Sunday, December 1, 2013

ಸಾಮಾಜಿಕ ನ್ಯಾಯಪರ ಹೋರಾಟಗಾರ: ಶ್ರೀ ಎಸ್.ಆರ್. ಹಿರೇಮಠ್


1.         ಹುಚ್ಚು ಕನಸು ಹೊತ್ತು ಬಂದ ದಂಪತಿ

            ನಮ್ಮ ಹುಡುಗ ಅಮೆರಿಕಾಕ್ಕೆ ಓದಲು ಹೊರಟಿದ್ದಾನೆ; ನಮ್ಮ ಅಳಿಯನಿಗೆ ಅಮೆರಿಕೆಯಲ್ಲಿ ಕೆಲಸ ಸಿಕ್ಕಿದೆ, ನಮ್ಮ ಮಗಳನ್ನು ಕರೆದುಕೊಂಡು ಮುಂದಿನವಾರವೇ ಹೋಗುತ್ತಿದ್ದಾನೆ; ಇತ್ಯಾದಿಯಾಗಿ ಸಂತಸದಿಂದ ಸುದ್ದಿ ಹಂಚಿಕೊಳ್ಳುವುದು ಈಗ ಸಾಮಾನ್ಯವಾಗಿ ಕೇಳಿಬರುವ ಸಂಗತಿ. ನಮ್ಮಹುಡುಗ ಅಮೆರಿಕಾದಿಂದ ಭಾರತದಲ್ಲೇ ಇರಲು ಬರುತಿದ್ದಾನೆ ಎಂದರೆ, ಪ್ರಸ್ತುತ ಇರುವ ಜಾಗತಿಕ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಕೆಲಸ ಕಳೆದುಕೊಂಡಿರಬೇಕು, ಪಾಪ ಎಂದು ಅನುಕಂಪದ ಮಾತನಾಡುವವರು ಅನೇಕರು. ಆದರೆ ಇದ್ದ ಉತ್ತಮ ಗಳಿಕೆಯ ಕೆಲಸವನ್ನು ಬಿಟ್ಟು  ಭಾರತರದಲ್ಲಿಯ ಕಡು ಬಡವರ, ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಗಾಗಿರುವವರ ಬಗೆಗೆ ಕಾಳಜಿ ವಹಿಸಿ, ಅವರನ್ನು ಸಶಕ್ತರನ್ನಾಗಿ ಮಾಡಿ ಸಾಮಾಜಿಕವಾಗಿ-ಆರ್ಥಿಕವಾಗಿ ಅಸಮತೋಲನವನ್ನು ಕಡಿಮೆ ಮಾಡುವ ಕನಸು ಕಟ್ಟಿಕೊಂಡು ಭಾರತಕ್ಕೆ ಬಂದಿದ್ದೇವೆ ಎಂದು ಯಾರಾದರೂ ಹೇಳಿದರೆ, ಅವರಿಗೆ ಹುಚ್ಚು ಹಿಡಿದಿದೆ ಎಂದು ಸಹಜವಾಗಿ ಅನ್ನುವವರು ಸಾಕಷ್ಟು ಜನ ಸಿಕ್ಕುತ್ತಾರೆ. ಇಂತಹ ಹುಚ್ಚುಕನಸುಗಳನ್ನು ಹೊತ್ತುಕೊಂಡು ಅಮೆರಿಕೆಯಿಂದ 1979 ರಲ್ಲಿ ಭಾರತಕ್ಕೆ ಬಂದವರು ಶ್ರೀಮತಿ(ಸುಶ್ರೀ) ಶ್ಯಾಮಲಾ ಹಿರೇಮಠ್ ಹಾಗೂ ಶ್ರೀ ಎಸ್, ಆರ್, ಹಿರೇಮಠ್ ದಂಪತಿ.

            ಎಸ್, ಆರ್, ಹಿರೇಮಠ್ ರವರು ಭಾರತದಲ್ಲಿ ಹುಟ್ಟಿ, ಇಲ್ಲಿ ವಿದ್ಯಾಭ್ಯಾಸಮಾಡಿ, ಅಮೆರಿಕಾದಲ್ಲಿ ಉನ್ನತ ವಿದ್ಯಾಭ್ಯಾಸಮಾಡಿ ಉತ್ತಮ ಕೆಲಸ ಮಾಡುತ್ತಿದ್ದವರಾದರೆ ಸುಶ್ರೀ ಶ್ಯಾಮಲಾ ಹಿರೇಮಠ್ರವರು ಅಮೆರಿಕಾದಲ್ಲಿ ಹುಟ್ಟಿ, ಅಲ್ಲಿಯೇ ವಿದ್ಯಾಭ್ಯಾಸ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದು ಭಾರತೀಯರಾದ ಶ್ರೀ ಹಿರೇಮಠ್ ರವರನ್ನು ಮದುವೆಯಾಗಿ ಅವರ ಕನಸಿಗೆ ಮೆರಗುಕೊಟ್ಟು ಭಾರತಕ್ಕೆ ಬಂದ ಅಮೆರಿಕನ್ ಅವರು. ಸುಶ್ರೀ ಶ್ಯಾಮಲಾ ಹಿರೇಮಠ್ರವರಿಗೆ ಅವರ ತಂದೆ-ತಾಯಿಗಳು ಇಟ್ಟ ಹೆಸರು ಮಾವಿಸ್ ಸಿಗ್ವಾಲ್ಟ್ (Mavis Sigwalt) ಎಂದು. ಅವರು ಪಶ್ಚಿಮ ಆಫ್ರಿಕಾದಲ್ಲಿ ಶಾಂತಿ ಸೇನೆಯ ಸ್ವಯಂಸೇವಕರಾಗಿ ಕೆಲಸಮಾಡಿ ಬಂದವರು. ಎಸ್,ಆರ್ ರವರನ್ನು ಮದುವೆಯಾದ ಮೇಲೆ ಸುಶ್ರೀ ಶ್ಯಾಮಲಾ ಹಿರೇಮಠ್ ಆದರು. ಎಸ್, ಆರ್, ರವರಂತೆಯೇ ಕಡು ಬಡವರ ಹಾಗೂ ಶೋಷಣೆಗೆ ಒಳಗಾದವರ ಸ್ಥಿತಿ-ಗತಿಯನ್ನು ಉತ್ತಮಗೊಳಿಸಬೇಕೆಂಬ ಹಂಬಲವನ್ನು ಹೊತ್ತು ಬಂದವರು.

 

2. ಪ್ರತಿಭಾವಂತ ವಿದ್ಯಾರ್ಥಿ

            ಎಸ್,ಆರ್ ಹಿರೇಮಠ್ ರವರು (ಸಂಗಯ್ಯ ರಾಚಯ್ಯ ಹಿರೇಮಠ್) ಹುಟ್ಟಿದುದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಬೆಳವಣಿಕೆ ಗ್ರಾಮದಲ್ಲಿ. ಅವರ ತಂದೆಯವರು ಶ್ರೀ ರಾಚಯ್ಯ ಹಿರೇಮಠ್ ರವರು, ಅವರ ತಾಯಿ ಮಾತೋಶ್ರೀ ರಾಚವ್ವಾ ಹಿರೇಮಠ್ ರವರು. ಅವರ ತಂದೆಯವರೂ ಹೋರಾಟಗಾರರು, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದವರು. ಊರಿನ ಸಾಹುಕಾರರ ವಿರುದ್ಧ ಬಡವರ ಪರವಾಗಿ ನಿಂತವರು. ಇದರಿಂದಾಗಿ ಅವರನ್ನು ಕೊಲ್ಲುವ ಯತ್ನವನ್ನು ಸಾಹುಕಾರರು ಮಾಡಿದರು. ಅದರಿಂದ ಪಾರಾಗಿ ಬಂದು ಬಿಜಾಪುರ ಸೇರಿದರು. ಅಲ್ಲಿಯೇ ಕ್ಷಯರೋಗಕ್ಕೆ ಬಲಿಯಾದರು.

