ ಮಾಡುತ್ತವೆ. ಅವರು ತಮ್ಮ ಪ್ರಯೋಗದ ಫಲಿತಾಂಶಗಳನ್ನು ಲೂಸಿಫರ್ ಎಫೆಕ್ಟ್ ಎಂಬ ಹೆಸರಿನ ಪುಸ್ತಕದಲ್ಲಿ ಪ್ರಕಟಿಸಿದಾಗ ಅದು ಬಹಳ ಕೋಲಾಹಲವನ್ನೇ ಉಂಟುಮಾಡಿತು. ಇಂಥದೇ ವಸ್ತುವನ್ನು ಉಪಯೋಗಿಸಿಕೊಂಡು ಟಿವಿಯಲ್ಲಿ ಸೀರಿಯಲ್‍ಗಳು ಬಂದವು, ಸಿನಿಮಾಗಳು ತಯಾರಾದವು, ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದವು. ಜಿ಼ಂಬಾರ್ಡೊ ಖ್ಯಾತ ಮನೋವಿಜ್ಞಾನಿ ಎನಿಸಿಕೊಂಡು ಹಲವಾರು ಪ್ರಶಸ್ತಿಗಳಿಗೆ ಭಾಜನರಾದರು. ಕೊನೆಯದಾಗಿ ಒಂದು ವಿಷಯವನ್ನು ಮರೆಯಬಾರದು. ಜಿ಼ಂಬಾರ್ಡೊ ನಡೆಸಿದ ಆನಂತರದ ಪ್ರಯೋಗಗಳಲ್ಲಿ, ಸಾಮಾಜಿಕ ಪ್ರಭಾವ ಒಳ್ಳೆಯರನ್ನು ಕೆಟ್ಟವರನ್ನಾಗಿ ಮಾಡುವುದಷ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಜನರನ್ನು ಒಳ್ಳೆಯವರನ್ನಾಗಿಸಲಿಕ್ಕೆ, ಅವರಲ್ಲಿರುವ ಕೆಲವು ಅನಪೇಕ್ಷಿತ ಗುಣಗಳನ್ನು ಹೋಗಲಾಡಿಸಲಿಕ್ಕೆ ಕೂಡ ಸಹಾಯ ಮಾಡಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಷಯವನ್ನು ಅಧ್ಯಯನ ಮಾಡಲು ಒಂದು ಸಂಸ್ಥೆಯನ್ನು (Heroic Imagination Project) ಕಟ್ಟಿ, ಅದರ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ನಿಜ ಜೀವನದಲ್ಲಿ ವೀರೋಚಿತ ವರ್ತನೆಗಳಲ್ಲಿ ನಿರತರಾಗಿ, ಶೌರ್ಯ ಪ್ರದರ್ಶನ ಮಾಡಿದ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಅಧ್ಯಯನ ಮಾಡಿ, ಅವರನ್ನು ಅಂಥ  ಕಾರ್ಯಗಳನ್ನು ಮಾಡುವಂತೆ ಪ್ರೇರಿಸುವ, ಪ್ರೋತ್ಸಾಹಿಸುವ ಸಾಮಾಜಿಕ ಸಂದರ್ಭಗಳನ್ನು, ಸನ್ನಿವೇಶಗಳನ್ನು ಕಂಡುಹಿಡಿಯುವುದು ಅಧ್ಯಯನದ ಉದ್ದೇಶ. ಯಾವ ವ್ಯಕ್ತಿ ಪರಿಸ್ಥಿತಿಯ ಪ್ರಭಾವವನ್ನು ಎದುರಿಸಿ, ಅದನ್ನು ಮೆಟ್ಟಿ ನಿಂತು, ಬೇರೆಯವರನ್ನು ಎಂಥ ಪರಿಸ್ಥಿತಿಯಲ್ಲೂ ಕೀಳಾಗಿ ಕಾಣದೆ, ಉದಾತ್ತ ಉದ್ದೇಶಗಳಿಂದ ಪ್ರೇರಿತನಾಗಿ ಕಾರ್ಯಮಾಡಬಲ್ಲನೋ ಅವನೇ ಶೂರನೆನಿಸಿಕೊಳ್ಳುತ್ತಾನೆ ಎಂಬುದು ಜಿ಼ಂಬಾರ್ಡೊ ಅಭಿಪ್ರಾಯ.

Reference
1.                Zimbardo, P.                          :               The Lucifer Effect. New York: Random House.

   (2007)

No comments:

Post a Comment