            ತಂದೆಯವರು ಶಿವೈಕ್ಯರಾದಾಗ ಎಸ್. ಆರ್. ರವರಿಗೆ ಕೇವಲ 5 ವರ್ಷ ವಯಸ್ಸಾಗಿತ್ತು. ಇವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಬಿಜಾಪುರದಲ್ಲಿ ಮುಂದುವರಿಸಿದರು. ಆಗ ಆರ್ಥಿಕ ಮುಗ್ಗಟ್ಟು ಇದ್ದುದರಿಂದ ಇವರೂ ಹೊಲಕೆಲಸಕ್ಕೆ ಹೋಗುತ್ತಿದ್ದರು. ಇವರ ಬಾಲ್ಯದ ಜೀವನದಲ್ಲಿ ತಾಯಿಯವರ ಪ್ರಭಾವವೇ ಹೆಚ್ಚಾಗಿತ್ತು. ಮುಂದಿನ ಜೀವನದಲೆಲ್ಲ ತಾಯಿಯವರ ಮಾತುಗಳನ್ನು ಮಾರ್ಗದರ್ಶನಕ್ಕಾಗಿ ಅನೇಕ ಸಲ ನೆನಪು ಮಾಡಿಕೊಳ್ಳುವುದು ರೂಢಿಯಾಯಿತು.

            ಬಿಜಾಪುರದಲ್ಲಿ ಶಾಲೆಯ ವಿದ್ಯಾಭ್ಯಾಸದಲ್ಲಿ ತರಗತಿಗೆ ಮೊದಲಿಗನಾಗಿ ಇರುತ್ತಿದ್ದರಿಂದ ಇವರಿಗೆ ವಿದ್ಯಾರ್ಥಿವೇತನ (ಸ್ಕಾಲರ್ ಷಿಪ್) ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ದೂರಕಿತು. ಮುಂದೆ ಎಸ್.ಎಸ್.ಎಲ್.ಸಿ. (S.S.L.C.) ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಎರಡನೆಯ ರ್ಯಾಂಕ್ ಪಡೆದು ಪಾಸಾದುದರಿಂದ ಸಮಾಜದ ಗಣ್ಯರ ಗಮನ ಹುಡುಗನ ಕಡೆಗೆ ಹರಿಯಿತು. ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಡಿ ಜತ್ತಿಯವರು ಷಹಬಾಷ್ ಎಂದು ಬೆನ್ನು ತಟ್ಟಿ ಬಿಜಾಪುರದಲ್ಲೇ ಕಾಲೇಜು ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸಿದರು. ಪಿ.ಯು.ಸಿ. (P.U.C.) ಪರೀಕ್ಷೆಯಲ್ಲಿಯೂ ಇವರಿಗೆ ಪ್ರಥಮ ಸ್ಥಾನ ದೊರಕಿತು.

            ಇವರು ಹೈಸ್ಕೂಲ್ ಓದುತ್ತಿರುವಾಗ ಕನ್ನಡದ ಹೆಸರಾಂತ ಸಾಹಿತಿ ಶ್ರೀ ಶಿವರಾಮಕಾರಂತರವರು ಬಿಜಾಪುರಕ್ಕೆ ಒಂದು ಕಾರ್ಯಕ್ರಮಕ್ಕೆ ಬಂದಿದ್ದರು. ಭಾರತ ಸಂಸ್ಕೃತಿಯ ಬಗೆಗೆ ಮಾತನಾಡುತ್ತಾ ನಾವು ತಂದೆ-ತಾಯಿಗಳ ಋಣ, ಗುರು-ಹಿರಿಯರ ಋಣ ತೀರಿಸುವ ಬಗೆಗೆ ಮಾತನಾಡುತ್ತಿದ್ದೇವೆ, ಆದರೆ ಸಮಾಜದ ಋಣ ತೀರಿಸುವ ಬಗೆಗೆ ಚಿಂತಿಸುವುದಿಲ್ಲ ಎಂದು ಹೇಳಿದುದು ಎಸ್.ಆರ್.ರವರ ಎಳೆಯ ವಯಸ್ಸಿನ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿತು. ಮುಂದೆ ಬಗೆಯ ಚಿಂತನೆಯು ಅವರಲ್ಲಿ ಗಟ್ಟಿಗೊಂಡು ಬೆಳೆಯಿತು. ತಮ್ಮ ಬೆಳವಣಿಗೆಗೆ ಸಮಾಜ ಕೊಟ್ಟ ಸಹಾಯದ ಋಣ ತೀರಿಸಬೇಕೆನ್ನುವ ಭಾವ ನೆಲೆಗೊಂಡಿತು.

            ಬಿಜಾಪುರದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ ಜ್ಞಾನಯೋಗಾಶ್ರಮದ ಶ್ರಿಮಲ್ಲಿಕಾರ್ಜುನ ಸ್ವಾಮಿಯವರ ಪ್ರವಚನಗಳ ಸಾರ ಲೇಖನಗಳನ್ನು ಬರೆದು ಬಹುಮಾನ ಪಾರಿತೋಷಕಗಳನ್ನು ಪಡೆದರು. ಇಂತಹ ಉತ್ತಮ ವಿದ್ಯಾಭ್ಯಾಸದ ದಾಖಲೆಯಿದ್ದ ಎಸ್.ಆರ್. ರವರಿಗೆ ಹುಬ್ಬಳಿಯ ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ದೊರಕಿತು. ಮೆಕ್ಯಾನಿಕಲ್ ಎಂಜಿನಿಯರ್ನಲ್ಲಿ ಪದವಿ ಪಡೆದರು. ಅದರಲ್ಲಿಯೂ ಪ್ರಥಮ ಸ್ಥಾನದಲ್ಲಿ ಪಾಸಾದರು. ಹೀಗಾಗಿ ಅದೇ ಎಂಜಿನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುವ ಅವಕಾಶ ದೂರಕಿತು. ಅಲ್ಲಿ ಒಂದು ವರ್ಷ ಅಧ್ಯಾಪಕರಾಗಿ ಕೆಲಸ ಮಾಡಿದರು .

 

3. ಅಮೆರಿಕೆಯತ್ತ ಪಯಣ ಮತ್ತು ಅಲ್ಲಿಯ ವೃತ್ತಿ ಜೀವನ.

            ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿರುವಾಗ ಅಮೆರಿಕೆಯಲ್ಲಿ ವಿದ್ಯಾಭ್ಯಾಸಕ್ಕೆ ಬರಬಾರದೇಕೆಂದು ಸ್ನೇಹಿತರ ಒತ್ತಾಯ ಪ್ರಾರಂಭವಾಯಿತು. ಹಾಗಾಗಿ ಅಮೆರಿಕಾಕ್ಕೆ ಹೋಗಿ ಮ್ಯಾನ್ಹ್ಯಾಟನ್ನ ಕ್ಯಾನ್ಸಾಸ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಎಮ್.ಎಸ್. (M.S) ಪರೀಕ್ಷೆಯನ್ನು ಇಂಡಷ್ಟ್ರಿಯಲ್ ಎಂಜಿನಿಯರಿಂಗ್ ನಲ್ಲಿ ಪಾಸುಮಾಡಿದರು. ಅದರಲ್ಲೂ ಉನ್ನತ ಶ್ರೇಣಿಯಲ್ಲಿ ತಮ್ಮ ಕ್ಲಾಸ್ಗೆ ಮೊದಲಿಗರಾಗಿ ಪಾಸಾದರು. ಮುಂದೆ ಷಿಕಾಗೋದಲ್ಲಿ ಇಲ್ಲಿನಾಯ್ಸ್ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿ (Ilinois Institute Of Technology) ಯಲ್ಲಿ ಎಂ.ಬಿ.. (M.B.A)ಮಾಡಿದರು.

            ತರುವಾಯ ಷಿಕಾಗೋದಲ್ಲಿಯೇ Container Corporation of America ಎನ್ನುವ ಕಂಪನಿಯಲ್ಲಿ ಕೆಲಸ ದೂರಕಿತು. ಕಂಪನಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದರು. ತರುವಾಯ ಷಿಕಾಗೋದ Continental Illinois Bank and Trust Company ಯಲ್ಲಿ ಎರಡು ವರ್ಷ ಕೆಲಸ ಮಾಡಿದರು. ಮುಂದೆ 1975-77ರಲ್ಲಿ ಷಿಕ್ಯಾಗೋದಲ್ಲಿಯ Federal Reserve Bankನಲ್ಲಿ ಕೆಲಸ ಮಾಡಿದರು. ಅದರಲ್ಲಿಯ ಕೆಲಸವು ತುಂಬಾ ಆಹ್ವಾನಾತ್ಮಕವಾಗಿತ್ತೆಂದು ಎಸ್. ಆರ್, ರವರು ನೆನೆಯುತ್ತಾರೆ. ಆದರೆ ಅದು ಅವರ ಮನಸ್ಸಿಗೆ ಖುಷಿ ಕೊಡುವಂತಹದಾಗಿತ್ತು. ಇದರಲ್ಲಿ ಎರಡು ವರ್ಷ ಕೆಲಸಮಾಡಿ 1977-78 ರಲ್ಲಿ ಫ್ರ್ಯಾಂಕ್ಲಿನ್ ಪಾರ್ಕ್ ನಲ್ಲಿಯ Quasar Electronics Corporation ನಲ್ಲಿ ಕೆಲಸ ಮಾಡಿದರು. ತರುವಾಯ ಓಕ್ ಬ್ರೂಕ್ ನಲ್ಲಿಯ Banker Ramo Corporation  ನಲ್ಲಿ ಮತ್ತೆರಡು ವರ್ಷ ಕೆಲಸ ಮಾಡಿ ಭಾರತಕ್ಕೆ ವಾಪಾಸಾಗುವ ನಿರ್ಧಾರ ಮಾಡಿದರು. ನಿರ್ಧಾರ ಭಾವುಕತೆಯ ಭರದ ನಿರ್ಧಾರವಾಗಿರದೆ ಕೂಲಂಕಷವಾಗಿ ಚಿಂತನೆ ಮಾಡಿ ಬಂದ ನಿರ್ಣಯವಾಗಿತ್ತು.

            ಷಿಕ್ಯಾಗೋದಲ್ಲಿ ಕೆಲಸ ಮಾಡುತ್ತಿರುವಾಗ ಸ್ನೇಹಿತರೊಬ್ಬರ ಮನೆಗೆ ಭೋಜನ ಕೂಟಕ್ಕಾಗಿ ಹೋದಾಗ ಅಮೆರಿಕಾ ದೇಶದ ಹುಡುಗಿ ಮಾವಿಸ್ ಸಿಗ್ವಾಲ್ಟ್ (Mavisas Sigwalt) ಪರಿಚಯವಾಯಿತು. ಪರಿಚಯ ಸ್ನೇಹವಾಗಿ ಬೆಳೆದು, ಪ್ರೀತಿಯಾಗಿ ಹಬ್ಬಿ ಕುಮಾರಿ ಮಾವಿಸ್ ಶ್ರೀಮತಿ ಶ್ಯಾಮಲ ಹಿರೇಮಠ್ ರವರಾಗಿ ಎಸ್ಆರ್ ರವರ ಜೀವನ ಸಂಗಾತಿಯಾದರು. ಇವರು ಅಮೆರಿಕಾದಲ್ಲಿರುವಾಗಲೇ ಇಬ್ಬರು ಮಕ್ಕಳು ಹುಟ್ಟಿದರು- ಮಗ ರಾಜ್ ಮತ್ತು ಮಗಳು ಶೀಲಾ. ಮಾವಿಸ್ ರವರೂ ಸಮಾಜಪರ ಚಿಂತನೆಯಲ್ಲಿ ಆಸಕ್ತರಾಗಿದ್ದು ಶಾಂತಿಸೇನೆಯಲ್ಲಿ (Peace Corps) ಸ್ವಯಂಸೇವಕರಾಗಿ ಪಶ್ಚಿಮ ಆಫ್ರಿಕಾದ ಸಿರಿಲಿಯೋನಾ ದೇಶದಲ್ಲಿ ಎರಡು ವರ್ಷ ಕೆಲಸ ಮಾಡಿ ಬಂದಿದ್ದರು. ಹೀಗಾಗಿ ಎಸ್,ಆರ್,ರವರ ಸಮಾಜಪರ ಚಿಂತನೆಗೆ ಶ್ರೀಮತಿ ಶ್ಯಾಮಲಾರವರು ಬೆನ್ನೆಲುಬಾಗಿ ನಿಂತರು.

            ಸ್ನೇಹಿತರು ಒಟ್ಟು ಕೂಡಿದಾಗ ಚಿಂತನೆಗೆ  ಒಳಗಾಗುತಿದ್ದ ಭಾರತದಲ್ಲಿಯ  ಗ್ರಾಮೀಣ ಬಡಜನರ ಬಗೆಗಿನ ಕಳಕಳಿ 1974ರಷ್ಟರೊತ್ತಿಗೆ ಒಂದು ಸ್ನೇಹಿತರ ಒಕ್ಕೂಟವಾಗಿ ಬೆಳೆಯಿತು. ಅದೇ ಭಾರತ ಅಭಿವೃದ್ಧಿ ಸೇವಾಸಂಸ್ಥೆಯಾಗಿ (India Development Service) ರೂಪುಗೊಂಡಿತು. 1975ರಲ್ಲಿ ಪ್ರಧಾನಮಂತ್ರಿಗಳಾಗಿದ್ದ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು (Emergency) ಭಾರತದಲ್ಲಿ ತಂದಾಗ, ಅದರ ಬಗೆಗೆ ಅಮೆರಿಕಾದಲ್ಲಿ ಪ್ರತಿಭಟಿಸಲು ಎಸ್ಆರ್ ರವರು ಸಕ್ರಿಯವಾಗಿ ಭಾಗವಹಿಸಿದರು. ಭಾರತದ ಅಭಿವೃದ್ಧಿ ಬಗೆಗೆ ಚಿಂತನೆ ಹೆಚ್ಚು ತೀವ್ರಗೊಂಡಿತು. ಇವರ ಕೆಲವು ಸ್ನೇಹಿತರು ಭಾರತಕ್ಕೆ ವಾಪಸಾಗಿ ಬಂದು ಉದ್ಯಮವನ್ನು ಪ್ರಾರಂಭಿಸಿದರೆ ಕೆಲವರಿಗಾದರೂ ಕೆಲಸ ಕೂಡುವ ಸಾಧ್ಯತೆಯಾಗುತ್ತದೆಂಬ ಚಿಂತನೆ ಎಸ್ಆರ್ ರವರಲ್ಲಿ ಮೊಳೆಯಿತು.

           

4. ಭಾರತಕ್ಕೆ ಮರಳಿ, ಮೇಡ್ಲೇರಿ ಮಣ್ಣಿನಲ್ಲಿ ಮನೆಮಾಡಿದರು

            ಕೆಲವು ವರ್ಷಗಳ ಚಿಂತನೆಮಾಡಿ ಅಮೆರಿಕಾದಿಂದ ಭಾರತಕ್ಕೆ ವಾಪಾಸಗುವುದೆಂದು ನಿರ್ಣಯಿಸಿದರು. ಭಾರತಕ್ಕೆ ಬಂದ ಮೇಲೆ ಉದ್ಯಮ ಪ್ರಾರಂಭಿಸುವುದಾದರೆ ಯಾವ ಉದ್ಯಮ ಮಾಡಬೇಕು? ಎಲ್ಲಿ ಮಾಡಬೇಕು?- ಎನ್ನುವ ಚಿಂತನೆ ಪ್ರಾರಂಭವಾಯಿತು. ಆದರೆ ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿರುವ ಕಡುಬಡತನದಲ್ಲಿರುವವರಿಗೆ, ಶೋಷಿತರಿಗೆ ಉಪಯೋಗವಾಗುವುದಿಲ್ಲವೆನ್ನುವುದು ಸ್ಪಷ್ಟವಾಯಿತು. ಅನೇಕ ಜನ ಸ್ನೇಹಿತರೊಡನೆ ಚರ್ಚಿಸಿ, ಆಗಲೇ ಗ್ರಾಮೀಣಾಭಿವೃದ್ಧಿ ಕಾರ್ಯದಲ್ಲಿ ಅತಿ ಬಡವರನ್ನು ಹಾಗೂ ಶೋಷಿತರನ್ನು ಸಶಕ್ತೀಕರಣಗೊಳಿಸುವಂತಹ ಕಾರ್ಯಯೋಜನೆ ರೂಪಿಸಿಕೊಳ್ಳಬೇಕೆಂದು ನಿರ್ಣಯಿಸಿದರು. ಷಿಕ್ಯಾಗೋದಲ್ಲಿ ಪ್ರಾರಂಭಿಸಿದ್ದ ಭಾರತ ಅಭಿವೃದ್ಧಿ ಸೇವಾಸಂಸ್ಥೆಯನ್ನು ಧಾರವಾಡದಲ್ಲಿ ಭಾರತ ಅಭಿವೃದ್ಧಿ ಸೇವಾ ಸಂಸ್ಥೆ (ಅಂತಾರಾಷ್ಟ್ರೀಯ) (India Development Service (International) ಎಂಬ ಹೆಸರಿನಲ್ಲಿ 1979ರಲ್ಲಿ ಪ್ರಾರಂಭಮಾಡಿದರು.

            ಹೀಗೆ ಪ್ರಾರಂಭಿಸಿದ ಸೇವಾ ಸಂಸ್ಥೆಯ ಕಾರ್ಯಕ್ಷೇತ್ರ ಎಲ್ಲಿ ಇರಬೇಕೆಂಬ ಚಿಂತನೆಯ ಫಲವಾಗಿ ಆಗಿನ ಧಾರವಾಡ ಜಿಲ್ಲೆಯ (ಈಗ ಹಾವೇರಿ ಜಿಲ್ಲೆಯಲ್ಲಿ ಸೇರಿರುವ) ರಾಣೆಬೆನ್ನೂರು ತಾಲ್ಲೂಕಿನ ಮೇಡ್ಲೇರಿ ಗ್ರಾಮದ ಸುತ್ತಮುತ್ತಲಿನ 30 ಹಳ್ಳಿಗಳನ್ನು ಆರಿಸಿಕೊಂಡು ಕೆಲಸ ಪ್ರಾರಂಭಮಾಡಿದರು. ರಾಣೆಬೆನ್ನೂರಿನಲ್ಲಿಯ ಡಾಕ್ಟರ್ ಗಳು, ವಕೀಲರುಗಳು, ಮತ್ತಿತರ ಬುದ್ಧಿಜೀವಿಗಳು ಕಾರ್ಯಕ್ಕೆ ಸಹಾಯಕರಾಗಿ ನಿಂತರು. ನಾವು ಧಾರವಾಡದಲ್ಲೋ, ಬೆಂಗಳೂರಲ್ಲೋ, ಮತ್ತಾವುದಾದರೊ ನಗರ ಪ್ರದೇಶದಲ್ಲಿದ್ದು ಗ್ರಾಮೀಣ ಜನರಿಗೆ ಮಹದುಪಕಾರ ಮಾಡುತ್ತೇವೆ ಎಂದುಕೊಂಡು ಮಾಡುವ ಕೆಲಸ ಸ್ವಾನುಭವದ್ದಾಗುವುದಿಲ್ಲವಾದ್ದರಿಂದ ಅದು ಉತ್ತಮ ಪರಿಣಾಮಕಾರಿಯಾಗಲಾರದು. ಅಭಿವೃದ್ಧಿ ಕಾರ್ಯ ಮಾಡಬೇಕೆನ್ನುವವರು ಗ್ರಾಮೀಣ ಜನರ ಜೊತೆಗೇ ಇದ್ದು ಪರಿಸ್ಥಿತಿಯ ನೈಜತೆಯನ್ನು ಅರಿತುಕೊಂಡು ಪರಿಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸುವುದು ಒಳ್ಳೆಯದೆಂದು ನಿರ್ಣಯಿಸಿಕೊಂಡು ಎಸ್.ಆರ್.ರವರು ತಮ್ಮ ಹೆಂಡತಿ-ಮಕ್ಕಳೊಂದಿಗೆ ಮೇಡ್ಲೇರಿ ಗ್ರಾಮಕ್ಕೇ ಬಂದು ನೆಲೆಸಿದರು. ಅಮೆರಿಕಾ ದೇಶದ ಮಹಿಳೆ ತನ್ನ ಮಕ್ಕಳೊಂದಿಗೆ ಹಳ್ಳಿಯ ಮನೆಯಲ್ಲಿ ವಾಸಿಸುತ್ತ ತಮ್ಮೆಲ್ಲರ ಜೊತೆಗೆ ಬೆರೆತು ಜೀವನ ಮಾಡುತ್ತಿರುವುದನ್ನು ನೋಡಿ ಗ್ರಾಮ ನಿವಾಸಿಗಳಲ್ಲಿ, ಅದರಲ್ಲೂ ಮಹಿಳೆಯರಲ್ಲಿ ಹೊಸ ಉತ್ಸಾಹ ಮೂಡಿತು.

            ಮೇಡ್ಲೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರಿಗೆ ಉಪಯುಕ್ತವಾಗುವಂತಹ ಅನೇಕ ಕಾರ್ಯಗಳನ್ನು ರೂಪಿಸಿಕೊಂಡು ಬೇರೆ ಬೇರೆ ದೇಶಗಳ ಸಂಸ್ಥೆಗಳಿಂದ ಸಹಾಯ ತೆಗೆದುಕೊಂಡು ಕಾರ್ಯಗತಗೊಳಿಸಿದರು. ಗ್ರಾಮ ನೈರ್ಮಲ್ಯೀಕರಣ, ಜನರ ಆರೋಗ್ಯವನ್ನು ಉತ್ತಮಗೊಳಿಸುವುದು, ದನಕರುಗಳ ಆರೋಗ್ಯದ ಕೆಲಸ, ಕುರಿಸಾಕಾಣಿಕೆಯ ಕೆಲಸ, ಗ್ರಾಮೀಣ ಮಹಿಳೆಯರಿಗಾಗಿ ಡೈರಿ ಕೆಲಸ (ಹಾಲು ಸರಬರಾಜು ಕೆಲಸ) ಇತ್ಯಾದಿ ಅನೇಕ ಕಾರ್ಯಗಳಲ್ಲಿ ಜನರನ್ನು ಸಂಘಟನೆಮಾಡಿ ಯಶಸ್ವಿಯಾದರು. .ಡಿ.ಎಸ್. ಕೆಲಸಕ್ಕೆ ಉತ್ತಮ ಪ್ರಶಂಸೆ ದೊರೆಯಿತು. 1982ರಲ್ಲಿ ನೆದರ್ಲ್ಯಾಂಡ್ ದೇಶದ ಹೀವೋಸ್ (Hivos) ಸಂಸ್ಥೆಯು .ಡಿ.ಎಸ್.ಗೆ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಜಾಪ್ ವ್ಯಾನ್ ಪ್ರಾಗ್ (Jaap Van Praag) ಬಹುಮಾನವನ್ನು ಕೊಟ್ಟು ಅದರ ಕೆಲಸವನ್ನು ಪ್ರಶಂಸಿಸಿತು.

 

5. ಜನಪರ ಹೋರಾಟದ ಪ್ರಾರಂಭ :

ಎಸ್.ಪಿ.ಎಸ್. ಸಂಸ್ಥೆಯ ಉದಯ

            ಹೀಗೆ ಗ್ರಾಮೀಣಾಭೀವೃದ್ಧಿ ಕಾರ್ಯ ನಡೆಯುತ್ತಿದ್ದಂತೆ ತುಂಗಭದ್ರಾ ನದಿಯಲ್ಲಿ ಒಮ್ಮೆ ಸಹಸ್ರ ಸಂಖ್ಯೆಯಲ್ಲಿ ಮೀನು ಸತ್ತು ಬಿದ್ದಿದ್ದವು. ಇದಕ್ಕೆ ಕಾರಣವೇನಿರಬಹುದೆಂದು ಶೋಧಿಸುತ್ತಾ ಇದು ಹರಿಹರದ ಹತ್ತಿರ ಪ್ರಾರಂಭಿಸಲ್ಪಟ್ಟಿದ್ದ ಹರಿಹರ ಪಾಲಿಫೈಬರ್ಸ್ ಫ್ಯಾಕ್ಟರಿಯವರು ಕಾರ್ಖಾನೆಯಿಂದ ಹೊರಬಿಡುವ ಮಾಲಿನ್ಯಪೂರಿತ ನೀರೇ ಕಾರಣ ಎಂದು ನಿರ್ಧರಿಸಲಾಯಿತು. ಇದು ಎಸ್.ಆರ್.ರವರ ಜನಪರ ಹೋರಾಟಕ್ಕೆ ನಾಂದಿಯಾಯಿತು.

            ಫ್ಯಾಕ್ಟರಿಯವರು ತಮ್ಮ ಕಾರ್ಖಾನೆಯಿಂದ ಹೊರಬಿಡುವ ಮಲಿನವಾದ ನೀರನ್ನು ಸ್ವಚ್ಛಗೊಳಿಸಿ ಬಿಡಬೇಕೆಂದು ಹೋರಾಟ ನಡೆಸಲು ತುಂಗಭದ್ರಾ ನದಿ ಮಾಲಿನ್ಯ ಸಮಿತಿಯೊಡನೆ ಸೇರಿ ಪಾದಯಾತ್ರೆ ಮಾಡಿದರು. ನದಿ ನೀರಿನ ಮಾಲಿನ್ಯದ ಬಗೆಗೆ ಹೋರಾಟ ನಡೆಸಿ, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ, ಹರಿಹರ ಪಾಲಿಫೈಬರ್ಸ್ನವರಂತಹ ದೊಡ್ಡ ಉದ್ಯಮದಾರರು ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಬಗೆಗೆ ಕಾರ್ಯಮಾಡುವಂತೆ ಮಾಡಿದುದು ಒಂದು ದೊಡ್ಡ ಯಶಸ್ಸೇ ಆಯಿತು.

            ಇಂತಹ ಇತರ ಹೋರಾಟಗಳಲ್ಲೂ ಪಾತ್ರವಹಿಸಬೇಕೆಂಬ ಉದ್ದೇಶದಿಂದ ಎಸ್.ಪಿ.ಎಸ್. (ಸಮಾಜ ಪರಿವರ್ತನ ಸಮುದಾಯ, -S.P.S.) ಸಂಸ್ಥೆಯನ್ನು 1983ರಲ್ಲಿ ಪ್ರಾರಂಭಮಾಡಿದರು. ಇದರಲ್ಲಿ ಭಾರತದ ಅನೇಕ ಪ್ರಾಂತದವರು ಭಾಗವಹಿಸಿ ಕೆಲಸಮಾಡತೊಡಗಿದರು. ಎಸ್.ಆರ್. ಹಿರೇಮಠ್ ರವರು ಅದರ ಕೋ-ಆರ್ಡಿನೇಟರ್ ಆಗಿ, (1984ರಿಂದ 1998ರವರೆಗೆ ಆಮೇಲೆ ಅದರ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ (1999 ರಿಂದ 2010ರವರೆಗೆ) ಕೆಲಸ ಮಾಡಿ ಅದನ್ನು ಬೆಳೆಸಿದರು. ಈಗ ಅದರ ಸೀನಿಯರ್ ಅಡ್ವೈಜರ್ ಎಂದು ಅದರ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

            ಎಸ್.ಪಿ.ಎಸ್. ಸಂಸ್ಥೆಯ ಮೂಲಕ ಎಸ್.ಆರ್.ರವರು ಕರ್ನಾಟಕದಲ್ಲಿ ಮತ್ತಿತರ ಕಡೆ ಪರಿಸರ ಮಾಲಿನ್ಯದ ಬಗೆಗೆ, ಸಾಮೂಹಿಕ ಭೂಮಿಯನ್ನು ಸಂರಕ್ಷಿಸುವ ಬಗೆಗೆ, ಉದ್ಯೋಗ ಖಾತ್ರಿ ಯೋಜನೆಯ ಬಗೆಗೆ, ಜನರ ಪುನಾವಸತೀಕರಣದ ಬಗೆಗೆ, ಇತ್ಯಾದಿ ಅನೇಕ ಜನಪರ ಸಮಸ್ಯೆಗಳ ಬಗೆಗೆ ಪರಿಣಾಮಕಾರಿಯಾಗಿ ಕೆಲಸಮಾಡಿದ್ದಾರೆ. ಎಸ್.ಪಿ.ಎಸ್. ಕೆಲಸಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಭಾರತ ಸರಕಾರದ ಪರಿಸರ ಹಾಗೂ ಅರಣ್ಯ ಮಂತ್ರಿ ಶಾಖೆಯ ಅದರ ಅತ್ಯುನ್ನತ ಪ್ರಶಸ್ತಿಯಾದ ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರವನ್ನು 1989ರಲ್ಲಿ ಎಸ್.ಪಿ.ಎಸ್.ಗೆ ಕೊಟ್ಟು ಅದರ ಕಾರ್ಯವನ್ನು ಗುರುತಿಸಿದೆ.

 

6. ಪಶ್ಚಿಮ ಘಾಟ್ ಉಳಿಸಿ ಚಳವಳಿ ಮತ್ತು ಕುಸ್ನೂರ್ ಸತ್ಯಾಗ್ರಹ

            ಹೆಸರಾಂತ ಸಾಹಿತಿಗಳಾಗಿದ್ದ ಶ್ರೀ ಶಿವರಾಮ ಕಾರಂತ, ನ್ಯಾಯಮೂರ್ತಿಗಳಾಗಿದ್ದ ಶ್ರೀ ಡಿ.ಎಂ. ಚಂದ್ರಶೇಖರ್, ಸುಪ್ರಸಿದ್ಧ ಪರ್ತಕರ್ತರಾದ ಅಜಿತ್ ಭಟ್ಟಾಚಾರ್ಯ, ಮುಂತಾದ ಅನೇಕ ಗಣ್ಯರೊಡನೆ ಕೂಡಿಕೊಂಡು ಪರಿಸರ ಮಾಲಿನ್ಯದ ಬಗೆಗೆ ಎಸ್.ಆರ್.ರವರು ಕೆಲಸ ಮಾಡಿದರು. ಇದರ ಅಂಗವಾಗಿ ಪಶ್ಚಿಮ ಘಾಟ್ ಉಳಿಸಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರಿಂದ ಸರಕಾರದ ಅರಣ್ಯ ನೀತಿ ಬದಲಾವಣೆಯಾಗಲು ಕಾರಣರಾದರು.

            ಸಾಮೂಹಿಕ ಒಡೆತನದ ಭೂಮಿಯನ್ನು ಸರಕಾರ ಉದ್ಯಮಗಳಿಗೆ ಕೊಡುವುದರ ಬಗೆಗೆ ತಮ್ಮ ವಿರೋಧವ್ಯಕ್ತಪಡಿಸುವುದಲ್ಲದೆ 1992ರಲ್ಲಿ ದೇಶದ ಬೇರೆ ಬೇರೆ ಭಾಗದ ಸ್ವಯಂ ಸೇವಾ ಸಂಸ್ಥೆಗಳನ್ನು ಕೂಡಿಸಿ ಎನ್.ಸಿ.ಪಿ.ಎನ್.ಆರ್ (NCPNR) National Committee for Protection of Natural Resources) ಎಂಬ ಹೆಸರಿನ ಸಮಿತಿಯನ್ನು ಸಂಘಟಿಸಿದರು. ಸಮಿತಿಯು ಪ್ರಾಕೃತಿಕ ಸಂಪನ್ಮೂಲಗಳ ಕಾಯಿದೆ, ಅರಣ್ಯ ನೀತಿ ಇವುಗಳನ್ನು ರೂಪಿಸುವಲ್ಲಿ ಮತ್ತು ಜನರ ಪುನಾವಸತೀಕರಣದ ಬಗೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಸಮಿತಿಯ ಕೆಲಸದಲ್ಲಿ ಎಸ್.ಆರ್.ರವರು ಮುಖ್ಯಪಾತ್ರ ವಹಿಸಿದರು.

            ಧಾರವಾಡ ಜಿಲ್ಲೆ (ಈಗ ಹಾವೇರಿ ಜಿಲ್ಲೆ) ಹಾವೇರಿ ತಾಲ್ಲೂಕಿನ ಕುಸ್ನೂರುಗ್ರಾಮದ ಹತ್ತಿರದಲ್ಲಿರುವ 75,000 ಎಕರೆ ಸಾಮೂಹಿಕ ಒಡೆತನದ ಭೂಮಿಯನ್ನು ಕರ್ನಾಟಕ ಸರಕಾರ ಉದ್ಯಮಕ್ಕಾಗಿ ನೀಲಗಿರಿ ಗಿಡಗಳನ್ನು ಬೆಳೆಸಲು ಕೊಟ್ಟಾಗ ಸ್ಥಳೀಯ ಜನರನ್ನು ಸಂಘಟಿಸಿ ಕಿತ್ತಿಕೋ-ಹಚ್ಚಿಕೋ ಚಳವಳಿಯನ್ನು ವ್ಯವಸ್ಥಿತವಾಗಿ ನಡೆಯಿಸಿದರು. ಆಗ ನೀಲಗಿರಿ ಸಸಿಗಳನ್ನು ಕಿತ್ತು ಹಣ್ಣುಕೊಡುವ ಗಿಡಗಳನ್ನು ಹಚ್ಚಿ ಬೆಳೆಸಲಾಯಿತು. ಇದೊಂದು ಉತ್ತಮ ಪರಿಣಾಮಕಾರಿ ಜನ ಚಳವಳಿಯಾಗಿತ್ತು. ಹಳ್ಳಿಜನರ ಬದುಕಿಗೆ ಅತ್ಯವಶ್ಯಕವಾದ ಸಾಮೂಹಿಕ ಭೂಮಿ ಅವರ ಉಪಯೋಗಕ್ಕೆ ಉಳಿಯಿತು. ಚಳವಳಿಯನ್ನು ಭಾರತದ ದೂರದರ್ಶನ ಟಿ.ವಿ.ಯವರು (National T.V. Network) ಕುಸ್ನೂರು ಸತ್ಯಾಗ್ರಹ ಎಂಬ ಹೆಸರಿನಲ್ಲಿ ಅರ್ಧಗಂಟೆಯ ಕಾರ್ಯಕ್ರಮವಾಗಿ ಪ್ರಸಾರಪಡಿಸಿದರು. ಇದರ ವಿಸ್ತೃತವಾದ ಕತೆಯನ್ನು ಇಂಗ್ಲೆಂಡ್ ನ ಚಾನಲ್ 4ರಲ್ಲಿ ಅವರ ಇನ್ ಸರ್ಚ್ ಆಫ್ ವೈಲ್ಡ್ ಇಂಡಿಯ (In Search of Wild India) ಎನ್ನುವ ಸರಣಿಯ ಭಾಗವಾಗಿ ಸುಮಾರು 90 ನಿಮಿಷಗಳ ಕಾರ್ಯಕ್ರಮವಾಗಿ ಪ್ರಸಾರಣ ಮಾಡಿದರು.

           

7. ಜನವಿಕಾಶ ಆಂದೋಲನ (JVA) ಹಾಗೂ  ಗ್ರಾಮ ಗಣರಾಜ್ಯ ವೇದಿಕೆ (GGV)

            ಇವೆರಡೂ ಶ್ರೀ ಹಿರೇಮಠ್ ರವರು ಭಾಗವಹಿಸಿದ ಪ್ರಮುಖ ಜನಪರ ಚಟುವಟಿಕೆಗಳು. ಜನವಿಕಾಶ ಆಂದೋಲನವು ಆಜಾದಿ ಸೇ ಸ್ವರಾಜ್ (From Independence to self rule) ಎನ್ನುವ ಪರಿಕಲ್ಪನೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಜನರ ಒಡೆತನವನ್ನು ಪ್ರತಿಪಾದಿಸುವ ವೇದಿಕೆಯಾಯಿತು. ಜೊತೆಗೆ ಗ್ರಾಮ ಸಭಾ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲಗೊಳಿಸುವ ಜನಾಂದೋಲನವಾಗಿತ್ತು.

            ಗ್ರಾಮ ಗಣರಾಜ್ಯ ವೇದಿಕೆಯು ರಾಜ್ಯಮಟ್ಟದ ಜನರಪರ ಚಳವಳಿಯ ವೇದೆಕಿಯಾಗಿತ್ತು. ಎಸ್.ಆರ್.ರವರು GGV ಪ್ರಥಮ ಸಂಚಾಲಕರಾಗಿ (Convener,, 1999-2002) ಅದಕ್ಕೆ ಉತ್ತಮ ಬುನಾದಿ ಹಾಕಿದರು. ಮುಂದೆ ವೇದಿಕೆಯ ರಾಜ್ಯ ಮಟ್ಟದ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ವೇದಿಕೆಯ ಅತ್ಯಂತ ಪರಿಣಾಮಕಾರಿ ಕೆಲಸವೆಂದರೆ ಕರ್ನಾಟಕ ಪಂಚಾಯತಿ ರಾಜ್ ಯ್ಯಾಕ್ಟ್-1993 ಇದಕ್ಕೆ ಹಲವು ಬದಲಾವಣೆಗಳನ್ನು ತಂದು ಪಂಚಾಯತಿ ರಾಜ್ (ಅಮೆಂಡ್ ಮೆಂಟ್) ಯ್ಯಾಕ್ಟ್-2003ನ್ನು ಜಾರಿಗೆ ತರುವಂತೆ ಮಾಡಿದುದಾಗಿದೆ. ಅಲ್ಲದೆ ಐತಿಹಾಸಿಕವಾದ ಕುಸ್ನೂರು ಸತ್ಯಾಗ್ರಹದಲ್ಲಿ ಪರಿಣಾಮಕಾರಿ ಪಾತ್ರವಹಿಸಿದುದೂ ವೇದಿಕೆಯ ಮುಖ್ಯವಾದ ಕೆಲಸಗಳಲ್ಲೊಂದಾಗಿದೆ.

 

8. ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ

            ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆ ಮತ್ತು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ಪತ್ತೆಹಚ್ಚಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡಿದ ಶ್ರೇಯಸ್ಸು ಶ್ರೀ ಎಸ್.ಆರ್. ಹಿರೇಮಠ್ ರವರ ಹೋರಾಟ ಜೀವನಕ್ಕೆ ಕಿರೀಟ ಪ್ರಾಯವಾಗಿದೆ. ತಮ್ಮ ಜನಪರ ಹೋರಾಟಗಳ ಸುದೀರ್ಘ ಅನುಭವದಿಂದ ಎಸ್.ಆರ್.ರವರು ಜಟಿಲ ಸಮಸ್ಯೆಯನ್ನು ಅತ್ಯಂತ ನಾಜೂಕಾಗಿ, ಆದರೆ ಅಷ್ಟೇ ಪರಿಣಾಮಕಾರಿ ರೀತಿಯಲ್ಲಿ ಮಾಡಿದರೆನ್ನುವುದು ಇತ್ತೀಚೆಗಿನ ವರದಿಗಳನ್ನು ಗಮನಿಸಿದ ಯಾರಿಗಾದರೂ ಸ್ವಯಂ ವೇದ್ಯವಾಗುತ್ತದೆ.

            ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಆಗುತ್ತಿದ್ದ ಹಾನಿಯ ಬಗೆಗೆ ಅಲ್ಲಿಯ ನಾಗರಿಕ ಸಂರಕ್ಷಣಾ ವೇದಿಕೆ ಎಸ್.ಆರ್.ರವರ ಗಮನ ಸೆಳೆದಾಗ ಅದರ ಬಗೆಗೆ ನವೆಂಬರ್ 2002ರಿಂದಲೇ ಅಧ್ಯಯನ ಮಾಡತೊಡಗಿದರು. ಕೆಲಸದಲ್ಲಿ ಶ್ರೀ ವಿಷ್ಣು ಕಾಮತ್, ಶ್ರೀ ಆರ್.ಆರ್. ಕಾಂಗೋವಿ, .ಡಿ.ಎಸ್, ನಾಗರಿಕ ಹಿತರಕ್ಷಣಾ ಸಮಿತಿ ಇವುಗಳ ಸಹಯೋಗದಿಂದ 2 ನವೆಂಬರ್, 2009ರಂದು ಜಾಗ್ರತ ರೇಖೆ ಎಂದು ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಮಾಡಿ ಗಣಿಗಾರಿಕೆಯಿಂದ ಆಗುತ್ತಿರುವ ಹಾನಿಗಳ ಅರಿವನ್ನು ಜನರಿಗೆ ಮಾಡಿಕೊಟ್ಟರು.

            ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಖನಿಜ ಸಂಪತ್ತನ್ನು ಗಣಿಧಣಿಗಳು ಕೊಳ್ಳೆ ಹೊಡೆಯುತ್ತಿರುವ ರೀತಿಯನ್ನು ಕಂಡು ಎಸ್.ಆರ್. ಮತ್ತು ಅವರ ಸ್ನೇಹಿತರು ಕಸಿವಿಸಿಗೊಂಡರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲೂ ಇದೇ ರೀತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದು ಕಂಡು ಬಂದಿತು. ಪುರಾತನವಾದ ಸುಗ್ಗಲಾದೇವಿ ದೇವಸ್ಥಾನ ಗಣಿಧಣಿಗಳ ದಾಹಕ್ಕೆ ಬಲಿಯಾಯಿತು. ಇದಕ್ಕೆ ಭ್ರಷ್ಟ ಅಧಿಕಾರಿಗಳೂ, ಜನಪ್ರತಿನಿಧಿಗಳೂ ಕೈಜೋಡಿಸಿರುವುದು ತಿಳಿದುಬಂದಿತು.

            ಇದೆಲ್ಲವನ್ನು ಪತ್ತೆಹಚ್ಚಿದ ಎಸ್.ಆರ್.ರವರ ಗುಂಪು ಎಸ್.ಪಿ.ಎಸ್. ಸಂಸ್ಥೆಯ ಮೂಲಕ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (P.I.L.) ಸುಪ್ರೀಂ ಕೋರ್ಟ್ ನಲ್ಲಿ ಹಾಕಿದರು. ಕೇಸನ್ನು ದೆಹಲಿಯ ಸುಪ್ರಸಿದ್ಧ ವಕೀಲರಾಗಿರುವ ಶ್ರೀ ಪ್ರಶಾಂತ ಭೂಷಣ್ ವಹಿಸಿಕೊಂಡು ನಡೆಸಿದರು.

            ಮುಂದೆ ಬಳ್ಳಾರಿಯಲ್ಲಿ ಜಿಲ್ಲಾ ಕಲೆಕ್ಟರ್ ರವರ ಕಚೇರಿ ಕಾಂಪೌಂಡ್ ನಲ್ಲಿ  2010 ಜನವರಿಯಲ್ಲಿ ಚಳವಳಿ ನಡೆಸಿದರು. ಮೇಲೆ ಸೈಕಲ್ ಜಾತ್ ನಡೆಸಿ, ಜೀಪ್ ಜಾತ ಮಾಡಿ ಅಕ್ರಮ ಗಣಿಗಾರಿಕೆಯ ಹಾನಿಕರ ಪರಿಣಾಮಗಳ ಬಗೆಗೆ ಕರ್ನಾಟಕದಲ್ಲೆಲ್ಲ ಅರಿವು ಮೂಡಿಸುವ ಕೆಲಸಮಾಡಿದರು.

            ಇಷ್ಟರೊಳಗೆ 2008ರಲ್ಲಿ ಕರ್ನಾಟಕದ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆಯವರಿಂದ ಅಕ್ರಮ ಗಣಿಗಾರಿಕೆಯ ಬಗೆಗೆ ಸುದೀರ್ಘ ವರದಿ ಬಂದಿತು. ಇದು ಎಸ್.ಆರ್.ರವರ ಹೋರಾಟಕ್ಕೆ ಬಹಳಷ್ಟು ಬಲವನ್ನು ತಂದುಕೊಟ್ಟಿತು. ಎಸ್.ಪಿ.ಎಸ್. ತಮ್ಮ P.I.L. ನಲ್ಲಿ ಕೇಳಿಕೊಂಡಂತೆ, ಸುಪ್ರೀಂ ಕೋರ್ಟ್ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಿ ವರದಿ ನೀಡಲು ಸೆಂಟ್ರಲ್ ಎಂಪವರ್ ಮೆಂಟ್ ಕಮಿಟಿ (CEC) ಯನ್ನು ಕಳಿಸಿಕೊಟ್ಟರು. ಕಮಿಟಿಯ ವರದಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ 19 ಗಣಿ ಕಂಪೆನಿಗಳನ್ನು ಮುಚ್ಚಲು ಆದೇಶ ನೀಡಿತು. ಇದಕ್ಕೆಲ್ಲ ಗಣಿಮಾಲಿಕರಷ್ಟೇ ಅಲ್ಲದೇ, ಸಂಬಂಧಪಟ್ಟ ಸರಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹ ಶಿಕ್ಷಾರ್ಹರೆಂಬುದು ಎಸ್.ಆರ್. ರವರ ಸ್ವಷ್ಟ ಅಭಿಪ್ರಾಯವಾಗಿದೆ.

            ಸರಕಾರೇತರ ಸ್ವಯಂಸೇವಾ ಸಂಘಟನೆಗಳಲ್ಲಿ ಎಸ್.ಆರ್. ಅವರಿಗೆ ಆಸಕ್ತಿ ಮತ್ತು ಅವುಗಳ ಬಗೆಗೆ ವಿಶ್ವಾಸ, ಹೀಗಾಗಿ ಕರ್ನಾಟಕದ ಸ್ವಯಂಸೇವಾ ಸಂಘಟನೆಗಳ ಒಕ್ಕೂಟವನ್ನು ಶ್ರಮವಹಿಸಿ ಸ್ಥಾಪಿಸಿ, ಅದರ ಪ್ರಥಮ ಅಧ್ಯಕ್ಷರಾದರು (FEVORDK-1982)

 

9. ಮೈಮುರಿದು ದುಡಿಯಬೇಕು ಎನ್ನುವ ಸ್ವಭಾವ

            ಎಸ್.ಆರ್.ರವರ ಗಮನಕ್ಕೆ ಯಾವುದೇ ಸಮಸ್ಯೆ (ಸಾಮಾಜಿಕ ಅನ್ಯಾಯ) ಬಂದರೆ, ಅದರ ಬಗೆಗೆ ತಳಸ್ಪರ್ಶಿಯಾಗಿ ಅಗೆದು ನೋಡುವುದು ಅವರ ಸ್ವಭಾವ. ಹಾಗಾಗಿ ಕೈಗೆತ್ತಿಕೊಂಡ ಸಮಸ್ಯೆಗಳ ಬಗೆಗೆ ಸಾಕಷ್ಟು ಶ್ರಮಹಾಕಿ ದುಡಿದು, ಅದನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ಯಶಸ್ಸನ್ನೂ ಪಡೆಯುತ್ತಾರೆ.

            ಅದೇ ರೀತಿಯ ಶ್ರದ್ಧಾಪೂರ್ವಕವಾದ ಶ್ರಮವನ್ನು ತಮ್ಮ ಸಂಸ್ಥೆಯ ನೌಕರರಿಂದ ಹಾಗೂ ತಮ್ಮ ಇತರ ಸಹಚರರಿಂದಲೂ ನಿರೀಕ್ಷಿಸುತ್ತಾರೆ. ಹಾಗಾಗದಿದ್ದರೆ ಅವರಿಗೆ ಅಸಹನೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅವರು ಬಳಸುವ ಭಾಷೆ ಬಿಜಾಪುರದ ಗಡುಸು ಭಾಷೆಯಾಗಿರುತ್ತದೆ. ಇದರಿಂದಾಗಿ ಕೆಲವೊಮ್ಮೆ ಕೆಲವು ಜನರು ಅವರನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೂ ಎಸ್.ಆರ್.ರವರ ಪರಿಚಯ ಬೆಳೆದಂತೆ ಅವರ ಸಾಮಾಜಿಕ ಕಳಕಳಿಯ ಉದ್ದೇಶ ಸ್ವಷ್ಟವಾಗುತ್ತದೆ. ಅನೇಕರು ಅವರ ಕಳಕಳಿಯನ್ನು ಅರ್ಥಮಾಡಿಕೊಂಡು ಅವರಿಗೆ ಹೊಂದಿಕೊಳ್ಳುತ್ತಾರೆ.

            ಶ್ರೀ ಎಸ್.ಆರ್. ಹಿರೇಮಠ್ ರವರು ಅನೇಕ ಪುಸ್ತಕಗಳನ್ನು ಸಂಪಾದನೆ ಮಾಡಿದ್ದಾರೆ. ತಮ್ಮ ಕೆಲಸಗಳ ಬಗೆಗೆ ಪ್ರಬಂಧಗಳನ್ನು ಬರೆದಿದ್ದಾರೆ. ಪತ್ರಿಕಾಗೋಷ್ಠಿಗಳನ್ನು ಮಾಡಿದ್ದಾರೆ. ಪರಿಸರ ಹಾಗೂ ಗ್ರಾಮೀಣಾಭಿವೃದ್ಧಿ ಕೆಲಸದಲ್ಲಿ ಎಸ್.ಆರ್. ರವರ ಕೆಲಸವನ್ನು ಪುರಸ್ಕರಿಸಿ ಕರ್ನಟಕದ ಸರಕಾರದವರು 1987ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದಾರೆ. ಇತರ ಮನ್ನಣೆಗಳೂ ಅವರ ಕೆಲಸಕ್ಕೆ ದೊರಕಿವೆ. ತೀರಾ ಇತ್ತೀಚೆಗೆ (2011) ಟಿ.ವಿ.9 ನ್ಯೂಸ್ ಛಾನೆಲ್ ಇವರ ನನ್ನ ಕಥೆ ಶೀರ್ಷಿಕೆಯಡಿಯಲ್ಲಿ ಧಾರಾವಾಹಿಯಾಗಿ ಪ್ರದರ್ಶಿಸಿ, ಇವರ ಸಾಮಥ್ರ್ಯವನ್ನು ಜನರಿಗೆ ಪರಿಚಯಿಸಿತು.

            ಅನುಭವ ಜೀವನದ ಹರೆಯದಲ್ಲಿರುವ ಶ್ರೀ ಹಿರೇಮಠ್ ರಿಂದ ಇನ್ನೂ ಅನೇಕ ಸಾಮಾಜಿಕ ಹಿತಕಾರ್ಯಗಳು ಆಗಲಿ ಎಂದು ಹಾರೈಸುತ್ತೇವೆ. ಇದಕ್ಕೆ ಅವರಿಗೆ ಉತ್ತಮ ಆರೋಗ್ಯ, ಅವಕಾಶಗಳನ್ನು ದಯಪಾಲಿಸಲೆಂದು ಶ್ರೀ ಗುರುದೇವನಲ್ಲಿ ಪ್ರಾರ್ಥಿಸಿಕೊಳ್ಳೋಣ.

 

ಡಾ.ಎಂ. ಶಿವಮೂರ್ತಿ

(ನಿವೃತ್ತ) ವಿಶ್ವಸಂಸ್ಥೆಯ ಜನಸಂಖ್ಯಾಶಾಸ್ತ್ರ ತಜ್ಞ,

ಮಾಜಿ ಸ್ಟಾಟಿಸ್ಟಿಕ್ಸ್ ಪ್ರೊಫೆಸರ್)

ದೂರವಾಣಿ: 080-23413566

 

 

No comments:

Post a Comment